Sunday, November 23, 2025

ಕೃಷ್ಣಕರ್ಣಾಮೃತ 83 ರಾಜಸೂಯ ಮಾಡುವ ಬಗ್ಗೆ ಶ್ರೀಕೃಷ್ಣನ ಅಭಿಪ್ರಾಯ (Krishakarnamrta 83)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)




ರಾಜಸೂಯಯಾಗವನ್ನು ಮಾಡಲು ಸಂಕಲ್ಪಿಸಿದ್ದ ಯುಧಿಷ್ಠಿರನು ಶ್ರೀಕೃಷ್ಣನ ಅಭಿಪ್ರಾಯ-ಮಾರ್ಗ-ದರ್ಶನಗಳನ್ನು ಪಡೆಯಬೇಕೆಂದೆಣಿಸಿ, ಅವನಲ್ಲಿಗೆ ದೂತನೊಬ್ಬನನ್ನು ಕಳುಹಿಸಿದ್ದನು. 

ದೂತನ ಮಾತನ್ನು ಕೇಳಿದ ಯಾದವವೀರನಾದ ಶ್ರೀಕೃಷ್ಣನಾದರೂ ತನ್ನ ದರ್ಶನವನ್ನು ಅಪೇಕ್ಷಿಸುತ್ತಿದ್ದ ಯುಧಿಷ್ಠಿರನನ್ನು ಕಾಣಲೆಂದು, ದೂತನಾದ ಆ ಇಂದ್ರಸೇನನೊಂದಿಗೆ ಯುಧಿಷ್ಠಿರನಿದ್ದ ಇಂದ್ರಪ್ರಸ್ಥಕ್ಕೇ ಸಾಗಿದನು.

ಆಗಮಿಸಿದ ಶ್ರೀಕೃಷ್ಣನನ್ನು ಯುಧಿಷ್ಠಿರನೂ ಭೀಮನೂ ಅರ್ಚಿಸಿದರು. ಆಮೇಲೆ ಕೃಷ್ಣನು ಕುಂತಿಯನ್ನು ಹೋಗಿಕಂಡನು. ಹಾಗೆಯೇ ಅರ್ಜುನ ಮತ್ತು ನಕುಲ-ಸಹದೇವರೂ ಕೃಷ್ಣನನ್ನು ಗುರುವೆಂಬಂತೆ ಸತ್ಕರಿಸಿದರು. 

ಕೃಷ್ಣನು ವಿಶ್ರಾಂತಿಯನ್ನು ತೆಗೆದುಕೊಂಡ ಬಳಿಕ ಧರ್ಮರಾಜನು ಆಗಮಿಸಿ, ತಾನು ಆತನನ್ನು ಬರಮಾಡಿಕೊಂಡುದರ ಉದ್ದೇಶವನ್ನು ಹೀಗೆಂದು ಹೇಳಿದನು.

"ಕೃಷ್ಣಾ, ನನಗೆ ರಾಜಸೂಯಯಾಗವನ್ನು ಮಾಡುವ ಮನಸ್ಸಾಗಿದೆ. ಆದರೆ ಇದು ಕೇವಲ ಅಪೇಕ್ಷೆಯಿಂದಲೇ ನೆರವೇರಿಬಿಡುವುದಲ್ಲ, ಯಾವ ಬಗೆಯಿಂದ ಮಾಡಿದರೆ ಅದು ಪೂರ್ಣವಾಗುವುದು - ಎಂಬುದನ್ನು ನೀನು ತಾನೆ ಸರ್ವಥಾ ಬಲ್ಲೆ?

ಯಾವನು ಎಲ್ಲವನ್ನೂ ಮಾಡಬಲ್ಲನೋ, ಯಾವನು ಎಲ್ಲೆಡೆ ಪೂಜಿತನಾಗುವನೋ, ಯಾವನು ಎಲ್ಲರಿಗೂ ಪ್ರಭುವಾಗಬಲ್ಲನೋ, ಅಂತಹವನು ತಾನೆ ರಾಜಸೂಯವನ್ನು ಸಂಪಾದಿಸಲು ಸಮರ್ಥನೆನಿಸುವುದು? ನನ್ನ ಮಿತ್ರ ರೆಲ್ಲರೂ ಬಂದು ರಾಜಸೂಯವನ್ನು ನೀನು ಮಾಡಬೇಕೆಂದು ನನಗೆ ಹೇಳುತ್ತಿದ್ದಾರೆ. ಆದರೆ ಇದರ ಅಂತಿಮ ನಿಶ್ಚಯವೆಂಬುದು ನಿನ್ನ ಮಾತಿನಿಂದಲೇ ಆಗತಕ್ಕದ್ದು.

ಸ್ನೇಹಿತರಲ್ಲಿ ಕೆಲವರು ಕೇವಲ ಸೌಹಾರ್ದಭಾವದಿಂದಷ್ಟೇ ನನ್ನ ದೋಷಗಳನ್ನು ಹೇಳುವುದಿಲ್ಲ; ಮತ್ತೆ ಕೆಲವರು ಸ್ವಾರ್ಥ-ಬುದ್ಧಿಯಿಂದಾಗಿ ಪ್ರಿಯವಾದುದಷ್ಟನ್ನೇ ಹೇಳುವರು; ಮತ್ತೆ ಕೆಲವರು ತಮಗೆ ಯಾವುದು ಪ್ರಿಯವೋ ಅದಷ್ಟನ್ನೇ ನನಗೆ ಪ್ರಿಯವೂ ಹಿತವೂ ಹೌದೆಂದು ಹೇಳಿಬಿಡುವರು. ಹೀಗೆ ಈ ನಾನಾಪರಿಗಳಲ್ಲಿ ಜನಗಳ ಮಾತುಗಳು ತೋರುತ್ತವೆ.

ಆದರೆ ನೀನು ಹಾಗಲ್ಲ. ನಾನೀಗ ಹೇಳಿದ ಕಾರಣಗಳನ್ನೆಲ್ಲಾ ಬದಿಗಿಟ್ಟು, ಕಾಮಕ್ರೋಧಗಳನ್ನು ತೊಡೆದು, ಏನನ್ನು ಮಾಡಿದರೆ ನನಗೆ ಬಹಳವೇ ಒಳ್ಳೆಯದಾಗುವುದೋ ಅದನ್ನು ಹೇಳಬಲ್ಲೆ. ಆದ್ದರಿಂದ ಅದನ್ನು ಹೇಳುವ ಕೃಪೆ ಮಾಡು" ಎಂದನು.

ಅದಕ್ಕೆ ಶ್ರೀಕೃಷ್ಣನು ಹೇಳಿದನು: 

"ಮಹಾರಾಜನೇ, ಸರ್ವಗುಣಗಳಿಂದಲೂ ಈ ರಾಜಸೂಯವನ್ನು ನೆರವೇರಿಸಲು ನೀನು ಅರ್ಹನಾಗಿದ್ದೀಯೆ. ಎಲ್ಲವನ್ನೂ ನೀನು ಬಲ್ಲವನೇ ಆಗಿದ್ದೀಯೆ ಕೂಡ. ಆದರೂ ನೀನು ಕೇಳಿದೆಯೆಂದು ಒಂದಿಷ್ಟು ತಿಳಿಸುತ್ತೇನೆ. 

ಜಾಮದಗ್ನ್ಯರಾಮನು - ಎಂದರೆ ಜಮದಗ್ನಿ-ಮುನಿಯ ಪುತ್ರನಾದ ಪರಶುರಾಮನು ಕ್ಷತ್ರಿಯ-ಸಂಹಾರವನ್ನು ಮಾಡಿದನಷ್ಟೆ. ಅದೆಲ್ಲಾ ನಡೆದು ಹೋಗಿ ಈಗಿರುವ ಕ್ಷತ್ರಿಯರೆಂದರೆ ಅಳಿದುಳಿದ ಕೆಲವರಷ್ಟೆ. ಆಗಿದ್ದ ಕ್ಷತ್ರಿಯರಷ್ಟು ಉತ್ತಮರೂ ಅಲ್ಲ, ಇವರುಗಳು. 

ರಾಜನೇ, ಇಲ್ಲೊಂದು ಕುಲ-ಸಂಕಲ್ಪವಿದೆ. ಹಾಗೆಂದರೆ ಕ್ಷತ್ರಿಯ-ಕುಲದವರೆಲ್ಲ ತಮ್ಮಲ್ಲೇ ಮಾಡಿಕೊಂಡಿರುವ ಒಂದು ಸಾಮೂಹಿಕ-ನಿಯಮವುಂಟು. ಯಾವನು ಸರ್ವ-ಕ್ಷತ್ರಿಯರನ್ನೂ ಮೀರಿಸುವನೋ ಆತನೇ ಸಮ್ರಾಟ್ ಎನಿಸುವುದು. ಅದು ನಿನಗೂ ತಿಳಿದಿರುವುದೇ. 

ಈಗಿರುವ ರಾಜರುಗಳೆಲ್ಲ ತಾವು ಐಲ (ಎಂದರೆ ಪುರೂರವ)-ವಂಶ ಹಾಗೂ ಇಕ್ಷ್ವಾಕು-ವಂಶಗಳಿಗೆ ಸೇರಿದವರೆಂದೇ ಹೇಳಿಕೊಳ್ಳುತ್ತಾರೆ. ಆ ತೆರನಾದ ನೂರು ಕುಲಗಳು ಈಗ ಉಳಿದಿವೆ. 

ಯಯಾತಿ ಹಾಗೂ ಭೋಜ - ಈ ಮಹಾರಾಜರ ಗುಣಗಾನವೇ ಎಲ್ಲೆಡೆ ನಡೆದಿದೆ. ಭೋಜವಂಶವು ನಾಲ್ಕೂದಿಕ್ಕುಗಳಲ್ಲೂ ಪಸರಿಸಿದೆ. ಆ ವಂಶವೇ ಧನಸಂಪನ್ನವಾಗಿರುವುದು. ಎಂದೇ ಇವರೆಲ್ಲರೂ ಆ ವಂಶವನ್ನೇ ಆಶ್ರಯಿಸಿದ್ದಾರೆ.

ಸೂಚನೆ : 23/11/2025 ರಂದು   ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.