Tuesday, August 27, 2024

ಧ್ಯೇಯಸಾಧನೆಗೆ ಗುರುವಿನ ಗುರುತರ ಉಪಾಯ (Dhyeyasadhanege Guruvina Gurutara Upaya)

ಲೇಖಕರು : ಡಾ. ಹಚ್.ಆರ್. ಮೀರಾ

(ಪ್ರತಿಕ್ರಿಯಿಸಿರಿ lekhana@ayvm.in)



ವಿಶ್ವಾಮಿತ್ರರು ರಾಜಾ ಅಂಬರೀಷನ ಯಜ್ಞವನ್ನು ಸಫಲಗೊಳಿಸಿದ ಕಥೆಯು ರಾಮಾಯಣದಲ್ಲಿದೆ. ರಾಜನು ಮಾಡುತ್ತಿದ್ದ ಯಜ್ಞದ ಯಜ್ಞಪಶು ಕಳವಾಯಿತು. ಅದರ ಸ್ಥಾನದಲ್ಲಿ ನರಪಶುವೊಂದು ಬೇಕೆಂದು ಅವನು ಹುಡುಕಿ ಹೊರಟನು. ಅದಕ್ಕಾಗಿ ನಾನಾ ದೇಶಗಳನ್ನು ಹುಡುಕಿದನು. ಆಮೇಲೆ ಸಿಕ್ಕವನು ಋಚೀಕಪುತ್ರನಾದ ಶುನಃಶೇಫ. ಅವನು ಬಲಿಪಶುವಾಗಲು ಒಪ್ಪಿ ಅಂಬರೀಷನೊಂದಿಗೆ ಹೊರಟ. ಆಗ ದಾರಿಯಲ್ಲಿ ಅವರಿಗೆ ಸಿಕ್ಕವರು ವಿಶ್ವಾಮಿತ್ರಮುನಿಗಳು. ಸೋದರಮಾವನಾದ ವಿಶ್ವಾಮಿತ್ರರನ್ನು ಕಂಡ ಶುನಃಶೇಫನಿಗೆ ದುಃಖವು ಕಟ್ಟೊಡೆಯಿತು.

ತನ್ನನ್ನು ಉಳಿಸಲೂ ರಾಜನ ಯಜ್ಞವು ಸಂಪನ್ನವಾಗುವಂತೆ ಮಾಡಲೂ ಅವರನ್ನು ಬೇಡಿಕೊಂಡನಾ ಬಾಲಕ. ವಿಶ್ವಾಮಿತ್ರರು ಶುನಃಶೇಫನ ಸ್ಥಾನದಲ್ಲಿ ತನ್ನ ಮಕ್ಕಳಿಗೆ ಹೋಗಲು ಹೇಳಿದರು. ಆ ಮಕ್ಕಳು ನಕ್ಕುಬಿಟ್ಟು ಅಹಂಕಾರದ ಮಾತುಗಳನ್ನಾಡಿದರು. ಕ್ರುದ್ಧರಾದ ವಿಶ್ವಾಮಿತ್ರರು ತಮ್ಮ ಮಕ್ಕಳನ್ನೇ ಶಪಿಸಿಬಿಟ್ಟರು. ಶುನಃಶೇಫನಿಗೆ ಸಮಾಧಾನ ಮಾಡಿ, ಅವನಿಗೆ ಎರಡು ರಹಸ್ಯಮಂತ್ರಗಳ ಉಪದೇಶ ಮಾಡಿದರು. ಆಶ್ವಸ್ತನಾದ ಆ ಬಾಲಕನು ರಾಜನೊಂದಿಗೆ ಯಜ್ಞಕ್ಕೆ ಹೋದ. ಆ ಮಂತ್ರಗಳಿಂದ ಅವನು ಇಂದ್ರ-ಉಪೇಂದ್ರರನ್ನು ಸ್ತುತಿಸಿದ. ತೃಪ್ತರಾದ ದೇವತೆಗಳು ಅವನಿಗೆ ದೀರ್ಘಾಯುಸ್ಸನ್ನಿತ್ತರು. ರಾಜನಿಗೆ ಯಜ್ಞದ ಪೂರ್ಣಫಲವನ್ನೂ ಅನುಗ್ರಹಿಸಿದರು.

ಎರಡು ಮಂತ್ರಗಳಿಂದ ಕೆಲಸ ಆಗುವುದೆಂದಿದ್ದರೆ, ತಮ್ಮ ಮಕ್ಕಳನ್ನೇ ಬಲಿಪಶುವಾಗಲೇಕೆ ಕೇಳಿದರು ವಿಶ್ವಾಮಿತ್ರರು? - ಎಂಬ ಪ್ರಶ್ನೆ ಏಳಬಹುದು. ಆ ಮಕ್ಕಳು ನಿರಾಕರಿಸಿದ್ದೂ ಸಹಜವೇ. ಆದರೆ ಆ ಬಾಲಕನು ಬೇಡಿಕೊಂಡಾಗ ವಿಶ್ವಾಮಿತ್ರರ ಪ್ರತಿಕ್ರಿಯೆಯಾದರೂ ತಮ್ಮ ಕಣ್ಣೆದುರಿಗೇ ಇದ್ದ ಆಯ್ಕೆ. ಏನದು?

ಯಜ್ಞವು ಒಂದು ಪುಣ್ಯಕಾರ್ಯ. ಅದು ಸಂಪನ್ನವಾಗಲು ಮುಖ್ಯಸಾಧನವಾಗಲು ಯಾರಿಗೇ ಸಾಧ್ಯವಾದರೂ ಅದು ಅವರ ಭಾಗ್ಯವೇ ಸರಿ. ತಮ್ಮ ಮಕ್ಕಳೇ ಯಜ್ಞಪಶುಗಳಾದರೆ ಮಕ್ಕಳಿಗೂ ಸದ್ಗತಿ, ತಮಗೂ ಪುಣ್ಯದಲ್ಲಿ ಪಾಲು. ಹೀಗೆ ಚಿಂತಿಸಿದರವರು. ಮಕ್ಕಳಿರುವುದು 'ಪರಲೋಕಹಿತಾರ್ಥಾಯ' ಎಂದೇ ಅವರೆನ್ನುವುದು.

ಆದರೆ ವಿಶ್ವಾಮಿತ್ರರ ಮಕ್ಕಳು ಅದಕ್ಕೊಪ್ಪದಿದ್ದದ್ದು ಸಹಜವೇನೋ. ಆದರೆ ಶ್ರೀರಂಗಮಹಾಗುರುಗಳ ಮಾತಿಲ್ಲಿ ಮನನೀಯ. "ಆತ್ಮಸಾಕ್ಷಾತ್ಕಾರವು ಮಹಾಧ್ಯೇಯ. ಅದಕ್ಕಾಗಿ ಶರೀರರಕ್ಷಣೆ ಮಾಡಿಕೊಳ್ಳುವುದು ಅವಾಂತರಧ್ಯೇಯ. ಈ ಅವಾಂತರಧ್ಯೇಯಕ್ಕೆ ಎಲ್ಲ ಗಮನವನ್ನೂ ಕೊಟ್ಟು ಧ್ಯೇಯವನ್ನು ಮರೆಯಬೇಡಿ."

ಬೇರೊಬ್ಬನಿಗಾಗಿ ತಮ್ಮ ಮಕ್ಕಳನ್ನು ಬಲಿಗೊಡುವುದು ಅಕಾರ್ಯವೆಂದು ಲೇವಡಿಯಿಂದ ಕೌಶಿಕಪುತ್ರರು ಮಾತನಾಡಿದ್ದರು. ಅವಾಂತರಧ್ಯೇಯಕ್ಕಾಗಿ, ಎಂದರೆ ಮಧ್ಯಂತರಧ್ಯೇಯಕ್ಕಾಗಿ, ಅಹಂಕಾರದಿಂದ ಅವಾಂತರ ಮಾಡಿಕೊಂಡಂತಾಯಿತು ಅದು. ವಿಶ್ವಾಮಿತ್ರರಲ್ಲಿ ಕ್ರೋಧ ಮತ್ತೆ ಭುಗಿಲೆದ್ದಿತು. ಅವರು ತಮ್ಮ ಮಕ್ಕಳನ್ನು ಶಪಿಸುವುದಾಯಿತು. ಸ್ಥೂಲವಾಗಿ ಪರಿಹಾರವೆಂದೆನಿಸಿದ್ದು ಕೆಲಸಮಾಡಲಿಲ್ಲ. ಹೀಗಾಗಿ ಅದಕ್ಕಿಂತ ಹೆಚ್ಚು ಸೂಕ್ಷ್ಮವಾದ ಪರಿಹಾರವನ್ನು ಅವರು ಯೋಚಿಸುವುದಾಯಿತು. ಸರಳವಾದ ಉಪಾಯದಿಂದಲೇ ಕಾರ್ಯವಾಗುತ್ತದೆ ಎನಿಸಿದಾಗ ಹೆಚ್ಚು ಸಂಕೀರ್ಣವಾದದ್ದನ್ನು ಯೋಚಿಸುವುದು ಮಾನವಪ್ರವೃತ್ತಿಯಲ್ಲ. ತಮಗೂ ತಮ್ಮ ಮಕ್ಕಳಿಗೂ ಪುಣ್ಯಾರ್ಜನೆ; ಒಬ್ಬ ಋಷಿಪುತ್ರನ ಜೀವರಕ್ಷಣೆ; ಒಂದು ಯಜ್ಞದ ರಕ್ಷಣೆ - ಇವೆಲ್ಲವೂ ನೇರದಾರಿಯಲ್ಲೇ ಆದರಾಗಲಿ ಎನ್ನುವುದು ಅವರಿಚ್ಛೆಯಾಗಿತ್ತು. ಹಾಗಾಗದಿದ್ದಾಗ, ಕೊನೆಯೆರಡನ್ನಾದರೂ ಸಾಧಿಸಲು ಅವರು ಮಂತ್ರಗಳ ಆವಿಷ್ಕಾರ ಮಾಡಬೇಕಾಯಿತು (ಅವು ಸಿದ್ಧವಾಗಿ ಅವರಿಗೆ ತಿಳಿದಿತ್ತೆಂದೇನೂ ಇಲ್ಲ).

ತಮ್ಮ ತಪಃಫಲವನ್ನು ವ್ಯಯಿಸಿಯಾದರೂ ಹೀಗೆ ದೊಡ್ಡ ಧ್ಯೇಯವನ್ನು ಸಾಧಿಸಲು ಸಹಾಯ ಮಾಡಿದವರು ವಿಶ್ವಾಮಿತ್ರರು. ಅವರಿಗೆ ನಮನ.


ಸೂಚನೆ: 27/8/2024 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.