Monday, September 16, 2024

ವ್ಯಾಸ ವೀಕ್ಷಿತ 103 (Vyaasa Vikshita 103)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಮೊಸಳೆಯಾಗೆಂದು ಶಾಪ ಬಂದ ಬಗೆ


ತನ್ನ ಕಾಲನ್ನು ಹಿಡಿದೆಳೆದ ಮೊಸಳೆಯನ್ನು ಅರ್ಜುನನು ಜಗ್ಗಿ ಹೊರಗೆಳೆದನಷ್ಟೆ. ಹಾಗಾಗುತ್ತಲೇ ದಿವ್ಯರೂಪಳಾದ ಅಪ್ಸರಸ್ತ್ರೀಯಾಗಿ ಅವಳು ಪರಿವರ್ತಿತಳಾದಳು. ಅವಳು ಆ ಮೊಸಳೆಯ ಜನ್ಮವನ್ನು ಪಡೆದುದು ಹೇಗೆ? - ಎಂಬ ಅರ್ಜುನನ ಪ್ರಶ್ನೆಗೆ ಆ ವರ್ಗಾ ಎಂಬ ಅಪ್ಸರೆಯು ಉತ್ತರ ಹೇಳುತ್ತಾಳೆ.


"ದೇವಾರಣ್ಯದಲ್ಲಿ, ಎಂದರೆ ನಂದನವನದಲ್ಲಿ, ವಿಹರಿಸುವ ಅಪ್ಸರೆ ನಾನು. ಕುಬೇರನ ಪ್ರಿಯತಮೆ. ನನ್ನೊಂದಿಗೆ ನಾಲ್ವರು ಸಖಿಯರಿದ್ದಾರೆ. ಅವರೆಲ್ಲರೂ ಸುಂದರಿಯರೂ ಹೌದು, ಕಾಮಗಮರೂ ಹೌದು, ಅರ್ಥಾತ್, ಎಲ್ಲೆಂದರಲ್ಲಿಗೆ ಹೋಗಬಲ್ಲವರು.


ಲೋಕಪಾಲನೆನಿಸುವ ಕುಬೇರನ ಮನೆಯತ್ತ ಅವರೊಂದಿಗೆ ಹೊರಟಿದ್ದ ನಾವು ಮಾರ್ಗದಲ್ಲಿ ಬ್ರಾಹ್ಮಣನೊಬ್ಬನನ್ನು ಕಂಡೆವು. ಆತ ವ್ರತನಿಷ್ಠ, ರೂಪಶಾಲಿ, ಅಧ್ಯಯನಶೀಲ, ಏಕಾಂತವಾಸಿ. ಆತನ ತಪಸ್ಸಿನಿಂದಲೇ ಆ ವನವು ತೇಜೋಮಯವಾಗಿದ್ದಿತು. ಸೂರ್ಯನು ಹೇಗೋ ಹಾಗೆ ಆ ಎಡೆಯನ್ನೆಲ್ಲ ಆತ ಬೆಳಗಿದ್ದ.


ಆತನ ಅಂತಹ ತಪಸ್ಸನ್ನೂ ಆ ಉತ್ತಮವೂ ಅದ್ಭುತವೂ ಆದ ರೂಪವನ್ನೂ ಕಂಡು, ಆತನ ತಪಸ್ಸಿಗೆ ವಿಘ್ನಮಾಡಲೆಂದು ಆ ಎಡೆಯಲ್ಲಿ ನಾವೆಲ್ಲರೂ ಇಳಿದುಕೊಂಡೆವು - ನಾನು, ಸೌರಭೇಯಿ, ಸಮೀಚಿ, ಬುದ್ಬುದೆ, ಲತೆ - ಇವಿಷ್ಟೂ ಜನ ಏಕಕಾಲದಲ್ಲಿ ಆತನ ಬಳಿ ಸಾರಿದೆವು. ಹಾಡುತ್ತಲೂ ನಗುತ್ತಲೂ ಆ ಬ್ರಾಹ್ಮಣನನ್ನು ಪ್ರಲೋಭಗೊಳಿಸಲೆತ್ನಿಸಿದೆವು.


ಆದರೆ ಆತನು ನಮ್ಮ ಮೇಲೆ ಮನಸ್ಸೇ ಮಾಡಲಿಲ್ಲ. ನಿರ್ಮಲವಾದ ತಪಸ್ಸಿನಲ್ಲಿ ನೆಲೆಗೊಂಡಿದ್ದ ಆ ಮಹಾತೇಜಃಶಾಲಿಯು. ಕಿಂಚಿತ್ತೂ ಕಂಪಿತನಾಗಲಿಲ್ಲ. ಬದಲಾಗಿ ನಮ್ಮ ಮೇಲೆ ಕೋಪಗೊಂಡವನಾಗಿ, ಆತನೇ ಶಪಿಸಿದ: "ನೀರೊಳಗೆ ಮೊಸಳೆಗಳಾಗಿ ನೂರುವರ್ಷ ನೀವಿರಿ" - ಎಂದ.


ಆಗ ನಾವೆಲ್ಲರೂ ವ್ಯಥೆಗೊಂಡವರಾಗಿ ಆ ವ್ರತನಿಷ್ಠನಾದ ತಪೋಧನನನ್ನೇ ಶರಣುಹೊಂದಿದೆವು. "ರೂಪ, ವಯಸ್ಸು, ಕಾಮ - ಇವುಗಳಿಂದ ನಾವು ದರ್ಪಗೊಂಡವರಾಗಿ, ಅಯುಕ್ತವಾದುದನ್ನು ಮಾಡಿಬಿಟ್ಟೆವು. ಅದನ್ನು ಕ್ಷಮಿಸಬೇಕು, ಬ್ರಾಹ್ಮಣನೇ. ನಿನಗೆ ಪ್ರಲೋಭನೆಯುಂಟುಮಾಡಬೇಕೆಂದು ವ್ರತನಿಷ್ಠನಾದ ನಿನ್ನ ಬಳಿಗೆ ಬಂದೆವಲ್ಲಾ, ಅದುವೇ ನಮಗೆ ತಕ್ಕಷ್ಟೆನಿಸುವ ಶಿಕ್ಷೆಯಾಗಿದೆ.


ಸ್ತ್ರೀಯರನ್ನು ಅವಧ್ಯರನ್ನಾಗಿ ಸೃಷ್ಟಿಸಲಾಗಿದೆ - ಎಂಬುದಾಗಿಯೇ ಧರ್ಮಾತ್ಮರು ಭಾವಿಸುತ್ತಾರೆ.


ಆದುದರಿಂದ ಧರ್ಮವನ್ನಾಚರಿಸಿ ನೀನು ಉನ್ನತಿಯನ್ನು ಹೊಂದು: ನಮ್ಮನ್ನು ಹಿಂಸಿಸಬೇಡ.


ಧರ್ಮಜ್ಞನೇ, ಬ್ರಾಹ್ಮಣನು ಸರ್ವಭೂತಗಳಲ್ಲಿಯೂ ಮೈತ್ರ, ಎಂದರೆ ಮಿತ್ರಭಾವನೆಯುಳ್ಳವನು, ಎಂಬುದಾಗಿ ಹೇಳುತ್ತಾರಷ್ಟೆ. ಮನೀಷಿಗಳು, ಎಂದರೆ ಧೀಮಂತರು, ಹೇಳುವ ಈ ಮಾತು ಸತ್ಯವಾಗಲಿ, ಕಲ್ಯಾಣಪುರುಷನೇ! ಶರಣುಹೊಂದಿದವರನ್ನು ಶಿಷ್ಟರು ಪಾಲಿಸುವರಷ್ಟೇ? ನಾವು ನಿನಗೆ ಶರಣಾಗಿದ್ದೇವೆ. ಆದುದರಿಂದ ನೀನು ನಮ್ಮನ್ನು ಕ್ಷಮಿಸಬೇಕು" - ಎಂದೆವು.


ಸೂರ್ಯಚಂದ್ರರ ಪ್ರಭೆಯನ್ನು ಹೊಂದಿದ್ದ ಹಾಗೂ ಶುಭಕರ್ಮಗಳನ್ನು ಮಾಡುವ ಆ ಬ್ರಾಹ್ಮಣನು ಧರ್ಮಾತ್ಮನಾಗಿದ್ದರಿಂದ ನಮ್ಮ ವಿಷಯದಲ್ಲಿ ಪ್ರಸನ್ನತೆಯನ್ನು ತೋರಿ ಹೀಗೆ ಹೇಳಿದನು: "ಶತ ಮತ್ತು ಶತಸಹಸ್ರ, ಎಂದರೆ ನೂರು ಹಾಗೂ ಲಕ್ಷ – ಎಂಬಿವು, ಸಾಮಾನ್ಯವಾಗಿ ಅನಂತ-ಸಂಖ್ಯೆಯ ವಾಚಕಗಳು ಆದರೆ ನಾನು ಹೇಳಿದ "ನೂರು ವರ್ಷ"ವೆಂಬುದು ಕೇವಲ ನೂರೆಂಬ ಪರಿಮಾಣವನ್ನೇ ಹೇಳತಕ್ಕದ್ದು.


ನೀವುಗಳು ಮೊಸಳೆಗಳಾಗಿ ನೀರಿಗೆ ಬಂದವರನ್ನೆಲ್ಲಾ ಸೆಳೆಯುತ್ತಿರುವಿರಿ. ಎಂದೋ ಒಮ್ಮೆ ಯಾವನೋ ಒಬ್ಬ ಪುರುಷಶ್ರೇಷ್ಠನು ನೀರಿಗೆ ಬಂದಾಗ, ನಿಮ್ಮನ್ನು ನೀರಿನಿಂದಾಚೆಗೆ ಎಳೆದುಹಾಕುವನು – ಎಂದನು.


ಸೂಚನೆ : 16/9/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಯಕ್ಷ ಪ್ರಶ್ನೆ 106 (Yaksha prashne 106)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)




ಪ್ರಶ್ನೆ –  105 ದೈವ ಎಂದರೇನು  ?

ಉತ್ತರ - ದಾನದ ಫಲ 

ಸಾಮಾನ್ಯವಾಗಿ ಯಕ್ಷಪ್ರಶ್ನೆಯಲ್ಲಿ ಬರುವ ವಿಷಯಗಳಲ್ಲಿ ಕಾರ್ಯ - ಕಾರಣಭಾವ ಕಂಡುಬರುತ್ತದೆ.  ಪ್ರಶ್ನೆ ಎಂಬ ಕಾರಣಕ್ಕೆ ಉತ್ತರವು ಕಾರ್ಯವಾಗಿರುತ್ತದೆ ಅಥವಾ ಒಂದರಿಂದ ಇನ್ನೊಂದು ಉತ್ಪತ್ತಿಯಾದಂತಿರುತ್ತದೆ. 'ಇದಕ್ಕೆ ಅದು ಕಾರಣ' ಎಂಬ ರೂಪದಲ್ಲಿ ಇರುವುದನ್ನು ನಾವು ಕಾಣಬಹುದು. ಪ್ರಸ್ತುತವಾದ ಪ್ರಶ್ನೆಯೂ ಅದೇ ರೀತಿಯಲ್ಲಿ ಇರುವಂತಿದೆ.  ದೈವ ಎಂದರೇನು ಎಂಬ ಪ್ರಶ್ನೆಗೆ ಉತ್ತರವಾಗಿ ಧರ್ಮಜ್ಞನು 'ದಾನ' ಎಂಬ ಉತ್ತರವನ್ನು ಕೊಡುತ್ತಾನೆ. ಅಂದರೆ ದೈವವು ದಾನದಿಂದ ಹೇಗೆ ಸಂಭವಿಸುತ್ತದೆ? ಅಥವಾ ದೈವಕ್ಕೆ ದಾನವು ಯಾವ ರೀತಿಯಾಗಿ ಅನುಕೂಲಿಸುತ್ತದೆ? ಎಂಬ ವಿಷಯವನ್ನು ಇಲ್ಲಿ ಕೇಳಿದಂತೆ ಕಂಡುಬರುತ್ತದೆ. ಹಾಗಾಗಿ ನಾವಿಲ್ಲಿ ಚಿಂತಿಸಬೇಕಾದ ವಿಷಯ ಎರಡು. ದೈವ ಎಂದರೇನು? ಮತ್ತು ದೈವಕ್ಕೆ ದಾನ ಯಾವ ರೀತಿಯಾಗಿ ಕಾರಣವಾಗುತ್ತದೆ? ಎಂಬುದನ್ನು.

 

'ದೈವ' ಎಂಬ ಶಬ್ದಕ್ಕೆ ಅದೃಷ್ಟ, ಭಾಗ್ಯ, ಹಣೆಬರಹ, ದೇವತೆಗೆ ಸಂಬಂಧಿಸಿದ್ದು ಇತ್ಯಾದಿ ಅನೇಕ ಅರ್ಥವನ್ನು ಹೇಳುವುದುಂಟು. ದಾನ ಎಂಬ ವಿಷಯ ಪ್ರಸ್ತುತವಾಗಿ ಇರುವುದರಿಂದ, ನಾವಿಲ್ಲಿ ದೈವ ಎಂಬ ಪದಕ್ಕೆ ಹಿಂದೆ ಹೇಳಿದ ಎಲ್ಲ ಅರ್ಥಗಳನ್ನು ಭಾವಿಸುವುದರ ಜೊತೆಗೆ ಇನ್ನೊಂದು ವಿಶಿಷ್ಟ ಅರ್ಥವನ್ನು ತೆಗೆದುಕೊಳ್ಳಬೇಕು. ಕರ್ಮದ ಫಲವನ್ನೇ ಇಲ್ಲಿ ದೈವ ಎಂಬುದಾಗಿ ಕರೆಯಲಾಗುತ್ತದೆ. ನಾವು ಮಾಡಿದ ಕರ್ಮವು ಫಲವನ್ನು ಕಾಣುವ ಸಮಯ ಬಂದಾಗ ಅದಕ್ಕೆ 'ದೈವ' ಎಂಬುದಾಗಿ ಕರೆಯಬೇಕಾಗುತ್ತದೆ. ಕರ್ಮಫಲವು ನಮಗೆ ಸಮರ್ಪಕವಾಗಿ ಅಂದರೆ ಸಫಲವಾಗಿ ಆಗಬೇಕಾದರೆ ಯಾವುದು ಉತ್ತಮವಾದ ಸಾಧನ? ಎಂಬುದು ಈ ಪ್ರಶ್ನೆಯ ಆಂತರ್ಯವಾಗಿದೆ. ಅದಕ್ಕೆ ಉತ್ತರವೇ 'ದಾನ' ಎಂಬುದಾಗಿ. ಅಂದರೆ ದಾನ ಎಂಬ ಕರ್ಮವು ಸುಫಲವನ್ನು ಕೊಡುವುದರಲ್ಲಿ ಸಮರ್ಥವಾದದ್ದು ಎಂದು. ಅದಕ್ಕೆ ದಾನಕ್ಕಿಂತಲೂ ಅತ್ಯಂತ ಶ್ರೇಷ್ಠವಾದ ಕರ್ಮ ಇನ್ನೊಂದಿಲ್ಲ ಎಂಬುದಾಗಿ ಎಲ್ಲ ಕಡೆಗೂ ದಾನದ ಹಿರಿತನವನ್ನು "ದಾನೇನ ದ್ವಿಷಂತೋ ಮಿತ್ರಾ ಭವಂತಿ; ದಾನೇ ಸರ್ವಂ ಪ್ರತಿಷ್ಠಿತಂ, ತಸ್ಮಾತ್ ದಾನಂ ಪರಂ ವದಂತಿ" ಇತ್ಯಾದಿಯಾಗಿ ದಾನದ ಮಹತ್ತ್ವವನ್ನು ಹೇಳಿರುವುದು ಉಪನಿಷತ್ತು ಮೊದಲಾದ ಕಡೆ ಕಂಡುಬರುತ್ತದೆ. ದಾನದಿಂದ ಶತ್ರುವೂ ಕೂಡ ಮಿತ್ರ ಆಗುವುದಾದರೆ ದಾನಕ್ಕೆ ಅದೆಷ್ಟು ಹಿರಿಮೆ ಇರಬಹುದು! ಎಂಬುದನ್ನು ನಾವು ಇಲ್ಲಿ ಊಹಿಸಬಹುದು. ಕರ್ಮಗಳಲ್ಲಿ ಶ್ರೇಷ್ಠವಾದ ಕರ್ಮ ಯಾವುದು? ಎಂದು ಹೇಳುವಾಗ "ಯಜ್ಞೋ ಹಿ ಶ್ರೇಷ್ಠತಮಂ ಕರ್ಮ"  ಯಜ್ಞವು ಕರ್ಮಗಳಲ್ಲಿ ಅತ್ಯಂತ ಶ್ರೇಷ್ಠವಾದದ್ದು ಎಂಬುದಾಗಿ ಹೇಳಿ; ಆ ಯಜ್ಞ ಸಫಲವಾಗಬೇಕಾದರೆ ದಾನದಿಂದ ಮಾತ್ರ ಸಾಧ್ಯ ಎಂಬುದಾಗಿ ಹೇಳಿ; ದಾನ ಮತ್ತು ಯಜ್ಞ ಇವೆರಡೂ ಕೂಡ ಅತ್ಯಂತ ಹಿರಿದಾದವುಗಳು ಎಂಬುದಾಗಿ ಹೇಳಲಾಗಿದೆ. ಹಾಗಾಗಿ ಯಾವ ದಾನರೂಪವಾದ ಕರ್ಮ ಇದೆಯೋ, ಅದು ಯಜ್ಞದಲ್ಲಿ ಅತ್ಯಂತ ಮುಖ್ಯವಾದ್ದರಿಂದ ಯಜ್ಞವು ಉತ್ತಮವಾದ ದೈವವನ್ನು ಘಟಿಸಲು ಸಮರ್ಥವಾಗುತ್ತದೆ. ಅಂದರೆ ದಾನ ಎಂಬ ಕರ್ಮವು ಮಾತ್ರ ಮುಂದೆ ಉತ್ತಮ ದೈವವಾಗಿ - ಕರ್ಮದ ಫಲವಾಗಿ, ನಮ್ಮನು ಸನ್ಮಾರ್ಗದಲ್ಲಿ ತೊಡಗಿಸುವ ಕರ್ಮವಾಗಿದೆ. ಆದ್ದರಿಂದಲೇ ಯಕ್ಷನ ಈ ಪ್ರಶ್ನೆ ಎಷ್ಟು ಅದ್ಭುತ! ಎಂಬುದಾಗಿ ಅನಿಸುವುದು. ದಾನವು ಯಾವ ರೀತಿಯಾಗಿ ದೈವಕ್ಕೆ ಸಹಕಾರಿಯಾಗುತ್ತದೆ ಎಂಬ ವಿಷಯ ಈ ಪ್ರಶ್ನೋತ್ತರದಲ್ಲಿ ಅಡಕವಾಗಿದೆ ಎಂದು ಹೇಳಬಹುದು.


ಸೂಚನೆ : 16/9/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ - 30 ಶಿಶು-ಕೃಷ್ಣನಿಗೆ ಸು-ಪ್ರಭಾತ (Krishnakarnamrta -30 Shishu-Krishnanige Suprabhata)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ವತ್ಸ ಜಾಗೃಹಿ ವಿಭಾತಂ ಆಗತಂ 

ಭಗವಂತನನ್ನು ಬಗೆಬಗೆಯಾಗಿ ಭಾವಿಸುವ ಪರಿ ಭಾರತೀಯ-ಸಂಸ್ಕೃತಿಗೇ ಮೀಸಲು. ಮಾನುಷ-ರೂಪದಲ್ಲಿ ಭಗವಂತನು ಅವತರಿಸಿ ಬಂದಾಗ ಆತನನ್ನು ಶಿಶುವನ್ನಾಗಿ ನೋಡಬಹುದು, ಯುವಕನನ್ನಾಗಿ ಕಾಣಬಹುದು. ಹಿರಿಯನನ್ನಾಗಿ ಭಾವಿಸಬಹುದು. ತಮ್ಮ(ಲಕ್ಷ್ಮಣ)ನೊಂದಿಗಿನ ಅಣ್ಣನನ್ನಾಗಿ (ರಾಮನನ್ನು) ಕಾಣಬಹುದು; ಅಣ್ಣ(ಬಲರಾಮ)ನೊಂದಿಗಿನ ತಮ್ಮ(ಕೃಷ್ಣ)ನನ್ನಾಗಿ ನೋಡಬಹುದು.

ಪುತ್ರನಿಗೆ ತಂದೆಯಾಗಿ, ಮತ್ತೊಬ್ಬನಿಗೆ ಮಿತ್ರನಾಗಿ, ಇನ್ನೊಬ್ಬರಿಗೆ ಪ್ರಿಯನಾಗಿ – ಹೀಗೆಲ್ಲ ಚಿತ್ರಿತನಾಗಿರುವುದನ್ನು ಕಾಣಬಹುದು. ಗೀತೆಯ ಮಾತಿನಲ್ಲಿ ಹೇಳುವುದಾದರೆ, "ಪಿತೇವ ಪುತ್ರಸ್ಯ, ಸಖೇವ ಸಖ್ಯುಃ, ಪ್ರಿಯಃ ಪಿಯಾಯ" - ಎಂಬ ಮೂರು ಭಾವಗಳೂ ಆತನ ಬಗ್ಗೆ ಒಬ್ಬನಲ್ಲೇ ಶಕ್ಯ – ಅವಕ್ಕೆ ಸಲ್ಲುವ ಸನ್ನಿವೇಶಗಳಲ್ಲಿ.

ಮತ್ತು ಈ ನಾನಾ-ಭಾವಾನುಸಾರಿಯಾಗಿ ಸಲಿಗೆಯ ಬಗೆಗಳೂ ಬೇರೆಯಾಗುವುವು. ಆದರದಿಂದಲೂ, ಸಖ್ಯದಿಂದಲೂ, ಪ್ರೀತಿ-ವಾತ್ಸಲ್ಯಗಳಿಂದಲೂ ಭಗವಂತನನ್ನು ಹತ್ತಿರದಿಂದ ಕಾಣುವ, ಕಂಡು ಭಾವಿಸುವ, ಭಾವಿಸಿ ಆನಂದಿಸುವ - ಪರಿಗಳೆಲ್ಲವೂ ಉಂಟು.

ಕೃಷ್ಣನನ್ನು ವಾತ್ಸಲ್ಯದಿಂದ ಕಂಡ ಯಶೋದೆಯ ಚಿತ್ರಣವನ್ನು ಶ್ಲೋಕವೊಂದರಲ್ಲಿ ಲೀಲಾಶುಕನು ಮೂಡಿಸಿದ್ದಾನೆ. "ಏಳು ಕಂದ, ಬೆಳಗಾಯಿತು" ಎನ್ನುತ್ತಿದ್ದಾಳೆ, ಯಶೋದೆ. ಕೃಷ್ಣನಿಗೆ ನೂರಾಯುಸ್ಸನ್ನು ಆಶಂಸಿಸುತ್ತಿದ್ದಾಳೆ. "ನೂರು ವರ್ಷ ಬಾಳು" ಎಂದು ನಾವೆಲ್ಲ ಹೇಳುವುದನ್ನು "ನೂರು ಶರತ್ಕಾಲ ಜೀವಿಸು" ಎಂಬುದಾಗಿ ಹೇಳುತ್ತಿದ್ದಾಳೆ.

ಏಕೆ ಶರತ್ಕಾಲ? ಮಳೆಯೇ ಮುಖ್ಯವೆನಿಸುವ ನಮ್ಮ ದೇಶದಲ್ಲಿ ಸಂವತ್ಸರವನ್ನು "ವರ್ಷ"ಗಳಿಂದ, ಎಂದರೆ ಮಳೆಗಳಿಂದ, ನಿರ್ದೇಶಿಸುವ ಕ್ರಮ ಸಹಜವಾದದ್ದೇ ಸರಿ. ಆದರೂ ಸಹ, ನಮ್ಮ ದೇಶದಲ್ಲಿ ಶರದೃತುವಿಗೆ ಒಂದು ಬಹಳ ವಿಶೇಷವಾದ ಸ್ಥಾನವೇ ಇದೆ. ಏನದು?

ಶರತ್ಕಾಲವೆಂದರೆ ಮಳೆಗಾಲ ಮುಗಿದ ಬಳಿಕ ಬರುವ ಕಾಲ. ಹಾಗಾಗಿ ಆ(ಗಾ)ಗ ಮಳೆ ಸುರಿದುಬಿಡುವ ಭೀತಿಯಿಲ್ಲ; ಛಳಿಗಾಲದ ಸುಳಿವು ಸಹ ಇಲ್ಲ; ಬೇಸಿಗೆಯಂತೂ ಬಲುದೂರವೇ. ಹೀಗಾಗಿ ಶರತ್ಕಾಲವು ಬಹಳ ಹಿತವೆನಿಸುವ ಕಾಲ.

ಶರತ್ಕಾಲದ ಚಂದ್ರನನ್ನೇ ಶರಚ್ಚಂದ್ರ ಎನ್ನುವುದು. (ಶರಶ್ಚಂದ್ರ ಎಂದು ಬರೆಯುವುದೂ ಹೇಳುವುದೂ ಸರಿಯಲ್ಲ. 'ಹರಿಶ್ಚಂದ್ರ'-ಪದದ ಹಾಗೆ ಇದೆಂದು ಭ್ರಮಿಸಿದವರು ಇದಕ್ಕೆ ಕಾರಣವಾಗಿರಬಹುದು.) ಮಳೆಗಾಲವು ಕಳೆದಿರುವ ಕಾರಣ, ಆಕಾಶದಲ್ಲಿ ಮೋಡ ಮೂಡುವ ಪರಿಸ್ಥಿತಿಯಿಲ್ಲ. ಹೀಗಾಗಿ ನಭವು ನಿರಭ್ರವಾಗಿರುತ್ತದೆ. ಎಂದೇ ಚಂದ್ರನು ಆಗ ನಿರಾತಂಕವಾಗಿ ಬೆಳಗುವನು. ಎಂದರೆ, ಯಾವಾಗ ಮೋಡ ಬಂದು ತನ್ನನ್ನು ಪೂರ್ಣವಾಗಿಯೋ ಆಂಶಿಕವಾಗಿಯೋ ಸ್ವಲ್ಪ-ಕಾಲವೋ ದೀರ್ಘ-ಕಾಲವೋ ಮುಚ್ಚಿಬಿಡಬಹುದೆಂಬ ಆಶಂಕೆಯಿಲ್ಲ, ಆತಂಕವಿಲ್ಲ, ಚಂದ್ರನಿಗಾಗ!

ಹಾಗೆಯೇ ಶರತ್ಕಾಲದ ಕಮಲವೂ ಪ್ರಸಿದ್ಧವೇ. ಕಮಲಗಳ ಶತ್ರುವೆಂದರೆ ಹಿಮವೇ ಸರಿ: ಕಮಲಗಳಿಗೆ ಹಿಮಗಾಲವೆಂದರೆ ಹೊಡೆತವೇ. ಕಮಲಗಳು ಅರಳಿ ನಲಿಯಲು ಬೇಕಾದದ್ದು, ಸೂರ್ಯನ ತಾಪ. ಆತಪವೆಂದರೂ ಬಿಸಿಲೇ. ಸೂರ್ಯ ಮರೆಯಾದರೆ ಕಮಲವು ಪೆಚ್ಚಾಗುತ್ತದೆ. ಎಂದೇ ಸೂರ್ಯನನ್ನೂ ಪದ್ಮಿನಿಯನ್ನೂ ಪ್ರೇಮಿಗಳೆಂಬಂತೆ ಚಿತ್ರಿಸುವುದೂ ಉಂಟು.

ಅಂತೂ ಶರದೃತುವಿನ ಕಮಲವೆಂದರೆ ಸೊಗಸೇ. ಅದನ್ನೇ ಶಾರದಾಂಭೋಜವೆನ್ನುವರು. ಶರತ್ ಎಂಬುದರಿಂದಲೇ ಶಾರದವೆಂಬುದು ಬಂದಿರುವುದು. ದೇವಿ ಶಾರದೆಯನ್ನು ಶಾರದಾಂಭೋಜ-ವದನಾ ಎಂದೇ ಹೇಳುವರಲ್ಲವೆ?

ಶರನ್ನವರಾತ್ರದ ಸಮಯದಲ್ಲಿ ಇತ್ತ ಪುಷ್ಪ-ಸಮೃದ್ಧಿಯೂ ಇರುವುದು; ಅತ್ತ ದೇವೀ-ಪೂಜೆಗೂ ಪ್ರಶಸ್ತವಾದ ಕಾಲವದು. ಅಂತೂ ಭೌತಿಕವಾಗಿಯೂ ದೈವಿಕವಾಗಿಯೂ ಆಧ್ಯಾತ್ಮಿಕವಾಗಿಯೂ ಪ್ರಶಸ್ತವಾದ ಸಮಯವೇ ಶರತ್ಕಾಲ.

ಅಂತಹ ನೂರು ಶರದೃತುಗಳನ್ನು ನೀನು ಕಾಣುವಂತಾಗಲಿ - ಎಂದು ಹಾರ್ದವಾಗಿ ಹಾರೈಸುತ್ತಿದ್ದಾಳೆ, ಯಶೋದೆ. "ಶತಂ ಶತಂ" ಎಂದು ಎರಡೆರಡು ಬಾರಿ ಹೇಳುತ್ತಿದ್ದಾಳೆ. "ಶತಾಯುರ್ ವೈ ಪುರುಷಃ" – ಅಲ್ಲವೇ? ಪುಟ್ಟಮಗುವಿಗೆ ಪೂರ್ಣಾಯುಸ್ಸನ್ನು ಬಯಸುತ್ತಿದ್ದಾಳೆ.

ಮಲಗಿರುವ ಮಗುವಿನ ಸೌಂದರ್ಯವೇ ಸೌಂದರ್ಯ. ಅದರಲ್ಲೂ, ಮಗುವಿನ ಹೆತ್ತತಾಯಿಗಂತೂ ಅದನ್ನು ಅದೆಷ್ಟು ದಿಟ್ಟಿಸಿ ನೋಡಿದರೂ ತೃಪ್ತಿಯೇ ಆಗದು. ನೆಮ್ಮದಿಯಾಗಿ ಮಲಗಿರುವ ಮಗು, ನೆಮ್ಮದಿಯಾಗಿ ನಿದ್ರೆ ಮುಗಿಸಿ ಎಚ್ಚರಗೊಳ್ಳುತ್ತಿರುವ ಮಗು – ಇವೆರಡನ್ನೂ ಕಣ್ತುಂಬ ಕಂಡು ತೃಪ್ತಿ ಪಡುವ ಭಾಗ್ಯ ಯಾವ ತಾಯಿಗಿಲ್ಲ?

ಅಯ್ಯೋ ನಮ್ಮ ದರಿದ್ರ ನಾಗರಿಕತೆಯೇ! ಇಂದಿನ ಕೃತಕ ಜೀವನದಲ್ಲಿ, ಆಫೀಸಿಗೆ ಓಡುವ ರಭಸದಲ್ಲಿ, ಮಕ್ಕಳನ್ನು ಅರ್ಧ-ನಿದ್ರೆಯಲ್ಲೇ ಎಬ್ಬಿಸಿ, ಕ್ರೀಚುಗಳಲ್ಲಿ ದಬ್ಬಿ ಓಡುವ ವಿಕಟ-ಪರಿಸ್ಥಿತಿಯ ಇಂದಿನ ತಾಯಂದಿರು ಅದೆಂತು ಈ ದೈವ-ದತ್ತ-ಸುಖಗಳನ್ನಾದರೂ ಪಟ್ಟಾರು?

ತಾಯಿ ಯಶೋದೆಯು ಕೃಷ್ಣನ ಮೊಗವನ್ನೇ ಈಕ್ಷಿಸುತ್ತಿರುವ ಈ ಬೆಳಗಿನ ಸಂನಿವೇಶದ ಚಿತ್ರಣವನ್ನು ಕವಿ ಲೀಲಾಶುಕ ಕಟ್ಟಿಕೊಟ್ಟಿದ್ದಾನೆ. ಅಮ್ಮನಿಂದ ಹೀಗೆ ದಿಟ್ಟಿಸಿ ನೋಡಲ್ಪಡುತ್ತಿರುವ ಕೃಷ್ಣನನ್ನು ಭಜಿಸುತ್ತೇವೆ - ಎನ್ನುತ್ತಾನೆ. ತಂ-ತಂ-ತಂ-ತಂಗಳ ಪ್ರಾಸ ಕರ್ಣ-ರಂಜಕವಲ್ಲವೇ?

ವತ್ಸ! ಜಾಗೃಹಿ ವಿಭಾತಂ ಆಗತಂ

ಜೀವ ಕೃಷ್ಣ! ಶರದಾಂ ಶತಂ ಶತಂ |

ಇತ್ಯುದೀರ್ಯ ಸುಚಿರಂ ಯಶೋದಯಾ

ದೃಶ್ಯಮಾನ-ವದನಂ ಭಜಾಮಹೇ ||

ಅರ್ಜುನ-ರಥಾಭರಣ

ಶ್ರೀಕೃಷ್ಣನು ಆದ್ಯ-ಮಹಸ್ಸು. ಮಹಸ್ಸೆಂದರೆ ತೇಜಸ್ಸು. ಜಗನ್ಮೂಲವಾದ ಜ್ಯೋತಿಸ್ಸನ್ನೇ ಆದ್ಯ-ಮಹಸ್ಸೆನ್ನುವುದು. ಅಂತಹ ತೇಜೋರಾಶಿಯೇ ಅವತರಿಸಿದೆ, ಶ್ರೀಕೃಷ್ಣನಾಗಿ. ಆ ಕೃಷ್ಣನು ನಮ್ಮನ್ನು ಕಾಪಾಡಲಿ.

ಹೀಗೆ ವಿಶ್ವ-ಮೂಲ-ಜ್ಯೋತಿಸ್ತತ್ತ್ವವೇ ಆದರೂ ಅದೆಷ್ಟು ಸರಳವಾಗಿದ್ದ, ನಮ್ಮ ಕೃಷ್ಣ! ಅರ್ಜುನನ ರಥಕ್ಕೆ ಆತನೇ ಭೂಷಣ. ಇದನ್ನೇ "ಧನಂಜಯ-ರಥಾಭರಣ"ನೆಂದು ಕವಿ ಕರೆದಿರುವುದು.

ಹೇಗಿದ್ದ ಆತ? ಅಂಬುದದಂತೆ ನೀಲ, ಎಂದರೆ ಮೇಘ-ಶ್ಯಾಮನಾಗಿ ಇದ್ದವನಾತ. ಪಾಂಡವರ ಏಳ್ಗೆಗಾಗಿ ಶ್ರಮಿಸಿದ ಆತನ ಮೈಮೇಲೆ ಶ್ರಮಾಂಬುವಿನ ಕಣಗಳು ಆವಿರ್ಭವಿಸಿವೆ. ಶ್ರಮಾಂಬುವೆಂದರೆ ಆಯಾಸದ, ಎಂದರೆ ಬೆವರಿನ, ನೀರು. ಅದರ ಹನಿಗಳು ಮೈದೋರಿವೆ, ಆತನ ಶರೀರದ ಮೇಲೆ.

ಆತನ ಪಾಣಿ-ಕಮಲ, ಎಂದರೆ ಕರ-ಪದ್ಮವು, ಆ-ತಾಮ್ರವಾಗಿದೆ. ತಾಮ್ರವೆಂದರೆ ತಾಮ್ರದಂತಿರುವುದು, ಅರ್ಥಾತ್ ತಾಮ್ರ-ವರ್ಣವನ್ನು ಹೊಂದಿರುವುದು. ತಾಮ್ರವು ಕೆಂಪಲ್ಲವೇ? ಅಂತೂ, ಕಮಲದ ಕೆಂಪೆಂತೋ ಅಂತೆಯೇ ರಕ್ತ-ವರ್ಣದಿಂದ ಕೂಡಿದೆ ಕೃಷ್ಣನ ಕರ-ಕಮಲ.

ಆ ಕೈಯಲ್ಲಿ ಆತನು ಹಿಡಿರಿದುವುದು ಚಾವಟಿಯನ್ನು. ಅದನ್ನು ಆತನು ಬೀಸಿ ಬಾರಿಸುವ ಪ್ರಸಂಗವೇ ಬರದು, ಆ ಚಾವಟಿಗೆ! ವಿಧೇಯವಾದ ಕುದುರೆಗಳಿದ್ದಲ್ಲಿ ಚಾಟಿಯೊಂದು ಬರಿಯ ಭೂಷಣವಷ್ಟೆ. ಎಂದೇ ಅದನ್ನು ಪ್ರಣಯ-ಪ್ರತೋದವೆಂದಿರುವುದು: ಎಂದರೆ "ಪ್ರೀತಿಯ ಚಾವಟಿ"ಯಷ್ಟೇ ಅದು!

ಆತನು ರಥವನ್ನೋಡಿಸುವಾಗ ಆತನ ಮೂರು ಆಭರಣಗಳೂ ಚಲಿಸುತ್ತಿವೆ, ಓಲಾಡುತ್ತಿವೆ: ಆತನ ಹಾರ, ಆತನ ಮಣಿ-ಕುಂಡಲ, ಹಾಗೂ ಆತನ ಹೇಮ-ಸೂತ್ರ (ಎಂದರೆ ಚಿನ್ನದ ಸರ) - ಇವಿಷ್ಟೂ ಆಲೋಲವಾಗಿವೆ.

ಹೀಗಿರುವ ಅರ್ಜುನ-ರಥ-ಭೂಷಣನಾದ ಆದ್ಯ-ತೇಜಸ್ವಿ ನಮ್ಮನ್ನು ಪೊರೆಯಲಿ - ಎನ್ನುತ್ತಾನೆ, ಲೀಲಾಶುಕ, ಈ ಶ್ಲೋಕದಲ್ಲಿ. ಶ್ಲೋಕದ ಆಕಾರ ಚೆನ್ನಾಗಿದೆ: ಅದರ ನಾಲ್ಕೂ ಪಾದಗಳೂ "ಆ"ಕಾರದಿಂದಲೇ ಆರಂಭಿಸುತ್ತವೆ; ಮ್ರ-ಪ್ರ-ಪ್ರ-ಶ್ರಗಳು, ಲ-ಲ-ಲ-ಲಗಳು ಮುಂತಾದ ಅನುಪ್ರಾಸಗಳಿದ್ದೇಇವೆ.

ಆತಾಮ್ರ-ಪಾಣಿಕಮಲ-ಪ್ರಣಯ-ಪ್ರತೋದಂ

ಆಲೋಲ-ಹಾರ-ಮಣಿಕುಂಡಲ-ಹೇಮಸೂತ್ರಮ್ |

ಆವಿಃಶ್ರಮಾಂಬು-ಕಣಮ್ ಅಂಬುದ-ನೀಲಮ್ ಅವ್ಯಾದ್

ಆದ್ಯಂ ಧನಂಜಯ-ರಥಾಭರಣಂ ಮಹೋ ನಃ! || 

ಸೂಚನೆ : 16/09/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ

Sunday, September 15, 2024

ಅಷ್ಟಾಕ್ಷರೀ 65 ಅಂಗುಲೀಯಂ ಅಭಿಜ್ಞಾನಂ ( ಅಷ್ಟಾಕ್ಷರೀ 65 Anguliyam Abhijnanam)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಕಾಳಿದಾಸನು ಶಾಕುಂತಲ-ನಾಟಕವನ್ನು ಬರೆದನೆಂಬುದನ್ನು ಯಾವ ಭಾರತೀಯನರಿಯ? ನಾಟಕದ ಪೂರ್ಣವಾದ ಹೆಸರೇನೆಂಬುದನ್ನು ಅರಿತಿಲ್ಲದವರಿರಬಹುದು. ಅದು "ಅಭಿಜ್ಞಾನ-ಶಾಕುಂತಲ"ವೆಂದು. 

ಏನು ಹಾಗೆಂದರೆ? ಅಭಿಜ್ಞಾನ(ಅಥವಾ ಪ್ರತ್ಯಭಿಜ್ಞಾನ)ವೆಂದರೆ ಗುರುತಿಸುವುದು. ಎಷ್ಟೋ ವರ್ಷಗಳಿಂದ ಒಬ್ಬರನ್ನು ನೋಡಿಲ್ಲದಿದ್ದಲ್ಲಿ ಗುರುತಿಸುವುದೇ ಕಷ್ಟವಾಗಬಹುದು: ಅವರಲ್ಲಿ ಅಷ್ಟರಲ್ಲಿ ಏನೇನೋ ಬದಲಾವಣೆಗಳಾಗಿರಬಹುದು; ವೇಷಾಂತರದಲ್ಲಿ ಬಂದರಂತೂ ಗುರುತುಹಿಡಿಯುವುದು ಕಷ್ಟವೇ.

ನಮ್ಮಲ್ಲಿ ಬದಲಾಗದಿರುವ ಒಂದೆರಡು ಅಂಶಗಳು ಇರಬಹುದು. ಉದಾಹರಣೆಗೆ ಕಣ್ಣಿನ ಅಚ್ಚು ಬಹುತೇಕ ಹಾಗೇ ಉಳಿದಿರುವುದು. ಕೆಲವೊಮ್ಮೆ ಯಾವುದೋ ವಿಶಿಷ್ಟವಾದ ವೇಷವೋ ಆಭರಣವೋ ಅಲಂಕಾರವೋ ನೆನಪುಕೊಡಬಹುದು. ನೆನಪು ಕೊಡುವ ವಸ್ತು ಅಭಿಜ್ಞಾಪಕ. ಅಭಿಜ್ಞಾನವೆಂದರೂ ಅದೇ. 

ಅಲ್ಲಿಗೆ ಅಭಿಜ್ಞಾನವೆಂದರೆ ಎರಡು ಅರ್ಥಗಳಾದುವು. ಮೊದಲನೆಯದು, ಗುರುತಿಸುವಿಕೆಯೆಂಬ ಕ್ರಿಯೆ. ಎರಡನೆಯದು, ಈ ಗುರುತಿಸುವಿಕೆಗೆ ಸಾಧನವಾಗುವ ವಸ್ತು: ಸ್ಮಾರಕ.

ನಾಟಕದ ಶೀರ್ಷಿಕೆಯಲ್ಲಿ ಬಂದಿರುವ ಅಭಿಜ್ಞಾನವು ಗುರುತಿಗೆ ಸಾಧನವಾದದ್ದೇ. ಕಾಳಿದಾಸನ ಶಾಕುಂತಲ-ಕಥೆಯನ್ನು ಬಲ್ಲವರಿಗಿದು ತಿಳಿದಿರುತ್ತದೆ. ದುರ್ವಾಸ-ಮಹರ್ಷಿಗಳ ಶಾಪದಿಂದಾಗಿ, ಶಕುಂತಲೆಯ ನೆನಪೇ ಮಾಸಿರುತ್ತದೆ, ದುಷ್ಯಂತನಿಗೆ. ಕೊನೆಗೆ ಉಂಗುರವು ಸಿಕ್ಕಾಗ, ನೆನಪು ಹಸಿರಾಗುತ್ತದೆ.  

ದೀರ್ಘಕಾಲ ಎದುರಿಗೆ ಬಂದಿಲ್ಲದ ವ್ಯಕ್ತಿಯನ್ನು ಮರೆತಂತಾಗಿದ್ದರೂ, ಅದೇ ವ್ಯಕ್ತಿ ಎದುರಾದಾಗ  ಗುರುತಿಸಿಬಿಡುವೆವು. ಕೆಲವೊಮ್ಮೆ - ಎಂದರೆ ಮರೆವಿಗೆ ಪ್ರಬಲವಾದ ಕಾರಣವಿದ್ದಾಗ ಮಾತ್ರ - ಎದುರಿಗೆ ಬಂದವರನ್ನೂ ಗುರುತಿಸಲಾಗದೇ ಹೋಗಬಹುದು. ದುಷ್ಯಂತನಿಗಾದುದು ಹಾಗೆಯೇ: ಎದುರಿಗೆ ಬಂದು ನಿಂತವಳು ಪ್ರಾಣ-ಪ್ರಿಯೆಯಾಗಿದ್ದ ಶಕುಂತಲೆ: ಗುರುತಿಸಲಾಯಿತೇ?

ಎದುರಿಗಿಲ್ಲದವರನ್ನೂ ಸ್ಮರಿಸಿಕೊಳ್ಳುವುದೂ ಉಂಟು. ಅವರಿಗೆ ಸೇರಿದ ಯಾವುದಾದರೂ ವಸ್ತುವು ಕಂಡಾಗ ಹಾಗಾಗುವುದು. ಅಂತಹ ವಸ್ತುವೇ ಅಭಿಜ್ಞಾನ. ದುಷ್ಯಂತನು ಶಕುಂತಲೆಗಿತ್ತ ಉಂಗುರವು ಅಭಿಜ್ಞಾನ. ಶಾಕುಂತಲದ ವಿಸ್ಮಯವೆಂದರೆ, ವ್ಯಕ್ತಿಯೇ ಎದುರಿಗೆ ಬಂದಾಗ ಉಂಟಾಗದ ಪ್ರತ್ಯಭಿಜ್ಞಾನವು, ಕಾಲಾಂತರದಲ್ಲಿ ಅಭಿಜ್ಞಾನವೊಂದರಿಂದ ಆದದ್ದು! ಅಭಿಜ್ಞಾನವೊಂದರಿಂದ ಶಕುಂತಲೆಯ ಸ್ಮೃತಿಯು ಚಿಮ್ಮುವುದನ್ನೇ ಅಭಿಜ್ಞಾನ-ಶಾಕುಂತಲವೆಂಬ ಹೆಸರು ಹೇಳುತ್ತದೆ.

ಹೀಗೆ ಅಭಿಜ್ಞಾನದಿಂದಾಗಿ ಸ್ಮರಣೆಯುಕ್ಕುವ ತಂತ್ರವು ಶಾಕುಂತಲದಿಂದಲೇ ಆರಂಭವಾದುದಲ್ಲ. ಭಾಸ-ಮಹಾಕವಿಯ ಸ್ವಪ್ನವಾಸವದತ್ತ-ನಾಟಕದಲ್ಲೂ ಇದುಂಟು: ತಾನು ಸತ್ತ ಸುದ್ದಿ ಹಬ್ಬಿಸಿ ವಾಸವದತ್ತೆಯು ದೀರ್ಘ-ಕಾಲ ಕಣ್ಮರೆಯಾಗಿರುತ್ತಾಳೆ; ಪತಿ ಉದಯನನಿಗೆ ಮತ್ತೊಂದು ಮದುವೆಯೂ ಆಗಿಬಿಡುತ್ತದೆ; ಆದರೂ ಆಕಸ್ಮಿಕವಾಗಿ ಆಕೆಯ ಘೋಷವತೀ-ವೀಣೆಯು ದೊರಕಲಾಗಿ, ವಾಸವದತ್ತೆಯ ನೆನಪು ಉದಯನನ ಚಿತ್ತದಲ್ಲಿ ಮರುಕಳಿಸುತ್ತದೆ; ಅವಳೂ ದೊರೆತಾಳೆಂಬ ಆಶೆಯನ್ನದು ಚಿಗುರಿಸುತ್ತದೆ. ಉಂಗುರ ಸಿಕ್ಕಮೇಲೆ ಶಕುಂತಲೆಯೂ ದಕ್ಕಿದಳಲ್ಲವೇ?

ಇದಕ್ಕೂ ಮೊದಲಿನ ಅದಿ-ಕಾವ್ಯವಾದ ರಾಮಾಯಣದಲ್ಲೇ ಅಭಿಜ್ಞಾನದ ಪಾತ್ರವುಂಟು. ಸೀತಾನ್ವೇಷಣೆಗಾಗಿ ಅನೇಕಾನೇಕ-ವಾನರರನ್ನು ನಾನಾ-ದಿಕ್ಕುಗಳಿಗೆ ಸುಗ್ರೀವನು ಕಳುಹಿಸುವನಷ್ಟೆ. ಆದರೂ ನೆಚ್ಚಿಕೆಯಿದ್ದುದು ಹನುಮಂತನ ಮೇಲೆಯೇ. ಅಪ್ಪನ ಮಗನಲ್ಲವೇ ಆತ? ಎಂದೇ ವಾಯುದೇವನ ಗತಿ-ವೇಗ-ತೇಜಸ್ಸು-ಲಾಘವಗಳು ಹನುಮಂತನಲ್ಲಿದ್ದವು. ಆತನೇ "ನಯ-ಪಂಡಿತ": ಆತನಲ್ಲೇ ಬಲ-ಬುದ್ಧಿ-ಪರಾಕ್ರಮಗಳೂ ದೇಶ-ಕಾಲಾನುವೃತ್ತಿಯೂ  (ಎಂದರೆ ದೇಶ-ಕಾಲಗಳನ್ನನುಸರಿಸಿ ತನ್ನ ವರ್ತನೆಯನ್ನು ವ್ಯವಸ್ಥೆಗೊಳಿಸಿಕೊಳ್ಳುವ ಸಾಮರ್ಥ್ಯ; ಔಚಿತ್ಯ-ಪ್ರಜ್ಞೆ) ಇರತಕ್ಕವು. 

ಈತನ ಗುಣ-ಗಾನವನ್ನು ಸುಗ್ರೀವನು ಹೀಗೆ ಮಾಡಿದ ಮೇಲೆ ಶ್ರೀರಾಮನು ಅಭಿಜ್ಞಾನವಾಗುವ ವಸ್ತುವನ್ನು - ತನ್ನ ಹೆಸರಿನ ಅಂಕಿತವುಳ್ಳ ಅಂಗುಲೀಯ(ಉಂಗುರ)ವನ್ನು - ಹನುಮಂತನಿಗೇ ಕೊಡುವುದು. (ಹನುಮಂತನ ಸಾಮರ್ಥ್ಯವೇನೆಂಬುದನ್ನು ಪ್ರಥಮ-ಮಿಲನದಲ್ಲಿಯೇ ರಾಮನೂ ಕಂಡುಕೊಂಡಾಗಿತ್ತಷ್ಟೆ.) ಎಂದೇ ಈ ಸಂದರ್ಭದಲ್ಲಿ ವಾಲ್ಮೀಕಿಗಳ ಮಾತೂ "ಅಂಗುಲೀಯಂ ಅಭಿಜ್ಞಾನಂ" ಎಂಬುದಾಗಿ. ಸೀತೆಯು ಪ್ರತಿಯಾಗಿ ಕೊಡುವ ಚೂಡಾಮಣಿಯೂ ಅಭಿಜ್ಞಾನವೇ.

ಇಂತಹ ಅಭಿಜ್ಞಾನವನ್ನು ಕುರಿತು ಶ್ರೀರಂಗ-ಮಹಾಗುರುಗಳಾಡಿದ ಮಾತು ಸ್ಮರಣೀಯವಾಗಿದೆ: "ಮೂಲ-ವಸ್ತುವಿಗೆ ಪ್ರತೀಕವೂ ಪ್ರತಿನಿಧಿಯೂ ಪ್ರತಿಮೆಯೂ ಆಗಬಲ್ಲುದು,  ಅಭಿಜ್ಞಾನವೆಂಬುದು" ಎಂದು. ಇದು ಭಗವಂತನ ಮೂರ್ತಿಗಳಿಗೂ ಸಲ್ಲತಕ್ಕದ್ದೇ. ಮೂಲ-ವಸ್ತುವಾದ ಭಗವಂತನೇ ನಿಧಿ; ಮೂರ್ತಿಗಳು ಆತನಿಗೆ ಪ್ರತಿನಿಧಿ. ಹಾಗೆಯೇ ಆ ಮೂಲದ ಪ್ರತೀಕವೂ ಹೌದು; ಪ್ರತಿಮೆಯೆಂಬುದಂತೂ ಸುಗೋಚರವೇ. 

ಭಾಸನಿಗೂ ವಾಲ್ಮೀಕಿ-ಮಹರ್ಷಿಗೂ ಕಾಳಿದಾಸನು ಋಣಿ - ಅಭಿಜ್ಞಾನದ ಬಳಕೆಯಲ್ಲಿ. ಆದರೂ, ಇಬ್ಬರಿಗಿಂತಲೂ ಹೆಚ್ಚು ಸಮರ್ಥವಾಗಿ ಅದನ್ನು ಬಳಸಿದ್ದಾನೆನ್ನಬಹುದು. ತಮಗೆ ಅತ್ಯಂತ-ಪ್ರೀತಿ-ಪಾತ್ರನಾದ/ಳಾದ ವ್ಯಕ್ತಿಯನ್ನು ಸೀತೆಯಾಗಲಿ ಉದಯನನಾಗಲಿ ಮರೆತೇ ಇರಲಿಲ್ಲ. ಆದರೆ ಶಕುಂತಲೆಯನ್ನು ಕುರಿತು ಮರೆವೇ ಆವರಿಸಿತ್ತು, ದುಷ್ಯಂತನಿಗೆ: ಆದರಿದೋ ಥಟ್ಟನೆ ಅವಳ ಉತ್ಕಟ-ಸ್ಮೃತಿಯನ್ನೇ ತಂದುಕೊಟ್ಟಿತಲ್ಲವೇ ಅಭಿಜ್ಞಾನ? 

ಕಾಶ್ಮೀರದ ಪ್ರತ್ಯಭಿಜ್ಞಾ-ದರ್ಶನದಂತೆ, ಭಗವತ್-ಸ್ಮೃತಿಗೂ ಈ ಕ್ರಮವು ಅನ್ವಯಿಸುವುದು. ಅಂತೂ ಈ ರಹಸ್ಯವೂ ರಮಣೀಯವೂ ಶ್ರೇಷ್ಠವೂ ಆದ  ತತ್ತ್ವವನ್ನು ಬಳಸಿ, ಅಭಿಜ್ಞಾನದ ಸಾರ್ಥಕ್ಯವನ್ನು ಅದ್ಭುತವಾಗಿಯೇ ಮೆರೆಸಿದ್ದಾನಲ್ಲವೇ, ನಮ್ಮೀ ಲೋಕೋತ್ತರ-ಕವಿ?

ಸೂಚನೆ: 14/09/2024 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.

Thursday, September 5, 2024

ಅಷ್ಟಾಕ್ಷರೀ 64 ಪಾದುಕೇ ಹೇಮಭೂಷಿತೇ (Ashtakshari 64 Paduke Hemabhushite)

 ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಶ್ರೀಮದ್ರಾಮಾಯಣದಲ್ಲಿ ಒಂದು ಗಹನವಾದ ಸಂದರ್ಭವು ಬರುತ್ತದೆ. ಅದೆಂದರೆ ರಾಮನು ಭರತನಿಗೆ ತನ್ನ ಪಾದುಕೆಗಳನ್ನು ದಯಪಾಲಿಸುವುದು.

ಭರತನು ಕೇಳಿದನೆಂದು ರಾಮನು ತನ್ನ ಪಾದುಕೆಗಳನ್ನು ಕೊಟ್ಟನಷ್ಟೆ? ಇದರಲ್ಲಿ ಗಹನತೆಯೇನಿದೆ? ಆಶ್ಚರ್ಯವೇನಿದೆ? ತಮ್ಮನು ಕೇಳಿಕೊಂಡದ್ದಕ್ಕೆ ಅಣ್ಣನು ಇಷ್ಟು ಒಪ್ಪುವುದೂ ಒಂದು ಅತಿಶಯವೇ? - ಎಂಬ ಪ್ರಶ್ನೆಯು ಬರುತ್ತದೆ. ಈ ಪ್ರಸಂಗದ ಹಿಂದುಮುಂದುಗಳನ್ನು ಗಮನಿಸಿದರೆ ಇದರ ವಿಶೇಷವೇನೆಂಬುದು ಗೊತ್ತಾಗುತ್ತದೆ.


ರಾಮನು ವನವಾಸದಲ್ಲಿದ್ದುಕೊಂಡು, ತಾನು ಸಿಂಹಾಸನವನ್ನೇರುವುದು ಭರತನಿಗೆ ಸುತರಾಂ ಇಷ್ಟವಿರಲಿಲ್ಲ. ರಾಮನಿಗೆ ಪಟ್ಟಕಟ್ಟುವುದೇ ವಂಶಾನುಗುಣವಾಗಿ ಬಂದ ಕ್ರಮಕ್ಕೆ ಅನುಗುಣವಾದದ್ದು. ಹಿರಿಯನಿರುವಾಗ ಕಿರಿಯವನಿಗೆ ಅಭಿಷೇಕವೇ? ಮೇಲಾಗಿ ದಶರಥನಿಗೆ ಇಷ್ಟವಾಗಿದ್ದದ್ದೂ ರಾಮನಿಗೆ ಪಟ್ಟಾಭಿಷೇಕವಾಗಬೇಕೆಂಬುದೇ. ಪ್ರಜೆಗಳೆಲ್ಲರಿಗೂ ರಾಮನೇ ರಾಜನಾಗಬೇಕೆಂಬ ಮಹತ್ತಾದ ಅಪೇಕ್ಷೆಯಿತ್ತು. ಭರತನಂತೂ ತಾನೇ ಹದಿನಾಲ್ಕುವರ್ಷ ಕಾಡಿನಲ್ಲಿರಲೂ ಸಿದ್ಧನಿದ್ದನು.


ವಸಿಷ್ಠಾದಿಗಳೂ ಸಹ ರಾಮನಿಗೆ ಸಾಕಷ್ಟು ಹೇಳಿದರು. ಯಾರು ಎಷ್ಟು ಹೇಳಿದರೂ ಜಗ್ಗಲಿಲ್ಲ, ಶ್ರೀರಾಮ.


ಅಣ್ಣತಮ್ಮಂದಿರ ಈ ಬಗೆಯ "ಜಗಳ"ವನ್ನು ಪ್ರಾಯಃ ಪ್ರಪಂಚದಲ್ಲಿ ಮತ್ತೆಲ್ಲಿಯೂ ಕಾಣಲು ಸಾಧ್ಯವಿಲ್ಲ. ಮೊಘಲದೊರೆಗಳ ಬಗೆಯಂತೂ ವಿಚಿತ್ರ-ಘೋರವೇ ಸರಿ. ಏಕೆ? ಸರ್ವ-ಮತಗಳಲ್ಲಿಯ ಒಳ್ಳೆಯದನ್ನು ಕಾಣಬೇಕೆಂಬ ಬಯಕೆಯಿದ್ದ ದಾರಾಶಿಕೋಹನನ್ನು, ಅವನ ತಮ್ಮನಾದ ಔರಂಗಜೇಬನೇ ಕೊಲ್ಲಿಸಿದನಲ್ಲವೇ? ಬರೀ ಅಣ್ಣತಮ್ಮಂದಿರೇನು, ಮಗನೇ ಅಪ್ಪನನ್ನು ಜೈಲಿಗೆ ಹಾಕಿಯೋ ಕೊಂದೋ ಗದ್ದುಗೆಯನ್ನೇರಿದ ಪ್ರಸಂಗಗಳೂ ಅವರಲ್ಲಿಲ್ಲದಿಲ್ಲ.


ಎಂದೇ ಈ ಅಪೂರ್ವ-ಸೋದರರ ಸಂಭಾಷಣೆ ಆಶ್ಚರ್ಯಕರವಾದದ್ದು. ಇದನ್ನು ಕೇಳಿ ವಿಸ್ಮಿತರಾಗಿ, ಋಷಿಗಳೂ ಸಿದ್ಧರೂ ಪರಮರ್ಷಿಗಳೂ ಅಂತರ್ಹಿತರಾಗಿದ್ದುಕೊಂಡೇ, ಎಂದರೆ ನಯನ–ಗೋಚರರಾಗದೇ ಇದ್ದುಕೊಂಡೇ, ಕೊಂಡಾಡಿದರಂತೆ, ಈ ಅಣ್ಣತಮ್ಮಂದಿರನ್ನು. ರಾವಣ-ವಧೆಯು ಬೇಗಾಗಬೇಕೆಂಬ ಉತ್ಸುಕತೆಯುಳ್ಳ ಋಷಿಗಳು ಮಾತ್ರ, ರಾಮನ ಮಾತನ್ನು ಒಪ್ಪಿಕೊಳ್ಳುವಂತೆ ಭರತನಿಗೆ ಸೂಚಿಸಿದರಂತೆ. ಆದರೂ ಭರತನು ಮತ್ತೂ ಒಮ್ಮೆ ಕೇಳಿಕೊಂಡ "ನೀ ಬಂದು ಅಭಿಷಿಕ್ತನಾಗುವುದು ರಾಜಧರ್ಮ. ನನ್ನ ತಾಯಿಯ ಯಾಚನೆಯನ್ನೂ ಈಡೇರಿಸಿದಂತಾಗುತ್ತದೆ. ಏಕಾಂಗಿಯಾಗಿ ನಾನು ರಾಜ್ಯವಾಳಲಾರೆ. ರೈತರು ಮಳೆಗಾಗಿ ಹಂಬಲಿಸುವಂತೆ, ಪ್ರಜೆಗಳು ನಿನಗಾಗಿ ಹಂಬಲಿಸುತ್ತಿದ್ದಾರೆ" ಎಂದೆಲ್ಲಾ ಹೇಳಿ ರಾಮನ ಪಾದಕ್ಕೆರಗಿದ.


ಆದರೆ ರಾಮನು "ವಿನಯಶಾಲಿಯಾದ ನೀನು ಸಮರ್ಥನಾಗಿ ರಾಜ್ಯವನ್ನಾಳುವುದರಲ್ಲಿ ಸಂಶಯವಿಲ್ಲ. ಧೀಮಂತರಾದ ಮಂತ್ರಿಗಳೂ ಸ್ನೇಹಿತರೂ ರಾಜ್ಯವಾಳುವ ನಿನಗೆ ಒತ್ತಾಸೆಯಾಗಿರುವರು. ಚಂದ್ರನನ್ನು ಕಾಂತಿ ಬಿಟ್ಟೀತು; ಹಿಮವಂತನನ್ನು ಹಿಮ ತೊರೆದೀತು; ಸಮುದ್ರವು ತೀರವನ್ನು ಮೀರೀತು. ಆದರೆ ನಾನು ಮಾತ್ರ ಅಪ್ಪನ ಅಪ್ಪಣೆಯನ್ನು ಮೀರೆ" ಎಂದು ಖಂಡಿತವಾಗಿ ನುಡಿದ.


ರಾಮನ ಮಾತು ಮುಗಿಯುತ್ತಲೇ ಭರತ ಕೇಳಿಕೊಂಡ: "ಆರ್ಯನೇ, ಸ್ವರ್ಣ-ಭೂಷಿತವಾದ ಈ ಪಾದುಕೆಗಳನ್ನು (ಪಾದುಕೇ ಹೇಮ-ಭೂಷಿತೇ) ಏರು. ಇವೇ ಸರ್ವ-ಲೋಕದ ಯೋಗ-ಕ್ಷೇಮಗಳನ್ನು ಉಂಟುಮಾಡುವುವು" ಎಂದು, ಪಾದುಕೆಗಳನ್ನಿತ್ತ. ರಾಮನೂ ಅವನ್ನು ಮೆಟ್ಟಿ, ಭರತನಿಗಿತ್ತ. ಭರತನು ಅವಕ್ಕೆ ವಂದಿಸಿ, ರಾಮನಿಗೊಂದು ಎಚ್ಚರಿಕೆಯನ್ನೂ ನೀಡಿದ. "ಹದಿನಾಲ್ಕು ವರ್ಷಗಳ ಕಾಲ ನಾನು ಜಟಾ-ಧಾರಿಯಾಗಿ ಫಲಾಹಾರಿಯಾಗಿ ಊರಾಚೆಯಿದ್ದುಗೊಂಡೇ, ಈ ಪಾದುಕೆಗಳ ಬಲದ ಮೇಲೇ, ರಾಜ್ಯವಾಳತಕ್ಕವನು. ಆ ಕಾಲವು ಪೂರೈಸುವಲ್ಲಿ ನಿನ್ನನ್ನು ಕಾಣಲಿಲ್ಲವೋ ನಾನು ಅಗ್ನಿ-ಪ್ರವೇಶ ಮಾಡತಕ್ಕವನೇ" ಎಂದ. ಆನೆಯ ಮೇಲೆ ಪಾದುಕೆಗಳ ಸವಾರಿಯೊಂದಿಗೆ, ಭರತನು ಕಾಲ್ನಡಿಗೆಯಲ್ಲಿ ತನ್ನ ಪರಿವಾರ-ಸಮೇತನಾಗಿ ಹಿಂದಿರುಗಿದ.

ಇಲ್ಲಿಯ ಪ್ರಶ್ನೆ ಸ್ವರ್ಣಾಲಂಕೃತ-ಪಾದುಕೆಗಳು ಎಲ್ಲಿಯವು? ರಾಮನೊಡನೆ ಮೊದಲೇ ಇದ್ದವೇ? ಏಕೆಂದರೆ ಭರತನು ತನ್ನೊಟ್ಟಿಗೆ ತಂದಿದ್ದನೆಂದು ವಾಲ್ಮೀಕಿಗಳು ಹೇಳಿಲ್ಲ. ಹಾಗಾದರೆ ರಾಮನು ಎಲ್ಲ ವೈಭವವನ್ನೂ ಬಿಟ್ಟು ಬಂದದ್ದು ನಿಜವಲ್ಲವೇ? ಕೆಲವರಂತೂ ರಾಮನಿಗೆ ತನ್ನ ಮಾವನಾದ ಜನಕನಿತ್ತ ಪಾದುಕೆಗಳಿವಿರಬೇಕು - ಎಂದು ಊಹಿಸಿದ್ದಾರೆ. ಆದರೆ ವಲ್ಕಲ-ಧಾರಿಯಾಗಿ ಬಂದ ರಾಮ ಸ್ವರ್ಣ-ಪಾದುಕೆಗಳನ್ನು ಮಾತ್ರ ತಂದಾನೇ?

ಹೀಗೆ ಬಗೆಬಗೆಯ ವ್ಯಾಖ್ಯಾನಗಳಿದ್ದರೂ, ಶ್ರೀರಂಗಮಹಾಗುರುಗಳು ಈ ಬಗ್ಗೆ ವಿವರಿಸಿರುವುದಿಂತು.

 ಶ್ರೀರಾಮನನ್ನು ವೈಭವದೊಡನೆ ಅಯೋಧ್ಯೆಗೆ ಕರೆದುಕೊಂಡು ಹೋಗಲೆಂದೇ ಭರತನೇ ಆ ಪಾದುಕೆಗಳನ್ನು ತಾನು ಬರುವಾಗ ತಂದಿದ್ದು. ಆದರೆ ಯಾವಾಗ ರಾಮನು ಸುತರಾಂ ಒಪ್ಪಲಿಲ್ಲವೋ ಆಗಲೇ ಆ ಪಾದುಕೆಗಳ ಬಲದ ಮೇಲೇ ರಾಜ್ಯವಾಳಲು ಸಂಕಲ್ಪಿಸಿದ್ದು.


ಈ ಪ್ರಸಂಗದಲ್ಲಿ ಭರತನ ಭಕ್ತ್ಯತಿಶಯವನ್ನು ಕಾಣಬಹುದು. ರಾಮನ ಬಲ-ಸಂಕಲ್ಪಗಳು ಆತನು ಪಾದುಕೆಯಿಂದಲೂ ದೊರೆಯಬಲ್ಲವು ಎಂಬ ಆತನ ದೃಢ-ವಿಶ್ವಾಸವನ್ನೂ ಗಮನಿಸಬಹುದು.

ರಾಮನು ಬಹುತೇಕ ಮನುಷ್ಯನಂತೆಯೇ ವರ್ತಿಸುವುದಾದರೂ, ಆತನ ಲೋಕ-ವ್ಯವಹಾರದ ದೃಷ್ಟಿಯಲ್ಲಿ ಧರ್ಮ-ಮೂರ್ತಿಯಾಗಿಯೂ, ಪಾರಮಾರ್ಥಿಕವಾಗಿ ಲೋಕ-ಪಾಲಕನಾದ ವಿಷ್ಣುವಿನ ಶಕ್ತಿಯನ್ನು ತಾನು ಪಾದುಕೆಗಳ ಮೂಲಕವೂ ಹರಿಸಬಲ್ಲ ಅಲೌಕಿಕನಾಗಿಯೂ ತೋರುವನಲ್ಲವೇ?


ಸೂಚನೆ: 17/08/2024 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.

Tuesday, September 3, 2024

ಯಕ್ಷ ಪ್ರಶ್ನೆ 105 (Yaksha prashne 105)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

ಪ್ರಶ್ನೆ –  104 ದಂಭವೆಂದರೆ ಯಾವುದು  ?

ಉತ್ತರ - ತೋರಿಕೆಯ ಧರ್ಮಾಚರಣೆ 

ದಂಭವೆಂಬುದು ತೋರಿಕೆಯ ಧರ್ಮಾಚರಣೆಯಾಗಿದೆ ಎಂಬುದು ಈ ಯಕ್ಷಪ್ರಶ್ನೋತ್ತರದ ಆಶಯವಾಗಿದೆ. ದಂಭ ಎಂಬ ಗುಣದ ಸ್ವಭಾವವನ್ನು ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಈ ರೀತಿ ವರ್ಣಿಸಿದ್ದಾನೆ. ಯಾರು ತಮ್ಮನ್ನು ತಾವು ಸಕಲಗುಣಸಂಪನ್ನ, ಸಕಲಕಲ್ಯಾಣಗುಣಗಣಿ, ಸಕಲವಿದ್ಯಾಪ್ರವೀಣ ಎಂದೆಲ್ಲಾ ತಿಳಿದುಕೊಳ್ಳುತ್ತಾರೋ; ಸಮಾಜದಲ್ಲಿ ಮಾನ್ಯರಾದ ವ್ಯಕ್ತಿಗಳು ಯಾರನ್ನು ಗುರುತಿಸುವುದಿಲ್ಲವೋ ಅಥವಾ ಗೌರವಿಸುವುದಿಲ್ಲವೂ; ವಿನಯವೆಂಬ ಗುಣವೇ ಯಾರಲ್ಲಿ ಇಲ್ಲವೋ; ಧನಮದ ಮತ್ತು ಮಾನದ ಮದ ಉಳ್ಳವರು ಯಾರೋ; ಯಜ್ಞ- ಯಾಗ, ದೇವತಾ, ಪೂಜೆ ಅತಿಥಿಸತ್ಕಾರ ಮೊದಲಾದ ಪುಣ್ಯಕಾರ್ಯವನ್ನು ಧರ್ಮದ ಹೆಸರಿನಲ್ಲಿ ಯಾರು ಆಚರಣೆ ಮಾಡುತ್ತಾರೋ ಅಂತಹವರು ದಂಭದಿಂದ ಕೂಡಿದವರು, ದಾಂಭಿಕರು, ಮೌಢ್ಯರು ಎಂದೆಲ್ಲಾ ಕರೆಯುತ್ತೇವೆ. 

ಧರ್ಮ ಎಂಬುದರ ವಿರುದ್ಧಪದ ಅಧರ್ಮ. ಧರ್ಮವೆಂದರೆ ಕರ್ತವ್ಯಬುದ್ಧಿಯಿಂದ ಮಾತ್ರ ಕರ್ಮವನ್ನು ಮಾಡುವುದು, ಯಾವ ಫಲಾಪೇಕ್ಷೆಯೂ ಇಲ್ಲದಿರುವುದು. ನಾನು ನನ್ನದೆಂಬ ಯಾವುದೇ ಬಗೆಯ ಅಹಂಕಾರ ಮತ್ತು ಮಮಕಾರಗಳಿಗೆ ಅವಕಾಶವೇ ಇಲ್ಲದಿರುವುದು.  ಇಲ್ಲದ ಗುಣವನ್ನು ತನ್ನಲ್ಲಿ ಆರೋಪ ಮಾಡಿಕೊಳ್ಳುವ ಮತ್ತು ಇರುವ ದೋಷವನ್ನು ಮುಚ್ಚಿಕೊಳ್ಳುವ ಸ್ವಭಾವವೂ ಧರ್ಮವಂತರಿಗೆ ಇರದು. ಇಂತಹ ಕಾರಣಗಳಿಂದಲೇ ಸಮಾಜದ ಮತ್ತು ಸಜ್ಜನವ್ಯಕ್ತಿಗಳ ಮನ್ನಣೆಗೆ ಇಂತಹ ವ್ಯಕ್ತಿ ಪಾತ್ರನಾಗುತ್ತಾನೆ. ಆದರೆ ಇಲ್ಲಿ ಹೇಳಿದ ದಂಭ ಎಂಬ ಗುಣದಿಂದ ಕೂಡಿದ ವ್ಯಕ್ತಿಯು ಇದಕ್ಕೆ ವಿರುದ್ಧವಾದ ಗುಣ ಸ್ವಭಾವದವನೇ ಆಗಿರುತ್ತಾನೆ. ಇವನ ಆಚರಣೆಯಲ್ಲಿ ಮೋಸವಿದೆ, ಆಡಂಬರವಿದೆ, ಮೌಢ್ಯವಿದೆ, ಅಜ್ಞಾನವಿದೆ, ಅವಿವೇಕವಿದೆ. ಇವುಗಳ ಕಾರಣವಾಗಿ ಹತ್ತು ಹಲವು ದುಷ್ಟಗುಣಗಳು ಅವನಲ್ಲಿ ಮನೆಮಾಡಿಕೊಂಡಿರುತ್ತವೆ. ಇಂತಹ ದಂಭ ಉಳ್ಳ ವ್ಯಕ್ತಿಯು, ತಾನೇ ಅದ್ವಿತೀಯನಾದ ಶ್ರೀಮಂತ; ತನ್ನ ಧನದಿಂದಲೇ ಅನೇಕ ಜನರ ಜೀವನ ನಡೆಯುತ್ತಿದೆ ಎಂಬ ದುರಭಿಮಾನದಿಂದ ಬೀಗುತ್ತಿರುತ್ತಾನೆ. ತನ್ನನ್ನು ಎಲ್ಲರೂ ಗೌರವಿಸುತ್ತಾರೆ; ನಾನು ಹೇಳಿದಂತೇ ಎಲ್ಲರೂ ಕೇಳುತ್ತಾರೆ; ನನಗೆ ಸದೃಶರಾದವರೂ ಯಾರೂ ಇಲ್ಲ; ನನಗೆ ಸದೃಶರಾದ ವಿದ್ಯಾವಂತ, ಬುದ್ಧಿವಂತ, ದಾನಶೀಲ, ಪರಾಕ್ರಮಿ ಇಂತಹ ಅಸದೃಶವಾದ ಗುಣ ಉಳ್ಳವರು ಯಾರೂ ಇಲ್ಲ ಎಂಬ ಭಾವ ಅವನಲ್ಲಿ ಬರುತ್ತದೆ. ನಮ್ಮ ಮನೆಯಲ್ಲಿ ಊರಲ್ಲಿ ಸಮಾಜದಲ್ಲಿ ಎಲ್ಲೆಲ್ಲೂ ನನ್ನಿಂದಲೇ ಯಾಗಾದಿಗಳು ನಡೆಯುತ್ತವೆ, ನಾನಿಲ್ಲದಿದ್ದರೆ ಇಂತಹ ಕಾರ್ಯವಾಗಲು ಸಾಧ್ಯವಿಲ್ಲ ಎಂದೆಲ್ಲಾ ಅಂದುಕೊಳ್ಳುವುದು. ನನ್ನ ಕಾರಣದಿಂದಲೇ ಜನರು ಸುಖವನ್ನು ಅನುಭವಿಸುತ್ತಿದ್ದಾರೆ. ಪ್ರತಿಯೊಬ್ಬರ ಸುಖಕ್ಕೆ ಕಾರಣ ನಾನೇ ಎಂದೆಲ್ಲಾ ಅಂದುಕೊಳ್ಳುತ್ತಾನೆ. ಇಂತಹ ಇಲ್ಲಸಲ್ಲದ ಅನಿಸಿಕೆಗಳಿಂದ ಕೂಡಿದ ವ್ಯಕ್ತಿಯ ಆಚರಣೆಗಳು ನೋಡುವುದಕ್ಕೆ ಸತ್ಕಾರ್ಯವೆಂದೆನಿಸಿದರೂ ಅಲ್ಲಿ ಸ್ವಾರ್ಥವಿದೆ. ಅಹಂಕಾರವಿದೆ. ಆತ ಯಾವ ಕಾರ್ಯವನ್ನೂ ಆಳವರಿತು ಮರ್ಮವರಿತು ಆಚರಿಸುವುದಿಲ್ಲ. ಧರ್ಮಕಾರ್ಯದ ಹೆಸರಿನಲ್ಲಿ ನಡೆಯುತ್ತಿರುವ ದಾಂಭಿಕತೆ ಅಷ್ಟೆ. ಧರ್ಮಕಾರ್ಯಕ್ಕಿರುವ ಶಕ್ತಿಯಾಗಲಿ ವೀರ್ಯವಾಗಲಿ ಈ ಕಾರ್ಯಗಳಿಗೆ ಇರುವುದಿಲ್ಲ. ವಸ್ತುತಃ ಇಂತಹ ಆಚರಣೆಗಳೇ ಮೂಢನಂಬಿಕೆ. ಮೌಢ್ಯ ಅಥವಾ ಅವೈಜ್ಞಾನಿಕ ವಿಷಯಗಳು  ಹೊರತು, ಧಾರ್ಮಿಕವಾದ ಆಚರಣೆಯಲ್ಲ. ಧರ್ಮಾಚರಣೆಯಲ್ಲಿ ಕಾರ್ಯಕಾರಣಭಾವ ಸಂಬಂಧವಿದೆ. ಪ್ರತಿಕರ್ಮಗಳಿಗೆ ಸಫಲತೆ ಇದೆ. ಇದಕ್ಕೆ ಹೊರತಾದದ್ದೇ ದಂಭ. 

ಸೂಚನೆ : 1/9/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ 102 ಮುಂದುವರೆದ ಅರ್ಜುನನ ತೀರ್ಥಾಟನ (Vyasa Vikshita 102 Munduvareda Arjunana Tirthatana)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)





ಅರ್ಜುನನ ಕೋರಿಕೆಗೆ ಉತ್ತರವಾಗಿ ಚಿತ್ರವಾಹನನು ಹೇಳಿದನು: "ನನ್ನ ವಂಶದಲ್ಲಿ ಹಿಂದೆ ಪ್ರಭಂಜನನೆಂಬ ರಾಜನೊಬ್ಬನಿದ್ದ. ಆತನಿಗೆ ಮಕ್ಕಳಿರಲಿಲ್ಲ ಅದಕ್ಕಾಗಿ ಆತನು ಉತ್ತಮವಾದ ತಪಸ್ಸನ್ನು ಮಾಡಿದ. ಪಿನಾಕ-ಧಾರಿಯೂ ಉಮಾ-ಪತಿಯೂ ಆದ ಈಶ್ವರನು ಆತನ ಉಗ್ರ-ತಪಸ್ಸಿಗೆ ಮೆಚ್ಚಿ, ಸಂತುಷ್ಟನಾಗಿ, "ನಿನ್ನ ವಂಶದಲ್ಲಿ ಒಬ್ಬೊಬ್ಬರಿಗೂ ಒಂದೊಂದು ಮಗುವಾಗುವುದು" - ಎಂಬ ವರವನ್ನಿತ್ತನು.


ಅಂದಿನಿಂದ ನನ್ನ ಕುಲದಲ್ಲಿ ಒಂದೊಂದೇ ಸಂತಾನವಾಗುತ್ತಿದೆ. ನನ್ನ ಪೂರ್ವಜರೆಲ್ಲರಿಗೂ ಗಂಡುಮಕ್ಕಳಾಗುತ್ತಿದ್ದರು. ಆದರೆ ನನಗೆ ಕನ್ಯೆಯೊಬ್ಬಳು ಹುಟ್ಟಿದ್ದಾಳೆ. ನನ್ನ ವಂಶವನ್ನು ಬೆಳೆಸತಕ್ಕವಳು ಇವಳೇ. ಆದ್ದರಿಂದ ಇವಳು ನನ್ನ ಪಾಲಿನ ಮಗನೆಂದೇ ನನಗೆ ಇವಳ ಬಗ್ಗೆ ಭಾವನೆ ಬಂದಿದೆ.


ಅವಳಿಗೆ ಜನಿಸುವ ಪುತ್ರನು ನನ್ನ ಪುತ್ರನಂತೆಯೇ - ಎಂಬ ಲೆಕ್ಕ ನನ್ನದು. ಆತನೇ ನನಗೆ ಕುಲ-ಪ್ರವರ್ತಕನಾಗತಕ್ಕವನು. ಇವಳನ್ನು ನೀನು ವಿವಾಹವಾಗಬೇಕಾದರೆ ಇದೇ ಶುಲ್ಕ. ಅದಕ್ಕೆ ನೀನು ಒಪ್ಪಬೇಕಾಗುತ್ತದೆ. ಈ ಒಪ್ಪಂದದ ಮೇಲೆ ನೀನಿವಳನ್ನು ವಿವಾಹವಾಗಬಹುದು - ಎಂದನು.


ಅರ್ಜುನನು ಹಾಗೆಯೇ ಆಗಲಿ - ಎಂದನು. ಆ ಕನ್ಯೆಯನ್ನು ಸ್ವೀಕರಿಸಿದನು. ಮೂರು ವರ್ಷಗಳ ಕಾಲ ಅದೇ ನಗರದಲ್ಲಿ ವಾಸಮಾಡಿದನು. ಅವಳಿಗೊಂದು ಗಂಡುಮಗುವಾಯಿತು. ಆನಂತರ ಅವಳನ್ನು ಆಲಿಂಗಿಸಿಕೊಂಡು ರಾಜನಿಂದ ಬೀಳ್ಕೊಡಲ್ಪಟ್ಟವನಾಗಿ, ಅರ್ಜುನನು ಮತ್ತೆ ತೀರ್ಥ-ಕ್ಷೇತ್ರಗಳಲ್ಲಿ ಭ್ರಮಣಕ್ಕಾಗಿ ಹೊರಟನು.


ಆ ಬಳಿಕ ಅರ್ಜುನನು ದಕ್ಷಿಣ-ಸಮುದ್ರದ ದಡದಲ್ಲಿಯ ಪುಣ್ಯ-ತೀರ್ಥಗಳಿಗೆ ಹೋದನು. ತಪಸ್ವಿಗಳಿಂದ ಅವು ಸುಶೋಭಿತವಾಗಿದ್ದವು. ಅಲ್ಲಿಯ ತಪಸ್ವಿಗಳು ಐದು ತೀರ್ಥಗಳನ್ನು ವರ್ಜಿಸುತ್ತಿದ್ದರು. ಹಿಂದೆ ತಾಪಸರಿಂದ ಕಿಕ್ಕಿರಿದಿದ್ದ ಎಡೆಗಳಾಗಿದ್ದವು, ಅವುಗಳು. ಅವುಗಳಿವು: ಅಗಸ್ತ್ಯ-ತೀರ್ಥ, ಸೌಭದ್ರ-ತೀರ್ಥ, ಪೌಲೋಮ-ತೀರ್ಥ, ಅಶ್ವಮೇಧದ ಫಲವನ್ನು ಕೊಡುವ ಕಾರಂಧಮ-ತೀರ್ಥ, ಹಾಗೂ ಪಾಪ-ಪ್ರಶಮನವುಂಟುಮಾಡುವ ಭಾರದ್ವಾಜ-ತೀರ್ಥ. 


ಹೀಗೆ ಈ ಐದು ತೀರ್ಥಗಳನ್ನು ಅರ್ಜುನನು ಕಂಡನು. ಆದರೆ ಈ ಐದೂ ದೂರದಲ್ಲಿ ಬೇರೆಯಾಗಿದ್ದವು. ಧರ್ಮಬುದ್ಧಿಯುಳ್ಳ ಮುನಿಗಳು ಇವನ್ನು ವರ್ಜಿಸುತ್ತಿದ್ದರು.


ಆ ಕಾರಣಕ್ಕಾಗಿ ಅರ್ಜುನನು ಅವರನ್ನು ಕೇಳಿದನು - ಈ ಐದು ತೀರ್ಥಗಳನ್ನು ನೀವುಗಳು ತೊರೆದಿರುವಿರೇಕೆ? - ಎಂದು. ಅದಕ್ಕವರು ಹೇಳಿದರು: ಇವುಗಳಲ್ಲಿ ಐದು ಮೊಸಳೆಗಳಿವೆ. ಸ್ನಾನಕ್ಕಾಗಿ ಹೋದವರನ್ನು ಅವು ಸೆಳೆದುಕೊಂಡುಬಿಡುತ್ತವೆ.


ಆಮೇಲೆ ಅವರೆ ಬೇಡವೆನ್ನುತ್ತಿದ್ದರೂ ಅರ್ಜುನನು ಅವನ್ನು ನೋಡಲು ಹೋದನು. ಸೌಭದ್ರ-ತೀರ್ಥದಲ್ಲಿಳಿದು ಸ್ನಾನಮಾಡಿದನು. ಆ ಸಮಯಕ್ಕೇ ಒಂದು ಮಹಾ-ಗ್ರಾಹವು, ಎಂದರೆ ದೊಡ್ಡ ಮೊಸಳೆಯು, ಅರ್ಜುನನ ಕಾಲನ್ನು ಹಿಡಿದುಕೊಂಡಿತು. ಮೇಲೆರಗಿ ಚಡಪಡಿಸುತ್ತಿದ್ದ ಆ ನಕ್ರವನ್ನು ಹಿಡಿದುಕೊಂಡೇ ಆ ಮಹಾಬಾಹುವಾದ ಅರ್ಜುನನು ನೀರಿನಾಚೆ ಬಂದನು.


ಅರ್ಜುನನಿಂದ ಹೀಗೆ ಹೊರಸೆಳೆಯಲ್ಪಟ್ಟ ಆ ಮೊಸಳೆಯು ಒಡನೆಯೇ ಸರ್ವಾಭರಣ-ಭೂಷಿತೆಯಾದ ನಾರಿಯಾಗಿ ಮಾರ್ಪಟ್ಟಿತು. ಆಕೆಯಾದರೂ ಕಾಂತಿಯಿಂದ ಬೆಳಗುತ್ತಿದ್ದಳು. ದಿವ್ಯವಾದ ರೂಪವನ್ನು ಹೊಂದಿದ್ದ ಅವಳು ಚಿತ್ತಾಕರ್ಷಕಳಾಗಿದ್ದಳು.


ಆ ಮಹಾದ್ಭುತವನ್ನು ಕಂಡ ಅರ್ಜುನನು, "ಕಲ್ಯಾಣಿ, ನೀನಾರು? ಜಲಚರಳಾಗಿರುವೆಯೇಕೆ? ಇದೆಂತಹ ಪಾಪಕಾರ್ಯದಿಂದಾಗಿ ನೀ ಹೀಗಾದೆ?" – ಎಂಬುದಾಗಿ ಕೇಳಿದನು.


ಸೂಚನೆ : 1/9/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Sunday, September 1, 2024

ಕೃಷ್ಣಕರ್ಣಾಮೃತ - 29 ಅಚ್ಯುತನಿಗೆ ಅಂಗನೆಯರ ಅಪೂರ್ವ ಅಭ್ಯರ್ಚನೆ (Krishnakarnamrta -29 Acyutanige Aṅganeyara Apurva Abhyarcane)


ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ವಿಭುವಾದ ಶ್ರೀಕೃಷ್ಣನನ್ನು ನಾವು ಆಶ್ರಯಿಸುತೇವೆ – ಎನ್ನುತ್ತಾನೆ, ಕವಿ ಲೀಲಾಶುಕ, ತನ್ನ ಪದ್ಯವೊಂದರಲ್ಲಿ.

ಕೃಷ್ಣನೇಕೆ ವಿಭು? ಏನು ವಿಭುವೆಂದರೆ? – ಎಂಬುದನ್ನೊಮ್ಮೆ ನೋಡಬೇಕಲ್ಲವೇ? ಯಾವನು ವಿವಿಧವಾಗಿ ಭವಿಸುತ್ತಾನೋ ಆತನೇ ವಿ-ಭು: ಭಕ್ತರಿಗೆ ಅನುಗ್ರಹ ಮಾಡಲೆಂದು ನಾನಾ-ರೂಪಗಳನ್ನು ತಳೆದು ಬರುವ ಆತನು ವಿಭುವೇ ಸರಿ.

ಆತನನ್ನು ಅಂಗನೆಯರು ಅನುಕ್ಷಣವೂ ಅರ್ಚಿಸುತ್ತಾರೆ. ಅನುಕ್ಷಣವೆಂದರೆ ಕ್ಷಣ-ಕ್ಷಣಕ್ಕೂ, ಅನವರತವಾಗಿ, ನಿರಂತರವಾಗಿ. ಹಾಗೆ ಆತನನ್ನು ಅಭ್ಯರ್ಚಿಸುವ ಅಂಗನೆಯರು ಯಾರು? ಮತ್ತಾರು, ವಲ್ಲವ-ಸುಂದರಿಯರು - ಎಂದರೆ ಗೋಪ-ನಾರಿಯರು.

ಅವರು ಅರ್ಚಿಸುವ ವಿಭುವನ್ನು ನಾವು ಆಶ್ರಯಿಸುತ್ತೇವೆ - ಎಂದರೇನು? ಅವರು ಅರ್ಚಿಸುವುದರಲ್ಲಿ ಹಾಗಾದರೆ ವಿಶೇಷವೇನಾದರೂ ಉಂಟೋ?

ಉಂಟು. ಅವರ ಪೂಜೆಯ ಬಗೆಯೇ ವಿಶಿಷ್ಟವಾದುದು. ಏಕೆ? ಎಲ್ಲರೂ ಅರ್ಚಿಸುವ ಬಗೆಯಲ್ಲ, ಅದು. ಎಲ್ಲರೂ ಪೂಜಿಸುವುದು ಸಾಮಾನ್ಯವಾಗಿ ಹೂಗಳಿಂದ, ಅರ್ಚಿಸುವುದು ನಾಮಗಳಿಂದ, ಸ್ತುತಿಸುವುದು ಸ್ತೋತ್ರಗಳಿಂದ - ಅಲ್ಲವೇ? ಹೌದು, ಆದರೆ ಗೋಪಿಕೆಯರ ಪರಿ ಬೇರೆಯೇ.

ತಮ್ಮ ಅಪಾಂಗ-ರೇಖೆಗಳಿಂದಲೇ ಆತನನ್ನು ಅರ್ಚಿಸುತ್ತಾರೆ, ಅವರು. ಅಪಾಂಗವೆಂದರೆ ನೇತ್ರಾಂತ, ಕಣ್ಣಂಚು. ಅದರ ರೇಖೆಗಳಿಂದ ಆತನನ್ನವರು ಅರ್ಚಿಸುವರು. ರೇಖೆಯೆಂದರೆ ಲೇಖೆಯೇ. ಲೇಖೆಯೆಂದರೆ ಬರಹ. ಬರಹದಿಂದ ಪೂಜೆ - ಎಂಬುದು ವಿಭಿನ್ನವಾದ ಬಗೆಯೇ ಸರಿ. ಆದರೆ ಅದರಲ್ಲೇನು ವಿಶೇಷ? ಒಂದಲ್ಲ, ಎರಡು ವಿಶೇಷಗಳಿವೆ.

ಮೊದಲನೆಯದು, ಅವು ಅಭಂಗುರಗಳೆಂಬುದು. ಯಾವುದಕ್ಕೆ ಭಂಗ ಬರುವುದೋ ಅದು ಭಂಗುರ. ಭಂಗವೆಂದರೆ ಭಗ್ನವಾಗುವಿಕೆ, ವಿಚ್ಛೇದ ಬರುವಿಕೆ. ಅಭಂಗುರವೆಂದರೆ ಅವಿಚ್ಛಿನ್ನವಾದದ್ದು. ಕೃಷ್ಣನನ್ನು ನೋಡುತ್ತಿದ್ದರೆ, ತಮ್ಮ ಕಣ್ಣನ್ನು ಅವನಿಂದ ಕೀಳಲೇ ಆಗದು, ಅವರಿಗೆ!

ತೃಪ್ತಿಯೆಂಬುದು ಉಂಟಾದರಲ್ಲವೇ, "ಆಹಾ, ಸಾಕಷ್ಟು ನೋಡಿದ್ದಾಯಿತು" - ಎನ್ನುವ ಮಾತು; "ಬೇರೆ ಕೆಲಸಗಳನ್ನೂ ನೋಡಬೇಕಲ್ಲಾ" - ಎನ್ನುವ ಮಾತು. ಎಷ್ಟು ನೋಡಿ(ದ)ದ್ದರೂ ತೃಪ್ತಿಯಾಗದೆಂದಾದಲ್ಲಿ ಕಣ್ಣೋಟಕ್ಕೆ ಕೊನೆಯೆಲ್ಲಿ? ಹೀಗೆ ಭಂಗುರವಲ್ಲದ ಕಡೆಗಣ್ಣೋಟಗಳು, ಆ ಗೋಪಾಂಗನೆಯರವು.

ಇದೊಂದು ವಿಶೇಷವಾದರೆ, ಮತ್ತೊಂದು ವಿಶೇಷವು ಮತ್ತೂ ಸ್ವಾರಸ್ಯಕರವಾದದ್ದು. ಈ ಅಪಾಂಗ-ರೇಖೆಗಳು ರಸ-ರಂಜಿತವಾದದ್ದಂತೆ! ಎಂದರೆ ರಸದಿಂದ ರಂಜಿತವಾದವು, ಅವು. ಕಣ್ಗಳಿಂದ ಮಾಡುವ ಅವಲೋಕನಕ್ಕೂ ರಸವೆಂಬುದುಂಟೆ? - ಎಂಬ ಪ್ರಶ್ನೆಯಲ್ಲವೆ?

ಅದಕ್ಕೂ ಉತ್ತರವುಂಟು. ಅನಂಗ-ರೇಖೆಯ ರಸವೆಂಬ ರಸವದು: ಅನಂಗನೆಂದರೆ ಮನ್ಮಥ: ಅನಂಗ-ರೇಖೆಯೆಂದರೆ ಮತ್ತೇನೂ ಅಲ್ಲ, ಮನ್ಮಥ-ಲೇಖ (ಲವ್-ಲೆಟರ್), ಅರ್ಥಾತ್ ಪ್ರೇಮ-ಪತ್ರ. ಪ್ರಣಯವನ್ನು ತೋಡಿಕೊಳ್ಳುವ ಪತ್ರದಲ್ಲಿ ಪ್ರೀತಿಯ ಪ್ರವಾಹವೇ ಇರುವುದಲ್ಲವೇ? ಆ ಪ್ರೇಮ-ರಸದಿಂದ ರಂಜಿತವಾದ ಪತ್ರಗಳಂತಿವೆ, ಇವು.

ನಮ್ಮ ಪೂರ್ವಿಕರು ಪ್ರೇಮ-ಪ್ರಣಯಗಳನ್ನೂ ವಿಶ್ಲೇಷಿಸಿದ್ದಾರೆ! ಧರ್ಮಶಾಸ್ತ್ರ-ಅರ್ಥಶಾಸ್ತ್ರಗಳಂತೆ ಕಾಮಶಾಸ್ತ್ರವನ್ನೂ ಬೆಳೆಸಿದವರಲ್ಲವೇ ನಮ್ಮವರು? ಅವರಂತೆ, ಈ ಕಾಮ-ಲೇಖವೆಂಬುದು ಎರಡು ಬಗೆ – ಸಾಕ್ಷರ ಹಾಗೂ ನಿರಕ್ಷರ - ಎಂಬುದಾಗಿ. ಸ್ವ-ಹಸ್ತದಿಂದ ಲಿಪಿಮಯವಾಗಿ ಹಾಗೂ ಗಾಥಾಮಯವಾಗಿ, ಎಂದರೆ ಪದ್ಯ-ಭಾವದಿಂದ ಕೂಡಿರುವುದಾಗಿ ಬರೆದದ್ದು ಸಾಕ್ಷರ. ವರ್ಣ-ವಿನ್ಯಾಸವಿಲ್ಲದ್ದು ನಿರಕ್ಷರ. ಅದರ ಬಗೆಗಳು ಹಲವು. ಕಮಲ-ನಾಳದಿಂದಾದ ರಾಗದಿಂದ ಅಂಕಿತವಾದದ್ದು (ರಾಗವೆಂದರೆ ಬಣ್ಣ); ಅಥವಾ ಕಸ್ತೂರಿಯನ್ನೇ ಮಸಿಯನ್ನಾಗಿ ಬಳಸಿಕೊಂಡಿರುವಂತಹುದು; ಅಥವಾ ಪುಷ್ಪದಳಗಳಿಂದ ಬಿಡಿಸಿರುವಂತಹುದು; ಅಥವಾ ಎದೆಯ ಕುಂಕುಮದಿಂದ ಅಂಕಿತವಾದದ್ದು; ಮತ್ತು ಉಗುರಿನ ಗುರುತಿನಿಂದಾದದ್ದು. ಓ! ಇವುಗಳೆಲ್ಲ "ರಸ"-ರಂಜಿತಗಳೇ ಸರಿ! ಗೋಪಿಕೆಯರ ಈ ಕಟಾಕ್ಷ-ವೀಕ್ಷಿತಗಳೂ ಸ-ರಸವೇ ಸರಿ!

ಶ್ರೀಕೃಷ್ಣನ ದಿವ್ಯಾದ್ಭುತ-ಲೀಲೆಗಳ ವಾಸ್ತವ ಸವಿಯನ್ನು ಕಂಡುಂಡ ಯಾವ ಜೀವಿ ತಾನೆ ಆತನಿಗೆ ಮನಸ್ಸಿನಲ್ಲೇ ಪ್ರೇಮ-ಪತ್ರಗಳನ್ನು ಬರೆದುಕೊಂಡಿಲ್ಲ? ಅಂದಿನ ರುಕ್ಮಿಣಿ ಹೆಚ್ಚೇ? ಈಚಿನ ಮೀರಾ ಕಮ್ಮಿಯೇ?

ಹೀಗೆ ಪ್ರಣಯ-ಪತ್ರಗಳಲ್ಲಿಯ ಯಾವ ಪ್ರೇಮ-ರಸವುಂಟೋ ಅದರಿಂದಲೇ ಭಾವಿಸಲ್ಪಟ್ಟ ಕಣ್ಣೋಟಗಳಿವು.

ದೂರದಲ್ಲಿ ಕಂಡಾಗಲಿಂದಲೇ ಆತನಲ್ಲೇ ನೆಟ್ಟ ಕಣ್ಗಳು; ಕಣ್ಣು ಮಿಟುಕಿಸುವಲ್ಲಿ ಎಲ್ಲಿ ಮರೆಯಾಗಿಬಿಡುವನೋ ಮಾಯವಾಗಿಬಿಡುವನೋ ಎಂಬ ಭೀತಿಯಿಂದಲೋ ಎಂಬಂತೆ, ನೆಟ್ಟೇ ಇರುವ ನೋಟ, ಎವೆಯಿಕ್ಕದ ಈಕ್ಷಿತ: ತೈಲ-ಧಾರೆಯಂತಿರುವ ಕಟಾಕ್ಷ-ಧಾರೆ ಅವರದು. ಮನಸ್ಸು ತೈಲ-ಧಾರೆಯಂತಾದಾಗಲೇ ಧ್ಯಾನ - ಅಲ್ಲವೇ? ಹಾಗೆಯೇ ಇಲ್ಲೂ. ಹೀಗೆ ಪರವಸ್ತುವಿನಲ್ಲಿ ಮನಸ್ಸು ಕೊಟ್ಟುಕೊಂಡ ಧನ್ಯ-ಗೋಪಿಯರಿಂದ ಅಭ್ಯರ್ಚಿತನಾದ ವಿಭುವೀತನು!

ಆತನನ್ನಲ್ಲದೆ ಮತ್ತೊಬ್ಬನನ್ನಾಶ್ರಯಿಸುವುದೇ?

ಅಪಾಂಗ-ರೇಖಾಭಿರಭಂಗುರಾಭಿಃ

ಅನಂಗ-ರೇಖಾ-ರಸ-ರಂಜಿತಾಭಿಃ |
ಅನುಕ್ಷಣಂ ವಲ್ಲವ-ಸುಂದರೀಭಿಃ

ಅಭ್ಯರ್ಚ್ಯಮಾನಂ ವಿಭುಮಾಶ್ರಯಾಮಃ ||

 

ಪ್ರಕೃತ-ಶ್ಲೋಕದ ನಾಲ್ಕೂ ಪಾದಗಳೂ 'ಅ'ಕಾರದಿಂದಲೇ ಆರಂಭಗೊಂಡಿವೆ. ಮೊದಲ ಮೂರು ಪಾದಗಳು 'ಭಿಃ' ಎಂದೇ ಕೊನೆಗೊಳ್ಳುತ್ತವೆ.ಅಪಾಂಗ/ಅನಂಗ/ಅಭಂಗುರ – ಇತ್ಯಾದಿಗಳಲ್ಲಿಯ ಅಪ್ರಯತ್ನವಾದ ಅನುಪ್ರಾಸವೂ  ಅವಧೇಯವೇ ಸರಿ. 

 

*****

ಈ ಸಂಸಾರವು ಅಸಾರವೇ?

ಜೀವನವು ನಶ್ವರ, ನಿಸ್ಸಾರ - ಎಂದು ಹೇಳುವ ವೈರಾಗ್ಯ-ಬೋಧಕವಾದ ಮಾತುಗಳನ್ನು ಕೇಳಿರುತ್ತೇವೆ. ಜೀವನವೆಂಬುದು ಏನೆಂದು ನಿರೂಪಿಸಲಾಗದು, ಎಲ್ಲವೂ ಕತ್ತಲು – ಎಂದುಕೊಳ್ಳುವುದನ್ನೂ ಕೇಳಿರುತ್ತೇವೆ.

ಆದರೆ ಲೀಲಾಶುಕನ ನಿಲುವು ಹಾಗಿಲ್ಲ. ಸಂಸಾರದಲ್ಲಿ ಸಾರವಾದದ್ದೇನು? ಕತ್ತಲಿನಲ್ಲಿ ಬೆಳಕಾಗುವುದು ಯಾವುದು? - ಎಂಬೆರಡು ಪ್ರಶ್ನೆಗಳಿಗೂ ತನ್ನದೇ ಆದ ಉತ್ತರಗಳನ್ನಾತ ಕೊಟ್ಟಿದ್ದಾನೆ.

ಸಂಸಾರದಲ್ಲಿ ಸಾರಭೂತವಾದದ್ದು, ಎಂದರೆ ಶ್ರೇಷ್ಠವಾದದ್ದು, ಯಾವುದು? ಎಂದು ಪ್ರಶ್ನೆ. ಕೃಷ್ಣಚರಣಗ ಪರಿಭಜನವೇ ಅದು. ಎತ್ತ ಗಮನವಿತ್ತರೂ, ಸಾರವತ್ತಾದುದ್ದನ್ನು ಮಾತ್ರ ಮರೆಯುವಂತಿಲ್ಲ, ಕಡೆಗಣಿಸುವಂತಿಲ್ಲ.
ಎರಡನೆಯ ಪ್ರಶ್ನೆ ಅಂಧಕಾರದ್ದು. ಸುತ್ತಲೂ ಕತ್ತಲು ಆವರಿಸಿದಾಗ ಎತ್ತ ಹೋಗಲೂ ಗೊತ್ತಾಗದಷ್ಟೆ? ಆಗ ಬೇಕು ಬೆಳಕು. ಅದಕ್ಕೆ ಸ್ಮರಿಸಬೇಕು, ಶಿವನನ್ನು ಎನ್ನುತ್ತಾನೆ, ಕವಿ.

ಸ್ವಾರಸ್ಯವಿರುವುದು ಮೇಲಿನ ಪ್ರಶ್ನೆ - ಅವಕ್ಕಿತ್ತಿರುವ ಉತ್ತರಗಳಲ್ಲಲ್ಲ. ಪ್ರಶ್ನೋತ್ತರಗಳನ್ನು ನಿರೂಪಿಸಿರುವ ಭಾಷಾಶೈಲಿಯಲ್ಲಿ. ಅಲ್ಲಿರುವ ಕಮನೀಯವಾದ ಅನುಪ್ರಾಸದಲ್ಲಿ. ಕೃಷ್ಣನನ್ನು "ಕಂಸಾರಿ"ಯೆಂದು ಕರೆಯುವುದರ ಬದಲು ಬೇರಾವುದೋ ಪದವನ್ನು ಬಳಸಿದ್ದರೆ, ಇಲ್ಲಿಯ ಉತ್ಕೃಷ್ಟ ಪರಿಣಾಮವು ಬರುತ್ತಿರಲಿಲ್ಲ. ಎಂದೇ, ಸಂಸಾರೇ - ಕಿಂ ಸಾರಂ - ಕಂಸಾರೇಃ - ಎಂಬಲ್ಲಿಯ ಅನುಗತವಾದ ಅನುಪ್ರಾಸದಿಂದ ಆಗುವ ಅನುಭವವೇ ಅನ್ಯಾದೃಶವಾದದ್ದು.

ಹಾಗೆಯೇ ಅಂಧಕಾರದ ಬಗ್ಗೆ ಹೇಳುವಾಗಲೂ, ಅದರ ನಿವಾರಣೆಗೆ ಶಿವಸ್ಮರಣವು ಬೇಕು - ಎಂದೆಂದಿದ್ದರೆ ಅಷ್ಟರಿಂದಲೇ ಉತ್ತರವಿತ್ತಂತಾಗಿದ್ದರೂ, ಶಿವನನ್ನು "ಅಂಧಕಾರಿ"ಯೆಂದೇ ಕರೆದಿರುವುದರಲ್ಲೂ ಇದೇ ಬಗೆಯ ವಿಶೇಷವಿದೆ.

ಹಿತಮಿತವಾದ ಅನುಪ್ರಾಸವು ಶ್ಲೋಕದ ಭಾವದ ಆಸ್ವಾದನೆಯನ್ನು ಹೆಚ್ಚಿಸುತ್ತದೆ. ಶ್ಲೋಕವನ್ನು ಸ್ಮರಣೆಯಲ್ಲಿಟ್ಟುಕೊಳ್ಳುವುದನ್ನೂ ಸುಲಭವನ್ನಾಗಿಸುತ್ತದೆ, ಕೂಡ.

ಹಿಂದೆ ಅಂಧಕನೆಂಬ ಅಸುರನು ಜಗಜ್ಜನನಿಯಾದ ಪಾರ್ವತಿಯನ್ನೇ ಕಾಮಿಸಿ, ಶಿವನೊಡನೆಯೇ ಹೋರಾಡಿ, ಸೋತು, ಕ್ಷಮೆಯಾಚಿಸಿ, ಕೊನೆಗೆ ಶಿವನ ಅನುಗ್ರಹಕ್ಕೆ ಪಾತ್ರನಾದನೆಂಬ ಕಥೆಯಿದೆ. ಈ ಹಿನ್ನೆಲೆಯಲ್ಲಿ ಶಿವನಿಗೆ ಅಂಧಕಾರಿಯೆಂಬ ಹೆಸರು.

ಶ್ಲೋಕ ಹೀಗಿದೆ:

ಸಂಸಾರೇ ಕಿಂ ಸಾರಂ?

ಕಂಸಾರೇಃ ಚರಣಕಮಲಪರಿಭಜನಮ್ |

ಜ್ಯೋತಿಃ ಕಿಮಂಧಕಾರೇ?

ಯದ್ ಅಂಧಕಾರೇರನುಸ್ಮರಣಮ್ ||

ಸೂಚನೆ : 31/08/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ

ಅಷ್ಟಾಕ್ಷರೀ 65 ರಾಮಸ್ಯಾತ್ಮಸಮಃ ಸಖಾ (Astaksari 65 Ramasyatmasamah Sakha)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್ 

ಪ್ರತಿಕ್ರಿಯಿಸಿರಿ (lekhana@ayvm.in)



ಅಯೋಧ್ಯಾಕಾಂಡದ ಸುಮಾರು ಮಧ್ಯಭಾಗಕ್ಕೆ ರಾಮನು ಗುಹನನ್ನು ಸಂಧಿಸುವ ಸಂನಿವೇಶವು ಒದಗಿಬರುವುದು. ಇವರಿಬ್ಬರಲ್ಲಿ ಒಬ್ಬನು ಮೇಲು, ಮತ್ತೊಬ್ಬ ಕೀಳು – ಅಲ್ಲವೇ?

ಹೇಗೆ? ರಾಮನು ಕ್ಷತ್ರಿಯವಂಶದವನು, ಇನ್ನೇನು ಯುವರಾಜನಾಗಿ  ಪಟ್ಟಾಭಿಷಿಕ್ತನೇ ಆಗಬೇಕಾಗಿದ್ದವನು. ಆದರೆ ಗುಹನೋ "ನಿಷಾದಜಾತ್ಯ"ನು. ನಿಷಾದರೆಂದರೆ ಬೇಡರ ಜಾತಿಯವರು, ಎಂದರೆ ಮೃಗಗಳ ಬೇಟೆಯಿಂದಲೇ ಜೀವಿಸುವ ಕಾಡಾಡಿಗಳು. ಅಂದಿನ ಕಾಲಕ್ಕೆ ಅವರದ್ದೊಂದು ಕೆಳಜಾತಿಯೇ ಸರಿ. ರಾಮಾಯಣದ ಆರಂಭವೇ ನಿಷಾದನೊಬ್ಬನ ಪಾಪ-ಕೃತ್ಯಕ್ಕೆ ವಾಲ್ಮೀಕಿಗಳಿತ್ತ ಶಾಪದಿಂದ - ಅಲ್ಲವೇ?

ಎಲ್ಲ ನಿಷಾದರೂ ಅಧರ್ಮಿಷ್ಠರೇ - ಎಂಬ ಭಾವನೆಯಿದ್ದಿದ್ದಲ್ಲಿ, ರಾಮನಿಗೂ ಈ ಗುಹನಿಗೂ ಸ್ನೇಹವೇ ಏರ್ಪಡುತ್ತಿರಲಿಲ್ಲ. ಆದರೆ ವಾಲ್ಮೀಕಿಗಳು ಆತನನ್ನು "ರಾಮಸ್ಯಾತ್ಮಸಮಃ ಸಖಾ" ಎಂದೇ ಚಿತ್ರಿಸುತ್ತಾರೆ. ಏನು ಹಾಗೆಂದರೆ? ಗುಹನು ರಾಮನ ಸಖ. ಸಖ ಎಂದರೆ ಸ್ನೇಹಿತ; ಬರೀ ಅಷ್ಟೇ ಅಲ್ಲ. ಆತ್ಮ-ಸಮನಾದ ಸಖ! - ತನಗೆ ಸಮನಾದ ಮಿತ್ರ - ಎಂಬುದಾಗಿ ವಾಲ್ಮೀಕಿಗಳು ಚಿತ್ರಿಸುತ್ತಾರೆ. ಕೆಳಜಾತಿಯವರ ಬಗ್ಗೆ ನಿಕೃಷ್ಟ-ಭಾವನೆಯಿದ್ದಿದ್ದಲ್ಲಿ ವಾಲ್ಮೀಕಿಗಳು ಗುಹನನ್ನು ರಾಮನಿಗೆ ಸಮನೆಂಬಂತೆ ಚಿತ್ರಿಸಲು ಸಾಧ್ಯವೇ?


ರಾಜನಾದವನು ಎಲ್ಲರೊಂದಿಗೂ ಸ್ನೇಹದಿಂದಲೇ ಇರತಕ್ಕದ್ದು. ಪ್ರಜೆಗಳಲ್ಲಿ ಯಾರು ಯಾರು ಬಲಶಾಲಿಗಳೋ ಅವರೆಲ್ಲರೊಂದಿಗೆ ಸ್ನೇಹಭಾವವು ರಾಜನಿಗೆ ಮುಖ್ಯವಾಗುತ್ತದೆ. ಅಟವಿಯಲ್ಲಿ, ಎಂದರೆ ಕಾಡಿನಲ್ಲಿ, ವಾಸಮಾಡುವವರನ್ನು ಆಟವಿಕರು - ಎನ್ನುತ್ತಾರೆ. ಆಟವಿಕರಲ್ಲೂ ಅನೇಕ ಅನುಯಾಯಿಗಳನ್ನು ಹೊಂದಿರುವವರೂ, ಸೇನಾ-ಬಲವನ್ನೇ ಹೊಂದಿರುವವರೂ ಇರುವುದುಂಟು. ವಿಶೇಷ-ಪ್ರಸಂಗಗಳಲ್ಲಿ ಅವರ ಸ್ನೇಹ-ಸಾಹ್ಯಗಳೂ ರಾಜನಿಗೆ ಬೇಕಾಗಬಹುದು.

ಆದುದರಿಂದ ಅವರ ಪ್ರೀತಿ-ವಿಶ್ವಾಸಗಳನ್ನು ಗಳಿಸುವುದೂ ರಾಜನಿಗೆ ಅವಶ್ಯವಾಗುವುದು. ಹೀಗಾಗಿ ರಾಜ್ಯದ ರಕ್ಷಣೆಯ ದೃಷ್ಟಿಯಿಂದ ಊರಿನಲ್ಲಿರುವ ಹಾಗೂ ಕಾಡಿನಲ್ಲಿರುವ ಎಲ್ಲ ಬಲಶಾಲಿಗಳೊಂದಿಗೆ ಸಖ್ಯ-ಸೌಜನ್ಯಗಳನ್ನು ಕಾಪಾಡಿಕೊಳ್ಳುವುದು ರಾಜನಿಗೆ ಉಪಕಾರಿಯೇ ಆಗುತ್ತದೆ.

ಇಲ್ಲಿಯ ಗುಹನು ಜೊತೆಗೆ ಸ್ಥಪತಿಯೆಂಬುದಾಗಿಯೂ ಪ್ರಸಿದ್ಧನಾಗಿದ್ದವನು. ಸ್ಥಪತಿಯೆಂದರೆ ಶಿಲ್ಪಿ. ಹೀಗೆ ಈ ಗುಹನು ಬಲವಾನ್ ಮಾತ್ರವಲ್ಲದೆ ಸ್ಥಪತಿಯೂ ಆದವನು. ಅರ್ಥಾತ್, ಸೈನ್ಯ-ಬಲವುಳ್ಳವನೂ, ಕಲಾ-ಜ್ಞಾನವಂತನೂ ಆಗಿರುವವನು.

ಇವೆಲ್ಲ ಆತನಲ್ಲಿದ್ದ ಗರಿಮೆಗಳೇ. ಆದರೆ ಅಷ್ಟುಮಾತ್ರದಿಂದಲೇ ರಾಮನಿಗೆ ಆತ್ಮ-ಸಮನಾದ ಸಖನಾಗಿಬಿಡುವುದಿಲ್ಲ, ಅಲ್ಲವೇ? ಹಾಗಿದ್ದರೆ ಆತನಲ್ಲಿದ್ದ ಮತ್ತಾವ ಗುಣದಿಂದಾಗಿ ರಾಮನು ಆತನ ವಿಷಯದಲ್ಲಿ ಸಾದರನಾಗಿದ್ದನು?

ಒಬ್ಬನನ್ನು ಅಳೆದುಕೊಳ್ಳಲು ಆತನ ಬಗ್ಗೆ ಇತರರು ಏನು ಹೇಳುತ್ತಾರೆ? - ಎಂದು ಗಮನಿಸುವುದು ಸಹಜವೂ ಸುಲಭವೂ ಆದ ಕ್ರಮವೇ; ಆದರೆ ಅದನ್ನೇ ನೆಚ್ಚಿಕೊಳ್ಳುವುದು ಯುಕ್ತವಾಗಲಾರದು. ಬೇರೆಯವರ ಮಾತಿಗೆ ಬೆಲೆಗೊಡುವುದಕ್ಕಿಂತ ಹೆಚ್ಚಾಗಿ, ನಮ್ಮೊಂದಿಗೆ ಆ ವ್ಯಕ್ತಿಯ ವ್ಯವಹಾರವು ಯಾವ ತೆರನಾದುದು? - ಎಂಬುದನ್ನೇ ಪ್ರಧಾನವಾಗಿ ಗಮನಿಸಿಕೊಳ್ಳಬೇಕಾಗುತ್ತದೆ.

ರಾಮನೊಂದಿಗೆ ಗುಹನು ವರ್ತಿಸಿದ ಬಗೆಯೇನು? - ಎಂಬುದನ್ನು ಕಿಂಚಿತ್ತಾದರೂ ನೋಡಬೇಕಲ್ಲವೇ? ತನ್ನೆಡೆಯ ಸೀಮೆಯೊಳಗೆ ರಾಮನು ಬಂದುದನ್ನು ತಿಳಿದೊಡನೆಯೇ, ವೃದ್ಧರು, ಅಮಾತ್ಯರು, ಹಾಗೂ ಬಂಧುಗಳೊಂದಿಗೆ ಬಂದವನೇ, ರಾಮನನ್ನು ಆದರದಿಂದ ಎದುರ್ಗೊಂಡ, ಗುಹ.

ರಾಮನನ್ನು ಆಲಿಂಗಿಸಿಕೊಂಡು ಆತನು ಹೇಳಿದ್ದೇನು? "ರಾಮನೇ, ಅಯೋಧ್ಯೆಯೆಂತೋ ಈ ಪ್ರದೇಶವೂ ನಿನಗೆ ಅಂತೆಯೇ. ನಿನಗಾಗಿ ನಾನು ಏನು ಮಾಡಲಿ ಹೇಳು. ಇಂತಹ ಪ್ರಿಯಾತಿಥಿಯನ್ನು ಯಾರು ತಾನೆ ಹೊಂದಿಯಾರು?"

ಜೊತೆಗೆ, ಅರ್ಘ್ಯ-ಪಾದ್ಯಗಳನ್ನೂ ಅನ್ನಾಹಾರಗಳನ್ನೂ ವ್ಯವಸ್ಥೆ ಮಾಡಿದನು. ಮತ್ತು ಮತ್ತೆ ಹೇಳಿದನು: "ರಾಮನೇ, ನನ್ನೀ ಭೂಮಿಯೆಲ್ಲಾ ನಿನ್ನದೇ. ನಾವು ನಿನ್ನ ಆಳುಗಳು. ನೀನೇ ನಮಗೆ ಒಡೆಯ. ನಮ್ಮ ರಾಜ್ಯವನ್ನು ನೀನೇ ಚೆನ್ನಾಗಿ ಆಳು" – ಎಂದುದಲ್ಲದೆ, "ಇದೋ ನಿನಗಾಗಿ ಬಂದಿವೆ ಈ ಭಕ್ಷ್ಯ-ಭೋಜ್ಯಗಳು, ಪೇಯ-ಲೇಹ್ಯಗಳು; ನಿದ್ರಿಸಲು ಶಯ್ಯೆಗಳು ಸಿದ್ಧವಾಗಿವೆ; ನಿನ್ನ ಕುದುರೆಗಳಿಗೂ ಆಹಾರವು ಬಂದಿದೆ" ಎಂದನು.

ಮಹೋನ್ನತವಾದ ಬದುಕು ಎದುರಿಗೆ ಬಂದಿರಲು, ಅದರ ಗುರುತ್ವವನ್ನು ಗುರುತಿಸಿಕೊಂಡವನ ಮೈ-ಮನಸ್ಸುಗಳು ಸಹಜವಾಗಿ ಬಗ್ಗುವಲ್ಲಿ, "ನ ಮಮ"-"ನಮಃ"-ಗಳು ತಾವಾಗಿ ಉಂಟಾಗುವ ಬಗೆಯೊಂದುಂಟು; ಅದುವೇ ಪೂರ್ಣ-ಸಮರ್ಪಣೆಯ ತತ್ತ್ವ - ಎಂಬುದನ್ನು ಶ್ರೀರಂಗ-ಮಹಾಗುರುಗಳು ಸುಭಗವಾಗಿ ನಿರೂಪಿಸಿದ್ದರು.

ಕೇವಲ ಪರಸ್ಪರೋಪಯೋಗಕ್ಕೆ ಬರುವಷ್ಟೇ ದೃಷ್ಟಿಯಿಂದಾದ ವ್ಯವಹಾರದ ಪರಿಯಿದಲ್ಲ. ರಾಮನ ವಿಷಯದಲ್ಲಿ ಗುಹನಿಗೆ ಉತ್ಕಟ-ಗೌರವವೂ; ಗುಹನ ಬಗೆಗೆ ರಾಮನಿಗೆ ಅತಿಶಯಿತ-ಪ್ರೀತಿಯೂ - ಇದ್ದುವಾಗಿ, ಇಂತಹ ಅಕಪಟ-ಪ್ರೀತಿ-ಗೌರವಗಳ ಮಧುರ-ಮೇಳನವಿದ್ದಾಗ "ಆತ್ಮ-ಸಮ"ನೆಂಬೀ ಆರ್ದ್ರವಾದ ಉಕ್ತಿಯು ಸತ್ಯ-ಸಹಜವಾದುದೇ ಅಲ್ಲವೇ?

ಸೂಚನೆ: 31/08/2024 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.