Tuesday, September 24, 2024

ವ್ಯಾಸ ವೀಕ್ಷಿತ 104 ಶಾಪದಿಂದ ಬಿಡುಗಡೆ ಮತ್ತು ಬಭ್ರುವಾಹನನ ಜನ್ಮ (Vyaasa Vikshita 104 Sapadinda Bidugade Mattu Babhruvahanana Janma)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ತಪೋ-ವಿಘ್ನಮಾಡಲು ಬಂದ ನಾರಿಯರಿಗೆ ಮೊಸಳೆಯ ಜನ್ಮವು ಬರಲೆಂದು ವಿಪ್ರನು ಶಾಪವಿತ್ತ ನಷ್ಟೆ.  ಆತನಲ್ಲಿ ಕ್ಷಮೆಯಾಚಿಸಿದ ಅಪ್ಸರೆಯರಿಗೆ, ಅರ್ಜುನನಿಂದ ಶಾಪ-ಮೋಕ್ಷವಾಗುವ ಬಗೆಯನ್ನು ಸೂಚಿಸಿ, ವಿಪ್ರನು ಹೇಳುತ್ತಾನೆ: "ಆಮೇಲೆ ನೀವುಗಳೆಲ್ಲರೂ ನಿಮ್ಮ ನಿಜ-ರೂಪವನ್ನು ಹೊಂದುವಿರಿ. ನಾನೆಂದೂ ಸುಳ್ಳು ಹೇಳಿದವನಲ್ಲ - ನಗುತ್ತ ಕೂಡ, ಎಂದರೆ ಹಾಸ್ಯಕ್ಕಾಗಿ ಸಹ" ಎಂದು ಹೇಳಿದನು. ಅಷ್ಟೇ ಅಲ್ಲದೆ, "ಇಲ್ಲಿಂದ ಮುಂದಕ್ಕೆ ಆ ಎಲ್ಲ ತೀರ್ಥಗಳಿಗೂ ನಾರೀ-ತೀರ್ಥವೆಂಬ ಪ್ರಸಿದ್ಧಿ ಬರುವುದು. ಮನೀಷಿಗಳಿಗೆ ಸಹ ಅವು ಪುಣ್ಯಕರವೂ ಪಾವನಕರವೂ ಆಗತಕ್ಕವು" - ಎಂದು ನುಡಿದನು.


ಬಳಿಕ, ಆ ಬ್ರಾಹ್ಮಣನಿಗೆ ನಾವು ನಮಸ್ಕರಿಸಿ, ಪ್ರದಕ್ಷಿಣೆ ಮಾಡಿ, ಅಲ್ಲಿಂದ ಖಿನ್ನರಾಗಿ ಹೊರಟೆವು. ಆಗ ನಮಗಿದ್ದುದು ಒಂದೇ ಚಿಂತೆ. ಯಾರಿಂದಾಗಿ ನಮಗೆ ನಮ್ಮ ಮೊದಲ ರೂಪವೇ ಬರುವುದೋ ಅಂತಹವನು ದೊರೆಯಬೇಕು; ಎಲ್ಲಿಗೆ ಹೋದರೆ ನಾವು ಕಡಿಮೆ ಕಾಲದಲ್ಲಿಯೇ ಆ ಪುರುಷನನ್ನು ಸಂಧಿಸಬಹುದು? - ಎಂಬ ಚಿಂತೆ.


ನಾವು ಹೀಗೆ ಚಿಂತಿಸುತ್ತಿರಲು, ಕೇವಲ ಒಂದು ಮುಹೂರ್ತದಷ್ಟು ಹೊತ್ತಿಗೇ (ಎಂದರೆ ಒಂದು ಘಂಟೆಯೊಳಗೇ) ಮಹಾತ್ಮರಾದ ದೇವರ್ಷಿ-ನಾರದರು ಅಲ್ಲಿ ಬರುತ್ತಿರುವುದನ್ನು ಕಂಡೆವು. ಅಮಿತ-ತೇಜಸ್ಕರಾದ ಅವರನ್ನು ನೋಡಿದೊಡನೆ ನಮಗೆ ಸಂತೋಷವಾಯಿತು. ಅವರಿಗೆ ಅಭಿವಾದನ ಮಾಡಿದೆವು, ಮತ್ತು ಲಜ್ಜೆಯಿಂದ ತಲೆತಗ್ಗಿಸಿ ನಿಂತೆವು. ನಮ್ಮ ದುಃಖಕ್ಕೆ ಕಾರಣವೇನು? - ಎಂಬುದನ್ನು ಅವರೇ ಕೇಳಿದರು. ನಾವೂ ನಡೆದುದನ್ನು ಹೇಳಿದೆವು. ನಡೆದುದೆಲ್ಲವನ್ನೂ ಕೇಳಿ ಅವರು ಈ ಮಾತನ್ನು ಹೇಳಿದರು:


ದಕ್ಷಿಣ-ಸಮುದ್ರದ ದಡದ ಬಳಿ ಐದು ತೀರ್ಥಗಳಿವೆ. ಅವು ಪುಣ್ಯವಾದವೂ ಹೌದು, ರಮಣೀಯವಾದುವೂ ಹೌದು. ನೀವುಗಳು ಅಲ್ಲಿಗೆ ಹೋಗಿ, ವಿಳಂಬಮಾಡಬೇಡಿ. ಪಾಂಡು-ಪುತ್ರನೂ ನರ-ಶ್ರೇಷ್ಠನೂ ಆದ ಧನಂಜಯನು ಶುದ್ಧಾತ್ಮನು; ಆತನು ನಿಮ್ಮನ್ನು ದುಃಖದಿಂದ ನಿಸ್ಸಂಶಯವಾಗಿಯೂ ಪಾರುಮಾಡುವನು." ಆತನ ಮಾತನ್ನು ಕೇಳಿಯೇ ನಾವೆಲ್ಲರೂ ಇಲ್ಲಿಗೆ ಬಂದಿರುವುದು. ಎಂದೇ ಇದೋ ಸತ್ಯವಾಗಿಯೂ ನಾವು ಶಾಪದಿಂದ ಬಿಡುಗಡೆ ಹೊಂದಿದ್ದೇವೆ, ಪಾಪ-ರಹಿತನೇ! ಇದೋ ಇವರುಗಳೇ ನನ್ನ ಆ ನಾಲ್ಕು ಜನ ಸಖಿಯರು, ನೀರೊಳಗಿರತಕ್ಕವರು. ಓ ವೀರ, ನಿನ್ನ ಶುಭ-ಕರ್ಮವನ್ನು ಮಾಡು, ಅವರೆಲ್ಲರಿಗೂ ಬಿಡುಗಡೆಯನ್ನು ದೊರಕಿಸಿಕೊಡು - ಎಂದಳು.


ಆ ಬಳಿಕ, ಪರಾಕ್ರಮಿಯೂ ಉದಾರಿಯೂ ಆದ ಪಾಂಡವ-ಶ್ರೇಷ್ಠನಾದ ಅರ್ಜುನನು ಅವರೆಲ್ಲರನ್ನೂ ಆ ಶಾಪದಿಂದ ಬಿಡುಗಡೆ ಮಾಡಿದನು. ಆ ನೀರಿನಿಂದ ಹೊರಬಂದವರಾಗಿ, ತಮ್ಮ ಸ್ವ-ಶರೀರವನ್ನು ಪಡೆದವರಾಗಿ, ಆ ಅಪ್ಸರಸ್ತ್ರೀಯರು ಹಿಂದೆಂತೋ ಅಂತೆಯೇ ತೋರಿದವರಾದರು.


ಈ ಬಗೆಯಲ್ಲಿ ತೀರ್ಥವನ್ನು ಶೋಧನೆಮಾಡಿದವನಾಗಿ, ಅರ್ಜುನನು ಆ ನಾರಿಯರಿಗೆ ಹೊರಡಲು ಅನುಮತಿಯಿತ್ತನು. ಮತ್ತು ಮತ್ತೆ ಚಿತ್ರಾಂಗದೆಯನ್ನು ನೋಡಲೆಂದು ಪುನಃ ಮಣಿಪೂರಕ್ಕೆ ಹೋದನು. ಅವಳಲ್ಲಿ ಬಭ್ರುವಾಹನನೆಂಬ ಪುತ್ರನನ್ನು ಪಡೆದನು.


ಪುತ್ರ-ದರ್ಶನವಾದ ಬಳಿಕ ಪಾಂಡವನು ಚಿತ್ರವಾಹನನಿಗೆ ಹೇಳಿದನು: ಚಿತ್ರಾಂಗದೆಯ ಶುಲ್ಕವಾಗಿ ನೀನು ಕೇಳಿದ್ದೆಯಲ್ಲಾ, ತೆಗೆದುಕೋ ಈ ಬಭ್ರುವಾಹನನನ್ನು. ರಾಜನೇ, ಇದರಿಂದಾಗಿ ನಾನೀಗ ಋಣ-ಮುಕ್ತನಾಗುತ್ತೇನೆ - ಎಂದನು.


ಸೂಚನೆ : 22/9/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.