ಪದ ಮತ್ತು ಪದಾರ್ಥದ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಷಯವೇ. " ಪದ " ಎಂದರೆ ಅರ್ಥವನ್ನು ಸುಚಿಸುವ ಅಕ್ಷರಗಳ ಜೋಡಣೆ. " ಪದಾರ್ಥ " ಅಂದರೆ ವಸ್ತುವನ್ನು ಸೂಚಿಸುವುದು. ಇದರಲ್ಲಿ ಏನು ಅಂತಹ ವಿಶೇಷವಿದೆ ? ಎಂದು ಅನ್ನಿಸಬಹುದು. ಇಲ್ಲ! ಇದರಲ್ಲಿ ಅನೇಕ ಗಹನವಾದ ವಿಚಾರಗಳಿವೆ, ಹಾಗಾಗಿ ಈ ವಿಷಯಕ್ಕೆ ಒಂದು ಅವಲೋಕನವನ್ನು ನೋಡೋಣ.
ಪದ ಎಂದರೆ ಸ್ಥಾನ. ಪರಮ ಪದ, ವಿಷ್ಣು ಪದ ಹೀಗೆಲ್ಲ ಆಯಾ ಸ್ಥಾನಗಳಿಗೆ ಪದ ಎನ್ನುವುದು. ಪದಾರ್ಥ ಎಂದಾಗ ಆ ಸ್ಥಾನದಲ್ಲಿನ ಅನುಭವ. ನಾವು ಬಳಸುವ ಶಬ್ದಗಳು "ಪದ"ದಿಂದ ಹೊರಟಿರಬೇಕು. ಮತ್ತು ಆ ಪದದಲ್ಲಿ ನಮ್ಮನ್ನು ನಿಲ್ಲಿಸಿ ಪದಾರ್ಥದ ಪರಿಚಯ ನಮಗೆ ನೀಡುವಂತಿರಬೇಕು. ಹಾಗಿದ್ದಾಗ ಪದ-ಪದಾರ್ಥಗಳ ಸಮನ್ವಯ. ಎಲ್ಲಾ ಶಬ್ದಗಳೂ ನಮ್ಮನ್ನು ಪದಾರ್ಥಕ್ಕೆ ಮುಟ್ಟಿಸುತ್ತವೆ ಎಂದೇನೂ ಇಲ್ಲ. ಉದಾಹರಣೆಗೆ- ಕಂಬವು ಕರುಹಾಕಿತು ಎನ್ನುವ ಶಬ್ದ ನಮಗೆ ಯಾವ ಬೋಧವನ್ನೂ ಕೊಡಲಿಲ್ಲ. "ಕಂಬ" "ಕರು" "ಹಾಕಿತು" ಎಂಬುದೆಲ್ಲವೂ ಪ್ರತ್ಯೇಕವಾಗಿ ಅರ್ಥವನ್ನು ಕೊಟ್ಟರೂ ಒಟ್ಟಾಗಿ ಬಳಸಿದಾಗ ಏನೂ ಹೇಳಿದಂತಾಗಲಿಲ್ಲ. ಏಕೆಂದರೆ ಕಂಬ ಕರು ಹಾಕುವುದು ಅಸಂಭವ. ಇಲ್ಲಿ ಶಬ್ದಗಳು ಪದಕ್ಕೂ ನಮ್ಮನ್ನು ಒಯ್ಯಲಿಲ್ಲ, ಪದಾರ್ಥದ ಅನುಭವವನ್ನೂ ಮಾಡಿಸಲಿಲ್ಲ.
ಸಂಸ್ಕೃತ ಭಾಷೆಯಲ್ಲಿ ಬಳಸುವ ಪದಗಳು ನಮ್ಮನ್ನು ಪದಾರ್ಥದ ಬಳಿ ಸಹಜವಾಗಿ ಒಯ್ಯಲು ಸಹಾಯ ಮಾಡುತ್ತವೆ. " ಉದಾಹರಣೆ" ಎಂಬ ಪದವಿದೆ. ಉತ್-ಆಹರಣ ಮೇಲಕ್ಕೆ ಕರೆದುಯ್ಯುವುದು, ಹಾರಿಸುವುದು ಎಂಬ ಅರ್ಥ. ಅಂದರೆ ಯಾವುದನ್ನು ಹೇಳಿದರೆ ಕೇಳಿಸಿಕೊಂಡವನ ಮನಸ್ಸು ಕೆಳಕ್ಕೆ ಇದ್ದದ್ದು ಮೇಲೆ ಆ ವಿಷಯದೆಡೆಗೆ ಹತ್ತುವಂತಾಗುವುದೋ ಅದು "ಉದಾಹರಣೆ" ಎಂದಾಗುತ್ತದೆ. ಅಂಗ್ಲ ಭಾಷೆಯ ಎಗ್ಸಾಂಪಲ್ (Example) ಇದಕ್ಕೆ ಸರಿಸಾಟಿಯಾಗಲಾರದು. ಅದು ಅವರವರು ಒಪ್ಪಿಕೊಂಡು ತಂದ ಕೃತಕವಾದ ಶಬ್ದ ಅಷ್ಟೇ.
ಕನ್ನಡದಲ್ಲಿ "ಆಕಳಿಕೆ" ಎನ್ನುವ ಪದವಿದೆ. ಅದು ಹೇಳುವಾಗಲೇ ನಿಜವಾದ ಆಕಳಿಕೆಯ ಪರಿಚಯ ನಮಗೆ ಮಾಡಿಸುವಂತಿದೆ. ಭಾರತೀಯ ಭಾಷೆಗಳಲ್ಲಿ ಪದಕ್ಕೆ -ಸ್ಥಾನಕ್ಕೆ ನಮ್ಮನ್ನು ಮುಟ್ಟಿಸುವಂತೆ ಮತ್ತು ಪದಾರ್ಥದ ರುಚಿ ನಮ್ಮಲ್ಲಿ ಬರುವಂತೆ ಭಾಷೆಯನ್ನು ಸೃಷ್ಟಿ ಸಹಜವಾಗಿ ತಂದಿದ್ದಾರೆ. "ದೇವರು" ಎನ್ನುವ ಶಬ್ದದ ಮೂಲ ಧಾತು ದಿವ್-ಎಂದರೆ ಪ್ರಕಾಶ. ಪ್ರಕಾಶಮಯವಾದ ಸ್ಥಾನದಿಂದ ಪದವೂ ಬಂದಿದೆ. ಆ ಸಂಸ್ಕಾರ ವಿದ್ದವನನ್ನು ಅಲ್ಲಿಗೇ ಕೊಂಡೊಯ್ಯುತ್ತದೆ. ಹಾಗಿಲ್ಲದವನಿಗೆ ಇದು ಪ್ರಕಾಶಮಯವಾದ ವಸ್ತುವಿನ ಬಗ್ಗೆ ಹೇಳುತ್ತಿದೆ ಎಂದು ಆ ಕಡೆಗೆ ಮನಸ್ಸನ್ನು ಕೊಂಡೊಯ್ಯಲು ಸಂಸ್ಕಾರರೂಪವಾಗಿ ಸಹಾಯ ಮಾಡುತ್ತದೆ.
"ಅವ್ಯಕ್ತವಾದದ್ದನ್ನು ವ್ಯಕ್ತಮಾಡಲು ಭಾಷೆ ಒಂದು ಮೀಡಿಯಂ(medium)ಆಗಿರುತ್ತೆ, ವಾಹಕವಾಗಿರುತ್ತೆ. ಅದು ನಮ್ಮನ್ನು ತನ್ನ ಅರ್ಥವಾದ ಅವ್ಯಕ್ತದಲ್ಲಿ ನಿಲ್ಲಿಸಬೇಕು. ಬೀಜ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಲು ವೃಕ್ಷವನ್ನು ದ್ವಾರವಾಗಿಟ್ಟುಕೊಂಡು ಮತ್ತೆ ಬೀಜಕ್ಕೇ ಹಿಂತಿರುಗುತ್ತದೆ" ಎಂಬ ಶ್ರೀರಂಗ ಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ. ಅವರ ಇನ್ನೊಂದು ಮಾತು ಸಹ ಚೇತೋಹಾರಿ- "ಮಾಧುರ್ಯ ತುಂಬಿರುವುದು ಪದಾರ್ಥದಲ್ಲಿ. ಪದಾರ್ಥವು ಅನುಭವಕ್ಕೆ ಬಂದರೆ, ಆಮೇಲೆ ಅದಕ್ಕೊಂದು ಪದ. ಭಾವದ ಅಮೃತವನ್ನು ತುಂಬಿಡಲು ಭಾಷೆಯು ಒಂದು ಪಾತ್ರ" ಎಂದು ತಿಳಿಸಿದ್ದರು.
ನಮ್ಮ ದೇಶದ ಹೆಸರು ಭಾರತ- ಹೆಸರಿನಲ್ಲೇ ಈ ದೇಶದ ಜನರ ಜೀವನ ಲಕ್ಷ್ಯವನ್ನು ಜ್ಞಾಪಿಸಿದ್ದಾರೆ- ಭಾ ಎಂದರೆ ಬೆಳಕು, ರತ ಎಂದರೆ ಅದರಲ್ಲಿ ರತಿ-ಪ್ರೀತಿಯುಳ್ಳವರು. ಒಳಗೆ ಬೆಳಗುವ ಪರಮಾತ್ಮ ಪ್ರಕಾಶದಲ್ಲಿ ಪ್ರೀತಿಯುಳ್ಳವರು ಭಾರತರು. ಪದವು ಪದಾರ್ಥವನ್ನು ಹೇಳುತ್ತಿದೆಭಾರತೀಯ ಮಹರ್ಷಿಗಳಿಂದ ಬಂದ ಪದವೆಲ್ಲವೂ ಪದಾರ್ಥಕ್ಕೆ ನಮ್ಮನ್ನು ಒಯ್ಯುವ,ಅತ್ತ ದಿಗ್ದರ್ಶನ ಮಾಡುವ ಮಾತುಗಳಾಗಿಯೇ ಬಂದಿವೆ. ಅಂತಹ ಪದಗಳನ್ನು ಅರ್ಥವರಿತು ನಮ್ಮ ಜೀವನದ ಶ್ರೇಯಸ್ಸಿಗಾಗಿ ಬಳಸುವ ಶಿಕ್ಷಣವನ್ನು ನಾವೆಲ್ಲರೂ ಪಡೆಯುವಂತಾಗಲಿ ಎಂದು ಪ್ರಾರ್ಥಿಸೋಣ. ಹಾಗಾದಾಗ ನಾವೆಲ್ಲರೂ ನಿಜವಾದ ಅರ್ಥದಲ್ಲಿ ಭಾರತರಾಗುತ್ತೇವೆ. ಅತ್ತ ನಮ್ಮ ಮನಸ್ಸುಗಳು ಹೆಜ್ಜೆ ಹಾಕಲಿ ಎಂದು ಭಗವಂತನಲ್ಲಿ ಬೇಡೋಣ.
ಸೂಚನೆ: 29/08/2024 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.