Sunday, November 16, 2025

ಕೃಷ್ಣಕರ್ಣಾಮೃತ 82 ಗೋ-ಗೋಪ-ಗೋಪಿಯರ ನಡುವೆ ನಿಲ್ಲುವ ಪ್ರಭುವು ಪೊರೆಯಲಿ (Krishakarnamrta 82)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಕೃಷ್ಣನು ನಮ್ಮನ್ನು ಕಾಪಾಡಲಿ, ಎನ್ನುತ್ತದೆ ಈ ಶ್ಲೋಕ. ಎಂತಹ ಕೃಷ್ಣನಿವನು? ಗೋಪಿಕೆಯರು ಯಾರನ್ನು ಕುರಿತು ಹಾಡುವರೋ ಅಂತಹ ಕೃಷ್ಣನು.

ಯಾವಾಗ ಹಾಡುವರು ಆ ಗೋಪಿಕೆಯರು? ಹೇಗೆ ಹಾಡುವರು? ಅವರಾದರೂ ಎಂತಹವರು? - ಎಂಬುದನ್ನೆಲ್ಲಾ ಈ ಶ್ಲೋಕವು ಮಧುರವಾಗಿ ಚಿತ್ರಿಸುತ್ತದೆ.

ಕ್ಷಣದಾ ಎಂದರೆ ರಾತ್ರಿ. ಅದರ ಅವಸಾನಸಮಯವೆಂದರೆ ಇರುಳು ಕಳೆಯುವ ವೇಳೆ. ಅರ್ಥಾತ್ ಉಷಃಕಾಲ. ಬೆಳಗಿನ ಜಾವವೆಂದರೆ ಆಗಿನ ಕಾಲದ ನಾರಿಯರು ಮೊಸರು ಕಡೆಯುತ್ತಿದ್ದ ಸಮಯ. ಗೋಕುಲದ ಗೋಪಿಯರೂ ಇಲ್ಲಿ ಅದನ್ನೇ ಮಾಡುತ್ತಿರುವರು.

ಮೊಸರು ಕಡೆಯುವಾಗ ಕೈಗಳ ಚಲನೆಯು ಆಗುತ್ತಿರುವುದಷ್ಟೆ? ಬೆಣ್ಣೆ ಬರುವ ತನಕ ಕಡೆಯುತ್ತಿರಬೇಕಲ್ಲವೆ? ಅದಕ್ಕೊಂದಿಷ್ಟು ಸಮಯ ಹಿಡಿಯುತ್ತದೆ. ಕಡೆಯುವಾಗ ಅವರ ಕೈಗಳು ವೇಗದಿಂದ ಹಿಂದೆಯೂ ಮುಂದೆಯೂ ಹೋಗುತ್ತಿರಲು, ಅವರ ಪಾಣಿ-ಕಂಕಣಗಳ ಝಣತ್ಕಾರವೂ ಆಗುತ್ತಿರುತ್ತದೆ. ಅರ್ಥಾತ್, ಎರಡೂ ಕೈಗಳ ಬಳೆಗಳ ಸದ್ದೂ ಆಗುತ್ತಿರುತ್ತದೆ. ಈ ಜವದ ಸದ್ದಿನಲ್ಲೇ ತಾಳದ ಗತಿಯೂ ಕೂಡಿದ್ದು, ಅವರು ಆನಂದದಿಂದ ಹಾಡುವ ಹಾಡಿಗೆ ಜೊತೆಯಾದ ಲಯವಾಗಿ ಅದು ರೂಪುಗೊಂಡಿರುತ್ತದೆ.

ಮೊಸರು ಕಡೆಯಲು ಎರಡೂ ಕೈಗಳ ಬಳಕೆಯಾಗುವುದಲ್ಲವೆ? ಮಂದಗತಿಯಿಂದ ಕಡೆದರೆ ಬೆಣ್ಣೆ ಬರುವುದಿಲ್ಲವಾಗಿ, ವೇಗದಿಂದಲೇ ಕಡೆಯಬೇಕಾಗುತ್ತದೆ. ಮಧ್ಯೆ ನಿಲ್ಲಿಸುವಂತೆಯೂ ಇಲ್ಲ. ಏಕೆಂದರೆ ಒಂದೇ ಸಮನೆ ಕಡೆದರೆ ಬರುವಂತೆ, ಬಿಟ್ಟು ಬಿಟ್ಟು ಕಡೆದರೆ ಬರುವುದಲ್ಲ, ಬೆಣ್ಣೆ.

ಈ ಪರಿಜ್ಞಾನವಿರುವುದರಿಂದ ಬಿರುಸಾಗಿಯೇ ಕಡೆಯುವಿಕೆಯು ನಡೆಯುತ್ತಿರಲು, ಅವರ ಸೆರಗೂ ಒಂದಿಷ್ಟು ಜಾರಿರುವುದುಂಟು. ಆದರೆ ಇತ್ತ ಕಡೆಯುವುದರಲ್ಲೂ ಅತ್ತ ಗಾನದಲ್ಲೂ ಮೈಮರೆತಿರುವ ಅವರಿಗೆ ಸೆರಗು ಜಾರಿರುವ ಪರಿಜ್ಞಾನವೂ ಇರುವುದಿಲ್ಲ.

ಬೆಳಗಿನ ಜಾವ ಹೀಗೆ ಹಾಡಿಕೊಂಡು ಕೆಲಸಮಾಡಿಕೊಳ್ಳುವಾಗ ಆಗಾಗ ಅವರ ದಂತಗಳೂ ತೋರತಕ್ಕವೇ. ಅವರ ದಂತಕಾಂತಿಯೂ ಕಮನೀಯವೇ. ಎಷ್ಟು ಕಮನೀಯ? ಆಕಾಶದ ಚಂದ್ರನ ಕಾಂತಿಯಲ್ಲವೇ ಹೊಳಪಿಗೆ ಪ್ರಸಿದ್ಧ? ಆ ಇಂದುಪ್ರಭೆಯನ್ನೂ ಮೀರಿಸುವುದು ಇವರ ದಂತಕಾಂತಿಯ ನಿವಹ. ನಿವಹವೆಂದರೆ ಸಮೂಹ.

ಮುಖ್ಯವಾಗಿ ಅವರು ಹಾಡುವುದಾದರೂ ಯಾವುದನ್ನು? ಮತ್ತೇನು, ಶ್ರೀಕೃಷ್ಣನನ್ನು ಕುರಿತಾಗಿಯೇ. ಆತನ ಲೀಲೆಗಳನ್ನು ಕುರಿತಾಗಿಯೇ. ಈ ಪರಿಯಲ್ಲಿ ಯಾರನ್ನು ಕುರಿತಾಗಿ ತಮ್ಮ ಮುಗ್ಧವೂ ಮಧುರವೂ ಆದ ಮನಸ್ಸಿನಿಂದ ಮೈಮರೆತು ಗೋಕುಲದ ಅಂಗನೆಯರು ಸಾನಂದರಾಗಿ ಹಾಡಿಕೊಳ್ಳುವರೋ ಅಂತಹ ಪೀತಾಂಬರನೆನಿಸುವ ಶ್ರೀಕೃಷ್ಣನು ನಮ್ಮನ್ನು ಸದಾ ಪೊರೆಯಲಿ - ಎನ್ನುತ್ತಾನೆ, ಲೀಲಾಶುಕ.

ಗಾಯಂತಿ ಕ್ಷಣದಾವಸಾನ-ಸಮಯೇ ಸಾನಂದಂ ಇಂದುಪ್ರಭಾಃ/
ರುಂಧತ್ಯೋ ನಿಜ-ದಂತ-ಕಾಂತಿ-ನಿವಹೈಃ ಗೋಪಾಂಗನಾಃ ಗೋಕುಲೇ |
ಮಥ್ನತ್ಯೋ ದಧಿ-ಪಾಣಿ-ಕಂಕಣ-ಝಣತ್ಕಾರಾನುಕಾರಂ ಜವಾತ್/
ವ್ಯಾವಲ್ಗದ್-ವಸನಾಂಚಲಾಃ ಯಂ ಅನಿಶಂ ಪೀತಾಂಬರೋಽವ್ಯಾತ್ ಸ ನಃ ||

***

ಕೃಷ್ಣನಲ್ಲೊಂದು ಪ್ರಾರ್ಥನೆ, ಲೀಲಾಶುಕನದು. ನನ್ನ ಮಾತು ಹೀಗಾಗಲಿ, ನನ್ನ ಚಿತ್ತವು ಹೀಗಾಗಲಿ - ಎಂಬುದಾಗಿ. ವಾಙ್ಮನಸಗಳು ಹೇಗಾಗಬೇಕೆಂಬುದಾಗಿ ಲೀಲಾಶುಕನ ಪ್ರಾರ್ಥನೆ? ಎರಡೂ ವೃದ್ಧಿಗೊಳ್ಳಲಿ - ಎಂಬುದಾಗಿ.

ಕೃಷ್ಣನ ವೈಭವವೆಂಬುದು ಅದ್ಭುತವಾದದ್ದು. ಆತನ ರೂಪವೇನು, ಲಾವಣ್ಯವೇನು, ವಿಲಾಸವೇನು!

ಆತನನ್ನು ಮಾತಿನಲ್ಲಿ ಹಿಡಿದಿಡಲಾಗುವುದೇ? ಆದರೂ ನಿನ್ನ ಆ ಎಲ್ಲ ವೈಭವವನ್ನು ವರ್ಣಿಸುವುದರಲ್ಲಿ ನನ್ನ ಮಾತು ವರ್ಧಿಸಲಿ.  ಹೇಗೆ? ಮಾಧುರ್ಯದಿಂದ ವಿಜೃಂಭಿಸಲಿ. ಮಾತು ಸುಮ್ಮನೆ ಅತಿಯಾಗುವುದಲ್ಲ. ಮಾತು ಬೆಳೆಯಲಿ, ಆದರೆ ಅದು ಮಾಧುರ್ಯದಿಂದ ತುಂಬಿ ತುಳುಕಲಿ. ಕೃಷ್ಣನ ಮಾಧುರ್ಯಕ್ಕೆ ಮೋಸವಾಗಬಾರದಲ್ಲವೇ? ಎಂದೇ ಅದಕ್ಕೆ ತಕ್ಕಂತೆ ನನ್ನ ಮಾತಿನಲ್ಲೂ ಮಾಧುರ್ಯವು ತುಂಬಿ ಬರಲಿ.

ಇನ್ನು ಆತನ ಶೈಶವವಾದರೂ ಬಹು ಸೊಗಸಿನಿಂದ ಕೂಡಿರುವುದು. ಯೌವನದ ಎಳಸನ್ನೇ ಇಲ್ಲಿ ಶೈಶವವೆಂದಿರುವುದು. ಆ ಕುರಿತಾಗಿ ನೇತ್ರ-ಚಾಪಲ್ಯವಿರಬೇಕು. ಎಂದರೆ ಮತ್ತೆ ಮತ್ತೆ ಕಾಣುತ್ತಿರುವ ಬಯಕೆಯು ಉಳಿದೇ ಇರಬೇಕು, ಬೆಳೆಯುತ್ತಲೇ ಇರಬೇಕು. ಕೃಷ್ಣನ ಗುಣಗಾನವನ್ನು ಆಲಿಸಲು ಕರ್ಣ-ಚಾಪಲವಿರಬೇಕು. ಚಿತ್ತದಲ್ಲಿ ಆತನನ್ನು ಆಸ್ವಾದಿಸುವ ಚಿತ್ತ-ಚಾಪಲ್ಯವಿರಬೇಕು. ಒಮ್ಮೆ ಆಸ್ವಾದಿಸಿದಾಗ ಬಹಳವೇ ಸಂತೋಷವಾಗಿದ್ದು, ಮತ್ತೂ ಮತ್ತೆ ಮತ್ತೆ ಆಸ್ವಾದಿಸಬೇಕೆನ್ನುವ ಹಂಬಲಿಕೆಯೇ ಚಾಪಲ(ಲ್ಯ).

ನಿನ್ನನ್ನು ಕುರಿತಾದ ಆ ಚಾಪಲ್ಯವು ವರ್ಧಿಸುತ್ತಿರಲಿ - ಎಂದಿಲ್ಲಿ ಪ್ರಾರ್ಥಿಸಿದೆ. ನಿನ್ನ ಆ ರೂಪವನ್ನು ಕುರಿತಾಗಿ ನನ್ನ ಉತ್ಕಂಠೆಯು - ಎಂದು ಪಡೆದೇನೋ ನಿನ್ನ ದರ್ಶನವನ್ನು, ಎನ್ನುವ ಆ ಚಿಂತೆಯು ವರ್ಧಿಸಲಿ.

ಶ್ಲೋಕದ ಎರಡು ಅರ್ಧಗಳ ಪದಗುಂಫನದಲ್ಲಿಯೇ ಒಂದು ವಿಶೇಷವಿದೆ. ೩+೪+೨+ (೨)+೩ ಎಂಬಂತೆ ಅಕ್ಷರಗಳ ಜೋಡಣೆಯಿದೆ. ಪೂರ್ವಾರ್ಧವು ಉತ್ತರಾಧವನ್ನು ಪ್ರತಿಫಲಿಸುವಂತಿದೆ.

ಮಾಧುರ್ಯೇಣ ವಿಜೃಂಭಂತಾಂ/ ವಚೋ ನಸ್ತವ ವೈಭವೇ |
ಚಾಪಲ್ಯೇನ ವಿವರ್ಧಂತಾಂ/ ಚಿಂತಾ ನಸ್ತವ ಶೈಶವೇ ||

ಪೂರ್ವಾರ್ಧ-ಉತ್ತರಾರ್ಧಗಳು ಒಂದಕ್ಕೊಂದು ಪ್ರತಿಬಿಂಬದಂತೆ ಇವೆ. ಮಾತು-ಮನಸ್ಸುಗಳಲ್ಲಿ ಒಂದೇ ಪರತತ್ತ್ವದ ಪ್ರತಿಫಲನವನ್ನು ಬಯಸಿದೆ.

***

ಗೋಪನನ್ನು ಭಜಿಸುತ್ತೇನೆ – ಎನ್ನುತ್ತಾನೆ, ಲೀಲಾಶುಕ. ಎಂತಹವನು ಈ ಗೋಪ? – ಎಂಬುದನ್ನು ನಾಲ್ಕು ಪಾದಗಳಲ್ಲಿಯ ನಾಲ್ಕು ವಿಶೇಷಣಗಳಿಂದ ತಿಳಿಯಪಡಿಸುತ್ತಾನೆ.

ಮೊದಲನೆಯದಾಗಿ, ಆತನಿರುವುದು ಮಂದಾರದ ಬುಡದಲ್ಲಿ. ಮಂದಾರವು ದೇವವೃಕ್ಷವಷ್ಟೆ? ಹೀಗೆ, ಕೇಳಿದ್ದನ್ನೆಲ್ಲಾ ಕೊಡುವ ಕಲ್ಪತರುವಿನ ಕೆಳಗೇ ಶ್ರೀಕೃಷ್ಣನಿರುವುದು. ಜೊತೆಗೆ ಮದನನಂತೆ ಅಭಿರಾಮನಾಗಿದ್ದಾನೆ, ಎಂದರೆ ಆಕರ್ಷಕನಾಗಿದ್ದಾನೆ.

ಎರಡನೆಯದಾಗಿ, ಬಿಂಬವೆಂಬ ಫಲದಂತೆ, ಎಂದರೆ ತೊಂಡೇಹಣ್ಣಿನಂತೆ, ಇರುವ ತುಟಿ ಆತನದು. ಅಲ್ಲಿಟ್ಟಿರುವ ಕೊಳಲಲ್ಲಿ ಆತನ ತುಟಿಯುಸಿರು ತುಂಬಿದೆ, ನಾದವನ್ನು ಹೊಮ್ಮಿಸಿದೆ. ಹೀಗಾಗಿ, ಕೆಂದುಟಿ-ಇನಿದನಿಗಳಿಂದ ಆಕರ್ಷಕನಾಗಿದ್ದಾನೆ – ಕಣ್ಣು-ಕಿವಿಗಳಿಗೆ ಅಚ್ಚುಮೆಚ್ಚಾಗಿದ್ದಾನೆ, ಶ್ರೀಕೃಷ್ಣ.

ಮೂರನೆಯದಾಗಿ, ಆತನ ಸುತ್ತ ಆತನ ಆತ್ಮೀಯರು ನೆರೆದಿದ್ದಾರೆ. ಯಾರವನ ಆತ್ಮೀಯರು?: ಗೋವುಗಳು, ಗೋಪಿಯರು, ಹಾಗೂ ಗೋಪರು. ಹೀಗೆ, ಗೋಕುಲದ ಮಂದಿ, ಗೋಕುಲದ ಮಂದೆ - ಇವುಗಳ ನಡುವಿನಲ್ಲಿ ನಿಂತಿದ್ದಾನೆ, ಕೃಷ್ಣ.

ಕೊನೆಯದಾಗಿ, ಆತನು ಗೋಕುಲಕ್ಕೇ ಪೂರ್ಣಚಂದ್ರನಂತಿದ್ದಾನೆ. ಪೂರ್ಣೇಂದುವಿಗಿಂತಲೂ ಸುಂದರವಾದುದುಂಟೇ? ಹೀಗಾಗಿ, ಎಲ್ಲರಿಗಿಂತಲೂ ಸುಂದರನಾದವನು ಗೊಲ್ಲರ ನಡುವಿನಲ್ಲಿ ನಿಂತಿದ್ದಾನೆ.

ಇಂತಹ ಗೋಪನನ್ನು ಭಜಿಸುತ್ತೇನೆ – ಎನ್ನುತ್ತಾನೆ, ಕವಿ.

ವಾಸ್ತವವಾಗಿ, ಬರೀ ಗೊಲ್ಲನೊಬ್ಬನ ಉಪಾಸನೆಯಲ್ಲ, ಇದು. ಯಾವನು ಕಾಪಾಡುತ್ತಾನೋ ಆತನನ್ನೇ ಗೋಪನೆನ್ನುವುದು. ಗೋಪಾಯತಿ – ಇತಿ ಗೋಪಃ – ಎಂದು ಅದರ ವ್ಯುತ್ಪತ್ತಿ. ಬರೀ ಗೊಲ್ಲನೆನ್ನಲೂ  ಗೋಪನೆನ್ನುವುದುಂಟು. ಹಸುಗಳನ್ನು ಕಾಯುವವನು (ಗಾಃ ಪಾತಿ – ಎಂಬ ವ್ಯುತ್ಪತ್ತಿ, ಈ ಅರ್ಥದಲ್ಲಿ). ಎರಡು ಅರ್ಥಗಳೂ ಯುಕ್ತವೇ.

ಹೀಗೆ ಸೌಂದರ್ಯವೇ ಸಕಲರೀತಿಗಳಲ್ಲೂ ಸಾಕಾರವಾಗಿರುವ ಮೂರ್ತಿಯೇ ಶ್ರೀಕೃಷ್ಣ. ಆತನನ್ನು ನಾ ಭಜಿಸುವೆ :

ಮಂದಾರಮೂಲೇ ಮದನಾಭಿರಾಮಂ

ಬಿಂಬಾಧರಾಪೂರಿತವೇಣುನಾದಮ್|

ಗೋ-ಗೋಪ-ಗೋಪೀ-ಜನ-ಮಧ್ಯ-ಸಂಸ್ಥಂ

ಗೋಪಂ ಭಜೇ ಗೋಕುಲ-ಪೂರ್ಣ-ಚಂದ್ರಮ್||

ಸೂಚನೆ : 15/11/2025 ರಂದು   ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.