Sunday, September 15, 2024

ಅಷ್ಟಾಕ್ಷರೀ 65 ಅಂಗುಲೀಯಂ ಅಭಿಜ್ಞಾನಂ ( ಅಷ್ಟಾಕ್ಷರೀ 65 Anguliyam Abhijnanam)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಕಾಳಿದಾಸನು ಶಾಕುಂತಲ-ನಾಟಕವನ್ನು ಬರೆದನೆಂಬುದನ್ನು ಯಾವ ಭಾರತೀಯನರಿಯ? ನಾಟಕದ ಪೂರ್ಣವಾದ ಹೆಸರೇನೆಂಬುದನ್ನು ಅರಿತಿಲ್ಲದವರಿರಬಹುದು. ಅದು "ಅಭಿಜ್ಞಾನ-ಶಾಕುಂತಲ"ವೆಂದು. 

ಏನು ಹಾಗೆಂದರೆ? ಅಭಿಜ್ಞಾನ(ಅಥವಾ ಪ್ರತ್ಯಭಿಜ್ಞಾನ)ವೆಂದರೆ ಗುರುತಿಸುವುದು. ಎಷ್ಟೋ ವರ್ಷಗಳಿಂದ ಒಬ್ಬರನ್ನು ನೋಡಿಲ್ಲದಿದ್ದಲ್ಲಿ ಗುರುತಿಸುವುದೇ ಕಷ್ಟವಾಗಬಹುದು: ಅವರಲ್ಲಿ ಅಷ್ಟರಲ್ಲಿ ಏನೇನೋ ಬದಲಾವಣೆಗಳಾಗಿರಬಹುದು; ವೇಷಾಂತರದಲ್ಲಿ ಬಂದರಂತೂ ಗುರುತುಹಿಡಿಯುವುದು ಕಷ್ಟವೇ.

ನಮ್ಮಲ್ಲಿ ಬದಲಾಗದಿರುವ ಒಂದೆರಡು ಅಂಶಗಳು ಇರಬಹುದು. ಉದಾಹರಣೆಗೆ ಕಣ್ಣಿನ ಅಚ್ಚು ಬಹುತೇಕ ಹಾಗೇ ಉಳಿದಿರುವುದು. ಕೆಲವೊಮ್ಮೆ ಯಾವುದೋ ವಿಶಿಷ್ಟವಾದ ವೇಷವೋ ಆಭರಣವೋ ಅಲಂಕಾರವೋ ನೆನಪುಕೊಡಬಹುದು. ನೆನಪು ಕೊಡುವ ವಸ್ತು ಅಭಿಜ್ಞಾಪಕ. ಅಭಿಜ್ಞಾನವೆಂದರೂ ಅದೇ. 

ಅಲ್ಲಿಗೆ ಅಭಿಜ್ಞಾನವೆಂದರೆ ಎರಡು ಅರ್ಥಗಳಾದುವು. ಮೊದಲನೆಯದು, ಗುರುತಿಸುವಿಕೆಯೆಂಬ ಕ್ರಿಯೆ. ಎರಡನೆಯದು, ಈ ಗುರುತಿಸುವಿಕೆಗೆ ಸಾಧನವಾಗುವ ವಸ್ತು: ಸ್ಮಾರಕ.

ನಾಟಕದ ಶೀರ್ಷಿಕೆಯಲ್ಲಿ ಬಂದಿರುವ ಅಭಿಜ್ಞಾನವು ಗುರುತಿಗೆ ಸಾಧನವಾದದ್ದೇ. ಕಾಳಿದಾಸನ ಶಾಕುಂತಲ-ಕಥೆಯನ್ನು ಬಲ್ಲವರಿಗಿದು ತಿಳಿದಿರುತ್ತದೆ. ದುರ್ವಾಸ-ಮಹರ್ಷಿಗಳ ಶಾಪದಿಂದಾಗಿ, ಶಕುಂತಲೆಯ ನೆನಪೇ ಮಾಸಿರುತ್ತದೆ, ದುಷ್ಯಂತನಿಗೆ. ಕೊನೆಗೆ ಉಂಗುರವು ಸಿಕ್ಕಾಗ, ನೆನಪು ಹಸಿರಾಗುತ್ತದೆ.  

ದೀರ್ಘಕಾಲ ಎದುರಿಗೆ ಬಂದಿಲ್ಲದ ವ್ಯಕ್ತಿಯನ್ನು ಮರೆತಂತಾಗಿದ್ದರೂ, ಅದೇ ವ್ಯಕ್ತಿ ಎದುರಾದಾಗ  ಗುರುತಿಸಿಬಿಡುವೆವು. ಕೆಲವೊಮ್ಮೆ - ಎಂದರೆ ಮರೆವಿಗೆ ಪ್ರಬಲವಾದ ಕಾರಣವಿದ್ದಾಗ ಮಾತ್ರ - ಎದುರಿಗೆ ಬಂದವರನ್ನೂ ಗುರುತಿಸಲಾಗದೇ ಹೋಗಬಹುದು. ದುಷ್ಯಂತನಿಗಾದುದು ಹಾಗೆಯೇ: ಎದುರಿಗೆ ಬಂದು ನಿಂತವಳು ಪ್ರಾಣ-ಪ್ರಿಯೆಯಾಗಿದ್ದ ಶಕುಂತಲೆ: ಗುರುತಿಸಲಾಯಿತೇ?

ಎದುರಿಗಿಲ್ಲದವರನ್ನೂ ಸ್ಮರಿಸಿಕೊಳ್ಳುವುದೂ ಉಂಟು. ಅವರಿಗೆ ಸೇರಿದ ಯಾವುದಾದರೂ ವಸ್ತುವು ಕಂಡಾಗ ಹಾಗಾಗುವುದು. ಅಂತಹ ವಸ್ತುವೇ ಅಭಿಜ್ಞಾನ. ದುಷ್ಯಂತನು ಶಕುಂತಲೆಗಿತ್ತ ಉಂಗುರವು ಅಭಿಜ್ಞಾನ. ಶಾಕುಂತಲದ ವಿಸ್ಮಯವೆಂದರೆ, ವ್ಯಕ್ತಿಯೇ ಎದುರಿಗೆ ಬಂದಾಗ ಉಂಟಾಗದ ಪ್ರತ್ಯಭಿಜ್ಞಾನವು, ಕಾಲಾಂತರದಲ್ಲಿ ಅಭಿಜ್ಞಾನವೊಂದರಿಂದ ಆದದ್ದು! ಅಭಿಜ್ಞಾನವೊಂದರಿಂದ ಶಕುಂತಲೆಯ ಸ್ಮೃತಿಯು ಚಿಮ್ಮುವುದನ್ನೇ ಅಭಿಜ್ಞಾನ-ಶಾಕುಂತಲವೆಂಬ ಹೆಸರು ಹೇಳುತ್ತದೆ.

ಹೀಗೆ ಅಭಿಜ್ಞಾನದಿಂದಾಗಿ ಸ್ಮರಣೆಯುಕ್ಕುವ ತಂತ್ರವು ಶಾಕುಂತಲದಿಂದಲೇ ಆರಂಭವಾದುದಲ್ಲ. ಭಾಸ-ಮಹಾಕವಿಯ ಸ್ವಪ್ನವಾಸವದತ್ತ-ನಾಟಕದಲ್ಲೂ ಇದುಂಟು: ತಾನು ಸತ್ತ ಸುದ್ದಿ ಹಬ್ಬಿಸಿ ವಾಸವದತ್ತೆಯು ದೀರ್ಘ-ಕಾಲ ಕಣ್ಮರೆಯಾಗಿರುತ್ತಾಳೆ; ಪತಿ ಉದಯನನಿಗೆ ಮತ್ತೊಂದು ಮದುವೆಯೂ ಆಗಿಬಿಡುತ್ತದೆ; ಆದರೂ ಆಕಸ್ಮಿಕವಾಗಿ ಆಕೆಯ ಘೋಷವತೀ-ವೀಣೆಯು ದೊರಕಲಾಗಿ, ವಾಸವದತ್ತೆಯ ನೆನಪು ಉದಯನನ ಚಿತ್ತದಲ್ಲಿ ಮರುಕಳಿಸುತ್ತದೆ; ಅವಳೂ ದೊರೆತಾಳೆಂಬ ಆಶೆಯನ್ನದು ಚಿಗುರಿಸುತ್ತದೆ. ಉಂಗುರ ಸಿಕ್ಕಮೇಲೆ ಶಕುಂತಲೆಯೂ ದಕ್ಕಿದಳಲ್ಲವೇ?

ಇದಕ್ಕೂ ಮೊದಲಿನ ಅದಿ-ಕಾವ್ಯವಾದ ರಾಮಾಯಣದಲ್ಲೇ ಅಭಿಜ್ಞಾನದ ಪಾತ್ರವುಂಟು. ಸೀತಾನ್ವೇಷಣೆಗಾಗಿ ಅನೇಕಾನೇಕ-ವಾನರರನ್ನು ನಾನಾ-ದಿಕ್ಕುಗಳಿಗೆ ಸುಗ್ರೀವನು ಕಳುಹಿಸುವನಷ್ಟೆ. ಆದರೂ ನೆಚ್ಚಿಕೆಯಿದ್ದುದು ಹನುಮಂತನ ಮೇಲೆಯೇ. ಅಪ್ಪನ ಮಗನಲ್ಲವೇ ಆತ? ಎಂದೇ ವಾಯುದೇವನ ಗತಿ-ವೇಗ-ತೇಜಸ್ಸು-ಲಾಘವಗಳು ಹನುಮಂತನಲ್ಲಿದ್ದವು. ಆತನೇ "ನಯ-ಪಂಡಿತ": ಆತನಲ್ಲೇ ಬಲ-ಬುದ್ಧಿ-ಪರಾಕ್ರಮಗಳೂ ದೇಶ-ಕಾಲಾನುವೃತ್ತಿಯೂ  (ಎಂದರೆ ದೇಶ-ಕಾಲಗಳನ್ನನುಸರಿಸಿ ತನ್ನ ವರ್ತನೆಯನ್ನು ವ್ಯವಸ್ಥೆಗೊಳಿಸಿಕೊಳ್ಳುವ ಸಾಮರ್ಥ್ಯ; ಔಚಿತ್ಯ-ಪ್ರಜ್ಞೆ) ಇರತಕ್ಕವು. 

ಈತನ ಗುಣ-ಗಾನವನ್ನು ಸುಗ್ರೀವನು ಹೀಗೆ ಮಾಡಿದ ಮೇಲೆ ಶ್ರೀರಾಮನು ಅಭಿಜ್ಞಾನವಾಗುವ ವಸ್ತುವನ್ನು - ತನ್ನ ಹೆಸರಿನ ಅಂಕಿತವುಳ್ಳ ಅಂಗುಲೀಯ(ಉಂಗುರ)ವನ್ನು - ಹನುಮಂತನಿಗೇ ಕೊಡುವುದು. (ಹನುಮಂತನ ಸಾಮರ್ಥ್ಯವೇನೆಂಬುದನ್ನು ಪ್ರಥಮ-ಮಿಲನದಲ್ಲಿಯೇ ರಾಮನೂ ಕಂಡುಕೊಂಡಾಗಿತ್ತಷ್ಟೆ.) ಎಂದೇ ಈ ಸಂದರ್ಭದಲ್ಲಿ ವಾಲ್ಮೀಕಿಗಳ ಮಾತೂ "ಅಂಗುಲೀಯಂ ಅಭಿಜ್ಞಾನಂ" ಎಂಬುದಾಗಿ. ಸೀತೆಯು ಪ್ರತಿಯಾಗಿ ಕೊಡುವ ಚೂಡಾಮಣಿಯೂ ಅಭಿಜ್ಞಾನವೇ.

ಇಂತಹ ಅಭಿಜ್ಞಾನವನ್ನು ಕುರಿತು ಶ್ರೀರಂಗ-ಮಹಾಗುರುಗಳಾಡಿದ ಮಾತು ಸ್ಮರಣೀಯವಾಗಿದೆ: "ಮೂಲ-ವಸ್ತುವಿಗೆ ಪ್ರತೀಕವೂ ಪ್ರತಿನಿಧಿಯೂ ಪ್ರತಿಮೆಯೂ ಆಗಬಲ್ಲುದು,  ಅಭಿಜ್ಞಾನವೆಂಬುದು" ಎಂದು. ಇದು ಭಗವಂತನ ಮೂರ್ತಿಗಳಿಗೂ ಸಲ್ಲತಕ್ಕದ್ದೇ. ಮೂಲ-ವಸ್ತುವಾದ ಭಗವಂತನೇ ನಿಧಿ; ಮೂರ್ತಿಗಳು ಆತನಿಗೆ ಪ್ರತಿನಿಧಿ. ಹಾಗೆಯೇ ಆ ಮೂಲದ ಪ್ರತೀಕವೂ ಹೌದು; ಪ್ರತಿಮೆಯೆಂಬುದಂತೂ ಸುಗೋಚರವೇ. 

ಭಾಸನಿಗೂ ವಾಲ್ಮೀಕಿ-ಮಹರ್ಷಿಗೂ ಕಾಳಿದಾಸನು ಋಣಿ - ಅಭಿಜ್ಞಾನದ ಬಳಕೆಯಲ್ಲಿ. ಆದರೂ, ಇಬ್ಬರಿಗಿಂತಲೂ ಹೆಚ್ಚು ಸಮರ್ಥವಾಗಿ ಅದನ್ನು ಬಳಸಿದ್ದಾನೆನ್ನಬಹುದು. ತಮಗೆ ಅತ್ಯಂತ-ಪ್ರೀತಿ-ಪಾತ್ರನಾದ/ಳಾದ ವ್ಯಕ್ತಿಯನ್ನು ಸೀತೆಯಾಗಲಿ ಉದಯನನಾಗಲಿ ಮರೆತೇ ಇರಲಿಲ್ಲ. ಆದರೆ ಶಕುಂತಲೆಯನ್ನು ಕುರಿತು ಮರೆವೇ ಆವರಿಸಿತ್ತು, ದುಷ್ಯಂತನಿಗೆ: ಆದರಿದೋ ಥಟ್ಟನೆ ಅವಳ ಉತ್ಕಟ-ಸ್ಮೃತಿಯನ್ನೇ ತಂದುಕೊಟ್ಟಿತಲ್ಲವೇ ಅಭಿಜ್ಞಾನ? 

ಕಾಶ್ಮೀರದ ಪ್ರತ್ಯಭಿಜ್ಞಾ-ದರ್ಶನದಂತೆ, ಭಗವತ್-ಸ್ಮೃತಿಗೂ ಈ ಕ್ರಮವು ಅನ್ವಯಿಸುವುದು. ಅಂತೂ ಈ ರಹಸ್ಯವೂ ರಮಣೀಯವೂ ಶ್ರೇಷ್ಠವೂ ಆದ  ತತ್ತ್ವವನ್ನು ಬಳಸಿ, ಅಭಿಜ್ಞಾನದ ಸಾರ್ಥಕ್ಯವನ್ನು ಅದ್ಭುತವಾಗಿಯೇ ಮೆರೆಸಿದ್ದಾನಲ್ಲವೇ, ನಮ್ಮೀ ಲೋಕೋತ್ತರ-ಕವಿ?

ಸೂಚನೆ: 14/09/2024 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.