Tuesday, September 3, 2024

ವ್ಯಾಸ ವೀಕ್ಷಿತ 102 ಮುಂದುವರೆದ ಅರ್ಜುನನ ತೀರ್ಥಾಟನ (Vyasa Vikshita 102 Munduvareda Arjunana Tirthatana)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)





ಅರ್ಜುನನ ಕೋರಿಕೆಗೆ ಉತ್ತರವಾಗಿ ಚಿತ್ರವಾಹನನು ಹೇಳಿದನು: "ನನ್ನ ವಂಶದಲ್ಲಿ ಹಿಂದೆ ಪ್ರಭಂಜನನೆಂಬ ರಾಜನೊಬ್ಬನಿದ್ದ. ಆತನಿಗೆ ಮಕ್ಕಳಿರಲಿಲ್ಲ ಅದಕ್ಕಾಗಿ ಆತನು ಉತ್ತಮವಾದ ತಪಸ್ಸನ್ನು ಮಾಡಿದ. ಪಿನಾಕ-ಧಾರಿಯೂ ಉಮಾ-ಪತಿಯೂ ಆದ ಈಶ್ವರನು ಆತನ ಉಗ್ರ-ತಪಸ್ಸಿಗೆ ಮೆಚ್ಚಿ, ಸಂತುಷ್ಟನಾಗಿ, "ನಿನ್ನ ವಂಶದಲ್ಲಿ ಒಬ್ಬೊಬ್ಬರಿಗೂ ಒಂದೊಂದು ಮಗುವಾಗುವುದು" - ಎಂಬ ವರವನ್ನಿತ್ತನು.


ಅಂದಿನಿಂದ ನನ್ನ ಕುಲದಲ್ಲಿ ಒಂದೊಂದೇ ಸಂತಾನವಾಗುತ್ತಿದೆ. ನನ್ನ ಪೂರ್ವಜರೆಲ್ಲರಿಗೂ ಗಂಡುಮಕ್ಕಳಾಗುತ್ತಿದ್ದರು. ಆದರೆ ನನಗೆ ಕನ್ಯೆಯೊಬ್ಬಳು ಹುಟ್ಟಿದ್ದಾಳೆ. ನನ್ನ ವಂಶವನ್ನು ಬೆಳೆಸತಕ್ಕವಳು ಇವಳೇ. ಆದ್ದರಿಂದ ಇವಳು ನನ್ನ ಪಾಲಿನ ಮಗನೆಂದೇ ನನಗೆ ಇವಳ ಬಗ್ಗೆ ಭಾವನೆ ಬಂದಿದೆ.


ಅವಳಿಗೆ ಜನಿಸುವ ಪುತ್ರನು ನನ್ನ ಪುತ್ರನಂತೆಯೇ - ಎಂಬ ಲೆಕ್ಕ ನನ್ನದು. ಆತನೇ ನನಗೆ ಕುಲ-ಪ್ರವರ್ತಕನಾಗತಕ್ಕವನು. ಇವಳನ್ನು ನೀನು ವಿವಾಹವಾಗಬೇಕಾದರೆ ಇದೇ ಶುಲ್ಕ. ಅದಕ್ಕೆ ನೀನು ಒಪ್ಪಬೇಕಾಗುತ್ತದೆ. ಈ ಒಪ್ಪಂದದ ಮೇಲೆ ನೀನಿವಳನ್ನು ವಿವಾಹವಾಗಬಹುದು - ಎಂದನು.


ಅರ್ಜುನನು ಹಾಗೆಯೇ ಆಗಲಿ - ಎಂದನು. ಆ ಕನ್ಯೆಯನ್ನು ಸ್ವೀಕರಿಸಿದನು. ಮೂರು ವರ್ಷಗಳ ಕಾಲ ಅದೇ ನಗರದಲ್ಲಿ ವಾಸಮಾಡಿದನು. ಅವಳಿಗೊಂದು ಗಂಡುಮಗುವಾಯಿತು. ಆನಂತರ ಅವಳನ್ನು ಆಲಿಂಗಿಸಿಕೊಂಡು ರಾಜನಿಂದ ಬೀಳ್ಕೊಡಲ್ಪಟ್ಟವನಾಗಿ, ಅರ್ಜುನನು ಮತ್ತೆ ತೀರ್ಥ-ಕ್ಷೇತ್ರಗಳಲ್ಲಿ ಭ್ರಮಣಕ್ಕಾಗಿ ಹೊರಟನು.


ಆ ಬಳಿಕ ಅರ್ಜುನನು ದಕ್ಷಿಣ-ಸಮುದ್ರದ ದಡದಲ್ಲಿಯ ಪುಣ್ಯ-ತೀರ್ಥಗಳಿಗೆ ಹೋದನು. ತಪಸ್ವಿಗಳಿಂದ ಅವು ಸುಶೋಭಿತವಾಗಿದ್ದವು. ಅಲ್ಲಿಯ ತಪಸ್ವಿಗಳು ಐದು ತೀರ್ಥಗಳನ್ನು ವರ್ಜಿಸುತ್ತಿದ್ದರು. ಹಿಂದೆ ತಾಪಸರಿಂದ ಕಿಕ್ಕಿರಿದಿದ್ದ ಎಡೆಗಳಾಗಿದ್ದವು, ಅವುಗಳು. ಅವುಗಳಿವು: ಅಗಸ್ತ್ಯ-ತೀರ್ಥ, ಸೌಭದ್ರ-ತೀರ್ಥ, ಪೌಲೋಮ-ತೀರ್ಥ, ಅಶ್ವಮೇಧದ ಫಲವನ್ನು ಕೊಡುವ ಕಾರಂಧಮ-ತೀರ್ಥ, ಹಾಗೂ ಪಾಪ-ಪ್ರಶಮನವುಂಟುಮಾಡುವ ಭಾರದ್ವಾಜ-ತೀರ್ಥ. 


ಹೀಗೆ ಈ ಐದು ತೀರ್ಥಗಳನ್ನು ಅರ್ಜುನನು ಕಂಡನು. ಆದರೆ ಈ ಐದೂ ದೂರದಲ್ಲಿ ಬೇರೆಯಾಗಿದ್ದವು. ಧರ್ಮಬುದ್ಧಿಯುಳ್ಳ ಮುನಿಗಳು ಇವನ್ನು ವರ್ಜಿಸುತ್ತಿದ್ದರು.


ಆ ಕಾರಣಕ್ಕಾಗಿ ಅರ್ಜುನನು ಅವರನ್ನು ಕೇಳಿದನು - ಈ ಐದು ತೀರ್ಥಗಳನ್ನು ನೀವುಗಳು ತೊರೆದಿರುವಿರೇಕೆ? - ಎಂದು. ಅದಕ್ಕವರು ಹೇಳಿದರು: ಇವುಗಳಲ್ಲಿ ಐದು ಮೊಸಳೆಗಳಿವೆ. ಸ್ನಾನಕ್ಕಾಗಿ ಹೋದವರನ್ನು ಅವು ಸೆಳೆದುಕೊಂಡುಬಿಡುತ್ತವೆ.


ಆಮೇಲೆ ಅವರೆ ಬೇಡವೆನ್ನುತ್ತಿದ್ದರೂ ಅರ್ಜುನನು ಅವನ್ನು ನೋಡಲು ಹೋದನು. ಸೌಭದ್ರ-ತೀರ್ಥದಲ್ಲಿಳಿದು ಸ್ನಾನಮಾಡಿದನು. ಆ ಸಮಯಕ್ಕೇ ಒಂದು ಮಹಾ-ಗ್ರಾಹವು, ಎಂದರೆ ದೊಡ್ಡ ಮೊಸಳೆಯು, ಅರ್ಜುನನ ಕಾಲನ್ನು ಹಿಡಿದುಕೊಂಡಿತು. ಮೇಲೆರಗಿ ಚಡಪಡಿಸುತ್ತಿದ್ದ ಆ ನಕ್ರವನ್ನು ಹಿಡಿದುಕೊಂಡೇ ಆ ಮಹಾಬಾಹುವಾದ ಅರ್ಜುನನು ನೀರಿನಾಚೆ ಬಂದನು.


ಅರ್ಜುನನಿಂದ ಹೀಗೆ ಹೊರಸೆಳೆಯಲ್ಪಟ್ಟ ಆ ಮೊಸಳೆಯು ಒಡನೆಯೇ ಸರ್ವಾಭರಣ-ಭೂಷಿತೆಯಾದ ನಾರಿಯಾಗಿ ಮಾರ್ಪಟ್ಟಿತು. ಆಕೆಯಾದರೂ ಕಾಂತಿಯಿಂದ ಬೆಳಗುತ್ತಿದ್ದಳು. ದಿವ್ಯವಾದ ರೂಪವನ್ನು ಹೊಂದಿದ್ದ ಅವಳು ಚಿತ್ತಾಕರ್ಷಕಳಾಗಿದ್ದಳು.


ಆ ಮಹಾದ್ಭುತವನ್ನು ಕಂಡ ಅರ್ಜುನನು, "ಕಲ್ಯಾಣಿ, ನೀನಾರು? ಜಲಚರಳಾಗಿರುವೆಯೇಕೆ? ಇದೆಂತಹ ಪಾಪಕಾರ್ಯದಿಂದಾಗಿ ನೀ ಹೀಗಾದೆ?" – ಎಂಬುದಾಗಿ ಕೇಳಿದನು.


ಸೂಚನೆ : 1/9/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.