ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ರಾಜಸೂಯಯಾಗವನ್ನು ಮಾಡುವುದರ ಬಗ್ಗೆ ಸಲಹೆಯನ್ನು ಕೇಳಲು ಶ್ರೀಕೃಷ್ಣನನ್ನು ಯುಧಿಷ್ಠಿರನು ಬರಮಾಡಿಕೊಂಡಿದ್ದನಷ್ಟೆ. ಆ ಬಗ್ಗೆ ಮಾರ್ಗದರ್ಶಕವಾದ ಮಾತುಗಳನ್ನು ಆಡುತ್ತಾ ಶ್ರೀಕೃಷ್ಣನು ಯಾರು ಇದಕ್ಕೆ ಸಹಕರಿಸುವವರು, ಯಾರಲ್ಲ – ಎಂಬುದನ್ನು ಸೂಚಿಸುತ್ತಿದ್ದಾನೆ:
"ಈಗಷ್ಟೆ ಜರಾಸಂಧನೆಂಬ ರಾಜನು ದರ್ಪದಿಂದ ಅನೇಕ ರಾಜರುಗಳ ತಲೆಯ ಮೇಲೆ ಕಾಲೂರಿದ್ದಾನೆ. ತನ್ನ ಓಜಸ್ಸಿನಿಂದ ಅವರೆಲ್ಲರನ್ನೂ ಆಕ್ರಮಿಸಿಕೊಂಡಿದ್ದಾನೆ. ತನ್ನ ರಾಜನೀತಿಯ ಯುಕ್ತಿಗಳಿಂದಾಗಿ ತಾನೇ ಸಮ್ರಾಟ್ ಆಗಿ ಕುಳಿತಿದ್ದಾನೆ.
ಆ ಜರಾಸಂಧನನ್ನೇ ಆಶ್ರಯಿಸಿರುವವನು ಪ್ರಧಾನಸೇನಾಪತಿಯದ ಶಿಶುಪಾಲನು. ಆತನಲ್ಲಿಗೆ ಶಿಷ್ಯನೆಂಬಂತೆ ಹೋಗಿ ಸೇರಿದ್ದಾನೆ. ಅಲ್ಲದೆ ಕರೂಷರಾಜನಾದ ದಂತವಕ್ತ್ರನೂ ಅಷ್ಟೆ. ಆತನು ಮಾಯಾಯುದ್ಧ ಮಾಡುವವ; ಜರಾಸಂಧನೊಂದಿಗೆ ಹಾಗೆಯೇ ವರ್ತಿಸುತ್ತಿದ್ದಾನೆ.. ಇನ್ನಿಬ್ಬರು ರಾಜರಿದ್ದಾರೆ ಹಂಸ ಮತ್ತು ಡಿಂಭಕ - ಎಂಬ ಹೆಸರಿನವರು. ಅವರೂ ಜರಾಸಂಧನನ್ನೇ ಆಶ್ರಯಿಸಿರುವವರೇ.
ಅಲ್ಲದೆ, ಭಗದತ್ತನೆಂಬ ವೃದ್ಧ ರಾಜನಿದ್ದಾನೆ. ನಿನ್ನ ತಂದೆಯ ಮಿತ್ರನವನು. ಅವನ ಸೈನ್ಯವು ಅಪರಿಮಿತವಾದದ್ದು. ಅವನು ಯವನರಿಗೆ ಒಡೆಯ. ಅಂತಹವನೂ ತನ್ನ ಮಾತಿನಲ್ಲೂ ಕ್ರಿಯೆಯಲ್ಲೂ ಜರಾಸಂಧನಿಗೆ ಮಣಿದಿರುವವನೇ. ನಿನ್ನ ತಂದೆಯ ವಿಷಯದಲ್ಲಿ ಭಕ್ತಿಯುಳ್ಳವನು; ಏಕೆಂದರೆ ಸ್ನೇಹಪಾಶದಿಂದ ಬದ್ಧನಾಗಿರುವನು: ನಿನ್ನ ವಿಷಯದಲ್ಲೂ ಅಷ್ಟೇ ಭಕ್ತಿ ಅವನಿಗೆ.
ಇನ್ನು ಪುರುಜಿತ್ತನು ನಿನ್ನ ವಿಷಯದಲ್ಲಿ ಸ್ನೇಹಾದರಗಳನ್ನುಳ್ಳವನೇ. ಪಶ್ಚಿಮದಿಂದ ದಕ್ಷಿಣದವರೆಗೆ ಆತನ ಆಳ್ವಿಕೆಯುಂಟು. ನಿನಗಂತೂ ಸೋದರಮಾವನೇ. ಕುಂತಿಭೋಜ ಕುಲಕ್ಕೇ ಆತನು ಭೂಷಣ, ಒಳ್ಳೆಯ ಶತ್ರುಸಂಹಾರಕ.
ಇನ್ನೊಬ್ಬ ರಾಜನಿದ್ದಾನೆ. ಪೌಂಡ್ರಕವಾಸುದೇವನೆಂದೇ ಆತನು ಪ್ರಸಿದ್ಧ. ಆತನು ಜರಾಸಂಧನ ಕಡೆಗೇ. ಹಿಂದೆಯೇ ಆತನನ್ನು ನಾನು ಕೊಲ್ಲಬಹುದಿತ್ತು, ಆದರೆ ಕೊಂದಿಲ್ಲ. ಚೇದಿ-ದೇಶದಲ್ಲಿ ಆತನು ಪುರುಷೋತ್ತಮನೆಂದೇ ಹೆಸರುವಾಸಿಯಾಗಿರುವನು. ತನ್ನನ್ನು ಪುರುಷೋತ್ತಮನೆಂದೇ ಭಾವಿಸಿಕೊಂಡಿದ್ದಾನೆ ಕೂಡ! ಎಂದೇ ನನ್ನ ಚಿಹ್ನವನ್ನು, ಎಂದರೆ ಶಂಖ-ಚಕ್ರಗಳನ್ನು, ಧರಿಸಿಕೊಂಡಿದ್ದಾನೆ! ವಂಗ-ಪುಂಡ್ರ-ಕಿರಾತಗಳೆಂಬ ದೇಶಗಳ ಒಡೆಯನವನು.
ಮತ್ತೊಬ್ಬ ರಾಜನೂ ಜರಾಸಂಧನ ಭಕ್ತನಾಗಿದ್ದಾನೆ. ಭೂಮಿಯ ಕಾಲುಭಾಗಕ್ಕೇ ಆತನೊಡೆಯ. ಇಂದ್ರನ ಮಿತ್ರನೂ ಹೌದು. ತನ್ನ ಅಸ್ತ್ರವಿದ್ಯಾಬಲದಿಂದ ಆತನು ಪಾಂಡ್ಯ-ಕ್ರಥ-ಕೈಶಿಕ-ರಾಜ್ಯಗಳನ್ನು ವಶಪಡಿಸಿಕೊಂಡಿದ್ದಾನೆ. ಆತನೇ ಭೀಷ್ಮಕ.
ಅವನ ಭ್ರಾತೃವೊಬ್ಬನಿದ್ದಾನೆ. ಹೆಸರು ಆಕೃತಿ. ಶೌರ್ಯದಲ್ಲಿ ಜಾಮದಗ್ನ್ಯನಿಗೆ, ಎಂದರೆ ಜಮದಗ್ನಿಪುತ್ರನಾದ ಪರಶುರಾಮನಿಗೆ, ಸಮನಾಗಿದ್ದಾನೆ. ಶತ್ರುಸಂಹಾರದಲ್ಲಿ ಸಮರ್ಥ. ಅವನೂ ಜರಾಸಂಧನ ಕಡೆಗೇ. ನಾವೇನೋ ಅವನಿಗೆ ಪ್ರಿಯವನ್ನಾಚರಿಸತಕ್ಕವರಾದರೂ, ನಮ್ರತೆಯಿಂದಲೇ ಇದ್ದರೂ, ಆತನೇನೂ ನಮಗೆ ಹಿತವಾಗಿಲ್ಲ. ಬದಲಾಗಿ, ನಮಗೆ ಅಪ್ರಿಯರಾದವರೊಡನೆಯೇ ಆತನು ಕೈಜೋಡಿಸುತ್ತಿದ್ದಾನೆ. ತನ್ನ ಕುಲವೆಂತಹುದು, ಬಲವೆಂತಹುದು - ಇವುಗಳನ್ನು ಅವನು ಸರಿಯಾಗಿ ತೂಗಿ ಅರಿತುಕೊಂಡಿಲ್ಲ. ಜರಾಸಂಧನದು ದೀಪ್ತ ಯಶಸ್ಸು, ಎಂದರೆ ಬೆಳಗುವ ಕೀರ್ತಿ - ಎಂಬತ್ತಲೇ ದೃಷ್ಟಿಯಿಟ್ಟು ಆತನನ್ನೇ ಆಶ್ರಯಿಸಿರುವನು.
ಇನ್ನು ಉದೀಚ್ಯರಾದ, ಎಂದರೆ ಉತ್ತರದಿಕ್ಕಿನವರಾದ, ಭೋಜರೂ, ಅವರಿಗೇ ಸೇರಿದ ಹದಿನೆಂಟು ಕುಲದವರೂ, ಜರಾಸಂಧನ ಭಯದಿಂದಲೇ ಪಶ್ಚಿಮದಿಕ್ಕಿಗೆ ಓಡಿಹೋಗಿದ್ದಾರೆ.
ಮತ್ತೆ ಕೆಲವರು ದಕ್ಷಿಣಕ್ಕೇ ಓಡಿಹೋಗಿದ್ದಾರೆ. ಅವರೆಂದರೆ ಶೂರಸೇನರು, ಕುಲಿಂದರು ಮುಂತಾದ ಹಲವರು. ತಮ್ಮ ಸೋದರರು ಅನುಚರರು - ಇವರೆಲ್ಲರೊಂದಿಗೆ ಓಡಿಹೋಗಿರುವವರು. ಹಾಗೆಯೇ ಉತ್ತರದಿಕ್ಕನ್ನು ಬಿಟ್ಟು ಓಡಿಹೋಗಿರುವವರೆಂದರೆ ದಕ್ಷಿಣಪಾಂಚಾಲರು, ಕೋಸಲರು ಮುಂತಾದವರು. ಜರಾಸಂಧನಿಂದಾಗಿ ಭಯದಿಂದ ಅವರೆಲ್ಲರೂ ತತ್ತರಿಸಿರುವವರೇ" – ಎಂಬುದಾಗಿ ಹೇಳಿದನು.
ಸೂಚನೆ : 30/11/2025 ರಂದು ಈ ಲೇಖನವು ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.