Tuesday, August 20, 2024

ಅಷ್ಟಾಕ್ಷರೀ 63 ಯತ್ ಪಥ್ಯ೦ ತನ್ನ ರೋಚತೇ (Ashtakshari -63 Yath Pathyam Thanna Rochathe)

 ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


"ಅಜ್ಞಾನಕ್ಕೆ ಸಿಕ್ಕಿದ ಬುದ್ಧಿ ಕುಡುಕಬುದ್ಧಿಯಂತಾಗುತ್ತೆ" - ಎಂಬ ಶ್ರೀರಂಗಮಹಾಗುರುಗಳ ವಚನವು ಮಾರ್ಮಿಕವಾದದ್ದು. ತಿಳಿಯದೆ ತಪ್ಪು ಹೆಜ್ಜೆಹಾಕುವವರನ್ನು ಕುರಿತು ಹೇಳುವ ಮಾತಿದು - ಅಲ್ಲವೇ? ಹೌದು, ಆದರೆ ಅದಕ್ಕಿಂತಲೂ ಹೆಚ್ಚಾಗಿ, ತಿಳಿದೂ ತಪ್ಪು ಮಾಡುವವರಿಗೆ ಕೊಡುವ ಎಚ್ಚರವಿದಾಗಿದೆ. ಅದು ಹೇಗೆ? - ಎಂಬುದಕ್ಕೆ ನಿದರ್ಶನವೊಂದನ್ನಿತ್ತರೆ ಅರಿಯುವುದು ಸುಲಭವಾದೀತು.

ವಾಲ್ಮೀಕಿ-ರಾಮಾಯಣದ ತೃತೀಯ-ಕಾಂಡವಾದ ಅರಣ್ಯ-ಕಾಂಡವೂ ಸ್ವಾರಸ್ಯಮಯವಾದದ್ದೇ. ಅದರಲ್ಲಾಗುವ ಒಂದು ದುರಂತವೆನ್ನಬಹುದಾದ, ಹಾಗೂ ಸಹೃದಯ-ವಾಚಕ/ಶ್ರಾವಕರಿಗೆ ಮನನೋಯಿಸುವ, ಪ್ರಸಂಗವೆಂದರೆ ರಾವಣನು ಮಾಡುವ ಸೀತಾಪಹರಣವೇ ಸರಿ.

ಸೀತಾಪಹಾರವು ರಾವಣನಿಗೆ ಸಂತಸವನ್ನುಂಟುಮಾಡಿರಬಹುದು. ಆದರೆ ಎಲ್ಲರಿಗೂ ನೋವೇ ಅದು.

ಯಾರು ಯಾರಿಗೆ ನೋವು? "ಆಹಾ, ಯಾರಿಗಿಲ್ಲ?" - ಎಂದೇ ಕೇಳಬಹುದೋ ಏನೋ. ಆ ಸಂನಿವೇಶದಲ್ಲಿದ್ದ ವೃಕ್ಷಗಳೂ, ಸರೋವರಗಳೂ, ಸಿಂಹ-ವ್ಯಾಘ್ರಗಳೂ, ಮೃಗಪಕ್ಷಿಗಳೂ ಪರ್ವತಗಳೂ, ಜಿಂಕೆಯ ಮರಿಗಳೂ, ವನದೇವತೆಗಳೂ - ಎಲ್ಲರಿಗೂ ನೋವು ಉಂಟೇ ಆಯಿತು!  

ಹಾಗೆಂದು ನಾಲ್ಕಾರು ಶ್ಲೋಕಗಳಲ್ಲಿ ವಾಲ್ಮೀಕಿಗಳೇ ಚಿತ್ರಿಸಿದ್ದಾರೆ: ಕಮಲ-ರಹಿತವಾಗಿ ಸರೋವರಗಳು ಅನುಶೋಕಪಟ್ಟವು. ಸೀತೆಯ ನೆರಳನ್ನು ಅನುಸರಿಸಿಹೋಗುತ್ತಾ ಸಿಂಹ-ವ್ಯಾಘ್ರ-ಮೃಗಗಳೂ ತಮ್ಮ ರೋಷವನ್ನು ವ್ಯಕ್ತಪಡಿಸಿದವು. ಶೃಂಗಗಳೆಂಬ ತಮ್ಮ ತೋಳುಗಳನ್ನೆತ್ತಿ ಪರ್ವತಗಳು ವಿಕ್ರೋಶಿಸುತ್ತಿದ್ದಂತಿತ್ತು, ಆಗ. ಸೂರ್ಯನೂ ಮಂಕಾದನು. "ಧರ್ಮವೆಂಬುದಿಲ್ಲ, ಸತ್ಯವಿನ್ನೆಲ್ಲಿ, ಕಾರುಣ್ಯವೆನ್ನುವುದಿಲ್ಲವಾಗಿದೆ!" ಎಂದೆಲ್ಲ ಭಾವಿಸುತ್ತಾ ಜಿಂಕೆಗಳ ಮರಿಗಳೂ ಬೆದರಿ ಅತ್ತವಂತೆ! ವನದೇವತೆಗಳೂ ನಡುಗಿಹೋದರು - ಎಂದೆಲ್ಲಾ ನಿರೂಪಿಸಿದ್ದಾರೆ, ವಾಲ್ಮೀಕಿಗಳು. ಕುಜನರ ಕುಕೃತ್ಯಗಳಿಗೆ ಖುಷಿಪಡುವವರೂ ಇದ್ದಾರೇ?

ಇದ್ದರು - ಎನ್ನುತ್ತಾರೆ, ವಾಲ್ಮೀಕಿಗಳೇ! ಯಾರು? "ಆಹಾ! ಕೆಲಸವಾಯಿತು!" (ಕೃತಂ ಕಾರ್ಯಂ!) - ಎಂದು ಉದ್ಗರಿಸಿದನಂತೆ, ಶ್ರೀಮಾನ್ ಬ್ರಹ್ಮನೇ ! ಇದೇನು ಬ್ರಹ್ಮನಿಗೆ ತುಷ್ಟಿಯಾಯಿತೇ? - ಎಂದು ಆಶ್ಚರ್ಯವಾಗುವುದಲ್ಲವೇ? ಅವನಿಗೆ ಮಾತ್ರವಲ್ಲ. ದಂಡಕಾರಣ್ಯ-ವಾಸಿಗಳಾದ ಪರಮರ್ಷಿಗಳ ನಡೆಯು ಬ್ರಹ್ಮನಿಗಿಂತ ಸ್ವಲ್ಪ ವಾಸಿಯೇನೋ? ಏಕೆ? ಅವರೂ ತುಂಬಾ ಸಂತೋಷಗೊಂಡವರೇ; ಜೊತೆಗಿಷ್ಟು ವ್ಯಥೆಯನ್ನೂ ಪಟ್ಟರು - ಎನ್ನುತ್ತಾರೆ ವಾಲ್ಮೀಕಿಗಳು. ಸೀತೆಗಿಂತಹ ಪರಾಭವವಾಯಿತಲ್ಲಾ! - ಎಂದು ದುಃಖ. ಹಾಗಾದರೆ ಪ್ರಹರ್ಷವೇತಕ್ಕೆ? ಏತಕ್ಕೆಂದರೆ,  "ಓ, ರಾವಣನ ವಿನಾಶ ಇನ್ನೇನು ಸಮೀಪಿಸುತ್ತಿದೆ"- ಎಂದು!

ಇವರೆಲ್ಲರ ಪ್ರತಿಕ್ರಿಯೆಗಳೇನೇ ಇರಲಿ, ಸೀತೆಯೇ ಆ ಸಂದರ್ಭವನ್ನು ಹೇಗೆ ಎದುರಿಸಿದಳು? ಎಂಬುದನ್ನೊಮ್ಮೆ ನೋಡಬೇಕಲ್ಲವೇ?

ಸೀತೆಗೆ ರೋಷವೂ ರೋದನವೂ ಉಕ್ಕಿಬಂದವು. ಅಳುತ್ತಲೇ ಆ ದುಷ್ಟ-ರಾವಣನನ್ನು ಕುರಿತು ಮೂದಲಿಸಿ ಹೇಳಿದಳು, ಆ ಧೀರ-ಪತಿವ್ರತೆ: "ನಾಚಿಕೆಯಾಗುವುದಿಲ್ಲವೇ ನಿನಗೆ, ನೀಚ-ರಾವಣ! ನಾನು ಒಂಟಿಯಾಗಿರುವುದನ್ನು ಖಚಿತಪಡಿಸಿಕೊಂಡು ಹೀಗೆ ಅಪಹರಿಸಿಕೊಂಡು ಓಡಿಹೋಗುತ್ತಿರುವೆಯೆಲ್ಲಾ! ಹೇಡಿಯಾದ ನೀನು ನನ್ನನ್ನು ಕದಿಯಲೆಂದೇ ಮೃಗ-ರೂಪದ ಮಾಯೆಯಿಂದ ನನ್ನ ಪತಿಯನ್ನು ಸಾಗಹಾಕಿರುವೆ. ನೀನೇನು ನನ್ನನ್ನು ಯುದ್ಧದಲ್ಲಿ ಗೆದ್ದು ಹೊತ್ತುಕೊಂಡು ಹೋಗುತ್ತಿರುವೆಯಾ?: ನಿನ್ನ ಶೌರ್ಯಕ್ಕೆ ಧಿಕ್ಕಾರ! ಪಲಾಯನಮಾಡುತ್ತಿರುವೆಯೆಲ್ಲಾ, ನಿಲ್ಲು. ಆ ರಾಜಕುಮಾರರಿಬ್ಬರ (ರಾಮ-ಲಕ್ಷ್ಮಣರ)  ಕಣ್ಣಿಗೆ ಬಿದ್ದೆಯೋ, ನೀ ಸತ್ತಂತೆಯೇ ಸರಿ. 

ಮರಣವು ಸಮೀಪಿಸಿರುವವನು ವಿರುದ್ಧವಾದವುಗಳನ್ನೇ ಸೇವಿಸುವನು. ಪಥ್ಯವಾದದ್ದು ರುಚಿಸುವುದೇ ಇಲ್ಲ - ಸಾಯಲಿರುವವರಿಗೆ (ಯತ್ ಪಥ್ಯಂ ತನ್ನ ರೋಚತೇ)! ಇದೋ ನಿನ್ನ ಕುತ್ತಿಗೆಗೆ ಯಮ-ಪಾಶವು ಬಿಗಿದುಕೊಂಡಿರುವುದು ನನಗೆ ಕಾಣುತ್ತಿದೆ! ಏಕೆಂದರೆ ಹೆದರಬೇಕಾದೆಡೆ ನೀನು ಹೆದರುತ್ತಿಲ್ಲ" – ಎಂದೆಲ್ಲ ಹೇಳಿದಳು.

ಇಲ್ಲಿ ರಾವಣನು ತಪ್ಪು ಹೆಜ್ಜೆಯಿಡುತ್ತಿರುವುದು ಸುಜ್ಞೇಯವಾಗಿದೆ: ಮೇಲೆ ಹೇಳಿದಂತೆ ಪಶು-ಪ್ರಾಣಿಗಳಿಗೂ ಗೊತ್ತಾಗುವಂತಹುದದು! ಇನ್ನು ಮಹಾ-ವಿದ್ವಾಂಸನಾದ ರಾವಣನ ಅರಿವಿಗೆ ಬರದಿರುವಂತಹುದೇ? ಸಾಲದೆಂದು, ಈ ದುಷ್ಕೃತ್ಯವಾಗುವುದಕ್ಕೆ ಮೊದಲೇ ಮಾರೀಚನೆಚ್ಚರಿಸಿದ್ದ; ದುಷ್ಕೃತ್ಯವಾಗುತ್ತಿರುವಾಗ ಸೀತೆ ಎಚ್ಚರಿಸಿದ್ದಾಳೆ; ಮುಂದೆಯೂ ವಿಭೀಷಣನು ಎಚ್ಚರಿಸುವವನಿದ್ದಾನೆ. ಆದಿ-ಮಧ್ಯ-ಅಂತಗಳಲ್ಲಿ ಎಲ್ಲರೂ ಎಚ್ಚರವಿತ್ತರೂ ಪರಿಣಾಮವು ಮಾತ್ರ ಸೊನ್ನೆಯೇ, ದೊಡ್ಡಸೊನ್ನೆಯೇ.

ಗೊತ್ತಿದ್ದೂ ತಪ್ಪುಮಾಡುವುದೆಂದರೇನು? ತನ್ನ ಕೃತ್ಯದ ವಾಸ್ತವವಾದ ಪರಿಣಾಮದ ಬಗ್ಗೆ ಪೂರ್ಣವಾದ/ಖಚಿತವಾದ ಅರಿವಿಲ್ಲವೆಂದೇ! ಅರ್ಥಾತ್, ಅದು ಜ್ಞಾನದ ತೋರ್ಕೆಯುಳ್ಳ ಅಜ್ಞಾನವೆಂದೇ! ಕುಡುಕನು ಕಡುಬುದ್ಧಿವಂತನಿದ್ದರೂ, ಮತ್ತು ಮೂಡಿದಾಗ ಮತಿಯು ಮಂಕೇ - ಅಲ್ಲವೇ? ತಾನೇ ಸುಲಭವಾಗಿ ಪರಿಕಿಸಿಕೊಳ್ಳಬಹುದಾದುದ್ದಕ್ಕೆ ಪರರು ಸಹ ಪರಿಪರಿಯಾಗಿ ಪರಿಶೀಲನವಿತ್ತರೂ, ಅದರ ಆಂತರ್ಯವನ್ನು ಆಂತುಕೊಳ್ಳಲಾರ, ಅರಿತುಕೊಳ್ಳಲಾರ, ಸೊಕ್ಕೇರಿದ ಮತ್ತೇರಿದ ಕುಡುಕ!

ಸಾವಿನ ತಾವಿನತ್ತ ಹಠದಿಂದ ಹೊರಟವನನ್ನು ಬಿರುನುಡಿಗಳಿಂದ ಬೆದರಿಸಿ ಬೆಚ್ಚಿಸಿ ಎಚ್ಚರಿಸಲಾದೀತೇ? ಅಥವಾ ಸವಿನುಡಿಗಳಿಂದ ಸರಿಮಾರ್ಗದತ್ತ ಸರಿಸಲಾದೀತೇ? ವಿನಾಶ-ಕಾಲವು ಕಾಲಿಡುತ್ತಿರಲು ಬುದ್ಧಿಯು ವಿಪರೀತವೇ ಆಗುವುದು. ವಿಪರೀತವೆಂದರೆ ವಿರುದ್ಧವಾದದ್ದು: ಪಥ್ಯವಾದದ್ದು ಅಪಥ್ಯವಾಗಿ ತೋರುವಂತಾಗುವುದು. ಜವರಾಯನ ಹವಣಿಕೆಯಲ್ಲದೆ ಮತ್ತೇನದು? 

ದುಷ್ಟರು ನಷ್ಟರಾಗುವುದನ್ನು ಎಲ್ಲರೂ ಇಷ್ಟಪಡುವವರೇ. ಎಂದೇ ಸೀತಾಪಹರಣವಾಗುವಾಗ ಬ್ರಹ್ಮನಿಗೆ ಸಮಾಧಾನವಾದದ್ದು, ದಂಡಕಾರಣ್ಯದ ಪರಮರ್ಷಿಗಳಿಗೆ ಪರಮ-ಹರ್ಷವೇ ಆದದ್ದು!

ಸೂಚನೆ: 10/08/2024 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.