Monday, September 16, 2024

ಯಕ್ಷ ಪ್ರಶ್ನೆ 106 (Yaksha prashne 106)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)




ಪ್ರಶ್ನೆ –  105 ದೈವ ಎಂದರೇನು  ?

ಉತ್ತರ - ದಾನದ ಫಲ 

ಸಾಮಾನ್ಯವಾಗಿ ಯಕ್ಷಪ್ರಶ್ನೆಯಲ್ಲಿ ಬರುವ ವಿಷಯಗಳಲ್ಲಿ ಕಾರ್ಯ - ಕಾರಣಭಾವ ಕಂಡುಬರುತ್ತದೆ.  ಪ್ರಶ್ನೆ ಎಂಬ ಕಾರಣಕ್ಕೆ ಉತ್ತರವು ಕಾರ್ಯವಾಗಿರುತ್ತದೆ ಅಥವಾ ಒಂದರಿಂದ ಇನ್ನೊಂದು ಉತ್ಪತ್ತಿಯಾದಂತಿರುತ್ತದೆ. 'ಇದಕ್ಕೆ ಅದು ಕಾರಣ' ಎಂಬ ರೂಪದಲ್ಲಿ ಇರುವುದನ್ನು ನಾವು ಕಾಣಬಹುದು. ಪ್ರಸ್ತುತವಾದ ಪ್ರಶ್ನೆಯೂ ಅದೇ ರೀತಿಯಲ್ಲಿ ಇರುವಂತಿದೆ.  ದೈವ ಎಂದರೇನು ಎಂಬ ಪ್ರಶ್ನೆಗೆ ಉತ್ತರವಾಗಿ ಧರ್ಮಜ್ಞನು 'ದಾನ' ಎಂಬ ಉತ್ತರವನ್ನು ಕೊಡುತ್ತಾನೆ. ಅಂದರೆ ದೈವವು ದಾನದಿಂದ ಹೇಗೆ ಸಂಭವಿಸುತ್ತದೆ? ಅಥವಾ ದೈವಕ್ಕೆ ದಾನವು ಯಾವ ರೀತಿಯಾಗಿ ಅನುಕೂಲಿಸುತ್ತದೆ? ಎಂಬ ವಿಷಯವನ್ನು ಇಲ್ಲಿ ಕೇಳಿದಂತೆ ಕಂಡುಬರುತ್ತದೆ. ಹಾಗಾಗಿ ನಾವಿಲ್ಲಿ ಚಿಂತಿಸಬೇಕಾದ ವಿಷಯ ಎರಡು. ದೈವ ಎಂದರೇನು? ಮತ್ತು ದೈವಕ್ಕೆ ದಾನ ಯಾವ ರೀತಿಯಾಗಿ ಕಾರಣವಾಗುತ್ತದೆ? ಎಂಬುದನ್ನು.

 

'ದೈವ' ಎಂಬ ಶಬ್ದಕ್ಕೆ ಅದೃಷ್ಟ, ಭಾಗ್ಯ, ಹಣೆಬರಹ, ದೇವತೆಗೆ ಸಂಬಂಧಿಸಿದ್ದು ಇತ್ಯಾದಿ ಅನೇಕ ಅರ್ಥವನ್ನು ಹೇಳುವುದುಂಟು. ದಾನ ಎಂಬ ವಿಷಯ ಪ್ರಸ್ತುತವಾಗಿ ಇರುವುದರಿಂದ, ನಾವಿಲ್ಲಿ ದೈವ ಎಂಬ ಪದಕ್ಕೆ ಹಿಂದೆ ಹೇಳಿದ ಎಲ್ಲ ಅರ್ಥಗಳನ್ನು ಭಾವಿಸುವುದರ ಜೊತೆಗೆ ಇನ್ನೊಂದು ವಿಶಿಷ್ಟ ಅರ್ಥವನ್ನು ತೆಗೆದುಕೊಳ್ಳಬೇಕು. ಕರ್ಮದ ಫಲವನ್ನೇ ಇಲ್ಲಿ ದೈವ ಎಂಬುದಾಗಿ ಕರೆಯಲಾಗುತ್ತದೆ. ನಾವು ಮಾಡಿದ ಕರ್ಮವು ಫಲವನ್ನು ಕಾಣುವ ಸಮಯ ಬಂದಾಗ ಅದಕ್ಕೆ 'ದೈವ' ಎಂಬುದಾಗಿ ಕರೆಯಬೇಕಾಗುತ್ತದೆ. ಕರ್ಮಫಲವು ನಮಗೆ ಸಮರ್ಪಕವಾಗಿ ಅಂದರೆ ಸಫಲವಾಗಿ ಆಗಬೇಕಾದರೆ ಯಾವುದು ಉತ್ತಮವಾದ ಸಾಧನ? ಎಂಬುದು ಈ ಪ್ರಶ್ನೆಯ ಆಂತರ್ಯವಾಗಿದೆ. ಅದಕ್ಕೆ ಉತ್ತರವೇ 'ದಾನ' ಎಂಬುದಾಗಿ. ಅಂದರೆ ದಾನ ಎಂಬ ಕರ್ಮವು ಸುಫಲವನ್ನು ಕೊಡುವುದರಲ್ಲಿ ಸಮರ್ಥವಾದದ್ದು ಎಂದು. ಅದಕ್ಕೆ ದಾನಕ್ಕಿಂತಲೂ ಅತ್ಯಂತ ಶ್ರೇಷ್ಠವಾದ ಕರ್ಮ ಇನ್ನೊಂದಿಲ್ಲ ಎಂಬುದಾಗಿ ಎಲ್ಲ ಕಡೆಗೂ ದಾನದ ಹಿರಿತನವನ್ನು "ದಾನೇನ ದ್ವಿಷಂತೋ ಮಿತ್ರಾ ಭವಂತಿ; ದಾನೇ ಸರ್ವಂ ಪ್ರತಿಷ್ಠಿತಂ, ತಸ್ಮಾತ್ ದಾನಂ ಪರಂ ವದಂತಿ" ಇತ್ಯಾದಿಯಾಗಿ ದಾನದ ಮಹತ್ತ್ವವನ್ನು ಹೇಳಿರುವುದು ಉಪನಿಷತ್ತು ಮೊದಲಾದ ಕಡೆ ಕಂಡುಬರುತ್ತದೆ. ದಾನದಿಂದ ಶತ್ರುವೂ ಕೂಡ ಮಿತ್ರ ಆಗುವುದಾದರೆ ದಾನಕ್ಕೆ ಅದೆಷ್ಟು ಹಿರಿಮೆ ಇರಬಹುದು! ಎಂಬುದನ್ನು ನಾವು ಇಲ್ಲಿ ಊಹಿಸಬಹುದು. ಕರ್ಮಗಳಲ್ಲಿ ಶ್ರೇಷ್ಠವಾದ ಕರ್ಮ ಯಾವುದು? ಎಂದು ಹೇಳುವಾಗ "ಯಜ್ಞೋ ಹಿ ಶ್ರೇಷ್ಠತಮಂ ಕರ್ಮ"  ಯಜ್ಞವು ಕರ್ಮಗಳಲ್ಲಿ ಅತ್ಯಂತ ಶ್ರೇಷ್ಠವಾದದ್ದು ಎಂಬುದಾಗಿ ಹೇಳಿ; ಆ ಯಜ್ಞ ಸಫಲವಾಗಬೇಕಾದರೆ ದಾನದಿಂದ ಮಾತ್ರ ಸಾಧ್ಯ ಎಂಬುದಾಗಿ ಹೇಳಿ; ದಾನ ಮತ್ತು ಯಜ್ಞ ಇವೆರಡೂ ಕೂಡ ಅತ್ಯಂತ ಹಿರಿದಾದವುಗಳು ಎಂಬುದಾಗಿ ಹೇಳಲಾಗಿದೆ. ಹಾಗಾಗಿ ಯಾವ ದಾನರೂಪವಾದ ಕರ್ಮ ಇದೆಯೋ, ಅದು ಯಜ್ಞದಲ್ಲಿ ಅತ್ಯಂತ ಮುಖ್ಯವಾದ್ದರಿಂದ ಯಜ್ಞವು ಉತ್ತಮವಾದ ದೈವವನ್ನು ಘಟಿಸಲು ಸಮರ್ಥವಾಗುತ್ತದೆ. ಅಂದರೆ ದಾನ ಎಂಬ ಕರ್ಮವು ಮಾತ್ರ ಮುಂದೆ ಉತ್ತಮ ದೈವವಾಗಿ - ಕರ್ಮದ ಫಲವಾಗಿ, ನಮ್ಮನು ಸನ್ಮಾರ್ಗದಲ್ಲಿ ತೊಡಗಿಸುವ ಕರ್ಮವಾಗಿದೆ. ಆದ್ದರಿಂದಲೇ ಯಕ್ಷನ ಈ ಪ್ರಶ್ನೆ ಎಷ್ಟು ಅದ್ಭುತ! ಎಂಬುದಾಗಿ ಅನಿಸುವುದು. ದಾನವು ಯಾವ ರೀತಿಯಾಗಿ ದೈವಕ್ಕೆ ಸಹಕಾರಿಯಾಗುತ್ತದೆ ಎಂಬ ವಿಷಯ ಈ ಪ್ರಶ್ನೋತ್ತರದಲ್ಲಿ ಅಡಕವಾಗಿದೆ ಎಂದು ಹೇಳಬಹುದು.


ಸೂಚನೆ : 16/9/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.