ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
"ನಮಸ್ತೇ" ಎಂದರೆ "ನಿನಗೆ ನಮಸ್ಕಾರ" ಎಂದರ್ಥ. ಈ ಮಾತನ್ನು ಲೀಲಾಶುಕನು ಕೃಷ್ಣನನ್ನು ಕುರಿತು ಹೇಳುತ್ತಿದ್ದಾನೆ.
ಹೇಗಿರುವ ಇಲ್ಲಿ ಹೇಳಿರುವ ಕೃಷ್ಣ? ಈತನಿನ್ನೂ ಚಿಕ್ಕವಯಸ್ಸಿನವ, ಬಾಲ. ಆತನನ್ನು ಕಂಡೊಡನೆ ಗೋಚರವಾಗಿರುವುದು ಆತನ ಮೈಬಣ್ಣ. ಅದನ್ನೇ ನೀಲವಪುವೆಂದಿರುವುದು. ಕೃಷ್ಣನನ್ನು ನೀಲಮೇಘಶ್ಯಾಮ - ಎನ್ನುವರಲ್ಲ, ಅದೇ ಈ ಬಾಲನ ಶರೀರದ ವರ್ಣ.
ಈ ಎಳೇ ಹುಡುಗನು ವಸ್ತ್ರವನ್ನೇ ಧರಿಸಿಲ್ಲ. ಎಂದೇ ಆತನನ್ನು ದಿಗಂಬರನೆಂದಿರುವುದು. ಏನು ದಿಗಂಬರನೆಂದರೆ? ಯಾರಿಗೆ ದಿಕ್ಕೇ, ಎಂದರೆ ದಿಕ್ಕುಗಳೇ , ಅಂಬರವೋ ಅವನು. ಅಂಬರವೆಂದರೆ ವಸ್ತ್ರ. ಹಳದಿಬಟ್ಟೆ-ನೀಲವಸ್ತ್ರಗಳಿಗೆ ಪೀತಾಂಬರ-ನೀಲಾಂಬರ - ಎಂದು ಹೇಳುವುದಿಲ್ಲವೇ? ದಿಕ್ಕುಗಳನ್ನು ಬಿಟ್ಟರೆ ಬೇರೆ ವಸ್ತ್ರವೇ ಇಲ್ಲ. ಬರಿಮೈಯವ ಎಂಬುದೇ ತಾತ್ಪರ್ಯ.
ಮೈಮೇಲೆ ಬಟ್ಟೆಯಿಲ್ಲದಿದ್ದರೂ ಆಭರಣಗಳಿವೆ. ಅವನ್ನಂತೂ ಯಾವಾಗಲೂ ಹಾಕಿಕೊಂಡಿರುವುದೇ. ಎರಡು ಆಭರಣಗಳು ತೆಗೆದಿಡದವು: ಕತ್ತಿನಲ್ಲೊಂದು, ಸೊಂಟದಲ್ಲೊಂದು.
ಕತ್ತಿಗೆ ಹಾಕಿಕೊಳ್ಳುವ ಸರದ ಪದಕದ ಎಡೆಯಲ್ಲಿ ಬರುವಂತೆ ಹುಲಿಯುಗುರನ್ನು ಕಟ್ಟುವ ಪದ್ಧತಿಯು ಈಚಿನವರೆವಿಗೂ ಇದ್ದಿತು. ಈಗಲೂ ಹಳ್ಳಿಗಳ ಕಡೆ ಉಳಿದಿರಬಹುದು. ಅದನ್ನು ವ್ಯಾಘ್ರ-ನಖವೆಂದೋ ಶಾರ್ದೂಲ-ನಖವೆಂದೋ ಹೇಳುವುದುಂಟು. ಆ ಆಭರಣದಿಂದ ಭೂಷಿತನಾಗಿದ್ದಾನೆ, ಈ ಪುಟ್ಟಕೃಷ್ಣ.
ಕೆಲವು ಆಸುರಶಕ್ತಿಗಳ ಪ್ರಭಾವವನ್ನು ಅದು ತಡೆಗಟ್ಟುವುದರಿಂದ ಅದನ್ನು ದಿವ್ಯ-ನಖವೆಂದು ಹೇಳುವುದೂ ಉಂಟು. ಇದು ಕಂಠಾಭರಣವಾಯಿತು.
ಇನ್ನು ಸೊಂಟದ ಆಭರಣ. ಅಲ್ಲಿ ಕಟ್ಟಿರುವುದು ಕಿಂಕಿಣಿಗಳಿಂದಾದ ಮಾಲೆ. ಕಿಂಕಿಣಿಯೆಂದರೆ ಕಿರುಗಂಟೆ. ಕಿಂಕಿಣೀ-ಜಾಲ ಅಥವಾ ಕಿಂಕಿಣೀಕ-ಜಾಲವೆಂದರೆ ಪುಟ್ಟ ಪುಟ್ಟ ಗಂಟೆಗಳಿಂದಾದ, ಜಘನವನ್ನು ಬಳಸುವ, ಉಡುದಾರ. ಜಘನವೆಂದರೆ ಸೊಂಟವೇ. ಅದು ಈ ಪುಟ್ಟ ಗಂಟೆಗಳ ಜಾಲ ಅಥವಾ ಸರಪಳಿಯಿಂದಾಗಿ ಅಭಿರಾಮವಾಗಿದೆ. ಅರ್ಥಾತ್ ಆ ಪುಟ್ಟ ಮಗುವಿನ ಸೊಂಟದಲ್ಲಿ ಈ ಸಣ್ಣಸಣ್ಣಗಂಟೆಗಳ ಪೋಣಿಕೆಯಿದೆ. ಅಭಿರಾಮವಾಗಿದೆಯೆಂದರೆ ಸುಂದರವಾಗಿದೆಯೆಂದರ್ಥ. ಕಿರುಗಂಟೆಗಳ ಉಡುದಾರ ಹೊಸದು. ಎಂದೇ ಎದ್ದುಕಾಣುವಂತಹುದು.
ಈ ಕಿರಿಯನ ಮೈಯಲ್ಲಿ ಎದ್ದುತೋರುವ ಮತ್ತೂ ಒಂದು ಲಕ್ಷಣವನ್ನು ಹೇಳಬಹುದು. ಅತನ ಕೈಮೇಲೋ ಬಾಯಮೇಲೋ ಇರುವ ಗುರುತುಗಳಿಂದ: ಆತನು ನವನೀತವನ್ನು ಕದ್ದಿರುವುದು ಸುಲಭಗೋಚರ. ಕೈ-ಬಾಯಿಗಳ ಮೇಲಿನ ಚಿಹ್ನಗಳು ಇದಕ್ಕೆ ಸೂಚಕ.
ಹೀಗಿರುವ ಈ ಬಾಲ ನಂದಾತ್ಮಜ. ಆತ್ಮಜನೆಂದರೆ ಮಗ. ಹೀಗಾಗಿ ನಂದಪುತ್ರ ಈತ. ಇಂತಹ ನಂದಪುತ್ರನಾದ ಈ ಕುಮಾರನಿಗೆ ನಮಸ್ಕಾರವನ್ನು ಹೇಳಿದೆ.
ಗೊಲ್ಲರ ಬಾಲನಾದರೂ ಈತ ಭಗವಂತನೇ - ಎಂಬ ಲೆಕ್ಕವಿರುವುದರಿಂದ ನಮಸ್ಕಾರವನ್ನು ಹೇಳಿದೆ.
ಶ್ಲೋಕದಲ್ಲಿ ನಾಲ್ಕೆಡೆಗಳಲ್ಲಿ 'ಲ'ಕಾರದ ಪ್ರಯೋಗವಿದೆ: ಬಾಲ-ನೀಲ-ಜಾಲ-ಶಾರ್ದೂಲಗಳಲ್ಲಿ. ಹಾಗೆಯೇ ಭೂಷಣ-ಭೂಷಿತಗಳಲ್ಲಿಯ ಅನುಪ್ರಾಸಗಳು; ನೀಲವಪುಷೇ-ನವನೀತಮುಷೇ ಎಂಬಲ್ಲಿ ಅಂತ್ಯಾಕ್ಷರದ್ವಯದಲ್ಲಿಯ ಅನುಪ್ರಾಸ - ಇವುಗಳನ್ನೂ ಗಮನಿಸಬಹುದು. ಕೊನೆಯ ಪಾದದಲ್ಲಿ ನಂದಾತ್ಮಜಾಯ ನವನೀತಮುಷೇ - ಎನ್ನುವಾಗ ನಕಾರತ್ರಯವು ಬಂದಿದೆ; ಪ್ರಥಮಪಾದದಲ್ಲೂ ನಕಾರದ್ವಯವಿದೆ.
ಶ್ಲೋಕ ಹೀಗಿದೆ:
ಬಾಲಾಯ ನೀಲ-ವಪುಷೇ ನವ-ಕಿಂಕಿಣೀಕ-
-ಜಾಲಾಭಿರಾಮ-ಜಘನಾಯ ದಿಗಂಬರಾಯ |
ಶಾರ್ದೂಲ-ದಿವ್ಯನಖ-ಭೂಷಣ-ಭೂಷಿತಾಯ
ನಂದಾತ್ಮಜಾಯ ನವನೀತ-ಮುಷೇ ನಮಸ್ತೇ ||
***
ಅದೆಂದು ನಾ ಕಾಣುವೆ ಶ್ರೀಕೃಷ್ಣನನ್ನು? - ಎಂಬುದಾಗಿ ಕೇಳಿಕೊಳ್ಳುತ್ತಿದ್ದಾನೆ, ಕವಿ ಲೀಲಾಶುಕ. "ಕೃಷ್ಣನನ್ನು" ಎಂದು ಬಾಯಿಬಿಟ್ಟೇನೂ ಹೇಳುವುದಿಲ್ಲ. ಬದಲಾಗಿ "ಕಮಪಿ ಬಾಲಂ" ಎನ್ನುತ್ತಾನೆ. ಹಾಗೆಂದರೆ "ವಾಚಾಮಗೋಚರನಾದ ಬಾಲಕನನ್ನು" ಎಂದೇ ಅರ್ಥ. ಯಾವುದು ಮಾತಿಗೆಟುಕದೋ ಅದುವೇ ವಾಚಾಮಗೋಚರ, ಹೀಗೆಂದು ಹೇಳಲಾಗದುದು. ಹಾಗೆಂದು ಹೇಳಿಯೂ ಕೆಲವು ಲಕ್ಷಣಗಳನ್ನಾದರೂ ಹೇಳಬೇಕೆನ್ನುವ ಚಪಲ, ಕವಿಗೆ. ಯಾವುವವು?
ಈ ಬಾಲನು ಕಮಲೇಕ್ಷಣ. ಹಾಗೆಂದರೆ ಪದ್ಮವನ್ನು ಹೋಲುವ ಲೋಚನಗಳನ್ನುಳ್ಳವನು - ಎಂದರ್ಥ. ಏಕೆಂದರೆ ಈಕ್ಷಣವೆಂದರೆ ಕಣ್ಣು.
ಆತನ ಕಣ್ಣುಗಳನ್ನಷ್ಟೇ ಹೇಳಿದರೆ ಸಾಲದು. ಆತನ ಮುದ್ದುಮುಖದ ಬಗ್ಗೆಯೂ ಒಂದೆರಡು ಮಾತುಗಳನ್ನು ಹೇಳಬೇಕು. ಅತನ ಮುಖವು ಅಭಿರಾಮವಾಗಿ, ಎಂದರೆ ಆಕರ್ಷಕವಾಗಿ, ಕಾಣಲು ಕಾರಣವೇ ಆತನ ಸ್ಮಿತ. ಸ್ಮಿತವೆಂದರೆ ಮುಗುಳ್ನಗೆ. ಅದು ಹೇಗಿದೆ? ಅದು ಉದಾರವೂ ಮೃದುಲವೂ ಆಗಿದೆ.
ಕೆಲ ಮಕ್ಕಳಿಗೆ ಸದಾ ಅಳುಮುಖವೋ ಸಪ್ಪೆಮುಖವೋ ಇರುತ್ತದೆ; ಮುಗುಳ್ನಗೆಯು ಮೂಡುವುದೂ ಅಪರೂಪಕ್ಕೇ; ಕೋಪ-ದುಃಖಗಳು ಕ್ಷಣಮಾತ್ರದಲ್ಲಿ ತೋರಿಸಿಕೊಂಡುಬಿಡುತ್ತವೆ.
ಆದರೆ ಕೃಷ್ಣನ ವಿಷಯದಲ್ಲಿ, ಆತನ ಬಾಲ್ಯದಲ್ಲೂ, ಹಾಗಿಲ್ಲ. ನಗೆಯುಕ್ಕಲು ನೆಪವೇ ಸಾಕು. ಮತ್ತು ಆ ನಗುವೂ ಮೆದುವಾದ ನಗು. ಇದನ್ನು ಮೃದುಲ-ಸ್ಮಿತವೆನ್ನುವರು. ಎಳೆಮಕ್ಕಳು ದೊಡ್ಡವರು ನಗುವಂತೆ ಗಹಗಹಿಸಿ ನಕ್ಕರೆ ಅದೇನು ಚೆಂದ?
ಹೀಗೆ ಉದಾರವೂ ಮೃದುಲವೂ ಆದ ಸ್ಮಿತವು ಕೃಷ್ಣನ ಮೊಗದಲ್ಲಿ ಎದ್ದು ಕಾಣುತ್ತದೆ. ಮತ್ತು ಅಂತಹ ಸ್ಮಿತವಾದರೂ ಆಗಾಗ್ಗೆ ಬರುತ್ತಿರುವುದರಿಂದಲೇ ಆತನ ಆನನವು ಅಭಿರಾಮವಾಗಿದೆ.
ಕಣ್ಣಿನ ವರ್ಣನೆಯಾಯಿತು, ಮುಖದ ಚಿತ್ರಣವಾಯಿತು. ಇನ್ನೆರಡು ವಿಷಯಗಳನ್ನು ಹೇಳಬೇಕು. ಮುನಿಗಳು ಆತನನ್ನು ಹೇಗೆ ಭಾವಿಸಿದರು? ಮತ್ತು ಗೋಪಾಂಗನೆಯರು ಹೇಗೆ? - ಎಂಬೀ ವಿಷಯಗಳು.
ಮುನಿಗಳ ಮನಸ್ಸೂ ಒಂದು ಕಮಲದಂತೆ. ತಮ್ಮ ಈ ಮನೋಂಬುಜದಲ್ಲಿ ಆತನನ್ನು ಪುನಃ ಪುನಃ ಅವರು ಭಾವಿಸುತ್ತಾರೆ. ಆರಂಭಾವಸ್ಥೆಯಲ್ಲಿರುವವರಿಗೆ ಧ್ಯಾನವೆಂಬುದು ಬಲು ಕಷ್ಟ; ಆದರೆ ಮುನಿಗಳು ಪದೇ ಪದೇ ಕೃಷ್ಣನನ್ನು ಭಾವಿಸಿಕೊಳ್ಳುತ್ತಾರೆ. ಅದೂ ಸಂತೋಷದಿಂದ ಅವರಿಗಾಗುವುದು. ಆ ಸಂತೋಷವಾದರೂ ಮತ್ತೆ ಮತ್ತೆ ಉಕ್ಕುವಂತಹುದು. ಹೀಗೆ ಪರಮ-ಸಂತೋಷದಲ್ಲಿರುತ್ತಾ ಆತನನ್ನವರು ಪರಿಭಾವಿಸುವರು.
ಇನ್ನುಳಿದಿರುವುದು ಗೋಪಿಕೆಯರು ಆತನನ್ನು ಭಾವಿಸಿದ ಪರಿಯೇನೆಂಬುದು. ಅವರು ತಮ್ಮ ಮುಖದಿಂದ ಕೃಷ್ಣನನ್ನೇ ಆಸ್ವಾದಿಸುವರು. ಹಾಗೆ ಮುಖದಿಂದ ಆಸ್ವಾದಿಸುವುದೆಂದರೆ ಮುತ್ತುಕೊಡುವುದೆಂದೇ ಅರ್ಥ. ಹೀಗೆ ವ್ರಜ-ವಧುಗಳು ತಮ್ಮ ಮುಖದಿಂದ ಕೃಷ್ಣನನ್ನು ಆಸ್ವಾದಿಸಿರುವರು.
ಈ ಸಂದರ್ಭದಲ್ಲಿ ಆ ಗೋಪಾಂಗನೆಯರ ಕಣ್ಣುಗಳು ಎಂತಿದ್ದವೆಂದೂ ಕವಿಯು ಹೇಳುತ್ತಾನೆ. ಅವುಗಳು "ಮದಾಲಸವಾಗಿದ್ದವು". ಏನು ಹಾಗೆಂದರೆ? ಮದ್ಯಪಾನ ಮಾಡಿದವರ ಕಣ್ಣುಗಳು ಮದದಿಂದ ಅಲಸವಾಗಿರುತ್ತದೆ. ಪ್ರಕೃತ, ಕೃಷ್ಣನ ಬಳಿ ಬಂದವರಿಗೆ ಮದ್ಯಪಾನದ ಆವಶ್ಯಕತೆಯೇನಿರಲಿಲ್ಲ. ಆದರೂ ಅವರುಗಳು "ಮದಾಲಸ-ವಿಲೋಚನ"ರಾಗಿದ್ದರು, ಎಂದಿದೆ. ಅಂತರಂಗದಲ್ಲಿ ಯಾರಿಗೆ ಪರಮ-ಸಾತ್ತ್ವಿಕ-ಸಂತೋಷವುಂಟೋ, ಅಂತಹವರೇ ಈ ಬಗೆಯಲ್ಲಿ ಮದಾಲಸ-ನೇತ್ರರಾಗುವರು. ಹೀಗೆ ತಮ್ಮ ಒಳಸುಖದ ಪ್ರತೀಕವಾಗಿ ಅವರ ಕಣ್ಣುಗಳಲ್ಲಿ ಮದಾಲಸತೆಯು ಕಂಡಿದೆ.
ಹಾಗೆ ನೋಡಿದರೆ ಗೋಪಿಕೆಯರ ಮಹಾಭಾಗ್ಯವೇ ಇದೆಂದು ಹೇಳಬೇಕಾಗುತ್ತದೆ. ಯಾವುದನ್ನು ಮುನಿಗಳು ಕಷ್ಟಪಟ್ಟು ಮತ್ತೆ ಮತ್ತೆ ಪಡೆಯುವರೋ ಅದನ್ನೇ ಇವರು ಅನಾಯಾಸವಾಗಿ ಸಾಧಿಸಿಕೊಳ್ಳುವರು. ಹೀಗೆ ಮುನಿಗಳ ಯೋಗಧ್ಯಾನದಿಂದ ಸಾಧಿತವಾಗತಕ್ಕದ್ದು ಯಾವುದೋ, ಅದು ಗೋಪಿಕೆಯರಿಗೆ ಶ್ರಮವಿಲ್ಲದೆಯೇ ದೊರೆತಿದೆ!
ಅಂತೂ ಹೀಗೆಲ್ಲಾ ವಿರೋಧಗಳೋ ವಿಚಿತ್ರಗಳೋ ಇರುವುದರಿಂದಲೇ ಕೃಷ್ಣನನ್ನು ಅನಿರ್ವಚನೀಯ ಎಂದಿರುವುದು.
ಶ್ಲೋಕವಿದು:
ಉದಾರ-ಮೃದುಲ-ಸ್ಮಿತ-ವ್ಯತಿಕರಾಭಿರಾಮಾನನಂ /
ಮುದಾ ಮುಹುರುದೀರ್ಣಯಾ ಮುನಿಮನೋಽಮ್ಬುಜಾಮ್ರೇಡಿತಮ್ |
ಮದಾಲಸ-ವಿಲೋಚನ-ವ್ರಜವಧೂ-ಮುಖಾಸ್ವಾದಿತಂ /
ಕದಾ ನು ಕಮಲೇಕ್ಷಣಂ ಕಮಪಿ ಬಾಲಮಾಲೋಕಯೇ ?||
ಸೂಚನೆ : 22/11/2025 ರಂದು ಈ ಲೇಖನವು ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.