Thursday, August 29, 2024

ಪದ-ಪದಾರ್ಥಗಳ ಸಮನ್ವಯ (Pada-Padarthagala Samanvaya)

ಲೇಖಕರು:ವಾದಿರಾಜ್ ಪ್ರಸನ್ನ

(ಪ್ರತಿಕ್ರಿಯಿಸಿರಿ lekhana@ayvm.in)




ಪದ ಮತ್ತು ಪದಾರ್ಥದ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಷಯವೇ. " ಪದ " ಎಂದರೆ ಅರ್ಥವನ್ನು ಸುಚಿಸುವ ಅಕ್ಷರಗಳ ಜೋಡಣೆ. " ಪದಾರ್ಥ " ಅಂದರೆ ವಸ್ತುವನ್ನು ಸೂಚಿಸುವುದು. ಇದರಲ್ಲಿ ಏನು ಅಂತಹ ವಿಶೇಷವಿದೆ ? ಎಂದು ಅನ್ನಿಸಬಹುದು. ಇಲ್ಲ! ಇದರಲ್ಲಿ ಅನೇಕ ಗಹನವಾದ ವಿಚಾರಗಳಿವೆ, ಹಾಗಾಗಿ ಈ ವಿಷಯಕ್ಕೆ ಒಂದು ಅವಲೋಕನವನ್ನು ನೋಡೋಣ.

ಪದ ಎಂದರೆ ಸ್ಥಾನ. ಪರಮ ಪದ, ವಿಷ್ಣು ಪದ ಹೀಗೆಲ್ಲ ಆಯಾ ಸ್ಥಾನಗಳಿಗೆ ಪದ ಎನ್ನುವುದು. ಪದಾರ್ಥ ಎಂದಾಗ ಆ ಸ್ಥಾನದಲ್ಲಿನ ಅನುಭವ. ನಾವು ಬಳಸುವ ಶಬ್ದಗಳು "ಪದ"ದಿಂದ ಹೊರಟಿರಬೇಕು. ಮತ್ತು ಆ ಪದದಲ್ಲಿ ನಮ್ಮನ್ನು ನಿಲ್ಲಿಸಿ ಪದಾರ್ಥದ ಪರಿಚಯ ನಮಗೆ ನೀಡುವಂತಿರಬೇಕು. ಹಾಗಿದ್ದಾಗ ಪದ-ಪದಾರ್ಥಗಳ ಸಮನ್ವಯ. ಎಲ್ಲಾ ಶಬ್ದಗಳೂ ನಮ್ಮನ್ನು ಪದಾರ್ಥಕ್ಕೆ ಮುಟ್ಟಿಸುತ್ತವೆ ಎಂದೇನೂ ಇಲ್ಲ. ಉದಾಹರಣೆಗೆ- ಕಂಬವು ಕರುಹಾಕಿತು ಎನ್ನುವ ಶಬ್ದ ನಮಗೆ ಯಾವ ಬೋಧವನ್ನೂ ಕೊಡಲಿಲ್ಲ. "ಕಂಬ" "ಕರು" "ಹಾಕಿತು" ಎಂಬುದೆಲ್ಲವೂ ಪ್ರತ್ಯೇಕವಾಗಿ ಅರ್ಥವನ್ನು ಕೊಟ್ಟರೂ ಒಟ್ಟಾಗಿ ಬಳಸಿದಾಗ ಏನೂ ಹೇಳಿದಂತಾಗಲಿಲ್ಲ. ಏಕೆಂದರೆ ಕಂಬ ಕರು ಹಾಕುವುದು ಅಸಂಭವ. ಇಲ್ಲಿ ಶಬ್ದಗಳು ಪದಕ್ಕೂ ನಮ್ಮನ್ನು ಒಯ್ಯಲಿಲ್ಲ, ಪದಾರ್ಥದ ಅನುಭವವನ್ನೂ ಮಾಡಿಸಲಿಲ್ಲ.

 ಸಂಸ್ಕೃತ ಭಾಷೆಯಲ್ಲಿ ಬಳಸುವ ಪದಗಳು ನಮ್ಮನ್ನು ಪದಾರ್ಥದ ಬಳಿ ಸಹಜವಾಗಿ ಒಯ್ಯಲು ಸಹಾಯ ಮಾಡುತ್ತವೆ. " ಉದಾಹರಣೆ" ಎಂಬ ಪದವಿದೆ. ಉತ್-ಆಹರಣ ಮೇಲಕ್ಕೆ ಕರೆದುಯ್ಯುವುದು, ಹಾರಿಸುವುದು ಎಂಬ ಅರ್ಥ. ಅಂದರೆ ಯಾವುದನ್ನು ಹೇಳಿದರೆ ಕೇಳಿಸಿಕೊಂಡವನ ಮನಸ್ಸು ಕೆಳಕ್ಕೆ ಇದ್ದದ್ದು ಮೇಲೆ ಆ ವಿಷಯದೆಡೆಗೆ ಹತ್ತುವಂತಾಗುವುದೋ ಅದು "ಉದಾಹರಣೆ" ಎಂದಾಗುತ್ತದೆ. ಅಂಗ್ಲ ಭಾಷೆಯ ಎಗ್ಸಾಂಪಲ್ (Example) ಇದಕ್ಕೆ ಸರಿಸಾಟಿಯಾಗಲಾರದು. ಅದು ಅವರವರು ಒಪ್ಪಿಕೊಂಡು ತಂದ ಕೃತಕವಾದ ಶಬ್ದ ಅಷ್ಟೇ.

ಕನ್ನಡದಲ್ಲಿ "ಆಕಳಿಕೆ" ಎನ್ನುವ ಪದವಿದೆ. ಅದು ಹೇಳುವಾಗಲೇ ನಿಜವಾದ ಆಕಳಿಕೆಯ ಪರಿಚಯ ನಮಗೆ ಮಾಡಿಸುವಂತಿದೆ. ಭಾರತೀಯ  ಭಾಷೆಗಳಲ್ಲಿ ಪದಕ್ಕೆ -ಸ್ಥಾನಕ್ಕೆ ನಮ್ಮನ್ನು ಮುಟ್ಟಿಸುವಂತೆ ಮತ್ತು ಪದಾರ್ಥದ ರುಚಿ ನಮ್ಮಲ್ಲಿ ಬರುವಂತೆ ಭಾಷೆಯನ್ನು ಸೃಷ್ಟಿ ಸಹಜವಾಗಿ ತಂದಿದ್ದಾರೆ. "ದೇವರು" ಎನ್ನುವ ಶಬ್ದದ ಮೂಲ ಧಾತು ದಿವ್-ಎಂದರೆ ಪ್ರಕಾಶ. ಪ್ರಕಾಶಮಯವಾದ ಸ್ಥಾನದಿಂದ ಪದವೂ ಬಂದಿದೆ. ಆ ಸಂಸ್ಕಾರ ವಿದ್ದವನನ್ನು ಅಲ್ಲಿಗೇ ಕೊಂಡೊಯ್ಯುತ್ತದೆ. ಹಾಗಿಲ್ಲದವನಿಗೆ ಇದು ಪ್ರಕಾಶಮಯವಾದ ವಸ್ತುವಿನ ಬಗ್ಗೆ ಹೇಳುತ್ತಿದೆ ಎಂದು ಆ ಕಡೆಗೆ ಮನಸ್ಸನ್ನು ಕೊಂಡೊಯ್ಯಲು ಸಂಸ್ಕಾರರೂಪವಾಗಿ ಸಹಾಯ ಮಾಡುತ್ತದೆ.

"ಅವ್ಯಕ್ತವಾದದ್ದನ್ನು ವ್ಯಕ್ತಮಾಡಲು ಭಾಷೆ ಒಂದು ಮೀಡಿಯಂ(medium)ಆಗಿರುತ್ತೆ, ವಾಹಕವಾಗಿರುತ್ತೆ. ಅದು ನಮ್ಮನ್ನು ತನ್ನ ಅರ್ಥವಾದ ಅವ್ಯಕ್ತದಲ್ಲಿ ನಿಲ್ಲಿಸಬೇಕು. ಬೀಜ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಲು ವೃಕ್ಷವನ್ನು ದ್ವಾರವಾಗಿಟ್ಟುಕೊಂಡು ಮತ್ತೆ ಬೀಜಕ್ಕೇ ಹಿಂತಿರುಗುತ್ತದೆ" ಎಂಬ ಶ್ರೀರಂಗ ಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ. ಅವರ ಇನ್ನೊಂದು ಮಾತು ಸಹ ಚೇತೋಹಾರಿ- "ಮಾಧುರ್ಯ ತುಂಬಿರುವುದು ಪದಾರ್ಥದಲ್ಲಿ. ಪದಾರ್ಥವು ಅನುಭವಕ್ಕೆ ಬಂದರೆ, ಆಮೇಲೆ ಅದಕ್ಕೊಂದು ಪದ. ಭಾವದ ಅಮೃತವನ್ನು ತುಂಬಿಡಲು ಭಾಷೆಯು ಒಂದು ಪಾತ್ರ" ಎಂದು ತಿಳಿಸಿದ್ದರು.

ನಮ್ಮ ದೇಶದ ಹೆಸರು ಭಾರತ- ಹೆಸರಿನಲ್ಲೇ ಈ ದೇಶದ ಜನರ ಜೀವನ ಲಕ್ಷ್ಯವನ್ನು ಜ್ಞಾಪಿಸಿದ್ದಾರೆ- ಭಾ ಎಂದರೆ ಬೆಳಕು, ರತ ಎಂದರೆ  ಅದರಲ್ಲಿ ರತಿ-ಪ್ರೀತಿಯುಳ್ಳವರು. ಒಳಗೆ ಬೆಳಗುವ ಪರಮಾತ್ಮ ಪ್ರಕಾಶದಲ್ಲಿ ಪ್ರೀತಿಯುಳ್ಳವರು ಭಾರತರು. ಪದವು ಪದಾರ್ಥವನ್ನು ಹೇಳುತ್ತಿದೆಭಾರತೀಯ ಮಹರ್ಷಿಗಳಿಂದ ಬಂದ ಪದವೆಲ್ಲವೂ ಪದಾರ್ಥಕ್ಕೆ ನಮ್ಮನ್ನು ಒಯ್ಯುವ,ಅತ್ತ ದಿಗ್ದರ್ಶನ ಮಾಡುವ ಮಾತುಗಳಾಗಿಯೇ ಬಂದಿವೆ. ಅಂತಹ ಪದಗಳನ್ನು ಅರ್ಥವರಿತು ನಮ್ಮ ಜೀವನದ ಶ್ರೇಯಸ್ಸಿಗಾಗಿ ಬಳಸುವ ಶಿಕ್ಷಣವನ್ನು ನಾವೆಲ್ಲರೂ ಪಡೆಯುವಂತಾಗಲಿ ಎಂದು ಪ್ರಾರ್ಥಿಸೋಣ. ಹಾಗಾದಾಗ ನಾವೆಲ್ಲರೂ ನಿಜವಾದ ಅರ್ಥದಲ್ಲಿ ಭಾರತರಾಗುತ್ತೇವೆ. ಅತ್ತ ನಮ್ಮ ಮನಸ್ಸುಗಳು ಹೆಜ್ಜೆ ಹಾಕಲಿ ಎಂದು ಭಗವಂತನಲ್ಲಿ ಬೇಡೋಣ.

ಸೂಚನೆ: 29/08/2024 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.

Tuesday, August 27, 2024

ಧ್ಯೇಯಸಾಧನೆಗೆ ಗುರುವಿನ ಗುರುತರ ಉಪಾಯ (Dhyeyasadhanege Guruvina Gurutara Upaya)

ಲೇಖಕರು : ಡಾ. ಹಚ್.ಆರ್. ಮೀರಾ

(ಪ್ರತಿಕ್ರಿಯಿಸಿರಿ lekhana@ayvm.in)



ವಿಶ್ವಾಮಿತ್ರರು ರಾಜಾ ಅಂಬರೀಷನ ಯಜ್ಞವನ್ನು ಸಫಲಗೊಳಿಸಿದ ಕಥೆಯು ರಾಮಾಯಣದಲ್ಲಿದೆ. ರಾಜನು ಮಾಡುತ್ತಿದ್ದ ಯಜ್ಞದ ಯಜ್ಞಪಶು ಕಳವಾಯಿತು. ಅದರ ಸ್ಥಾನದಲ್ಲಿ ನರಪಶುವೊಂದು ಬೇಕೆಂದು ಅವನು ಹುಡುಕಿ ಹೊರಟನು. ಅದಕ್ಕಾಗಿ ನಾನಾ ದೇಶಗಳನ್ನು ಹುಡುಕಿದನು. ಆಮೇಲೆ ಸಿಕ್ಕವನು ಋಚೀಕಪುತ್ರನಾದ ಶುನಃಶೇಫ. ಅವನು ಬಲಿಪಶುವಾಗಲು ಒಪ್ಪಿ ಅಂಬರೀಷನೊಂದಿಗೆ ಹೊರಟ. ಆಗ ದಾರಿಯಲ್ಲಿ ಅವರಿಗೆ ಸಿಕ್ಕವರು ವಿಶ್ವಾಮಿತ್ರಮುನಿಗಳು. ಸೋದರಮಾವನಾದ ವಿಶ್ವಾಮಿತ್ರರನ್ನು ಕಂಡ ಶುನಃಶೇಫನಿಗೆ ದುಃಖವು ಕಟ್ಟೊಡೆಯಿತು.

ತನ್ನನ್ನು ಉಳಿಸಲೂ ರಾಜನ ಯಜ್ಞವು ಸಂಪನ್ನವಾಗುವಂತೆ ಮಾಡಲೂ ಅವರನ್ನು ಬೇಡಿಕೊಂಡನಾ ಬಾಲಕ. ವಿಶ್ವಾಮಿತ್ರರು ಶುನಃಶೇಫನ ಸ್ಥಾನದಲ್ಲಿ ತನ್ನ ಮಕ್ಕಳಿಗೆ ಹೋಗಲು ಹೇಳಿದರು. ಆ ಮಕ್ಕಳು ನಕ್ಕುಬಿಟ್ಟು ಅಹಂಕಾರದ ಮಾತುಗಳನ್ನಾಡಿದರು. ಕ್ರುದ್ಧರಾದ ವಿಶ್ವಾಮಿತ್ರರು ತಮ್ಮ ಮಕ್ಕಳನ್ನೇ ಶಪಿಸಿಬಿಟ್ಟರು. ಶುನಃಶೇಫನಿಗೆ ಸಮಾಧಾನ ಮಾಡಿ, ಅವನಿಗೆ ಎರಡು ರಹಸ್ಯಮಂತ್ರಗಳ ಉಪದೇಶ ಮಾಡಿದರು. ಆಶ್ವಸ್ತನಾದ ಆ ಬಾಲಕನು ರಾಜನೊಂದಿಗೆ ಯಜ್ಞಕ್ಕೆ ಹೋದ. ಆ ಮಂತ್ರಗಳಿಂದ ಅವನು ಇಂದ್ರ-ಉಪೇಂದ್ರರನ್ನು ಸ್ತುತಿಸಿದ. ತೃಪ್ತರಾದ ದೇವತೆಗಳು ಅವನಿಗೆ ದೀರ್ಘಾಯುಸ್ಸನ್ನಿತ್ತರು. ರಾಜನಿಗೆ ಯಜ್ಞದ ಪೂರ್ಣಫಲವನ್ನೂ ಅನುಗ್ರಹಿಸಿದರು.

ಎರಡು ಮಂತ್ರಗಳಿಂದ ಕೆಲಸ ಆಗುವುದೆಂದಿದ್ದರೆ, ತಮ್ಮ ಮಕ್ಕಳನ್ನೇ ಬಲಿಪಶುವಾಗಲೇಕೆ ಕೇಳಿದರು ವಿಶ್ವಾಮಿತ್ರರು? - ಎಂಬ ಪ್ರಶ್ನೆ ಏಳಬಹುದು. ಆ ಮಕ್ಕಳು ನಿರಾಕರಿಸಿದ್ದೂ ಸಹಜವೇ. ಆದರೆ ಆ ಬಾಲಕನು ಬೇಡಿಕೊಂಡಾಗ ವಿಶ್ವಾಮಿತ್ರರ ಪ್ರತಿಕ್ರಿಯೆಯಾದರೂ ತಮ್ಮ ಕಣ್ಣೆದುರಿಗೇ ಇದ್ದ ಆಯ್ಕೆ. ಏನದು?

ಯಜ್ಞವು ಒಂದು ಪುಣ್ಯಕಾರ್ಯ. ಅದು ಸಂಪನ್ನವಾಗಲು ಮುಖ್ಯಸಾಧನವಾಗಲು ಯಾರಿಗೇ ಸಾಧ್ಯವಾದರೂ ಅದು ಅವರ ಭಾಗ್ಯವೇ ಸರಿ. ತಮ್ಮ ಮಕ್ಕಳೇ ಯಜ್ಞಪಶುಗಳಾದರೆ ಮಕ್ಕಳಿಗೂ ಸದ್ಗತಿ, ತಮಗೂ ಪುಣ್ಯದಲ್ಲಿ ಪಾಲು. ಹೀಗೆ ಚಿಂತಿಸಿದರವರು. ಮಕ್ಕಳಿರುವುದು 'ಪರಲೋಕಹಿತಾರ್ಥಾಯ' ಎಂದೇ ಅವರೆನ್ನುವುದು.

ಆದರೆ ವಿಶ್ವಾಮಿತ್ರರ ಮಕ್ಕಳು ಅದಕ್ಕೊಪ್ಪದಿದ್ದದ್ದು ಸಹಜವೇನೋ. ಆದರೆ ಶ್ರೀರಂಗಮಹಾಗುರುಗಳ ಮಾತಿಲ್ಲಿ ಮನನೀಯ. "ಆತ್ಮಸಾಕ್ಷಾತ್ಕಾರವು ಮಹಾಧ್ಯೇಯ. ಅದಕ್ಕಾಗಿ ಶರೀರರಕ್ಷಣೆ ಮಾಡಿಕೊಳ್ಳುವುದು ಅವಾಂತರಧ್ಯೇಯ. ಈ ಅವಾಂತರಧ್ಯೇಯಕ್ಕೆ ಎಲ್ಲ ಗಮನವನ್ನೂ ಕೊಟ್ಟು ಧ್ಯೇಯವನ್ನು ಮರೆಯಬೇಡಿ."

ಬೇರೊಬ್ಬನಿಗಾಗಿ ತಮ್ಮ ಮಕ್ಕಳನ್ನು ಬಲಿಗೊಡುವುದು ಅಕಾರ್ಯವೆಂದು ಲೇವಡಿಯಿಂದ ಕೌಶಿಕಪುತ್ರರು ಮಾತನಾಡಿದ್ದರು. ಅವಾಂತರಧ್ಯೇಯಕ್ಕಾಗಿ, ಎಂದರೆ ಮಧ್ಯಂತರಧ್ಯೇಯಕ್ಕಾಗಿ, ಅಹಂಕಾರದಿಂದ ಅವಾಂತರ ಮಾಡಿಕೊಂಡಂತಾಯಿತು ಅದು. ವಿಶ್ವಾಮಿತ್ರರಲ್ಲಿ ಕ್ರೋಧ ಮತ್ತೆ ಭುಗಿಲೆದ್ದಿತು. ಅವರು ತಮ್ಮ ಮಕ್ಕಳನ್ನು ಶಪಿಸುವುದಾಯಿತು. ಸ್ಥೂಲವಾಗಿ ಪರಿಹಾರವೆಂದೆನಿಸಿದ್ದು ಕೆಲಸಮಾಡಲಿಲ್ಲ. ಹೀಗಾಗಿ ಅದಕ್ಕಿಂತ ಹೆಚ್ಚು ಸೂಕ್ಷ್ಮವಾದ ಪರಿಹಾರವನ್ನು ಅವರು ಯೋಚಿಸುವುದಾಯಿತು. ಸರಳವಾದ ಉಪಾಯದಿಂದಲೇ ಕಾರ್ಯವಾಗುತ್ತದೆ ಎನಿಸಿದಾಗ ಹೆಚ್ಚು ಸಂಕೀರ್ಣವಾದದ್ದನ್ನು ಯೋಚಿಸುವುದು ಮಾನವಪ್ರವೃತ್ತಿಯಲ್ಲ. ತಮಗೂ ತಮ್ಮ ಮಕ್ಕಳಿಗೂ ಪುಣ್ಯಾರ್ಜನೆ; ಒಬ್ಬ ಋಷಿಪುತ್ರನ ಜೀವರಕ್ಷಣೆ; ಒಂದು ಯಜ್ಞದ ರಕ್ಷಣೆ - ಇವೆಲ್ಲವೂ ನೇರದಾರಿಯಲ್ಲೇ ಆದರಾಗಲಿ ಎನ್ನುವುದು ಅವರಿಚ್ಛೆಯಾಗಿತ್ತು. ಹಾಗಾಗದಿದ್ದಾಗ, ಕೊನೆಯೆರಡನ್ನಾದರೂ ಸಾಧಿಸಲು ಅವರು ಮಂತ್ರಗಳ ಆವಿಷ್ಕಾರ ಮಾಡಬೇಕಾಯಿತು (ಅವು ಸಿದ್ಧವಾಗಿ ಅವರಿಗೆ ತಿಳಿದಿತ್ತೆಂದೇನೂ ಇಲ್ಲ).

ತಮ್ಮ ತಪಃಫಲವನ್ನು ವ್ಯಯಿಸಿಯಾದರೂ ಹೀಗೆ ದೊಡ್ಡ ಧ್ಯೇಯವನ್ನು ಸಾಧಿಸಲು ಸಹಾಯ ಮಾಡಿದವರು ವಿಶ್ವಾಮಿತ್ರರು. ಅವರಿಗೆ ನಮನ.


ಸೂಚನೆ: 27/8/2024 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.

Sunday, August 25, 2024

ಯಕ್ಷ ಪ್ರಶ್ನೆ 104 (Yaksha prashne 104)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

ಪ್ರಶ್ನೆ –  103 ಅಹಂಕಾರವೆಂದರೆ ಯಾವುದು  ?

ಉತ್ತರ - ಅಜ್ಞಾನ  

ಇಲ್ಲಿ ನಾವು ಅಹಂಕಾರ ಮತ್ತು ಅಜ್ಞಾನ ಎಂಬ ಎರಡು ವಿಷಯಗಳ ಬಗ್ಗೆ ತಿಳಿದುಕೊಂಡು, ಅಹಂಕಾರವು ಯಾವ ರೀತಿಯಾಗಿ ಅಜ್ಞಾನಕ್ಕೆ ಕಾರಣವಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಅದಕ್ಕಾಗಿ ಅಹಂಕಾರವೆಂದರೇನು? ಎಂಬ ಪ್ರಶ್ನೆಯನ್ನು ಯಕ್ಷನು ಕೇಳುತ್ತಾನೆ. ಅದಕ್ಕೆ ಧರ್ಮರಾಜನು 'ಅಜ್ಞಾನ' ಎಂಬ ಉತ್ತರವನ್ನು ಕೊಡುತ್ತಾನೆ. ಅಹಂ - ನಾನು, ಎಂಬ ಯಾವ ಅರಿವಿದೆಯೋ ಅದನ್ನೇ 'ಅಹಂಕಾರ' ಎನ್ನುತ್ತಾರೆ. ಹಾಗಾದರೆ 'ನಾನು' ಎಂಬ ಜ್ಞಾನವು ತಪ್ಪೇ!? ಅದರಿಂದ ಹೇಗೆ ಅಜ್ಞಾನವುಂಟಾಗುತ್ತದೆ? ಎಂಬ ಸಂದೇಹ ಬರುತ್ತದೆ.  ಅಮರಕೋಷ ಎಂಬ ಸಂಸ್ಕೃತದ ಶಬ್ದಕೋಷದಲ್ಲಿ 'ಅಹಂಕಾರ' ಎಂಬ ಶಬ್ದಕ್ಕೆ ಗರ್ವ, ಅಭಿಮಾನ, ಮಾನ ಇತ್ಯಾದಿ ಅರ್ಥಗಳನ್ನು ಕೊಡಲಾಗಿದೆ. 

ಯೋಗಶಾಸ್ತ್ರದ ದೃಷ್ಟಿಯಿಂದ ವಿಚಾರ ಮಾಡುವುದಾದರೆ ಈ ಪ್ರಪಂಚವು ಅನೇಕ ತತ್ತ್ವಗಳಿಂದ ಕೂಡಿದೆ; ಈ ಎಲ್ಲಾ ತತ್ತ್ವಗಳೂ ಸತ್ತ್ವ, ರಜಸ್ಸು ಮತ್ತು ತಮಸ್ಸು ಎಂಬು ಗುಣಗಳ ಯೋಗದಿಂದಲೇ ಆಗುತ್ತವೆ; ಹಾಗಾಗಿ ತತ್ತ್ವಗಳು ಮೂರು ವಿಧವಾಗಿ ಕಂಡುಬರುತ್ತವೆ.  ಇಪ್ಪತ್ತ ನಾಲ್ಕು ತತ್ತ್ವಗಳಲ್ಲಿ ಉಂಟಾಗುವ ವೈವಿಧ್ಯವು ಗುಣಗಳ ಆಧಾರದ ಮೇಲೆಯೇ ಉಂಟಾಗಿದೆ.  ಇವುಗಳ ಆಧಾರದ ಮೇಲೆಯೇ ಚರಾಚರ ಸೃಷ್ಟಿಯನ್ನು ಮೂರಾಗಿ ವಿಭಾಗಿಸುತ್ತಾರೆ. ಇವುಗಳಲ್ಲಿ ಮಾನವನ ಸೃಷ್ಟಿಯಲ್ಲಿ ಮಾತ್ರ ಎಲ್ಲಾ ತತ್ತ್ವಗಳೂ ಪರಿಪೂರ್ಣವಾಗಿ ವಿಕಾಸವಾಗಬಲ್ಲವು. ಹಾಗಾಗಿ ಮನುಷ್ಯನನ್ನು ಪ್ರಧಾನವಾಗಿ ಸ್ವೀಕರಿಸಿ ಇಲ್ಲಿ ವಿಚಾರಿಸಲಾಗಿದೆ. ಮಾನವನ ದೇಹವೂ ಇದೇ ಮೂರು ಗುಣಗಳ ಆಧಾರದ ಮೇಲೆ ನಿರ್ಮಿತವಾಗಿದೆ. ಈ ದೇಹದಲ್ಲೂ ಅದೇ ಇಪ್ಪತ್ತ ನಾಲ್ಕು ತತ್ತ್ವಗಳು ಇವೆ. ಇಂತಹ ತತ್ತ್ವಗಳಲ್ಲಿ ಅಹಂಕಾರ ತತ್ತ್ವವೂ ಒಂದು. ಯಾವುದರಲ್ಲಿ ಸತ್ತ್ವಗುಣವು ಪ್ರಧಾನವಾಗಿ ಕಂಡುಬರುತ್ತದೋ ಅದು ಸಾತ್ತ್ವಿಕ ಅಹಂಕಾರ ಎಂದು, ರಜಸ್ಸು ಹೆಚ್ಚಾಗಿ ಕಂಡರೆ ರಾಜಸಿಕ ಅಹಂಕಾರ ಎಂದೂ, ತಮಸ್ಸು ಅತಿಶಯವಾಗಿ ತೋರಿದಾಗ ತಾಮಸಿಕ ಅಹಂಕಾರ ಎಂದು ಕರೆಯಲಾಗುತ್ತದೆ. ಇಲ್ಲಿ ಒಂದೊಂದು ಗುಣದಿಂದ ಒಂದೊಂದು ಬಗೆಯ ಗುಣಗಳನ್ನು ಮಾನವನು ಪಡೆಯುತ್ತಾನೆ ಎಂಬ ವಿಷಯವನ್ನು ಭಗವದ್ಗೀತೆಯಲ್ಲಿ ವಿವರವಾಗಿ ಶ್ರೀಕೃಷ್ಣನು ಅರ್ಜುನನಿಗೆ ನೀಡುತ್ತಾನೆ. ಸತ್ತ್ವವೆಂಬ ಗುಣವು ಅತ್ಯಂತ ನಿರ್ಮಲವಾದು. ಅದರ ಪರಿಣಾಮವೇ ಸಾತ್ತ್ವಿಕ ಅಹಂಕಾರ. ಅದು ಸುಖವನ್ನು, ಜ್ಞಾನವನ್ನೂ ಕೊಡುತ್ತದೆ. ರಜಸ್ಸು ರಾಗರೂಪವಾಗಿರುವುದರಿಂದ ನಮ್ಮನ್ನು ಕರ್ಮ ಮತ್ತು ಅದರ ಫಲಗಳಿಂದ ಕಟ್ಟಿಹಾಕುತ್ತದೆ. "ತಮಸ್ತು ಅಜ್ಞಾನಜಂ ವಿದ್ಧಿ" ಎಲೈ ಅರ್ಜುನ ! ಅಜ್ಞಾನವು ತಮಸ್ಸಿನಿಂದ ಹುಟ್ಟಿದ್ದು ಎಂದು ತಿಳಿ" ಎಂದು. ರಜಸ್ಸು ಮತ್ತು ತಮಸ್ಸಿನ ಕಾರಣದಿಂದ ಹುಟ್ಟುವ ಅಹಂಕಾರಗಳು ಹೇಯವಾದವುಗಳು. ಸತ್ತ್ವದಿಂದ ಹುಟ್ಟಿದ ಅಹಂಕಾರವು ಮಾತ್ರವೇ ಉಪಾದೇಯವಾದುದು. ಅದರಲ್ಲೂ ಅಜ್ಞಾನವು ತಮಸ್ಸಿನ ಕಾರಣದಿಂದ ಹುಟ್ಟಿ ಮಾನವನನ್ನು ಆಲಸ್ಯ, ಪ್ರಮಾದ ಮೊದಲಾದ ದುರ್ಗುಣಗಳ ಆವಿರ್ಭಾವಕ್ಕೆ  ಕಾರಣವಾಗುತ್ತದೆ. ಇದರ ಪರಿಣಾಮವಾಗಿ ಜೀವನದಲ್ಲಿ ತಪ್ಪುಗಳೇ ಘಟಿಸುತ್ತವೆ. ತಮಸ್ಸು ಮತ್ತು ರಜಸ್ಸಿನಿಂದ ಹುಟ್ಟಿದ ಅಹಂಕಾರವು ಯಾವ ರೀತಿಯಾಗಿ ನಮ್ಮನ್ನು ಕೆಟ್ಟವರನ್ನಾಗಿ ಮಾಡುತ್ತದೆ ಎಂಬುದನ್ನು ಭಗವದ್ಗೀತೆಯಲ್ಲಿ ವಿಶದಪಡಿಸುತ್ತಾನೆ ಶ್ರೀಕೃಷ್ಣ.  ಇದೇ ವಿಷಯವನ್ನು ಧರ್ಮರಾಜನು ಅಹಂಕಾರವು ಅಜ್ಞಾನಕ್ಕೆ ಕಾರಣವಾಗುತ್ತದೆ ಎಂದು ಯಕ್ಷನ ಪ್ರಶ್ನೆಗೆ ಉತ್ತರಿಸುತ್ತಾನೆ.

ಸೂಚನೆ :25/8/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ - 28 ವ್ರಜನಾರೀ-ಪರಿವೃತವಾದ ಬ್ರಹ್ಮವೆಮ್ಮನು ಪೊರೆಯಲಿ (Krishnakarnamrta -28 Vrajanari-parivritavada Brahmavemmanu Poreyali)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


ರಮಣಿಯರಿಂದ ಸುತ್ತುವರಿದ ಶ್ರೀಕೃಷ್ಣನ ರಮಣೀಯತೆಯನ್ನು ಬಣ್ಣಿಸುವ ಒಂದು ಶ್ಲೋಕ ಕೃಷ್ಣಕರ್ಣಾಮೃತದಲ್ಲಿದೆ.

ಕೃಷ್ಣನು ಅಶರಣರಿಗೆ ಶರಣ. ಏನು ಹಾಗೆಂದರೆ? ಶರಣ -ಎಂಬ ಪದಕ್ಕೆ ಎರಡು ಅರ್ಥ: ಒಂದು ಮನೆಯೆಂಬುದು, ಇನ್ನೊಂದು ರಕ್ಷಕ ಎಂಬುದು. ಎರಡೂ ಅನ್ವಯವಾಗುವುದೇ ಕೃಷ್ಣನಿಗೆ. ನೆಲೆಯಿಲ್ಲದವರಿಗೆ ಆತನೇ ನೆಲೆ. ಪರಂಧಾಮನೆಂದು ಕೃಷ್ಣನನ್ನು ಕರೆಯುವುದುಂಟಲ್ಲವೇ? ಧಾಮವೆಂದರೆ ಎಡೆ. ಪ್ರಕೃತಿಯೆಂಬ ವನದಲ್ಲಿ ಸಿಲುಕಿಕೊಂಡವರಿಗೆ, ಎಂದರೆ ಕಾಡುಪಾಲಾದವರಿಗೆ, ಭವ್ಯವಾದ ಭವನವೆಂದರೆ ಆತನೇ. ಪ್ರಕೃತಿಯ ಪಾಶದಲ್ಲಿ ಬಿದ್ದು ನರಳುತ್ತಿರುವ ಜೀವರಿಗೆ ಕಾಪಾಡುವವರು ಮತ್ತಾರೂ ಇಲ್ಲದಿರಲು ರಕ್ಷಿಸಲು ಬಂದವನೇ ಶ್ರೀಕೃಷ್ಣ. ಹೀಗ್ ಅ-ನಿಕೇತನರ ಸು-ನಿಕೇತನ ಕೃಷ್ಣ (ನಿಕೇತನವೆಂದರೆ ಮನೆ). ಅ-ರಕ್ಷಿತರ ಸು-ರಕ್ಷಕ ಕೃಷ್ಣ. ಹೀಗೆ ಎರಡೂ ಅರ್ಥಗಳ ಅನ್ವಯ ಇಲ್ಲಿದೆ.

ರಕ್ಷಕನಾಗಿ ಬಂದವನಾದರೂ ಕ್ರೂರ-ದೃಷ್ಟಿಯವನಾದರೆ ಅದೇನು ಹಿತ? ಕೃಷ್ಣನು ಹಾಗಲ್ಲ. ಆತನು ಕಮಲ-ನೇತ್ರ, ಕಮಲಗಳನ್ನು ಹೋಲುವ ಕಣ್ಣುಳ್ಳವನು. ಕಮಲವೆಂದರೂ ಅದೇನು ಛಳಿಗಾಲದ ಕಮಲವೇ? ಶಿಶಿರದ ಕಮಲವೆಂದರೆ ಬಾಡಿದ ನಲಿನ, ಛಳಿಗೆ ತತ್ತರಿಸಿದ ಅಂಬುಜ, ಮುದುಡಿದ ಪದ್ಮ. ಅಂಬುಜದ ಸೊಗಸು ಕಾಣುವುದು ಶರದೃತುವಿನಲ್ಲಿ. ಶರತ್-ಸಮಯದ ಪಂಕಜವನ್ನೇ ಶಾರದಾಂಭೋಜವೆನ್ನುವುದು. ಶಾರದವೆಂದರೆ ಶರತ್ಕಾಲಕ್ಕೆ ಸಂಬಂಧಪಟ್ಟದ್ದು.

ಕೃಷ್ಣನನ್ನು ನೀಲಮೇಘ-ವರ್ಣನೆನ್ನುತ್ತೇವೆ. ಆತನೀಗ ಧರಿಸಿರುವುದೂ ನೀಲ-ವೇಷವನ್ನೇ. ಆದರೂ ರಮಣೀಯನೇ ಆತ. ಏಕೆ? ಆತ ಧರಿಸಿರುವ ಆ ವೇಷವಾದರೂ ಮಧುರಿಮೆಯಿಂದ ಕೂಡಿದೆ. ಮಧುರವಾಗಿರುವಿಕೆಯನ್ನೇ ಮಧುರಿಮವೆನ್ನುವುದು.

ಆ ಮಧುರ-ಭಾವಕ್ಕೆ ಮಿತಿಯೇ ಇಲ್ಲ. ಮಿತಿಯೆಂದರೂ ಅವಧಿಯೆಂದರೂ ಒಂದೇ. ಎಂದೇ ಆತನ ನೀಲವೇಷದ ಮಾಧುರ್ಯ ನಿರವಧಿಯಾದುದು. ಸುವೇಷ-ಧಾರಣ ಮಾಡಿರುವವರು ಸು-ರಮ್ಯವಾಗಿಯೇ ತೋರುವರು. ಮಧುರ-ವೇಷವು ಮಧುರ-ರೂಪಕ್ಕೆ ಕಳೆಕಟ್ಟುವುದೇ ಸರಿ. ಸುಂದರಾಂಗನ ಸುತ್ತ ಸುಂದರಿಯರು ಸೇರುವುದರಲ್ಲಿ ಅಚ್ಚರಿಯೇನು? ವ್ರಜ-ಯುವತಿಯರು, ಎಂದರೆ ನಂದ-ಗೋಕುಲದ ಸುಂದರಿಯರು, ಬಂದಿರುವರು. ದಾಸರೂ ಹೇಳಿಲ್ಲವೇ, "ಸುಂದರಾಂಗದ ಸುಂದರೀಯರ ಹಿಂದು ಮುಂದೆಯಲಿ" ಎಂದು, "ಪಿಳ್ಳಂಗೋವಿಯ ಚೆಲ್ವಕೃಷ್ಣನ" - ಎಂಬ ಹಾಡಿನಲ್ಲಿ?

 ನಾರಿಯರ ಅಂದವೆದ್ದುಕಾಣುವುದು, ಅವರ ಅಂದವಾದ ಲೋಚನಗಳಿಂದ, ಅಂಬುಜವೆಂಬಂತಿರುವ ನೇತ್ರಗಳಿಂದ. ಲೀಲಾಶುಕನ ಸೂಕ್ಷ್ಮದೃಷ್ಟಿಯನ್ನು ನೋಡಿ! ಆ ಗೋಕುಲದ ನಾರಿಯರ ಕಣ್ಣುಗಳಲ್ಲೇ ಸ್ಮೇರತೆ ಇತ್ತಂತೆ. ಸ್ಮೇರತೆಯೆಂದರೆ ನಗುವಿನ ಎಳೆ. ನಗು-ಮುಖವೆಂಬುದು ಬಾಯಿಯಲ್ಲಿ, ಬಾಯ ಬಳಿಯಲ್ಲಿ, ತೋರುವುದನ್ನು ಬಲ್ಲೆವು. ಆದರೆ ಈ ಸುಂದರ ಗೋಪಿಯರ ಕಣ್ಣಲ್ಲೇ ನಗು ಸೂಸುತ್ತಿದೆ! ಅಲ್ಲಿಗೆ ಅದು ಕೃಷ್ಣನೊಂದಿಗೆ ಅವರಿಗಿರುವ ಸಲಿಗೆಯನ್ನು ಸೂಚಿಸುವುದಲ್ಲವೆ?

ಅದಲ್ಲ, ಕಾರಣ. ಆ ಗೋಪಿಕೆಯರು ಸ್ಮರನ ಶರಗಳಿಂದಾಗಿ, ಎಂದರೆ ಮನ್ಮಥನ ಬಾಣಗಳಿಂದಾಗಿ, ಪರತಂತ್ರರಾಗಿಹೋಗಿದ್ದಾರೆ! ಸ್ವತಂತ್ರರಲ್ಲದವರು ಪರತಂತ್ರರು. ಮದನನ ಶರಗಳಿಗೆ ತುತ್ತಾದ ಅವರು ಪರವಶರಾಗಿದ್ದಾರೆ. ಅಲ್ಲಿಗೆ ಕಾಮಬಾಣವು ಆಡಿಸಿದಂತೆ ಆಡುತ್ತಿದ್ದಾರೆ. ಅತಿಕಾಮವು ಮಾರಕವಾದರೂ ಭಗವಂತನತ್ತ ಹರಿದ ಕಾಮವು ತಾರಕ. ಆನಂದರೂಪಿಯಾದ ಆತನ ಸನಿಹದಲ್ಲಿ ಸೂಸುವ ಸಂತಸ ಅವರ ನಯನಗಳಲ್ಲೂ ಬಿಂಬಿತವಾಗಿದೆ!

ಯಾವನೋ ಪರ-ಪುರುಷನತ್ತ ಹರಿದ ಕಾಮವಲ್ಲ, ಗೋಪಿಯರದು; ಪರಮ-ಪುರುಷನತ್ತ ಹರಿದದ್ದು ಅದು. ಪರ-ಪುರುಷ-ಗತವಾದ ಪ್ರೇಮವೂ ಪಾತಕವೇ; ಪರಮ-ಪುರುಷ-ಗತವಾದ ಕಾಮವೂ ತಾರಕವೇ! ಎಂದೇ ಗೋಪಿಯರ ಮಂದೆಯು ಸುತ್ತುವರಿದದ್ದು ಯಾವನೋ ಹಳ್ಳಿಯ ಚೆಲುವನನ್ನಲ್ಲ. ಸಾಕ್ಷಾದ್ ಬ್ರಹ್ಮವನ್ನೇ. ಆ ಬ್ರಹ್ಮವು ನಮ್ಮನ್ನು ಕಾಪಾಡಲಿ - ಎಂದು ಶ್ಲೋಕವನ್ನು ಮುಗಿಸುತ್ತಾನೆ ಲೀಲಾಶುಕ.

 ಶ್ಲೋಕ ಹೀಗಿದೆ:

ಶರಣಂ ಅ-ಶರಣಾನಾಂ ಶಾರದಾಂಭೋಜ-ನೇತ್ರಂ

ನಿರವಧಿ-ಮಧುರಿಮ್ಣಾ ನೀಲ-ವೇಷೇಣ ರಮ್ಯಮ್ |

ಸ್ಮರ-ಶರ-ಪರತಂತ್ರ-ಸ್ಮೇರ-ನೇತ್ರಾಂಬುಜಾಭಿಃ

ವ್ರಜ-ಯುವತಿಭಿಃ ಅವ್ಯಾದ್ ಬ್ರಹ್ಮ ಸಂವೇಷ್ಟಿತಂ ನಃ ||

ಸುಲಕ್ಷಣ-ಚರಣಗಳಿಗೆ ಪ್ರಣಾಮಗಳು!

ವಿಭುವಿನ ಚರಣಗಳಿಗೆ ನಮಸ್ಕಾರ - ಎನ್ನುತ್ತಾನೆ ಲೀಲಾಶುಕ, ಈ ಶ್ಲೋಕದಲ್ಲಿ. ನಮ್ಮಲ್ಲಿ ಗುರುಹಿರಿಯರಿಗೆ, ಅದರಲ್ಲೂ ತಂದೆತಾಯಿಯರಿಗೆ ಪಾದಮುಟ್ಟಿ ನಮಸ್ಕರಿಸುವ ಕ್ರಮವಿದೆಯಲ್ಲವೇ? ಇಂದಿನ ಶ್ರೀಲಂಕಾದಿಂದ ಕಾಶ್ಮೀರ-ನೇಪಾಳಗಳವರೆಗೆ - ನೇಪಾಳವೇನು, ಟಿಬೆಟ್ಟಿನವರೆಗೆ, ಟಿಬೆಟ್ಟೇನು ಮಾನಸ-ಸರೋವರದವರೆಗೆ ಈ ಕ್ರಮ ಸರ್ವತ್ರ ಲಭ್ಯವಾದದ್ದೇ. ಇತ್ತ ಗುಜರಾತಿನಿಂದ ಬರ್ಮಾದವರೆಗೆ (ಇಂದಿನ ಮ್ಯಾನ್ಮಾರ್), ಅಥವಾ ಇನ್ನೂ ಇಂಡೋನೇಷಿಯದ ಪರ್ಯಂತವೂ ಈ ಕ್ರಮವಿದೆ. ವಾಸ್ತವವಾಗಿ ಪಶ್ಚಿಮ-ಪಂಜಾಬ (ಎಂದರೆ ಇಂದಿನ ಪಾಕಿಸ್ತಾನ), ಹಾಗೂ ಗಾಂಧಾರ (ಎಂದರೆ ಅಫ಼ಘಾನಿಸ್ತಾನದ ಕಂದಹಾರ್) - ಇವುಗಳ ಆಚೆಗೂ ಹಿಂದೆ ಈ ಕ್ರಮವಿತ್ತೇ ಸರಿ. ಎಂದೇ, "ವಂದೇ ಗುರೂಣಾಂ ಚರಣಾರವಿಂದೇ" ಎಂದೇ ನಾವು ಹೇಳುವುದುಂಟು. ರಾಮನ ಪಾದವೇನು, ಪಾದುಕೆಗೇ ಪ್ರಭಾವವುಂಟು; ಕೃಷ್ಣನ ಪಾದವೇನು, ಪಾದ-ಧೂಳಿಗೇ ಪಾವನತೆಯುಂಟು!


ಇರಲಿ, ಶ್ರೀಕೃಷ್ಣನ ಪಾದಗಳಿಗೆ ವಂದನೆಯೆನ್ನುವ ಕವಿ ಅದಕ್ಕೇನಾದರೂ ಕಾರಣವನ್ನು ಕೊಟ್ಟಿದ್ದಾನೋ? - ಎಂಬುದನ್ನು ನೋಡಬೇಕಲ್ಲವೇ? ಕವಿಗಳು ಸದಾ ಕಾರಣಗಳನ್ನು ಪಟ್ಟಿಮಾಡುತ್ತ ಹೋಗಬೇಕೆಂಬ ನಿಯಮವೇನೂ ಇಲ್ಲ. ತಾವು ಚಿತ್ರಿಸುವ ವಸ್ತುವಿಗೆ ಏನೋ ವಿಶೇಷಣವನ್ನು, ಏನೋ ವರ್ಣನವನ್ನು ಕೊಟ್ಟರೂ ಸಾಕು; ಅವುಗಳೊಳಗೇ ಕಾರಣವಡಗಿರುವುದು ಗೋಚರವಾಗುತ್ತದೆ. ಯಾವುದೋ ಒಂದು ವಿಶೇಷವಾದ ಭಾವವನ್ನು ಅಡಗಿಸಿಕೊಂಡಿರುವ ವಿಶೇಷಣಕ್ಕೆ ಸಾಭಿಪ್ರಾಯ-ವಿಶೇಷಣವೆನ್ನುತ್ತಾರೆ. ತದನುಸಾರಿಯಾಗಿದೆ ಇಲ್ಲಿಯ ಚಿತ್ರಣ. ಗುಣ-ವಾಚಕವಾದ ಮಾತೊಂದು; ಕ್ರಿಯಾ-ವಾಚಕವಾದ ಮಾತೊಂದು  ಇವಿಲ್ಲಿವೆ. ಯಾರಾದರೂ ಸಿಕ್ಕಾಪಟ್ಟೆ ಮಾತಾಡುವವರಾದರೆ ಅವರನ್ನು ವಾಚಾಳಿಯೆನ್ನುತ್ತೇವಲ್ಲವೇ? ಇದರ ಸಂಸ್ಕೃತಮೂಲವೆಂದರೆ ವಾಚಾಲವೆಂಬುದು. ವಾಚಾಲ-ವಾಚಾಟ  ಎಂಬೆರಡು ನಿಂದಾ-ಪದಗಳಿವೆ. ಅತಿಯಾಗಿ ಮಾತಾಡುವವ "ವಾಚಾಲ"; ಅತಿನಿಂದ್ಯವಾಗಿ ಮಾತಾಡುವವ "ವಾಚಾಟ". ಪ್ರಕೃತ, ಕೃಷ್ಣನ ಚರಣವನ್ನು ವಾಚಾಲವೆಂದಿದೆ! ಬೈಗುಳವೆಂದೇ ತೋರುವ ಈ ಪದಕ್ಕೆ ಬೈಗುಳವಲ್ಲದ ಬಳಕೆಯೂ ವಿಶೇಷ-ಪ್ರಸಂಗಗಳಲ್ಲುಂಟು.

ಕಾಲೇನು ಮಾತಾಡುವುದೇ? ಹೌದು: ತನ್ನ ನೂಪುರದ ಮೂಲಕ! ಹೆಜ್ಜೆಯಿಡುವಾಗ ಗೆಜ್ಜೆಯು ಸದ್ದು ಮಾಡದೇ?: ಇದುವೇ ಚರಣದ "ವಾಚಾಲತೆ". ಅದರಲ್ಲೂ ಮಣಿ-ಖಚಿತವಾದ ನೂಪುರವಾಗಿದ್ದರಂತೂ ಸದ್ದಿಗಿನ್ನಷ್ಟು ಇಂಬೇ: ನಡೆದಾಗ ನೂಪುರಗಳು ನಾದಗೈಯವೇ? ಅಂತೂ ಹೀಗೆ "ಮಣಿ-ನೂಪುರ-ವಾಚಾಲ"ವಾದದ್ದು ಈ ವಿಭುವಿನ ಚರಣ. ಕಣ್ಣು-ಕಿವಿಗಳಿಗೆ ಗೋಚರವಾಗುವ ಈ ಅಂಶವು ಸೊಗಸೇ. ಆದರೆ ಅದಕ್ಕಿಂತಲೂ ಸೊಗಸೆಂದರೆ, ಆ ಚರಣಗಳ ನಡೆಯಿಂದಾದ ಪರಿಣಾಮ.

ಸೂಚನೆ : 24/08/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ

Tuesday, August 20, 2024

ಕೃಷ್ಣಕರ್ಣಾಮೃತ - 25 ಯಮದೂತರ ಭಯವೇಕೆ ಇನ್ನು? (Krishnakarnamrta -25 Yamadutara Bhayaveke Innu?

 ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಎಲ್ಲ ಪ್ರಾಣಿಗಳಿಗೂ ಭಯವೆಂಬುದು ಉಂಟೇ ಉಂಟು. ಏಕೆ? ಹೇಗೆ? ಎಲ್ಲರಿಗೂ ಆಸೆಯೆಂಬುದುಂಟಲ್ಲವೇ? ತನ್ನ ಆಸೆಯು ಎಲ್ಲಿ ಈಡೇರದೋ ? - ಎಂಬ ಭಯವಿದ್ದೇ ಇರುತ್ತದಲ್ಲವೆ? ಕೊನೆಯ ಪಕ್ಷ ತಾನಿರಬೇಕು - ಎಂಬ ಆಸೆಯಂತೂ ಸಹಜವೇ ಸರಿ. ತೀವ್ರ-ಖೇದವಾದಾಗ "ಅಯ್ಯೋ ನಾನಿನ್ನೂ ಬದುಕಿರಬೇಕೇ?" - ಎಂದುಕೊಳ್ಳುವವರಿರಬಹುದು. ಅದಾವುದೋ ಸಮಯ-ವಿಶೇಷದಲ್ಲಿ ಮಾತ್ರ ಆಗುವಂತಹುದದು.

ಪ್ರಾಣವುಳ್ಳವರೆಲ್ಲಾ ಪ್ರಾಣಿಗಳೇ ಸರಿ. ಈ ಲೆಕ್ಕದಲ್ಲಿ ಮನುಷ್ಯರೂ "ಪ್ರಾಣಿ"ಗಳೇ. ಪ್ರಾಣಿಗಳಿಗಿರುವ ಪರಮ-ಭಯವೆಂದರೆ ಎಲ್ಲಿ ತಮ್ಮ ಪ್ರಾಣ ಹೋಗುವುದೋ – ಎಂಬುದೇ.  ಪ್ರಾಣವೇ ಹೋದಲ್ಲಿ ಪ್ರಾಣಿಗೆ ಅಸ್ತಿತ್ವವಿನ್ನೆಲ್ಲಿ? ಎಂದೇ, ಹೇಗಾದರೂ ಪ್ರಾಣವುಳಿಸಿಕೊಳ್ಳಬೇಕೆಂಬ ಪ್ರವೃತ್ತಿ ಎಲ್ಲರಲ್ಲೂ ಇರುವುದು – ಸಣ್ಣ ಇರುವೆಯಿಂದ ಹಿಡಿದು, ಬೃಹತ್ತಾದ ಆನೆಯವರೆಗೂ!

ನಮ್ಮ ಪಾಲಿನ ಮರಣ-ಭಯವನ್ನೇ ಯಮನ ದೆಸೆಯಿಂದ ಭಯವೆಂದೋ, ಯಮ-ದೂತರ ದೆಸೆಯಿಂದ ಭಯವೆಂದೋ ಹೇಳುವುದುಂಟಷ್ಟೆ?

ಆದರೆ ಈ ಭಯ - ಯಮ-ದೂತರು ಬಂದಾರೆಂಬ ಭಯ, ಪಾಶ ಬೀಸಿ ಪ್ರಾಣವನ್ನು ಸೆಳೆದಾರೆಂಬ ಭಯ - ಇದು ಇಲ್ಲದೆಯೇ ಇರುವ ಬಗೆಯೊಂದನ್ನು ಲೀಲಾಶುಕನು ಬೋಧಿಸುತ್ತಾನೆ.

ತನ್ನ ಮಟ್ಟಿಗೆ ಒದಗಿರುವ ನಿರ್ಭಯತೆಯನ್ನು ಆತನು ಹೇಳಿಕೊಂಡಿದ್ದರೂ, ತನಗೆ ಆ ಸ್ಥಿತಿಯು ಏಕೆ ಮತ್ತು ಹೇಗೆ ಒದಗಿದೆಯೆಂಬುದನ್ನು ಆತನು ವಿವರಿಸಿ ಹೇಳಿದ್ದಾನಾದ್ದರಿಂದ, ನಮಗೂ ಆ ಹಾದಿಯನ್ನು ತಿಳಿಸಿಕೊಟ್ಟಿದ್ದಾನೆಂದೇ - ನಮಗೆ ಅದನ್ನು ಬೋಧಿಸಿದ್ದಾನೆಂದೇ - ಭಾವಿಸಬಹುದು.

ಆ ಯಮ-ದೂತನು ನನಗೇನು ಮಾಡಿಯಾನು? - ಎಂದು ಧೈರ್ಯದಿಂದ ಕೇಳುವ ಕವಿಯು ತನ್ನ ಧೈರ್ಯಕ್ಕೆ ಕಾರಣವಾಗಿ ಮೂರು ಅಂಶಗಳನ್ನು ಹೇಳುತ್ತಾನೆ. ಈ ಮೂರಿದ್ದರೆ ಅವನೇನು ಮಾಡಬಲ್ಲ? - ಎಂಬ ನಿರ್ಭಯೋಕ್ತಿ; ನಮ್ಮ ಪಾಲಿಗೆ ಅದುವೇ ಅಭಯೋಕ್ತಿ.

ಯಾವುವು ಆ ಮೂರಂಶಗಳು? ಮೊದಲನೆಯದು ನಾನು ಪೂತನಾಗಿದ್ದರೆ – ಎನ್ನುವುದು. ಪೂತ ಎಂದರೆ ಪವಿತ್ರನಾಗಿರುವವನು. ಪವಿತ್ರತೆ ಬರುವುದು ಹೇಗೆ? ಪೂಜಿಸುವುದರಿಂದ. ಯಾರನ್ನು ಪೂಜಿಸುವುದು? ದೇವಕೀ-ತನಯನನ್ನು. ತನಯನೆಂದರೆ ಮಗ. ದೇವಕೀ-ತನಯನೆಂದರೆ ದೇವಕೀ-ಪುತ್ರ. ದೇವಕೀ-ವಸುದೇವರು ಶ್ರೀಕೃಷ್ಣನಿಗೆ ಜನ್ಮವಿತ್ತ ತಾಯಿ-ತಂದೆಯರು. ಕೃಷ್ಣನನ್ನು ವಸುದೇವ-ಸುತ, ವಾಸುದೇವ ಎಂದೆಲ್ಲ ಕರೆದರೂ, ಆತನು "ದೇವಕೀ-ಪರಮಾನಂದ"ನೇ ಅಲ್ಲವೇ? ಎಂದೇ ಇಲ್ಲಿ ದೇವಕೀ-ತನಯನೆಂದು ಆತನನ್ನು ಕರೆದಿರುವುದು. ಶ್ರೀಕೃಷ್ಣನ ಪೂಜೆಯನ್ನು ಮಾಡಿದವನು ಪೂತನಾಗುವನು.

ಎರಡನೆಯದಾಗಿ ನಾವು ಧೌತರಾಗಿದ್ದರೆ ಯಮ-ದೂತರು ನಮ್ಮನ್ನೇನೂ ಮಾಡರು. ಅದಕ್ಕೇನು? ಮೈಮೇಲೆ ನೀರು ಹುಯ್ದುಕೊಂಡರಾಯಿತಲ್ಲವೆ? ನಾವು ಮೈತೊಳೆದುಕೊಂಡಂತಾಯ್ತಲ್ಲವೆ? ಧೌತರಾದೆವಲ್ಲಾ? - ಎಂದುಕೊಳ್ಳಬಹುದು. ಬರೀ ಜಲದಿಂದಾದ ಬರೀ ದೇಹ-ಶುದ್ಧಿಯೆಂಬುದಾದೀತು. ಸರಿಯಾಗಿ ಧೌತನೆನಿಸಲು ಅದು ಸಾಲದು. ಹಾಗಾದರೆ ಏನು ಮಾಡಿದಲ್ಲಿ ಧೌತನಾಗಬಹುದು? ಶ್ರೀಕೃಷ್ಣನ ಪಾದೋದಕದಿಂದಲೇ ಧೌತನಾಗಲು ಸಾಧ್ಯ. ಶ್ರೀಕೃಷ್ಣನ ಚರಣಗಳನ್ನು ತೊಳೆದ ನೀರು ಪವಿತ್ರವಾದದ್ದು. ಆ ಪವಿತ್ರವಾದ ಉದಕದಿಂದ ಪ್ರೋಕ್ಷಣೆ ಮಾಡಿಕೊಂಡರೆ ಸಾಕು. (ಉದಕವೆಂದರೆ ನೀರು. ಪ್ರೋಕ್ಷಣವೆಂದರೆ ಶಾಸ್ತ್ರೋಕ್ತ-ರೀತಿಯಲ್ಲಿ ಶಿರಸ್ಸಿನ ಮೇಲೆ ಸಿಂಪಡಿಸಿಕೊಳ್ಳುವುದು).

ಶ್ರೀಕೃಷ್ಣನೇನು, ಭಗವಾನ್ ವಿಷ್ಣುವೇನು? -ಇಬ್ಬರೂ ಒಂದೇ. ಹೀಗಾಗಿ, ಶ್ರೀವಿಷ್ಣುವಿನ ಪಾದವನ್ನು ತೊಳೆದ ನೀರೆಂದರೂ ಅದೇ. ಹಿಂದೆ ಬ್ರಹ್ಮನು ಮಾಡಿದ್ದೇನು? ತನ್ನ ಕಮಂಡಲುವಿನಿಂದ ಧಾರೆಯಾಗಿ ಬಂದ ಗಂಗಾ-ಜಲದಿಂದ ವಿಷ್ಣುವಿನ ಪಾದವನ್ನು ತೊಳೆದನಲ್ಲವೆ? ಹೀಗಾಗಿ ವಿಷ್ಣು-ಚರಣೋದಕವೆಂದರೆ ಗಂಗಾ-ಜಲವೆಂದು ಸಹ ಅರ್ಥವಾಗಬಹುದು. ಧೌತವೆಂದರೆ ವಿಮಲವಾಗಿರುವುದು, ಶುಚಿಯಾಗಿರುವುದು.

ದೇವಕೀ-ಪುತ್ರನ ಪೂಜನದಿಂದ ಪೂತನಾದ ವಿಷಯವನ್ನು ಹೇಳಿತಲ್ಲವೆ? ಅಲ್ಲೇ ಪೂ-ಪೂ- ಎಂದು ಎರಡು ಬಾರಿ 'ಪೂ'ಕಾರವು ಬಂದದ್ದಕ್ಕೆ ಇನ್ನೊಂದು ಪೂಕಾರವನ್ನು ಕವಿ ಜಾಣ್ಮೆಯಿಂದ ತಂದಿದ್ದಾನೆ. ಶ್ರೀಕೃಷ್ಣನು ತನ್ನ ಎಳಸಿನಲ್ಲಿಯೇ ಕೊಂದನಲ್ಲವೇ ಪೂತನೆಯನ್ನು? ಎಂದೇ ಕೃಷ್ಣನು ಪೂತನಾರಿ, ಪೂತನೆಯ ಶತ್ರು. ಹೀಗೆ ಪೂತನಾರಿಯ ಚರಣ-ಜಲದಿಂದ ಧೌತನಾದವನಿಗೆ ಯಮ-ದೂತನು ಏನನ್ನೂ ಮಾಡಲಾರ.

ಮೂರನೆಯ ಅಂಶವೊಂದಿದೆಯಲ್ಲವೆ? ಅದೇನೆಂದರೆ ಕೃಷ್ಣನನ್ನು ಪಾರ್ಥ-ಸಾರಥಿಯನ್ನಾಗಿ ಸ್ಮರಿಸುವುದು. ಧನಂಜಯನೆಂದರೆ ಅರ್ಜುನ. ಕೃಷ್ಣನು ಅರ್ಜುನನ ಸೂತ. ಸೂತನೆಂದರೆ ರಥವನ್ನೋಡಿಸುವವನು. ಅರ್ಜುನನಿಗೆ ಸಾರಥಿಯಗಿ ಬಂದಾಗಲಲ್ಲವೆ ಆತನು ಗೀತೆಯನ್ನು ಬೋಧಿಸಿದುದು? ಜ್ಞಾನವನ್ನು ಉಂಟುಮಾಡಿದುದು? ಹೀಗೆ ಧನಂಜಯನಿಗೆ ಸೂತನಾದವನನ್ನು ನಾನು ಸ್ಮರಿಸಿದೆನಾದಲ್ಲಿ ಯಾವ ಯಮ-ದೂತನೂ ಏನನ್ನೂ ಮಾಡಲಾರನೇ ಸರಿ.

ಅಂತೂ ಹೀಗೆ ಕೃಷ್ಣಪೂಜೆ, ಕೃಷ್ಣಮೂರ್ತಿ-ಪಾದಜಲ-ಪ್ರೋಕ್ಷಣ, ಕೃಷ್ಣನ ಪಾರ್ಥಸಾರಥಿ-ರೂಪದ ಸ್ಮರಣೆ - ಇವುಗಳಿದ್ದಲ್ಲಿ ಯಮದೂತ-ಭಯವೇ ಬೇಕಿಲ್ಲ! - ಎನ್ನುತ್ತಾನೆ ಕವಿ.

ಕೃಷ್ಣ-ಭಕ್ತರಿಗೆ ದುರಿತವಿರದು (ದುರಿತವೆಂದರೆ ಪಾಪ). ಎಲ್ಲಿ ದುರಿತವಿಲ್ಲವೋ, ಎಲ್ಲಿ ಪಾಪಿಗಳಿಲ್ಲವೋ, ಅಲ್ಲಿ ಯಮ-ಕಿಂಕರರಿಗೆ ಕೆಲಸವಾದರೂ ಏನು? ಕೆಲಸವಿಲ್ಲದೆಡೆಗೆ ಅವರು ಬಂದಾರೇ?

ಕವಿಯ ಅನುಪ್ರಾಸ-ಪ್ರಿಯತೆ ಇಲ್ಲಿ ಮತ್ತೆ ಗೋಚರವಾಗುತ್ತದೆ - ಪ್ರತಿಪಾದದ ಕೊನೆಯಲ್ಲಿ, ಅಲ್ಲಿ ಬಂದಿರುವ ಪೂತ-ಧೌತ-ಸೂತ-ದೂತಗಳೆಂಬ ಪದಗಳನ್ನು ಗಮನಿಸಬಹುದು.

ಈಗ ಶ್ಲೋಕವನ್ನು ನೋಡಿ:

ದೇವಕೀತನಯ-ಪೂಜನ-ಪೂತಃ

ಪೂತನಾರಿ-ಚರಣೋದಕ-ಧೌತಃ |

ಯದ್ಯಹಂ ಸ್ಮೃತ-ಧನಂಜಯ-ಸೂತಃ

ಕಿಂ ಕರಿಷ್ಯತಿ ಸ ಮೇ ಯಮ-ದೂತಃ ?!||

 

ಬೆಣ್ಣೆಕೃಷ್ಣನ ಮುದ್ದು ಭಂಗಿ

ಕೃಷ್ಣಕರ್ಣಾಮೃತದ ಎಷ್ಟೋ ಶ್ಲೋಕಗಳು ಕೃಷ್ಣನ ಲೀಲಾ-ಭಂಗಿಯೊಂದನ್ನು ಸೆರೆಹಿಡಿದಿರುವಂತಿರುತ್ತವೆ. ರಸ್ಯವಾದ ಸಂನಿವೇಶವೊಂದನ್ನು ಛಾಯಾಗ್ರಾಹಕ(ಫೋಟೋ)ವೊಂದರಲ್ಲಿ ಹಿಡಿದು ಅದನ್ನು ನಮ್ಮ ಕಣ್ಣಮುಂದಿರಿಸಿದಂತೆ ಭಾಸವಾಗುತ್ತದೆ. ಕೃಷ್ಣನ ಚಿತ್ರಗಳನ್ನು ಬಿಡಿಸಬೇಕೆಂಬ ಬಯಕೆಯಿದ್ದವರಿಗೆ, ಅದಕ್ಕೊಪ್ಪುವಂತಹ ಸುಸಂನಿವೇಶಗಳು ಈ ಕೃತಿಯಲ್ಲಿವೆ.

ಭಗವಂತನನ್ನು ಒಂದು ಶಿಶುವಾಗಿ ಕಂಡು ಆನಂದಿಸಿರುವ ಶ್ಲೋಕವೊಂದು ನಮ್ಮ ಮುಂದೆ ಇದೆ. ಇಲ್ಲಿ ಚಿತ್ರಿಸಿರುವುದು ನವನೀತ-ಕೃಷ್ಣ(ಬೆಣ್ಣೆಕೃಷ್ಣ) ನನ್ನು.

ಆತನ ವಾಮ-ಜಾನುವು ಆಕುಂಚಿತವಾಗಿದೆ. ಎಂದರೆ ಎಡ-ಮಂಡಿಯು ಮಡಿಸಿದೆ.'ವಾಮ'ವೆಂಬ ವಿಶೇಷಣವು ಅತ್ತ ಜಾನುವಿಗೂ ಇತ್ತ ಕರಕ್ಕೂ ಅನ್ವಯಿಸುತ್ತದೆ. ಎಡಗೈಯನ್ನೂ ನೆಲದ ಮೇಲೆ ಊರಿದ್ದಾನೆ.

ಆತನ ಬಲಗೈಯಲ್ಲಿ ಬೆಣ್ಣೆಯ ಖಂಡವೊಂದಿದೆ. ಆತನ ಕಣ್ಣಂತೂ ಬೆಣ್ಣೆಯ ಮೇಲೆಯೇ. ಹೀಗಿದೆ ಆತನ ದಕ್ಷಿಣಹಸ್ತ-ಪದ್ಮ, ಎಂದರೆ ಕಮಲವನ್ನು ಹೋಲುವ ಬಲಗೈ. ತನ್ನ ಅಂಗಗಳೆಲ್ಲವೂ ಈ ಭಂಗಿಗೆ ಅನುಕೂಲಿಸುವಂತೆ ಉಪಾನತವಾಗಿವೆ, ಎಂದರೆ ಬಗ್ಗಿವೆ ಅಥವಾ ಮಡಿಸಿವೆ.

ಹೀಗಿರುವ ಬಾಲಕೃಷ್ಣನನ್ನು ನಾನು ಭಜಿಸುತ್ತೇನೆ - ಎನ್ನುತ್ತಾನೆ, ಲೀಲಾಶುಕ.

ಯಾವುದೇ ಶಬ್ದಾಲಂಕಾರಕ್ಕೆ ಕವಿಯು ಗಮನವನ್ನೀ ಶ್ಲೋಕದಲ್ಲಿ ಕೊಟ್ಟಿಲ್ಲವೆಂದು ತೋರುವುದಾದರೂ ಒಂದೆರಡು ಅನುಪ್ರಾಸಗಳು ಬಂದೇ ಇವೆ. ಆಕುಂಚಿತ - ಕರಂ ಚ ಎನ್ನುವಾಗ ಕೊಂಚ ಅನುಪ್ರಾಸವು ತೋರುತ್ತದೆ. ಹಾಗೆಯೇ ಕ್ಷಿತೌ-ದಕ್ಷಿಣಗಳಲ್ಲಿ ಕ್ಷಕಾರಗಳಿವೆ.

ಈಗ ಈ ಶ್ಲೋಕವನ್ನೂ ಅದರೊಂದಿಗಿನ ಬೆಣ್ಣೆಕಣ್ಣನನ್ನೂ ಆಸ್ವಾದಿಸಿ:

ಆಕುಂಚಿತಂ ಜಾನು ಕರಂ ಚ ವಾಮಂ

ನ್ಯಸ್ಯ ಕ್ಷಿತೌ ದಕ್ಷಿಣ-ಹಸ್ತ-ಪದ್ಮೇ |

ಆಲೋಕಯಂತಂ ನವನೀತ-ಖಂಡಂ

ಬಾಲಂ ಭಜೇ ಕೃಷ್ಣಂ ಉಪಾನತಾಂಗಂ ||

ಸೂಚನೆ : 7/04/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.


ಅಷ್ಟಾಕ್ಷರೀ 63 ಯತ್ ಪಥ್ಯ೦ ತನ್ನ ರೋಚತೇ (Ashtakshari -63 Yath Pathyam Thanna Rochathe)

 ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


"ಅಜ್ಞಾನಕ್ಕೆ ಸಿಕ್ಕಿದ ಬುದ್ಧಿ ಕುಡುಕಬುದ್ಧಿಯಂತಾಗುತ್ತೆ" - ಎಂಬ ಶ್ರೀರಂಗಮಹಾಗುರುಗಳ ವಚನವು ಮಾರ್ಮಿಕವಾದದ್ದು. ತಿಳಿಯದೆ ತಪ್ಪು ಹೆಜ್ಜೆಹಾಕುವವರನ್ನು ಕುರಿತು ಹೇಳುವ ಮಾತಿದು - ಅಲ್ಲವೇ? ಹೌದು, ಆದರೆ ಅದಕ್ಕಿಂತಲೂ ಹೆಚ್ಚಾಗಿ, ತಿಳಿದೂ ತಪ್ಪು ಮಾಡುವವರಿಗೆ ಕೊಡುವ ಎಚ್ಚರವಿದಾಗಿದೆ. ಅದು ಹೇಗೆ? - ಎಂಬುದಕ್ಕೆ ನಿದರ್ಶನವೊಂದನ್ನಿತ್ತರೆ ಅರಿಯುವುದು ಸುಲಭವಾದೀತು.

ವಾಲ್ಮೀಕಿ-ರಾಮಾಯಣದ ತೃತೀಯ-ಕಾಂಡವಾದ ಅರಣ್ಯ-ಕಾಂಡವೂ ಸ್ವಾರಸ್ಯಮಯವಾದದ್ದೇ. ಅದರಲ್ಲಾಗುವ ಒಂದು ದುರಂತವೆನ್ನಬಹುದಾದ, ಹಾಗೂ ಸಹೃದಯ-ವಾಚಕ/ಶ್ರಾವಕರಿಗೆ ಮನನೋಯಿಸುವ, ಪ್ರಸಂಗವೆಂದರೆ ರಾವಣನು ಮಾಡುವ ಸೀತಾಪಹರಣವೇ ಸರಿ.

ಸೀತಾಪಹಾರವು ರಾವಣನಿಗೆ ಸಂತಸವನ್ನುಂಟುಮಾಡಿರಬಹುದು. ಆದರೆ ಎಲ್ಲರಿಗೂ ನೋವೇ ಅದು.

ಯಾರು ಯಾರಿಗೆ ನೋವು? "ಆಹಾ, ಯಾರಿಗಿಲ್ಲ?" - ಎಂದೇ ಕೇಳಬಹುದೋ ಏನೋ. ಆ ಸಂನಿವೇಶದಲ್ಲಿದ್ದ ವೃಕ್ಷಗಳೂ, ಸರೋವರಗಳೂ, ಸಿಂಹ-ವ್ಯಾಘ್ರಗಳೂ, ಮೃಗಪಕ್ಷಿಗಳೂ ಪರ್ವತಗಳೂ, ಜಿಂಕೆಯ ಮರಿಗಳೂ, ವನದೇವತೆಗಳೂ - ಎಲ್ಲರಿಗೂ ನೋವು ಉಂಟೇ ಆಯಿತು!  

ಹಾಗೆಂದು ನಾಲ್ಕಾರು ಶ್ಲೋಕಗಳಲ್ಲಿ ವಾಲ್ಮೀಕಿಗಳೇ ಚಿತ್ರಿಸಿದ್ದಾರೆ: ಕಮಲ-ರಹಿತವಾಗಿ ಸರೋವರಗಳು ಅನುಶೋಕಪಟ್ಟವು. ಸೀತೆಯ ನೆರಳನ್ನು ಅನುಸರಿಸಿಹೋಗುತ್ತಾ ಸಿಂಹ-ವ್ಯಾಘ್ರ-ಮೃಗಗಳೂ ತಮ್ಮ ರೋಷವನ್ನು ವ್ಯಕ್ತಪಡಿಸಿದವು. ಶೃಂಗಗಳೆಂಬ ತಮ್ಮ ತೋಳುಗಳನ್ನೆತ್ತಿ ಪರ್ವತಗಳು ವಿಕ್ರೋಶಿಸುತ್ತಿದ್ದಂತಿತ್ತು, ಆಗ. ಸೂರ್ಯನೂ ಮಂಕಾದನು. "ಧರ್ಮವೆಂಬುದಿಲ್ಲ, ಸತ್ಯವಿನ್ನೆಲ್ಲಿ, ಕಾರುಣ್ಯವೆನ್ನುವುದಿಲ್ಲವಾಗಿದೆ!" ಎಂದೆಲ್ಲ ಭಾವಿಸುತ್ತಾ ಜಿಂಕೆಗಳ ಮರಿಗಳೂ ಬೆದರಿ ಅತ್ತವಂತೆ! ವನದೇವತೆಗಳೂ ನಡುಗಿಹೋದರು - ಎಂದೆಲ್ಲಾ ನಿರೂಪಿಸಿದ್ದಾರೆ, ವಾಲ್ಮೀಕಿಗಳು. ಕುಜನರ ಕುಕೃತ್ಯಗಳಿಗೆ ಖುಷಿಪಡುವವರೂ ಇದ್ದಾರೇ?

ಇದ್ದರು - ಎನ್ನುತ್ತಾರೆ, ವಾಲ್ಮೀಕಿಗಳೇ! ಯಾರು? "ಆಹಾ! ಕೆಲಸವಾಯಿತು!" (ಕೃತಂ ಕಾರ್ಯಂ!) - ಎಂದು ಉದ್ಗರಿಸಿದನಂತೆ, ಶ್ರೀಮಾನ್ ಬ್ರಹ್ಮನೇ ! ಇದೇನು ಬ್ರಹ್ಮನಿಗೆ ತುಷ್ಟಿಯಾಯಿತೇ? - ಎಂದು ಆಶ್ಚರ್ಯವಾಗುವುದಲ್ಲವೇ? ಅವನಿಗೆ ಮಾತ್ರವಲ್ಲ. ದಂಡಕಾರಣ್ಯ-ವಾಸಿಗಳಾದ ಪರಮರ್ಷಿಗಳ ನಡೆಯು ಬ್ರಹ್ಮನಿಗಿಂತ ಸ್ವಲ್ಪ ವಾಸಿಯೇನೋ? ಏಕೆ? ಅವರೂ ತುಂಬಾ ಸಂತೋಷಗೊಂಡವರೇ; ಜೊತೆಗಿಷ್ಟು ವ್ಯಥೆಯನ್ನೂ ಪಟ್ಟರು - ಎನ್ನುತ್ತಾರೆ ವಾಲ್ಮೀಕಿಗಳು. ಸೀತೆಗಿಂತಹ ಪರಾಭವವಾಯಿತಲ್ಲಾ! - ಎಂದು ದುಃಖ. ಹಾಗಾದರೆ ಪ್ರಹರ್ಷವೇತಕ್ಕೆ? ಏತಕ್ಕೆಂದರೆ,  "ಓ, ರಾವಣನ ವಿನಾಶ ಇನ್ನೇನು ಸಮೀಪಿಸುತ್ತಿದೆ"- ಎಂದು!

ಇವರೆಲ್ಲರ ಪ್ರತಿಕ್ರಿಯೆಗಳೇನೇ ಇರಲಿ, ಸೀತೆಯೇ ಆ ಸಂದರ್ಭವನ್ನು ಹೇಗೆ ಎದುರಿಸಿದಳು? ಎಂಬುದನ್ನೊಮ್ಮೆ ನೋಡಬೇಕಲ್ಲವೇ?

ಸೀತೆಗೆ ರೋಷವೂ ರೋದನವೂ ಉಕ್ಕಿಬಂದವು. ಅಳುತ್ತಲೇ ಆ ದುಷ್ಟ-ರಾವಣನನ್ನು ಕುರಿತು ಮೂದಲಿಸಿ ಹೇಳಿದಳು, ಆ ಧೀರ-ಪತಿವ್ರತೆ: "ನಾಚಿಕೆಯಾಗುವುದಿಲ್ಲವೇ ನಿನಗೆ, ನೀಚ-ರಾವಣ! ನಾನು ಒಂಟಿಯಾಗಿರುವುದನ್ನು ಖಚಿತಪಡಿಸಿಕೊಂಡು ಹೀಗೆ ಅಪಹರಿಸಿಕೊಂಡು ಓಡಿಹೋಗುತ್ತಿರುವೆಯೆಲ್ಲಾ! ಹೇಡಿಯಾದ ನೀನು ನನ್ನನ್ನು ಕದಿಯಲೆಂದೇ ಮೃಗ-ರೂಪದ ಮಾಯೆಯಿಂದ ನನ್ನ ಪತಿಯನ್ನು ಸಾಗಹಾಕಿರುವೆ. ನೀನೇನು ನನ್ನನ್ನು ಯುದ್ಧದಲ್ಲಿ ಗೆದ್ದು ಹೊತ್ತುಕೊಂಡು ಹೋಗುತ್ತಿರುವೆಯಾ?: ನಿನ್ನ ಶೌರ್ಯಕ್ಕೆ ಧಿಕ್ಕಾರ! ಪಲಾಯನಮಾಡುತ್ತಿರುವೆಯೆಲ್ಲಾ, ನಿಲ್ಲು. ಆ ರಾಜಕುಮಾರರಿಬ್ಬರ (ರಾಮ-ಲಕ್ಷ್ಮಣರ)  ಕಣ್ಣಿಗೆ ಬಿದ್ದೆಯೋ, ನೀ ಸತ್ತಂತೆಯೇ ಸರಿ. 

ಮರಣವು ಸಮೀಪಿಸಿರುವವನು ವಿರುದ್ಧವಾದವುಗಳನ್ನೇ ಸೇವಿಸುವನು. ಪಥ್ಯವಾದದ್ದು ರುಚಿಸುವುದೇ ಇಲ್ಲ - ಸಾಯಲಿರುವವರಿಗೆ (ಯತ್ ಪಥ್ಯಂ ತನ್ನ ರೋಚತೇ)! ಇದೋ ನಿನ್ನ ಕುತ್ತಿಗೆಗೆ ಯಮ-ಪಾಶವು ಬಿಗಿದುಕೊಂಡಿರುವುದು ನನಗೆ ಕಾಣುತ್ತಿದೆ! ಏಕೆಂದರೆ ಹೆದರಬೇಕಾದೆಡೆ ನೀನು ಹೆದರುತ್ತಿಲ್ಲ" – ಎಂದೆಲ್ಲ ಹೇಳಿದಳು.

ಇಲ್ಲಿ ರಾವಣನು ತಪ್ಪು ಹೆಜ್ಜೆಯಿಡುತ್ತಿರುವುದು ಸುಜ್ಞೇಯವಾಗಿದೆ: ಮೇಲೆ ಹೇಳಿದಂತೆ ಪಶು-ಪ್ರಾಣಿಗಳಿಗೂ ಗೊತ್ತಾಗುವಂತಹುದದು! ಇನ್ನು ಮಹಾ-ವಿದ್ವಾಂಸನಾದ ರಾವಣನ ಅರಿವಿಗೆ ಬರದಿರುವಂತಹುದೇ? ಸಾಲದೆಂದು, ಈ ದುಷ್ಕೃತ್ಯವಾಗುವುದಕ್ಕೆ ಮೊದಲೇ ಮಾರೀಚನೆಚ್ಚರಿಸಿದ್ದ; ದುಷ್ಕೃತ್ಯವಾಗುತ್ತಿರುವಾಗ ಸೀತೆ ಎಚ್ಚರಿಸಿದ್ದಾಳೆ; ಮುಂದೆಯೂ ವಿಭೀಷಣನು ಎಚ್ಚರಿಸುವವನಿದ್ದಾನೆ. ಆದಿ-ಮಧ್ಯ-ಅಂತಗಳಲ್ಲಿ ಎಲ್ಲರೂ ಎಚ್ಚರವಿತ್ತರೂ ಪರಿಣಾಮವು ಮಾತ್ರ ಸೊನ್ನೆಯೇ, ದೊಡ್ಡಸೊನ್ನೆಯೇ.

ಗೊತ್ತಿದ್ದೂ ತಪ್ಪುಮಾಡುವುದೆಂದರೇನು? ತನ್ನ ಕೃತ್ಯದ ವಾಸ್ತವವಾದ ಪರಿಣಾಮದ ಬಗ್ಗೆ ಪೂರ್ಣವಾದ/ಖಚಿತವಾದ ಅರಿವಿಲ್ಲವೆಂದೇ! ಅರ್ಥಾತ್, ಅದು ಜ್ಞಾನದ ತೋರ್ಕೆಯುಳ್ಳ ಅಜ್ಞಾನವೆಂದೇ! ಕುಡುಕನು ಕಡುಬುದ್ಧಿವಂತನಿದ್ದರೂ, ಮತ್ತು ಮೂಡಿದಾಗ ಮತಿಯು ಮಂಕೇ - ಅಲ್ಲವೇ? ತಾನೇ ಸುಲಭವಾಗಿ ಪರಿಕಿಸಿಕೊಳ್ಳಬಹುದಾದುದ್ದಕ್ಕೆ ಪರರು ಸಹ ಪರಿಪರಿಯಾಗಿ ಪರಿಶೀಲನವಿತ್ತರೂ, ಅದರ ಆಂತರ್ಯವನ್ನು ಆಂತುಕೊಳ್ಳಲಾರ, ಅರಿತುಕೊಳ್ಳಲಾರ, ಸೊಕ್ಕೇರಿದ ಮತ್ತೇರಿದ ಕುಡುಕ!

ಸಾವಿನ ತಾವಿನತ್ತ ಹಠದಿಂದ ಹೊರಟವನನ್ನು ಬಿರುನುಡಿಗಳಿಂದ ಬೆದರಿಸಿ ಬೆಚ್ಚಿಸಿ ಎಚ್ಚರಿಸಲಾದೀತೇ? ಅಥವಾ ಸವಿನುಡಿಗಳಿಂದ ಸರಿಮಾರ್ಗದತ್ತ ಸರಿಸಲಾದೀತೇ? ವಿನಾಶ-ಕಾಲವು ಕಾಲಿಡುತ್ತಿರಲು ಬುದ್ಧಿಯು ವಿಪರೀತವೇ ಆಗುವುದು. ವಿಪರೀತವೆಂದರೆ ವಿರುದ್ಧವಾದದ್ದು: ಪಥ್ಯವಾದದ್ದು ಅಪಥ್ಯವಾಗಿ ತೋರುವಂತಾಗುವುದು. ಜವರಾಯನ ಹವಣಿಕೆಯಲ್ಲದೆ ಮತ್ತೇನದು? 

ದುಷ್ಟರು ನಷ್ಟರಾಗುವುದನ್ನು ಎಲ್ಲರೂ ಇಷ್ಟಪಡುವವರೇ. ಎಂದೇ ಸೀತಾಪಹರಣವಾಗುವಾಗ ಬ್ರಹ್ಮನಿಗೆ ಸಮಾಧಾನವಾದದ್ದು, ದಂಡಕಾರಣ್ಯದ ಪರಮರ್ಷಿಗಳಿಗೆ ಪರಮ-ಹರ್ಷವೇ ಆದದ್ದು!

ಸೂಚನೆ: 10/08/2024 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ. 

ಇರಾವಂತನ ಜನನ – ಚಿತ್ರಾಂಗದೆಯ ದರ್ಶನ Iravantana Janana - Chitrangadeya Darshana

 ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಉಲೂಪಿಯು ತನ್ನ ಪ್ರಾರ್ಥನೆಯನ್ನು ಮುಂದುವರಿಸಿ ಕೇಳಿದಳು: "ದೀನರನ್ನೂ ಅನಾಥರನ್ನೂ ನೀನು ಪ್ರತಿದಿನವೂ ರಕ್ಷಿಸುವೆಯಲ್ಲವೇ? ನಾನು ನಿನಗೆ ಶರಣಾಗಿದ್ದೇನೆ. ಖಿನ್ನಳಾಗಿ ಗೋಳಿಡುತ್ತಿದ್ದೇನೆ. ನಿನ್ನಲ್ಲಿ ಬೇಡಿಕೊಳ್ಳುತ್ತಿದ್ದೇನೆ. ನಿನ್ನಲ್ಲಿ ನಾನು ಅನುರಕ್ತಳಾಗಿದ್ದೇನೆ. ಆದುದರಿಂದ ನನಗೆ ಪ್ರಿಯವಾದುದನ್ನು ನೀನು ಮಾಡು. ನನಗೆ ಆತ್ಮ-ದಾನವನ್ನಿತ್ತು ನನ್ನ ಅಪೇಕ್ಷೆಯನ್ನು ಪೂರೈಸು" ಎಂದಳು.

ಉಲೂಪಿಯ ಪ್ರಾರ್ಥನೆಯನ್ನು ಅರ್ಜುನನು ನೆರವೇರಿಸಿದನು; ಧರ್ಮವನ್ನು ಮುಂದಿಟ್ಟುಕೊಂಡೇ ಆತನು ಸಮ್ಮತಿಯಿತ್ತದ್ದು. ಆ ರಾತ್ರಿ ಆ ನಾಗ-ಭವನದಲ್ಲೇ ಉಳಿದುಕೊಂಡನು. ಸೂರ್ಯೋದಯವಾಗುತ್ತಲೇ ಎದ್ದು, ಆ ನಾಗ-ಭವನದಿಂದ ಹೊರಬಂದು ಉಲೂಪಿಯೊಂದಿಗೆ ಮತ್ತೆ ಆ ಗಂಗಾ-ದ್ವಾರಕ್ಕೇ ಬಂದನು. ಆತನನ್ನು ಅಲ್ಲಿ ಬಿಟ್ಟು, ಉಲೂಪಿಯೂ ಸ್ವ-ಭವನವನ್ನು ಸೇರಿಕೊಂಡಳು.

ಹೊರಡುವಾಗ ಅವಳೊಂದು ವರವನ್ನೂ ಕೊಟ್ಟಳು: "ಜಲದಲ್ಲಿ ನೀನು ಸದಾ ಅಜೇಯನಾಗಿರುವೆ; ಸರ್ವ-ಜಲಚರಗಳೂ ನಿನ್ನ ವಶದಲ್ಲಿರುವಂತಾಗುವುವು. ಇದರಲ್ಲಿ ಸಂಶಯವಿಲ್ಲ!" – ಎಂದು.

ಆ ಬಳಿಕ ಅರ್ಜುನನಿಗೆ ಉಲೂಪಿಯಲ್ಲಿ ಇರಾವಂತನೆಂಬ ಪುತ್ರನು ಜನಿಸಿದನು. ಆತನೂ ಮಹಾ-ಬಲ-ಪರಾಕ್ರಮಗಳಿಂದ ಕೂಡಿದವನಾದನು.

ಆ ಬಳಿಕ ಅರ್ಜುನನು ಹಿಮಾಲಯಕ್ಕೆ ಹೋದನು. ಅಲ್ಲಿ ಅಗಸ್ತ್ಯ-ವಟ, ವಸಿಷ್ಠ-ಪರ್ವತ, ಹಾಗೂ ಭೃಗು-ತುಂಗಗಳೆಂಬ ಜಾಗಗಳಿಗೆ ಹೋಗಿ, ಅಲ್ಲಿ ಸ್ನಾನಾದಿಗಳನ್ನು ಮಾಡಿಕೊಂಡನು. ಅನೇಕ-ಗೋ-ಸಹಸ್ರಗಳನ್ನು ಹಾಗೂ ಆಶ್ರಮ-ವಾಸ-ಸ್ಥಾನಗಳನ್ನು ದ್ವಿಜರಿಗೆ ದಾನ ಮಾಡಿದನು. ಹಿರಣ್ಯಬಿಂದು-ತೀರ್ಥದಲ್ಲಿ ಸ್ನಾನಮಾಡಿ ಅನೇಕ ಪುಣ್ಯ-ಸ್ಥಾನಗಳನ್ನು ದರ್ಶಿಸಿದನು.

ಹಿಮಾಲಯದಿಂದ ಇಳಿದು, ಅಲ್ಲಿಂದ ಪೂರ್ವ-ದಿಕ್ಕಿನತ್ತ ಸಾಗಿದನು. ಒಂದಾದಮೇಲೊಂದು ತೀರ್ಥಗಳ ದರ್ಶನಮಾಡಿದನು. ಉತ್ಪಲಿನೀ-ನದಿ, ನಂದಾ, ಅಪರನಂದಾ, ಯಶಸ್ವಿನೀ, ಕೌಶಿಕೀ, ಮಹಾನದೀ, ಗಯಾ-ತೀರ್ಥ ಹಾಗೂ ಗಂಗೆ - ಈ ಎಲ್ಲ ತೀರ್ಥಗಳನ್ನೂ, ಅಲ್ಲಿಯ ಆಶ್ರಮಗಳನ್ನೂ ಸಂದರ್ಶಿಸುತ್ತಾ, ತನ್ನನ್ನೇ ಪಾವನಗೊಳಿಸಿಕೊಳ್ಳುತ್ತಾ, ಕೊನೆಗೆ ಗೋ-ದಾನವನ್ನು ಬ್ರಾಹ್ಮಣರಿಗೆ ಮಾಡಿದನು.

ಆಮೇಲೆ ಅಂಗ-ವಂಗ-ಕಳಿಂಗಗಳಲ್ಲಿ ಯಾವ ತೀರ್ಥಗಳುಂಟೋ ಮಂದಿರಗಳುಂಟೋ ಅವೆಲ್ಲಕ್ಕೂ ಹೋದನು.

ಆ ತೀರ್ಥಗಳಿಗೆ ಹೋಗಿ, ವಿಧ್ಯುಕ್ತವಾದ ಕ್ರಮದಲ್ಲಿ  ಧನ-ದಾನವನ್ನು ಮಾಡಿದನು. ಕಲಿಂಗ-ರಾಷ್ಟ್ರದ ದ್ವಾರಕ್ಕೆ ಆತನು ಬಂದಾಗ, ಆತನ ಜೊತೆಯಲ್ಲಿ ಬಂದಿದ್ದ ದ್ವಿಜರು ಅಲ್ಲಿಂದ ಹಿಂದಿರುಗಿದರು. ಅವರ ಅನುಮತಿಯನ್ನು ಪಡೆದು, ಕೆಲವೇ ಮಂದಿಯೊಂದಿಗೆ ಅರ್ಜುನನು ಸಾಗರದೆಡೆಗೆ ಹೋದನು. ಕಲಿಂಗ-ದೇಶ, ಅಲ್ಲಿಯ ಭವ್ಯವಾದ ಹರ್ಮ್ಯಗಳು, ಎಂದರೆ ಭಾರೀ ಭವನಗಳು, ಇವನ್ನೆಲ್ಲಾ ನೋಡಿಕೊಂಡು ನಡೆದನು. ತಪಸ್ವಿಗಳಿಂದಾಗಿ ಕಳೆಕಟಿದ್ದ ಮಹೇಂದ್ರ-ಪರ್ವತವನ್ನು ಕಂಡ ಬಳಿಕ, ಸಮುದ್ರತೀರ-ಮಾರ್ಗದಲ್ಲಿ ಮೆಲ್ಲನೆ ಹೋಗಿ ಮಣಿಪೂರವನ್ನು ಸೇರಿದನು.

ಅಲ್ಲಿದ್ದ ತೀರ್ಥಗಳಿಗೆ ಹಾಗೂ, ಅಲ್ಲಿಯ ಪುಣ್ಯ-ಮಂದಿರಗಳಿಗೂ ಹೋಗಿ, ಬಳಿಕ ಅಲ್ಲಿಯ ರಾಜನನ್ನು ಸಂದರ್ಶಿಸಿದನು. ಆ ರಾಜನ ಹೆಸರು ಚಿತ್ರವಾಹನ, ಆತನ ಮಗಳು ಚಿತ್ರಾಂಗದೆ. ಸ್ವೇಚ್ಛೆಯಾಗಿ ವಿಹರಿಸುತ್ತಿದ್ದ ಆ ಸುಂದರಾಗಿಯನ್ನು ಕಂಡ ಅರ್ಜುನನು ಅವಳನ್ನು ಇಷ್ಟಪಟ್ಟನು.

ರಾಜನ ಬಳಿ ಹೋಗಿ ತನ್ನ ಅಭಿಪ್ರಾಯವನ್ನು ಹೇಳಿಕೊಂಡನು: ಮಹಾ-ಮನಸ್ಕನಾದ ಕ್ಷತ್ರಿಯನಾದ ನನಗೆ ಇವಳನ್ನು ಪ್ರದಾನಮಾಡು - ಎಂಬುದಾಗಿ. ಅದಕ್ಕೆ ರಾಜನು ಅವನನ್ನು ನೀನು ಯಾರ ಮಗನೆಂದು ಕೇಳಿದನು. ತಾನು ಪಾಂಡವ, ಕುಂತೀಪುತ್ರ, ಹೆಸರು ಧನಂಜಯ – ಎಂದು ಅರ್ಜುನನು ಹೇಳಿದನು. ಆಗ ಆ ರಾಜನು ಸಮಾಧಾನಕರವಾದ ಮಾತುಗಳನ್ನುಅರ್ಜುನನಿಗೆ ಹೇಳಿದನು.

ಸೂಚನೆ :18/8/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Sunday, August 18, 2024

ಯಕ್ಷ ಪ್ರಶ್ನೆ 103 (Yaksha prashne 103)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ –  102 ಮತ್ಸರ ಎಂದರೆ ಯಾವುದು ?

ಉತ್ತರ - ಹೃದಯಸಂತಾಪ 

ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ ಎಂಬುದಾಗಿ ನಮ್ಮ ಒಳಗೆ ಆರು ಶತ್ರುಗಳಿವೆ. ಇವುಗಳಲ್ಲಿ ಕೊನೆಯ ಶತ್ರು ಮಾತ್ಸರ್ಯ. ಮತ್ಸರದಿಂದ ಉಟ್ಟಾಗುವ ಭಾವವೇ ಮಾತ್ಸರ್ಯ. ಬೇರೆಯವರ ಉಳ್ಳೆಯದನ್ನು, ಏಳಿಗೆಯನ್ನು ಒಪ್ಪಿಕೊಳ್ಳದ ಅಥವಾ ಬೇರೆಯವರ ಸಂಪತ್ತನ್ನು ನೋಡಿ ಸಹಿಸದಿರುವ ಸ್ವಭಾವಕ್ಕೆ ಮಾತ್ಸರ್ಯ ಎನ್ನುತ್ತಾರೆ. ಬೇರೆಯವರ ಹಿರಿತನವನ್ನು ಮಹಿಮೆಯನ್ನು ಅಥವಾ ಗರಿಮೆಯನ್ನು ನೋಡಿದಾಗ ತನ್ನ ಮೇಲೆ ಕೀಳರಿಮೆ ಬರುತ್ತದೆ. ಅವನ ಎದುರು ತಾನು ಮತ್ತು ತನ್ನದು ನ ಗಣ್ಯ ಎಂದು ಅನ್ನಿಸುತ್ತದೆ. ಆಗ ಅವನಲ್ಲಿ ತನ್ನ ಬಗ್ಗೆ, ತನ್ನ ತನತದ ತನ್ನಲಿರುವ ವಸ್ತು ವಿಚಾರ ವಿದ್ಯೆ ಮೊದಲಾದವುಗಳ ಬಗ್ಗೆ ಧಿಕ್ಕಾರವಿರಲಿ ಎಂಬ ಭಾವ ಬರುತ್ತದೆ. ಇದನ್ನೇ ವಸ್ತುತಃ ಮಾತ್ಸರ್ಯ ಎನ್ನಬಹುದು. ಇದನ್ನು ಅಂತಃಶತ್ರು ಎನ್ನಲಾಗಿದೆ. ಬಾಹ್ಯಶತ್ರುವಾದರೋ ನಮ್ಮ ಬಾಹ್ಯಜೀವನಕ್ಕೆ ತೊಡಕನ್ನು ಉಂಟುಮಾಡಬಹುದು. ಅದರಿಂದ ನಮ್ಮ ಶರೀರಕ್ಕೆ ತನ್ಮೂಲಕ ಮಾನಸಿಕವಾದ ಕ್ಲೇಶಕ್ಕೂ ಕಾರಣವಾಗಬಹುದು. ಇದರಿಂದ ಉಂಟಾಗುವ ಮಾನಸಿಕ ಕ್ಲೇಶವು ನಿಧಾನವಾಗಿ ಆಗಬಹುದು. ಆದರೆ ಅಂತರಂಗದ ಶತ್ರುವು ನೇರವಾಗಿ ಮನಸ್ಸಿನ ಮೇಲೆಯೇ ಪರಿಣಾಮವನ್ನು ನೀಡುತ್ತದೆ. ಅದು ಹೇಗೆ? ಎಂಬುದನ್ನು ಇಲ್ಲಿ ಯಕ್ಷಪ್ರಶ್ನೆಯಾಗಿ ಕೇಳಲಾಗಿದೆ. ಅದಕ್ಕೆ ಉತ್ತರ 'ಹೃದಯ ಸಂತಾಪ' ಎಂಬುದಾಗಿ. 

ಹೃದಯ ಸಂತಾಪವೆಂದರೆ ಹೃದಯವನ್ನು ಸುಡುವುದು. ಇದನ್ನೇ ಹೊಟ್ಟೆಕಿಚ್ಚು, ಅಸೂಯೆ ಮೊದಲಾದ ಪದಗಳಿಂದ ಕರೆಯುವುದೂ ಉಂಟು. ಗುಣ ಇರುವವರಲ್ಲಿ ದೋಷವನ್ನು ಹುಡುಕುವುದು, ಬೇರೆಯವರಲ್ಲಿ ಇಲ್ಲ ಸಲ್ಲದ ಆರೋಪವನ್ನು ಮಾಡುವುದು ಇಂತಹ ನಡೆಯನ್ನೇ ಮಾತ್ಸರ್ಯ ಎನ್ನುಬಹುದು.  ಸುಡುವಧರ್ಮದಿಂದ ಕೂಡಿದ್ದರಿಂದ ಅದು ಅಗ್ನಿಗೆ ಸಮಾನ. ಈ ಮಾತ್ಸರ್ಯ ಎಂಬ ಅಂತಃಶತ್ರುವು ನಮ್ಮ ಹೃದಯವನ್ನು ಸುಡುತ್ತದೆ. ಅಂದರೆ ಹೃದಯ ಎಂದು ಕರೆಸಿಕೊಳ್ಳುವ ಶರೀರದ ಭಾಗವನ್ನು ಭಸ್ಮವಾಗಿಸುತ್ತದೆ ಎಂಬ ಅರ್ಥವಲ್ಲ.  ಯಾವ ಶರೀರದ ಭಾಗದಿಂದ ನಮ್ಮ ಸುಖ ಅಥವಾ ದುಃಖದ ಸಂವೇದನೆಯನ್ನು ಭಾವಿಸುತ್ತೇವೋ ಅಥವಾ ಅನುಭವಿಸುತ್ತೇವೋ ಅದಕ್ಕೆ 'ಹೃದಯ' ಎಂದು ಕರೆಯುತ್ತೇವೆ. ಸುಖದುಃಖಗಳ ಸಂವೇದನೆಯು ಮನಸ್ಸಿನ ಕಾರಣದಿಂದ ಆಗುತ್ತದೆ ಎಂದು ಅನೇಕ ಶಾಸ್ತ್ರಗಳು ಸಾರುತ್ತವೆ. ಆ ಮನಸ್ಸು ಇರುವ ಸ್ಥಾನ ಎಂದು ಗುರುತಿಸುವ ಜಾಗವನ್ನೇ 'ಹೃದಿ ಅಯಂ ಹೃದಯಂ' ಎಂಬ ವಿವರಣೆಯನ್ನು ಕೊಡುವುದರ ಮೂಲಕ ಹೃದಯಶಬ್ದವನ್ನು ಅರ್ಥಮಾಡಿಕೊಳ್ಳುವುದು ಉಂಟು. ಈ ಮಾತ್ಸರ್ಯವೆಂಬ ಗುಣವು ನಮ್ಮ ಮನಸ್ಸನ್ನು ಹಾಳು ಮಾಡುತ್ತದೆ. ಅದು ಹಾಳಾದರೆ ಅದರ ಪರಿಣಾಮದಿಂದ ನಮ್ಮ ಸಂಪೂರ್ಣ ಜೀವನವೇ ಹಾಳಾದಂತೆ. ಹಾಗಾಗಿ ನಾವು ನಮ್ಮ ಮನಸ್ಸನ್ನು ಹಾಳುಮಾಡಿಕೊಳ್ಳದಂತೆ ನೋಡಿಕೊಳ್ಳಬೇಕಾದರೆ ಮಾತ್ಸರ್ಯವನ್ನು ಬಿಡಬೇಕು. ನಮ್ಮ ಜೀವನವನ್ನು ನಿರ್ಮಿಸಿಕೊಳ್ಳುವ ಮನಸ್ಸೇ ಹಾಳಾದರೆ ಜೀವನವೇ ಹಾಳಾದಂತೆ. ಹಾಗಾಗಿ ಅತ್ಯಂತ ಹೇಯವಾದದ್ದರಿಂದ ದೂರವಿರಬೇಕು.   

ಸೂಚನೆ :18/8/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ - 27 ಈ ವಿಚಿತ್ರ-ಕಮಲವರಳಲಿ - ಎನ್ನ ಮನದಲಿ! (Krishnakarnamrta -27 I Vichitra-kamalavaralali - Enna Manadali!)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಮನಸ್ಸೇ ಸರಸ್ಸು - ಎಂಬ ಧ್ವನಿತಾರ್ಥ ಈ ಶ್ಲೋಕದಲ್ಲಿದೆ. ಸರಸ್ಸೆಂದರೆ ಸರೋವರದಂತೆಯೇ: ವರ ಎಂದರೆ ಶ್ರೇಷ್ಠ; ಶ್ರೇಷ್ಠವಾದ ಸರಸ್ಸನ್ನೇ ಸರೋವರ ಎನ್ನುವುದು. ಕೊಳಗಳಲ್ಲಿ ಕಮಲವು ಅರಳುವುದಲ್ಲವೇ? ಹಾಗೆಯೇ ನನ್ನ ಮನಸ್ಸಿನಲ್ಲಿ ಒಂದು ಕಮಲವು ಅರಳಲಿ - ಎಂದು ಕವಿ ಲೀಲಾಶುಕನು ಹಂಬಲಿಸುತ್ತಾನೆ. ಮನಸ್ಸಿನಲ್ಲಿ ಅರಳುವ ಕಮಲ ಯಾವುದು? ವಿಭುವಿನ - ಎಂದರೆ ನಮ್ಮ ಕೃಷ್ಣನ - ಮುಖವೆಂಬ ಕಮಲ. ಅಲ್ಲಿಗೆ, ಕೃಷ್ಣನ ಮುಖ-ಕಮಲ ಅರಳಲಿ, ನನ್ನ ಮನಸ್ಸಿನಲ್ಲಿ - ಎಂಬ ಅಭಿಪ್ರಾಯ ಇಲ್ಲಿದೆ.

ಏನು ವಿಶೇಷ ಈ ಕಮಲದಲ್ಲಿ? ಕಮಲವೆಂದರೆ ಮಕರಂದವಿರುವುದಲ್ಲವೇ? ಹಾಗೆ ಇದರಲ್ಲೂ ಮಕರಂದವೇನಾದರೂ ಉಂಟೇ? - ಎಂದು ಕೇಳಬಹುದು. ಇದೆ, ಮತ್ತು ಬೇರೆ ವಿಶೇಷವೂ ಇದೆ!

ಈ ಮುಖವೆಂಬ ಪಂಕಜದಲ್ಲಿ ವಿಶಿಷ್ಟವಾದ ಮಕರಂದವಿದೆ. ಯಾವುದದು? ಮುರಳೀ-ನಿನಾದವೇ ಆ ಮಕರಂದ. ಮಕರಂದವೆಂಬುದು ಪುಷ್ಪ-ರಸ. ಜೇನಿನಂತಿರುವ ಅದನ್ನು ನಾಲಿಗೆಯು ಆಸ್ವಾದಿಸುವುದು - ಎಂದು ತಾನೆ ನಾವು ಸಾಧಾರಣವಾಗಿ ನಿರೀಕ್ಷಿಸುವುದು?

ಇದೋ ನಮ್ಮ ಕೃತಿಯ ಹೆಸರೇ ಕೃಷ್ಣ-ಕರ್ಣಾಮೃತವಲ್ಲವೇ? ಕಿವಿಗಳಿಗೆ ಅಮೃತವಾದದ್ದು ಅದು. ಹಾಗೆಯೇ, "ಕಿವಿಯೆಂಬ ಬಾಯಿ"ಯಿಂದ ಆಸ್ವಾದಿಸುವ ಮಕರಂದವಿದು, ಈ ಮುರಲೀ-ನಿನಾದವೆಂಬುದು! ಆ ಮಕರಂದವೇ ತುಂಬಿತುಳುಕಿದೆ, ಈ ಪಂಕಜದಲ್ಲಿ. ಎಂದೇ "ಮಕರಂದ-ನಿರ್ಭರ"ವೆಂದಿರುವುದು.

ಮತ್ತೊಂದು ಬಗೆಯಲ್ಲೂ ಈ ಪುಷ್ಪವು ವಿಶಿಷ್ಟವೇ ಸರಿ! ಹೇಗೆ? ಒಂದು ಹೂವಿನೂಳಗೆ ಮತ್ತೊಂದು ಹೂವಿರಲು ಸಾಧ್ಯವೇ? ಲೋಕದಲ್ಲಂತೂ ಕಮಲದೊಳಗಣ ಕಮಲವೆಂಬುದು ಕಂಡಿಲ್ಲವಲ್ಲವೇ? ಆದರೆ ಆ ಅದ್ಭುತ ಇಲ್ಲಿದೆ! ಒಂದು ಕಮಲದೊಳಗೆ ಒಂದಲ್ಲ, ಎರಡು ಕಮಲಗಳಿವೆ, ಇಲ್ಲಿ! ಓ, ಹಾಗಿದ್ದರೆ ಪರಮಾದ್ಭುತವೇ ಆಯಿತಲ್ಲಾ, ಹೇಗದು?

ಕೃಷ್ಣನ ಮುಖವೆಂಬುದೊಂದು ಕಮಲ, ಅದರಲ್ಲಿ ಆತನ ಎರಡು ಕಣ್ಣುಗಳೆಂಬ ಎರಡು ಕಮಲಗಳಿವೆ!

ನಾವೆಲ್ಲಾ ಅರಳುವ ಕಮಲವನ್ನು ಇಷ್ಟಪಡುತ್ತೇವೆ. ಕಮಲದ ಮೊಗ್ಗಾಗಿದ್ದರೆ ಅರಳಲು ಕಾಯಬೇಕಾಗುತ್ತದೆ - ಅದರ ಸೌಂದರ್ಯ, ಸೌಗಂಧ್ಯ, ಹಾಗೂ (ಅದರ ಮಕರಂದದಲ್ಲಿ ದಕ್ಕುವ) ಮಾಧುರ್ಯ - ಇವುಗಳಿಗಾಗಿ. ಆದರೆ ಮತ್ತೊಂದದ್ಭುತವನ್ನು ನೋಡಿ. ಈ ಎರಡು ಕಮಲಗಳು ಮೊಗ್ಗಿನಂತಾಗುತ್ತಿವೆ! ಮೊಗ್ಗು ಅರಳುವುದನ್ನು ಲೋಕದಲ್ಲಿ ಕಂಡಿದ್ದೇವೆ. ಆದರೆ ಕಮಲವು ಮೊಗ್ಗಾಗುವುದು - ಎಂದರೆ ಹೀಗೆ ಹಿಮ್ಮುಖವಾಗುವುದು - ಎಲ್ಲಾದರೂ ಉಂಟೇ? ಇಲ್ಲಿ ಉಂಟು.

ಹೇಗೆ? ಕೃಷ್ಣನು ವೇಣುಗಾನ ಮಾಡುತ್ತಿರುವನಲ್ಲವೇ? ಗಾನವನ್ನು ಕೇಳುವವರಿಗೆ ತೋಷವಿರುತ್ತದಷ್ಟೆ? ಗಾನಮಾಡುವವರಿಗೂ ಸಂತೋಷವಿರುತ್ತದೆ; ಇದ್ದೇ ಇರುತ್ತದೆ. ಅದರಲ್ಲೂ ಲೋಕೋತ್ತರವಾದ ಗಾನವು ಲೋಕೋತ್ತರವಾದ ಸಂತೋಷವನ್ನೇ ಶ್ರೋತೃವಿಗೂ ಗಾತೃವಿಗೂ ಉಂಟುಮಾಡುವುದೇ ಸರಿ.

ಯಾವುದನ್ನೇ ಚಪ್ಪರಿಸುವಾಗಲೂ ನಮ್ಮ ಕಣ್ಣುಒಂದಿಷ್ಟು, ಅಥವಾ ಪೂರ್ಣವಾಗಿ, ಮುಚ್ಚುವುದು. ಒಳ್ಳೆಯ ಗಾನವು ಕೇಳಿಬರುತ್ತಿದ್ದರೆ ಕೇಳುಗನಿಗೆ ಮೋದವಾದಾಗ ಕಣ್ಣುಮುಚ್ಚುವುದು. ಗಾನವನ್ನು ಹೊಮ್ಮಿಸುವವನಿಗಂತೂ ಇನ್ನೂ ಮಿಗಿಲಾದ ಪ್ರಮೋದವೇ. ಹೀಗಿರಲು ವೇಣುಗಾನ ಮಾಡುತ್ತಿರುವ ಕೃಷ್ಣನಿಗೆ ಸಂತೋಷವಾಗದೇ?

ಒಳನಾದದೊಂದಿಗಿನ ಆಸ್ವಾದನೆಯಿಂದಾಗಿ ಆತನ ಅಂತಸ್ಸಂತೋಷ ಮಹತ್ತಾದುದು. ಅಂತರಾನಂದದಿಂದಾಗಿ ಆತನ ಕಣ್ಣುಗಳು ಮುಚ್ಚಿಕೊಂಡು ಅಂತರ್ಮುಖವಾಗುತ್ತಿವೆ. ಬಿಟ್ಟಾಗ ಅರಳಿದಂತೆ ಕಾಣುವ ಕಣ್-ಕಮಲಗಳು, ಈಗ ಮುಚ್ಚಿದಾಗ ಮೊಗ್ಗುಗಳಂತೆ ಆಗಿವೆ. ಹೀಗಾಗಿ, ಮುಖವೆಂಬ ಕಮಲದಲ್ಲಿರುವ ಎರಡು ಕಣ್ಣುಗಳೆಂಬ ಕಮಲಗಳು, ಹಾಗೂ, ಅವೂ ಹಿಮ್ಮುಖವಾಗಿ ಮೊಗ್ಗಿನಂತಾಗುತ್ತಿರುವುದು - ಇವೆಲ್ಲಾ ಆಶ್ಚರ್ಯದ ಮೇಲಿನ ಆಶ್ಚರ್ಯಗಳೇ ಸರಿ. ಗಾನವನ್ನು ಆಸ್ವಾದಿಸುತ್ತಾ, ಮನಸ್ಸು ಒಳಮುಖವಾಗಿ ವಿಶೇಷವಾಗಿ ಹರಿಯುವುದು ಮುನಿಗಳಲ್ಲಿ. ಅದಕ್ಕೇ ಅವರನ್ನು ಬಣ್ಣಿಸುವಾಗಲೂ "ಮುನೀನ್ ಮುಕುಲಯನ್" ಎಂದೇ ಕವಿ ಹೇಳಿರುವುದು. ಯಾವ ಮುನಿಗೆ ಕಡಿಮೆ ನಮ್ಮ ಕೃಷ್ಣ?

ಮತ್ತೂ ಒಂದು ವಿಶೇಷವಿದೆ, ಈ ಕಮಲದಲ್ಲಿ. ಕಮಲವೆಂದಾದರೂ ಕನ್ನಡಿಯಂತೆ ಕಂಡೀತೇ? ಆದರಿದೋ ಈ ಕಮಲವು ಹಾಗಿದೆ! ಹೇಗೆ? ಕೃಷ್ಣನ ಕಪೋಲಗಳು, ಎಂದರೆ ಕೆನ್ನೆಗಳು, ಮುಕುರದಂತಿವೆ. ಮುಕುರವೆಂದರೆ ಕನ್ನಡಿ. ಕನ್ನಡಿಯ (ಹಾಗಿರುವ) ಕೆನ್ನೆಗಳು! ದರ್ಪಣವು ದುಂಡಾಗಿರುವುದುಂಟಲ್ಲವೇ? ಅಂತೆಯೇ ಈತನ ಗಂಡಸ್ಥಲ, ಎಂದರೆ ಕೆನ್ನೆಗಳೂ, ಮಂಡಲಾಕಾರವಾಗಿವೆ. ಅವುಗಳಲ್ಲಿಯ ಮೃದುತ್ವವೂ ಎದ್ದು ಕಾಣುವಂತಿದೆ.

ಮಂಡಲವೆಂದೊಡನೆ ಕವಿ-ಲೋಕದಲ್ಲಿ ಮೊದಲು ಗೋಚರಿಸುವುದು ಚಂದ್ರ-ಮಂಡಲವೇ ಸರಿ. ಚಂದ್ರನನ್ನು ಕನ್ನಡಿಯೆಂಬಂತೆ ಚಿತ್ರಿಸಿರುವ ಕವಿಗಳು ಒಬ್ಬಿಬ್ಬರಲ್ಲ. ಹೀಗಾಗಿ (ಕೃಷ್ಣನ ಮುಖವೆಂಬ) ಈ ಕಮಲವು ಕನ್ನಡಿಯ ಹಾಗೆ ಕೂಡ ತೋರುತ್ತಿದೆಯೆನ್ನಬಹುದು!

ಅಂತೂ ವಿಶಿಷ್ಟವಾದ ಕಮಲವೇ ಇದು! ತನ್ನೊಳಗೇ ಎರಡು ಪುಟ್ಟಕಮಲಗಳನ್ನು ಹೊಂದಿರುವ ಕಮಲ. ಅವೂ ಮೊಗ್ಗಾಗುತ್ತಿರುವ ಕಮಲಗಳು! ಕರ್ಣಾಸ್ವಾದ್ಯವಾದ ಮಕರಂದವುಳ್ಳ ಕಮಲ!

ಹೀಗಾಗಿ ಇಲ್ಲಿ ಮೂರು ವೈಲಕ್ಷಣ್ಯಗಳು: ವೇಣುನಾದವೆಂಬ ಮಕರಂದ; ಮುಕುಳಾಕಾರವನ್ನು ಹೊಂದುತ್ತಿರುವ ಎರಡು ಕಣ್ಣುಗಳೆಂಬ ಕಮಲಗಳು; ಕನ್ನಡಿಯನ್ನು ಹೋಲುವ ಮೃದು-ಕಪೋಲಗಳು - ಇವನ್ನು ಹೊಂದಿರುವ ಈ ಕೃಷ್ಣ-ಮುಖ-ಕಮಲವು ನನ್ನ ಮನಸ್ಸಿನಲ್ಲಿ - ಅರ್ಥಾತ್ ನನ್ನ ಮನಸ್ಸೆಂಬ ಸರಸ್ಸಿನಲ್ಲಿ – ಅರಳಲಿ, ಪ್ರಕಾಶಿಸಲಿ, ವಿಜೃಂಭಿಸಲಿ - ಎಂಬ ಆಸ್ವಾದನೆಯ ಲಾಲಸೆಯಿಂದ ಕವಿ ಕೇಳಿಕೊಳ್ಳುತ್ತಿದ್ದಾನೆ:

ಮುಕುಲಾಯಮಾನ-ನಯನಾಂಬುಜಂ ವಿಭೋಃ

   ಮುರಲೀ-ನಿನಾದ-ಮಕರಂದ-ನಿರ್ಭರಮ್ |

ಮುಕುರಾಯಮಾಣ-ಮೃದು-ಗಂಡ-ಮಂಡಲಂ

   ಮುಖ-ಪಂಕಜಂ ಮನಸಿ ಮೇ ವಿಜೃಂಭತಾಂ!! ||


ಶ್ಲೋಕದ ಪ್ರತಿಪಾದದಲ್ಲೂ "ಮು" ಎಂದೇ ಆರಂಭ. ಮಕಾರವು ಒಟ್ಟು ಎಂಟು ಕಡೆ ಬಂದಿದೆ. ಗಂಡ-ಮಂಡಲವೆಂಬಲ್ಲಿ ಅನುಪ್ರಾಸವು ಸಹಜವಾಗಿ ಬಂದಿದೆ. ಮುಕುಲಾಯಮಾನ-ಮುಕುರಾಯಮಾಣ-ಗಳ ಸಾಮ್ಯವೂ ಹೃದ್ಯವೇ. ಅರಳಲಿ ಎಂಬುದನ್ನು ವಿಜೃಂಭಿಸಲಿ, ಎಂದಿರುವುದು; ಮನಸ್ಸು ಸರಸ್ಸೆಂಬಂತೆ ಸ್ಫುರಿಸುವಂತೆ ಮಾಡಿರುವುದು – ಇವೆಲ್ಲವೂ ಪದ್ಯದ ಸೊಬಗನ್ನು ಹೆಚ್ಚಿಸಿವೆ


ಅಲಂಕಾರ

ಕೃಷ್ಣಕರ್ಣಾಮೃತವನ್ನು ಬರೆದವನು ಸ್ವತಃ ಕವಿಯಾದ್ದರಿಂದ ಕೃತಿಯ ಬಹುತೇಕ ಶ್ಲೋಕಗಳಲ್ಲಿ ನಾನಾ-ಅಲಂಕಾರಗಳಿರುವುವು. ಸಂಸ್ಕೃತದಲ್ಲಿ ಅಲಂಕಾರಗಳ ಬಗೆಗಳು ನೂರಾರಿವೆ, ಮತ್ತು  ಪ್ರತಿ-ಶ್ಲೋಕದಲ್ಲೂ ಅವನ್ನು ತೋರಿಸಿ ವಿವರಿಸಹೊರಟರೆ ಲೇಖನಗಳು ಸುದೀರ್ಘವಾಗುವುವು – ಎಂಬೆಲ್ಲ ಕಾರಣಗಳಿಗಾಗಿ, ಇದೊಂದು ಶ್ಲೋಕದಲ್ಲಿಯ ಅಲಂಕಾರಗಳ ಬಗ್ಗೆ ಒಂದೆರಡು ಸಾಧಾರಣವಾದ ಮಾತುಗಳನ್ನು ಹೇಳಬಹುದು.

ಮೇಲೆ ತೋರಿಸಿದ ಅನುಪ್ರಾಸವು ಶಬ್ದಾಲಂಕಾರ. ಹೋಲಿಕೆ ಮುಂತಾದವು ಅರ್ಥಾಲಂಕಾರಗಳು. ಮುಖ-ಪಂಕಜವೆಂದರೆ ಮುಖವೆಂಬ ಕಮಲ. ಇದು ರೂಪಕಾಲಂಕಾರ. ಏಕೆಂದರೆ ಇಲ್ಲಿ ಉಪಮಾನ-ಉಪಮೇಯಗಳಿಗೆ ಅಭೇದವನ್ನು ಮಾಡಿದೆ.

ಏನು ಹಾಗೆಂದರೆ? ಉಪಮಾನವೆಂದರೆ ಯಾವುದಕ್ಕೆ ಹೋಲಿಸಿದೆಯೋ ಅದು. ಇಲ್ಲಿ ಕಮಲವನ್ನು ಹೋಲಿಕೆಯಾಗಿ ಕೊಟ್ಟಿದೆ, ಆದುದರಿಂದ ಕಮಲವು ಉಪಮಾನ. ಯಾವುದಕ್ಕೆ ಉಪಮಾನವನ್ನು ಕೊಟ್ಟಿದೆಯೋ ಅದು ಉಪಮೇಯ. ಇಲ್ಲಿ ಮುಖವು ಉಪಮೇಯ.

"ಉಪಮೇಯವೇ ಉಪಮಾನ" ಎಂಬ ಪರಿಯಲ್ಲಿ ವಾಕ್ಯರಚನೆಯಿದ್ದರೆ ಅದು ರೂಪಕ. "ಮುಖವೇ ಕಮಲ" – ಎಂಬಲ್ಲಿಯಂತೆ. ಇದೇ ಅದು – ಎನ್ನುವ ಪರಿಯನ್ನು ಅಭೇದವೆನ್ನುತ್ತಾರೆ. (ಉಪಮಾನ-ಉಪಮೇಯಗಳಿಗೆ ಭೇದವು ಉಪಮಾಲಂಕಾರದಲ್ಲಿ ತೋರುತ್ತದೆ.)

"ಕಣ್ಣುಗಳೇ ಕಮಲಗಳು" – ಎನ್ನುವಾಗಲೂ ರೂಪಕವೇ. "ಮುರಲೀ-ನಿನಾದವೇ ಮಕರಂದ" ಎನ್ನುವಾಗಲೂ ರೂಪಕವೇ. ಹೀಗೆ ಇಲ್ಲಿ ಮೂರು ರೂಪಕಗಳಿವೆ.

"ಕಣ್ಣುಗಳೆರಡು ಮೊಗ್ಗಿನಂತಾಗುತ್ತಿವೆ" – ಎನ್ನುವಾಗಲೂ, "ಕೆನ್ನೆಗಳೆರಡು ಕನ್ನಡಿಯಂತಾಗುತ್ತಿವೆ" – ಎನ್ನುವಾಗಲೂ ಉಪಮಾ-ಭಾವವೇ ಇದೆ. ಮತ್ತು "ನಯನಾಂಬುಜಗಳನ್ನುಳ್ಳ ಮುಖ-ಪಂಕಜ" – ಎನ್ನುವಾಗ ರೂಪಕವನ್ನೊಳಗೊಂಡ ರೂಪಕವಾಗಿದೆ: ಹೀಗೆ ರೂಪಕ-ಗರ್ಭ-ರೂಪಕವಿದು.

ಇಷ್ಟೊಂದು ಅಲಂಕಾರಗಳಿಂದ ಕೂಡಿದೆ ಈ ಶ್ಲೋಕ!

ಸೂಚನೆ : 17/08/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ

Tuesday, August 13, 2024

ವ್ಯಾಸ ವೀಕ್ಷಿತ 101 ನಾಗಕನ್ನಿಕೆಯು ಮುಂದಿಟ್ಟ ಕೋರಿಕೆ (Vyasa Vikshita 101 Nagakannikeyu Munditta Korike)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಹೀಗೆ ನಿಬಿಡವಾಗಿದ್ದ ಆ ಎಡೆಯಲ್ಲಿ ಸ್ಥಾನಕ್ಕಾಗಿ ಅರ್ಜುನನು ಗಂಗೆಗಿಳಿದನು. ಸ್ನಾನ ಮಾಡಿ, ಪಿತಾಮಹತರ್ಪಣವನ್ನು ಮಾಡಿದನು. ಅಗ್ನಿಕಾರ್ಯವನ್ನು ಮಾಡಬೇಕೆಂಬ ಉದ್ದೇಶದಿಂದ ನೀರಿನಿಂದ ಇನ್ನೇನು ಹೊರಬರಬೇಕೆಂದಿರುವಷ್ಟರಲ್ಲಿ, ಹೀಗಾಯಿತು: ನಾಗರಾಜಕನ್ಯೆಯಾದ ಉಲೂಪಿಯು ಈತನಲ್ಲಿ ಅನುರಕ್ತಳಾದಳು. ನೀರಿನೊಳಗಿನಿಂದಲೇ ಆತನನ್ನು ಅಪಕರ್ಷಿಸಿದಳು, ಎಂದರೆ ಸೆಳೆದುಕೊಂಡಳು. ಅವಳು ಆತನನ್ನು ಒಯ್ದದ್ದು ತನ್ನ ನಾಗರಾಜಭವನಕ್ಕೆ.


ಪರಮಸುಂದರವಾದ ಭವನವದು. ಅಲ್ಲಿ ಸಮಾಧಾನವಾದ ಮನಸ್ಸಿನಿಂದ ಅರ್ಜುನನು ಕಂಡದ್ದು ದೀಪ್ತವಾದ ಅಗ್ನಿಯನ್ನು. ಭಯರಹಿತನಾದ ಅರ್ಜುನನು ಅಲ್ಲಿ ಅಗ್ನಿಕಾರ್ಯವನ್ನು ಮಾಡಿದನು. ಇದರಿಂದಾಗಿ ಅಗ್ನಿದೇವನಿಗೆ ಸಂತೋಷವಾಯಿತು.


ಕಾರ್ಯವು ಮುಗಿದ ಬಳಿಕ ನಗುತ್ತಲೆಂಬಂತೆ ಆ ನಾಗಕನ್ಯೆಯನ್ನು ಕೇಳಿದನು: "ಇದೇನು ಸಾಹಸವನ್ನು ಮಾಡಿದೆ ನೀನು? ಯಾವುದೀ ಸುಂದರವಾದ ದೇಶ? ಯಾರ ಮಗಳು ನೀನು?"


ಉಲೂಪಿಯು ಹೇಳಿದಳು: "ಐರಾವತನಾಗನ ಕುಲದಲ್ಲಿ ಕೌರವ್ಯ ಎಂಬ ನಾಗನು ಜನಿಸಿದನು. ನಾನು ಆತನ ಮಗಳು, ಉಲೂಪಿ ಎಂಬ ನಾಗಕನ್ಯೆ. ನರಶ್ರೇಷ್ಠನೇ, ಸಮುದ್ರವನ್ನು ಸೇರುವ ನದಿಯೊಳಗೆ ಸ್ನಾನಕ್ಕಾಗಿ ನೀನು ಇಳಿದೆಯಲ್ಲವೇ? ಆಗ ನಿನ್ನನ್ನು ಕಂಡೆ. ಒಡನೆಯೇ ನಾನು ಕಾಮಪೀಡಿತಳಾದೆ. ಹೀಗೆ ನಿನ್ನ ಸಲುವಾಗಿ ಮನ್ಮಥತಾಪದಿಂದ ಬಳಲಿರುವ ನನ್ನನ್ನು ಸಂತೋಷಪಡಿಸು. ನಿನ್ನನ್ನು ಬಿಟ್ಟು ಮತ್ತಾರನ್ನೂ ನಾನು ಬಯಸಿದವಳಲ್ಲ."


ಅದಕ್ಕೆ ಅರ್ಜುನನು ಹೇಳಿದನು: ಹನ್ನೆರಡು ವರ್ಷಗಳ ಕಾಲ ಬ್ರಹ್ಮಚರ್ಯವನ್ನು ನಡೆಸಬೇಕೆಂಬುದಾಗಿ ನನಗೆ ಅಣ್ಣ ಧರ್ಮರಾಜನಿಂದ ಅಪ್ಪಣೆಯಾಗಿದೆ. ಜಲಚಾರಿಣಿ, ನಿನಗೂ ಪ್ರಿಯವಾದುದನ್ನು ಮಾಡಲು ನಾನು ಬಯಸುವೆ. ಈ ಪರ್ಯಂತ ನಾನು ಎಂದೂ ಸುಳ್ಳು ಹೇಳಿದವನಲ್ಲ. ಹಾಗಿರಲು, ನಾನು ಹೇಳುವುದು ಸುಳ್ಳಾಗಬಾರದು. ಆದರೆ ನಿನಗೂ ಸಂತೋಷವಾಗಬೇಕು. ನನ್ನ ಧರ್ಮಕ್ಕೂ ಭಂಗಬರಬಾರದು. ಅಂತಹ ಉಪಾಯವನ್ನೇನಾದರೊಂದನ್ನು ನೀನೇ ಮಾಡು, ನಾಗಕನ್ನಿಕೆ - ಎಂದು.


ಅದಕ್ಕೆ ಉಲೂಪಿಯು, "ಪಾಂಡುಪುತ್ರನೇ, ಯಾವ ಕಾರಣಕ್ಕಾಗಿ ನೀನು ಭೂಸಂಚಾರವನ್ನು ಕೈಗೊಂಡಿರುವೆ, ಹಾಗೂ ಯಾವ ನಿಮಿತ್ತವಾಗಿ ನಿನ್ನ ಹಿರಿಯನಾದ ಯುಧಿಷ್ಠಿರನು ನಿನಗೆ ಈ ಬ್ರಹ್ಮಚರ್ಯವನ್ನು ವಿಧಿಸಿರುವನು? – ಎಂಬುದನ್ನು ನಾ ಬಲ್ಲೆ. ದ್ರೌಪದಿಯೊಂದಿಗೆ ಯಾರೊಬ್ಬರಾದರೂ ಇರುವ ಸಮಯದಲ್ಲಿ, ಉಳಿದ ನಾಲ್ವರು ಪಾಂಡವರಲ್ಲಿ ಯಾರೊಬ್ಬರಾದರೂ ಮೋಹಕ್ಕೆ ವಶರಾಗಿ ಅಲ್ಲಿ ಪ್ರವೇಶಮಾಡಿದಲ್ಲಿ, ಹಾಗೆ ಪ್ರವೇಶಿಸಿದವನು ಹನ್ನೆರಡು ವರ್ಷಕಾಲ ಬ್ರಹ್ಮಚರ್ಯವನ್ನು ಪಾಲಿಸಬೇಕು - ಎಂದಲ್ಲವೆ, ತಮ್ಮಲ್ಲಿಯ ಒಪ್ಪಂದವಿರುವುದು? ಪದೀನಿಮಿತ್ತವಾಗಿ ತಾನೆ ಒಬ್ಬರಿಗಾಗಿ ಮತ್ತೊಬ್ಬರು ಪ್ರವಾಸಮಾಡಬೇಕೆಂದಿರುವುದು?


ಹೀಗಿರುವಲ್ಲಿ ಧರ್ಮವದೆಂತು ದೂಷಿತವಾಗುವುದು? ಆರ್ತರಾದವರನ್ನು ರಕ್ಷಿಸಿವುದು ಕರ್ತವ್ಯವಲ್ಲವೇ, ವಿಶಾಲನೇತ್ರನಾದ ಅರ್ಜುನ? ನನ್ನ ರಕ್ಷಣೆಯನ್ನು ಮಾಡಿದ ಮಾತ್ರಕ್ಕೆ ನಿನ್ನ ಧರ್ಮಕ್ಕೆ ಲೋಪವು ಬರದಲ್ಲವೇ?


ಮತ್ತು ಒಂದು ವೇಳೆ ಇದರಿಂದಾಗಿ ಲೋಪವೆಂಬುದು ಕಿಂಚಿತ್ತಾಗಿ ಆಗಿಯೇ ಬಿಡುವುದೆಂದಾದರೂ, ಒಬ್ಬರಿಗೆ ಪ್ರಾಣರಕ್ಷಣೆ ಮಾಡುವುದೆಂಬುದರಿಂದ ದೊಡ್ಡದಾದ ಧರ್ಮವನ್ನೇ ಸಾಧಿಸಿದಂತಾಗುತ್ತದಲ್ಲವೇ? ನಾನು ನಿನ್ನ ಭಕ್ತೆ. ನನ್ನನ್ನು ಸ್ವೀಕರಿಸು. ಈ ಬಗೆಯ ಆರ್ತ-ರಕ್ಷಣವೆಂಬುದು ಸಜ್ಜನರಿಗೆ ಸಮ್ಮತವೇ ಸರಿ.


ಮತ್ತು ಒಂದು ವೇಳೆ ನೀನು ಹೀಗೆ ಮಾಡೆಯಾದರೆ ನಾನು ಸತ್ತೆನೆಂಬುದಾಗಿಯೇ ತಿಳಿದುಕೋ. ಮಹಾಬಾಹುವೇ, ಪ್ರಾಣದಾನವನ್ನು ಮಾಡಿ ಒಂದು ಉತ್ತಮೋತ್ತಮವಾದ ಧರ್ಮವನ್ನು ನೀನು ಆಚರಿಸುವವನಾಗು. ನಾನು ನಿನಗೆ ಶರಣಾಗಿದ್ದೇನೆ – ಎಂದಳು.


ಸೂಚನೆ :11
/8/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಯಕ್ಷ ಪ್ರಶ್ನೆ 102 (Yaksha prashne 102)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

ಪ್ರಶ್ನೆ –  101 ಸಂಸಾರಕ್ಕೆ ಕಾರಣವಾದುದು ಯಾವುದು  ?

ಉತ್ತರ - ಕಾಮ 

ಇಲ್ಲಿ ಯಕ್ಷನು ಕೇಳುವ ಪ್ರಶ್ನೆ ತುಂಬಾ ಸರಳವಾಗಿದೆ. 'ಸಂಸಾರಕ್ಕೆ ಕಾರಣವಾದದ್ದು ಯಾವುದು? ಎಂದು. ಅದಕ್ಕೆ ಧರ್ಮರಾಜನು 'ಕಾಮ' ಎಂಬುದಾಗಿ ಉತ್ತರಿಸುತ್ತಾನೆ. ಕಾಮ ಎಂದರೆ ಬಯಕೆ, ಆಸೆ, ಆಕಾಂಕ್ಷೆ ಎಂದರ್ಥ. ಅಂದರೆ ಬಯಕೆಯು ಸಂಸಾರಕ್ಕೆ ಕಾರಣವಾಗುತ್ತದೆ ಎಂದರ್ಥ. ಇಲ್ಲಿ ನಾವು ವಿಚಾರಿಸಬೇಕಾದ ವಿಷಯ ಸಂಸಾರ ಎಂದರೇನು? ಮತ್ತು ಸಂಸಾರದ ಉಗಮಕ್ಕೆ ಬಯಕೆ ಹೇಗೆ ಕಾರಣವಾಗುತ್ತದೆ? ಎಂಬುದಾಗಿ.

'ಸಂಸಾರ' ಈ ಶಬ್ದವು ಸಂಸ್ಕೃತ ಭಾಷೆಯ ಶಬ್ದವಾಗಿದೆ. ಸಮ್ ಎಂಬ ಉಪಸರ್ಗ. ಸೃ-ಗತೌ ಎಂಬ ಧಾತು. ಇವೆರಡರ ಸಂಯೋಗದಿಂದ ಸಂಸಾರ ಎಂಬ ಶಬ್ದವು ಉತ್ಪನ್ನವಾಗಿದೆ. ಉತ್ತಮವಾದ ಗತಿ ಎಂದರ್ಥ. ಯಾವುದು ಗತಿಶೀಲವಾದದ್ದೋ, ಚಲನಶೀಲವಾದದ್ದೋ ಅದಕ್ಕೆ 'ಸಂಸಾರ' ಎಂದು ಅರ್ಥ. ವಸ್ತುತಃ ಪ್ರತಿಯೊಂದು ವಸ್ತುವು ಜಡವೇ. ಆದರೆ ಅಲ್ಲಿ ಚಲನೆ ಬರಬೇಕಾದರೆ ಅಲ್ಲಿ ಚೈತನ್ಯ ಶಕ್ತಿಯನ್ನು ತುಂಬುವ ವ್ಯಕ್ತಿಬೇಕಾಗುತ್ತದೆ. ಹಾಗೆ ಇದ್ದರೆ ಮಾತ್ರ ಆ ವಸ್ತು ಚಲಿಸಲು ಸಾಧ್ಯ. ಒಂದು ರಥ ಚಲಿಸಬೇಕಾಗುತ್ತದೆ ಎಂದಾದರೆ ಅಲ್ಲಿ ರಥಿಕನಿದ್ದರೆ ಮಾತ್ರ ಸಾಧ್ಯ. ಹಾಗಾಗಿ ಯಾವುದು ಚಲನಶೀಲವಾದದ್ದೋ ಅದಕ್ಕೆ ಸಂಸಾರ ಎಂಬುದಾಗಿ ಕರೆಯುತ್ತಾರೆ. ಇಲ್ಲಿ ಮೂಲತಃ ಚಲನಶೀಲವಾದ ವಿಷಯ ಯಾವುದು? ಅದು ಎಲ್ಲಿಂದ ಆರಂಭವಾಯಿತು? ಎಂಬ ಪ್ರಶ್ನೆ ಬರುತ್ತದೆ. ಸಂಸಾರ ಎಂದರೆ ಸೃಷ್ಟಿ. ಸೃಷ್ಟಿಯ ಆರಂಭವನ್ನೇ ಸಂಸಾರ ಎಂದು ಕರೆಯುತ್ತಾರೆ. ಈ ಸೃಷ್ಟಿಗೆ ಕಾರಣವಾದುದೇ ಕಾಮ ಅಥವಾ ಬಯಕೆ. 

ಈ ಸೃಷ್ಟಿಮೂಲನಾದ ಪರಬ್ರಹ್ಮವನ್ನು ಬಿಟ್ಟು ಉಳಿದೆಲ್ಲವೂ ಗಮನಶೀಲವಾದದ್ದು. ಇದನ್ನೇ ಚೈತನ್ಯ ಎಂದು ಕರೆಯಲಾಗುತ್ತದೆ. ಮೊಟ್ಟಮೊದಲು ಭಗವಂತ ಮಾತ್ರ ಇದ್ದ. ಅವನಿಗೆ ಯಾವುದೋ ಒಂದು ಕಾಲದಲ್ಲಿ ಒಬ್ಬನೇ ಒಬ್ಬ ಇದ್ದು ಬೇಜಾರು ಆಯಿತಂತೆ. 'ಏಕಾಕೀ ನ ರಮತೇ' ಎಂಬ ಉಪನಿಷತ್ತು ಇದೇ ಮತನ್ನು ಹೇಳುತ್ತದೆ. ಆಗ ಅವನು ತಾನು ಕೂಡ ಎರಡಾಗಬೇಕು ಎಂದು ಇಚ್ಛಿಸಿದನಂತೆ "ಸೋ ಅಕಾಮಯತ ಬಹುಸ್ಯಾಂ ಪ್ರಜಾಯೇಯ ಇತಿ" ಅಂದರೆ ನಾನು ಎರಡಾಗಬೇಕು; ಎರಡಿಂದ ಬಹುವಾಗಬೇಕು ಎಂಬುದಾಗಿ. ಆಗ ಅವನು ತನ್ನನ್ನು ತಾನು ಎರಡಾಗಿ ಹೋಳಾಗಿಸಿಕೊಂಡ. ಆ ಎರಡರಲ್ಲಿ ಒಂದಕ್ಕೆ ಪ್ರಕೃತಿ ಎಂದು ಹೆಸರು; ಇನ್ನೊಂದಕ್ಕೆ ಪುರುಷ ಎಂದು ಹೆಸರು. ಅವೆರಡು ಸೇರಿಕೊಂಡು ಮುಂದೆ 'ಸಂತತಿ' ಎಂಬುದಾಗಿ ವಿಸ್ತಾರವಾಯಿತು. ಇದನ್ನೇ 'ಸಂಸಾರ' ಎಂದು ಕರೆಯುತ್ತಾರೆ. ಹಾಗೇ ಅಲ್ಲಿಂದ ಮುಂದುವರೆದ ಈ ಸಂಸಾರವು ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಎಲ್ಲಿಯವರೆಗೆ ಈ ಸಂಸಾರವು ನಡೆಯುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಹಾಗಾಗಿ ಈ ಸಂಸಾರ ಎಂಬುದು ನಿತ್ಯ ಎಂದು ಶಾಸ್ತ್ರಗಳು ಸಾರುತ್ತವೆ. ಮೊಟ್ಟಮೊದಲು ನಿಶ್ಚೇಷ್ಟಿತವಾದದ್ದು, ಚಲನಶೀಲವಾದುದಕ್ಕೆ ಕಾರಣ ಅಲ್ಲಿನ ಬಯಕೆಯಷ್ಟೇ. ಇದೇ ಸೂತ್ರವೇ ಇಂದಿನ ಕುಟುಂಬ ಅಥವಾ ಸಂತಾನಕ್ಕೆ ಕಾರಣ ಎಂಬುದು ಇಲ್ಲಿನ ತಾತ್ಪರ್ಯ. ಆದ್ದರಿಂದ ಕಾಮವೇ ಸಂಸಾರಕ್ಕೆ ಕಾರಣ ಎಂಬುದು ಇಲ್ಲಿನ ಉತ್ತರ. 

ಸೂಚನೆ :11/8/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.