Sunday, August 25, 2024

ಯಕ್ಷ ಪ್ರಶ್ನೆ 104 (Yaksha prashne 104)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

ಪ್ರಶ್ನೆ –  103 ಅಹಂಕಾರವೆಂದರೆ ಯಾವುದು  ?

ಉತ್ತರ - ಅಜ್ಞಾನ  

ಇಲ್ಲಿ ನಾವು ಅಹಂಕಾರ ಮತ್ತು ಅಜ್ಞಾನ ಎಂಬ ಎರಡು ವಿಷಯಗಳ ಬಗ್ಗೆ ತಿಳಿದುಕೊಂಡು, ಅಹಂಕಾರವು ಯಾವ ರೀತಿಯಾಗಿ ಅಜ್ಞಾನಕ್ಕೆ ಕಾರಣವಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಅದಕ್ಕಾಗಿ ಅಹಂಕಾರವೆಂದರೇನು? ಎಂಬ ಪ್ರಶ್ನೆಯನ್ನು ಯಕ್ಷನು ಕೇಳುತ್ತಾನೆ. ಅದಕ್ಕೆ ಧರ್ಮರಾಜನು 'ಅಜ್ಞಾನ' ಎಂಬ ಉತ್ತರವನ್ನು ಕೊಡುತ್ತಾನೆ. ಅಹಂ - ನಾನು, ಎಂಬ ಯಾವ ಅರಿವಿದೆಯೋ ಅದನ್ನೇ 'ಅಹಂಕಾರ' ಎನ್ನುತ್ತಾರೆ. ಹಾಗಾದರೆ 'ನಾನು' ಎಂಬ ಜ್ಞಾನವು ತಪ್ಪೇ!? ಅದರಿಂದ ಹೇಗೆ ಅಜ್ಞಾನವುಂಟಾಗುತ್ತದೆ? ಎಂಬ ಸಂದೇಹ ಬರುತ್ತದೆ.  ಅಮರಕೋಷ ಎಂಬ ಸಂಸ್ಕೃತದ ಶಬ್ದಕೋಷದಲ್ಲಿ 'ಅಹಂಕಾರ' ಎಂಬ ಶಬ್ದಕ್ಕೆ ಗರ್ವ, ಅಭಿಮಾನ, ಮಾನ ಇತ್ಯಾದಿ ಅರ್ಥಗಳನ್ನು ಕೊಡಲಾಗಿದೆ. 

ಯೋಗಶಾಸ್ತ್ರದ ದೃಷ್ಟಿಯಿಂದ ವಿಚಾರ ಮಾಡುವುದಾದರೆ ಈ ಪ್ರಪಂಚವು ಅನೇಕ ತತ್ತ್ವಗಳಿಂದ ಕೂಡಿದೆ; ಈ ಎಲ್ಲಾ ತತ್ತ್ವಗಳೂ ಸತ್ತ್ವ, ರಜಸ್ಸು ಮತ್ತು ತಮಸ್ಸು ಎಂಬು ಗುಣಗಳ ಯೋಗದಿಂದಲೇ ಆಗುತ್ತವೆ; ಹಾಗಾಗಿ ತತ್ತ್ವಗಳು ಮೂರು ವಿಧವಾಗಿ ಕಂಡುಬರುತ್ತವೆ.  ಇಪ್ಪತ್ತ ನಾಲ್ಕು ತತ್ತ್ವಗಳಲ್ಲಿ ಉಂಟಾಗುವ ವೈವಿಧ್ಯವು ಗುಣಗಳ ಆಧಾರದ ಮೇಲೆಯೇ ಉಂಟಾಗಿದೆ.  ಇವುಗಳ ಆಧಾರದ ಮೇಲೆಯೇ ಚರಾಚರ ಸೃಷ್ಟಿಯನ್ನು ಮೂರಾಗಿ ವಿಭಾಗಿಸುತ್ತಾರೆ. ಇವುಗಳಲ್ಲಿ ಮಾನವನ ಸೃಷ್ಟಿಯಲ್ಲಿ ಮಾತ್ರ ಎಲ್ಲಾ ತತ್ತ್ವಗಳೂ ಪರಿಪೂರ್ಣವಾಗಿ ವಿಕಾಸವಾಗಬಲ್ಲವು. ಹಾಗಾಗಿ ಮನುಷ್ಯನನ್ನು ಪ್ರಧಾನವಾಗಿ ಸ್ವೀಕರಿಸಿ ಇಲ್ಲಿ ವಿಚಾರಿಸಲಾಗಿದೆ. ಮಾನವನ ದೇಹವೂ ಇದೇ ಮೂರು ಗುಣಗಳ ಆಧಾರದ ಮೇಲೆ ನಿರ್ಮಿತವಾಗಿದೆ. ಈ ದೇಹದಲ್ಲೂ ಅದೇ ಇಪ್ಪತ್ತ ನಾಲ್ಕು ತತ್ತ್ವಗಳು ಇವೆ. ಇಂತಹ ತತ್ತ್ವಗಳಲ್ಲಿ ಅಹಂಕಾರ ತತ್ತ್ವವೂ ಒಂದು. ಯಾವುದರಲ್ಲಿ ಸತ್ತ್ವಗುಣವು ಪ್ರಧಾನವಾಗಿ ಕಂಡುಬರುತ್ತದೋ ಅದು ಸಾತ್ತ್ವಿಕ ಅಹಂಕಾರ ಎಂದು, ರಜಸ್ಸು ಹೆಚ್ಚಾಗಿ ಕಂಡರೆ ರಾಜಸಿಕ ಅಹಂಕಾರ ಎಂದೂ, ತಮಸ್ಸು ಅತಿಶಯವಾಗಿ ತೋರಿದಾಗ ತಾಮಸಿಕ ಅಹಂಕಾರ ಎಂದು ಕರೆಯಲಾಗುತ್ತದೆ. ಇಲ್ಲಿ ಒಂದೊಂದು ಗುಣದಿಂದ ಒಂದೊಂದು ಬಗೆಯ ಗುಣಗಳನ್ನು ಮಾನವನು ಪಡೆಯುತ್ತಾನೆ ಎಂಬ ವಿಷಯವನ್ನು ಭಗವದ್ಗೀತೆಯಲ್ಲಿ ವಿವರವಾಗಿ ಶ್ರೀಕೃಷ್ಣನು ಅರ್ಜುನನಿಗೆ ನೀಡುತ್ತಾನೆ. ಸತ್ತ್ವವೆಂಬ ಗುಣವು ಅತ್ಯಂತ ನಿರ್ಮಲವಾದು. ಅದರ ಪರಿಣಾಮವೇ ಸಾತ್ತ್ವಿಕ ಅಹಂಕಾರ. ಅದು ಸುಖವನ್ನು, ಜ್ಞಾನವನ್ನೂ ಕೊಡುತ್ತದೆ. ರಜಸ್ಸು ರಾಗರೂಪವಾಗಿರುವುದರಿಂದ ನಮ್ಮನ್ನು ಕರ್ಮ ಮತ್ತು ಅದರ ಫಲಗಳಿಂದ ಕಟ್ಟಿಹಾಕುತ್ತದೆ. "ತಮಸ್ತು ಅಜ್ಞಾನಜಂ ವಿದ್ಧಿ" ಎಲೈ ಅರ್ಜುನ ! ಅಜ್ಞಾನವು ತಮಸ್ಸಿನಿಂದ ಹುಟ್ಟಿದ್ದು ಎಂದು ತಿಳಿ" ಎಂದು. ರಜಸ್ಸು ಮತ್ತು ತಮಸ್ಸಿನ ಕಾರಣದಿಂದ ಹುಟ್ಟುವ ಅಹಂಕಾರಗಳು ಹೇಯವಾದವುಗಳು. ಸತ್ತ್ವದಿಂದ ಹುಟ್ಟಿದ ಅಹಂಕಾರವು ಮಾತ್ರವೇ ಉಪಾದೇಯವಾದುದು. ಅದರಲ್ಲೂ ಅಜ್ಞಾನವು ತಮಸ್ಸಿನ ಕಾರಣದಿಂದ ಹುಟ್ಟಿ ಮಾನವನನ್ನು ಆಲಸ್ಯ, ಪ್ರಮಾದ ಮೊದಲಾದ ದುರ್ಗುಣಗಳ ಆವಿರ್ಭಾವಕ್ಕೆ  ಕಾರಣವಾಗುತ್ತದೆ. ಇದರ ಪರಿಣಾಮವಾಗಿ ಜೀವನದಲ್ಲಿ ತಪ್ಪುಗಳೇ ಘಟಿಸುತ್ತವೆ. ತಮಸ್ಸು ಮತ್ತು ರಜಸ್ಸಿನಿಂದ ಹುಟ್ಟಿದ ಅಹಂಕಾರವು ಯಾವ ರೀತಿಯಾಗಿ ನಮ್ಮನ್ನು ಕೆಟ್ಟವರನ್ನಾಗಿ ಮಾಡುತ್ತದೆ ಎಂಬುದನ್ನು ಭಗವದ್ಗೀತೆಯಲ್ಲಿ ವಿಶದಪಡಿಸುತ್ತಾನೆ ಶ್ರೀಕೃಷ್ಣ.  ಇದೇ ವಿಷಯವನ್ನು ಧರ್ಮರಾಜನು ಅಹಂಕಾರವು ಅಜ್ಞಾನಕ್ಕೆ ಕಾರಣವಾಗುತ್ತದೆ ಎಂದು ಯಕ್ಷನ ಪ್ರಶ್ನೆಗೆ ಉತ್ತರಿಸುತ್ತಾನೆ.

ಸೂಚನೆ :25/8/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.