Tuesday, August 13, 2024

ವ್ಯಾಸ ವೀಕ್ಷಿತ 101 ನಾಗಕನ್ನಿಕೆಯು ಮುಂದಿಟ್ಟ ಕೋರಿಕೆ (Vyasa Vikshita 101 Nagakannikeyu Munditta Korike)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಹೀಗೆ ನಿಬಿಡವಾಗಿದ್ದ ಆ ಎಡೆಯಲ್ಲಿ ಸ್ಥಾನಕ್ಕಾಗಿ ಅರ್ಜುನನು ಗಂಗೆಗಿಳಿದನು. ಸ್ನಾನ ಮಾಡಿ, ಪಿತಾಮಹತರ್ಪಣವನ್ನು ಮಾಡಿದನು. ಅಗ್ನಿಕಾರ್ಯವನ್ನು ಮಾಡಬೇಕೆಂಬ ಉದ್ದೇಶದಿಂದ ನೀರಿನಿಂದ ಇನ್ನೇನು ಹೊರಬರಬೇಕೆಂದಿರುವಷ್ಟರಲ್ಲಿ, ಹೀಗಾಯಿತು: ನಾಗರಾಜಕನ್ಯೆಯಾದ ಉಲೂಪಿಯು ಈತನಲ್ಲಿ ಅನುರಕ್ತಳಾದಳು. ನೀರಿನೊಳಗಿನಿಂದಲೇ ಆತನನ್ನು ಅಪಕರ್ಷಿಸಿದಳು, ಎಂದರೆ ಸೆಳೆದುಕೊಂಡಳು. ಅವಳು ಆತನನ್ನು ಒಯ್ದದ್ದು ತನ್ನ ನಾಗರಾಜಭವನಕ್ಕೆ.


ಪರಮಸುಂದರವಾದ ಭವನವದು. ಅಲ್ಲಿ ಸಮಾಧಾನವಾದ ಮನಸ್ಸಿನಿಂದ ಅರ್ಜುನನು ಕಂಡದ್ದು ದೀಪ್ತವಾದ ಅಗ್ನಿಯನ್ನು. ಭಯರಹಿತನಾದ ಅರ್ಜುನನು ಅಲ್ಲಿ ಅಗ್ನಿಕಾರ್ಯವನ್ನು ಮಾಡಿದನು. ಇದರಿಂದಾಗಿ ಅಗ್ನಿದೇವನಿಗೆ ಸಂತೋಷವಾಯಿತು.


ಕಾರ್ಯವು ಮುಗಿದ ಬಳಿಕ ನಗುತ್ತಲೆಂಬಂತೆ ಆ ನಾಗಕನ್ಯೆಯನ್ನು ಕೇಳಿದನು: "ಇದೇನು ಸಾಹಸವನ್ನು ಮಾಡಿದೆ ನೀನು? ಯಾವುದೀ ಸುಂದರವಾದ ದೇಶ? ಯಾರ ಮಗಳು ನೀನು?"


ಉಲೂಪಿಯು ಹೇಳಿದಳು: "ಐರಾವತನಾಗನ ಕುಲದಲ್ಲಿ ಕೌರವ್ಯ ಎಂಬ ನಾಗನು ಜನಿಸಿದನು. ನಾನು ಆತನ ಮಗಳು, ಉಲೂಪಿ ಎಂಬ ನಾಗಕನ್ಯೆ. ನರಶ್ರೇಷ್ಠನೇ, ಸಮುದ್ರವನ್ನು ಸೇರುವ ನದಿಯೊಳಗೆ ಸ್ನಾನಕ್ಕಾಗಿ ನೀನು ಇಳಿದೆಯಲ್ಲವೇ? ಆಗ ನಿನ್ನನ್ನು ಕಂಡೆ. ಒಡನೆಯೇ ನಾನು ಕಾಮಪೀಡಿತಳಾದೆ. ಹೀಗೆ ನಿನ್ನ ಸಲುವಾಗಿ ಮನ್ಮಥತಾಪದಿಂದ ಬಳಲಿರುವ ನನ್ನನ್ನು ಸಂತೋಷಪಡಿಸು. ನಿನ್ನನ್ನು ಬಿಟ್ಟು ಮತ್ತಾರನ್ನೂ ನಾನು ಬಯಸಿದವಳಲ್ಲ."


ಅದಕ್ಕೆ ಅರ್ಜುನನು ಹೇಳಿದನು: ಹನ್ನೆರಡು ವರ್ಷಗಳ ಕಾಲ ಬ್ರಹ್ಮಚರ್ಯವನ್ನು ನಡೆಸಬೇಕೆಂಬುದಾಗಿ ನನಗೆ ಅಣ್ಣ ಧರ್ಮರಾಜನಿಂದ ಅಪ್ಪಣೆಯಾಗಿದೆ. ಜಲಚಾರಿಣಿ, ನಿನಗೂ ಪ್ರಿಯವಾದುದನ್ನು ಮಾಡಲು ನಾನು ಬಯಸುವೆ. ಈ ಪರ್ಯಂತ ನಾನು ಎಂದೂ ಸುಳ್ಳು ಹೇಳಿದವನಲ್ಲ. ಹಾಗಿರಲು, ನಾನು ಹೇಳುವುದು ಸುಳ್ಳಾಗಬಾರದು. ಆದರೆ ನಿನಗೂ ಸಂತೋಷವಾಗಬೇಕು. ನನ್ನ ಧರ್ಮಕ್ಕೂ ಭಂಗಬರಬಾರದು. ಅಂತಹ ಉಪಾಯವನ್ನೇನಾದರೊಂದನ್ನು ನೀನೇ ಮಾಡು, ನಾಗಕನ್ನಿಕೆ - ಎಂದು.


ಅದಕ್ಕೆ ಉಲೂಪಿಯು, "ಪಾಂಡುಪುತ್ರನೇ, ಯಾವ ಕಾರಣಕ್ಕಾಗಿ ನೀನು ಭೂಸಂಚಾರವನ್ನು ಕೈಗೊಂಡಿರುವೆ, ಹಾಗೂ ಯಾವ ನಿಮಿತ್ತವಾಗಿ ನಿನ್ನ ಹಿರಿಯನಾದ ಯುಧಿಷ್ಠಿರನು ನಿನಗೆ ಈ ಬ್ರಹ್ಮಚರ್ಯವನ್ನು ವಿಧಿಸಿರುವನು? – ಎಂಬುದನ್ನು ನಾ ಬಲ್ಲೆ. ದ್ರೌಪದಿಯೊಂದಿಗೆ ಯಾರೊಬ್ಬರಾದರೂ ಇರುವ ಸಮಯದಲ್ಲಿ, ಉಳಿದ ನಾಲ್ವರು ಪಾಂಡವರಲ್ಲಿ ಯಾರೊಬ್ಬರಾದರೂ ಮೋಹಕ್ಕೆ ವಶರಾಗಿ ಅಲ್ಲಿ ಪ್ರವೇಶಮಾಡಿದಲ್ಲಿ, ಹಾಗೆ ಪ್ರವೇಶಿಸಿದವನು ಹನ್ನೆರಡು ವರ್ಷಕಾಲ ಬ್ರಹ್ಮಚರ್ಯವನ್ನು ಪಾಲಿಸಬೇಕು - ಎಂದಲ್ಲವೆ, ತಮ್ಮಲ್ಲಿಯ ಒಪ್ಪಂದವಿರುವುದು? ಪದೀನಿಮಿತ್ತವಾಗಿ ತಾನೆ ಒಬ್ಬರಿಗಾಗಿ ಮತ್ತೊಬ್ಬರು ಪ್ರವಾಸಮಾಡಬೇಕೆಂದಿರುವುದು?


ಹೀಗಿರುವಲ್ಲಿ ಧರ್ಮವದೆಂತು ದೂಷಿತವಾಗುವುದು? ಆರ್ತರಾದವರನ್ನು ರಕ್ಷಿಸಿವುದು ಕರ್ತವ್ಯವಲ್ಲವೇ, ವಿಶಾಲನೇತ್ರನಾದ ಅರ್ಜುನ? ನನ್ನ ರಕ್ಷಣೆಯನ್ನು ಮಾಡಿದ ಮಾತ್ರಕ್ಕೆ ನಿನ್ನ ಧರ್ಮಕ್ಕೆ ಲೋಪವು ಬರದಲ್ಲವೇ?


ಮತ್ತು ಒಂದು ವೇಳೆ ಇದರಿಂದಾಗಿ ಲೋಪವೆಂಬುದು ಕಿಂಚಿತ್ತಾಗಿ ಆಗಿಯೇ ಬಿಡುವುದೆಂದಾದರೂ, ಒಬ್ಬರಿಗೆ ಪ್ರಾಣರಕ್ಷಣೆ ಮಾಡುವುದೆಂಬುದರಿಂದ ದೊಡ್ಡದಾದ ಧರ್ಮವನ್ನೇ ಸಾಧಿಸಿದಂತಾಗುತ್ತದಲ್ಲವೇ? ನಾನು ನಿನ್ನ ಭಕ್ತೆ. ನನ್ನನ್ನು ಸ್ವೀಕರಿಸು. ಈ ಬಗೆಯ ಆರ್ತ-ರಕ್ಷಣವೆಂಬುದು ಸಜ್ಜನರಿಗೆ ಸಮ್ಮತವೇ ಸರಿ.


ಮತ್ತು ಒಂದು ವೇಳೆ ನೀನು ಹೀಗೆ ಮಾಡೆಯಾದರೆ ನಾನು ಸತ್ತೆನೆಂಬುದಾಗಿಯೇ ತಿಳಿದುಕೋ. ಮಹಾಬಾಹುವೇ, ಪ್ರಾಣದಾನವನ್ನು ಮಾಡಿ ಒಂದು ಉತ್ತಮೋತ್ತಮವಾದ ಧರ್ಮವನ್ನು ನೀನು ಆಚರಿಸುವವನಾಗು. ನಾನು ನಿನಗೆ ಶರಣಾಗಿದ್ದೇನೆ – ಎಂದಳು.


ಸೂಚನೆ :11
/8/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.