ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ ೪೨. ಸಾಧು ಜನ ಯಾರು? ಮತ್ತು ಅಧಮರು ಯಾರು?
ಸದಾಚಾರೀ. ದುರಾಚಾರೀ
ಸತ್ ಅಂದರೆ ಒಳ್ಳೆಯ ಆಚಾರವನ್ನು ಇಟ್ಟುಕೊಂಡವನೇ 'ಸದಾಚಾರಿ' ಎಂದು ಕರೆಸಿಕೊಳ್ಳುತ್ತಾನೆ. ಇದಕ್ಕೆ ವಿರುದ್ಧವಾದ ಆಚಾರ ಉಳ್ಳವನು ದುರಾಚಾರಿ ಎಂದು ಕರೆಸಿಕೊಳ್ಳುತ್ತಾನೆ. ಇಲ್ಲಿ ನಾವು ವಿವೇಚಿಸಬೇಕಾದ ವಿಷಯ ಎರಡು. ಒಂದನೆಯದಾಗಿ ಸತ್ ಎಂದರೆ ಏನು? ಮತ್ತು ಆಚಾರ ಎಂದರೆ ಏನು? ಎಂಬುದಾಗಿ. ಒಟ್ಟಾರೆ 'ಸದಾಚಾರ' ಎಂಬ ಸಂಗತಿಯನ್ನು ಯಾವನು ತನ್ನಲ್ಲಿ ಅಳವಡಿಸಿಕೊಂಡಿರುತ್ತಾನೋ, ಅವನು ಸದಾಚಾರಿಗಳು. ಹಾಗಾಗಿ ನಾವು 'ಸತ್' ಎಂದರೆ ಏನು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕಾಗಿದೆ.
'ಸತ್' ಎಂದರೆ 'ಅಸ್ತಿ ಇತಿ ಸತ್' ಎಂಬಂತೆ ಯಾವುದು ಇರುತ್ತದೆಯೋ ಅದು. ಅಂದರೆ ಯಾವುದು ನಿನ್ನೆಯ ದಿವವೂ ಇತ್ತು, ಈದಿನವೂ ಇದೆ, ನಾಳೆಯೂ ಇರುತ್ತದೆ ಎಂಬುದಕ್ಕೆ ವಿಷಯವಾಗುತ್ತದೆಯೋ ಅದು ತಾನೆ!. ಯಾವಾಗಲೂ ಅಸ್ತಿತ್ವವು ಇರುವಂತದ್ದು. ಅದು ತಾನೇ ಸತ್ತಾಗಿರುವ ವಿಷಯ! ಇಂತಹ ಮೂರು ಕಾಲದಲ್ಲೂ ತನ್ನ ಅಸ್ಮಿತೆಯನ್ನು ತೋರುವ ವಿಷಯ ಯಾವುದು? ಎಂದರೆ ಅದೇ ಸತ್. ನಾವು ಕಾಣುವ ಯಾವುದೇ ವಿಷಯವು ಇಂದಿರುವುದು ನಾಳೆ ಇರದು, ನಿನ್ನೆ ಕಂಡಿದ್ದು ಇವತ್ತು ಕಾಣದು. ಹೀಗೆ ಇವೆಲ್ಲವೂ ಯಾವುದೋ ಕಾಲದ ಪರಿಮಿತಿಯಲ್ಲಿ ಇದೆ ಮತ್ತು ಇಲ್ಲ ಎಂಬುದಕ್ಕೆ ವಿಷಯವಾಗುತ್ತವೆ. ಸತ್, ಚಿತ್, ಆನಂದ ರೂಪವಾಗಿರುವ ಪರಬ್ರಹ್ಮ ಎಂಬುದಾಗಿ ಉಪನಿಷತ್ತುಗಳೆಲ್ಲವೂ ಯಾವುದನ್ನು ಸಾಗುತ್ತವೆಯೋ ಅದೇ ಸತ್ಯ, ಅದೇ ಸತ್. ಆದುದರಿಂದ ಆ ಪರಬ್ರಹ್ಮ ವಸ್ತು ಮಾತ್ರ ಸತ್ತಾಗಿದೆ. ಆ ಸತ್ಯದ ಬಗ್ಗೆ ಅಥವಾ ಅದನ್ನು ಅರಿಯುವ ಬಗ್ಗೆ ಅಥವಾ ಅದನ್ನು ಸೇರುವ ಬಗೆಯಲ್ಲಿ ಯಾವನು ತನ್ನ ನಡೆ-ನುಡಿ, ಆಚಾರ-ವಿಚಾರಗಳನ್ನು ಇಟ್ಟುಕೊಳ್ಳುತ್ತಾನೋ ಅವನನ್ನು 'ಸದಾಚಾರಿ' ಎಂಬುದಾಗಿ ಕರೆಯಬಹುದು. ಅವನು ಮಾಡುವ ಆಚಾರ ವಿಚಾರಗಳೆಲ್ಲವೂ ಸತ್ಯದ ಕಡೆಗೆ, ಭಗವಂತನ ಕಡೆಗೆ ಅವನನ್ನು ಕರೆದುಕೊಂಡು ಹೋಗುತ್ತದೆ ಎಂಬುದಾಗಿ ತಾತ್ಪರ್ಯ.
'ಆಚಾರ' ಎಂದರೆ 'ಆ-ಸಮಂತಾತ್' ಸತ್ಯದವರೆಗೆ ಅಂದರೆ ಗುರಿ ಮುಟ್ಟುವ ತನಕ ಯಾವುದು ನಮ್ಮನ್ನು ಕರೆದುಕೊಂಡು ಹೋಗುತ್ತದೆಯೋ ಅದು ತಾನೇ!. ಅಂತಹದನ್ನು ಮಾತ್ರ ಆಚಾರ ಎಂಬುದಾಗಿ ಕರೆಯಲಾಗುತ್ತದೆ. ಅಂತಹ ಆಚಾರವನ್ನು ಇಟ್ಟುಕೊಂಡ ಆಚಾರ್ಯರು ಮಾತ್ರ ಭಗವಂತನ ಕಡೆಗೆ ನಮ್ಮನ್ನು ಕರೆದೊಯ್ಯಲು ಸಾಧ್ಯ. ಇಂತಹ ಆಚಾರ ಇಟ್ಟುಕೊಂಡವನು ಸಜ್ಜನ, ಸತ್ಪುರುಷ ಮೊದಲಾದ ಪದಗಳಿಂದ ಕರೆಸಿಕೊಳ್ಳುತ್ತಾನೆ. ಅವನ ಜೀವನವು ಅದಕ್ಕನುಗುಣವಾಗಿ ಇರುತ್ತದೆ. ಪೂರಕವಾದದ್ದನ್ನು ಬಿಟ್ಟು, ಇನ್ನಾವ ಕ್ರಿಯೆಯೂ ಅವನಲ್ಲಿ ಕಾಣದು. ಹಾಗಾಗಿ ಅವನನ್ನು ನಾವು ಸಜ್ಜನ, ಸತ್ಪುರುಷ ಇತ್ಯಾದಿಯಾಗಿ ಆ ಸತ್ ಎಂಬ ನಿತ್ಯ ಅಸ್ತಿತ್ವದ ಭಗವಂತನ ವಿಶೇಷಣವಾಗಿ ನಾವು ಕರೆಯುತ್ತೇವೆ. ಇಂತಹವನನ್ನೇ ಸಜ್ಜನ ಅಥವಾ ಸಾಧು ಎಂಬುದಾಗಿ ಹೇಳಬಹುದು.
ಇದಕ್ಕೆ ವಿರುದ್ಧವಾದ ನಡೆಯುಳ್ಳವನನ್ನು ದುರಾಚಾರಿ, ಅಧಮ, ದುಷ್ಟ ಹೀಗೆಲ್ಲ ಹೇಳಬಹುದು. ಆತನ ಜೀವನವ್ಯಾಪಾರವೆಲ್ಲವೂ ಭಗವಂತನ ನಡೆಗೆ ವಿರುದ್ಧವಾಗಿಯೇ ಇರುತ್ತವೆ. ಹಾಗಾಗಿ ಅವೆಲ್ಲವೂ 'ದುರಾಚಾರ' ಎಂಬುದಾಗಿ ಕರೆಸಿಕೊಳ್ಳುತ್ತವೆ. ಆದ್ದರಿಂದ ಅವನನ್ನು 'ದುರ್ಜನ ಅಥವಾ ಅಸಾಧು' ಎಂಬುದಾಗಿ ಕರೆಯಲಾಗುತ್ತದೆ.