Tuesday, August 20, 2024

ಕೃಷ್ಣಕರ್ಣಾಮೃತ - 25 ಯಮದೂತರ ಭಯವೇಕೆ ಇನ್ನು? (Krishnakarnamrta -25 Yamadutara Bhayaveke Innu?

 ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಎಲ್ಲ ಪ್ರಾಣಿಗಳಿಗೂ ಭಯವೆಂಬುದು ಉಂಟೇ ಉಂಟು. ಏಕೆ? ಹೇಗೆ? ಎಲ್ಲರಿಗೂ ಆಸೆಯೆಂಬುದುಂಟಲ್ಲವೇ? ತನ್ನ ಆಸೆಯು ಎಲ್ಲಿ ಈಡೇರದೋ ? - ಎಂಬ ಭಯವಿದ್ದೇ ಇರುತ್ತದಲ್ಲವೆ? ಕೊನೆಯ ಪಕ್ಷ ತಾನಿರಬೇಕು - ಎಂಬ ಆಸೆಯಂತೂ ಸಹಜವೇ ಸರಿ. ತೀವ್ರ-ಖೇದವಾದಾಗ "ಅಯ್ಯೋ ನಾನಿನ್ನೂ ಬದುಕಿರಬೇಕೇ?" - ಎಂದುಕೊಳ್ಳುವವರಿರಬಹುದು. ಅದಾವುದೋ ಸಮಯ-ವಿಶೇಷದಲ್ಲಿ ಮಾತ್ರ ಆಗುವಂತಹುದದು.

ಪ್ರಾಣವುಳ್ಳವರೆಲ್ಲಾ ಪ್ರಾಣಿಗಳೇ ಸರಿ. ಈ ಲೆಕ್ಕದಲ್ಲಿ ಮನುಷ್ಯರೂ "ಪ್ರಾಣಿ"ಗಳೇ. ಪ್ರಾಣಿಗಳಿಗಿರುವ ಪರಮ-ಭಯವೆಂದರೆ ಎಲ್ಲಿ ತಮ್ಮ ಪ್ರಾಣ ಹೋಗುವುದೋ – ಎಂಬುದೇ.  ಪ್ರಾಣವೇ ಹೋದಲ್ಲಿ ಪ್ರಾಣಿಗೆ ಅಸ್ತಿತ್ವವಿನ್ನೆಲ್ಲಿ? ಎಂದೇ, ಹೇಗಾದರೂ ಪ್ರಾಣವುಳಿಸಿಕೊಳ್ಳಬೇಕೆಂಬ ಪ್ರವೃತ್ತಿ ಎಲ್ಲರಲ್ಲೂ ಇರುವುದು – ಸಣ್ಣ ಇರುವೆಯಿಂದ ಹಿಡಿದು, ಬೃಹತ್ತಾದ ಆನೆಯವರೆಗೂ!

ನಮ್ಮ ಪಾಲಿನ ಮರಣ-ಭಯವನ್ನೇ ಯಮನ ದೆಸೆಯಿಂದ ಭಯವೆಂದೋ, ಯಮ-ದೂತರ ದೆಸೆಯಿಂದ ಭಯವೆಂದೋ ಹೇಳುವುದುಂಟಷ್ಟೆ?

ಆದರೆ ಈ ಭಯ - ಯಮ-ದೂತರು ಬಂದಾರೆಂಬ ಭಯ, ಪಾಶ ಬೀಸಿ ಪ್ರಾಣವನ್ನು ಸೆಳೆದಾರೆಂಬ ಭಯ - ಇದು ಇಲ್ಲದೆಯೇ ಇರುವ ಬಗೆಯೊಂದನ್ನು ಲೀಲಾಶುಕನು ಬೋಧಿಸುತ್ತಾನೆ.

ತನ್ನ ಮಟ್ಟಿಗೆ ಒದಗಿರುವ ನಿರ್ಭಯತೆಯನ್ನು ಆತನು ಹೇಳಿಕೊಂಡಿದ್ದರೂ, ತನಗೆ ಆ ಸ್ಥಿತಿಯು ಏಕೆ ಮತ್ತು ಹೇಗೆ ಒದಗಿದೆಯೆಂಬುದನ್ನು ಆತನು ವಿವರಿಸಿ ಹೇಳಿದ್ದಾನಾದ್ದರಿಂದ, ನಮಗೂ ಆ ಹಾದಿಯನ್ನು ತಿಳಿಸಿಕೊಟ್ಟಿದ್ದಾನೆಂದೇ - ನಮಗೆ ಅದನ್ನು ಬೋಧಿಸಿದ್ದಾನೆಂದೇ - ಭಾವಿಸಬಹುದು.

ಆ ಯಮ-ದೂತನು ನನಗೇನು ಮಾಡಿಯಾನು? - ಎಂದು ಧೈರ್ಯದಿಂದ ಕೇಳುವ ಕವಿಯು ತನ್ನ ಧೈರ್ಯಕ್ಕೆ ಕಾರಣವಾಗಿ ಮೂರು ಅಂಶಗಳನ್ನು ಹೇಳುತ್ತಾನೆ. ಈ ಮೂರಿದ್ದರೆ ಅವನೇನು ಮಾಡಬಲ್ಲ? - ಎಂಬ ನಿರ್ಭಯೋಕ್ತಿ; ನಮ್ಮ ಪಾಲಿಗೆ ಅದುವೇ ಅಭಯೋಕ್ತಿ.

ಯಾವುವು ಆ ಮೂರಂಶಗಳು? ಮೊದಲನೆಯದು ನಾನು ಪೂತನಾಗಿದ್ದರೆ – ಎನ್ನುವುದು. ಪೂತ ಎಂದರೆ ಪವಿತ್ರನಾಗಿರುವವನು. ಪವಿತ್ರತೆ ಬರುವುದು ಹೇಗೆ? ಪೂಜಿಸುವುದರಿಂದ. ಯಾರನ್ನು ಪೂಜಿಸುವುದು? ದೇವಕೀ-ತನಯನನ್ನು. ತನಯನೆಂದರೆ ಮಗ. ದೇವಕೀ-ತನಯನೆಂದರೆ ದೇವಕೀ-ಪುತ್ರ. ದೇವಕೀ-ವಸುದೇವರು ಶ್ರೀಕೃಷ್ಣನಿಗೆ ಜನ್ಮವಿತ್ತ ತಾಯಿ-ತಂದೆಯರು. ಕೃಷ್ಣನನ್ನು ವಸುದೇವ-ಸುತ, ವಾಸುದೇವ ಎಂದೆಲ್ಲ ಕರೆದರೂ, ಆತನು "ದೇವಕೀ-ಪರಮಾನಂದ"ನೇ ಅಲ್ಲವೇ? ಎಂದೇ ಇಲ್ಲಿ ದೇವಕೀ-ತನಯನೆಂದು ಆತನನ್ನು ಕರೆದಿರುವುದು. ಶ್ರೀಕೃಷ್ಣನ ಪೂಜೆಯನ್ನು ಮಾಡಿದವನು ಪೂತನಾಗುವನು.

ಎರಡನೆಯದಾಗಿ ನಾವು ಧೌತರಾಗಿದ್ದರೆ ಯಮ-ದೂತರು ನಮ್ಮನ್ನೇನೂ ಮಾಡರು. ಅದಕ್ಕೇನು? ಮೈಮೇಲೆ ನೀರು ಹುಯ್ದುಕೊಂಡರಾಯಿತಲ್ಲವೆ? ನಾವು ಮೈತೊಳೆದುಕೊಂಡಂತಾಯ್ತಲ್ಲವೆ? ಧೌತರಾದೆವಲ್ಲಾ? - ಎಂದುಕೊಳ್ಳಬಹುದು. ಬರೀ ಜಲದಿಂದಾದ ಬರೀ ದೇಹ-ಶುದ್ಧಿಯೆಂಬುದಾದೀತು. ಸರಿಯಾಗಿ ಧೌತನೆನಿಸಲು ಅದು ಸಾಲದು. ಹಾಗಾದರೆ ಏನು ಮಾಡಿದಲ್ಲಿ ಧೌತನಾಗಬಹುದು? ಶ್ರೀಕೃಷ್ಣನ ಪಾದೋದಕದಿಂದಲೇ ಧೌತನಾಗಲು ಸಾಧ್ಯ. ಶ್ರೀಕೃಷ್ಣನ ಚರಣಗಳನ್ನು ತೊಳೆದ ನೀರು ಪವಿತ್ರವಾದದ್ದು. ಆ ಪವಿತ್ರವಾದ ಉದಕದಿಂದ ಪ್ರೋಕ್ಷಣೆ ಮಾಡಿಕೊಂಡರೆ ಸಾಕು. (ಉದಕವೆಂದರೆ ನೀರು. ಪ್ರೋಕ್ಷಣವೆಂದರೆ ಶಾಸ್ತ್ರೋಕ್ತ-ರೀತಿಯಲ್ಲಿ ಶಿರಸ್ಸಿನ ಮೇಲೆ ಸಿಂಪಡಿಸಿಕೊಳ್ಳುವುದು).

ಶ್ರೀಕೃಷ್ಣನೇನು, ಭಗವಾನ್ ವಿಷ್ಣುವೇನು? -ಇಬ್ಬರೂ ಒಂದೇ. ಹೀಗಾಗಿ, ಶ್ರೀವಿಷ್ಣುವಿನ ಪಾದವನ್ನು ತೊಳೆದ ನೀರೆಂದರೂ ಅದೇ. ಹಿಂದೆ ಬ್ರಹ್ಮನು ಮಾಡಿದ್ದೇನು? ತನ್ನ ಕಮಂಡಲುವಿನಿಂದ ಧಾರೆಯಾಗಿ ಬಂದ ಗಂಗಾ-ಜಲದಿಂದ ವಿಷ್ಣುವಿನ ಪಾದವನ್ನು ತೊಳೆದನಲ್ಲವೆ? ಹೀಗಾಗಿ ವಿಷ್ಣು-ಚರಣೋದಕವೆಂದರೆ ಗಂಗಾ-ಜಲವೆಂದು ಸಹ ಅರ್ಥವಾಗಬಹುದು. ಧೌತವೆಂದರೆ ವಿಮಲವಾಗಿರುವುದು, ಶುಚಿಯಾಗಿರುವುದು.

ದೇವಕೀ-ಪುತ್ರನ ಪೂಜನದಿಂದ ಪೂತನಾದ ವಿಷಯವನ್ನು ಹೇಳಿತಲ್ಲವೆ? ಅಲ್ಲೇ ಪೂ-ಪೂ- ಎಂದು ಎರಡು ಬಾರಿ 'ಪೂ'ಕಾರವು ಬಂದದ್ದಕ್ಕೆ ಇನ್ನೊಂದು ಪೂಕಾರವನ್ನು ಕವಿ ಜಾಣ್ಮೆಯಿಂದ ತಂದಿದ್ದಾನೆ. ಶ್ರೀಕೃಷ್ಣನು ತನ್ನ ಎಳಸಿನಲ್ಲಿಯೇ ಕೊಂದನಲ್ಲವೇ ಪೂತನೆಯನ್ನು? ಎಂದೇ ಕೃಷ್ಣನು ಪೂತನಾರಿ, ಪೂತನೆಯ ಶತ್ರು. ಹೀಗೆ ಪೂತನಾರಿಯ ಚರಣ-ಜಲದಿಂದ ಧೌತನಾದವನಿಗೆ ಯಮ-ದೂತನು ಏನನ್ನೂ ಮಾಡಲಾರ.

ಮೂರನೆಯ ಅಂಶವೊಂದಿದೆಯಲ್ಲವೆ? ಅದೇನೆಂದರೆ ಕೃಷ್ಣನನ್ನು ಪಾರ್ಥ-ಸಾರಥಿಯನ್ನಾಗಿ ಸ್ಮರಿಸುವುದು. ಧನಂಜಯನೆಂದರೆ ಅರ್ಜುನ. ಕೃಷ್ಣನು ಅರ್ಜುನನ ಸೂತ. ಸೂತನೆಂದರೆ ರಥವನ್ನೋಡಿಸುವವನು. ಅರ್ಜುನನಿಗೆ ಸಾರಥಿಯಗಿ ಬಂದಾಗಲಲ್ಲವೆ ಆತನು ಗೀತೆಯನ್ನು ಬೋಧಿಸಿದುದು? ಜ್ಞಾನವನ್ನು ಉಂಟುಮಾಡಿದುದು? ಹೀಗೆ ಧನಂಜಯನಿಗೆ ಸೂತನಾದವನನ್ನು ನಾನು ಸ್ಮರಿಸಿದೆನಾದಲ್ಲಿ ಯಾವ ಯಮ-ದೂತನೂ ಏನನ್ನೂ ಮಾಡಲಾರನೇ ಸರಿ.

ಅಂತೂ ಹೀಗೆ ಕೃಷ್ಣಪೂಜೆ, ಕೃಷ್ಣಮೂರ್ತಿ-ಪಾದಜಲ-ಪ್ರೋಕ್ಷಣ, ಕೃಷ್ಣನ ಪಾರ್ಥಸಾರಥಿ-ರೂಪದ ಸ್ಮರಣೆ - ಇವುಗಳಿದ್ದಲ್ಲಿ ಯಮದೂತ-ಭಯವೇ ಬೇಕಿಲ್ಲ! - ಎನ್ನುತ್ತಾನೆ ಕವಿ.

ಕೃಷ್ಣ-ಭಕ್ತರಿಗೆ ದುರಿತವಿರದು (ದುರಿತವೆಂದರೆ ಪಾಪ). ಎಲ್ಲಿ ದುರಿತವಿಲ್ಲವೋ, ಎಲ್ಲಿ ಪಾಪಿಗಳಿಲ್ಲವೋ, ಅಲ್ಲಿ ಯಮ-ಕಿಂಕರರಿಗೆ ಕೆಲಸವಾದರೂ ಏನು? ಕೆಲಸವಿಲ್ಲದೆಡೆಗೆ ಅವರು ಬಂದಾರೇ?

ಕವಿಯ ಅನುಪ್ರಾಸ-ಪ್ರಿಯತೆ ಇಲ್ಲಿ ಮತ್ತೆ ಗೋಚರವಾಗುತ್ತದೆ - ಪ್ರತಿಪಾದದ ಕೊನೆಯಲ್ಲಿ, ಅಲ್ಲಿ ಬಂದಿರುವ ಪೂತ-ಧೌತ-ಸೂತ-ದೂತಗಳೆಂಬ ಪದಗಳನ್ನು ಗಮನಿಸಬಹುದು.

ಈಗ ಶ್ಲೋಕವನ್ನು ನೋಡಿ:

ದೇವಕೀತನಯ-ಪೂಜನ-ಪೂತಃ

ಪೂತನಾರಿ-ಚರಣೋದಕ-ಧೌತಃ |

ಯದ್ಯಹಂ ಸ್ಮೃತ-ಧನಂಜಯ-ಸೂತಃ

ಕಿಂ ಕರಿಷ್ಯತಿ ಸ ಮೇ ಯಮ-ದೂತಃ ?!||

 

ಬೆಣ್ಣೆಕೃಷ್ಣನ ಮುದ್ದು ಭಂಗಿ

ಕೃಷ್ಣಕರ್ಣಾಮೃತದ ಎಷ್ಟೋ ಶ್ಲೋಕಗಳು ಕೃಷ್ಣನ ಲೀಲಾ-ಭಂಗಿಯೊಂದನ್ನು ಸೆರೆಹಿಡಿದಿರುವಂತಿರುತ್ತವೆ. ರಸ್ಯವಾದ ಸಂನಿವೇಶವೊಂದನ್ನು ಛಾಯಾಗ್ರಾಹಕ(ಫೋಟೋ)ವೊಂದರಲ್ಲಿ ಹಿಡಿದು ಅದನ್ನು ನಮ್ಮ ಕಣ್ಣಮುಂದಿರಿಸಿದಂತೆ ಭಾಸವಾಗುತ್ತದೆ. ಕೃಷ್ಣನ ಚಿತ್ರಗಳನ್ನು ಬಿಡಿಸಬೇಕೆಂಬ ಬಯಕೆಯಿದ್ದವರಿಗೆ, ಅದಕ್ಕೊಪ್ಪುವಂತಹ ಸುಸಂನಿವೇಶಗಳು ಈ ಕೃತಿಯಲ್ಲಿವೆ.

ಭಗವಂತನನ್ನು ಒಂದು ಶಿಶುವಾಗಿ ಕಂಡು ಆನಂದಿಸಿರುವ ಶ್ಲೋಕವೊಂದು ನಮ್ಮ ಮುಂದೆ ಇದೆ. ಇಲ್ಲಿ ಚಿತ್ರಿಸಿರುವುದು ನವನೀತ-ಕೃಷ್ಣ(ಬೆಣ್ಣೆಕೃಷ್ಣ) ನನ್ನು.

ಆತನ ವಾಮ-ಜಾನುವು ಆಕುಂಚಿತವಾಗಿದೆ. ಎಂದರೆ ಎಡ-ಮಂಡಿಯು ಮಡಿಸಿದೆ.'ವಾಮ'ವೆಂಬ ವಿಶೇಷಣವು ಅತ್ತ ಜಾನುವಿಗೂ ಇತ್ತ ಕರಕ್ಕೂ ಅನ್ವಯಿಸುತ್ತದೆ. ಎಡಗೈಯನ್ನೂ ನೆಲದ ಮೇಲೆ ಊರಿದ್ದಾನೆ.

ಆತನ ಬಲಗೈಯಲ್ಲಿ ಬೆಣ್ಣೆಯ ಖಂಡವೊಂದಿದೆ. ಆತನ ಕಣ್ಣಂತೂ ಬೆಣ್ಣೆಯ ಮೇಲೆಯೇ. ಹೀಗಿದೆ ಆತನ ದಕ್ಷಿಣಹಸ್ತ-ಪದ್ಮ, ಎಂದರೆ ಕಮಲವನ್ನು ಹೋಲುವ ಬಲಗೈ. ತನ್ನ ಅಂಗಗಳೆಲ್ಲವೂ ಈ ಭಂಗಿಗೆ ಅನುಕೂಲಿಸುವಂತೆ ಉಪಾನತವಾಗಿವೆ, ಎಂದರೆ ಬಗ್ಗಿವೆ ಅಥವಾ ಮಡಿಸಿವೆ.

ಹೀಗಿರುವ ಬಾಲಕೃಷ್ಣನನ್ನು ನಾನು ಭಜಿಸುತ್ತೇನೆ - ಎನ್ನುತ್ತಾನೆ, ಲೀಲಾಶುಕ.

ಯಾವುದೇ ಶಬ್ದಾಲಂಕಾರಕ್ಕೆ ಕವಿಯು ಗಮನವನ್ನೀ ಶ್ಲೋಕದಲ್ಲಿ ಕೊಟ್ಟಿಲ್ಲವೆಂದು ತೋರುವುದಾದರೂ ಒಂದೆರಡು ಅನುಪ್ರಾಸಗಳು ಬಂದೇ ಇವೆ. ಆಕುಂಚಿತ - ಕರಂ ಚ ಎನ್ನುವಾಗ ಕೊಂಚ ಅನುಪ್ರಾಸವು ತೋರುತ್ತದೆ. ಹಾಗೆಯೇ ಕ್ಷಿತೌ-ದಕ್ಷಿಣಗಳಲ್ಲಿ ಕ್ಷಕಾರಗಳಿವೆ.

ಈಗ ಈ ಶ್ಲೋಕವನ್ನೂ ಅದರೊಂದಿಗಿನ ಬೆಣ್ಣೆಕಣ್ಣನನ್ನೂ ಆಸ್ವಾದಿಸಿ:

ಆಕುಂಚಿತಂ ಜಾನು ಕರಂ ಚ ವಾಮಂ

ನ್ಯಸ್ಯ ಕ್ಷಿತೌ ದಕ್ಷಿಣ-ಹಸ್ತ-ಪದ್ಮೇ |

ಆಲೋಕಯಂತಂ ನವನೀತ-ಖಂಡಂ

ಬಾಲಂ ಭಜೇ ಕೃಷ್ಣಂ ಉಪಾನತಾಂಗಂ ||

ಸೂಚನೆ : 7/04/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.