Tuesday, September 24, 2024

ಯಕ್ಷ ಪ್ರಶ್ನೆ 107 (Yaksha prashne 107)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)




ಪ್ರಶ್ನೆ –  106 ಪೈಶುನ್ಯ ಎಂದರೇನು  ?

ಉತ್ತರ - ಬೇರೆಯವರನ್ನು ದೂಷಿಸುವುದು. 

ಪೈಶುನ್ಯ ಎಂದರೆ ಕಿವಿಯಲ್ಲಿ ಹೇಳುವುದು. ಅಂದರೆ ಒಬ್ಬರ ಬಗ್ಗೆ ಇನ್ನೊಬ್ಬರಲ್ಲಿ ಚಾಡಿ ಹೇಳುವುದು ಎಂದರ್ಥ. ಚಾಡಿ ಹೇಳುವುದು ಎಂದರೆ ಇದ್ದಿದ್ದನ್ನು ಇದ್ದ ಹಾಗೇ ಹೇಳುವುದಲ್ಲ. ಇದ್ದಿದ್ದನ್ನು ಇಲ್ಲದಂತೆ ಮಾಡಿ ಅಥವಾ ಇಲ್ಲದ್ದನ್ನು ಇದ್ದಂತೆ ಮಾಡಿ ಹೇಳುವುದೇ ಚಾಡಿ ಹೇಳುವುದು ಎಂದರ್ಥ. ಒಬ್ಬರ ಬಗ್ಗೆ ಇರುವ ಸದಭಿಪ್ರಾಯವನ್ನು ಕೆಡಿಸುವ ಪ್ರಯತ್ನವಿದಾಗಿದೆ. ಇದು ಕೆಲವರ ಸ್ವಭಾವವಾಗಿರುತ್ತದೆ. ಬೇರೆಯವರ ಬಗ್ಗೆ ಹೇಳುವುದರಲ್ಲೇ ಅವರಿಗೆ ಎಲ್ಲಿಲ್ಲದ ಸಂತೋಷವನ್ನು ಕಾಣಲು ಸಾಧ್ಯವಾಗುತ್ತದೆ. ಬೇರೆಯವರ ಗುಣ ಸ್ವಭಾವಗಳನ್ನು ತಮಗೆ ಅನಿಸಿದಂತೆ, ತಮಗೆ ತೋಚಿದಂತೆ ಹೇಳುವುದು ಎಂದರೆ ಅವರಿಗೆ ಎಳ್ಳು ಬೆಲ್ಲ ತಿಂದಷ್ಟು ಸಂತೋಷದ ವಿಷಯವಾಗಿರುತ್ತದೆ.

 

ವಸ್ತುತಃ ದೋಷವನ್ನು ಹೇಳುವುದು ಉತ್ತಮವೇ, ಆದರೆ ಯಾರಲ್ಲಿ ಹೇಳಬೇಕು? ಯಾವಾಗ ಹೇಳಬೇಕು? ಎಲ್ಲಿ ಹೇಳಬೇಕು? ಹೇಗೆ ಹೇಳಬೇಕೆಂಬ ಬಗ್ಗೆ ಸಮಗ್ರವಾದ ಚಿಂತನೆಯು ಜೊತೆಯಾಗಿರಬೇಕು. ಅಂದರೆ ಯಾರಲ್ಲಿ ದೋಷವನ್ನು ಹೇಳಿದರೆ ಆ ದೋಷಕ್ಕೆ ಉಚಿತವಾದ ಪರಿಹಾರವೂ ದೊರಕುವುದೋ ಅಲ್ಲಿ ಮಾತ್ರ ದೋಷವನ್ನು ಹೇಳಬೇಕಾಗುತ್ತದೆ. ಆಗ ಇರುವ ದೋಷವು ದೂರವಾಗುತ್ತದೆ. ಮತ್ತು ದೊಷವನ್ನು ಹೇಳಿದವನ ಬಗ್ಗೆ ಸದ್ಭಾವನೆ ಬರುತ್ತದೆ. ಇದೊಂದು ಗುಣವಾಗಿ ಪರಿಣಾಮವಾಗುತ್ತದೆ. ಇದೊಂದು ಪುಣ್ಯತಮವಾದ ಕಾರ್ಯವಾಗುತ್ತದೆ. ಏಕೆಂದರೆ ದೋಷದ ಅರಿವಿನಿಂದ ಆ ದೋಷ ಇವನಿಂದ ದೂರವಾಗುತ್ತದೆ. ಆತ ನಿರ್ದುಷ್ಟನಾಗುತ್ತಾ ಸಾಗುತ್ತಾನೆ, 'ನಿರ್ದೋಷಂ ಸಮಂ ಬ್ರಹ್ಮ'. ಯಾವುದೇ ದೋಷ ಇಲ್ಲದಿರುವಿಕೆಯನ್ನೇ ಪರಬ್ರಹ್ಮದ ಭಾವ ಎನ್ನಲಾಗಿದೆ. ಪ್ರತಿಯೊಬ್ಬ ಮಾನವನೂ ಕೂಡ ಅಂತ ಬ್ರಹ್ಮಭಾವವನ್ನು ಪಡೆಯುವತ್ತ ಸಾಗಬೇಕಾಗಿದೆ. ಕೊಟ್ಟಕೊನೆಯಲ್ಲಿ 'ಅಹಂ ಬ್ರಹ್ಮಾಸ್ಮಿ' ಎಂಬಂತೆ ಬ್ರಹ್ಮವೇ ಆಗಬೇಕಾಗುತ್ತದೆ. ಇದು ನಿಜವಾಗಿಯೂ ದೋಷಜ್ಞನ ಸ್ವಭಾವವಾಗಿದೆ. ಇದು ಅತ್ಯಂತ ಶ್ಲಾಘ್ಯವಾದುದು. ಅದಕ್ಕೆ 'ದೋಷಜ್ಞ' ಎಂಬುದಾಗಿ ಸಂಸ್ಕೃತದಲ್ಲಿ ಒಂದು ಶಬ್ದವಿದೆ. ಯಾರು ದೋಷವನ್ನು ತಿಳಿದಿರುತ್ತಾರೋ, ಅವರನ್ನು ದೋಷಜ್ಞ ಎಂದು ಕರೆಯುತ್ತಾರೆ. ಅಂದರೆ ಪಂಡಿತ ಎಂದರ್ಥ. ಪಂಡಿತನಾದವನು - ತಿಳಿದವನು ಬೇರೆಯವರ ದೋಷವನ್ನು ತಿಳಿದು ಆ ದೋಷವು ಹೇಗೆ ಪರಿಹಾರವಾಗುವುದು? ಎಂಬುದನ್ನೂ ತಿಳಿದು, ಅದು ಪರಿಹಾರವಾಗುವ ರೀತಿಯಲ್ಲಿ ಇನ್ನೊಬ್ಬನಿಗೆ ಹೇಳಲು ಬಯಸುತ್ತಾನೆ. ಇದು ದೋಷಜ್ಞನ ಲಕ್ಷಣವಾದರೆ ಇದಕ್ಕೆ ವಿರುದ್ಧವಾದುದೇ ಪೈಶುನ್ಯವಾಗಿದೆ. 


ಇದು ಮಾತಿನಿಂದ ಇನ್ನೊಬ್ಬರನ್ನು ದೂಷಿಸುವ ಬಗೆ. ಇದೊಂದು ಮಾತಿನಿಂದ ಸಂಪಾದಿಸುವ ಪಾಪದ ಪರಿ. ಆದ್ದರಿಂದ ಇದನ್ನು ದೂಷಿಸಿದ್ದು ಉಂಟು. ಪಾರುಷ್ಯ, ಪೈಶುನ್ಯ, ಅನೃತ ಮತ್ತು ಅಸಂಬದ್ಧ ಪ್ರಲಾಪ ಎಂದು ನಾಲ್ಕು ಬಗೆಯ ಮಾತಿನ ದೋಷಗಳು ಇವೆ. ಪಾರುಷ್ಯ ಎಂದರೆ ಅತಿ ಕಠಿಣವಾಗಿ ಮಾತನಾಡುವುದು; ಪೈಶುನ್ಯ ಎಂದರೆ ತಪ್ಪಾಗಿ ಒಬ್ಬರ ಬಗ್ಗೆ ಚಾಡಿಯನ್ನು ಹೇಳುವುದು; ಅಸಂಬದ್ಧ ಪ್ರಲಾಪ ಅಂದರೆ ಸರಿಯಾದದ್ದನ್ನು ಹೇಳದೆ ಅನುಚಿತವಾದದ್ದನ್ನು ಹೇಳುವುದು. ಇವುಗಳಲ್ಲಿ ಪೈಶುನ್ಯದ ಬಗ್ಗೆ ಧರ್ಮರಾಜನು ವಿವರಣೆಯನ್ನು ಹೀಗೆ ಕೊಟ್ಟಿರುವುದು ಕಂಡುಬರುತ್ತದೆ.


ಸೂಚನೆ : 22/9/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.