Monday, November 4, 2019

‘ಬಾಳೆ’ಯಿಂದ ‘ಬಾಳಿ’ನತ್ತ (Baleyinda baalinatta)

ಲೇಖಕರು: ಮೈಥಿಲೀ ರಾಘವನ್



ಒಮ್ಮೆ ಶ್ರೀರಂಗಮಹಾಗುರುಗಳನ್ನು ಸಂದರ್ಶಿಸಲು ಬಂದ ಭಕ್ತರೊಬ್ಬರು ಗುರುವಿಗರ್ಪಿಸಲು ಬಾಳೆಯಹಣ್ಣುಗಳನ್ನು ತಂದಿದ್ದರು.  ಅವರನ್ನು ಮಾತನಾಡಿಸುತ್ತ ಶ್ರೀಗುರುವು “ಈ ಹಣ್ಣು  ಎಲ್ಲಿಂದ ತಂದಿರಿ?” ಎಂದರು. ಶಿಷ್ಯರು “ಅಂಗಡಿಯಿಂದ ತಂದೆ” ಎಂದುತ್ತರಿಸಿದರು. “ಅಂಗಡಿಗೆ ಎಲ್ಲಿಂದ ಬಂತು?” “ತೋಟದಿಂದ.” “ತೋಟಕ್ಕೆ ಎಲ್ಲಿಂದ?” “ಗಿಡದಿಂದ”

ಈ ಸಂಭಾಷಣೆಯ ಮುಂದುವರಿಕೆಯಾಗಿ ಬಂದ ವಿಚಾರಗಳು ಜೀವನದ ಬಗೆಗೆ ಒಂದು ಪೂರ್ಣದರ್ಶವನ್ನು ನೀಡುತ್ತವೆ.
 ಬಾಳೆಯಹಣ್ಣಿನಲ್ಲಿ ಮಾಧುರ್ಯ-ಸ್ನಿಗ್ಧತೆ ಹಾಗೂ ಪೌಷ್ಟಿಕಾಂಶಗಳೂ ಇರುವುದರಿಂದಲೇ ಅದರ ಆಸ್ವಾದನೆ ಮತ್ತು ಅದರ ಬಗೆಗೆ ವಿಚಾರಮಾಡುವುದು. ಅಂತೆಯೇ ಜೀವನದ ಸವಿ ಅರಿತಾಗ ಮಾತ್ರ ಅದರ ಉಗಮ ಯಾವುದು? ಅದರ ಉಪಯೋಗಗಳೇನು? ಅದರ ವಿನಿಯೋಗ ಹೇಗೆ? ಇತ್ಯಾದಿ ವಿಚಾರಗಳಲ್ಲಿ ಬುದ್ಧಿ-ಮನಸ್ಸುಗಳು ತೊಡಗುವುವು.

ಬಾಳೆಯ ಉಪಯೋಗ


ಬಾಳೆಯಹಣ್ಣು ಸಾಮಾನ್ಯರ ಕೈಗೆ ಸಿಕ್ಕಿದರೆ ಅದರ ರುಚಿಸವಿದು ಪೌಷ್ಟಿಕಾಂಶಗಳನ್ನು ಪಡೆಯುತ್ತಾರೆ. ಅದೇನಾದರೂ  ಕಾಡಾನೆಗಳ ಕೈಸೇರಿದರೆ ಹಾಳಾಗಿಹೋಗಬಹುದು. ಆದರೆ ಅದನ್ನು ಒಬ್ಬ ಜ್ಞಾನಿಯಕೈಗೆ ಕೊಟ್ಟಾಗ ಅದು ಭಗವಂತನಿಗೆ ಅರ್ಪಿತವಾಗಿ ಅದರ ಮಾಧುರ್ಯದೊಂದಿಗೆ ದೈವೀಮಾಧುರ್ಯವೂ ಸೇರಿ ಪ್ರಸಾದವಾಗಬಲ್ಲದು. 
ಅಂತೆಯೇ ನಮ್ಮ ಜೀವನವನ್ನು ಸಾಮಾನ್ಯರ ನಡೆಗೆ ಕೊಟ್ಟುಕೊಂಡಾಗ ಭೌತಿಕವಾದ ಸುಖಭೋಗಗಳಷ್ಟರಲ್ಲೇ ಸೀಮಿತಗೊಳಿಸಿಕೊಳ್ಳಾಬೇಕಾಗುತ್ತದೆ. ಆದರೆ ಜ್ಞಾನಿಯ ಕೈಗೆ ಅದನ್ನು ಸಮರ್ಪಿಸಿದಾಗ  ಬಾಳು ತನ್ನ ಮೂಲನೆಲೆಯತ್ತ ಸಾಗಿ ಶಾಶ್ವತ ಸುಖಕ್ಕೆ ದಾರಿಯಾಗುವುದು.

ವಿಕಾಸದ ಪೂರ್ಣದೃಷ್ಟಿ:

ಬಾಳೆಯಗಿಡದ ಬೆಳವಣಿಗೆಯ ಬಗೆಗೆ ಪೂರ್ಣದೃಷ್ಟಿಯುಳ್ಳವನು ಅದರ ವಿಕಾಸದಲ್ಲಿ ಕಂದು, ಗಡ್ಡೆ, ನಾರು, ಎಲೆ, ಕಾಯಿ, ಹಣ್ಣು ಇವೆಲ್ಲವೂ ಉಂಟು ಎನ್ನುವುದನ್ನು ಅರಿತಿರುವುದರಿಂದ ಅದನ್ನು ವಿಕಾಸದ ಮಧ್ಯಹಂತದಲ್ಲಿ ಕಡಿಯುವುದಿಲ್ಲ. ವಿಕಾಸವು ಪೂರ್ಣವಾಗುವವರೆಗೂ ಕಾದು ಪೂರ್ಣಫಲವನ್ನು ಪಡೆಯುತ್ತಾನೆ. 

ಅಂತೆಯೇ ಭಾರತೀಯಮಹರ್ಷಿಗಳು ಜೀವನವನ್ನು ಅದರ ಉಗಮ, ಅಲ್ಲಿಂದ ಮುಂದೆ ಇಂದ್ರಿಯಪ್ರಪಂಚದಲ್ಲಿನ ಬಾಳಾಟ  ಹಾಗೂ ಅಲ್ಲಿಂದ ಮತ್ತೆ ತನ್ನ ಮೂಲವನ್ನು ಸೇರುವ ದಾರಿ ಇವೆಲ್ಲವನ್ನೂ ಅರಿತ ಸಮಗ್ರದೃಷ್ಟಿಯು(ತುಂಬುನೋಟವು)ಳ್ಳವರಾಗಿದ್ದರು. 

ಜೀವ ಇದ್ದರೆ ಮಾತ್ರವಲ್ಲವೇ ಜೀವನಕ್ಕೆ ವಿಷಯ? ಅದಿಲ್ಲದಿದ್ದರೆ ‘ಜೀವ-ನ’ ಆಗುತ್ತದೆ  ಎಂಬ  ಶ್ರೀಗುರುವಾಣಿಯು ಸ್ಮರಣೀಯ. ಆದ್ದರಿಂದ ಜೀವನದ ಪರಿಪೂರ್ಣದರ್ಶನವನ್ನು ಹೊಂದಿದ್ದ ಋಷಿಗಳು ಇಹ-ಪರ ಸುಖಗಳೆರಡನ್ನೂ ಕೊಡುವ ಪುರುಷಾರ್ಥಮಯವಾದ ಚೌಕಟ್ಟನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂಬ ಆದೇಶವನ್ನು ನೀಡಿದ್ದಾರೆ. 

ಸವಿಯಲು ಬೇಕಾದ ಅಂಶಗಳು:

ಅತ್ಯಂತ ಸವಿಯಾದ ಹಣ್ಣೇಯಾದರೂ ರಸನೆಗೆ(ನಾಲಿಗೆಗೆ) ಸಂಬಂಧಪಟ್ಟಾಗ ಮಾತ್ರವೇ ರುಚಿಯ ಆಸ್ವಾದನೆ. ನಾಲಿಗೆಯೇ ಆದರೂ ಸಿಪ್ಪೆಯಮೇಲೆ ನೆಕ್ಕಿದಾಗ ಸವಿಯಿಲ್ಲ. 
ಎಷ್ಟೇ ರುಚಿಯಾದ ಬಾಳೆಯಹಣ್ಣಾದರೂ ಆಫೀಸಿಗೆ ಓಡುವ ಆತುರದಲ್ಲಿ ತಿಂದರೆ  ಸವಿತಿಳಿಯದು.  ಆದ್ದರಿಂದ ಯಾವುದೇ ವಸ್ತುವಿದ್ದರೂ ಅದನ್ನು ಸವಿಯಲು ಯೋಗ್ಯತೆ, ಅದಕ್ಕೊಂದು ಕ್ರಮ, ಸೂಕ್ತ ಕಾಲ ಬೇಕಾಗುತ್ತದೆ. ಸವಿಯಲು ಯುಕ್ತಿಯೂ ಬೇಕು ಶಕ್ತಿಯೂ ಬೇಕು.

ಅಂತೆಯೇ ಜೀವನದ ಸವಿಯನ್ನು ಕಂಡವರು ಲೋಕಕ್ಕೆ ಅದನ್ನು ತಿಳಿಸಿದರೂ,  ಅದನ್ನು ಬಯಸುವುದು, ಯೋಗ್ಯತೆ(ಮನಸ್ಸಿನ ಸುಸ್ಥಿತಿ)ಯಿದ್ದಾಗ ಮಾತ್ರವೆ. ಯೋಗ್ಯತೆಯನ್ನು ಗಳಿಸಿ ನಿರ್ದಿಷ್ಟಕ್ರಮವರುತು ಸಾಗಿದರೆ ಸಕಾಲದಲ್ಲಿ  ಸವಿಯ ಆಸ್ವಾದನೆಯಾದೀತು.

“ಬಾಳೆಯಗಿಡದೊಡನೆ ಬಾಳಿನಗಿಡವನ್ನೂ ನೋಡಬೇಕಾಗುತ್ತದೆ” ಎಂಬ ತಿಳಿವಳಿಕೆಯನ್ನು ತಮ್ಮ ಈ ಸಂಭಾಷಣೆಯ ಮೂಲಕ ಮನವರಿಕೆ ಮಾಡಿಸಿದ್ದಾರೆ.

ಒಬ್ಬ ಸದ್ಗುರುವನ್ನು ಆಶ್ರಯಿಸಿದಾಗ  ಆತನ ಅನುಗ್ರಹದಿಂದ ಜೀವನದ ನೈಜಸವಿಯರಿಯುವ ಯೋಗ್ಯತೆಯನ್ನು ಪಡೆದು, ಸಕ್ರಮದಿಂದ ಸಾಗಿ, ಸಕಾಲದಲ್ಲಿ ಭಗವಂತನನ್ನು ಕಂಡು ನಲಿಯುವವರಾಗಬಹುದು, ಜೀವನದ ಸವಿಯುಣ್ಣಬಹುದು. ಅಂತಹ ಸದ್ಗುರುವನ್ನು ಕರುಣಿಸಪ್ಪಾ ಎಂದು ಭಗವಂತನನ್ನು ಪ್ರಾರ್ಥಿಸುವವರಾಗೋಣ.

ಸೂಚನೆ:  2/11/2019 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.