ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ – 107 ಪರಸ್ಪರ ವಿರೋಧಿಗಳಾದ ಧರ್ಮ ಅರ್ಥ ಕಾಮಗಳನ್ನು ಒಂದೆಡೆ ಸೇರಿಸುವುದು ಹೇಗೆ ?
ಉತ್ತರ - ಧರ್ಮ ಮತ್ತು ಪತ್ನಿಯನ್ನು ಹೊಂದಿಸಿಕೊಂಡರೆ ಈ ಮೂರನ್ನು ಸೇರಿಸಬಹುದು.
ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಈ ನಾಲ್ಕನ್ನು 'ಪುರುಷಾರ್ಥ' ಎಂದು ಕರೆಯುತ್ತಾರೆ. ಅದರಲ್ಲೂ ಕೂಡ ಧರ್ಮದ ಹಿನ್ನೆಲೆಯಲ್ಲಿ ಅರ್ಥ ಮತ್ತು ಕಾಮಗಳನ್ನು ಬಳಸಿಕೊಂಡು ಮೋಕ್ಷವನ್ನು ಸಂಪಾದನೆ ಮಾಡುವಂಥದ್ದು ಪ್ರತಿಯೊಬ್ಬ ಮಾನವನ ಉದ್ದೇಶವಾಗಿದೆ. ನಾವು ಯಾವುದೇ ಕರ್ಮವನ್ನು ಮಾಡುವಾಗ "ಧರ್ಮ- ಅರ್ಥ- ಕಾಮ- ಮೋಕ್ಷ- ಚತುರ್ವಿಧ ಪುರುಷಾರ್ಥ- ಫಲಸಿದ್ಧ್ಯರ್ಥಂ" ಎಂಬುದಾಗಿಯೇ ನಮ್ಮ ಸಂಕಲ್ಪ ಇರುತ್ತದೆ. ಹಾಗಾಗಿ ಇವುಗಳನ್ನು ಬಿಟ್ಟರೆ ನಮ್ಮ ಜೀವನವೇ ಇಲ್ಲ ಎಂಬಷ್ಟರ ಮಟ್ಟಿಗೆ ಇವುಗಳ ಮಹತ್ವವನ್ನು ಹೇಳಲಾಗಿದೆ. ಆದರೆ ಇಲ್ಲಿ ಕೇಳುವ ಯಕ್ಷನ ಪ್ರಶ್ನೆಯು ಹೀಗಿದೆ - ಧರ್ಮ ಅರ್ಥ ಕಾಮಗಳು ಪರಸ್ಪರ ವಿರೋಧವಾದವುಗಳು; ಆದರೆ ಅವುಗಳನ್ನು ಒಂದು ಕಡೆ ಸೇರಿಸಿ ಸೇವಿಸುವುದು ಹೇಗೆ? ಎಂಬುದು. ಅಂದರೆ ಮಾನವನು ಧರ್ಮದ ಚೌಕಟ್ಟಿನಲ್ಲಿ - ಧರ್ಮದ ಅಡಿಪಾಯದಲ್ಲಿ ಅರ್ಥ ಕಾಮಗಳನ್ನು ಬಳಸಬೇಕು; ತನ್ಮೂಲಕ ಮೋಕ್ಷಕ್ಕೋಸ್ಕರ ಸಾಧನೆಯನ್ನು ಮಾಡಬೇಕು ಎಂಬುದು. ಇದಕ್ಕೆ ಮೂರನ್ನು ಸೇರಿಸುವ ಸಾಧನ ಯಾವುದು? ಎಂಬುದು ಯಕ್ಷಪ್ರಶ್ನೆಯಾಗಿದೆ. ಅದಕ್ಕೆ ಉತ್ತರವಾಗಿ - ಧರ್ಮ ಮತ್ತು ಪತ್ನಿಯನ್ನು ಹೊಂದಿಸಿಕೊಂಡರೆ ಈ ಮೂರನ್ನು ಹೊಂದಿಸಬಹುದು ಎಂಬುದಾಗಿದೆ. ಧರ್ಮವನ್ನು ನಾವು ಹೊಂದಿಸಿಕೊಳ್ಳುವುದು ಮತ್ತು ಭಾರ್ಯೆಯನ್ನು ಹೊಂದಿಸಿಕೊಳ್ಳುವುದು ಅಷ್ಟು ಸುಲಭ ಸಾಧ್ಯವಲ್ಲ ಎಂಬುದು ಈ ಪ್ರಶ್ನೆಯ ಹಿಂದಿರುವ ತಾತ್ಪರ್ಯವಾಗಿದೆ. ಆದರೆ ಹೊಂದಿಸಿಕೊಳ್ಳಲೇ ಬೇಕಾದ ಅನಿವಾರ್ಯ. ಏಕೆಂದರೆ ನಾವು ಪಡೆಯಲೇಬೇಕಾದುದು ಮೋಕ್ಷ. ಮೋಕ್ಷಸಂಪಾದನೆಗೆ ಇವೆರಡೇ ಅತ್ಯಂತ ಪ್ರಧಾನವಾದವು. ಧರ್ಮವನ್ನು ಅಥವಾ ಪತ್ನಿಯನ್ನು ಬಿಟ್ಟರೆ ಈ ಮೋಕ್ಷಸಂಪಾದನೆ ಅಸಾಧ್ಯ ಎಂಬುದು ಇದರ ಹಿಂದಿರುವ ತಾತ್ಪರ್ಯವಾಗಿದೆ. ಇಲ್ಲಿ ಒಂದು ಸಂದೇಹ ಬರುತ್ತದೆ; ಏನೆಂದರೆ ಧರ್ಮ ಸಂಪಾದನೆ ಸರಿ, ಆದರೆ ಪತ್ನಿಯನ್ನು ಹೊಂದುವುದು ಗೃಹಸ್ಥನಿಗೆ ಮಾತ್ರ ಸರಿ. ಹಾಗಾದರೆ ಬ್ರಹ್ಮಚಾರಿ ಮತ್ತು ಸನ್ಯಾಸಿಗಳಿಗೆ ಮೋಕ್ಷ ಸಂಪಾದನೆ ಹೇಗೆ? ಎಂದು. ಗೃಹಸ್ಥನಿಲ್ಲದಿದ್ದರೆ ಬ್ರಹ್ಮಚಾರಿ ಮತ್ತು ಸನ್ಯಾಸಿಗೂ ಅಸ್ತಿತ್ವ ಇರಲಾರದು. ಹಾಗಾಗಿ ಗೃಹಸ್ಥ ತನ್ನ ಧರ್ಮವನ್ನು ಸರಿಯಾಗಿ ಮಾಡಿದ ಪಕ್ಷೆ ಬ್ರಹ್ಮಚಾರಿ ಮತ್ತು ಸನ್ಯಾಸಿಗೂ ಅಸ್ತಿತ್ವ ಇದೆ. ಈ ಹಿನ್ನೆಲೆಯಲ್ಲಿ ಧರ್ಮ ಮತ್ತು ಭಾರ್ಯೆಯನ್ನ ಹೊಂದಿಸಿಕೊಳ್ಳುವುದರಿಂದ ಮಾತ್ರವೇ ಈ ಜೀವನ ಸಫಲ ಎಂಬುದು ಇದರ ಅರ್ಥವಾಗಿದೆ.
ಶ್ರೀರಂಗ ಮಹಾಗುರುಗಳು ಇದಕ್ಕೆ ಸಂಬಂಧಿಸಿದಂತೆ ಒಂದು ಮಾತನ್ನು ಹೇಳುತ್ತಿದ್ದರು. " ಅರ್ಥ-ಕಾಮಗಳು ತುಂಟ ಹಸುಗಳಿದ್ದಂತೆ; ಅವುಗಳನ್ನು ಧರ್ಮ ಎಂಬ ಕಂಬಕ್ಕೆ ಕಟ್ಟಿ ಮೊಕ್ಷ ಎಂಬ ಅಮೃತವನ್ನು ಪಡೆಯಬೇಕಪ್ಪ" ಎಂದು. ಭಾರತೀಯ ಸಂಸ್ಕೃತಿಯಲ್ಲಿ ಪತ್ನಿಯನ್ನು ಪಡೆಯುವ ಉದ್ದೇಶವೂ ಇದೇ ಆಗಿದೆ. "ಧರ್ಮರ್ಥಕಾಮಮೋಕ್ಷಾರ್ಥಮ್ ಇಮಾಂ ಕನ್ಯಾಂ ವೃಣೀಮಹೇ" ಎಂದು. ಪತ್ನಿಯ ಸಹಯೋಗವಿದ್ದರೆ ಮಾತ್ರ ಧರ್ಮಕಾರ್ಯವನ್ನು ಮಾಡಲು ಅಧಿಕಾರ. ಯಜ್ಞವನ್ನೇ ಧರ್ಮಕಾರ್ಯವೆನ್ನಲಾಗಿದೆ. ಧರ್ಮಕಾರ್ಯಕ್ಕೆ ಪತ್ನಿ ಬೇಕೆಬೇಕು. ಅವಳಿದ್ದರೆ ಮಾತ್ರ ಅರ್ಥಕಾಮಕ್ಕೆ ಅವಕಾಶ. ಆದ್ದರಿಂದಲೇ ಧರ್ಮ ಮತ್ತು ಪತ್ನಿಯಿಂದ ವಿರೋಧಿಗಳಾದ ಧರ್ಮಾರ್ಥಕಾಮಗಳನ್ನು ಸೇರಿಸಬಹುದು. ಸ್ತ್ರೀಯರಿಂದಲೇ ಧರ್ಮ ಉಳಿಯುವುದು ಎಂಬುದು ಈ ಪ್ರಶ್ನೋತ್ತರದ ಸಾರವಾಗಿದೆ.