Sunday, November 16, 2025

ಅಷ್ಟಾಕ್ಷರೀ - 79 ಆತ್ಮಾ ಗುಹಾಯಾಂ ನಿಹಿತಃ (Astakshari 79)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಪ್ರಪಂಚದಲ್ಲಿ ನಾನಾ ತೆರನಾದ ಜನರನ್ನು ನೋಡುತ್ತೇವೆ. ಅವರಲ್ಲಿ ಮೊತ್ತಮೊದಲು ತೋರುವುದೇ ವೇಷಭೂಷಣ-ವೈಚಿತ್ರ್ಯ; ಆಮೇಲೆ ಮೈಬಣ್ಣ-ಮೈಕಟ್ಟುಗಳಲ್ಲಿನ ಭೇದ. ಒಂದೇ ದೇಶದಲ್ಲಿಯ ಮಂದಿಯಲ್ಲೇ ಒಬ್ಬರಂತಿನ್ನೊಬ್ಬರಿಲ್ಲ. ಒಬ್ಬರ ರುಚಿ-ಸಾಮರ್ಥ್ಯಗಳು ಮತ್ತೊಬ್ಬರಲ್ಲಿಲ್ಲ. ಹೇಗೆ ಒಂದೇ ಮರದ ಎಲೆಗಳೆಲ್ಲ ಒಂದೇ ತೆರನೋ, ಆದರೂ ಒಂದರ ಅಚ್ಚೇ ಮತ್ತೊಂದಲ್ಲವೋ, ಹಾಗೆಯೇ ಮನುಷ್ಯರಲ್ಲೂ.

ಇಷ್ಟೊಂದು ವೈವಿಧ್ಯವೇ ಕಂಡರೂ ಎಲ್ಲರ ಗುರಿಯೂ ಒಂದೇ - ಎನ್ನಬಹುದು. ಒಬ್ಬೊಬ್ಬರ ದಿಕ್ಕು-ನಡೆ-ವೇಗಗಳೂ ಬೇರೆಬೇರೆಯೆಂದಾದರೂ ಎಲ್ಲರಿಗೂ ಒಂದೇ ಲಕ್ಷ್ಯ: ಸುಖ ಬೇಕು, ದುಃಖ ಬೇಡ - ಎನ್ನುವುದು. ಹೀಗೆ ಎಲ್ಲರೂ ಸುಖಾರ್ಥಿಗಳೇ.

ಹಾಗಾದರೆ ಸುಖವೆಲ್ಲಿರುವುದು? ಕೆಲವರಿಗೆ ಒಳ್ಳೆಯ ಭಕ್ಷ್ಯ-ಭೋಜ್ಯಗಳಲ್ಲಿ, ಕೆಲವರಿಗೆ ಊರೂರು ತಿರುಗುವುದರಲ್ಲಿ, ಮತ್ತೊಬ್ಬರಿಗೆ ತೀವ್ರಧನಾರ್ಜನೆಯಲ್ಲಿ. ಸುಖವೆಂದರೇನೆಂಬುದರ ಕಲ್ಪನೆಗಳೇ ಎಷ್ಟೆಷ್ಟು ಭಿನ್ನ! ಅಂತೆಯೇ ಅದರ ಸಾಧನೆಗಾಗಿನ ಚಟುವಟಿಕೆಗಳೂ ಎಷ್ಟು ಭಿನ್ನ!

ಈ ವಿಷಯದಲ್ಲಿ ನಮ್ಮ ಋಷಿಗಳ ಚಿಂತನದಲ್ಲಿ ಏನಾದರೂ ವಿಶೇಷವಿರುವುದೇ? - ಎಂಬುದಿಲ್ಲಿ ಜಿಜ್ಞಾಸ್ಯವಾದದ್ದು; ಜಿಜ್ಞಾಸ್ಯವೆಂದರೆ ಯಾವುದರ ಬಗ್ಗೆ ಕುತೂಹಲವು ಯೋಗ್ಯವೋ ಅದು; ಅರಿತುಕೊಳ್ಳಲು ಅರ್ಹವಾದದ್ದು. ಬಹುಮಂದಿಗೆ ಖಾನಾ-ಪೀನಾ-ಸೋನಾಗಳಲ್ಲೇ ತೃಪ್ತಿ: ತಿನ್ನು-ಕುಡಿ-ಮಲಗುಗಳೇ ಅವರ ಜೀವನಚಕ್ರ. ಇತರರಿಗೆ ದೇಶ ಸುತ್ತುವುದು, ಕಲೆಗಳನ್ನು ಸಾಧಿಸುವುದು, ಅಥವಾ ಬೌದ್ಧಿಕವಾದ ಸಾಧನೆಗಳಲ್ಲಿ ರುಚಿ.

ಇವೆಲ್ಲವನ್ನೂ ಮಾಡಿದರೂ, ಸ್ವ-ಜೀವನವನ್ನು ಪರೀಕ್ಷಿಸಿಕೊಳ್ಳದಿದ್ದರೆ ಪ್ರಯೋಜನವೇನು? - ಎನ್ನುವವರೂ ಉಂಟು. ಸಾಕ್ರಟೀಸನ ಉದ್ಗಾರವೂ ಅದೇ ಆಗಿತ್ತಲ್ಲವೇ?  ಎಂದೇ ಅತ್ಯಂತ ಮುಖ್ಯವಾದುದು ಆತ್ಮನನ್ನು ಕುರಿತಾದ ಅರಿವು - ಎನ್ನುತ್ತದೆ ಭಾರತ ಪರಂಪರೆ. ಆತ್ಮಜ್ಞಾನವನ್ನು ಸಂಪಾದಿಸಿಕೊಂಡೆವೋ ಜೀವನವು ಧನ್ಯ; ಇಲ್ಲದಿದ್ದರಿಲ್ಲ – ಎಂದು ನಮ್ಮ ಸಂತರ, ಜ್ಞಾನಿಗಳ ಸಾಹಿತ್ಯಗಳೆಲ್ಲಾ ಸಾರಿರುವುವು.

ಹಾಗಾದರೆ ಆತ್ಮನನ್ನು ಎಲ್ಲಿ ಹುಡುಕುವುದು? ಅದಕ್ಕೆ ಉತ್ತರವನ್ನು ನಮ್ಮ ಉಪನಿಷತ್ತುಗಳಿತ್ತಿವೆ: ಆತ್ಮ/ಪರಮಾತ್ಮನಿರುವುದು ಗುಹೆಯಲ್ಲಿ (ಆತ್ಮಾ ಗುಹಾಯಾಂ ನಿಹಿತಃ). ಈ ಮಾತು ಶ್ವೇತಾಶ್ವತರೋಪನಿಷತ್ತಿನಲ್ಲಿ ಬಂದಿದೆಯಾದರೂ ಕಠ-ಮುಂಡಕ-ತೈತ್ತಿರೀಯ-ಮಹಾನಾರಾಯಣಗಳೆಂಬ ಉಪನಿಷತ್ತುಗಳಲ್ಲೂ ಈ ಅಭಿಪ್ರಾಯವು ಬಂದಿರುವುದೇ.

ಅಲ್ಲಿಗೆ ಆತ್ಮನ ವಿಳಾಸ(ಅಡ್ರೆಸ್) ಸಿಕ್ಕಿದಂತಾಯಿತಲ್ಲವೇ? ಹಾಗಾದರೆ ಎಲ್ಲಿಯ ಗುಹೆಯದು? ಹಿಮಾಲಯವೇ? ಅಜಂತ-ಎಲ್ಲೋರಗಳೇ? ಯಾವುದನ್ನಾದರೂ "ಅದು ಗುಹೆಯಲ್ಲಿ ಅಡಗಿದೆ" ಎಂದರೆ, ಅದು ಬಹುಮಂದಿಗೆ ದೊರೆಯದು - ಎಂದೇ ಅರ್ಥ. ಗುಹೆಯಲ್ಲಿರುವುದಿರಲಿ, ಇಲ್ಲೊಂದು ಗುಹೆಯಿರುವುದೆಂಬುದೂ ಎಷ್ಟೋ ವೇಳೆ ಅನೇಕಮಂದಿಯ ಅರಿವಿಗೆ ಸಹ ಬರದೇ ಉಳಿಯಬಹುದು!

ಗುಹಾ ಎಂಬ ಪದವು ಬಂದಿರುವುದು ಗುಹ್ ಎಂಬ ಧಾತುವಿನಿಂದ. ಅದಕ್ಕೆ ಸಂವರಣ ಅಥವಾ ಮುಚ್ಚಿಡುವುದೆಂಬುದೇ ಅರ್ಥ. ಹೀಗಾಗಿ, ಪರವಸ್ತುವನ್ನು ತನ್ನಲ್ಲಿ ಅಡಗಿಸಿಕೊಂಡಿರುವುದೇ ಈ ಗುಹೆ. "ಗುಹಾ-ನಿಹಿತ"ವೆಂದರೆ ಅತಿರಹಸ್ಯವೆಂದೇ ಅರ್ಥ. ಬಹಳ ಬೆಲೆಬಾಳುವ ಪದಾರ್ಥವನ್ನು ಹಿಂದೆ ಹೂತಿಡುವ ಕ್ರಮವಿತ್ತಲ್ಲವೇ? ಅಗೆಯುವಾಗ ನಿ-ಧಿಗಳು ದೊರೆತಿರುವುದುಂಟಲ್ಲವೇ? ಹಾಗೆಯೇ, ನಿ-ಹಿತವೆಂದರೆ ಕೆಳಗೆ/ಒಳಗೆ ಇಟ್ಟಿರುವುದೇ.

ಆದರೆ ನಮ್ಮ ಅದೃಷ್ಟವೆಂದರೆ, ಅದು ಯಾವುದೋ ತಲುಪಲಾಗದ ದೂರದ ಗುಹೆಯಲ್ಲ; ಹತ್ತಿರವೇ ಇರುವ ಗುಹೆ. ಬಹಳ ಹತ್ತಿರವೇ ಇರುವಂತಹುದು. ಇದಕ್ಕಿಂತಲೂ ಹತ್ತಿರವೆಂಬುದೇ ಇರಲು ಸಾಧ್ಯವಿಲ್ಲವೆನ್ನುವಂತಹ ಗುಹೆ: ಹೃದಯ-ಗುಹೆಯೇ ಅದು.

ಯಾರ ಹೃದಯದಲ್ಲಿಯದು? ಎಲ್ಲರ ಹೃದಯದಲ್ಲೂ! ಬ್ರಹ್ಮಾದಿ-ಸ್ತಂಬಪರ್ಯಂತವಾದ (ಎಂದರೆ, ಬ್ರಹ್ಮನಿಂದ ಹುಲ್ಲಿನವರೆಗಿನ) ಸಮಸ್ತ-ಪ್ರಾಣಿಗಳ ಹೃದಯದಲ್ಲೂ ಅದಿರುವುದೇ!

ಸೃಷ್ಟಿ-ಕಾರುಣ್ಯವೆಂದರೆ ಇದೇ ಅಲ್ಲವೇ?: ಅತ್ಯಂತಗಹನವೆನಿಸುವಂತಹುದು ಹೀಗೆ ಅತ್ಯಂತನಿಕಟವಾಗಿಯೇ ಇರುವಂತಹುದು! ಭಗವಂತನೆಂಬ ನಿಧಿಯು ಸರ್ವಪ್ರಾಣಿ-ಹೃದಯಗರ್ಭದಲ್ಲೂ ನೆಲೆಸಿದೆ! ಇಲ್ಲಿ ಉಚ್ಚ-ನೀಚರೆಂಬ ಭೇದಭಾವವಿಲ್ಲ, ಬಡವ-ಬಲ್ಲಿದರೆಂಬ ವಿಭಾಗವೂ ನಡೆಯುವುದಲ್ಲ.

ನಿಧಿಯನ್ನು ಒಳಗೆ ಅಡಗಿಸಿಡುವರಲ್ಲವೆ? ಹಾಗೆಯೇ ನಮ್ಮೆಲ್ಲರ ನಿಧಿಯಾದ ಭಗವಂತನು ಹೀಗೆ ತನ್ನನ್ನೇ ಮುಚ್ಚಿಟ್ಟುಕೊಂಡಿರುವನು.

ಆದರೂ ಎಲ್ಲರೂ ಆತನನ್ನು ಕಂಡುಕೊಳ್ಳಬಹುದು! ಅದಕ್ಕೆ ಸಾಧನವಾದದ್ದು ಅಧ್ಯಾತ್ಮ-ಯೋಗ. ಅರ್ಥಾತ್, ಮನಸ್ಸನ್ನು ಒಳಮುಖವಾಗಿ ಹರಿಸುವುದು.

ಯೋಗಿವರೇಣ್ಯರಾದ ಶ್ರೀರಂಗಮಹಾಗುರುಗಳು ಇಲ್ಲೊಂದು ಮುಖ್ಯ-ಸೂಕ್ಷ್ಮವಿಚಾರವನ್ನೂ ತಿಳಿಸಿರುವರು."ಇಲ್ಲಿ ಗುಹೆಯೆಂದರೆ ಹೃದಯಗುಹೆಯು ಮಾತ್ರವಲ್ಲದೆ ಬುದ್ಧಿಗುಹೆಯೂ ಆಗಬಹುದು. ಬುದ್ಧಿಗುಹೆಯೆಂಬುದು ಮಹಾಮಸ್ತಿಷ್ಕವೆಂದು ಕರೆಸಿಕೊಳ್ಳುವ ಪರಮೋರ್ಧ್ವಸ್ಥಾನವಾಗಿರುವುದು." – ಎಂದು.

ಭಗವಂತನು ಎಲ್ಲೆಡೆ ಇರುವನೆಂದು ಹೇಳುವಲ್ಲಿ, ಈ ಎರಡು ಸ್ಥಾನಗಳನ್ನು ಬೊಟ್ಟುಮಾಡಿ ತೋರಿಸುವುದು, ಭಗವಂತನಿಗೆ ಅಪಚಾರ ಮಾಡಿದಂತಲ್ಲವೇ? – ಎಂದೆನಿಸಬಹುದು. ಇಲ್ಲೇನೂ ವಿರೋಧವಿಲ್ಲ. ಆತ್ಮಸಾಧಕರಿಗೆ ತಮ್ಮಲ್ಲೇ ಈ ಎರಡು ಎಡೆಗಳಲ್ಲಿ ಭಗವದ್ವಸ್ತುವು ವಿಶೇಷವಾಗಿ ಅನುಭವಗೋಚರವಾಗುವ ಕಾರಣ ಹೀಗೆ ಹೇಳಲಾಗುವುದು. ಇದೂ ಯೋಗಜ್ಞರಾದ ಅವರ ಅನುಭವ-ಸಿದ್ಧ-ವಿವರಣೆಯೇ.

ಸೂಚನೆ: 15/11//2025 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.