ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ – 101 ಸಂಸಾರಕ್ಕೆ ಕಾರಣವಾದುದು ಯಾವುದು ?
ಉತ್ತರ - ಕಾಮ
ಇಲ್ಲಿ ಯಕ್ಷನು ಕೇಳುವ ಪ್ರಶ್ನೆ ತುಂಬಾ ಸರಳವಾಗಿದೆ. 'ಸಂಸಾರಕ್ಕೆ ಕಾರಣವಾದದ್ದು ಯಾವುದು? ಎಂದು. ಅದಕ್ಕೆ ಧರ್ಮರಾಜನು 'ಕಾಮ' ಎಂಬುದಾಗಿ ಉತ್ತರಿಸುತ್ತಾನೆ. ಕಾಮ ಎಂದರೆ ಬಯಕೆ, ಆಸೆ, ಆಕಾಂಕ್ಷೆ ಎಂದರ್ಥ. ಅಂದರೆ ಬಯಕೆಯು ಸಂಸಾರಕ್ಕೆ ಕಾರಣವಾಗುತ್ತದೆ ಎಂದರ್ಥ. ಇಲ್ಲಿ ನಾವು ವಿಚಾರಿಸಬೇಕಾದ ವಿಷಯ ಸಂಸಾರ ಎಂದರೇನು? ಮತ್ತು ಸಂಸಾರದ ಉಗಮಕ್ಕೆ ಬಯಕೆ ಹೇಗೆ ಕಾರಣವಾಗುತ್ತದೆ? ಎಂಬುದಾಗಿ.
'ಸಂಸಾರ' ಈ ಶಬ್ದವು ಸಂಸ್ಕೃತ ಭಾಷೆಯ ಶಬ್ದವಾಗಿದೆ. ಸಮ್ ಎಂಬ ಉಪಸರ್ಗ. ಸೃ-ಗತೌ ಎಂಬ ಧಾತು. ಇವೆರಡರ ಸಂಯೋಗದಿಂದ ಸಂಸಾರ ಎಂಬ ಶಬ್ದವು ಉತ್ಪನ್ನವಾಗಿದೆ. ಉತ್ತಮವಾದ ಗತಿ ಎಂದರ್ಥ. ಯಾವುದು ಗತಿಶೀಲವಾದದ್ದೋ, ಚಲನಶೀಲವಾದದ್ದೋ ಅದಕ್ಕೆ 'ಸಂಸಾರ' ಎಂದು ಅರ್ಥ. ವಸ್ತುತಃ ಪ್ರತಿಯೊಂದು ವಸ್ತುವು ಜಡವೇ. ಆದರೆ ಅಲ್ಲಿ ಚಲನೆ ಬರಬೇಕಾದರೆ ಅಲ್ಲಿ ಚೈತನ್ಯ ಶಕ್ತಿಯನ್ನು ತುಂಬುವ ವ್ಯಕ್ತಿಬೇಕಾಗುತ್ತದೆ. ಹಾಗೆ ಇದ್ದರೆ ಮಾತ್ರ ಆ ವಸ್ತು ಚಲಿಸಲು ಸಾಧ್ಯ. ಒಂದು ರಥ ಚಲಿಸಬೇಕಾಗುತ್ತದೆ ಎಂದಾದರೆ ಅಲ್ಲಿ ರಥಿಕನಿದ್ದರೆ ಮಾತ್ರ ಸಾಧ್ಯ. ಹಾಗಾಗಿ ಯಾವುದು ಚಲನಶೀಲವಾದದ್ದೋ ಅದಕ್ಕೆ ಸಂಸಾರ ಎಂಬುದಾಗಿ ಕರೆಯುತ್ತಾರೆ. ಇಲ್ಲಿ ಮೂಲತಃ ಚಲನಶೀಲವಾದ ವಿಷಯ ಯಾವುದು? ಅದು ಎಲ್ಲಿಂದ ಆರಂಭವಾಯಿತು? ಎಂಬ ಪ್ರಶ್ನೆ ಬರುತ್ತದೆ. ಸಂಸಾರ ಎಂದರೆ ಸೃಷ್ಟಿ. ಸೃಷ್ಟಿಯ ಆರಂಭವನ್ನೇ ಸಂಸಾರ ಎಂದು ಕರೆಯುತ್ತಾರೆ. ಈ ಸೃಷ್ಟಿಗೆ ಕಾರಣವಾದುದೇ ಕಾಮ ಅಥವಾ ಬಯಕೆ.
ಈ ಸೃಷ್ಟಿಮೂಲನಾದ ಪರಬ್ರಹ್ಮವನ್ನು ಬಿಟ್ಟು ಉಳಿದೆಲ್ಲವೂ ಗಮನಶೀಲವಾದದ್ದು. ಇದನ್ನೇ ಚೈತನ್ಯ ಎಂದು ಕರೆಯಲಾಗುತ್ತದೆ. ಮೊಟ್ಟಮೊದಲು ಭಗವಂತ ಮಾತ್ರ ಇದ್ದ. ಅವನಿಗೆ ಯಾವುದೋ ಒಂದು ಕಾಲದಲ್ಲಿ ಒಬ್ಬನೇ ಒಬ್ಬ ಇದ್ದು ಬೇಜಾರು ಆಯಿತಂತೆ. 'ಏಕಾಕೀ ನ ರಮತೇ' ಎಂಬ ಉಪನಿಷತ್ತು ಇದೇ ಮತನ್ನು ಹೇಳುತ್ತದೆ. ಆಗ ಅವನು ತಾನು ಕೂಡ ಎರಡಾಗಬೇಕು ಎಂದು ಇಚ್ಛಿಸಿದನಂತೆ "ಸೋ ಅಕಾಮಯತ ಬಹುಸ್ಯಾಂ ಪ್ರಜಾಯೇಯ ಇತಿ" ಅಂದರೆ ನಾನು ಎರಡಾಗಬೇಕು; ಎರಡಿಂದ ಬಹುವಾಗಬೇಕು ಎಂಬುದಾಗಿ. ಆಗ ಅವನು ತನ್ನನ್ನು ತಾನು ಎರಡಾಗಿ ಹೋಳಾಗಿಸಿಕೊಂಡ. ಆ ಎರಡರಲ್ಲಿ ಒಂದಕ್ಕೆ ಪ್ರಕೃತಿ ಎಂದು ಹೆಸರು; ಇನ್ನೊಂದಕ್ಕೆ ಪುರುಷ ಎಂದು ಹೆಸರು. ಅವೆರಡು ಸೇರಿಕೊಂಡು ಮುಂದೆ 'ಸಂತತಿ' ಎಂಬುದಾಗಿ ವಿಸ್ತಾರವಾಯಿತು. ಇದನ್ನೇ 'ಸಂಸಾರ' ಎಂದು ಕರೆಯುತ್ತಾರೆ. ಹಾಗೇ ಅಲ್ಲಿಂದ ಮುಂದುವರೆದ ಈ ಸಂಸಾರವು ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಎಲ್ಲಿಯವರೆಗೆ ಈ ಸಂಸಾರವು ನಡೆಯುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಹಾಗಾಗಿ ಈ ಸಂಸಾರ ಎಂಬುದು ನಿತ್ಯ ಎಂದು ಶಾಸ್ತ್ರಗಳು ಸಾರುತ್ತವೆ. ಮೊಟ್ಟಮೊದಲು ನಿಶ್ಚೇಷ್ಟಿತವಾದದ್ದು, ಚಲನಶೀಲವಾದುದಕ್ಕೆ ಕಾರಣ ಅಲ್ಲಿನ ಬಯಕೆಯಷ್ಟೇ. ಇದೇ ಸೂತ್ರವೇ ಇಂದಿನ ಕುಟುಂಬ ಅಥವಾ ಸಂತಾನಕ್ಕೆ ಕಾರಣ ಎಂಬುದು ಇಲ್ಲಿನ ತಾತ್ಪರ್ಯ. ಆದ್ದರಿಂದ ಕಾಮವೇ ಸಂಸಾರಕ್ಕೆ ಕಾರಣ ಎಂಬುದು ಇಲ್ಲಿನ ಉತ್ತರ.
ಸೂಚನೆ :11/8/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.