Saturday, September 21, 2024

ಕೃಷ್ಣಕರ್ಣಾಮೃತ 31 ಲೀಲಾಶುಕನ ಲಾಲಸೆ Lilashukana Lalase

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)





ಎರಡು ಶ್ಲೋಕಗಳಲ್ಲಿ ಲೀಲಾಶುಕನು ತನ್ನ ಹೆಬ್ಬಯಕೆಯನ್ನು ಹೇಳಿಕೊಳ್ಳುತ್ತಾನೆ.

ಲಾಲಸ - ಎಂಬ ಪದಕ್ಕೆ ಲೋಭ ಎಂಬ ಅರ್ಥವಿದೆ. ಎರಡನೆಯದಾಗಿ, ಲೋಭಿ ಎಂಬ ಅರ್ಥವೂ ಇದೆ. ಲೋಭವೆಂದರೆ ತೃಷ್ಣಾತಿರೇಕ, ಉತ್ಕಟವಾದ ಅಭಿಲಾಷೆ; ಲೋಭಿಯೆಂದರೆ ಅಂತಹ ಲೋಭವುಳ್ಳವನು.

ಲಾಲಸ ಎಂಬುದರ ಎರಡನೆಯ ಅರ್ಥ ಈ ಶ್ಲೋಕದಲ್ಲಿ ಅನ್ವಿತ. ತಾನು ಲಾಲಸನೆನ್ನುತ್ತಾನೆ, ಕವಿ. ಎಂದರೆ, ಉತ್ಸಾಹದಿಂದ ಆಸೆಪಡುವವನು, ಕುತೂಹಲದಿಂದ ಅಪೇಕ್ಷಿಸುವವನು. ಹೀಗೆ ಯಾವುದೋ ವಿಷಯವನ್ನು ಕುರಿತಾಗಿ ಉತ್ಕಟವಾದ ಔತ್ಸುಕ್ಯವುಳ್ಳವನು, ಲೀಲಾಶುಕ.

ಯಾವುದರ ಬಗ್ಗೆ ಲಾಲಸೆ, ಲೀಲಾಶುಕನಿಗೆ? ಮತ್ತೇನು? ಶ್ರೀಕೃಷ್ಣನ ಬಗ್ಗೆಯೇ. ತನ್ನ ಲಾಲಸೆಯು ಶ್ರೀಕೃಷ್ಣನ ವಿಷಯದಲ್ಲಿ ಲಾಲಸೆ - ಎಂದು ವಾಚ್ಯವಾಗಿ ಹೇಳದೆ, ಕೃಷ್ಣನಿಗೆ ಸಲ್ಲುವ ತಕ್ಕ ವಿಶೇಷಣಗಳ ಮೂಲಕವೇ ಅದನ್ನು ತಿಳಿಸುತ್ತಾನೆ. ಐದು ವಿಶೇಷಣಗಳು ಬಳಕೆಯಾಗಿವೆ, ಲಾಲಸೆಯೇಕೆ ತನಗುಂಟಾಗಿದೆಯೆಂಬುದನ್ನು ತೋರಿಸಲಿಕ್ಕಾಗಿ.

ಶ್ರೀಕೃಷ್ಣನು ಒಂದು ಮಹಸ್ಸು. ಮಹಸ್ಸೆಂದರೆ ತೇಜಸ್ಸಲ್ಲವೇ? ತೇಜಸ್ವಿಯಾದ ಶ್ರೀಕೃಷ್ಣನನ್ನು ಕುರಿತಾದ ಲಾಲಸೆ. ಸಾಧಾರಣವಾಗಿ ನಮ್ಮ ಕಣ್ಣು ಬೆಳಕಿರುವತ್ತಲೇ ತಿರುಗುತ್ತದೆ. ತಮಸ್ಸನ್ನೇ ಆದಷ್ಟೂ ಆಶ್ರಯಿಸುವ ಜಿರಲೆಯ ಉದಾಹರಣೆಯನ್ನು ಶ್ರೀರಂಗಮಹಾಗುರುಗಳು ಒಮ್ಮೆ ಕೊಟ್ಟಿದ್ದರು. ಒಂದು ಸಭೆಯಲ್ಲಿ ಹತ್ತು ಮಂದಿಯಿದ್ದರೆ, ನಮ್ಮ ಕಣ್ಣು ಅವರಲ್ಲಿ ತೇಜಸ್ವಿಯಾದವನತ್ತಲೇ ಆಗಾಗ್ಗೆ ಹೋಗುವುದುಂಟು.

ಎಂತಹ ತೇಜಸ್ಸು, ನಮ್ಮ ಕೃಷ್ಣ? ಮಧುರಿಮೆಯಿಂದ ತುಂಬಿ ತುಳುಕುವ ತೇಜಸ್ಸು. ಮಧುರಿಮೆಯೆಂದರೆ ಮಾಧುರ್ಯ. ಮಾಧುರ್ಯದ ಅತಿಶಯವಿರುವ ತೇಜಸ್ಸಿದು. ಔಗ್ರ್ಯವಿರುವ, ಎಂದರೆ ಉಗ್ರತೆಯಿರುವ, ತೇಜಸ್ಸುಗಳಿಲ್ಲವೇ? ಸೂರ್ಯನ ತೇಜಸ್ಸು ಇದಕ್ಕೆ ಉದಾಹರಣೆ. ಚಂದ್ರನ ತೇಜಸ್ಸು ಮಧುರತೆಗೆ ಉದಾಹರಣೆ. ಸೂರ್ಯನನ್ನಿರಲಿ, ಆತನ ಪ್ರತಿಫಲನವನ್ನು ನೋಡಿದರೆ ಸಹ ಕಣ್ಣು ಕುಕ್ಕಿದಂತಾಗುವುದು. ಚಂದ್ರನನ್ನಾದರೆ ಬಿಟ್ಟಗಣ್ಣಿನಿಂದಲೇ ನೋಡುತ್ತಲೇ ಇರಬಹುದು. ಇದು ಮೊದಲನೆಯ ಅಂಶ. ಮಧುರತೆ-ತೇಜಸ್ವಿತೆಗಳ ಸಂಗಮವಿಲ್ಲಿದೆ. ಮುಂದೆ ಕೃಷ್ಣನ ಮುಖವನ್ನು ಚಂದ್ರನೆಂದೇ ರೂಪಕಾಲಂಕಾರದಿಂದ ಹೇಳಿದೆ.

ಎರಡನೆಯದಾಗಿ ಇದು ಮನಸ್ಸಿಗೆ ಅಭಿರಾಮವಾದದ್ದು. ಅಭಿರಾಮವೆಂದರೆ ಹೃದ್ಯ, ಹೃದಯಕ್ಕೆ ಪ್ರಿಯವಾದದ್ದು.

ಮೂರನೆಯದಾಗಿ, ಆ ತೇಜಸ್ಸಿನ ಮುಖ-ಚಂದ್ರನ ಮೇಲೆ, ಎಂದರೆ ಚಂದ್ರನಂತಿರುವ ಮುಖದ ಮೇಲೆ, ಸ್ಮಿತವು ಮುದ್ರಿತವಾಗಿದೆ. ಎಂದರೆ ನಸುನಗೆಯ ಅಚ್ಚೊತ್ತಿದೆ. ಎಂತಹ ಸ್ಮಿತವದು? ಮೃದುಲತರವಾದದ್ದು, ಎಂದರೆ ಅತಿಶಯವಾಗಿ ಕೋಮಲವಾದದ್ದು, ಹೆಚ್ಚು ಮೃದುವಾದದ್ದು.

ನಾಲ್ಕನೆಯದಾಗಿ ಲೋಭನೀಯವಾದ ತೇಜಸ್ಸದು. ಎಂದರೆ ಆಸೆಪಡಲು ಯೋಗ್ಯವಾದದ್ದು, ಸ್ಪೃಹಣೀಯವಾದದ್ದು. ಮೂರೂ ಲೋಕಗಳ ಕಣ್ಣುಗಳಿಗೆ, ತ್ರಿಭುವನ-ನಯನಗಳಿಗೆ ಲೋಭಾರ್ಹವಾದದ್ದದು. ಭೂ-ಲೋಕದಲ್ಲಿ ಮಾತ್ರವಲ್ಲ, ಇತರ-ಲೋಕಗಳಲ್ಲಿರುವವರ ಕಣ್ಣಿಗೂ ಹಬ್ಬವಾಗುವಂತಹುದು.

ಆ ತೆರನ ವಸ್ತುಗಳೋ ವ್ಯಕ್ತಿಗಳೋ ಮತ್ತಿನ್ನಾರಾದರೂ ಇರಬಹುದಲ್ಲವೇ? ಇಲ್ಲವೆನ್ನುತ್ತಾನೆ, ಕವಿ. ಅದಕ್ಕೇ "ಏಕ"ವೆಂಬ ಪದವನ್ನು ಬಳಸಿದ್ದಾನೆ. ತ್ರಿಲೋಕ-ನೇತ್ರಗಳಿಗೂ ಲೋಭ್ಯವಾದ ಏಕ-ವಸ್ತು, ಅರ್ಥಾತ್ ಏಕೈಕ-ವಸ್ತುವದು. ಎಂದೇ ಏಕ-ಲೋಭನೀಯವೆಂದಿರುವುದು. ಅರ್ಥಾತ್ ಭುವಿ-ದಿವಿಗಳಲ್ಲೆಲ್ಲೆಡೆಯಿರುವವರ ಕಣ್ಣುಗಳಿಗೂ ಉತ್ಸವವಾಗತಕ್ಕ ತೇಜಸ್ಸಿದು.

ಹಾಗಿರುವವರಿನ್ನಾರಾದರೂ ಇದ್ದರೋ? - ಎಂಬ ಸಂಶಯವು ಹುಟ್ಟದಿರಲೆಂದು ಕವಿಯು ಕೃಷ್ಣನ ವಿಳಾಸ(ಅಡ್ರೆಸ್)ವನ್ನೂ ಕೊಟ್ಟಿದ್ದಾನೆ! ಜಾಣ ಕವಿ! ವೆಂಕಟೇಶ ಅಯ್ಯಂಗಾರ್ – ಎಂಬ ಹೆಸರಿನವರು ಎಷ್ಟೋ ಜನ ಇರಬಹುದು; ಮಾಸ್ತಿ ವೆಂಕಟೇಶ ಅಯ್ಯಂಗಾರ್ ಎಂದರೆ ಒಬ್ಬರೇ. ಅವರ ಊರು ಮಾಸ್ತಿ. ಅವರ ಹುಟ್ಟೂರು ಬೇರೆಯಿದ್ದರೂ, ಬಾಲ್ಯವೆಲ್ಲ ಮಾಸ್ತಿಯಲ್ಲೇ ಕಳೆಯಿತಾಗಿ, ಅವರ ಹೆಸರಿಗೆ ಅದೇ ಅಂಟಿಕೊಂಡಿತು.

ಹಾಗೆಯೇ ಕೃಷ್ಣನ ವಿಷಯದಲ್ಲೂ: ಹುಟ್ಟಿದ್ದು ಮತ್ತೆಲ್ಲೋ ಆದರೂ, ಬೆಳೆದದ್ದೆಲ್ಲಾ ಗೋಕುಲದಲ್ಲೇ. ವ್ರಜವೆಂದರೆ ಆ ನಂದ-ಗೋಕುಲವೇ. ವ್ರಜ-ವಾಸಿಯೆಂದರೆ ಸಾಕ್ಷಾತ್ ಕೃಷ್ಣನೇ.  ನೂರಾರು ಮಂದಿ ವ್ರಜದಲ್ಲಿ ವಾಸಮಾಡಿ(ದ್ದ)ದವರಿರಬಹುದು; ಈಗಲೂ ಕೃಷ್ಣನೆಂಬ ಹೆಸರಿನವರೇ ಅಲ್ಲೇ ವಾಸವಾಗಿದ್ದರೂ ಅಷ್ಟೇ! ನಂದ-ವ್ರಜದವನು - ಎಂದುಬಿಟ್ಟರೆ ಮುಗಿಯಿತು. ಆ ನಂದ-ಗೋಕುಲದಲ್ಲಾಡಿದ ಶ್ರೀಕೃಷ್ಣನ ಪರಮಾಕರ್ಷಕ-ರೂಪವನ್ನೇ ಹೇಳುತ್ತಿದೆ, ಈ ಶ್ಲೋಕ:

ಮಧುರಿಮ-ಭರಿತೇ ಮನೋಭಿರಾಮೇ

ಮೃದುಲತರ-ಸ್ಮಿತ-ಮುದ್ರಿತಾನನೇಂದೌ |

ತ್ರಿಭುವನ-ನಯನೈಕ-ಲೋಭನೀಯೇ

ಮಹಸಿ ವಯಂ ವ್ರಜ-ಭಾಜಿ ಲಾಲಸಾಃ ಸ್ಮಃ ||


ಈ ಶ್ಲೋಕದ ಕೊನೆಯಲ್ಲಿ ಬಂದಿರುವ "ಲಾಲಸಾಃ ಸ್ಮಃ" "ನಾವು ಲಾಲಸರಾಗಿದ್ದೇವೆ" ಎಂಬ ಮಾತೇ ಇದರ ಮುಂದಿನ ಶ್ಲೋಕದಲ್ಲೂ ಬಂದಿದೆ:

ಮುಖಾರವಿಂದೇ ಮಕರಂದ-ಬಿಂದು-

-ನಿಷ್ಯಂದ-ಲೀಲಾ-ಮುರಲೀ-ನಿನಾದೇ |

ವ್ರಜಾಂಗನಾಪಾಂಗ-ತರಂಗ-ಭಂಗ-

ಸಂಗ್ರಾಮ-ಭೂಮೌ ತವ ಲಾಲಸಾಃ ಸ್ಮಃ ||


ಶ್ರೀಕೃಷ್ಣನನ್ನೇ ಸಂಬೋಧಿಸಿ ಹೇಳಿರುವ ಶ್ಲೋಕವಿದು.

ಕೃಷ್ಣನ ಮುಖ ಕಮಲದಂತೆ. ಕಮಲವೆಂದರೆ ಶ್ರೇಷ್ಠವಾದ ಹೂ ತಾನೇ? ಮತ್ತು ಹೂವಿನ ಸಾರವೆಂದರೆ ಅದರ ಮಕರಂದವೇ ತಾನೇ? ಹಾಗಾದರೆ ಈ ಕಮಲದಲ್ಲಿ ಪುಷ್ಪ-ರಸವೆನ್ನಲು ಏನಿದೆ? ಕೃಷ್ಣನ ಕೊಳಲಿನ ನಾದವೇ ಆ ಕುಸುಮ-ರಸ!

ಇತರ ಹೂಗಳಿಗಿಂತ ವಿಶೇಷವಾದದ್ದು ಈ ಹೂವಿನಲ್ಲಿದೆ. ಉಳಿದ ಸುಮಗಳಲ್ಲಿ ಕೆಲವೆರಡು ಮಕರಂದ-ಬಿಂದುಗಳು ಶೇಖರಣೆಗೊಂಡಿದ್ದಿರಬಹುದು, ಅಷ್ಟೆ. ಆದರೆ ಇಲ್ಲಿ ಬಿಂದುಗಳ ನಿಷ್ಯಂದವೇ ಇದೆ. ನಿಷ್ಯಂದವೆಂದರೆ ಪ್ರವಾಹ. ಕೃಷ್ಣನ ಮುರಳೀ-ನಿನಾದವೆಂಬುದೂ ಒಂದು ಧಾರೆಯೇ ತಾನೆ? ಏನೋ ಒಂದೆರಡು ಕ್ಷಣಗಳ ಒಂದೆರಡು ಸ್ವರಗಳ ಉಲಿಯಲ್ಲ, ಅದು. ಧಾರಾಕಾರವಾದ ನಾದವದು. ಹೀಗಾಗಿ, ಮಕರಂದ-ಬಿಂದು-ನಿಷ್ಯಂದವೆಂಬುದು ಮುರಳೀ-ನಿನಾದ-ಧಾರೆಯೆಂಬಂತೆ. ಎಂಬಂತೆಯೇನು? ಅದೇ ಇದು – ಎಂಬ ರೂಪಕಾಲಂಕಾರವೇ ಮತ್ತೆ.

ಮತ್ತು ಈ ವೇಣುವಾದನದಲ್ಲಿ ವಿಶೇಷವೂ ಒಂದಿದೆ. ಅದು ಲೀಲೆಯಿಂದ ಆಗುತ್ತಿದೆ, ಜೊತೆಗೇ ಲೀಲೆಗಾಗಿ ಆಗುತ್ತಿದೆ. ಅರ್ಥಾತ್, ಅನಾಯಾಸವಾಗಿ ಆಗುತ್ತಿದೆ, ವಿಲಾಸಕ್ಕಾಗಿ ಆಗುತ್ತಿದೆ. ಕ್ರೀಡೆಗಾಗಿಯೇ ಆಗುತ್ತಿದೆ. ಎಂದೇ ಇದು ಕೇವಲ ಮುರಲೀ-ನಿನಾದವಲ್ಲ; ಲೀಲಾ-ಮುರಲೀ-ನಿನಾದ.

ಇದಲ್ಲದೆ ಈ ಕಮಲವು ಒಂದು ಸಂಗ್ರಾಮ-ಭೂಮಿಯೂ ಆಗಿದೆ. ಅರವಿಂದವೆಂತು ರಣ-ರಂಗವಾದೀತ್? ಹೌದು, ಅದು ಭೃಂಗಗಳ ಸಂಗ್ರಾಮ-ರಂಗ. ದುಂಬಿಗಳು ದುಂಬಾಲುಬಿದ್ದಿರುವ ಪ್ರಸೂನವದು. ಶ್ರೀಕೃಷ್ಣ-ಮುಖ-ಪದ್ಮವನ್ನು ಮುತ್ತುವ ಭೃಂಗಗಳಾವುವು? ಗೋಪಿಕೆಯರ ಕುಡಿ-ನೋಟಗಳು!  ವ್ರಜಾಂಗನೆಯರ ಅಪಾಂಗಗಳೇ ಆ ಭೃಂಗಗಳು.

ಅವುಗಳೇ ತರಂಗ-ಭಂಗವಾಗಿ ಬರುತ್ತಿವೆ - ಎಂದರೆ ಅಲೆಯಲೆಯಾಗಿ ಬರುತ್ತಿವೆ. ವ್ರಜ-ನಾರಿಯರ ನೇತ್ರಗಳ ಕಣ್ಗುಡ್ಡೆಗಳು ಕಪ್ಪಲ್ಲವೇ? ಅವರು ತಮ್ಮ ಕಣ್ಣಂಚುಗಳಿಂದ ಆತನನ್ನು ಮತ್ತೆ ಮತ್ತೆ ನೋಡುತ್ತಿರುವುದೇ ಅವರ ಅಪಾಂಗಗಳ ತರಂಗ-ಭಂಗಗಳು.

ಅಂತೂ ತಾತ್ಪರ್ಯವೆಂದರೆ ಗೋಪಿಕೆಯರ ಕುಡಿನೋಟಗಳು ಪೈಪೋಟಿಯ ಮೇಲೆಂಬಂತೆ ಕೃಷ್ಣನ ಮುಖಾರವಿಂದದ ಮೇಲೆ ಪ್ರಭಾವ ಬೀರುತ್ತಿವೆ.  ಅವರ ಅಪಾಂಗ-ವೀಕ್ಷಿತಗಳನ್ನೇ ದುಂಬಿಗಳನ್ನಾಗಿಸಿದೆ, ಇಲ್ಲಿ. ಹೀಗೆ ಅಹಮಹಮಿಕೆಯಿಂದ ಗೋಪಿಯರ ಕಣ್ಣೋಟಗಳು ಕೃಷ್ಣನ ಸುಂದರ-ಮುಖಕಮಲವನ್ನು ಪಾತ್ರವನ್ನಾಗಿಸಿಕೊಳ್ಳುತ್ತಿರುವುದನ್ನೇ, ಹಾಗೆ ಚಿತ್ರಿಸಿದೆ.

ಹೀಗೆ ಅನೇಕ-ಗೋಪಿಕಾ-ನೇತ್ರ-ಪಾತ್ರವಾದ ಶ್ರೀಕೃಷ್ಣ-ವದನಾರವಿಂದವನ್ನಿಲ್ಲಿ ಸ್ತುತಿಸಿದೆ.

ಹಿಂದಿನ ಶ್ಲೋಕದಲ್ಲಿ ಮುಖ-ಚಂದ್ರವೆಂಬ ರೂಪಕ, ಈ ಶ್ಲೋಕದಲ್ಲಿ ಮುಖ-ಕಮಲವೆಂಬ ರೂಪಕ. ಎರಡು ಶ್ಲೋಕಗಳೂ ಬೇರೆ ಬೇರೆ ವೃತ್ತಗಳಲ್ಲಿದ್ದರೂ, ಲಾಲಸಾಃ ಸ್ಮಃ ಎಂದೇ ಕೊನೆಗೊಂಡಿವೆ. ಲೀಲಾಶುಕನ ಹಾರ್ದಾಭಿಲಾಷೆಯನ್ನೇ ಬಿಂಬಿಸುತ್ತಿವೆ.

ಸೂಚನೆ : 21/09/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ