ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಈಗೆಲ್ಲ ಟೈಮ್-ಲ್ಯಾಪ್ಸ್ ವಿಡಿಯೋಗಳ ಕಾಲ.
ಏನು ಹಾಗೆಂದರೆ? ಒಂದು ಬಳ್ಳಿಯು ಬೆಳೆಯುವ ಬಗೆಯನ್ನು ಗಮನಿಸಿಕೊಳ್ಳಬೇಕೆನ್ನಿ. ಅದರ ಒಂದು ವರ್ಷದ ಬೆಳವಣಿಗೆಯ ಮುಖ್ಯ ಘಟ್ಟಗಳನ್ನು ಗುರುತಿಸುವ ಒಂದೊಂದು ಛಾಯಾಚಿತ್ರ (ಫೋಟೋ)ವನ್ನು ಇಟ್ಟುಕೊಂಡು ನೋಡುವ ಪರಿಯುಂಟಲ್ಲವೇ? ಅದರ ಬದಲಾಗಿ, ಒಂದು ವರ್ಷದ ಇಡೀ ಬೆಳವಣಿಗೆಯನ್ನು ವಿಡಿಯೋ-ಕ್ಯಾಮರಾದಲ್ಲಿ ಹಿಡಿದು, ಅದನ್ನು ಕೆಲವೇ ನಿಮಿಷಗಳಲ್ಲಿ ವೇಗವಾಗಿ ಓಡಿಸಿ ತೋರಿಸಿದರೆ ಆಗ ಮನಸ್ಸಿಗೆ ಬರುವ ಒಟ್ಟಭಿಪ್ರಾಯವೇ ಬೇರೆ. ಮೊದಲನೆಯದು ಬಿಡಿಬಿಡಿಯಾದ ನೋಟ. ಎರಡನೆಯದು ಇಡಿಯಾದದ್ದು.
ನಮ್ಮ ಜೀವನದ್ದೇ ಬೇರೆ ಬೇರೆ ಘಟ್ಟಗಳ ಫ಼ೋಟೋಗಳು ನಮಗೆ ಆಗೀಗ ಸಿಕ್ಕುವುದುಂಟು – ಗೃಹ-ವಸ್ತುಗಳನ್ನು ಶೋಧಿಸುತ್ತಿರುವಾಗ; ನಮ್ಮ ಫೋಟೋಗಳೇ ಆದರೂ, ಹಿಂದೆಯೂ ಎಷ್ಟೋ ಬಾರಿ ನೋಡಿದ್ದೇ ಆದರೂ
ಮತ್ತೆ ನೋಡಿದಾಗ ಅದೇನೋ ಆಶ್ಚರ್ಯ-ತೃಪ್ತಿಗಳು ಕಾದಿರುತ್ತವಲ್ಲವೇ? ಆದರೆ ಲೀಲಾಶುಕ ತನ್ನ ಬಗ್ಗೆ ಏನನ್ನೂ ಹೇಳಿಕೊಳ್ಳುವವನಲ್ಲ, ಚಿತ್ರಿಸಿಕೊಳ್ಳುವವನಲ್ಲ: ಆತನ ಚೇತಸ್ಸಿನ ತುಂಬ ಶ್ರೀಕೃಷ್ಣನೇ ಇರುವುದು. ಎಂದೇ ಕೃಷ್ಣನ ಜೀವನದ ಮುಖ್ಯ-ಘಟ್ಟಗಳನ್ನು ವಾಕ್-ಚಿತ್ರಗಳಲ್ಲಿ ಸೆರೆಹಿಡಿದು ಒಂದು ಒಟ್ಟಾರೆ ಚಿತ್ರಣವನ್ನು ರೂಪಿಸಿಕೊಟ್ಟಿದ್ದಾನೆ. ಕಿರಿದಾದರೂ ಸುಂದರವಾದ ಶ್ಲೋಕವಿದು. ಶ್ರೀಕೃಷ್ಣನ ಜೀವನದ ಐದು ಘಟ್ಟಗಳನ್ನು ಇಲ್ಲಿ ಸೆರೆಹಿಡಿದಿದೆ.
ಪ್ರಭುವೇ, ಈ ಐದೂ ಘಟ್ಟಗಳನ್ನು ಬಲ್ಲವರೆಂದರೆ ಗೋಪಿಕೆಯರೇ ಸರಿ – ಎಂದು ಉದ್ಗರಿಸುತ್ತಾನೆ, ಲೀಲಾಶುಕ. ಅವರ ಭಾಗ್ಯವೇನು ಕಡಿಮೆಯೇ? ಪರ-ದೈವವನ್ನು ಹಸುಗೂಸಿನ ಅವಸ್ಥೆಯಿಂದ ಪ್ರೌಢ-ವಯಸ್ಸಿನ ಪರ್ಯಂತ ಕಂಡವರವರು. ಇತ್ತ ಪ್ರೀತಿಯಿಂದಲೋ ಅತ್ತ ವಾತ್ಸಲ್ಯದಿಂದಲೋ ಕಾಣುವ ಸೌಭಾಗ್ಯ ಅವರದ್ದಾಗಿತ್ತು. ತಾನಿತ್ತಿರುವ ಬಿಡಿಚಿತ್ರಗಳಿಂದ ಅವರಿಗಿದ್ದ ಇಡಿಚಿತ್ರವು ನಮಗೆ ನಿಲುಕುವಂತೆ ಮಾಡಿದ್ದಾನೆ, ಕವಿ.
ಹೇಗಿವೆ ಆ ಸಂನಿವೇಶಗಳು? ತೊಟ್ಟಿಲ ಶಿಶುವಾಗಿದ್ದಾಗ ಪುಟ್ಟ-ಕೃಷ್ಣನ ಆಲೋಕಿತಗಳು ಅಧೀರವಾಗಿದ್ದವು. ಆಲೋಕಿತವೆಂದರೆ "ಸಹಸಾ-ದರ್ಶನ"ವೆಂದು ಸಂಗೀತ-ರತ್ನಾಕರವು ಹೇಳುತ್ತದೆ. ಅ-ಧೀರವೆಂದರೆ ಚಂಚಲ. ಎಳಸಿನಲ್ಲಿ ಒಂದಿಷ್ಟು ಭಯವಿರುತ್ತದಲ್ಲವೇ ಮಕ್ಕಳಿಗೆ? ಆಗ ದೃಷ್ಟಿ ದೃಢವಾಗಿರುವುದಿಲ್ಲ. ಕ್ಷಣ-ಕ್ಷಣಕ್ಕೂ ಅತ್ತಿತ್ತ ನೋಡುವುದಾಗುತ್ತದೆ.
ಸ್ವಭಾವತಃ ಪುಕ್ಕಲಾದ ಜಿಂಕೆಯ ಕಣ್ಣಲ್ಲಿ ಚಾಂಚಲ್ಯವಿರುವುದಲ್ಲವೇ? ಭಯವಾಗುವ ಪ್ರಮೇಯವೇ ಇಲ್ಲದ ಆನೆಯ ದೃಷ್ಟಿಯಲ್ಲಿ ಚಾಂಚಲ್ಯವೆಲ್ಲಿದ್ದೀತು? ಶಿಶುವು ಥಟ್ಟಥಟ್ಟನೆ ದಿಕ್ಕು ಬದಲಿಸುತ್ತಿರುವುದೇ 'ಸಹಸಾ-ದರ್ಶನ'. ಇದು ಮೊದಲ ಘಟ್ಟ, ಎಳಸಿನದು.
ಇನ್ನು ಮಾತನಾಡುವ ಘಟ್ಟವು ಬಂದಾಗ, ಮಕ್ಕಳ ಉಲಿಯಲ್ಲಿ ಒಂದು ಸರಸತೆ ಮೂಡುತ್ತದೆ. ಇದನ್ನೇ ಆರ್ದ್ರ-ಜಲ್ಪಿತವೆನ್ನುವುದು. ಅಸ್ಪಷ್ಟವಾದ ಮಾತು ಜಲ್ಪ; ಏನೇನೋ ಮಾತನಾಡುವುದೂ ಜಲ್ಪ. ವಾಕ್-ಪ್ರವೃತ್ತಿಯ ವರ್ಧನೆಗೆ ಸೂಚಕವಾಗಿ ಮಕ್ಕಳ ಬಾಯಲ್ಲಿ ಜೊಲ್ಲು ಸುರಿಯುವುದೂ ಹೆಚ್ಚಾಗುವುದಷ್ಟೆ. ಅದೂ ಒಂದು ಬಗೆಯ ಆರ್ದ್ರತೆ - ಎಂದುಕೊಳ್ಳಬಹುದು. ಆದರೆ ಮಕ್ಕಳ ಮುಗ್ಧತೆಯಲ್ಲಿ, ಅವುಗಳ ಕ್ಷಣಿಕವಾದ ದುಃಖ-ಕೋಪಗಳಲ್ಲಿ, ಆಗಾಗ ಉಕ್ಕುವ ನಗೆಯ ಸೂಸುವ ಮೊಗದಲ್ಲಿ, ವಿಶಿಷ್ಟವಾದ ಸ-ರಸತೆಯು ಕಾಣುವುದೇ. ಆರ್ದ್ರವೆಂದರೆ ಒದ್ದೆ. ಹೀಗೆ ಸು-ರಸವಾಗಿರುವಿಕೆಯೇ, ಸ್ವ-ರಸವಾಗಿರುವಿಕೆಯೇ ಸ್ವಾರಸ್ಯ. ಹೀಗೆ ಕಿಶೋರ-ಕೃಷ್ಣನ ಜಲ್ಪಿತವು ಆರ್ದ್ರ, ರಸ-ಭರಿತ. ಇದು ಎರಡನೆಯ ಘಟ್ಟ.
ಇನ್ನು ಸ್ವಲ್ಪ ಬೆಳೆದವನಾದಾಗ ಹುಡುಗು-ಬುದ್ಧಿ ಕಳೆಯುವ ಘಟ್ಟ. ಆಗಿನ ಆತನ ಗತವೇ ಮಂಥರವಾಗಿರುತ್ತದೆ. ಎಂದರೆ ನಡೆಯು ನಿಧಾನವಾಗಿರುತ್ತದೆ. ಆಗ ಗೋಚರವಾಗುವುದು ಆತನ ಗಾಂಭೀರ್ಯವನ್ನೂ ವಿಲಾಸವನ್ನೂ ಏಕಕಾಲಕ್ಕೇ ತೋರಿಗೊಡುವ ನಡಿಗೆ. ವಿಲಾಸ-ಗಾಂಭೀರ್ಯಗಳಿದ್ದಾಗ ನಡೆಯು ಧಡಧಡನೆ ಇರದು; ಆಗ ಅದು ಮಂಥರವಾಗಿರುತ್ತದೆ. ಗಡಿಬಿಡಿ-ಕಳವಳ-ಅತಿರಭಸಗಳಿರದ ಇದು ಮೂರನೆಯ ಘಟ್ಟ.
ನಾಲ್ಕನೆಯ ಘಟ್ಟವೆಂದರೆ ಪ್ರೌಢನಾದ ಕೃಷ್ಣನದು. ಆತನು ಗೋಪಿಯರಿಗಿತ್ತ ಆಲಿಂಗನವು ಅ-ಮಂದವಾದುದು, ಎಂದರೆ ಗಾಢವಾದುದು. ಎರಡೂ ಕಡೆಯಿಂದ ಪ್ರೀತಿಯು ಉಕ್ಕುವುದಾದಲ್ಲಿ, ಮತ್ತು ವಿಶೇಷವಾಗಿ ಕೆಲ ಕಾಲದ ವಿರಹದ ಬಳಿಕ ದೊರೆಯತಕ್ಕ, ಆಲಿಂಗನವು ಗಾಢವಾದುದೇ ಸರಿ.
ಒಂದರ್ಥದಲ್ಲಿ ಕ್ಷಣಕಾಲ ಉಸಿರೇ ನಿಂತುಹೋಗಿರುವ ಸ್ಥಿತಿಯದು! ಕುಂಭಕ-ಸದೃಶವಾದದ್ದು! ಮೈಗಳು ಅಂಟಿದ್ದರೂ ಮುಖ್ಯವಾಗಿ ಮನಸ್ಸುಗಳು ಬೆಸೆದಿರುವ ಸ್ಥಿತಿಯದು. ಹೊರಗಣ ಜಗತ್ತಿನ ಅರಿವೇ ಮರೆಯಾಗಿರುವ, ವಿಶ್ವದ ವಿಶ್ಲೇಷವಾಗಿರುವ ಆಂತರಂಗಿಕ-ಆಶ್ಲೇಷವದು. ವಿಶ್ಲೇಷವೆಂದರೆ ಬೇರ್ಪಡೆ, ಆಶ್ಲೇಷವೆಂದರೆ ಸೇರ್ಪಡೆ.
ಸ್ನೇಹವೆಂಬುದು ಸಲಿಗೆಗೆ ಇನ್ನೂ ಮಾರ್ಪಟ್ಟಿಲ್ಲವಾದಾಗಿನ ಆಲಿಂಗನವು ಮಂದವಾಗಿರುವುದುಂಟು; ಆದರಿಲ್ಲಿಯದು ಅಮರ-ಚೇತನನ ಅಮೃತ-ಸ್ಪರ್ಶವು ತಪ್ಪಿಹೋಗಬಾರದೆಂದು ಗೋಪಿಯರು ಬಾಚಿತಬ್ಬಿಕೊಂಡಾಗಿನ ಸ್ಥಿತಿ. ಮತ್ತು ಇದು ಸಹಜವಾಗಿಯೇ ಪಾರಸ್ಪರಿಕವೂ ಹೌದು: ಎಂದೇ ಕೃಷ್ಣನಿತ್ತ ಅಪ್ಪುಗೆಯೂ ಗಾಢವಾದದ್ದೇ. ಇದು ಚತುರ್ಥ-ಘಟ್ಟ.
ಇಲ್ಲಿ ಚಿತ್ರಿಸಿರುವ ಕೊನೆಯ ಘಟ್ಟವೆಂದರೆ ಆಕುಲೋನ್ಮದ-ಸ್ಮಿತ. ಹೇಗಿರುವುದು ಆತನ ಮುಗುಳ್ನಗೆ ಅಥವಾ ಸ್ಮಿತ? ಅದು ಆಕುಲವೂ ಉನ್ಮದವೂ ಆದದ್ದು. ಆತನ ಮುಗುಳ್ನಗೆಯು ಹೃದಯದಲ್ಲಿ ಉಂಟುಮಾಡುವ ಉಲ್ಲೋಲ-ಕಲ್ಲೋಲ-ಸ್ಥಿತಿಯೇ ಆಕುಲತೆ.
ಕನ್ನಡದಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ "ಅಲ್ಲೋಲ-ಕಲ್ಲೋಲ" ಎಂಬ ಪದ ಸರಿಯಲ್ಲ. 'ಉತ್'-'ಕತ್' ಪದಗಳಿಗೆ 'ಮೇಲಕ್ಕೆ' 'ಕೆಳಕ್ಕೆ' ಎಂಬ ಅರ್ಥಗಳಿವೆ; ಮತ್ತು ಲೋಲವೆಂದರೆ ಇತ್ತಿಂದತ್ತ ಅತ್ತಿಂದಿತ್ತ ಚಲಿಸುವಂತಹುದು. ಆದ್ದರಿಂದ ಉಲ್ಲೋಲ-ಕಲ್ಲೋಲವೆಂದೇ ಹೇಳಬೇಕು. ಸಮುದ್ರದ ಅಲೆಗಳು ಉಲ್ಲೋಲ-ಕಲ್ಲೋಲವಾಗಿರುತ್ತವೆ: ಮೇಲೇಳು-ಕೆಳಗಿಳಿ-ಗಳಿಂದ ಕೂಡಿರುತ್ತವೆ. ಏಳ್ಗೆ-ಬೀಳ್ಗೆಗಳುಳ್ಳದ್ದೇ ಉಲ್ಲೋಲ-ಕಲ್ಲೋಲ.
ಹೀಗೆ ತಳಮಳವುಂಟುಮಾಡುವಂತಹ ನಗೆಯೇ ಆಕುಲ-ಸ್ಮಿತ. ಮತ್ತು ಮತ್ತನ್ನು ಬರಿಸುವಂತಹ ಮುಗುಳ್ನಗೆಯೇ ಉನ್ಮದ-ಸ್ಮಿತ. ಉನ್ಮದವೆಂದರೆ ಹರ್ಷವುಂಟುಮಾಡುವಂತಹುದು. ಇಂತಹೊಂದು ಸ್ಮಿತಕ್ಕಾಗಿಯಲ್ಲವೇ ಹಗಲಿರುಳು ಹಂಬಲಿಸುತ್ತಿದ್ದವರು ಆ ಗೋಪಿಕೆಯರು?
ತೊಟ್ಟಿಲ-ಪುಟ್ಟಕೂಸಾಗಿದ್ದಂದಿನಿಂದ ಪ್ರೌಢನಾಗುವ ಪರ್ಯಂತ ಕೃಷ್ಣನನ್ನು ಕಣ್ತುಂಬ ಕಂಡಿರುವವರೆಂದರೆ ಈ ಭಾಗ್ಯಶಾಲಿ ಭಾಮಿನಿಯರೇ ಸರಿ. ಎಂದೇ, ಎಲ್ಲವನ್ನೂ ಬಲ್ಲವರು ಗೋಕುಲದ ಗೊಲ್ಲತಿಯರು - ಎನ್ನುತ್ತಾನೆ, ಲೀಲಾಶುಕ. ಅವರಿಗೆ ಮಾತ್ರ ತಿಳಿದಿರುವ ವಿಷಯಗಳಿವು, ಇವೆಲ್ಲವೂ ಅವರಿಗೆ ಪ್ರತ್ಯಕ್ಷ-ವಿದಿತ! ಬಲ್ಲವನೇ ಬಲ್ಲ ಬೆಲ್ಲದ ಸವಿಯ – ಎನ್ನುತ್ತಾರಲ್ಲವೇ?
ಈ ಶ್ಲೋಕದಲ್ಲಿ ಬಂದಿರುವ ಆಲೋಕಿತ-ಜಲ್ಪಿತ-ಗತ-ಆಲಿಂಗಿತ ಹಾಗೂ ಸ್ಮಿತಗಳೆಂಬ ಐದು ಪದಗಳೂ ಭಾವಾರ್ಥದಲ್ಲಿ ಪ್ರಯುಕ್ತವಾದವುಗಳು. ಎಂದರೆ, ಅವುಗಳ ಅರ್ಥವು ಆಲೋಕನ-ಜಲ್ಪನ-ಗಮನ-ಆಲಿಂಗನ ಹಾಗೂ ಸ್ಮಯಗಳೆಂದೇ. ಮೊದಲನೆಯ ಐದೂ ವ್ಯಾಕರಣದ ದೃಷ್ಟಿಯಿಂದ ಭೂತ-ಕೃದಂತ-ರೂಪಗಳು. ಆ ಪದಗಳನ್ನು ಭಾವಾರ್ಥಕವಾಗಿ ಈ ಶ್ಲೋಕದಲ್ಲಿ ಬಳಸಲಾಗಿದೆ. ಹೀಗೆ ಬಳಸಿರುವುದರಲ್ಲೂ ಕವಿಗೆ ಭಾಷಾ-ಪ್ರಯೋಗ-ಸೂಕ್ಷ್ಮಗಳ ಪರಿಚಯವಿರುವುದು ಗೋಚರವಾಗುತ್ತದೆ. ವಾಕ್ಕೌಶಲದಲ್ಲಿ ಪಳಗಿದ ಕೈ ಲೀಲಾಶುಕನದು. ಕವಿಯಲ್ಲವೇ?
ನಮ್ಮ ಈಚಿನ ಎಷ್ಟೋ ಕವಿಗಳಿಗೆ ಈ ಪರಿಯ ಭಾಷೆಯ ಮೇಲಿನ ಹಿಡಿತವೆಂಬುದೇ ಅವಿದಿತವಲ್ಲವೇ?
ಅಧೀರಂ ಆಲೋಕಿತಂ, ಆರ್ದ್ರ-ಜಲ್ಪಿತಂ,/
ಗತಂ ಚ ಗಂಭೀರ-ವಿಲಾಸ-ಮಂಥರಂ, |
ಅಮಂದಂ ಆಲಿಂಗಿತಂ, ಆಕುಲೋನ್ಮದ-/
ಸ್ಮಿತಂ ಚ, ತೇ ನಾಥ! ವಿದಂತಿ ಗೋಪಿಕಾಃ ||ಸೂಚನೆ : 21/09/2024 ರಂದು ಈ ಲೇಖನವು ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.