Thursday, November 20, 2025

ವ್ಯಾಸ ವೀಕ್ಷಿತ 162 ರಾಜಸೂಯವು ನಡೆಯಬೇಕೆಂಬ ಸಚಿವರ ಅಭಿಪ್ರಾಯ (Vyaasa Vikshita 162)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)




ತಾನು ರಾಜಸೂಯವನ್ನು ಮಾಡುವುದು ಯುಕ್ತವೇ? – ಎಂಬ ವಿಷಯವಾಗಿ ತನ್ನ ಮಂತ್ರಿಗಳಲ್ಲಿ ವಿಚಾರಿಸಿದಾಗ ಅವರು ತಮ್ಮ ಸಮ್ಮತಿಯನ್ನು ಸೂಚಿಸುತ್ತಾ ಹೀಗೆ ಮಾತನ್ನು ಮುಂದುವರೆಸಿದರು.

"ರಾಜಸೂಯವನ್ನು ಮಾಡುವ ಸಮಯವು ನಿನಗೀಗ ಬಂದಿದೆಯೆಂಬುದಾಗಿಯೇ ನಿನ್ನ ಮಿತ್ರರೆಲ್ಲರೂ ಭಾವಿಸುತ್ತಿದ್ದಾರೆ.

ಇದನ್ನು ಮಾಡುವಲ್ಲಿ ಸಾಮವೇದದ ಆರು ಮಂತ್ರಗಳಿಂದ ಯಾಗಾರ್ಥವಾದ ಆರು ಅಗ್ನಿಗಳನ್ನು ಪ್ರತಿಷ್ಠಾಪಿಸಬೇಕು. ಅದಕ್ಕೆ ಸಮಯವೀಗ ಸಂನಿಹಿತವಾಗಿದೆ. ಈ ಯಜ್ಞಾರಂಭದಲ್ಲಿ ದರ್ವೀಹೋಮವೆಂಬುದಿದೆ. ಅಲ್ಲಿಂದ ಆರಂಭಿಸಿ ಎಲ್ಲ ಯಜ್ಞಗಳ ಫಲಗಳನ್ನೂ ಪಡೆಯುವುದಾಗುತ್ತದೆ. ಯಜ್ಞದ ಕೊನೆಯಲ್ಲಿ ರಾಜನಿಗೆ ಅಭಿಷೇಕವು ನಡೆಯುತ್ತದೆ. ಅಲ್ಲಿಂದ ಆತನಿಗೆ ಸರ್ವಜಿತ್ ಎಂಬ ಬಿರುದು ಸಲ್ಲುತ್ತದೆ.

ಓ ರಾಜನೇ, ಮಹಾಬಾಹುವೇ, ನೀನು ಈ ಯಜ್ಞವನ್ನು ಮಾಡಲು ಸಮರ್ಥನಾಗಿದ್ದೀಯೇ. ಇದೋ, ನಾವೆಲ್ಲರೂ ನಿನಗೆ ಅಧೀನರಾಗಿ ಕೆಲಸವನ್ನು ಮಾಡಲು ಸಿದ್ಧರಿದ್ದೇವೆ. ಶೀಘ್ರದಲ್ಲಿಯೇ ನೀನು ಈ ರಾಜಸೂಯವನ್ನು ಸಾಧಿಸುವವನಾಗುವೆ. ಆದುದರಿಂದ ನೀನು ಇನ್ನೇನೂ ವಿಚಾರ ಮಾಡದೆ ರಾಜಸೂಯವನ್ನಾರಂಭಿಸು" ಎಂದರು.

ಮತ್ತೇನೂ ವಿಚಾರವನ್ನೇ ಮಾಡದೆ ರಾಜಸೂಯವನ್ನು ಮಾಡುವುದರತ್ತ ಮನಸ್ಸು ಕೊಡು - ಹೀಗೆಂಬುದಾಗಿ ಎಲ್ಲರೂ ಬೇರೆ ಬೇರೆಯಾಗಿಯೂ ಒಟ್ಟಿಗೂ ಯುಧಿಷ್ಠಿರನಿಗೆ ಹೇಳಿದರು. ದಿಟ್ಟವೂ ಶ್ರೇಷ್ಠವೂ ಪ್ರಿಯವೂ ಧರ್ಮಸಂಮತವೂ ಆದ ಅವರ ಈ ಮಾತುಗಳನ್ನು ಕೇಳಿದ ಯುಧಿಷ್ಠಿರನು ಆ ಬಗ್ಗೆ ಮನಸ್ಸು ಮಾಡಿದನು. ಮಿತ್ರರ ಮಾತುಗಳನ್ನು ಆಲಿಸಿ, ತನ್ನ ಸಾಮರ್ಥ್ಯವನ್ನೂ ಅರಿತುಕೊಂಡಿದ್ದ ಆತನು ರಾಜಸೂಯವನ್ನು ನಡೆಸಲು ಮನಸ್ಸು ಮಾಡಿದನು.

ತನ್ನ ಭ್ರಾತೃಗಳು, ಮಹಾತ್ಮರಾದ ಋತ್ವಿಕ್ಕುಗಳು, ಮಂತ್ರಿಗಳು, ಹಾಗೂ ಧೌಮ್ಯ ಮತ್ತು ವ್ಯಾಸ -ಇವರೆಲ್ಲರೊಂದಿಗೆ ಧರ್ಮರಾಜನು ಮಂತ್ರಾಲೋಚನವನ್ನು ನಡೆಸಿದನು. ರಾಜಸೂಯವನ್ನು ನಡೆಸಲು ಎಲ್ಲರೂ ಒಮ್ಮತವನ್ನು ಸೂಚಿಸಿದರು. ಇಷ್ಟಾದರೂ, ಈ ಕಾರ್ಯವು ಲೋಕಹಿತವನ್ನು ಸಾಧಿಸುವುದೇ? - ಎಂಬತ್ತ ಮನಸ್ಸು ಹರಿಸಿದನು.

ಯಾರೇ ಆಗಲಿ ಒಂದು ಕೆಲಸವನ್ನು ಸಾಧಿಸಹೊರಟರೆ ಗಮನಿಸಬೇಕಾದ ಅಂಶಗಳಿವು: ತನ್ನ ಶಕ್ತಿಯೇನು, ಹಾಗು ತನ್ನಲ್ಲಿರುವ ಸಾಧನಗಳೇನು? ಕೆಲಸದ ದೇಶ-ಕಾಲಗಳ ಸಂನಿವೇಶವೇನು? ಪ್ರಕೃತಕಾರ್ಯದಲ್ಲಿ ಉಂಟಾಗುವ ವ್ಯಯ-ಆಗಮಗಳು, ಎಂದರೆ ನಷ್ಟ-ಲಾಭಗಳು ಏನೇನು? - ಇವನ್ನೆಲ್ಲ ಚೆನ್ನಾಗಿ ವಿಮರ್ಶೆ ಮಾಡಿ ಯಾವನು ತೊಡಗುವನೋ ಅವನು ಎಂದೂ ಧೃತಿಗೆಡನು.

ಯಜ್ಞವನ್ನು ಮಾಡುವುದೆಂಬುದು ನನ್ನೊಬ್ಬನದೇ ನಿಶ್ಚಯದಿಂದ - ಎಂಬಂತೆ ಆಗಬಾರದು. ಹೀಗೆಂದುಕೊಂಡ ಯುಧಿಷ್ಠಿರನು ಕಾರ್ಯವನ್ನು ಯತ್ನಪೂರ್ವಕವಾಗಿ ಮಾಡುವವನಿದ್ದು, ನಿಶ್ಚಯಕ್ಕೋಸ್ಕರವಾಗಿ ಶ್ರೀಕೃಷ್ಣನನ್ನೇ ಸ್ಮರಿಸಿಕೊಂಡನು. ಶ್ರೀಕೃಷ್ಣನಾದರೂ ಎಲ್ಲರಿಗಿಂತಲೂ ಶ್ರೇಷ್ಠನು, ಅಪ್ರಮೇಯನಾದ ಮಹಾಬಾಹುವು. ಜನ್ಮವೆಂಬುದು ತನಗಿಲ್ಲದಿದ್ದರೂ ತನ್ನ ಸಂಕಲ್ಪದಂತೆ ಅವತರಿಸಿರುವನು. ದೇವತೆಗಳು ಸಹ ಕೃಷ್ಣನ ಕರ್ಮಗಳನ್ನು ಮೆಚ್ಚತಕ್ಕವರೇ. ಆತನಿಗೆ ತಿಳಿಯದುದಿಲ್ಲ. ಅತನು ಸಾಧಿಸಲಾಗದೆಂಬ ಕಾರ್ಯವೂ ಯಾವುದೂ ಇಲ್ಲ.

ಹೀಗೆಂಬುದಾಗಿ ಒಂದು ನಿಶ್ಚಿತವಾದ ಬುದ್ಧಿಯನ್ನು ಮಾಡಿಕೊಂಡನು. ಗುರುವಿನಲ್ಲಿಗೆ ಹೇಗೋ ಹಾಗೆ ಶ್ರೀಕೃಷ್ಣನಲ್ಲಿಗೆ ದೂತನೊಬ್ಬನನ್ನು ಒಡನೆಯೇ ಕಳುಹಿಸಿದನು.

ಆ ದೂತನಾದರೂ ಶೀಘ್ರಗಾಮಿಯದ ರಥವೊಂದರಲ್ಲಿ ಸಾಗಿ ಯಾದವರಲ್ಲಿಗೆ ಹೋದನು. ದ್ವಾರಕಾವಾಸಿಯಾದ ಕೃಷ್ಣನನ್ನು ಭೇಟಿಮಾಡಿದನು. ಕೈಜೋಡಿಸಿ ನಮ್ರನಾಗಿ ಶ್ರೀಕೃಷ್ಣನಲ್ಲಿ ಈ ಪ್ರಕಾರವಾಗಿ ನಿವೇದಿಸಿಕೊಂಡನು: "ಹೃಷೀಕೇಶನೇ, ಧೌಮ್ಯ, ವ್ಯಾಸ ಮುಂತಾದ ಮಹರ್ಷಿಗಳು, ಮತ್ತು ಪಾಂಚಾಲ-ಮಾತ್ಸ್ಯದೇಶಗಳ ರಾಜರುಗಳು, ಎಂದರೆ ದ್ರುಪದ-ವಿರಾಟರಾಜರು, ಹಾಗೂ ತನ್ನ ಭ್ರಾತೃಗಳು - ಇವರುಗಳೊಂದಿಗೆ ಯುಧಿಷ್ಠಿರನು ನಿನ್ನ ದರ್ಶನವನ್ನು ಬಯಸಲು ಇಷ್ಟಪಟ್ಟಿದ್ದಾನೆ."

ಸೂಚನೆ : 16/11/2025 ರಂದು ಈ ಲೇಖನವು  ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.