Tuesday, August 13, 2024

ಕೃಷ್ಣಕರ್ಣಾಮೃತ - 26 ಮುಗ್ಧ-ಮುರಳೀಧರನ ಮಧುರಿಮೆ (Krishnakarnamrta -26 Mughdha-Muralidharana Madhurime)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಯಾವುದೇ ಕವಿಯಾಗಲಿ ತನ್ನ ಕೃತಿಯನ್ನು ಜನರು ಮತ್ತೆ ಮತ್ತೆ ಓದಿ, ಅಥವಾ ಆಲಿಸಿ, ಆಸ್ವಾದಿಸುತ್ತಿರಬೇಕೆಂದು ಆಶಿಸುವವನೇ. ಕಾವ್ಯದಲ್ಲಿ ಎರಡು ಅಂಶಗಳಿರುತ್ತವೆ - ಏನನ್ನು ಹೇಳುವುದು ಎಂಬುದೊಂದು, ಹೇಗೆ ಹೇಳುವುದು ಎಂಬುದೊಂದು. ಏನೂ ವಿಶೇಷವಿಲ್ಲದ ವಿಷಯವನ್ನು ಹೇಳುವುದಾಗಲಿ, ಏನೂ ವಿಶೇಷವಿಲ್ಲದ ಬಗೆಯಲ್ಲಿ ಹೇಳುವುದಾಗಲಿ, ರಂಜಕವಾಗಲಾರದು. ಎರಡರಲ್ಲೂ ವಿಶೇಷತೆಯಿದ್ದರೆ ಅದು ಬೀರುವ ಪರಿಣಾಮವೇ ಅತಿಶಯವಾದದ್ದು.

ಬದಲಾಗಿ, ವಸ್ತುವು ಸಾಧಾರಣವಾಗಿದ್ದು ನಿರೂಪಣೆ ಮಾತ್ರವೇ ಚಮತ್ಕಾರಿಯಾಗಿದ್ದರೆ, ಅದರ ಪ್ರಭಾವ ಕೊಂಚ ಕಾಲವಿದ್ದೀತು, ಬಳಿಕ ಬಹು ಬೇಗನೆ ಅದು ಮಾಸುವುದೇ; ಆದರೆ ವಸ್ತುವು ಸೊಗಸಾಗಿದ್ದು ಅದರ ಅಭಿವ್ಯಂಜನವಷ್ಟೆ ಅತಿಶಯವಾಗಿ ಮೂಡಿಲ್ಲದಿದ್ದರೆ, ಅದರ ಪ್ರಭಾವವು ಕಿಂಚಿತ್ತಾಗಿ  ಕಡಿಮೆಯಾಗುವುದೆಂದಾದರೂ, ಅದುವೇ ಹೆಚ್ಚು ಕಾಲ ನಿಲ್ಲುವುದು. ಆದರಣೀಯವಾದ ವಸ್ತುವಿನಲ್ಲೇ ಏನೋ ಒಂದು ಆಕರ್ಷಣೆಯಿರುತ್ತದೆಯಲ್ಲವೇ?

ಕವಿಗಳೆಲ್ಲರೂ ಹೀಗೆ ಅನ್ಯರ ಮೆಚ್ಚುಗೆ ಸಂಪಾದಿಸಲೆಂದೇ ಏನು ಬರೆಯುವುದಿಲ್ಲ. ಸ್ವಾನಂದಕ್ಕಾಗಿ ಬರೆಯಬಹುದು; ಅದು ತಾನಾಗಿಯೇ ಪರಾನಂದಕ್ಕೂ ಕಾರಣವಾಗಬಹುದು. ವಾಚಕರನ್ನು ಸ್ಮರಿಸಿ ಬರೆಯುವುದಾದರಂತೂ ಉತ್ತಮ-ವಸ್ತುವನ್ನು ಆಧರಿಸಿ ಬರೆಯುವುದರಲ್ಲಿಯೇ ಹೆಚ್ಚು ಸಾರ್ಥಕ್ಯ-ಸಂತೋಷಗಳು.

ಶ್ರೀಕೃಷ್ಣನ ಪರಮ-ಭಕ್ತನಾದ ಲೀಲಾಶುಕನಿಗೆ ತನ್ನ ಹೃದಯೇಶ್ವರನಾದ ಕೃಷ್ಣನ ಚರಿತಕ್ಕಿಂತಲೂ ಉದಾತ್ತವಾದ ವಸ್ತುವು ತೋರೀತೇ? ಭಗವಂತನ ಎಲ್ಲ ಅವತಾರಗಳಲ್ಲೂ ತನ್ನದೇ ಆದ ಸೌಂದರ್ಯವೆಂಬುದಿರುವುದಾದರೂ, ಶ್ರೀಕೃಷ್ಣನ ಸೊಗಸಿಗೆ ಸಾಟಿಯುಂಟೇ? ಮಧುರತೆಯ ಸಾಕಾರವಾದ ಮೂರ್ತಿಯೇ ಶ್ರೀಕೃಷ್ಣ. ಆತನ ಮಾಧುರ್ಯವನ್ನು ತನ್ನ ಮಾತಿನಲ್ಲಿ ಮೂಡಿಸುವ ತವಕ ಲೀಲಾಶುಕನಿಗೆ.

ಆಸೆಯೇನೋ ಹೀಗೆ ಹಿರಿದೇ; ಆದರೆ ತನ್ನ ಸಾಮರ್ಥ್ಯದ ಬಗ್ಗೆಯೇ ನೆಚ್ಚಿಕೆಯಿಲ್ಲ, ಕವಿಗೆ. ಎಂದೇ ಆತನು ಕೇಳಿಕೊಳ್ಳುತ್ತಿರುವುದು, ಆ ಮಾಧುರ್ಯವು ಒಂದಿಷ್ಟು ತನ್ನ ವಾಕ್ಕಿನಲ್ಲಿ ವಿಜೃಂಭಿಸಲಿ - ಎಂದು.

ಆದರೆ ಭಾವವುಕ್ಕಿಬಂದರೂ ಅದನ್ನು ಮಾತಿಗಿಳಿಸುವುದು ಎಷ್ಟು ಕಷ್ಟವೆಂಬುದನ್ನು ಕವಿಗಳೆಲ್ಲರೂ ಬಲ್ಲರೇ. ಅದರಲ್ಲೂ ಶ್ರೀಕೃಷ್ಣನ ಮಾಧುರ್ಯವೆಂಬುದು ಅದೆಷ್ಟು ಉದಗ್ರ – ಎಂದರೆ ಉನ್ನತ - ಎಂಬುದನ್ನು ಆತ ಬಲ್ಲ. ಎಂದೇ ಅದರ ಏನೋ ಒಂದು ಅಂಶವಷ್ಟೇ ತನ್ನ ಕೃತಿಯಲ್ಲಿ ಮೂಡಿದರೂ ತನ್ನನ್ನು ಧನ್ಯನೆಂದುಕೊಳ್ಳತಕ್ಕವನು, ಲೀಲಾಶುಕ. ಎಂದೇ ಆ ಮಾಧುರ್ಯವು ಪೂರ್ಣವಾಗಿ ತನ್ನ ಕಾವ್ಯದಲ್ಲಿ ತೋರಿಬರದಿದ್ದರೂ, ಅದರ ಒಂದು ಅಂಶವಾದರೂ ಬರಲೆಂಬ ಹಂಬಲ, ಆತನಿಗೆ.

ಬಹಳ ಉನ್ನತಸ್ಥಾನದಲ್ಲಿರುವವರನ್ನಾರನ್ನಾದರೂ ಮನೆಗೆ ಬರಮಾಡಿಕೊಳ್ಳುವುದು ಸುಲಭವಲ್ಲ. ಆದರೆ ಅದಕ್ಕಿಂತಲೂ ಕಷ್ಟವೆನಿಸತಕ್ಕದ್ದು ಆಮೇಲೆ ಅವರನ್ನು ಯುಕ್ತವಾದ ರೀತಿಯಲ್ಲಿ ಆದರಿಸುವುದು. ಏಕೆಂದರೆ ಅವರಿಗೆ ಉಪಚಾರವೆಂದುಕೊಂಡು ಮಾಡಿದುದು ಅಪಚಾರವಾಗಿಬಿಡಬಹುದು!

ಹಾಗೆಯೇ ಉದಾತ್ತವಾದ ವಸ್ತುವನ್ನು ಆಯ್ದುಕೊಳ್ಳುವುದೂ ಸುಲಭವಲ್ಲ: ಆದರೆ ಅದಕ್ಕಿಂತಲೂ ಹೆಚ್ಚಾಗಿ, ಅದಕ್ಕೆ ತಕ್ಕ ವಾಕ್ಕಿನ ನ್ಯಾಯವನ್ನು ಸಲ್ಲಿಸುವುದು ಸುಲಭವಾದ ಕೆಲಸವೇನಲ್ಲ.

ಮಧುರ-ಮೂರ್ತಿಯಾದ ಕೃಷ್ಣನ ಮಾಧುರ್ಯದ ಅಲ್ಪಾಂಶವು ತನ್ನ ವಚನದಲ್ಲಿ ಮೂಡುವುದಾದರೂ ತೃಪ್ತಿ, ಲೀಲಾಶುಕನಿಗೆ. ಲವ-ಲೇಶ-ಕಣ - ಎಂಬೀ ಮೂರು ಶಬ್ದಗಳು ಸಮಾನಾರ್ಥಕವಲ್ಲವೇ? ಕಣವೆಂದರೇ ಸಣ್ಣ ಚೂರು; ಕಣೀ ಎಂದರೆ ಅದರ ಒಂದು ಸಣ್ಣ ಅಂಶವಾಯಿತು; ಕಣಿಕಾ ಎಂದರಂತೂ ಆ ಅಲ್ಪದ ಅತ್ಯಲ್ಪಾಂಶ. "ಕಣಿಕಾಪಿ ಕಾಪಿ ಕಾಪಿ" ಎನ್ನುವುದು ಈ ಕವಿವರ್ಯನ ತೀವ್ರವಾದ ದೈನ್ಯವನ್ನು ತೋರಿಸುತ್ತದೆ: ಇಷ್ಟೇ ಇಷ್ಟು ಸಾಧಿತವಾದರೂ ತುಷ್ಟಿಯೇ ತನಗೆ!

ಸುಂದರನಾದ ಪುರುಷನೊಬ್ಬನ ಫೋಟೋವನ್ನು ತೋರಿಸಿದಾಗ ಆತನ ಸೌಂದರ್ಯದ ಎಷ್ಟೋ ಭಾಗವು ಮನಸ್ಸಿಗೆ ಬರುತ್ತದಲ್ಲವೇ? ಆದರೆ, ಅದರ ಬದಲಾಗಿ, ಆತನನ್ನು ನಿತ್ಯ ನೋಡುವ ಮನೆಯ ಮಂದಿಯನ್ನೇ ಆತನನ್ನು ಹತ್ತಾರು ವಾಕ್ಯಗಳಲ್ಲಿ ಬಣ್ಣಿಸಿ – ಎಂದರೆ, ಅವರು ಯತ್ನಿಸಿದರೂ ಸಹ, ಆತನು ಹೇಗಿರುವನೆಂಬ ಚಿತ್ರವು ಮತ್ತೊಬ್ಬರ ಮನಸ್ಸಿನಲ್ಲಿ ಮೂಡುವುದಾದೀತೇ? ಹಾಗಿರಲು, ಲೋಕೋತ್ತರ- ಪುರುಷನಾದ ಮುರಾರಿಯ ಸೊಬಗನ್ನು ಎಷ್ಟು ಮಾತಿನಲ್ಲಿ ಎಷ್ಟು ತರಲಾದೀತು?

ಯಾವ ಸೊಬಗದು? -  ಎಂಬ ಪ್ರಶ್ನೆಗೆ ಎರಡು ಉತ್ತರಗಳು. ಮೊದಲನೆಯದು ಆ ಕಿಶೋರ-ಮೂರ್ತಿಯದು, ಎರಡನೆಯದು ಆತನ ಆನನೇಂದುವಿನದು.

ದೊಡ್ಡವನೆನಿಸಿಕೊಳ್ಳದವ ಕಿಶೋರ. ಕಿಶೋರಾವಸ್ಥೆಯಲ್ಲಿ ಮುಖದಲ್ಲಿ ಕಂಗೊಳಿಸುವ ಹೊಳಪು-ಮುಗ್ಧತೆಗಳು ಅನ್ಯಾದೃಶವಾದುವು, ಎಂದರೆ ಸಾಟಿಯಿಲ್ಲದವು. ಕೃಷ್ಣನೆಂದರೆ ಕಮನೀಯ-ಕಿಶೋರನೇ ಸರಿ. ಕಮನೀಯವೆಂದರೆ ಕಾಂತಿಯುಕ್ತ - ಎಂದರ್ಥ. ಕಮನೀಯವೆಂಬುದನ್ನು ಮೂರ್ತಿಗೇ ನೇರಾಗಿ ಅನ್ವಯಿಸಲೂ ಬಹುದು.

ಎರಡನೆಯದಾಗಿ ಕೃಷ್ಣನ ಮುಖ-ಚಂದ್ರವು ಸೊಗಸಾದುದು. ಚಂದ್ರ-ವಂಶದಲ್ಲಿ ಜನಿಸಿದ ಆತನ ಆನನ-ಚಂದ್ರ ಮಧುರವಾಗಿದೆ. ಚಂದ್ರನಿಗಿಂತಲೂ ಆಹ್ಲಾದ-ಕರವಾದದ್ದುಂಟೇ? ಅದರಲ್ಲೂ, ತನ್ನ ವೇಣು-ಧ್ವನಿಯನ್ನೇ ಕಿಶೋರ-ಕೃಷ್ಣನು ಆಲಿಸುತ್ತಿರುವಾಗಿನ ಆತನ ವದನ-ಚಂದಿರನ ಸುಂದರತೆಗೆ ಸರಿಸಮನುಂಟೇ?

ಕಲವೆಂದರೆ ಅಸ್ಫುಟ-ಮಧುರ. ಎಷ್ಟೋ ವೇಳೆ ವಾದ್ಯನುಡಿಸುವವರು ಇದನ್ನೇ ನುಡಿಸುತ್ತಿದ್ದಾರೆಂದು ಸಾಹಿತ್ಯವನ್ನು ಹೇಳಲು ತೋರದೇ ಹೋಗಬಹುದು. ಸಾಹಿತ್ಯವು ವ್ಯಕ್ತವಾಗದಿದ್ದರೂ, ಅಸ್ಫುಟವಾಗಿದ್ದರೂ, ಧ್ವನಿಯು ಕಿವಿಗಳಿಗೆ ಆನಂದ-ಪ್ರದವಾಗಿದ್ದಲ್ಲಿ, ಇದನ್ನು ಕಲ, ಅಥವಾ ಕಲ-ರವ – ಎನ್ನುತ್ತಾರೆ. "ಕಲಂ ಅವ್ಯಕ್ತ-ಮಧುರಂ". ಕೃಷ್ಣನ ವೇಣು-ಕ್ವಣಿತದಲ್ಲಿದೆ ಆ ಕಲ-ಧ್ವನಿ. ಕ್ವಣಿತವೆಂದರೆ ಹೊಮ್ಮುವ ನಾದ. ತನ್ನ ವೇಣುವಿನಿಂದ ತಾನೇ ಹೊರಡಿಸುತ್ತಿರುವ ಧ್ವನಿಯ ಇಂಪನ್ನು ತಾನೇ ಆಲಿಸಿ ನಲಿಯುತ್ತಿದೆ, ಕೃಷ್ಣನ ಸುಮುಖ.

ಹೀಗೆ ಈ ಎರಡು ಅಂಶಗಳಿಂದ ಕೂಡಿರುವ – ಎಂದರೆ ಆತನ ಮೂರ್ತಿಯ, ಮತ್ತು ಅಲ್ಲೂ ಆತನ ಸುವದನದ -ಮಧುರಿಮೆಯನ್ನು ಬಣ್ಣಿಸಿಬಿಡುವೆನೆಂದು ಧೈರ್ಯದಿಂದ ಹೇಳಿಕೊಳ್ಳುವವರಾರು?

 

ಕಣ್ಣಾರ ಕಂಡು ಮೆಚ್ಚಿದ ಒಂದು ದೃಶ್ಯವನ್ನೋ, ಪುರುಷನನ್ನೋ ವರ್ಣಿಸಿ – ಎಂದರೆ ಕೂಡ ಸಾಧ್ಯವಾಗದ ಸಂನಿವೇಶವಿರುತ್ತದೆ. ಕಣ್ಣಿರಲಿ, "ನೀನೇ ಚಪ್ಪರಿಸಿದ ಕಲ್ಲುಸಕ್ಕರೆಯ ಮಾಧುರ್ಯವನ್ನು  ನೀನೇ ಹೇಳು, ನಾಲಿಗೆಯೇ!" ಎಂದರೂ, ನಾಲಿಗೆಯು ಆಗುತ್ತದೆನ್ನುತ್ತದೆಯೇ?

ಬೆಲ್ಲ, ಕಬ್ಬಿನರಸ, ಹಾಲು - ಇವುಗಳೆಲ್ಲದರಲ್ಲೂ ಮಾಧುರ್ಯವುಂಟು. ಹೋಗಲಿ ಈ ನಾನಾ-ಮಾಧುರ್ಯಗಳಲ್ಲಿನ ಭೇದಗಳನ್ನಾದರೂ ಮಾತಿನಲ್ಲಿ ಹೇಳು - ಎಂದರೆ ಹೇಳಲಾದೀತೇ ನಾಲಿಗೆಗೆ?

ಸವಿದ ಹಣ್ಣನ್ನೇ ಬಣ್ಣಿಸಲಾರೆವಾದ ನಾವು, ಎಳಸಿನ ಕೃಷ್ಣನ ಮುಗ್ಧ-ಮೂರ್ತಿಯ, ದಿವ್ಯವಾದ ವೇಣು-ನಾದದಲ್ಲಿ ಮುಳುಗಿದ, ಈ ಬಾಲನ ಸೊಗಸನ್ನು ಅದೆಂತಹುದು? – ಎಂದು ಕೇಳಿದರೆ ಹೇಳಿಯೇವೇನನ್ನು? ಮನಸೆಳೆವ ಕಿಶೋರ ಆತ. ಆತನ ಮುಗ್ಧ-ಮೂರ್ತಿಯ ಮುಖ-ಚಂದ್ರನ ಮೋಹಕ-ಮಾಧುರ್ಯವನ್ನು ಮಾತುಗಳಲ್ಲಿ ಮೂಡಿಸಲಾದೀತೇ?

ಅಲ್ಲಿಗೆ, ಲೀಲಾಶುಕನ ಈ ದೈನ್ಯ-ಭಾವವಾದರೂ ಸಹಜವಾದುದೇ ಅಲ್ಲವೇ?

 

ಕಮನೀಯ-ಕಿಶೋರ-ಮುಗ್ಧ-ಮೂರ್ತೇಃ

      ಕಲ-ವೇಣು-ಕ್ವಣಿತಾನನೇಂದೋಃ|

ಮಮ ವಾಚಿ ವಿಜೃಂಭತಾಂ ಮುರಾರೇಃ

      ಮಧುರಿಮ್ಣಃ ಕಣಿಕಾಪಿ ಕಾಪಿ ಕಾಪಿ? ||

 

ತನ್ನ ಅಶಕ್ತಿಯನ್ನು ಅರಿಕೆಮಾಡಿಕೊಳ್ಳುವ ಈ ಪದ್ಯದಲ್ಲೂ ಅನುಪ್ರಾಸವೇನೂ ಅಲ್ಪವಾಗಿ ಬಂದಿಲ್ಲ. ಕಮನೀಯ-ಕಿಶೋರ-ಕಲ-ಕ್ವಣಿತಗಳಲ್ಲಿಯ ಕಕಾರ-ಪ್ರಾಸವನ್ನು ಗಮನಿಸಬಹುದು. ಶ್ಲೋಕದ ಕೊನೆಯ ಪಾದದಲ್ಲಂತೂ  ಕಣಿಕಾಪಿ-ಕಾಪಿ-ಕಾಪಿ ಎಂಬ ಪದಗುಚ್ಛದಲ್ಲೇ ಒಂದು ಗಮನೀಯವಾದ ಕಮನೀಯತೆಯಿದೆ.

ಯಾವ ಮಾಧುರ್ಯಕ್ಕೆ ನಾನು ಮನಸೋತಿದ್ದೇನೋ ಅದನ್ನು ಮಾತುಗಳಿಂದ ಮುಟ್ಟಿಸಲಾರೆ – ಎಂದು ತನ್ನ ಅಶಕ್ತಿಯನ್ನೇ ಅಳುಕಿಲ್ಲದೆ ಅರಿಕೆಮಾಡಿಕೊಳ್ಳುವ ಈ ಮುದ್ದಾದ ಮಾತುಗಳಲ್ಲೇ ಒಂದು ಮನನೀಯವಾದ ಮಧುರತೆಯಿಲ್ಲವೇ?

ಸೂಚನೆ : 10/08/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ