ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಅಯೋಧ್ಯಾಕಾಂಡದ ಸುಮಾರು ಮಧ್ಯಭಾಗಕ್ಕೆ ರಾಮನು ಗುಹನನ್ನು ಸಂಧಿಸುವ ಸಂನಿವೇಶವು ಒದಗಿಬರುವುದು. ಇವರಿಬ್ಬರಲ್ಲಿ ಒಬ್ಬನು ಮೇಲು, ಮತ್ತೊಬ್ಬ ಕೀಳು – ಅಲ್ಲವೇ?
ಹೇಗೆ? ರಾಮನು ಕ್ಷತ್ರಿಯವಂಶದವನು, ಇನ್ನೇನು ಯುವರಾಜನಾಗಿ ಪಟ್ಟಾಭಿಷಿಕ್ತನೇ ಆಗಬೇಕಾಗಿದ್ದವನು. ಆದರೆ ಗುಹನೋ "ನಿಷಾದಜಾತ್ಯ"ನು. ನಿಷಾದರೆಂದರೆ ಬೇಡರ ಜಾತಿಯವರು, ಎಂದರೆ ಮೃಗಗಳ ಬೇಟೆಯಿಂದಲೇ ಜೀವಿಸುವ ಕಾಡಾಡಿಗಳು. ಅಂದಿನ ಕಾಲಕ್ಕೆ ಅವರದ್ದೊಂದು ಕೆಳಜಾತಿಯೇ ಸರಿ. ರಾಮಾಯಣದ ಆರಂಭವೇ ನಿಷಾದನೊಬ್ಬನ ಪಾಪ-ಕೃತ್ಯಕ್ಕೆ ವಾಲ್ಮೀಕಿಗಳಿತ್ತ ಶಾಪದಿಂದ - ಅಲ್ಲವೇ?
ಎಲ್ಲ ನಿಷಾದರೂ ಅಧರ್ಮಿಷ್ಠರೇ - ಎಂಬ ಭಾವನೆಯಿದ್ದಿದ್ದಲ್ಲಿ, ರಾಮನಿಗೂ ಈ ಗುಹನಿಗೂ ಸ್ನೇಹವೇ ಏರ್ಪಡುತ್ತಿರಲಿಲ್ಲ. ಆದರೆ ವಾಲ್ಮೀಕಿಗಳು ಆತನನ್ನು "ರಾಮಸ್ಯಾತ್ಮಸಮಃ ಸಖಾ" ಎಂದೇ ಚಿತ್ರಿಸುತ್ತಾರೆ. ಏನು ಹಾಗೆಂದರೆ? ಗುಹನು ರಾಮನ ಸಖ. ಸಖ ಎಂದರೆ ಸ್ನೇಹಿತ; ಬರೀ ಅಷ್ಟೇ ಅಲ್ಲ. ಆತ್ಮ-ಸಮನಾದ ಸಖ! - ತನಗೆ ಸಮನಾದ ಮಿತ್ರ - ಎಂಬುದಾಗಿ ವಾಲ್ಮೀಕಿಗಳು ಚಿತ್ರಿಸುತ್ತಾರೆ. ಕೆಳಜಾತಿಯವರ ಬಗ್ಗೆ ನಿಕೃಷ್ಟ-ಭಾವನೆಯಿದ್ದಿದ್ದಲ್ಲಿ ವಾಲ್ಮೀಕಿಗಳು ಗುಹನನ್ನು ರಾಮನಿಗೆ ಸಮನೆಂಬಂತೆ ಚಿತ್ರಿಸಲು ಸಾಧ್ಯವೇ?
ರಾಜನಾದವನು ಎಲ್ಲರೊಂದಿಗೂ ಸ್ನೇಹದಿಂದಲೇ ಇರತಕ್ಕದ್ದು. ಪ್ರಜೆಗಳಲ್ಲಿ ಯಾರು ಯಾರು ಬಲಶಾಲಿಗಳೋ ಅವರೆಲ್ಲರೊಂದಿಗೆ ಸ್ನೇಹಭಾವವು ರಾಜನಿಗೆ ಮುಖ್ಯವಾಗುತ್ತದೆ. ಅಟವಿಯಲ್ಲಿ, ಎಂದರೆ ಕಾಡಿನಲ್ಲಿ, ವಾಸಮಾಡುವವರನ್ನು ಆಟವಿಕರು - ಎನ್ನುತ್ತಾರೆ. ಆಟವಿಕರಲ್ಲೂ ಅನೇಕ ಅನುಯಾಯಿಗಳನ್ನು ಹೊಂದಿರುವವರೂ, ಸೇನಾ-ಬಲವನ್ನೇ ಹೊಂದಿರುವವರೂ ಇರುವುದುಂಟು. ವಿಶೇಷ-ಪ್ರಸಂಗಗಳಲ್ಲಿ ಅವರ ಸ್ನೇಹ-ಸಾಹ್ಯಗಳೂ ರಾಜನಿಗೆ ಬೇಕಾಗಬಹುದು.
ಆದುದರಿಂದ ಅವರ ಪ್ರೀತಿ-ವಿಶ್ವಾಸಗಳನ್ನು ಗಳಿಸುವುದೂ ರಾಜನಿಗೆ ಅವಶ್ಯವಾಗುವುದು. ಹೀಗಾಗಿ ರಾಜ್ಯದ ರಕ್ಷಣೆಯ ದೃಷ್ಟಿಯಿಂದ ಊರಿನಲ್ಲಿರುವ ಹಾಗೂ ಕಾಡಿನಲ್ಲಿರುವ ಎಲ್ಲ ಬಲಶಾಲಿಗಳೊಂದಿಗೆ ಸಖ್ಯ-ಸೌಜನ್ಯಗಳನ್ನು ಕಾಪಾಡಿಕೊಳ್ಳುವುದು ರಾಜನಿಗೆ ಉಪಕಾರಿಯೇ ಆಗುತ್ತದೆ.
ಇಲ್ಲಿಯ ಗುಹನು ಜೊತೆಗೆ ಸ್ಥಪತಿಯೆಂಬುದಾಗಿಯೂ ಪ್ರಸಿದ್ಧನಾಗಿದ್ದವನು. ಸ್ಥಪತಿಯೆಂದರೆ ಶಿಲ್ಪಿ. ಹೀಗೆ ಈ ಗುಹನು ಬಲವಾನ್ ಮಾತ್ರವಲ್ಲದೆ ಸ್ಥಪತಿಯೂ ಆದವನು. ಅರ್ಥಾತ್, ಸೈನ್ಯ-ಬಲವುಳ್ಳವನೂ, ಕಲಾ-ಜ್ಞಾನವಂತನೂ ಆಗಿರುವವನು.
ಇವೆಲ್ಲ ಆತನಲ್ಲಿದ್ದ ಗರಿಮೆಗಳೇ. ಆದರೆ ಅಷ್ಟುಮಾತ್ರದಿಂದಲೇ ರಾಮನಿಗೆ ಆತ್ಮ-ಸಮನಾದ ಸಖನಾಗಿಬಿಡುವುದಿಲ್ಲ, ಅಲ್ಲವೇ? ಹಾಗಿದ್ದರೆ ಆತನಲ್ಲಿದ್ದ ಮತ್ತಾವ ಗುಣದಿಂದಾಗಿ ರಾಮನು ಆತನ ವಿಷಯದಲ್ಲಿ ಸಾದರನಾಗಿದ್ದನು?
ಒಬ್ಬನನ್ನು ಅಳೆದುಕೊಳ್ಳಲು ಆತನ ಬಗ್ಗೆ ಇತರರು ಏನು ಹೇಳುತ್ತಾರೆ? - ಎಂದು ಗಮನಿಸುವುದು ಸಹಜವೂ ಸುಲಭವೂ ಆದ ಕ್ರಮವೇ; ಆದರೆ ಅದನ್ನೇ ನೆಚ್ಚಿಕೊಳ್ಳುವುದು ಯುಕ್ತವಾಗಲಾರದು. ಬೇರೆಯವರ ಮಾತಿಗೆ ಬೆಲೆಗೊಡುವುದಕ್ಕಿಂತ ಹೆಚ್ಚಾಗಿ, ನಮ್ಮೊಂದಿಗೆ ಆ ವ್ಯಕ್ತಿಯ ವ್ಯವಹಾರವು ಯಾವ ತೆರನಾದುದು? - ಎಂಬುದನ್ನೇ ಪ್ರಧಾನವಾಗಿ ಗಮನಿಸಿಕೊಳ್ಳಬೇಕಾಗುತ್ತದೆ.
ರಾಮನೊಂದಿಗೆ ಗುಹನು ವರ್ತಿಸಿದ ಬಗೆಯೇನು? - ಎಂಬುದನ್ನು ಕಿಂಚಿತ್ತಾದರೂ ನೋಡಬೇಕಲ್ಲವೇ? ತನ್ನೆಡೆಯ ಸೀಮೆಯೊಳಗೆ ರಾಮನು ಬಂದುದನ್ನು ತಿಳಿದೊಡನೆಯೇ, ವೃದ್ಧರು, ಅಮಾತ್ಯರು, ಹಾಗೂ ಬಂಧುಗಳೊಂದಿಗೆ ಬಂದವನೇ, ರಾಮನನ್ನು ಆದರದಿಂದ ಎದುರ್ಗೊಂಡ, ಗುಹ.
ರಾಮನನ್ನು ಆಲಿಂಗಿಸಿಕೊಂಡು ಆತನು ಹೇಳಿದ್ದೇನು? "ರಾಮನೇ, ಅಯೋಧ್ಯೆಯೆಂತೋ ಈ ಪ್ರದೇಶವೂ ನಿನಗೆ ಅಂತೆಯೇ. ನಿನಗಾಗಿ ನಾನು ಏನು ಮಾಡಲಿ ಹೇಳು. ಇಂತಹ ಪ್ರಿಯಾತಿಥಿಯನ್ನು ಯಾರು ತಾನೆ ಹೊಂದಿಯಾರು?"
ಜೊತೆಗೆ, ಅರ್ಘ್ಯ-ಪಾದ್ಯಗಳನ್ನೂ ಅನ್ನಾಹಾರಗಳನ್ನೂ ವ್ಯವಸ್ಥೆ ಮಾಡಿದನು. ಮತ್ತು ಮತ್ತೆ ಹೇಳಿದನು: "ರಾಮನೇ, ನನ್ನೀ ಭೂಮಿಯೆಲ್ಲಾ ನಿನ್ನದೇ. ನಾವು ನಿನ್ನ ಆಳುಗಳು. ನೀನೇ ನಮಗೆ ಒಡೆಯ. ನಮ್ಮ ರಾಜ್ಯವನ್ನು ನೀನೇ ಚೆನ್ನಾಗಿ ಆಳು" – ಎಂದುದಲ್ಲದೆ, "ಇದೋ ನಿನಗಾಗಿ ಬಂದಿವೆ ಈ ಭಕ್ಷ್ಯ-ಭೋಜ್ಯಗಳು, ಪೇಯ-ಲೇಹ್ಯಗಳು; ನಿದ್ರಿಸಲು ಶಯ್ಯೆಗಳು ಸಿದ್ಧವಾಗಿವೆ; ನಿನ್ನ ಕುದುರೆಗಳಿಗೂ ಆಹಾರವು ಬಂದಿದೆ" ಎಂದನು.
ಮಹೋನ್ನತವಾದ ಬದುಕು ಎದುರಿಗೆ ಬಂದಿರಲು, ಅದರ ಗುರುತ್ವವನ್ನು ಗುರುತಿಸಿಕೊಂಡವನ ಮೈ-ಮನಸ್ಸುಗಳು ಸಹಜವಾಗಿ ಬಗ್ಗುವಲ್ಲಿ, "ನ ಮಮ"-"ನಮಃ"-ಗಳು ತಾವಾಗಿ ಉಂಟಾಗುವ ಬಗೆಯೊಂದುಂಟು; ಅದುವೇ ಪೂರ್ಣ-ಸಮರ್ಪಣೆಯ ತತ್ತ್ವ - ಎಂಬುದನ್ನು ಶ್ರೀರಂಗ-ಮಹಾಗುರುಗಳು ಸುಭಗವಾಗಿ ನಿರೂಪಿಸಿದ್ದರು.
ಕೇವಲ ಪರಸ್ಪರೋಪಯೋಗಕ್ಕೆ ಬರುವಷ್ಟೇ ದೃಷ್ಟಿಯಿಂದಾದ ವ್ಯವಹಾರದ ಪರಿಯಿದಲ್ಲ. ರಾಮನ ವಿಷಯದಲ್ಲಿ ಗುಹನಿಗೆ ಉತ್ಕಟ-ಗೌರವವೂ; ಗುಹನ ಬಗೆಗೆ ರಾಮನಿಗೆ ಅತಿಶಯಿತ-ಪ್ರೀತಿಯೂ - ಇದ್ದುವಾಗಿ, ಇಂತಹ ಅಕಪಟ-ಪ್ರೀತಿ-ಗೌರವಗಳ ಮಧುರ-ಮೇಳನವಿದ್ದಾಗ "ಆತ್ಮ-ಸಮ"ನೆಂಬೀ ಆರ್ದ್ರವಾದ ಉಕ್ತಿಯು ಸತ್ಯ-ಸಹಜವಾದುದೇ ಅಲ್ಲವೇ?
ಸೂಚನೆ: 31/08/2024 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.