Thursday, September 5, 2024

ಅಷ್ಟಾಕ್ಷರೀ 64 ಪಾದುಕೇ ಹೇಮಭೂಷಿತೇ (Ashtakshari 64 Paduke Hemabhushite)

 ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಶ್ರೀಮದ್ರಾಮಾಯಣದಲ್ಲಿ ಒಂದು ಗಹನವಾದ ಸಂದರ್ಭವು ಬರುತ್ತದೆ. ಅದೆಂದರೆ ರಾಮನು ಭರತನಿಗೆ ತನ್ನ ಪಾದುಕೆಗಳನ್ನು ದಯಪಾಲಿಸುವುದು.

ಭರತನು ಕೇಳಿದನೆಂದು ರಾಮನು ತನ್ನ ಪಾದುಕೆಗಳನ್ನು ಕೊಟ್ಟನಷ್ಟೆ? ಇದರಲ್ಲಿ ಗಹನತೆಯೇನಿದೆ? ಆಶ್ಚರ್ಯವೇನಿದೆ? ತಮ್ಮನು ಕೇಳಿಕೊಂಡದ್ದಕ್ಕೆ ಅಣ್ಣನು ಇಷ್ಟು ಒಪ್ಪುವುದೂ ಒಂದು ಅತಿಶಯವೇ? - ಎಂಬ ಪ್ರಶ್ನೆಯು ಬರುತ್ತದೆ. ಈ ಪ್ರಸಂಗದ ಹಿಂದುಮುಂದುಗಳನ್ನು ಗಮನಿಸಿದರೆ ಇದರ ವಿಶೇಷವೇನೆಂಬುದು ಗೊತ್ತಾಗುತ್ತದೆ.


ರಾಮನು ವನವಾಸದಲ್ಲಿದ್ದುಕೊಂಡು, ತಾನು ಸಿಂಹಾಸನವನ್ನೇರುವುದು ಭರತನಿಗೆ ಸುತರಾಂ ಇಷ್ಟವಿರಲಿಲ್ಲ. ರಾಮನಿಗೆ ಪಟ್ಟಕಟ್ಟುವುದೇ ವಂಶಾನುಗುಣವಾಗಿ ಬಂದ ಕ್ರಮಕ್ಕೆ ಅನುಗುಣವಾದದ್ದು. ಹಿರಿಯನಿರುವಾಗ ಕಿರಿಯವನಿಗೆ ಅಭಿಷೇಕವೇ? ಮೇಲಾಗಿ ದಶರಥನಿಗೆ ಇಷ್ಟವಾಗಿದ್ದದ್ದೂ ರಾಮನಿಗೆ ಪಟ್ಟಾಭಿಷೇಕವಾಗಬೇಕೆಂಬುದೇ. ಪ್ರಜೆಗಳೆಲ್ಲರಿಗೂ ರಾಮನೇ ರಾಜನಾಗಬೇಕೆಂಬ ಮಹತ್ತಾದ ಅಪೇಕ್ಷೆಯಿತ್ತು. ಭರತನಂತೂ ತಾನೇ ಹದಿನಾಲ್ಕುವರ್ಷ ಕಾಡಿನಲ್ಲಿರಲೂ ಸಿದ್ಧನಿದ್ದನು.


ವಸಿಷ್ಠಾದಿಗಳೂ ಸಹ ರಾಮನಿಗೆ ಸಾಕಷ್ಟು ಹೇಳಿದರು. ಯಾರು ಎಷ್ಟು ಹೇಳಿದರೂ ಜಗ್ಗಲಿಲ್ಲ, ಶ್ರೀರಾಮ.


ಅಣ್ಣತಮ್ಮಂದಿರ ಈ ಬಗೆಯ "ಜಗಳ"ವನ್ನು ಪ್ರಾಯಃ ಪ್ರಪಂಚದಲ್ಲಿ ಮತ್ತೆಲ್ಲಿಯೂ ಕಾಣಲು ಸಾಧ್ಯವಿಲ್ಲ. ಮೊಘಲದೊರೆಗಳ ಬಗೆಯಂತೂ ವಿಚಿತ್ರ-ಘೋರವೇ ಸರಿ. ಏಕೆ? ಸರ್ವ-ಮತಗಳಲ್ಲಿಯ ಒಳ್ಳೆಯದನ್ನು ಕಾಣಬೇಕೆಂಬ ಬಯಕೆಯಿದ್ದ ದಾರಾಶಿಕೋಹನನ್ನು, ಅವನ ತಮ್ಮನಾದ ಔರಂಗಜೇಬನೇ ಕೊಲ್ಲಿಸಿದನಲ್ಲವೇ? ಬರೀ ಅಣ್ಣತಮ್ಮಂದಿರೇನು, ಮಗನೇ ಅಪ್ಪನನ್ನು ಜೈಲಿಗೆ ಹಾಕಿಯೋ ಕೊಂದೋ ಗದ್ದುಗೆಯನ್ನೇರಿದ ಪ್ರಸಂಗಗಳೂ ಅವರಲ್ಲಿಲ್ಲದಿಲ್ಲ.


ಎಂದೇ ಈ ಅಪೂರ್ವ-ಸೋದರರ ಸಂಭಾಷಣೆ ಆಶ್ಚರ್ಯಕರವಾದದ್ದು. ಇದನ್ನು ಕೇಳಿ ವಿಸ್ಮಿತರಾಗಿ, ಋಷಿಗಳೂ ಸಿದ್ಧರೂ ಪರಮರ್ಷಿಗಳೂ ಅಂತರ್ಹಿತರಾಗಿದ್ದುಕೊಂಡೇ, ಎಂದರೆ ನಯನ–ಗೋಚರರಾಗದೇ ಇದ್ದುಕೊಂಡೇ, ಕೊಂಡಾಡಿದರಂತೆ, ಈ ಅಣ್ಣತಮ್ಮಂದಿರನ್ನು. ರಾವಣ-ವಧೆಯು ಬೇಗಾಗಬೇಕೆಂಬ ಉತ್ಸುಕತೆಯುಳ್ಳ ಋಷಿಗಳು ಮಾತ್ರ, ರಾಮನ ಮಾತನ್ನು ಒಪ್ಪಿಕೊಳ್ಳುವಂತೆ ಭರತನಿಗೆ ಸೂಚಿಸಿದರಂತೆ. ಆದರೂ ಭರತನು ಮತ್ತೂ ಒಮ್ಮೆ ಕೇಳಿಕೊಂಡ "ನೀ ಬಂದು ಅಭಿಷಿಕ್ತನಾಗುವುದು ರಾಜಧರ್ಮ. ನನ್ನ ತಾಯಿಯ ಯಾಚನೆಯನ್ನೂ ಈಡೇರಿಸಿದಂತಾಗುತ್ತದೆ. ಏಕಾಂಗಿಯಾಗಿ ನಾನು ರಾಜ್ಯವಾಳಲಾರೆ. ರೈತರು ಮಳೆಗಾಗಿ ಹಂಬಲಿಸುವಂತೆ, ಪ್ರಜೆಗಳು ನಿನಗಾಗಿ ಹಂಬಲಿಸುತ್ತಿದ್ದಾರೆ" ಎಂದೆಲ್ಲಾ ಹೇಳಿ ರಾಮನ ಪಾದಕ್ಕೆರಗಿದ.


ಆದರೆ ರಾಮನು "ವಿನಯಶಾಲಿಯಾದ ನೀನು ಸಮರ್ಥನಾಗಿ ರಾಜ್ಯವನ್ನಾಳುವುದರಲ್ಲಿ ಸಂಶಯವಿಲ್ಲ. ಧೀಮಂತರಾದ ಮಂತ್ರಿಗಳೂ ಸ್ನೇಹಿತರೂ ರಾಜ್ಯವಾಳುವ ನಿನಗೆ ಒತ್ತಾಸೆಯಾಗಿರುವರು. ಚಂದ್ರನನ್ನು ಕಾಂತಿ ಬಿಟ್ಟೀತು; ಹಿಮವಂತನನ್ನು ಹಿಮ ತೊರೆದೀತು; ಸಮುದ್ರವು ತೀರವನ್ನು ಮೀರೀತು. ಆದರೆ ನಾನು ಮಾತ್ರ ಅಪ್ಪನ ಅಪ್ಪಣೆಯನ್ನು ಮೀರೆ" ಎಂದು ಖಂಡಿತವಾಗಿ ನುಡಿದ.


ರಾಮನ ಮಾತು ಮುಗಿಯುತ್ತಲೇ ಭರತ ಕೇಳಿಕೊಂಡ: "ಆರ್ಯನೇ, ಸ್ವರ್ಣ-ಭೂಷಿತವಾದ ಈ ಪಾದುಕೆಗಳನ್ನು (ಪಾದುಕೇ ಹೇಮ-ಭೂಷಿತೇ) ಏರು. ಇವೇ ಸರ್ವ-ಲೋಕದ ಯೋಗ-ಕ್ಷೇಮಗಳನ್ನು ಉಂಟುಮಾಡುವುವು" ಎಂದು, ಪಾದುಕೆಗಳನ್ನಿತ್ತ. ರಾಮನೂ ಅವನ್ನು ಮೆಟ್ಟಿ, ಭರತನಿಗಿತ್ತ. ಭರತನು ಅವಕ್ಕೆ ವಂದಿಸಿ, ರಾಮನಿಗೊಂದು ಎಚ್ಚರಿಕೆಯನ್ನೂ ನೀಡಿದ. "ಹದಿನಾಲ್ಕು ವರ್ಷಗಳ ಕಾಲ ನಾನು ಜಟಾ-ಧಾರಿಯಾಗಿ ಫಲಾಹಾರಿಯಾಗಿ ಊರಾಚೆಯಿದ್ದುಗೊಂಡೇ, ಈ ಪಾದುಕೆಗಳ ಬಲದ ಮೇಲೇ, ರಾಜ್ಯವಾಳತಕ್ಕವನು. ಆ ಕಾಲವು ಪೂರೈಸುವಲ್ಲಿ ನಿನ್ನನ್ನು ಕಾಣಲಿಲ್ಲವೋ ನಾನು ಅಗ್ನಿ-ಪ್ರವೇಶ ಮಾಡತಕ್ಕವನೇ" ಎಂದ. ಆನೆಯ ಮೇಲೆ ಪಾದುಕೆಗಳ ಸವಾರಿಯೊಂದಿಗೆ, ಭರತನು ಕಾಲ್ನಡಿಗೆಯಲ್ಲಿ ತನ್ನ ಪರಿವಾರ-ಸಮೇತನಾಗಿ ಹಿಂದಿರುಗಿದ.

ಇಲ್ಲಿಯ ಪ್ರಶ್ನೆ ಸ್ವರ್ಣಾಲಂಕೃತ-ಪಾದುಕೆಗಳು ಎಲ್ಲಿಯವು? ರಾಮನೊಡನೆ ಮೊದಲೇ ಇದ್ದವೇ? ಏಕೆಂದರೆ ಭರತನು ತನ್ನೊಟ್ಟಿಗೆ ತಂದಿದ್ದನೆಂದು ವಾಲ್ಮೀಕಿಗಳು ಹೇಳಿಲ್ಲ. ಹಾಗಾದರೆ ರಾಮನು ಎಲ್ಲ ವೈಭವವನ್ನೂ ಬಿಟ್ಟು ಬಂದದ್ದು ನಿಜವಲ್ಲವೇ? ಕೆಲವರಂತೂ ರಾಮನಿಗೆ ತನ್ನ ಮಾವನಾದ ಜನಕನಿತ್ತ ಪಾದುಕೆಗಳಿವಿರಬೇಕು - ಎಂದು ಊಹಿಸಿದ್ದಾರೆ. ಆದರೆ ವಲ್ಕಲ-ಧಾರಿಯಾಗಿ ಬಂದ ರಾಮ ಸ್ವರ್ಣ-ಪಾದುಕೆಗಳನ್ನು ಮಾತ್ರ ತಂದಾನೇ?

ಹೀಗೆ ಬಗೆಬಗೆಯ ವ್ಯಾಖ್ಯಾನಗಳಿದ್ದರೂ, ಶ್ರೀರಂಗಮಹಾಗುರುಗಳು ಈ ಬಗ್ಗೆ ವಿವರಿಸಿರುವುದಿಂತು.

 ಶ್ರೀರಾಮನನ್ನು ವೈಭವದೊಡನೆ ಅಯೋಧ್ಯೆಗೆ ಕರೆದುಕೊಂಡು ಹೋಗಲೆಂದೇ ಭರತನೇ ಆ ಪಾದುಕೆಗಳನ್ನು ತಾನು ಬರುವಾಗ ತಂದಿದ್ದು. ಆದರೆ ಯಾವಾಗ ರಾಮನು ಸುತರಾಂ ಒಪ್ಪಲಿಲ್ಲವೋ ಆಗಲೇ ಆ ಪಾದುಕೆಗಳ ಬಲದ ಮೇಲೇ ರಾಜ್ಯವಾಳಲು ಸಂಕಲ್ಪಿಸಿದ್ದು.


ಈ ಪ್ರಸಂಗದಲ್ಲಿ ಭರತನ ಭಕ್ತ್ಯತಿಶಯವನ್ನು ಕಾಣಬಹುದು. ರಾಮನ ಬಲ-ಸಂಕಲ್ಪಗಳು ಆತನು ಪಾದುಕೆಯಿಂದಲೂ ದೊರೆಯಬಲ್ಲವು ಎಂಬ ಆತನ ದೃಢ-ವಿಶ್ವಾಸವನ್ನೂ ಗಮನಿಸಬಹುದು.

ರಾಮನು ಬಹುತೇಕ ಮನುಷ್ಯನಂತೆಯೇ ವರ್ತಿಸುವುದಾದರೂ, ಆತನ ಲೋಕ-ವ್ಯವಹಾರದ ದೃಷ್ಟಿಯಲ್ಲಿ ಧರ್ಮ-ಮೂರ್ತಿಯಾಗಿಯೂ, ಪಾರಮಾರ್ಥಿಕವಾಗಿ ಲೋಕ-ಪಾಲಕನಾದ ವಿಷ್ಣುವಿನ ಶಕ್ತಿಯನ್ನು ತಾನು ಪಾದುಕೆಗಳ ಮೂಲಕವೂ ಹರಿಸಬಲ್ಲ ಅಲೌಕಿಕನಾಗಿಯೂ ತೋರುವನಲ್ಲವೇ?


ಸೂಚನೆ: 17/08/2024 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.