ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ ೩೮. ಯಾವ ವಿಷಯದಲ್ಲಿ ಉಪೇಕ್ಷೆ ಇರಬೇಕು?
ದುಷ್ಟ ಮನುಷ್ಯರಲ್ಲಿ, ಪರಸ್ತ್ರೀಯಲ್ಲಿ ಮತ್ತು ಪರರ ಧನದಲ್ಲಿ.
ಈ ಪ್ರಶ್ನೋತ್ತರದಲ್ಲಿ ಒಂದು ಪ್ರಶ್ನೆಗೆ ಮೂರು ಉತ್ತರಗಳಿವೆ. ಉಪೇಕ್ಷೆ ಎಂದರೆ ತಿರಸ್ಕಾರ, ದ್ವೇಷಿಸುವುದು ಅಥವಾ ಯಾವುದೇ ಕಾರಣಕ್ಕೂ ಅಪೇಕ್ಷೆ ಪಡದಿರುವುದು ಎಂದರ್ಥ. ನಾವು ಉತ್ತಮರಾಗಬೇಕಾದರೆ ಇಲ್ಲಿ ಹೇಳಿರುವ ಮೂರು ವಿಷಯಗಳ ಬಗ್ಗೆ ಉದಾಸೀನತೆಯನ್ನು ಇಟ್ಟುಕೊಳ್ಳಬೇಕು ಎಂಬ ಉಪದೇಶ ಇಲ್ಲಿದೆ. ಪ್ರತಿಯೊಬ್ಬ ಮಾನವನು ಕೂಡ ಒಳ್ಳೆಯವನಾಗಬೇಕು ಎಂದೇ ಅಪೇಕ್ಷೆಪಡುತ್ತಾನೆ. ಅದಕ್ಕಾಗಿ ಈ ಅಪೇಕ್ಷೆಗೆ ಯಾವುದು ಉಪೇಕ್ಷೆ ಮಾಡುವಂಥದ್ದು? ಎಂಬ ಉತ್ತರ ಇಲ್ಲಿದೆ. ಈ ಮೂರು ಸಂಗತಿಗಳು ನಮಗೆ ಸರ್ವಥಾ ಅನಿಷ್ಟಪ್ರದವಾದವುಗಳು ಎಂಬುದು ತಾತ್ಪರ್ಯ.
ದುಷ್ಟರ ವಿಷಯದಲ್ಲಿ ನಮಗೆ ಸಂದೇಹ ಬರುವುದು - ಯಾರು ದುಷ್ಟರು? ಎಂಬುದನ್ನು ತಿಳಿದುಕೊಳ್ಳುವುದರಲ್ಲಿ. ತಿಳಿಯಲು ಬಹಳ ಕಷ್ಟಸಾಧ್ಯವೂ ಹೌದು. ಏಕೆಂದರೆ ಶಿಷ್ಟರಂತೆ ಇದ್ದು, ದುಷ್ಟರು ತಮ್ಮ ಕಾರ್ಯವನ್ನು ಮಾಡುತ್ತಿರುತ್ತಾರೆ. ಹಾಗಾಗಿ ದುಷ್ಟತನವನ್ನು ತಿಳಿಯಲು ಸೂಕ್ಷ್ಮತೆ ಇರಬೇಕಾಗುತ್ತದೆ. ಸರಿ-ತಪ್ಪುಗಳ ಬಗ್ಗೆ ಅರಿವು ಬೇಕು. ಸರಿಯಾದ ಕಡೆ ನಮ್ಮನ್ನು ಸರಿಸುವುದು ಸರಿ. ಸರಿಯಾದದ್ದನ್ನು ತಪ್ಪಿಸುವುದು ತಪ್ಪು ಎಂಬ ನಿರ್ಣಯ ಬೇಕು. ಯಾವುದು ಸರಿ? ಎಂದರೆ ನಿತ್ಯ, ಸತ್ಯವಾದ ಪರಬ್ರಹ್ಮ ಮಾತ್ರ ಸರಿ. ಉಳಿದವುಗಳು ಸರಿಯ ಕಡೆ ತಲುಪಿಸುವ ಸಾಧನಗಳು. ಯಾರಿಗೆ ಈ ಅರಿವು ಇರುವುದೋ ಅವನು ಸರಿಯ ಕಡೆ ಸರಿಯುತ್ತಿರುತ್ತಾನೆ. ಆ ಕಡೆಗೆ ಗಮನದ ಅಪೇಕ್ಷೆ ಉಳ್ಳವನು ಸತ್ಪುರುಷ ಅಥವಾ ಶಿಷ್ಟ. ಹಾಗಿಲ್ಲದವನು ದುಷ್ಟ ತಾನೆ ಆಗುತ್ತಾನೆ! ಭಯ, ದಯೆ, ಲಜ್ಜೆ ಈ ಮೂರು ಗುಣಗಳು ಇಲ್ಲದವನಾಗುತ್ತಾನೆ ಆತ. ಆತನಿಗೆ ಕೆಟ್ಟಕಾರ್ಯದ ಬಗ್ಗೆ ಭಯವಿರದು. ದೀನ, ದರಿದ್ರ, ದುರ್ಬಲರ ಬಗ್ಗೆ ದಯೆ ದೂರವೇ. ಮತ್ತು ಕುಕಾರ್ಯ ಮಾಡಿದಲ್ಲಿ ಅವನಿಗೆ ಲಜ್ಜೆ ಕಿಂಚಿತ್ತೂ ಇರುವುದೇ ಇಲ್ಲ. ಇವನಿಂದ ಕರ್ತವ್ಯ ಮತ್ತು ಅಕರ್ತವ್ಯದ ಪ್ರಜ್ಞೆ ಎಂಬುದು ದೂರವಾಗುತ್ತದೆ. ಹಾಗಾಗಿ ಅವನು ಮುಂದೆ ದುಷ್ಟ ಎಂದೇ ಪರಿಗಣಿತನಾಗುತ್ತಾನೆ. ಇಂತಹ ದುಷ್ಟರ ವಿಷಯದಲ್ಲಿ ದೂರವಿರಬೇಕು ಎಂಬುದು ಮೊದಲನೆಯ ಸಂಗತಿ.
ಸೃಷ್ಟಿಕಾರ್ಯವನ್ನು ಮುಂದುವರಿಸಲು ಸ್ತ್ರೀ ಬೇಕೇಬೇಕು. ಸನಾತನಧರ್ಮದಲ್ಲಿ ವಿವಾಹ ಎಂಬ ಉತ್ಕೃಷ್ಟ ವ್ಯವಸ್ಥೆಯ ಮೂಲಕ ಗುರುಹಿರಿಯರ ಅನುಮತಿಯನ್ನು ಪಡೆದು ಪುರುಷನು ಸ್ತ್ರೀಯಿಂದ ಸಂತತಿಯನ್ನು ಪಡೆಯುತ್ತಾನೆ. ಆ ಸ್ತ್ರೀಯಿಂದ ಧರ್ಮಕಾರ್ಯವನ್ನು ಮಾಡುತ್ತಾನೆ. ಆದಕಾರಣ ಬೇರೆಯವರ ಪತ್ನಿಯನ್ನು ತನ್ನ ತಾಯಿಯ ಸ್ಥಾನದಲ್ಲಿಟ್ಟು ನೋಡಬೇಕು ಎಂಬುದಾಗಿ ನಮ್ಮ ಪರಂಪರೆ ಸಾರುತ್ತದೆ. ಇಷ್ಟು ನಿರ್ಮಲತೆಯ ಭಾವವನ್ನು ಇಟ್ಟುಕೊಂಡು ಪರಸ್ತ್ರೀವಿಷಯವನ್ನು ಕಾಣಬೇಕು. ಅದನ್ನು ಬಿಟ್ಟು ಹಿರಿಯರ ಅನುಮತಿಯನ್ನು ಬಿಟ್ಟು ಕೇವಲ ಕಾಮನೆಗಾಗಿ ಪರಸ್ತ್ರೀಯನ್ನು ಬಳಲಿಸಿಕೊಳ್ಳುವುದು ಅಧರ್ಮಕ್ಕೆ ಕಾರಣವಾಗುತ್ತದೆ. ಇಂತಹ ಅನಿಷ್ಟಕಾರ್ಯ ಸರ್ವಥಾ ಮಾಡುವಂತಹದ್ದಲ್ಲ.
ಮತೊಬ್ಬರ ಸಂಪತ್ತನ್ನು ಬಯಸಬಾರದು. ನಮ್ಮ ಸಹಜವಾದ ಕರ್ಮದಿಂದ ಯಾವುದು ಲಭ್ಯವಾಗುತ್ತದೆಯೋ ಅದರಿಂದ 'ಹಾಸಿಗೆ ಇದ್ದಷ್ಟು ಕಾಲು ಚಾಚು' ಎಂಬಂತೆ ನಮ್ಮ ಜೀವನ ನಿರ್ವಹಣೆಯನ್ನು ಮಾಡಬೇಕು. ಹಾಗಿಲ್ಲದೆ, ಮಿತಿಮೀರಿ ಜೀವನವನ್ನು ನಡೆಸಲು ಬಯಸುವ ಸಂಪತ್ತನ್ನು 'ಪರಧನ' ಎಂದು ಪರಿಗಣಿಸಲಾಗುತ್ತದೆ. ಇದೂ ಕೂಡ ಅನಿಷ್ಟಸಾಧನವೇ ಆಗುತ್ತದೆ. ಆದ್ದರಿಂದ ಈ ಮೂರರ ವಿಷಯದಲ್ಲಿ ಉಪೇಕ್ಷೆ ಅಪೇಕ್ಷಿತ.
ಸೂಚನೆ : 2/11/2025 ರಂದು ಈ ಲೇಖನವು ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.