ಲೇಖಕರು: ಕೆ .ಎಸ್. ಶ್ರೀನಿವಾಸ ಅಯ್ಯಂಗಾರ್
ಉದ್ಧವ ಶ್ರೀ ಕೃಷ್ಣನಹತ್ತಿರದ ಸಂಬಂಧಿ, ಸ್ನೇಹಿತ ಮತ್ತು ಭಕ್ತ . ಶ್ರೀ ಕೃಷ್ಣನು ಈ ಭೂಲೋಕವನ್ನು ತ್ಯಜಿಸಿ ತನ್ನ ಸ್ವಧಾಮಕ್ಕೆ ಹಿಂದಿರುಗುವ ಕಾಲವು ಬಂದು ಬಿಟ್ಟಿದೆ ಎಂದು ಉದ್ಧವನಿಗೆ ತಿಳಿಯಿತು. ಆಗ ಉದ್ಧವನು, ಶ್ರೀ ಕೃಷ್ಣನಲ್ಲಿ ಹೀಗೆ ಪ್ರಾಥಿ೯ಸುತ್ತಾನೆ, “ಹೇ ಪುಂಡರೀಕಾಕ್ಷನೇ ! ಮೋಕ್ಷವನ್ನು ಬಯಸುವವನು ನಿನ್ನನ್ನು ಯಾವ ರೀತಿಯಾಗಿ ಮತ್ತು ಯಾವ ರೂಪದಲ್ಲಿ ಧ್ಯಾನಿಸಬೇಕು ? ಕೃಪೆಮಾಡಿ ಧ್ಯಾನದ ವಿಷಯವನ್ನು ತಿಳಿಸು’’. ಆಗ ಶ್ರೀ ಕೃಷ್ಣನು, ಉಳಿದ ವಿವರಗಳೊಂದಿಗೆ ಒಂದು ವಿಶೇಷವಾದ ವಿಷಯವನ್ನು ಹೇಳುತ್ತಾನೆ- ಹೃದಯದಲ್ಲಿ ತಾನೇ ತಾನಾಗಿ ಮೊಳಗುತ್ತಿರುವ ಓಂಕಾರನಾದವು ದೀರ್ಘ ಘಂಟಾನಾದವನ್ನು ಹೋಲುತ್ತದೆ.ಈ ನಾದದ ವಿಧ್ಯುಕ್ತವಾದ ಶ್ರವಣವು ಮೂಲಾಧಾರ ಚಕ್ರದಿಂದ ಸಹಸ್ರಾರದ ವರೆಗೆ ಸಾಧಕನನ್ನು ಸೇರಿಸುತ್ತದೆ. ಅವನ ಮಾತಿನ ತಾತ್ಪರ್ಯವನ್ನು ಗಮನಿಸುವುದಾದರೆ, ಹೃದಯದಲ್ಲಿರುವ ಆ ಓಂಕಾರ ನಾದಕ್ಕೆ ಶಾಸ್ತ್ರೀಯವಾಗಿರುವ ಘಂಟಾನಾದವು ಸದೃಶವಾಗಿರುತ್ತದೆ. ಅಂದಮೇಲೆ ಘಂಟಾನಾದವು ಎಷ್ಟುಮಹತ್ವವುಳ್ಳದ್ದು ಎಂಬುದು ತಿಳಿಯುತ್ತದೆ.
ಧ್ಯಾನಬಿಂದೂಪನಿಷತ್ತಿನಲ್ಲಿ ಘಂಟೆಯ ಬಗ್ಗೆ ಬಂದಿರುವ ಈ ವಿಷಯಗಳನ್ನು ನೋಡಬಹುದು.
“ಯೋಗಿಯು ಸಿದ್ಧಾಸನದಲ್ಲಿ , ವೈಷ್ಣವೀ ಮುದ್ರೆಯಲ್ಲಿ, ನಾವಸ್ಥೆಯಲ್ಲಿದ್ದಾಗ,ಅಂತರಂಗದಲ್ಲಿರುವ ದಿವ್ಯನಾದಗಳನ್ನು ಬಲಗಿವಿಯಿಂದ ಕೇಳುತ್ತಾನೆ. ಅದರಲ್ಲಿ ಘಂಟಾನಾದವೂ ಒಂದು. ಬಹಳ ದೊಡ್ಡ ಬೆಟ್ಟದಷ್ಟು ಪಾಪವನ್ನು ಮಾಡಿದ್ದರೂ ಅದು ಈ ನಾದದ ಧ್ಯಾನದಿಂದ ಭೇದಿಸಲ್ಪಡುತ್ತದೆ ಮತ್ತು ಬೇರೆ ಯಾವ ಮಾರ್ಗದಿಂದಲೂ ಅದು ಸಾಧ್ಯವಿಲ್ಲ ಇಂತಹ ದಿವ್ಯನಾದದಿಂದ ವಾಸನೆಗಳೆಲ್ಲಾ ಕ್ಷಯವಾಗಿ ಭಗವಂತನನ್ನು ಹೊಂದುತ್ತಾನೆ”.
ಪ್ರಣವದ(ಓಂಕಾರದ)ಅಗ್ರವನ್ನು ತಿಳಿದವನೇ ವೇದಜ್ಞ ಎನ್ನುವ ಮಾತಿದೆ. ಈ ಪ್ರಣವದ ಅಗ್ರವು ತೈಲಧಾರೆಯಂತೆ ಮಧ್ಯೆ ವಿಚ್ಚಿತಿ ಇಲ್ಲದೆಯೇ ದೀರ್ಘ ಘಂಟಾ ನಿನಾದದಂತೆ ಇರುತ್ತದೆ.
ಈ ವಿಷಯಗಳನ್ನು ಗಮನಿಸಿದರೆ ಘಂಟೆಯು ಸಾಮಾನ್ಯ ಪದಾರ್ಥವಲ್ಲ. ಅದು ಭಗವಂತನ ಹತ್ತಿರಕ್ಕೆ ನಮ್ಮನ್ನು ಕರೆದೊಯ್ಯುವ ಸಾಧನವಾಗಿದೆ ಎಂಬುದು ಅರಿವಿಗೆ ಬರುತ್ತದೆ.
ಸಂಗೀತ ರತ್ನಾಕರ ಎಂಬ ಗ್ರಂಥದಲ್ಲಿ ಘಂಟೆಯನ್ನು ಘನವಾದ್ಯವೆಂದು ಹೇಳಿದ್ದಾರೆ. “ಸರ್ವವಾದ್ಯಮಯೀ ಘಂಟಾ” -ಎಂದರೆ -ಘಂಟೆಯು ತನ್ನಲ್ಲಿ ಎಲ್ಲಾ ವಾದ್ಯಗಳನ್ನೂ ಅಡಗಿಸಿಕೊಂಡಿದೆ ಎಂದು ಹೇಳುವ ಶ್ಲೋಕವಿದೆ.
ಶ್ರೀರಂಗ ಮಹಾಗುರುಗಳು ಘಂಟಾ ರಚನೆಯ ಬಗ್ಗೆ ಅವರ ಶಿಷ್ಯರಿಗೆ ಬಹಳ ಮಹತ್ತರವಾದ ವಿಷಯಗಳನ್ನು ಹೇಳಿದ್ದಾರೆ. ಅವರಿಗೆ ಘಂಟೆಯು ತುಂಬಾ ಪ್ರಿಯವಾದ ವಾದ್ಯವಾಗಿತ್ತು. ಪಾಠ ಪ್ರವಚನಗಳನ್ನು ಮಾಡುವಾಗ ಘಂಟೆಯ ಬಗ್ಗೆ ಅವರ ದಿವ್ಯಾಂತರಂಗದಿಂದ ಬಂದ ವಿಷಯಗಳನ್ನು ಹೇಳುತ್ತಿದ್ದರು ಮತ್ತು ಪ್ರಯೋಗಗಳನ್ನೂ ಮಾಡುತ್ತಿದ್ದರು. ಭಾರತೀಯ ವಾದ್ಯಗಳು ಭಗವಂತನಿಂದಲೇ ಹೊರಟು ಭಗವಂತನಲ್ಲಿಯೇ ಕರೆದುಕೊಂಡು ಹೋಗಿ ನಿಲ್ಲಿಸುತ್ತವೆ ಎಂಬುದನ್ನು ತಿಳಿಸಿದ್ದಾರೆ. -ಪ್ರಣವ ನಾದವು “ಅನಾಹತನಾದ” ಎಂದರೆ ಯಾವ ಇನ್ನೊಂದು ವಸ್ತುವಿನ ಬಡಿತವೂ ಇಲ್ಲದೇ ತಾನೇ ತಾನಾಗಿರುವ ಅಂತರ್ನಾದ.ಅಂತಹ ನಾದವನ್ನು ಹೊರತರಲು ಸಾಧ್ಯವಾಗುವಂತೆ ಘಂಟೆಯ ನಿರ್ಮಾಣವಿರಬೇಕು.
ಭಾರತದೇಶದಲ್ಲಿ ಪೂಜೆ ಮತ್ತು ಇನ್ನಿತರ ಮಂಗಳ ಕಾರ್ಯಗಳಲ್ಲಿ ಘಂಟೆಯ ಉಪಯೋಗವು ನಡೆಯುತ್ತಾ ಬಂದಿರುವುದು ಘಂಟಾನಾದದ ಈ ಮಹತ್ವದಿಂದಲೇ. ನಮ್ಮೊಳಗೇ ಮೊಳಗುತ್ತಿರುವ ಅಂತರಂಗದ ಪ್ರಣವನಾದವನ್ನು ಪ್ರತಿನಿಧಿಸುವ ಘಂಟಾನಾದವನ್ನು ಋಷಿಗಳು ಭಾವಿಸಿದಷ್ಟೇ ಗಂಭೀರವಾಗಿ ನಾವೂ ಭಾವಿಸುವಂತಾಗಲಿ.