ಪ್ರಶ್ನೆ ೪೦. ಯಾವಾಗಲೂ ಆನಂದ ಕೊಡುವ ವಿಷಯ ಯಾವುದು?
ದೀನ-ದುಃಖಿತರ ಬಗ್ಗೆ ಕರುಣ ಮತ್ತು ಸಜ್ಜನರ ಜೊತೆ ಮೈತ್ರೀ
ಕೇವಲ ಮಾನವ ಮಾತ್ರ ಅಲ್ಲ, ಪ್ರತಿಯೊಂದು ಜೀವಿಯು ಕೂಡ 'ಸುಖ ಬೇಕು, ದುಃಖ ಬೇಡ' ಎಂಬುದನ್ನು ಬಯಸುತ್ತದೆ. ಅದರಲ್ಲಿ ಮಾನವನ ಸುಖದ ಸ್ವರೂಪ ವಿಭಿನ್ನವಾದದು. ಉಳಿದ ಜೀವಿಗಳ ಸುಖ ಮತ್ತು ದುಃಖ ಎಂದರೆ ಅದು ಕೇವಲ ಉಳಿವಿಗಾಗಿ ಮಾಡುವ ಹೋರಾಟದ ಪ್ರತಿಫಲನ ರೂಪ ಅಷ್ಟೇ. ಅಂದರೆ ಅವುಗಳ ಉಳಿವಿಗೆ ಯಾವುದು ಅನುಕೂಲವೋ, ಅದನ್ನು 'ಸುಖ' ಎಂಬುದಾಗಿಯೂ, ಉಳಿದಿದ್ದನ್ನು 'ದುಃಖ' ಎಂಬುದಾಗಿಯೂ ತಿಳಿಯಲಾಗುತ್ತದೆ. ಆದರೆ ಮನುಷ್ಯಮಾತ್ರ ಹಾಗಲ್ಲ. ಇವನಿಗೆ ಇರುವ ವಿವೇಕವನ್ನು ಕಳೆದುಕೊಂಡಾಗ ದುಃಖವು ಸುಖವಾಗಿ ಕಾಣುವುದುಂಟು, ಸುಖವನ್ನು ಕೊಡುವ ವಿಷಯವು ದುಃಖವಾಗಿ ಕಾಣುವುದುಂಟು. ಹಾಗಾಗಿ ಯಾವುದು ನಮಗೆ ನಿಜವಾಗಿಯೂ ಸುಖವನ್ನು ಅಥವಾ ಆನಂದವನ್ನು ಮಾತ್ರ ಕೊಡುವಂತದ್ದು! ಎಂಬ ಸೂಕ್ಷ್ಮವಾದ ಅರಿವು ಇಲ್ಲವಾಗಿದೆ. ಅದನ್ನು ತಿಳಿಸುವ ಪ್ರಶ್ನೋತ್ತರ ಇದಾಗಿದೆ. ಅಂದರೆ ದುಃಖಿತರಲ್ಲಿ ಕರುಣೆಯನ್ನು ತೋರಿಸುವುದು, ಸಜ್ಜನರ ಜೊತೆ ಮೈತ್ರಿ, ಅವರ ಜೊತೆ ಅತ್ಯಂತ ಹತ್ತಿರದ ಒಡನಾಟ, ಇವು ಯಾವಾಗಲೂ ದುಃಖವನ್ನು ಕೊಡಲು ಸಾಧ್ಯವೇ ಇಲ್ಲ ಎಂಬ ಅಂಶ ಇಲ್ಲಿ ಅಡಕವಾಗಿದೆ. ಇದನ್ನೇ ಹೇಳುವಂತೆ ಯೋಗಸೂತ್ರವು ಹೀಗೆ ವಿಷಯವನ್ನು ನಿರೂಪಣೆ ಮಾಡುತ್ತದೆ.
ಮೈತ್ರೀ-ಕರುಣ-ಮುದಿತ-ಉಪೇಕ್ಷಾಣಾಂ ಸುಖ-ದುಃಖ-ಪುಣ್ಯ-ಅಪುಣ್ಯ-ವಿಷಯಾಣಾಂ ಭಾವನಾತಃ ಚಿತ್ತಪ್ರಸಾದನಮ್" ಎಂಬುದಾಗಿ. ಅಂದರೆ ಸುಖವನ್ನು ಕೊಡುವ ವಿಷಯದ ಮೇಲೆ ತಮ್ಮ ಮಿತ್ರಭಾವ, ದುಃಖಿತರ ವಿಷಯದಲ್ಲಿ ಕಾರುಣ್ಯಭಾವ, ಪುಣ್ಯ ಮತ್ತು ಅಪುಣ್ಯ ಎಂಬ ವಿಷಯಗಳಲ್ಲಿ ಸಂತೋಷ ಮತ್ತು ಉಪೇಕ್ಷೆ, ಹೀಗೆ ಈ ಭಾವವನ್ನು ಇಟ್ಟುಕೊಳ್ಳಬೇಕು ಎಂಬುದಾಗಿ ಯೋಗಸೂತ್ರ ವಿವರಿಸುತ್ತದೆ. ಈ ಭಾಗವನ್ನು ಇಟ್ಟುಕೊಂಡರೆ ಅವರಿಗೆ ಎಂದೂ ಕೂಡ ದುಃಖವಾಗಲು ಸಾಧ್ಯವಿಲ್ಲ. ಈ ಜೀವನದಲ್ಲಿ ನಾವು ಇನ್ನೊಬ್ಬರ ಜೊತೆ ಸಂಘವನ್ನು ಮಾಡುವುದು ಅನಿವಾರ್ಯ. ಇನ್ನೊಬ್ಬರ ಕಷ್ಟ ದುಃಖಗಳಲ್ಲಿ ಸಂವೇದಿಸುವುದು ಅಷ್ಟೇ ಮುಖ್ಯವಾದ ಅಂಶ. ಹಾಗಾಗಿ ದುಃಖಿತರನ್ನು ಕಂಡಾಗ ಇವರ ದುಃಖವನ್ನು 'ನಾನು ಹೇಗೆ ನಿವಾರಿಸಲಿ?' ಎಂಬ ಕೃಪೆಯು ಅವರ ಮೇಲೆ ಇರಬೇಕೇ ಹೊರತು, ಅಂತಹ ದುಃಖಿತರನ್ನು ಕಂಡು ತಟಸ್ಥವಾಗಿ, ನಿರ್ಲಿಪ್ತವಾಗಿ ಇರುವುದು ಸರಿಯಲ್ಲ. ಅಂತಯೇ ಯಾವುದು ನಿಜವಾಗಿಯೂ ನಮಗೆ ಸುಖವನ್ನು ಅಥವಾ ಪುಣ್ಯವನ್ನು ಕೊಡುವ ವಿಷಯವೋ, ಅದರ ಜೊತೆ ನಮ್ಮ ನಿರಂತರ ಸಂಪರ್ಕವನ್ನು ಇಟ್ಟುಕೊಳ್ಳಬೇಕು. ಇದರ ಜೊತೆಯಲ್ಲಿ ಯಾವುದು ನಮಗೆ ದುಃಖವನ್ನು ಅಥವಾ ಪಾಪವನ್ನು ಕೊಡುವುದು? ಅದನ್ನು ಸದಾ ದ್ವೇಷಿಸುವ ಸ್ವಭಾವ ಉಳ್ಳವನಾಗಿರಬೇಕು. ಹೀಗೆ ಮಾಡುವುದೇ ನಿಜವಾದ ಆನಂದಕ್ಕೆ ಕಾರಣವಾಗುತ್ತದೆ. ಹೀಗೆ ಮಾಡುವುದರಿಂದ ಅವನೆಂದೂ ಮುಂದೆ 'ನಾನು ಇಂಥವರಿಗೆ ಸಹಾಯ ಮಾಡಿ ಮೋಸ ಹೋದೆ' ಎಂದು ಅಂದುಕೊಳ್ಳಲು ಖಂಡಿತ ಸಾಧ್ಯವಿಲ್ಲ. ಹಾಗಾಗಿ ದೀನ ದುಃಖಿತರ ವಿಷಯದಲ್ಲಿ ಕರುಣ ಮತ್ತು ಸಜ್ಜನರ ಜೊತೆ ಮೈತ್ರೀಯಂತಹ ಸ್ಪಂದನೆ ಇರುವುದು ಅತ್ಯಂತ ಮುಖ್ಯ ಎಂಬ ವಿಷಯ ಈ ಪ್ರಶ್ನೋತ್ತರದಲ್ಲಿ ಕಾಣುತ್ತದೆ.