Monday, September 16, 2024

ವ್ಯಾಸ ವೀಕ್ಷಿತ 103 (Vyaasa Vikshita 103)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಮೊಸಳೆಯಾಗೆಂದು ಶಾಪ ಬಂದ ಬಗೆ


ತನ್ನ ಕಾಲನ್ನು ಹಿಡಿದೆಳೆದ ಮೊಸಳೆಯನ್ನು ಅರ್ಜುನನು ಜಗ್ಗಿ ಹೊರಗೆಳೆದನಷ್ಟೆ. ಹಾಗಾಗುತ್ತಲೇ ದಿವ್ಯರೂಪಳಾದ ಅಪ್ಸರಸ್ತ್ರೀಯಾಗಿ ಅವಳು ಪರಿವರ್ತಿತಳಾದಳು. ಅವಳು ಆ ಮೊಸಳೆಯ ಜನ್ಮವನ್ನು ಪಡೆದುದು ಹೇಗೆ? - ಎಂಬ ಅರ್ಜುನನ ಪ್ರಶ್ನೆಗೆ ಆ ವರ್ಗಾ ಎಂಬ ಅಪ್ಸರೆಯು ಉತ್ತರ ಹೇಳುತ್ತಾಳೆ.


"ದೇವಾರಣ್ಯದಲ್ಲಿ, ಎಂದರೆ ನಂದನವನದಲ್ಲಿ, ವಿಹರಿಸುವ ಅಪ್ಸರೆ ನಾನು. ಕುಬೇರನ ಪ್ರಿಯತಮೆ. ನನ್ನೊಂದಿಗೆ ನಾಲ್ವರು ಸಖಿಯರಿದ್ದಾರೆ. ಅವರೆಲ್ಲರೂ ಸುಂದರಿಯರೂ ಹೌದು, ಕಾಮಗಮರೂ ಹೌದು, ಅರ್ಥಾತ್, ಎಲ್ಲೆಂದರಲ್ಲಿಗೆ ಹೋಗಬಲ್ಲವರು.


ಲೋಕಪಾಲನೆನಿಸುವ ಕುಬೇರನ ಮನೆಯತ್ತ ಅವರೊಂದಿಗೆ ಹೊರಟಿದ್ದ ನಾವು ಮಾರ್ಗದಲ್ಲಿ ಬ್ರಾಹ್ಮಣನೊಬ್ಬನನ್ನು ಕಂಡೆವು. ಆತ ವ್ರತನಿಷ್ಠ, ರೂಪಶಾಲಿ, ಅಧ್ಯಯನಶೀಲ, ಏಕಾಂತವಾಸಿ. ಆತನ ತಪಸ್ಸಿನಿಂದಲೇ ಆ ವನವು ತೇಜೋಮಯವಾಗಿದ್ದಿತು. ಸೂರ್ಯನು ಹೇಗೋ ಹಾಗೆ ಆ ಎಡೆಯನ್ನೆಲ್ಲ ಆತ ಬೆಳಗಿದ್ದ.


ಆತನ ಅಂತಹ ತಪಸ್ಸನ್ನೂ ಆ ಉತ್ತಮವೂ ಅದ್ಭುತವೂ ಆದ ರೂಪವನ್ನೂ ಕಂಡು, ಆತನ ತಪಸ್ಸಿಗೆ ವಿಘ್ನಮಾಡಲೆಂದು ಆ ಎಡೆಯಲ್ಲಿ ನಾವೆಲ್ಲರೂ ಇಳಿದುಕೊಂಡೆವು - ನಾನು, ಸೌರಭೇಯಿ, ಸಮೀಚಿ, ಬುದ್ಬುದೆ, ಲತೆ - ಇವಿಷ್ಟೂ ಜನ ಏಕಕಾಲದಲ್ಲಿ ಆತನ ಬಳಿ ಸಾರಿದೆವು. ಹಾಡುತ್ತಲೂ ನಗುತ್ತಲೂ ಆ ಬ್ರಾಹ್ಮಣನನ್ನು ಪ್ರಲೋಭಗೊಳಿಸಲೆತ್ನಿಸಿದೆವು.


ಆದರೆ ಆತನು ನಮ್ಮ ಮೇಲೆ ಮನಸ್ಸೇ ಮಾಡಲಿಲ್ಲ. ನಿರ್ಮಲವಾದ ತಪಸ್ಸಿನಲ್ಲಿ ನೆಲೆಗೊಂಡಿದ್ದ ಆ ಮಹಾತೇಜಃಶಾಲಿಯು. ಕಿಂಚಿತ್ತೂ ಕಂಪಿತನಾಗಲಿಲ್ಲ. ಬದಲಾಗಿ ನಮ್ಮ ಮೇಲೆ ಕೋಪಗೊಂಡವನಾಗಿ, ಆತನೇ ಶಪಿಸಿದ: "ನೀರೊಳಗೆ ಮೊಸಳೆಗಳಾಗಿ ನೂರುವರ್ಷ ನೀವಿರಿ" - ಎಂದ.


ಆಗ ನಾವೆಲ್ಲರೂ ವ್ಯಥೆಗೊಂಡವರಾಗಿ ಆ ವ್ರತನಿಷ್ಠನಾದ ತಪೋಧನನನ್ನೇ ಶರಣುಹೊಂದಿದೆವು. "ರೂಪ, ವಯಸ್ಸು, ಕಾಮ - ಇವುಗಳಿಂದ ನಾವು ದರ್ಪಗೊಂಡವರಾಗಿ, ಅಯುಕ್ತವಾದುದನ್ನು ಮಾಡಿಬಿಟ್ಟೆವು. ಅದನ್ನು ಕ್ಷಮಿಸಬೇಕು, ಬ್ರಾಹ್ಮಣನೇ. ನಿನಗೆ ಪ್ರಲೋಭನೆಯುಂಟುಮಾಡಬೇಕೆಂದು ವ್ರತನಿಷ್ಠನಾದ ನಿನ್ನ ಬಳಿಗೆ ಬಂದೆವಲ್ಲಾ, ಅದುವೇ ನಮಗೆ ತಕ್ಕಷ್ಟೆನಿಸುವ ಶಿಕ್ಷೆಯಾಗಿದೆ.


ಸ್ತ್ರೀಯರನ್ನು ಅವಧ್ಯರನ್ನಾಗಿ ಸೃಷ್ಟಿಸಲಾಗಿದೆ - ಎಂಬುದಾಗಿಯೇ ಧರ್ಮಾತ್ಮರು ಭಾವಿಸುತ್ತಾರೆ.


ಆದುದರಿಂದ ಧರ್ಮವನ್ನಾಚರಿಸಿ ನೀನು ಉನ್ನತಿಯನ್ನು ಹೊಂದು: ನಮ್ಮನ್ನು ಹಿಂಸಿಸಬೇಡ.


ಧರ್ಮಜ್ಞನೇ, ಬ್ರಾಹ್ಮಣನು ಸರ್ವಭೂತಗಳಲ್ಲಿಯೂ ಮೈತ್ರ, ಎಂದರೆ ಮಿತ್ರಭಾವನೆಯುಳ್ಳವನು, ಎಂಬುದಾಗಿ ಹೇಳುತ್ತಾರಷ್ಟೆ. ಮನೀಷಿಗಳು, ಎಂದರೆ ಧೀಮಂತರು, ಹೇಳುವ ಈ ಮಾತು ಸತ್ಯವಾಗಲಿ, ಕಲ್ಯಾಣಪುರುಷನೇ! ಶರಣುಹೊಂದಿದವರನ್ನು ಶಿಷ್ಟರು ಪಾಲಿಸುವರಷ್ಟೇ? ನಾವು ನಿನಗೆ ಶರಣಾಗಿದ್ದೇವೆ. ಆದುದರಿಂದ ನೀನು ನಮ್ಮನ್ನು ಕ್ಷಮಿಸಬೇಕು" - ಎಂದೆವು.


ಸೂರ್ಯಚಂದ್ರರ ಪ್ರಭೆಯನ್ನು ಹೊಂದಿದ್ದ ಹಾಗೂ ಶುಭಕರ್ಮಗಳನ್ನು ಮಾಡುವ ಆ ಬ್ರಾಹ್ಮಣನು ಧರ್ಮಾತ್ಮನಾಗಿದ್ದರಿಂದ ನಮ್ಮ ವಿಷಯದಲ್ಲಿ ಪ್ರಸನ್ನತೆಯನ್ನು ತೋರಿ ಹೀಗೆ ಹೇಳಿದನು: "ಶತ ಮತ್ತು ಶತಸಹಸ್ರ, ಎಂದರೆ ನೂರು ಹಾಗೂ ಲಕ್ಷ – ಎಂಬಿವು, ಸಾಮಾನ್ಯವಾಗಿ ಅನಂತ-ಸಂಖ್ಯೆಯ ವಾಚಕಗಳು ಆದರೆ ನಾನು ಹೇಳಿದ "ನೂರು ವರ್ಷ"ವೆಂಬುದು ಕೇವಲ ನೂರೆಂಬ ಪರಿಮಾಣವನ್ನೇ ಹೇಳತಕ್ಕದ್ದು.


ನೀವುಗಳು ಮೊಸಳೆಗಳಾಗಿ ನೀರಿಗೆ ಬಂದವರನ್ನೆಲ್ಲಾ ಸೆಳೆಯುತ್ತಿರುವಿರಿ. ಎಂದೋ ಒಮ್ಮೆ ಯಾವನೋ ಒಬ್ಬ ಪುರುಷಶ್ರೇಷ್ಠನು ನೀರಿಗೆ ಬಂದಾಗ, ನಿಮ್ಮನ್ನು ನೀರಿನಿಂದಾಚೆಗೆ ಎಳೆದುಹಾಕುವನು – ಎಂದನು.


ಸೂಚನೆ : 16/9/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.