Sunday, November 9, 2025

ಬೆನ್ನು ಮೂಳೆಯಲ್ಲಿ ಆಯುಧವೇ? (Bennu Muleyalli Ayudhave?)

ಲೇಖಕರು: ಶ್ರೀ ಸುಬ್ರಹ್ಮಣ್ಯ ಸೋಮಯಾಜಿ

(ಪ್ರತಿಕ್ರಿಯಿಸಿರಿ lekhana@ayvm.in)





ದೇವಾಸುರ ಸಂಗ್ರಾಮ

ದೇವ-ದಾನವರ ಪರಸ್ಪರ ಘರ್ಷಣೆ ಆರಂಭವಾಯಿತು. ಇದು ಸೃಷ್ಟಿಯಲ್ಲಿ ಎಂದೆಂದಿಗೂ ಆಗುವಂತಹುದು. ಒಂದೆಡೆ ಸತ್ವ ಪ್ರಧಾನರಾದ ದೇವತೆಗಳು ಹುಟ್ಟಿಕೊಂಡರೆ ಇನ್ನೊಂದೆಡೆ ರಜಸ್ಸು ತಮಸ್ಸುಗಳೇ ಪ್ರಧಾನವಾದ ಅಸುರೀ ಶಕ್ತಿಗಳು ಹುಟ್ಟಿಕೊಳ್ಳುತ್ತವೆ. ಒಬ್ಬರಲ್ಲಿ ಆತ್ಮ ಗುಣ ಸಂಪತ್ತು ವಿಶೇಷವಾಗಿ ಬೆಳೆದರೆ ಇನ್ನೊಂದೆಡೆ ಅನಾತ್ಮ ಗುಣಗಳು ಬೆಳೆಯುತ್ತವೆ. ಇವೆರಡಕ್ಕೂ ಘರ್ಷಣೆ ನಿರಂತರವಾಗಿ ನಡೆಯುವಂತಹದೇ. ಇದು ಅಂತ:ಪ್ರಪಂಚದ ಸಮಾಚಾರವಾಗಿದೆ.

ದದೀಚಿ ಮಹರ್ಷಿಗಳ ಬೆನ್ನುಮೂಳೆಯಿಂದ ಶಸ್ತ್ರ

 ಹಾಗೆ ಭೀಕರವಾದ ವಿರೋಧ ಹುಟ್ಟಿಕೊಂಡಿತು. ಎಲ್ಲರೂ ಇಂದ್ರನನ್ನು ಶರಣು ಹೋದರು. ಇಂದ್ರನು ದಾನವರ ಸಮಸ್ತ ಬಲವನ್ನು ಬಡಿದು ಹಾಕಲು ಬೇಕಾದ ಶಸ್ತ್ರಗಳೆಲ್ಲವನ್ನೂ ಅವಲೋಕಿಸಿದಾಗ ಅವನಿಗೆ ಅವು ಯಾವುವೂ ಸಾಕಾಗದು ಎನ್ನಿಸಿತು. ಆಗ ಭಗವಂತನಾದ ಶ್ರೀಹರಿಯ ಸಲಹೆಯ ಮೇರೆಗೆ  ಇಂದ್ರನು ದೇವತೆಗಳನ್ನು ಕುರಿತು ಹೇಳಿದನು ಈಗ ಇರುವುದು ಒಂದೇ ಮಾರ್ಗ. ದದೀಚಿ ಮಹರ್ಷಿಗಳನ್ನು ಪ್ರಾರ್ಥನೆ ಮಾಡಿ ಅವರ ಮೂಳೆಗಳನ್ನು ತರುವುದಾದರೆ ಅದರಿಂದ ಮಾಡಿದ ಶಸ್ತ್ರದಿಂದ ಮಾತ್ರವೇ ಸಮಸ್ತ ದಾನವರನ್ನು ಬಡಿದು ಹಾಕಲು ಸಾಧ್ಯ. ನೀವೆಲ್ಲರೂ ಅನನ್ಯವಾದ ಭಕ್ತಿಯಿಂದ ದದೀಚಿ ಮಹರ್ಷಿಗಳನ್ನು ಪ್ರಾರ್ಥನೆ ಮಾಡಿ. ಲೋಕಕಲ್ಯಾಣಾರ್ಥವಾಗಿ ಅವರ ಮೂಳೆಗಳನ್ನು ಅವರು ಕೊಡುವುದಿಲ್ಲ ಎನ್ನರು. ದಾನವರ ನಾಶವಾದಲ್ಲಿ ಭೌತಿಕ ಪ್ರಪಂಚದಲ್ಲಿಯೂ ನೆಮ್ಮದಿ ನೆಲೆಸುತ್ತದೆ. ಈ ಕಾರಣದಿಂದ ಮಹರ್ಷಿಗಳನ್ನು ಪ್ರಾರ್ಥನೆ ಮಾಡುವುದು ಒಂದೇ ದಾರಿ ಎಂದನು. ಎಲ್ಲಾ ದೇವತೆಗಳು ದದೀಚಿ ಮಹರ್ಷಿಯನ್ನು ಪ್ರಾರ್ಥನೆ ಮಾಡಲು ಹೊರಟರು.

ದೇಹತ್ಯಾಗ ಮಾಡಿಸುವುದು ಸರಿಯೇ?

 ಮೂಳೆಗಳನ್ನು ಕೊಡುವುದೆಂದರೆ ತನ್ನ ದೇಹವನ್ನು ತ್ಯಾಗ ಮಾಡಿ ಕೊಡಬೇಕು. ಹೀಗೆ ಕೇಳುವುದು ಧರ್ಮ ಸಮ್ಮತವೇ ಎಂದರೆ, ಲೋಕಕಲ್ಯಾಣಕ್ಕಾಗಿ ಹೀಗೆ ಕೇಳುವುದೂ ಉಂಟು. ಮಹರ್ಷಿಗಳು ಸದಾ ಲೋಕ ಕಲ್ಯಾಣವನ್ನು ಚಿಂತಿಸುವುದರಿಂದ ಅವರು ಈ ಬೇಡಿಕೆಯನ್ನು ತಿರಸ್ಕರಿಸಲಿಲ್ಲ. ಮಹರ್ಷಿಗಳು ಮೃತ್ಯುವನ್ನು ಪ್ರಿಯನಾದ ಅತಿಥಿಯಂತೆ ಸ್ವಾಗತಿಸುತ್ತಾರೆ ಎಂಬ ಮಾತಿದೆ. ಎಂದೇ ಮಹರ್ಷಿಯು ತನ್ನ ಅಹೋಭಾಗ್ಯ ಇದು ಎಂದು ಸಂತೋಷವಾಗಿ ದೇಹವನ್ನು ತ್ಯಾಗ ಮಾಡಿ ಮೂಳೆಗಳನ್ನು ದಾನ ಮಾಡುತ್ತಾನೆ. ಇಂದ್ರನು ಮೂಳೆಗಳನ್ನು ಸ್ವೀಕರಿಸಿ ದಂಡ,ಚಕ್ರಾಯುಧವಜ್ರಾಯುಧ,ಇಂತಹ ಆಯುಧಗಳನ್ನು ಸಿದ್ಧಪಡಿಸಿಕೊಳ್ಳುತ್ತಾನೆ.

ದದೀಚಿ ಮಹರ್ಷಿಗಳ ಮಹಿಮೆ

 ದದೀಚಿ ಮಹರ್ಷಿಗಳ ಮೂಳೆಗಳನ್ನು ಇಂದ್ರನು ಏಕೆ ದಾನವರ ನಾಶಮಾಡಲು ಕೇಳಿದಆ ದದೀಚಿ ಮಹರ್ಷಿಗಳ ವೈಶಿಷ್ಟ್ಯ ವಾದರೂ ಏನು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಬ್ರಹ್ಮನ ಮಾನಸ ಪುತ್ರರಾದ ಭೃಗು ಮಹರ್ಷಿಗಳ ದೀರ್ಘಕಾಲದ ತಪಸ್ಸಿನ ಫಲವಾಗಿ ಹುಟ್ಟಿದ ಸುಪುತ್ರ  ದದೀಚಿ ಮಹರ್ಷಿ.  ದೇಹವನ್ನು ಶುದ್ಧವಾಗಿ ಇರಿಸಿಕೊಳ್ಳಲು ಬೇಕಾದ ಆಹಾರ ನಿಯಮಗಳನ್ನು ವಿಜ್ಞಾನಯುತವಾಗಿ ತಿಳಿದು ಅದರಂತೆ ಆಹಾರದ ಕ್ರಮಗಳನ್ನು ತನ್ನಲ್ಲಿ ಅಳವಡಿಸಿಕೊಂಡು ಶುದ್ಧವಾದ ಜೀವನವನ್ನು ನಡೆಸಿಕೊಂಡು ಬಂದ ಶ್ರೇಷ್ಠನಾದ ಮಹರ್ಷಿ. ಹಿತಮಿತವಾದ ಆಹಾರ ಕ್ರಮವನ್ನು ಇಟ್ಟುಕೊಂಡು ತನ್ನ ಜೀವನವನ್ನು ನಡೆಸುತ್ತಿದ್ದರೆ ಅದನ್ನೇ ತಪಸ್ಸು ಎಂದು ಕರೆಯುತ್ತಾರೆ.  ಯಾವ ಯಾವ ಬಗೆಯಲ್ಲಿ ಪ್ರಕೃತಿಯ ಶೋಧನೆ ಆಗಬೇಕಾಗಿದೆಯೋ ಅಂತಹ ತಪಸ್ಸನ್ನು ಇಟ್ಟುಕೊಂಡಂತಹ ಮಹರ್ಷಿ ದದೀಚಿ. ಅವನಲ್ಲಿ ತಪಸ್ಸಿನ ಬಲದ ಜೊತೆಗೆ ಸೃಷ್ಟಿಯಲ್ಲೇ ಬಂದಂತಹ ಧೀ -ಅಂದರೆ ಬುದ್ಧಿ ನೆಲೆಗೊಂಡಿತ್ತು. ಅದು ಕೇವಲ ಭೌತಿಕವಾದ ಧೀ -ಬುದ್ಧಿಯಲ್ಲ. ದಿವ್ಯವಾದ ಸೂಕ್ಷ್ಮಾತಿ ಸೂಕ್ಷ್ಮವಾದ ತತ್ವಗಳನ್ನು ಅರ್ಥಮಾಡಿಕೊಳ್ಳಲು ಬೇಕಾದಂತಹ ಬುದ್ಧಿ. ಶ್ರೀರಂಗ ಮಹಾಗುರುಗಳ ಈ ಮಾತು ಇಲ್ಲಿ ಸ್ಮರಣೀಯ-ಜೀವನದ ಸ್ಥಿತಿ ಏನು? ಎನ್ನುವುದನ್ನರಿತು ನೆಲೆಮುಟ್ಟಿ ನಡೆಸುವ ಜೀವನವೇ ಮಹರ್ಷಿಜೀವನ. ಅಲ್ಲಿ ಪೂರ್ಣ ಶಾಂತಿಯನ್ನು ಕಾಣಬಹುದು.ಅಂತಹ ಜೀವನ, ಬಂಧ ರಹಿತವಾದ ಜೀವನ" ಅಂತಹ ಮಹರ್ಷಿಗಳು ದದೀಚಿ. ಇಂದ್ರಿಯ ಸಂಯಮ ಇವನಿಗೆ ಜನ್ಮಜಾತವಾಗಿ ಹಾಗೂ ತಪಸ್ಸಿನ ಕಾರಣದಿಂದ ಚೆನ್ನಾಗಿ ಬೆಳೆದು ಬಂದಿದೆ. ಎಂದೇ ಅವರ ಮೂಳೆಯ ಸಾಮರ್ಥ್ಯ ಅಸಾಮಾನ್ಯ.

 

ತತ್ತ್ವ ದರ್ಶನದ ಕಥೆ

ಇದೊಂದು ತತ್ತ್ವದರ್ಶನ ಮಾಡಿಸುವ ಕಥೆ. ದೇವತೆಗಳಿಗೆ-ಅಸುರರಿಗೆ ನಿರಂತರ ಯುದ್ಧ ನಡೆಯುತ್ತಲೇ ಇರುತ್ತದೆ. ಬ್ರಹ್ಮಾನ್ದದಲ್ಲೂ ಈ ಯುದ್ಧವನ್ನು ನಾವು ನೋಡುತ್ತೇವೆ. ಹಾಗೆಯೇ ವಿಶೇಷವಾಗಿ ಈ ಪಿಂಡಾಂಡದಲ್ಲೂ ಇದು ತಪ್ಪಿದ್ದಲ್ಲ. ಒಳ್ಳೆಯದಕ್ಕೆ ಕೆಟ್ಟದ್ದಕ್ಕೆ ಯುದ್ಧ. ಆರೋಗ್ಯದ-ಅನಾರೋಗ್ಯದ ಕ್ರಿಮಿಗಳಿಗೆ ಯುದ್ಧ. ಇಂದ್ರಿಯಗಳ ರಾಜ ಇಂದ್ರ. ದೇವತಾ ಶಕ್ತಿಗಳೇ ಇಂದ್ರಿಯಗಳು. ಅವನು ಆಸುರೀ ಶಕ್ತಿಯನ್ನು ಮೆಟ್ಟುವ ಉಪಾಯ ಮಾಡಬೇಕು. ಅದಕ್ಕೆ ಶಸ್ತ್ರವೆಂದರೆ ನಮ್ಮ ಬೆನ್ನು ಮೂಳೆಯ ಮಧ್ಯಭಾಗದಲ್ಲಿನ ಜ್ಞಾನರಜ್ಜು ಎಂದು ಕರೆಸಿಕೊಳ್ಳುವ ಸುಷುಮ್ನಾ ನಾಡಿಯಲ್ಲಿ ನಮ್ಮ ಮನಸ್ಸು ಸಂಚರಿಸಬೇಕು. ಆಗಲೇ ಆಸುರೀ ಶಕ್ತಿಗಳ ದಮನ. ದೇವತಾ ಶಕ್ತಿಗಳ ವೈಭವದ ಸಂಚಲನ. ಜೀವನವನ್ನು ತಾಳಿನಿಂದ ತುದಿಯವರೆಗೆ ಬೆಳಗಿಸುವ ಪರಮೋನ್ನತವಾದ ಸ್ಥಿತಿ ಉಂಟಾಗುವುದು. ಅಂತಹ ಸ್ಥಿತಿ ಬರಬೇಕಾದರೆ ದದೀಚಿಯಂತಹ ಬ್ರಹ್ಮ ನಿಷ್ಠ, ತಪೋ ನಿಷ್ಠರಾಗಬೇಕು. ಅಂತಹ ದೇಹದ ಬೆನ್ನುಮೂಳೆ ದುಷ್ಟ ನಿಗ್ರಹದ ಶಸ್ತ್ರವಾಗಬಲ್ಲದು. ಶ್ರೀರಂಗ ಮಹಾಗುರುಗಳ ಮಾತಿನಂತೆ-ಆತ್ಮ ಬೀಜವು ಪ್ರಕೃತಿಕ್ಷೇತ್ರದಲ್ಲಿ ಬಿದ್ದಾಗ ಮಾನವ ವೃಕ್ಷವು ಬೆಳೆದರೂ ಇದು ಮತ್ತೆ ಆತ್ಮಬೀಜದಲ್ಲೇ ನಿಲ್ಲಲನುಗುಣವಾಗಿ ವಿಕಾಸ ಹೊಂದುವಂತೆ ಕೃಷಿ ಮಾಡುವವನೇ ಋಷಿ." ಅವನೇ ದದೀಚಿ. ಅವನ ಮೂಳೆಯೇ ಸರ್ವ ಶಕ್ತ. ಅದೇ ಆಸುರೀ ಶಕ್ತಿಗಳನ್ನು ಧ್ವಂಸ ಮಾಡುವುದು. ಅವನೇ ನಮ್ಮ ಆದರ್ಶವಾಗಬೇಕು. ಭಾರತೀಯರ ಸಂಸ್ಕೃತಿಯಲ್ಲಿ ಮಾತ್ರವೇ ಜೀವನವನ್ನು ಅದರ ನೆಲೆದಾಣಕ್ಕೆ ತಲುಪಿಸುವ ಆವಿಷ್ಕಾರ ನಡೆದಿರುವುದು. ಅಂತಹ ಸಾವಿರಾರು ಆದರ್ಶ ಪುರುಷರು ಹುಟ್ಟಿರುವುದೂ ಇಲ್ಲಿಯೇ. ಇದರ ವಾರಸುದಾರರು ನಾವು. ದದೀಚಿ ಮಹರ್ಷಿಗಳ ಆದರ್ಶ ನಮ್ಮ ಜೀವನಗಳಿಗೆ ಪಾಠವಾಗಲಿ.


ಸೂಚನೆ : 8
/11/2025 ರಂದು   ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.