ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ವಿಭುವಾದ ಶ್ರೀಕೃಷ್ಣನನ್ನು ನಾವು ಆಶ್ರಯಿಸುತೇವೆ – ಎನ್ನುತ್ತಾನೆ, ಕವಿ ಲೀಲಾಶುಕ, ತನ್ನ ಪದ್ಯವೊಂದರಲ್ಲಿ.
ಕೃಷ್ಣನೇಕೆ ವಿಭು? ಏನು ವಿಭುವೆಂದರೆ? – ಎಂಬುದನ್ನೊಮ್ಮೆ ನೋಡಬೇಕಲ್ಲವೇ? ಯಾವನು ವಿವಿಧವಾಗಿ ಭವಿಸುತ್ತಾನೋ ಆತನೇ ವಿ-ಭು: ಭಕ್ತರಿಗೆ ಅನುಗ್ರಹ ಮಾಡಲೆಂದು ನಾನಾ-ರೂಪಗಳನ್ನು ತಳೆದು ಬರುವ ಆತನು ವಿಭುವೇ ಸರಿ.
ಆತನನ್ನು ಅಂಗನೆಯರು ಅನುಕ್ಷಣವೂ ಅರ್ಚಿಸುತ್ತಾರೆ. ಅನುಕ್ಷಣವೆಂದರೆ ಕ್ಷಣ-ಕ್ಷಣಕ್ಕೂ, ಅನವರತವಾಗಿ, ನಿರಂತರವಾಗಿ. ಹಾಗೆ ಆತನನ್ನು ಅಭ್ಯರ್ಚಿಸುವ ಅಂಗನೆಯರು ಯಾರು? ಮತ್ತಾರು, ವಲ್ಲವ-ಸುಂದರಿಯರು - ಎಂದರೆ ಗೋಪ-ನಾರಿಯರು.
ಅವರು ಅರ್ಚಿಸುವ ವಿಭುವನ್ನು ನಾವು ಆಶ್ರಯಿಸುತ್ತೇವೆ - ಎಂದರೇನು? ಅವರು ಅರ್ಚಿಸುವುದರಲ್ಲಿ ಹಾಗಾದರೆ ವಿಶೇಷವೇನಾದರೂ ಉಂಟೋ?
ಉಂಟು. ಅವರ ಪೂಜೆಯ ಬಗೆಯೇ ವಿಶಿಷ್ಟವಾದುದು. ಏಕೆ? ಎಲ್ಲರೂ ಅರ್ಚಿಸುವ ಬಗೆಯಲ್ಲ, ಅದು. ಎಲ್ಲರೂ ಪೂಜಿಸುವುದು ಸಾಮಾನ್ಯವಾಗಿ ಹೂಗಳಿಂದ, ಅರ್ಚಿಸುವುದು ನಾಮಗಳಿಂದ, ಸ್ತುತಿಸುವುದು ಸ್ತೋತ್ರಗಳಿಂದ - ಅಲ್ಲವೇ? ಹೌದು, ಆದರೆ ಗೋಪಿಕೆಯರ ಪರಿ ಬೇರೆಯೇ.
ತಮ್ಮ ಅಪಾಂಗ-ರೇಖೆಗಳಿಂದಲೇ ಆತನನ್ನು ಅರ್ಚಿಸುತ್ತಾರೆ, ಅವರು. ಅಪಾಂಗವೆಂದರೆ ನೇತ್ರಾಂತ, ಕಣ್ಣಂಚು. ಅದರ ರೇಖೆಗಳಿಂದ ಆತನನ್ನವರು ಅರ್ಚಿಸುವರು. ರೇಖೆಯೆಂದರೆ ಲೇಖೆಯೇ. ಲೇಖೆಯೆಂದರೆ ಬರಹ. ಬರಹದಿಂದ ಪೂಜೆ - ಎಂಬುದು ವಿಭಿನ್ನವಾದ ಬಗೆಯೇ ಸರಿ. ಆದರೆ ಅದರಲ್ಲೇನು ವಿಶೇಷ? ಒಂದಲ್ಲ, ಎರಡು ವಿಶೇಷಗಳಿವೆ.
ಮೊದಲನೆಯದು, ಅವು ಅಭಂಗುರಗಳೆಂಬುದು. ಯಾವುದಕ್ಕೆ ಭಂಗ ಬರುವುದೋ ಅದು ಭಂಗುರ. ಭಂಗವೆಂದರೆ ಭಗ್ನವಾಗುವಿಕೆ, ವಿಚ್ಛೇದ ಬರುವಿಕೆ. ಅಭಂಗುರವೆಂದರೆ ಅವಿಚ್ಛಿನ್ನವಾದದ್ದು. ಕೃಷ್ಣನನ್ನು ನೋಡುತ್ತಿದ್ದರೆ, ತಮ್ಮ ಕಣ್ಣನ್ನು ಅವನಿಂದ ಕೀಳಲೇ ಆಗದು, ಅವರಿಗೆ!
ತೃಪ್ತಿಯೆಂಬುದು ಉಂಟಾದರಲ್ಲವೇ, "ಆಹಾ, ಸಾಕಷ್ಟು ನೋಡಿದ್ದಾಯಿತು" - ಎನ್ನುವ ಮಾತು; "ಬೇರೆ ಕೆಲಸಗಳನ್ನೂ ನೋಡಬೇಕಲ್ಲಾ" - ಎನ್ನುವ ಮಾತು. ಎಷ್ಟು ನೋಡಿ(ದ)ದ್ದರೂ ತೃಪ್ತಿಯಾಗದೆಂದಾದಲ್ಲಿ ಕಣ್ಣೋಟಕ್ಕೆ ಕೊನೆಯೆಲ್ಲಿ? ಹೀಗೆ ಭಂಗುರವಲ್ಲದ ಕಡೆಗಣ್ಣೋಟಗಳು, ಆ ಗೋಪಾಂಗನೆಯರವು.
ಇದೊಂದು ವಿಶೇಷವಾದರೆ, ಮತ್ತೊಂದು ವಿಶೇಷವು ಮತ್ತೂ ಸ್ವಾರಸ್ಯಕರವಾದದ್ದು. ಈ ಅಪಾಂಗ-ರೇಖೆಗಳು ರಸ-ರಂಜಿತವಾದದ್ದಂತೆ! ಎಂದರೆ ರಸದಿಂದ ರಂಜಿತವಾದವು, ಅವು. ಕಣ್ಗಳಿಂದ ಮಾಡುವ ಅವಲೋಕನಕ್ಕೂ ರಸವೆಂಬುದುಂಟೆ? - ಎಂಬ ಪ್ರಶ್ನೆಯಲ್ಲವೆ?
ಅದಕ್ಕೂ ಉತ್ತರವುಂಟು. ಅನಂಗ-ರೇಖೆಯ ರಸವೆಂಬ ರಸವದು: ಅನಂಗನೆಂದರೆ ಮನ್ಮಥ: ಅನಂಗ-ರೇಖೆಯೆಂದರೆ ಮತ್ತೇನೂ ಅಲ್ಲ, ಮನ್ಮಥ-ಲೇಖ (ಲವ್-ಲೆಟರ್), ಅರ್ಥಾತ್ ಪ್ರೇಮ-ಪತ್ರ. ಪ್ರಣಯವನ್ನು ತೋಡಿಕೊಳ್ಳುವ ಪತ್ರದಲ್ಲಿ ಪ್ರೀತಿಯ ಪ್ರವಾಹವೇ ಇರುವುದಲ್ಲವೇ? ಆ ಪ್ರೇಮ-ರಸದಿಂದ ರಂಜಿತವಾದ ಪತ್ರಗಳಂತಿವೆ, ಇವು.
ನಮ್ಮ ಪೂರ್ವಿಕರು ಪ್ರೇಮ-ಪ್ರಣಯಗಳನ್ನೂ ವಿಶ್ಲೇಷಿಸಿದ್ದಾರೆ! ಧರ್ಮಶಾಸ್ತ್ರ-ಅರ್ಥಶಾಸ್ತ್ರಗಳಂತೆ ಕಾಮಶಾಸ್ತ್ರವನ್ನೂ ಬೆಳೆಸಿದವರಲ್ಲವೇ ನಮ್ಮವರು? ಅವರಂತೆ, ಈ ಕಾಮ-ಲೇಖವೆಂಬುದು ಎರಡು ಬಗೆ – ಸಾಕ್ಷರ ಹಾಗೂ ನಿರಕ್ಷರ - ಎಂಬುದಾಗಿ. ಸ್ವ-ಹಸ್ತದಿಂದ ಲಿಪಿಮಯವಾಗಿ ಹಾಗೂ ಗಾಥಾಮಯವಾಗಿ, ಎಂದರೆ ಪದ್ಯ-ಭಾವದಿಂದ ಕೂಡಿರುವುದಾಗಿ ಬರೆದದ್ದು ಸಾಕ್ಷರ. ವರ್ಣ-ವಿನ್ಯಾಸವಿಲ್ಲದ್ದು ನಿರಕ್ಷರ. ಅದರ ಬಗೆಗಳು ಹಲವು. ಕಮಲ-ನಾಳದಿಂದಾದ ರಾಗದಿಂದ ಅಂಕಿತವಾದದ್ದು (ರಾಗವೆಂದರೆ ಬಣ್ಣ); ಅಥವಾ ಕಸ್ತೂರಿಯನ್ನೇ ಮಸಿಯನ್ನಾಗಿ ಬಳಸಿಕೊಂಡಿರುವಂತಹುದು; ಅಥವಾ ಪುಷ್ಪದಳಗಳಿಂದ ಬಿಡಿಸಿರುವಂತಹುದು; ಅಥವಾ ಎದೆಯ ಕುಂಕುಮದಿಂದ ಅಂಕಿತವಾದದ್ದು; ಮತ್ತು ಉಗುರಿನ ಗುರುತಿನಿಂದಾದದ್ದು. ಓ! ಇವುಗಳೆಲ್ಲ "ರಸ"-ರಂಜಿತಗಳೇ ಸರಿ! ಗೋಪಿಕೆಯರ ಈ ಕಟಾಕ್ಷ-ವೀಕ್ಷಿತಗಳೂ ಸ-ರಸವೇ ಸರಿ!
ಶ್ರೀಕೃಷ್ಣನ ದಿವ್ಯಾದ್ಭುತ-ಲೀಲೆಗಳ ವಾಸ್ತವ ಸವಿಯನ್ನು ಕಂಡುಂಡ ಯಾವ ಜೀವಿ ತಾನೆ ಆತನಿಗೆ ಮನಸ್ಸಿನಲ್ಲೇ ಪ್ರೇಮ-ಪತ್ರಗಳನ್ನು ಬರೆದುಕೊಂಡಿಲ್ಲ? ಅಂದಿನ ರುಕ್ಮಿಣಿ ಹೆಚ್ಚೇ? ಈಚಿನ ಮೀರಾ ಕಮ್ಮಿಯೇ?
ಹೀಗೆ ಪ್ರಣಯ-ಪತ್ರಗಳಲ್ಲಿಯ ಯಾವ ಪ್ರೇಮ-ರಸವುಂಟೋ ಅದರಿಂದಲೇ ಭಾವಿಸಲ್ಪಟ್ಟ ಕಣ್ಣೋಟಗಳಿವು.
ದೂರದಲ್ಲಿ ಕಂಡಾಗಲಿಂದಲೇ ಆತನಲ್ಲೇ ನೆಟ್ಟ ಕಣ್ಗಳು; ಕಣ್ಣು ಮಿಟುಕಿಸುವಲ್ಲಿ ಎಲ್ಲಿ ಮರೆಯಾಗಿಬಿಡುವನೋ ಮಾಯವಾಗಿಬಿಡುವನೋ ಎಂಬ ಭೀತಿಯಿಂದಲೋ ಎಂಬಂತೆ, ನೆಟ್ಟೇ ಇರುವ ನೋಟ, ಎವೆಯಿಕ್ಕದ ಈಕ್ಷಿತ: ತೈಲ-ಧಾರೆಯಂತಿರುವ ಕಟಾಕ್ಷ-ಧಾರೆ ಅವರದು. ಮನಸ್ಸು ತೈಲ-ಧಾರೆಯಂತಾದಾಗಲೇ ಧ್ಯಾನ - ಅಲ್ಲವೇ? ಹಾಗೆಯೇ ಇಲ್ಲೂ. ಹೀಗೆ ಪರವಸ್ತುವಿನಲ್ಲಿ ಮನಸ್ಸು ಕೊಟ್ಟುಕೊಂಡ ಧನ್ಯ-ಗೋಪಿಯರಿಂದ ಅಭ್ಯರ್ಚಿತನಾದ ವಿಭುವೀತನು!
ಅಪಾಂಗ-ರೇಖಾಭಿರಭಂಗುರಾಭಿಃ
ಅಭ್ಯರ್ಚ್ಯಮಾನಂ ವಿಭುಮಾಶ್ರಯಾಮಃ ||
ಪ್ರಕೃತ-ಶ್ಲೋಕದ ನಾಲ್ಕೂ ಪಾದಗಳೂ 'ಅ'ಕಾರದಿಂದಲೇ ಆರಂಭಗೊಂಡಿವೆ. ಮೊದಲ ಮೂರು ಪಾದಗಳು 'ಭಿಃ' ಎಂದೇ ಕೊನೆಗೊಳ್ಳುತ್ತವೆ.ಅಪಾಂಗ/ಅನಂಗ/ಅಭಂಗುರ – ಇತ್ಯಾದಿಗಳಲ್ಲಿಯ ಅಪ್ರಯತ್ನವಾದ ಅನುಪ್ರಾಸವೂ ಅವಧೇಯವೇ ಸರಿ.
*****
ಈ ಸಂಸಾರವು ಅಸಾರವೇ?
ಜೀವನವು ನಶ್ವರ, ನಿಸ್ಸಾರ - ಎಂದು ಹೇಳುವ ವೈರಾಗ್ಯ-ಬೋಧಕವಾದ ಮಾತುಗಳನ್ನು ಕೇಳಿರುತ್ತೇವೆ. ಜೀವನವೆಂಬುದು ಏನೆಂದು ನಿರೂಪಿಸಲಾಗದು, ಎಲ್ಲವೂ ಕತ್ತಲು – ಎಂದುಕೊಳ್ಳುವುದನ್ನೂ ಕೇಳಿರುತ್ತೇವೆ.
ಸ್ವಾರಸ್ಯವಿರುವುದು ಮೇಲಿನ ಪ್ರಶ್ನೆ - ಅವಕ್ಕಿತ್ತಿರುವ ಉತ್ತರಗಳಲ್ಲಲ್ಲ. ಪ್ರಶ್ನೋತ್ತರಗಳನ್ನು ನಿರೂಪಿಸಿರುವ ಭಾಷಾಶೈಲಿಯಲ್ಲಿ. ಅಲ್ಲಿರುವ ಕಮನೀಯವಾದ ಅನುಪ್ರಾಸದಲ್ಲಿ. ಕೃಷ್ಣನನ್ನು "ಕಂಸಾರಿ"ಯೆಂದು ಕರೆಯುವುದರ ಬದಲು ಬೇರಾವುದೋ ಪದವನ್ನು ಬಳಸಿದ್ದರೆ, ಇಲ್ಲಿಯ ಉತ್ಕೃಷ್ಟ ಪರಿಣಾಮವು ಬರುತ್ತಿರಲಿಲ್ಲ. ಎಂದೇ, ಸಂಸಾರೇ - ಕಿಂ ಸಾರಂ - ಕಂಸಾರೇಃ - ಎಂಬಲ್ಲಿಯ ಅನುಗತವಾದ ಅನುಪ್ರಾಸದಿಂದ ಆಗುವ ಅನುಭವವೇ ಅನ್ಯಾದೃಶವಾದದ್ದು.
ಹಾಗೆಯೇ ಅಂಧಕಾರದ ಬಗ್ಗೆ ಹೇಳುವಾಗಲೂ, ಅದರ ನಿವಾರಣೆಗೆ ಶಿವಸ್ಮರಣವು ಬೇಕು - ಎಂದೆಂದಿದ್ದರೆ ಅಷ್ಟರಿಂದಲೇ ಉತ್ತರವಿತ್ತಂತಾಗಿದ್ದರೂ, ಶಿವನನ್ನು "ಅಂಧಕಾರಿ"ಯೆಂದೇ ಕರೆದಿರುವುದರಲ್ಲೂ ಇದೇ ಬಗೆಯ ವಿಶೇಷವಿದೆ.
ಹಿತಮಿತವಾದ ಅನುಪ್ರಾಸವು ಶ್ಲೋಕದ ಭಾವದ ಆಸ್ವಾದನೆಯನ್ನು ಹೆಚ್ಚಿಸುತ್ತದೆ. ಶ್ಲೋಕವನ್ನು ಸ್ಮರಣೆಯಲ್ಲಿಟ್ಟುಕೊಳ್ಳುವುದನ್ನೂ ಸುಲಭವನ್ನಾಗಿಸುತ್ತದೆ, ಕೂಡ.
ಹಿಂದೆ ಅಂಧಕನೆಂಬ ಅಸುರನು ಜಗಜ್ಜನನಿಯಾದ ಪಾರ್ವತಿಯನ್ನೇ ಕಾಮಿಸಿ, ಶಿವನೊಡನೆಯೇ ಹೋರಾಡಿ, ಸೋತು, ಕ್ಷಮೆಯಾಚಿಸಿ, ಕೊನೆಗೆ ಶಿವನ ಅನುಗ್ರಹಕ್ಕೆ ಪಾತ್ರನಾದನೆಂಬ ಕಥೆಯಿದೆ. ಈ ಹಿನ್ನೆಲೆಯಲ್ಲಿ ಶಿವನಿಗೆ ಅಂಧಕಾರಿಯೆಂಬ ಹೆಸರು.
ಕಂಸಾರೇಃ ಚರಣಕಮಲಪರಿಭಜನಮ್ |
ಜ್ಯೋತಿಃ ಕಿಮಂಧಕಾರೇ?
ಯದ್ ಅಂಧಕಾರೇರನುಸ್ಮರಣಮ್ ||
ಸೂಚನೆ : 31/08/2024 ರಂದು ಈ ಲೇಖನವು ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ