ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ – 104 ದಂಭವೆಂದರೆ ಯಾವುದು ?
ಉತ್ತರ - ತೋರಿಕೆಯ ಧರ್ಮಾಚರಣೆ
ದಂಭವೆಂಬುದು ತೋರಿಕೆಯ ಧರ್ಮಾಚರಣೆಯಾಗಿದೆ ಎಂಬುದು ಈ ಯಕ್ಷಪ್ರಶ್ನೋತ್ತರದ ಆಶಯವಾಗಿದೆ. ದಂಭ ಎಂಬ ಗುಣದ ಸ್ವಭಾವವನ್ನು ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಈ ರೀತಿ ವರ್ಣಿಸಿದ್ದಾನೆ. ಯಾರು ತಮ್ಮನ್ನು ತಾವು ಸಕಲಗುಣಸಂಪನ್ನ, ಸಕಲಕಲ್ಯಾಣಗುಣಗಣಿ, ಸಕಲವಿದ್ಯಾಪ್ರವೀಣ ಎಂದೆಲ್ಲಾ ತಿಳಿದುಕೊಳ್ಳುತ್ತಾರೋ; ಸಮಾಜದಲ್ಲಿ ಮಾನ್ಯರಾದ ವ್ಯಕ್ತಿಗಳು ಯಾರನ್ನು ಗುರುತಿಸುವುದಿಲ್ಲವೋ ಅಥವಾ ಗೌರವಿಸುವುದಿಲ್ಲವೂ; ವಿನಯವೆಂಬ ಗುಣವೇ ಯಾರಲ್ಲಿ ಇಲ್ಲವೋ; ಧನಮದ ಮತ್ತು ಮಾನದ ಮದ ಉಳ್ಳವರು ಯಾರೋ; ಯಜ್ಞ- ಯಾಗ, ದೇವತಾ, ಪೂಜೆ ಅತಿಥಿಸತ್ಕಾರ ಮೊದಲಾದ ಪುಣ್ಯಕಾರ್ಯವನ್ನು ಧರ್ಮದ ಹೆಸರಿನಲ್ಲಿ ಯಾರು ಆಚರಣೆ ಮಾಡುತ್ತಾರೋ ಅಂತಹವರು ದಂಭದಿಂದ ಕೂಡಿದವರು, ದಾಂಭಿಕರು, ಮೌಢ್ಯರು ಎಂದೆಲ್ಲಾ ಕರೆಯುತ್ತೇವೆ.
ಧರ್ಮ ಎಂಬುದರ ವಿರುದ್ಧಪದ ಅಧರ್ಮ. ಧರ್ಮವೆಂದರೆ ಕರ್ತವ್ಯಬುದ್ಧಿಯಿಂದ ಮಾತ್ರ ಕರ್ಮವನ್ನು ಮಾಡುವುದು, ಯಾವ ಫಲಾಪೇಕ್ಷೆಯೂ ಇಲ್ಲದಿರುವುದು. ನಾನು ನನ್ನದೆಂಬ ಯಾವುದೇ ಬಗೆಯ ಅಹಂಕಾರ ಮತ್ತು ಮಮಕಾರಗಳಿಗೆ ಅವಕಾಶವೇ ಇಲ್ಲದಿರುವುದು. ಇಲ್ಲದ ಗುಣವನ್ನು ತನ್ನಲ್ಲಿ ಆರೋಪ ಮಾಡಿಕೊಳ್ಳುವ ಮತ್ತು ಇರುವ ದೋಷವನ್ನು ಮುಚ್ಚಿಕೊಳ್ಳುವ ಸ್ವಭಾವವೂ ಧರ್ಮವಂತರಿಗೆ ಇರದು. ಇಂತಹ ಕಾರಣಗಳಿಂದಲೇ ಸಮಾಜದ ಮತ್ತು ಸಜ್ಜನವ್ಯಕ್ತಿಗಳ ಮನ್ನಣೆಗೆ ಇಂತಹ ವ್ಯಕ್ತಿ ಪಾತ್ರನಾಗುತ್ತಾನೆ. ಆದರೆ ಇಲ್ಲಿ ಹೇಳಿದ ದಂಭ ಎಂಬ ಗುಣದಿಂದ ಕೂಡಿದ ವ್ಯಕ್ತಿಯು ಇದಕ್ಕೆ ವಿರುದ್ಧವಾದ ಗುಣ ಸ್ವಭಾವದವನೇ ಆಗಿರುತ್ತಾನೆ. ಇವನ ಆಚರಣೆಯಲ್ಲಿ ಮೋಸವಿದೆ, ಆಡಂಬರವಿದೆ, ಮೌಢ್ಯವಿದೆ, ಅಜ್ಞಾನವಿದೆ, ಅವಿವೇಕವಿದೆ. ಇವುಗಳ ಕಾರಣವಾಗಿ ಹತ್ತು ಹಲವು ದುಷ್ಟಗುಣಗಳು ಅವನಲ್ಲಿ ಮನೆಮಾಡಿಕೊಂಡಿರುತ್ತವೆ. ಇಂತಹ ದಂಭ ಉಳ್ಳ ವ್ಯಕ್ತಿಯು, ತಾನೇ ಅದ್ವಿತೀಯನಾದ ಶ್ರೀಮಂತ; ತನ್ನ ಧನದಿಂದಲೇ ಅನೇಕ ಜನರ ಜೀವನ ನಡೆಯುತ್ತಿದೆ ಎಂಬ ದುರಭಿಮಾನದಿಂದ ಬೀಗುತ್ತಿರುತ್ತಾನೆ. ತನ್ನನ್ನು ಎಲ್ಲರೂ ಗೌರವಿಸುತ್ತಾರೆ; ನಾನು ಹೇಳಿದಂತೇ ಎಲ್ಲರೂ ಕೇಳುತ್ತಾರೆ; ನನಗೆ ಸದೃಶರಾದವರೂ ಯಾರೂ ಇಲ್ಲ; ನನಗೆ ಸದೃಶರಾದ ವಿದ್ಯಾವಂತ, ಬುದ್ಧಿವಂತ, ದಾನಶೀಲ, ಪರಾಕ್ರಮಿ ಇಂತಹ ಅಸದೃಶವಾದ ಗುಣ ಉಳ್ಳವರು ಯಾರೂ ಇಲ್ಲ ಎಂಬ ಭಾವ ಅವನಲ್ಲಿ ಬರುತ್ತದೆ. ನಮ್ಮ ಮನೆಯಲ್ಲಿ ಊರಲ್ಲಿ ಸಮಾಜದಲ್ಲಿ ಎಲ್ಲೆಲ್ಲೂ ನನ್ನಿಂದಲೇ ಯಾಗಾದಿಗಳು ನಡೆಯುತ್ತವೆ, ನಾನಿಲ್ಲದಿದ್ದರೆ ಇಂತಹ ಕಾರ್ಯವಾಗಲು ಸಾಧ್ಯವಿಲ್ಲ ಎಂದೆಲ್ಲಾ ಅಂದುಕೊಳ್ಳುವುದು. ನನ್ನ ಕಾರಣದಿಂದಲೇ ಜನರು ಸುಖವನ್ನು ಅನುಭವಿಸುತ್ತಿದ್ದಾರೆ. ಪ್ರತಿಯೊಬ್ಬರ ಸುಖಕ್ಕೆ ಕಾರಣ ನಾನೇ ಎಂದೆಲ್ಲಾ ಅಂದುಕೊಳ್ಳುತ್ತಾನೆ. ಇಂತಹ ಇಲ್ಲಸಲ್ಲದ ಅನಿಸಿಕೆಗಳಿಂದ ಕೂಡಿದ ವ್ಯಕ್ತಿಯ ಆಚರಣೆಗಳು ನೋಡುವುದಕ್ಕೆ ಸತ್ಕಾರ್ಯವೆಂದೆನಿಸಿದರೂ ಅಲ್ಲಿ ಸ್ವಾರ್ಥವಿದೆ. ಅಹಂಕಾರವಿದೆ. ಆತ ಯಾವ ಕಾರ್ಯವನ್ನೂ ಆಳವರಿತು ಮರ್ಮವರಿತು ಆಚರಿಸುವುದಿಲ್ಲ. ಧರ್ಮಕಾರ್ಯದ ಹೆಸರಿನಲ್ಲಿ ನಡೆಯುತ್ತಿರುವ ದಾಂಭಿಕತೆ ಅಷ್ಟೆ. ಧರ್ಮಕಾರ್ಯಕ್ಕಿರುವ ಶಕ್ತಿಯಾಗಲಿ ವೀರ್ಯವಾಗಲಿ ಈ ಕಾರ್ಯಗಳಿಗೆ ಇರುವುದಿಲ್ಲ. ವಸ್ತುತಃ ಇಂತಹ ಆಚರಣೆಗಳೇ ಮೂಢನಂಬಿಕೆ. ಮೌಢ್ಯ ಅಥವಾ ಅವೈಜ್ಞಾನಿಕ ವಿಷಯಗಳು ಹೊರತು, ಧಾರ್ಮಿಕವಾದ ಆಚರಣೆಯಲ್ಲ. ಧರ್ಮಾಚರಣೆಯಲ್ಲಿ ಕಾರ್ಯಕಾರಣಭಾವ ಸಂಬಂಧವಿದೆ. ಪ್ರತಿಕರ್ಮಗಳಿಗೆ ಸಫಲತೆ ಇದೆ. ಇದಕ್ಕೆ ಹೊರತಾದದ್ದೇ ದಂಭ.