Thursday, August 8, 2024

ದಶರಥನು ಮೆರೆಸಿದ ಧರ್ಮಪ್ರಭುತ್ವ (Dasarathanu Meresida Dharmaprabhutva)

ಲೇಖಕರು : ಡಾ. ಹಚ್.ಆರ್. ಮೀರಾ

(ಪ್ರತಿಕ್ರಿಯಿಸಿರಿ lekhana@ayvm.in)



ದಶರಥಮಹಾರಾಜನ ಮಕ್ಕ ಳಾದ ರಾಮಲಕ್ಷ್ಮಣರನ್ನು ವಿಶ್ವಾಮಿತ್ರರು ತಮ್ಮೊಂದಿಗೆ ಯಜ್ಞರಕ್ಷಣೆಗೆಂದು ಕರೆದೊಯ್ದರಷ್ಟೆ? ತದನಂತರ, ಶಿವಧನುಸ್ಸಿನ ದರ್ಶನವೂ ಆಯಿತು, ಅದನ್ನು ಶ್ರೀರಾಮನು ಮುರಿದದ್ದೂ ಆಯಿತು. ತತ್ಫಲವಾಗಿ, ಸೀತೆಯೊಂದಿಗೆ ರಾಮನದೂ, ಇನ್ನು ಮೂವರು ರಾಜಕುಮಾರಿಯರೊಂದಿಗೆ ರಾಮನ ತಮ್ಮಂದಿರದ್ದೂ, ವಿವಾಹಗಳು ನೆರವೇರಿದವು. ಪುನಃ ಅಯೋಧ್ಯೆ ಸೇರಿಯಾದ ಮೇಲೆ, ಎಲ್ಲೆಲ್ಲಿಯೂ ಸಂತಸದ ವಾತಾವರಣವೇ. ಹಲಕಾಲ ಹೀಗೆ ಕಳೆಯಿತು. ಶೌರ್ಯ, ಆಡಳಿತದಲ್ಲಿದ್ದ ಚುರುಕು-ಧರ್ಮಪರತೆಗಳು, ದೀನರಲ್ಲಿ ದಯೆ - ಹೀಗೆ ರಾಮನ ಹಲವು ಸದ್ಗುಣಗಳು ಎಲ್ಲರಿಗೂ ಪರಿಚಿತವಾಗಿಯೇ ಇತ್ತು. ತನ್ನನ್ನಾವರಿಸಿದ ಮುಪ್ಪು ದಶರಥನ ಮನಸ್ಸಿನಲ್ಲಿ ಆಡುತ್ತಿತ್ತು. ರಾಮನನ್ನು ಕಂಡಾಗ "ಮುಂದಿನ ರಾಜನಾಗಲು ಇವನೇ ಯೋಗ್ಯ" ಎಂಬ ಭಾವನೆ ದೃಢಪಟ್ಟಿತ್ತು. ತನ್ನ ಕಣ್ಣ ಮುಂದೆಯೇ ರಾಮನಿಗೆ ರಾಜ್ಯಾಭಿಷೇಕವಾಗಬೇಕೆಂದೆನಿಸಿತ್ತು. ಹಿರಿಯ ಮಗನಾದ್ದರಿಂದ ಸಹಜವಾಗಿ ಅವನೇ ಉತ್ತರಾಧಿಕಾರಿಯೂ ಹೌದಾಗಿತ್ತು. ದಶರಥನು ಪುರಪ್ರತಿನಿಧಿಗಳನ್ನು, ಗ್ರಾಮಮುಖ್ಯರನ್ನೂ, ಪ್ರಧಾನರಾದ ರಾಜರುಗಳನ್ನೂ ಕರೆಸಿದನು. ಅವರೆಲ್ಲರ ಸಭೆಯಲ್ಲಿ ಅವರ ಮುಂದೆ ತನ್ನ ಇಂಗಿತವನ್ನು ಇಟ್ಟು ಹೀಗೆಂದನು: "ಇದು ನನಗೆ ಪ್ರಿಯವಾದದ್ದು. ಇದಕ್ಕಿಂತ ಬೇರೆಯಾದ ಹಿತವು ನಿಮಗೆ ತೋಚಿದಲ್ಲಿ ದಯವಿಟ್ಟು ತಿಳಿಸಿ". ಅವರೆಲ್ಲರೂ ಸಮಾಲೋಚಿಸಿ, ಬಹಳ ಸಂತೋಷದಿಂದ ಏಕಮತದಿಂದ ಒಪ್ಪಿದರು. ರಾಮನಿಗೆ ಯೌವರಾಜ್ಯಾಭಿಷೇಕ ಮಾಡಬೇಕೆಂದು ಹೇಳಿದರು. ಹೀಗೆ ಆದದ್ದು ರಾಮನ ಪಟ್ಟಾಭಿಷೇಕದ ನಿಷ್ಕರ್ಷೆ.

ದೊರೆತನದ ಅಧಿಕಾರ-ವೈಭವಗಳನ್ನು ಬಹುಕಾಲ ಅನುಭವಿಸಿದ್ದವ ದಶರಥ. ತನಗೆ ಬೇಕಾದವರಿಗೆ ಸಿಂಹಾಸನವನ್ನು ಆತ ಕೊಡಬಹುದು ಎಂದು ನಾವು ಭಾವಿಸಿದರೆ ತಪ್ಪಾಗಲಾರದು. ಏಕೆಂದರೆ, ಸ್ವೇಚ್ಛೆಯಾಗಿ ವರ್ತಿಸುವುದೇ ಪ್ರಭುತ್ವದ ಲಕ್ಷಣವಾಗಿ ಪ್ರಪಂಚದ ಹಲಜಾಗಗಳಲ್ಲಿ ಕಾಣಬಹುದು. ಮೇಲಾಗಿ ಹಿರಿಯ ಪುತ್ರ, ರಾಮ. ಸಾಮಾನ್ಯವಾಗಿ ಪೈತೃಕವಾದ ವ್ಯವಸ್ಥೆಗಳಲ್ಲಿ ಹಿರಿಯ ಮಗನೇ ವಾರಸುದಾರ. ಇಷ್ಟರಿಂದಲೂ ರಾಮನಿಗೆ ಯುವರಾಜನ ಪಟ್ಟವೆಂದರೆ ತಪ್ಪೆನ್ನಲಾಗದು. ಇವೆಲ್ಲದರ ಮೇಲೆ, ರಾಮನೋ ಸದ್ಗುಣಸಂಪನ್ನ. ರಾಜನಾಗಲು ಬೇಕಾದ ಎಲ್ಲ ಗುಣಗಳೂ ಅವನಲ್ಲಿದೆ. ಇನ್ನೇನು ಮತ್ತೆ? ಯಾರನ್ನೂ ಕೇಳದೆಯೂ ದಶರಥನು ರಾಜ್ಯವನ್ನು ರಾಮನಿಗೆ ಹಸ್ತಾಂತರಿಸಿದರೆ ವಿರೋಧವೆಲ್ಲಿಯದು? ಅಷ್ಟು ಜನಪ್ರತಿನಿಧಿಗಳ ಸಮ್ಮತಿ ಕೇಳಬೇಕಿತ್ತೇ?

ರಾಜನು ಸರ್ವಾಧಿಕಾರಿಯೇ ಆದರೂ ಅವನು ಧರ್ಮದ ಪ್ರತಿನಿಧಿ. ರಾಜನು ಪಟ್ಟಾಭಿಷೇಕಪ್ರಸಂಗದಲ್ಲಿ ಮಾಡುವ ಪ್ರತಿಜ್ಞೆಯನ್ನು ಶ್ರೀರಂಗಮಹಾಗುರುಗಳು ನೆನೆಪಿಸುತ್ತಾರೆ: "'ನಾನು ನಿಮ್ಮನ್ನು ದಮನಮಾಡಿದರೆ ನನ್ನ ಸ್ವರ್ಗ, ಜೀವನ, ಸಂತಾನ ಇವುಗಳು ನಷ್ಟವಾಗಲಿ' ಎಂದು. ಇದು ಕೇವಲ ಪ್ರತಿಜ್ಞೆಯಲ್ಲ. ಬರೀ ಮಾತಲ್ಲ. ಸತ್ಪ್ರಜೆಗಳ ಜೊತೆಗೆ ಆದ ಒಪ್ಪಂದವಿದು".

ಪ್ರಜೆಗಳೆಲ್ಲರೂ ಸ್ವಧರ್ಮಗಳನ್ನು ನೆರವೇರಿಸುತ್ತಾ, ದಮನವಿಲ್ಲದೆ ಇರಬೇಕೆಂದರೆ ಎಲ್ಲರಿಗೂ ಹಿತವಾದದ್ದನ್ನೇ ರಾಜನು ಆಯ್ಕೆ ಮಾಡಬೇಕು. ರಾಮನೇ ಯೋಗ್ಯನೆಂದು ತಿಳಿದಿದ್ದರೂ, ಮೋಹದಿಂದ ತಾನು ಧರ್ಮಾಂಧನಾಗಬಾರದು - ಎಂಬ ಭಯ-ಕಾಳಜಿಗಳು ದಶರಥನಲ್ಲಿದ್ದವು. ಧರ್ಮಿಷ್ಠನಾದ ಅವನು, ಧರ್ಮಿಷ್ಠರೂ ಮಧ್ಯಸ್ಥರೂ ಆದ ಆ ಪ್ರಜಾಮುಖ್ಯರೇ ಹಿತವನ್ನು ಹೇಳಬೇಕೆಂದು ಕೇಳಿಕೊಂಡನು. ಅವರೂ ಸಹ ಸುಮ್ಮನೆ ಹೂಗುಡಲಿಲ್ಲ - ಅವನ ಕಾಳಜಿಯನ್ನರಿತು, ಸಮಾಲೋಚನೆಯ ನಂತರವೇ ಅಸ್ತು ಎಂದರು.

ಹೀಗೆ ಋಷಿಪರಂಪರೆಯಲ್ಲಿ ಧರ್ಮವನ್ನೇ ರಾಜನಿಗೂ ಪ್ರಭುವಾಗಿಸಿರುವುದು ಎಷ್ಟು ಯುಕ್ತ!

ಸೂಚನೆ: 07/8/2024 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.