ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಮನಸ್ಸೇ ಸರಸ್ಸು - ಎಂಬ ಧ್ವನಿತಾರ್ಥ ಈ ಶ್ಲೋಕದಲ್ಲಿದೆ. ಸರಸ್ಸೆಂದರೆ ಸರೋವರದಂತೆಯೇ: ವರ ಎಂದರೆ ಶ್ರೇಷ್ಠ; ಶ್ರೇಷ್ಠವಾದ ಸರಸ್ಸನ್ನೇ ಸರೋವರ ಎನ್ನುವುದು. ಕೊಳಗಳಲ್ಲಿ ಕಮಲವು ಅರಳುವುದಲ್ಲವೇ? ಹಾಗೆಯೇ ನನ್ನ ಮನಸ್ಸಿನಲ್ಲಿ ಒಂದು ಕಮಲವು ಅರಳಲಿ - ಎಂದು ಕವಿ ಲೀಲಾಶುಕನು ಹಂಬಲಿಸುತ್ತಾನೆ. ಮನಸ್ಸಿನಲ್ಲಿ ಅರಳುವ ಕಮಲ ಯಾವುದು? ವಿಭುವಿನ - ಎಂದರೆ ನಮ್ಮ ಕೃಷ್ಣನ - ಮುಖವೆಂಬ ಕಮಲ. ಅಲ್ಲಿಗೆ, ಕೃಷ್ಣನ ಮುಖ-ಕಮಲ ಅರಳಲಿ, ನನ್ನ ಮನಸ್ಸಿನಲ್ಲಿ - ಎಂಬ ಅಭಿಪ್ರಾಯ ಇಲ್ಲಿದೆ.
ಏನು ವಿಶೇಷ ಈ ಕಮಲದಲ್ಲಿ? ಕಮಲವೆಂದರೆ ಮಕರಂದವಿರುವುದಲ್ಲವೇ? ಹಾಗೆ ಇದರಲ್ಲೂ ಮಕರಂದವೇನಾದರೂ ಉಂಟೇ? - ಎಂದು ಕೇಳಬಹುದು. ಇದೆ, ಮತ್ತು ಬೇರೆ ವಿಶೇಷವೂ ಇದೆ!
ಈ ಮುಖವೆಂಬ ಪಂಕಜದಲ್ಲಿ ವಿಶಿಷ್ಟವಾದ ಮಕರಂದವಿದೆ. ಯಾವುದದು? ಮುರಳೀ-ನಿನಾದವೇ ಆ ಮಕರಂದ. ಮಕರಂದವೆಂಬುದು ಪುಷ್ಪ-ರಸ. ಜೇನಿನಂತಿರುವ ಅದನ್ನು ನಾಲಿಗೆಯು ಆಸ್ವಾದಿಸುವುದು - ಎಂದು ತಾನೆ ನಾವು ಸಾಧಾರಣವಾಗಿ ನಿರೀಕ್ಷಿಸುವುದು?
ಇದೋ ನಮ್ಮ ಕೃತಿಯ ಹೆಸರೇ ಕೃಷ್ಣ-ಕರ್ಣಾಮೃತವಲ್ಲವೇ? ಕಿವಿಗಳಿಗೆ ಅಮೃತವಾದದ್ದು ಅದು. ಹಾಗೆಯೇ, "ಕಿವಿಯೆಂಬ ಬಾಯಿ"ಯಿಂದ ಆಸ್ವಾದಿಸುವ ಮಕರಂದವಿದು, ಈ ಮುರಲೀ-ನಿನಾದವೆಂಬುದು! ಆ ಮಕರಂದವೇ ತುಂಬಿತುಳುಕಿದೆ, ಈ ಪಂಕಜದಲ್ಲಿ. ಎಂದೇ "ಮಕರಂದ-ನಿರ್ಭರ"ವೆಂದಿರುವುದು.
ಮತ್ತೊಂದು ಬಗೆಯಲ್ಲೂ ಈ ಪುಷ್ಪವು ವಿಶಿಷ್ಟವೇ ಸರಿ! ಹೇಗೆ? ಒಂದು ಹೂವಿನೂಳಗೆ ಮತ್ತೊಂದು ಹೂವಿರಲು ಸಾಧ್ಯವೇ? ಲೋಕದಲ್ಲಂತೂ ಕಮಲದೊಳಗಣ ಕಮಲವೆಂಬುದು ಕಂಡಿಲ್ಲವಲ್ಲವೇ? ಆದರೆ ಆ ಅದ್ಭುತ ಇಲ್ಲಿದೆ! ಒಂದು ಕಮಲದೊಳಗೆ ಒಂದಲ್ಲ, ಎರಡು ಕಮಲಗಳಿವೆ, ಇಲ್ಲಿ! ಓ, ಹಾಗಿದ್ದರೆ ಪರಮಾದ್ಭುತವೇ ಆಯಿತಲ್ಲಾ, ಹೇಗದು?
ಕೃಷ್ಣನ ಮುಖವೆಂಬುದೊಂದು ಕಮಲ, ಅದರಲ್ಲಿ ಆತನ ಎರಡು ಕಣ್ಣುಗಳೆಂಬ ಎರಡು ಕಮಲಗಳಿವೆ!
ನಾವೆಲ್ಲಾ ಅರಳುವ ಕಮಲವನ್ನು ಇಷ್ಟಪಡುತ್ತೇವೆ. ಕಮಲದ ಮೊಗ್ಗಾಗಿದ್ದರೆ ಅರಳಲು ಕಾಯಬೇಕಾಗುತ್ತದೆ - ಅದರ ಸೌಂದರ್ಯ, ಸೌಗಂಧ್ಯ, ಹಾಗೂ (ಅದರ ಮಕರಂದದಲ್ಲಿ ದಕ್ಕುವ) ಮಾಧುರ್ಯ - ಇವುಗಳಿಗಾಗಿ. ಆದರೆ ಮತ್ತೊಂದದ್ಭುತವನ್ನು ನೋಡಿ. ಈ ಎರಡು ಕಮಲಗಳು ಮೊಗ್ಗಿನಂತಾಗುತ್ತಿವೆ! ಮೊಗ್ಗು ಅರಳುವುದನ್ನು ಲೋಕದಲ್ಲಿ ಕಂಡಿದ್ದೇವೆ. ಆದರೆ ಕಮಲವು ಮೊಗ್ಗಾಗುವುದು - ಎಂದರೆ ಹೀಗೆ ಹಿಮ್ಮುಖವಾಗುವುದು - ಎಲ್ಲಾದರೂ ಉಂಟೇ? ಇಲ್ಲಿ ಉಂಟು.
ಹೇಗೆ? ಕೃಷ್ಣನು ವೇಣುಗಾನ ಮಾಡುತ್ತಿರುವನಲ್ಲವೇ? ಗಾನವನ್ನು ಕೇಳುವವರಿಗೆ ತೋಷವಿರುತ್ತದಷ್ಟೆ? ಗಾನಮಾಡುವವರಿಗೂ ಸಂತೋಷವಿರುತ್ತದೆ; ಇದ್ದೇ ಇರುತ್ತದೆ. ಅದರಲ್ಲೂ ಲೋಕೋತ್ತರವಾದ ಗಾನವು ಲೋಕೋತ್ತರವಾದ ಸಂತೋಷವನ್ನೇ ಶ್ರೋತೃವಿಗೂ ಗಾತೃವಿಗೂ ಉಂಟುಮಾಡುವುದೇ ಸರಿ.
ಯಾವುದನ್ನೇ ಚಪ್ಪರಿಸುವಾಗಲೂ ನಮ್ಮ ಕಣ್ಣುಒಂದಿಷ್ಟು, ಅಥವಾ ಪೂರ್ಣವಾಗಿ, ಮುಚ್ಚುವುದು. ಒಳ್ಳೆಯ ಗಾನವು ಕೇಳಿಬರುತ್ತಿದ್ದರೆ ಕೇಳುಗನಿಗೆ ಮೋದವಾದಾಗ ಕಣ್ಣುಮುಚ್ಚುವುದು. ಗಾನವನ್ನು ಹೊಮ್ಮಿಸುವವನಿಗಂತೂ ಇನ್ನೂ ಮಿಗಿಲಾದ ಪ್ರಮೋದವೇ. ಹೀಗಿರಲು ವೇಣುಗಾನ ಮಾಡುತ್ತಿರುವ ಕೃಷ್ಣನಿಗೆ ಸಂತೋಷವಾಗದೇ?
ಒಳನಾದದೊಂದಿಗಿನ ಆಸ್ವಾದನೆಯಿಂದಾಗಿ ಆತನ ಅಂತಸ್ಸಂತೋಷ ಮಹತ್ತಾದುದು. ಅಂತರಾನಂದದಿಂದಾಗಿ ಆತನ ಕಣ್ಣುಗಳು ಮುಚ್ಚಿಕೊಂಡು ಅಂತರ್ಮುಖವಾಗುತ್ತಿವೆ. ಬಿಟ್ಟಾಗ ಅರಳಿದಂತೆ ಕಾಣುವ ಕಣ್-ಕಮಲಗಳು, ಈಗ ಮುಚ್ಚಿದಾಗ ಮೊಗ್ಗುಗಳಂತೆ ಆಗಿವೆ. ಹೀಗಾಗಿ, ಮುಖವೆಂಬ ಕಮಲದಲ್ಲಿರುವ ಎರಡು ಕಣ್ಣುಗಳೆಂಬ ಕಮಲಗಳು, ಹಾಗೂ, ಅವೂ ಹಿಮ್ಮುಖವಾಗಿ ಮೊಗ್ಗಿನಂತಾಗುತ್ತಿರುವುದು - ಇವೆಲ್ಲಾ ಆಶ್ಚರ್ಯದ ಮೇಲಿನ ಆಶ್ಚರ್ಯಗಳೇ ಸರಿ. ಗಾನವನ್ನು ಆಸ್ವಾದಿಸುತ್ತಾ, ಮನಸ್ಸು ಒಳಮುಖವಾಗಿ ವಿಶೇಷವಾಗಿ ಹರಿಯುವುದು ಮುನಿಗಳಲ್ಲಿ. ಅದಕ್ಕೇ ಅವರನ್ನು ಬಣ್ಣಿಸುವಾಗಲೂ "ಮುನೀನ್ ಮುಕುಲಯನ್" ಎಂದೇ ಕವಿ ಹೇಳಿರುವುದು. ಯಾವ ಮುನಿಗೆ ಕಡಿಮೆ ನಮ್ಮ ಕೃಷ್ಣ?
ಮತ್ತೂ ಒಂದು ವಿಶೇಷವಿದೆ, ಈ ಕಮಲದಲ್ಲಿ. ಕಮಲವೆಂದಾದರೂ ಕನ್ನಡಿಯಂತೆ ಕಂಡೀತೇ? ಆದರಿದೋ ಈ ಕಮಲವು ಹಾಗಿದೆ! ಹೇಗೆ? ಕೃಷ್ಣನ ಕಪೋಲಗಳು, ಎಂದರೆ ಕೆನ್ನೆಗಳು, ಮುಕುರದಂತಿವೆ. ಮುಕುರವೆಂದರೆ ಕನ್ನಡಿ. ಕನ್ನಡಿಯ (ಹಾಗಿರುವ) ಕೆನ್ನೆಗಳು! ದರ್ಪಣವು ದುಂಡಾಗಿರುವುದುಂಟಲ್ಲವೇ? ಅಂತೆಯೇ ಈತನ ಗಂಡಸ್ಥಲ, ಎಂದರೆ ಕೆನ್ನೆಗಳೂ, ಮಂಡಲಾಕಾರವಾಗಿವೆ. ಅವುಗಳಲ್ಲಿಯ ಮೃದುತ್ವವೂ ಎದ್ದು ಕಾಣುವಂತಿದೆ.
ಮಂಡಲವೆಂದೊಡನೆ ಕವಿ-ಲೋಕದಲ್ಲಿ ಮೊದಲು ಗೋಚರಿಸುವುದು ಚಂದ್ರ-ಮಂಡಲವೇ ಸರಿ. ಚಂದ್ರನನ್ನು ಕನ್ನಡಿಯೆಂಬಂತೆ ಚಿತ್ರಿಸಿರುವ ಕವಿಗಳು ಒಬ್ಬಿಬ್ಬರಲ್ಲ. ಹೀಗಾಗಿ (ಕೃಷ್ಣನ ಮುಖವೆಂಬ) ಈ ಕಮಲವು ಕನ್ನಡಿಯ ಹಾಗೆ ಕೂಡ ತೋರುತ್ತಿದೆಯೆನ್ನಬಹುದು!
ಅಂತೂ ವಿಶಿಷ್ಟವಾದ ಕಮಲವೇ ಇದು! ತನ್ನೊಳಗೇ ಎರಡು ಪುಟ್ಟಕಮಲಗಳನ್ನು ಹೊಂದಿರುವ ಕಮಲ. ಅವೂ ಮೊಗ್ಗಾಗುತ್ತಿರುವ ಕಮಲಗಳು! ಕರ್ಣಾಸ್ವಾದ್ಯವಾದ ಮಕರಂದವುಳ್ಳ ಕಮಲ!
ಹೀಗಾಗಿ ಇಲ್ಲಿ ಮೂರು ವೈಲಕ್ಷಣ್ಯಗಳು: ವೇಣುನಾದವೆಂಬ ಮಕರಂದ; ಮುಕುಳಾಕಾರವನ್ನು ಹೊಂದುತ್ತಿರುವ ಎರಡು ಕಣ್ಣುಗಳೆಂಬ ಕಮಲಗಳು; ಕನ್ನಡಿಯನ್ನು ಹೋಲುವ ಮೃದು-ಕಪೋಲಗಳು - ಇವನ್ನು ಹೊಂದಿರುವ ಈ ಕೃಷ್ಣ-ಮುಖ-ಕಮಲವು ನನ್ನ ಮನಸ್ಸಿನಲ್ಲಿ - ಅರ್ಥಾತ್ ನನ್ನ ಮನಸ್ಸೆಂಬ ಸರಸ್ಸಿನಲ್ಲಿ – ಅರಳಲಿ, ಪ್ರಕಾಶಿಸಲಿ, ವಿಜೃಂಭಿಸಲಿ - ಎಂಬ ಆಸ್ವಾದನೆಯ ಲಾಲಸೆಯಿಂದ ಕವಿ ಕೇಳಿಕೊಳ್ಳುತ್ತಿದ್ದಾನೆ:
ಮುಕುಲಾಯಮಾನ-ನಯನಾಂಬುಜಂ ವಿಭೋಃ
ಮುರಲೀ-ನಿನಾದ-ಮಕರಂದ-ನಿರ್ಭರಮ್ |
ಮುಕುರಾಯಮಾಣ-ಮೃದು-ಗಂಡ-ಮಂಡಲಂ
ಮುಖ-ಪಂಕಜಂ ಮನಸಿ ಮೇ ವಿಜೃಂಭತಾಂ!! ||
ಶ್ಲೋಕದ ಪ್ರತಿಪಾದದಲ್ಲೂ "ಮು" ಎಂದೇ ಆರಂಭ. ಮಕಾರವು ಒಟ್ಟು ಎಂಟು ಕಡೆ ಬಂದಿದೆ. ಗಂಡ-ಮಂಡಲವೆಂಬಲ್ಲಿ ಅನುಪ್ರಾಸವು ಸಹಜವಾಗಿ ಬಂದಿದೆ. ಮುಕುಲಾಯಮಾನ-ಮುಕುರಾಯಮಾಣ-ಗಳ ಸಾಮ್ಯವೂ ಹೃದ್ಯವೇ. ಅರಳಲಿ ಎಂಬುದನ್ನು ವಿಜೃಂಭಿಸಲಿ, ಎಂದಿರುವುದು; ಮನಸ್ಸು ಸರಸ್ಸೆಂಬಂತೆ ಸ್ಫುರಿಸುವಂತೆ ಮಾಡಿರುವುದು – ಇವೆಲ್ಲವೂ ಪದ್ಯದ ಸೊಬಗನ್ನು ಹೆಚ್ಚಿಸಿವೆ
ಅಲಂಕಾರ
ಕೃಷ್ಣಕರ್ಣಾಮೃತವನ್ನು ಬರೆದವನು ಸ್ವತಃ ಕವಿಯಾದ್ದರಿಂದ ಕೃತಿಯ ಬಹುತೇಕ ಶ್ಲೋಕಗಳಲ್ಲಿ ನಾನಾ-ಅಲಂಕಾರಗಳಿರುವುವು. ಸಂಸ್ಕೃತದಲ್ಲಿ ಅಲಂಕಾರಗಳ ಬಗೆಗಳು ನೂರಾರಿವೆ, ಮತ್ತು ಪ್ರತಿ-ಶ್ಲೋಕದಲ್ಲೂ ಅವನ್ನು ತೋರಿಸಿ ವಿವರಿಸಹೊರಟರೆ ಲೇಖನಗಳು ಸುದೀರ್ಘವಾಗುವುವು – ಎಂಬೆಲ್ಲ ಕಾರಣಗಳಿಗಾಗಿ, ಇದೊಂದು ಶ್ಲೋಕದಲ್ಲಿಯ ಅಲಂಕಾರಗಳ ಬಗ್ಗೆ ಒಂದೆರಡು ಸಾಧಾರಣವಾದ ಮಾತುಗಳನ್ನು ಹೇಳಬಹುದು.
ಮೇಲೆ ತೋರಿಸಿದ ಅನುಪ್ರಾಸವು ಶಬ್ದಾಲಂಕಾರ. ಹೋಲಿಕೆ ಮುಂತಾದವು ಅರ್ಥಾಲಂಕಾರಗಳು. ಮುಖ-ಪಂಕಜವೆಂದರೆ ಮುಖವೆಂಬ ಕಮಲ. ಇದು ರೂಪಕಾಲಂಕಾರ. ಏಕೆಂದರೆ ಇಲ್ಲಿ ಉಪಮಾನ-ಉಪಮೇಯಗಳಿಗೆ ಅಭೇದವನ್ನು ಮಾಡಿದೆ.
ಏನು ಹಾಗೆಂದರೆ? ಉಪಮಾನವೆಂದರೆ ಯಾವುದಕ್ಕೆ ಹೋಲಿಸಿದೆಯೋ ಅದು. ಇಲ್ಲಿ ಕಮಲವನ್ನು ಹೋಲಿಕೆಯಾಗಿ ಕೊಟ್ಟಿದೆ, ಆದುದರಿಂದ ಕಮಲವು ಉಪಮಾನ. ಯಾವುದಕ್ಕೆ ಉಪಮಾನವನ್ನು ಕೊಟ್ಟಿದೆಯೋ ಅದು ಉಪಮೇಯ. ಇಲ್ಲಿ ಮುಖವು ಉಪಮೇಯ.
"ಉಪಮೇಯವೇ ಉಪಮಾನ" ಎಂಬ ಪರಿಯಲ್ಲಿ ವಾಕ್ಯರಚನೆಯಿದ್ದರೆ ಅದು ರೂಪಕ. "ಮುಖವೇ ಕಮಲ" – ಎಂಬಲ್ಲಿಯಂತೆ. ಇದೇ ಅದು – ಎನ್ನುವ ಪರಿಯನ್ನು ಅಭೇದವೆನ್ನುತ್ತಾರೆ. (ಉಪಮಾನ-ಉಪಮೇಯಗಳಿಗೆ ಭೇದವು ಉಪಮಾಲಂಕಾರದಲ್ಲಿ ತೋರುತ್ತದೆ.)
"ಕಣ್ಣುಗಳೇ ಕಮಲಗಳು" – ಎನ್ನುವಾಗಲೂ ರೂಪಕವೇ. "ಮುರಲೀ-ನಿನಾದವೇ ಮಕರಂದ" ಎನ್ನುವಾಗಲೂ ರೂಪಕವೇ. ಹೀಗೆ ಇಲ್ಲಿ ಮೂರು ರೂಪಕಗಳಿವೆ.
"ಕಣ್ಣುಗಳೆರಡು ಮೊಗ್ಗಿನಂತಾಗುತ್ತಿವೆ" – ಎನ್ನುವಾಗಲೂ, "ಕೆನ್ನೆಗಳೆರಡು ಕನ್ನಡಿಯಂತಾಗುತ್ತಿವೆ" – ಎನ್ನುವಾಗಲೂ ಉಪಮಾ-ಭಾವವೇ ಇದೆ. ಮತ್ತು "ನಯನಾಂಬುಜಗಳನ್ನುಳ್ಳ ಮುಖ-ಪಂಕಜ" – ಎನ್ನುವಾಗ ರೂಪಕವನ್ನೊಳಗೊಂಡ ರೂಪಕವಾಗಿದೆ: ಹೀಗೆ ರೂಪಕ-ಗರ್ಭ-ರೂಪಕವಿದು.
ಇಷ್ಟೊಂದು ಅಲಂಕಾರಗಳಿಂದ ಕೂಡಿದೆ ಈ ಶ್ಲೋಕ!
ಸೂಚನೆ : 17/08/2024 ರಂದು ಈ ಲೇಖನವು ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ