Tuesday, August 20, 2024

ಇರಾವಂತನ ಜನನ – ಚಿತ್ರಾಂಗದೆಯ ದರ್ಶನ Iravantana Janana - Chitrangadeya Darshana

 ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಉಲೂಪಿಯು ತನ್ನ ಪ್ರಾರ್ಥನೆಯನ್ನು ಮುಂದುವರಿಸಿ ಕೇಳಿದಳು: "ದೀನರನ್ನೂ ಅನಾಥರನ್ನೂ ನೀನು ಪ್ರತಿದಿನವೂ ರಕ್ಷಿಸುವೆಯಲ್ಲವೇ? ನಾನು ನಿನಗೆ ಶರಣಾಗಿದ್ದೇನೆ. ಖಿನ್ನಳಾಗಿ ಗೋಳಿಡುತ್ತಿದ್ದೇನೆ. ನಿನ್ನಲ್ಲಿ ಬೇಡಿಕೊಳ್ಳುತ್ತಿದ್ದೇನೆ. ನಿನ್ನಲ್ಲಿ ನಾನು ಅನುರಕ್ತಳಾಗಿದ್ದೇನೆ. ಆದುದರಿಂದ ನನಗೆ ಪ್ರಿಯವಾದುದನ್ನು ನೀನು ಮಾಡು. ನನಗೆ ಆತ್ಮ-ದಾನವನ್ನಿತ್ತು ನನ್ನ ಅಪೇಕ್ಷೆಯನ್ನು ಪೂರೈಸು" ಎಂದಳು.

ಉಲೂಪಿಯ ಪ್ರಾರ್ಥನೆಯನ್ನು ಅರ್ಜುನನು ನೆರವೇರಿಸಿದನು; ಧರ್ಮವನ್ನು ಮುಂದಿಟ್ಟುಕೊಂಡೇ ಆತನು ಸಮ್ಮತಿಯಿತ್ತದ್ದು. ಆ ರಾತ್ರಿ ಆ ನಾಗ-ಭವನದಲ್ಲೇ ಉಳಿದುಕೊಂಡನು. ಸೂರ್ಯೋದಯವಾಗುತ್ತಲೇ ಎದ್ದು, ಆ ನಾಗ-ಭವನದಿಂದ ಹೊರಬಂದು ಉಲೂಪಿಯೊಂದಿಗೆ ಮತ್ತೆ ಆ ಗಂಗಾ-ದ್ವಾರಕ್ಕೇ ಬಂದನು. ಆತನನ್ನು ಅಲ್ಲಿ ಬಿಟ್ಟು, ಉಲೂಪಿಯೂ ಸ್ವ-ಭವನವನ್ನು ಸೇರಿಕೊಂಡಳು.

ಹೊರಡುವಾಗ ಅವಳೊಂದು ವರವನ್ನೂ ಕೊಟ್ಟಳು: "ಜಲದಲ್ಲಿ ನೀನು ಸದಾ ಅಜೇಯನಾಗಿರುವೆ; ಸರ್ವ-ಜಲಚರಗಳೂ ನಿನ್ನ ವಶದಲ್ಲಿರುವಂತಾಗುವುವು. ಇದರಲ್ಲಿ ಸಂಶಯವಿಲ್ಲ!" – ಎಂದು.

ಆ ಬಳಿಕ ಅರ್ಜುನನಿಗೆ ಉಲೂಪಿಯಲ್ಲಿ ಇರಾವಂತನೆಂಬ ಪುತ್ರನು ಜನಿಸಿದನು. ಆತನೂ ಮಹಾ-ಬಲ-ಪರಾಕ್ರಮಗಳಿಂದ ಕೂಡಿದವನಾದನು.

ಆ ಬಳಿಕ ಅರ್ಜುನನು ಹಿಮಾಲಯಕ್ಕೆ ಹೋದನು. ಅಲ್ಲಿ ಅಗಸ್ತ್ಯ-ವಟ, ವಸಿಷ್ಠ-ಪರ್ವತ, ಹಾಗೂ ಭೃಗು-ತುಂಗಗಳೆಂಬ ಜಾಗಗಳಿಗೆ ಹೋಗಿ, ಅಲ್ಲಿ ಸ್ನಾನಾದಿಗಳನ್ನು ಮಾಡಿಕೊಂಡನು. ಅನೇಕ-ಗೋ-ಸಹಸ್ರಗಳನ್ನು ಹಾಗೂ ಆಶ್ರಮ-ವಾಸ-ಸ್ಥಾನಗಳನ್ನು ದ್ವಿಜರಿಗೆ ದಾನ ಮಾಡಿದನು. ಹಿರಣ್ಯಬಿಂದು-ತೀರ್ಥದಲ್ಲಿ ಸ್ನಾನಮಾಡಿ ಅನೇಕ ಪುಣ್ಯ-ಸ್ಥಾನಗಳನ್ನು ದರ್ಶಿಸಿದನು.

ಹಿಮಾಲಯದಿಂದ ಇಳಿದು, ಅಲ್ಲಿಂದ ಪೂರ್ವ-ದಿಕ್ಕಿನತ್ತ ಸಾಗಿದನು. ಒಂದಾದಮೇಲೊಂದು ತೀರ್ಥಗಳ ದರ್ಶನಮಾಡಿದನು. ಉತ್ಪಲಿನೀ-ನದಿ, ನಂದಾ, ಅಪರನಂದಾ, ಯಶಸ್ವಿನೀ, ಕೌಶಿಕೀ, ಮಹಾನದೀ, ಗಯಾ-ತೀರ್ಥ ಹಾಗೂ ಗಂಗೆ - ಈ ಎಲ್ಲ ತೀರ್ಥಗಳನ್ನೂ, ಅಲ್ಲಿಯ ಆಶ್ರಮಗಳನ್ನೂ ಸಂದರ್ಶಿಸುತ್ತಾ, ತನ್ನನ್ನೇ ಪಾವನಗೊಳಿಸಿಕೊಳ್ಳುತ್ತಾ, ಕೊನೆಗೆ ಗೋ-ದಾನವನ್ನು ಬ್ರಾಹ್ಮಣರಿಗೆ ಮಾಡಿದನು.

ಆಮೇಲೆ ಅಂಗ-ವಂಗ-ಕಳಿಂಗಗಳಲ್ಲಿ ಯಾವ ತೀರ್ಥಗಳುಂಟೋ ಮಂದಿರಗಳುಂಟೋ ಅವೆಲ್ಲಕ್ಕೂ ಹೋದನು.

ಆ ತೀರ್ಥಗಳಿಗೆ ಹೋಗಿ, ವಿಧ್ಯುಕ್ತವಾದ ಕ್ರಮದಲ್ಲಿ  ಧನ-ದಾನವನ್ನು ಮಾಡಿದನು. ಕಲಿಂಗ-ರಾಷ್ಟ್ರದ ದ್ವಾರಕ್ಕೆ ಆತನು ಬಂದಾಗ, ಆತನ ಜೊತೆಯಲ್ಲಿ ಬಂದಿದ್ದ ದ್ವಿಜರು ಅಲ್ಲಿಂದ ಹಿಂದಿರುಗಿದರು. ಅವರ ಅನುಮತಿಯನ್ನು ಪಡೆದು, ಕೆಲವೇ ಮಂದಿಯೊಂದಿಗೆ ಅರ್ಜುನನು ಸಾಗರದೆಡೆಗೆ ಹೋದನು. ಕಲಿಂಗ-ದೇಶ, ಅಲ್ಲಿಯ ಭವ್ಯವಾದ ಹರ್ಮ್ಯಗಳು, ಎಂದರೆ ಭಾರೀ ಭವನಗಳು, ಇವನ್ನೆಲ್ಲಾ ನೋಡಿಕೊಂಡು ನಡೆದನು. ತಪಸ್ವಿಗಳಿಂದಾಗಿ ಕಳೆಕಟಿದ್ದ ಮಹೇಂದ್ರ-ಪರ್ವತವನ್ನು ಕಂಡ ಬಳಿಕ, ಸಮುದ್ರತೀರ-ಮಾರ್ಗದಲ್ಲಿ ಮೆಲ್ಲನೆ ಹೋಗಿ ಮಣಿಪೂರವನ್ನು ಸೇರಿದನು.

ಅಲ್ಲಿದ್ದ ತೀರ್ಥಗಳಿಗೆ ಹಾಗೂ, ಅಲ್ಲಿಯ ಪುಣ್ಯ-ಮಂದಿರಗಳಿಗೂ ಹೋಗಿ, ಬಳಿಕ ಅಲ್ಲಿಯ ರಾಜನನ್ನು ಸಂದರ್ಶಿಸಿದನು. ಆ ರಾಜನ ಹೆಸರು ಚಿತ್ರವಾಹನ, ಆತನ ಮಗಳು ಚಿತ್ರಾಂಗದೆ. ಸ್ವೇಚ್ಛೆಯಾಗಿ ವಿಹರಿಸುತ್ತಿದ್ದ ಆ ಸುಂದರಾಗಿಯನ್ನು ಕಂಡ ಅರ್ಜುನನು ಅವಳನ್ನು ಇಷ್ಟಪಟ್ಟನು.

ರಾಜನ ಬಳಿ ಹೋಗಿ ತನ್ನ ಅಭಿಪ್ರಾಯವನ್ನು ಹೇಳಿಕೊಂಡನು: ಮಹಾ-ಮನಸ್ಕನಾದ ಕ್ಷತ್ರಿಯನಾದ ನನಗೆ ಇವಳನ್ನು ಪ್ರದಾನಮಾಡು - ಎಂಬುದಾಗಿ. ಅದಕ್ಕೆ ರಾಜನು ಅವನನ್ನು ನೀನು ಯಾರ ಮಗನೆಂದು ಕೇಳಿದನು. ತಾನು ಪಾಂಡವ, ಕುಂತೀಪುತ್ರ, ಹೆಸರು ಧನಂಜಯ – ಎಂದು ಅರ್ಜುನನು ಹೇಳಿದನು. ಆಗ ಆ ರಾಜನು ಸಮಾಧಾನಕರವಾದ ಮಾತುಗಳನ್ನುಅರ್ಜುನನಿಗೆ ಹೇಳಿದನು.

ಸೂಚನೆ :18/8/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.