ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ನಮ್ಮ ಜೀವನವು ಹೇಗಿರಬೇಕು? - ಎಂಬ ಪ್ರಶ್ನೆಗೆ ನಮ್ಮ ಪರಂಪರೆಯಲ್ಲಿ ಉತ್ತರವು ಎಲ್ಲಿ ಸಿಗುತ್ತದೆ? ಹೀಗೆಂದು ಯಾರಾದರೂ ಕೇಳಿದರೆ ಹೆಸರಿಸಬಹುದಾದ ಮೊಟ್ಟಮೊದಲ ಅಥವಾ ಅತಿಮುಖ್ಯ-ಗ್ರಂಥವೆಂದರೆ ಭಗವದ್ಗೀತೆಯೇ ಸರಿ. ಲೌಕಿಕಜೀವನ, ಆಧ್ಯಾತ್ಮಿಕಜೀವನ - ಇವೆರಡಕ್ಕೂ ಮಾರ್ಗದರ್ಶಿಯಾದುದು ಈ ಕೃತಿಯೇ.
ಗೀತೆಯು ಯೋಗಶಾಸ್ತ್ರ. ಎಂದೇ ಅದರ ಪ್ರತಿಯೊಂದು ಅಧ್ಯಾಯವೂ ಒಂದೊಂದು ಯೋಗವನ್ನು ಹೇಳುತ್ತದೆ. ಪ್ರಥಮಾಧ್ಯಾಯದಲ್ಲಿ ಅರ್ಜುನನಿಗುಂಟಾದ ಮಹಾಸಂದೇಹವನ್ನು ಹೇಳಿದೆ. ದ್ವಿತೀಯಾಧ್ಯಾಯದಿಂದಲೇ ಶ್ರೀಕೃಷ್ಣನ ಉಪದೇಶ ಆರಂಭವಾಗುವುದು. ಮರಣಸಂಬಂಧವಾದ ಪ್ರಶ್ನೆಯನ್ನು ಅರ್ಜುನನು ಕೇಳಿದನೆಂದೇ ಶ್ರೀಕೃಷ್ಣನ ಮಾತೂ ಜನನ-ಮರಣಗಳ ತತ್ತ್ವವನ್ನು ಬಿಡಿಸಿಹೇಳುವುದು. ಯೋಗವೇ ಯುಕ್ತವಾದ ಮಾರ್ಗವೆಂದು ಶ್ರೀಕೃಷ್ಣನು ಹೀಗೆ ಆರಂಭದಿಂದಲೇ ಹೇಳುವುದು.
ಹಾಗೆ ಯೋಗದಲ್ಲಿ ನೆಲೆಗೊಂಡ ಸ್ಥಿತಪ್ರಜ್ಞನ ಮಾತುಕತೆಗಳೂ ವರ್ತನೆಯೂ ಹೇಗಿರುವುದು? - ಎಂಬ ಅರ್ಜುನನ ಪ್ರಶ್ನೆಗಳಿಗೆ ಹದಿನೆಂಟು ಶ್ಲೋಕಗಳಲ್ಲಿ ಕೃಷ್ಣನುತ್ತರಿಸುವನು. ಇಡೀ ಗೀತೆಯ ಸಾರವೇ ಇವುಗಳಲ್ಲಿ ಮೂಡಿದೆಯೆಂದು ಹೇಳಿದರೂ ತಪ್ಪಾಗಲಾರದು.
ಕಾಮನೆಗಳನ್ನು ತೊರೆದವನು ದುಃಖಗಳಲ್ಲಿ ಕಂಗೆಡನು, ಸುಖಗಳಲ್ಲಿ ನಿಃಸ್ಪೃಹನಾಗಿರುವನು. ಕೂರ್ಮವು ತನ್ನ ಅಂಗಗಳನ್ನು ಒಳಕ್ಕೆ ಸೆಳೆದುಕೊಳ್ಳುವಂತೆ ತನ್ನ ಇಂದ್ರಿಯಗಳನ್ನು ಒಳಕ್ಕಾತನು ಸೆಳೆದುಕೊಳ್ಳಬಲ್ಲನು. ಬಲು ಜೋರು, ಇಂದ್ರಿಯಗಳ ಹೊರಸೆಳೆತ; ಮನಸ್ಸನ್ನೇ ಅವು ಅಪಹರಣಮಾಡಬಲ್ಲವು. ಇಂದ್ರಿಯಸಂಯಮವುಳ್ಳವನ ಪ್ರಜ್ಞೆಯೇ ಪ್ರತಿಷ್ಠಿತವಾಗಿರುವುದು. ಇಂದ್ರಿಯಸುಖಗಳತ್ತ ಮನಸ್ಸು ಹರಿಯುತ್ತಿದ್ದಂತೆ, ಅವುಗಳಲ್ಲಿ ಆಸಕ್ತಿಯೇರಿ, ಅದುವೇ ಊರಿದಾಗ ಕಾಮವಾಗಿ, ಆಮೇಲೆ ಪರಂಪರೆಯಾಗಿ ಸಂಮೋಹ-ಸ್ಮೃತಿಭ್ರಂಶ-ಬುದ್ಧಿನಾಶ-ಸ್ವನಾಶ - ಇವುಗಳು ಉಂಟಾಗುತ್ತವೆ. ರಾಗದ್ವೇಷಗಳಿಲ್ಲದಾದಾಗ ಪ್ರಸನ್ನತೆ-ದುಃಖರಹಿತತೆ-ಬುದ್ಧಿಸ್ಥಿರತೆಗಳುಂಟಾಗುವುವು. ಇಂದ್ರಿಯನಿಗ್ರಹದಿಂದಲೇ ಸ್ಥಿತಪ್ರಜ್ಞತೆ-ಬ್ರಾಹ್ಮೀಸ್ಥಿತಿಗಳು ಸಿದ್ಧಿಸುವುದು. ಇವೆಲ್ಲವನ್ನೂಅತ್ಯಂತ-ತರ್ಕಬದ್ಧವಾಗಿ ಶ್ರೀಕೃಷ್ಣನು ಹೇಳಿದ್ದಾನೆ. ಇವಕ್ಕೆ ವಿಸ್ತೃತ-ವಿವರಣೆಯೂ ಅಪೇಕ್ಷಿತವೇ. ಅದಕ್ಕಿಲ್ಲಿ ಸ್ಥಳವಿಲ್ಲ.
ಆದರೆ ಈ ಸಂದರ್ಭದಲ್ಲಿ ಶ್ರೀಕೃಷ್ಣನಾಡಿದ ಒಗಟೆಯ ಮಾತೊಂದಿದೆ. ಅದುವೇ ನಮಗಿಲ್ಲಿ ವಿಚಾರಣೀಯವಾಗಿರುವುದು. ಏನದು?
"ಎಲ್ಲ ಭೂತಗಳಿಗೂ ಯಾವುದು ರಾತ್ರಿಯೋ (ಯಾ ನಿಶಾ ಸರ್ವಭೂತಾನಾಂ) ಅಲ್ಲಿ ಯೋಗಿಯು ಎಚ್ಚರವಾಗಿರುತ್ತಾನೆ; ಎಲ್ಲಿ ಪ್ರಾಣಿಗಳೆಲ್ಲವೂ ಎಚ್ಚರವಾಗಿರುವುವೋ ಅದು ಯೋಗಿಗೆ ರಾತ್ರಿಯಾಗಿರುವುದು" – ಎಂಬುದು.
ಇಲ್ಲಿ ಹೇಳಿರುವುದೇನು? ಎಲ್ಲರಿಗೂ ಯಾವಾಗ ನಿದ್ರೆಯೋ ಆಗ ಜ್ಞಾನಿಗೆ ಎಚ್ಚರ; ಎಲ್ಲರಿಗೂ ಯಾವಾಗ ಎಚ್ಚರವೋ, ಆಗ ಆತನಿಗೆ ರಾತ್ರಿ - ಎಂದು ಹೇಳಿದಂತಾಯಿತು. ಏನು ಹಾಗೆಂದರೆ? ಯೋಗಿಯೆಂದರೆ ಗೂಬೆಯಂತೆ - ಎಂದೇ? ನಕ್ತಂಚರವಾದ, ಅರ್ಥಾತ್ ರಾತ್ರಿ-ಸಂಚಾರಮಾಡುವ, ಪ್ರಾಣಿಗಳಂತೆಯೆಂದೇ? ಹಗಲು ಎಲ್ಲರಿಗೂ ಎಚ್ಚರವೆಂದರೆ, ಯೋಗಿಯು ಹಗಲು ನಿದ್ರಿಸುವವನೇ? ಯೋಗಶಾಸ್ತ್ರ-ಆಯುರ್ವೇದ-ಧರ್ಮಶಾಸ್ತ್ರಗಳಲ್ಲಿ ಹಗಲುನಿದ್ದೆಯನ್ನು ನಿಷೇಧಿಸಿದೆಯಲ್ಲವೇ? ಆಧುನಿಕ-ವಿಜ್ಞಾನವೂ ರಾತ್ರಿ-ನಿದ್ರೆಯೇ ಸರಿಯೆನ್ನುವುದಲ್ಲವೇ?
ಹಾಗಲ್ಲ. ಇಲ್ಲಿ ಹೇಳಿರುವುದು ಸಾಕ್ಷಾತ್ ಹಗಲು-ರಾತ್ರಿಗಳಲ್ಲ. ರಾತ್ರಿಯಲ್ಲಿ ಯಾವ ಪದಾರ್ಥಗಳೂ ಕಾಣಿಸವು, ತಮಸ್ಸು ತುಂಬಿರುವುದು, ಅಲ್ಲವೇ? ನಿಶಾ ಎಂಬುದರ ಅರ್ಥ ಇಲ್ಲಿ ಅದೇ.
ಈ ಶ್ಲೋಕಕ್ಕೆ ಯೋಗಿಪುಂಗವರಾದ ಶ್ರೀರಂಗಮಹಾಗುರುಗಳು ಕೊಟ್ಟಿರುವ ವಿವರಣೆಯು ಸುಭಗವಾಗಿರುವುದು. ಜ್ಞಾನಿಯು ನೋಡುತ್ತಿರುವುದು ಒಳಬೆಳಕನ್ನು. ಆ ಬಗ್ಗೆ ಅಜ್ಞಾನಿಗಳಾದ ಇತರರಿಗೆ ಏನೂ ಗೋಚರಿಸದು. ಆದ್ದರಿಂದಲೇ ಅವರಿಗದು ನಿಶೆಯಂತೆ: ಏನೂ ಕಾಣಿಸದಾದುದು.
ಅಲ್ಲದೆ ಯೋಗಿಯ ಇಂದ್ರಿಯಗಳೆಲ್ಲ ಚೆನ್ನಾಗಿಯೇ ಕೆಲಸ ಮಾಡುವುದರಿಂದ ಆತನು ಅಜ್ಞಾನಿಗಳ ಜಾಗ್ರತ್ತಿನ ಅನುಭವವನ್ನೆಲ್ಲಾ ಕಷ್ಟವಿಲ್ಲದೇ ಅರಿಯಬಲ್ಲನೇ ಸರಿ. ಜೊತೆಗೇ ಇಂದ್ರಿಯಗಳನ್ನು ಒಳಸೆಳೆದುಕೊಂಡು ಒಳಗೆ ಪರಮಪ್ರಕಾಶವನ್ನೂ ಆತನು ಅನುಭವಿಸಿರುವನು.
ಇಂದ್ರಿಯಗಳ ಬೆಳಕೂ ಬೆಳಕೇ ಆದರೂ, ಅದು ರಾತ್ರಿಯ ಹೊತ್ತು ನಕ್ಷತ್ರಗಳ ಮಿನುಗಿನಿಂದ ಗೊತ್ತಾಗುವಷ್ಟರದು, ಅಷ್ಟೆ. ಇದಕ್ಕೆ ಪ್ರತಿಯಾಗಿ, ಜ್ಞಾನಿಯು ಕಾಣುವ ಪರಮಾತ್ಮ-ಸೂರ್ಯ-ಪ್ರಕಾಶವು ಜಾಜ್ವಲ್ಯಮಾನವಾದುದು. ಜ್ಞಾನಿಗಳು ಮಾಡುವ ನಿದ್ರೆಯಾದರೂ ಎಚ್ಚರದ ನಿದ್ರೆ, ಯೋಗನಿದ್ರೆ.
ಇತರ ಜೀವಿಗಳಿಗೆ ಇಂದ್ರಿಯಗಳ ಸೆಳೆತವೇ ತೀವ್ರವಾಗಿದ್ದು, ಒಳಬೆಳಕೆಂಬುದೊಂದು ಇರುವುದೆಂದಾದಲಿ, ಅದನ್ನು ಪಡೆಯುವ ಮಾರ್ಗವಾಗಲಿ, ತಿಳಿಯದಾಗಿರುತ್ತದೆ: ಅದೆಲ್ಲ ಅವರ ಪಾಲಿಗೆ ಕತ್ತಲೇ. ಅಜ್ಞಾನಿಗಳ ಹಗಲೆಂದರೆ ಇಂದ್ರಿಯಪ್ರಪಂಚ; ಅದು ಜ್ಞಾನಿಗೆ ಗೊತ್ತಿಲ್ಲವೆಂದೇನಿಲ್ಲ.
ಹೀಗೆ ಜ್ಞಾನಿಯು ಇಂದ್ರಿಯ-ಪ್ರಪಂಚ-ಇಂದ್ರಿಯಾತೀತ-ಪ್ರಪಂಚಗಳೆರಡನ್ನೂ ಬಲ್ಲವನು. ಅಜ್ಞಾನಿಗೆ ಗೊತ್ತಿರುವುದು ಇಂದ್ರಿಯ-ಪ್ರಪಂಚವೊಂದೇ. ಜ್ಞಾನಿಯು ಬ್ರಾಹ್ಮೀಸ್ಥಿತಿಯನ್ನರಿತಿದ್ದಾನೆ. ಬ್ರಾಹ್ಮೀಸ್ಥಿತಿಯನ್ನು ಬಲ್ಲವನು ಮೋಹಕ್ಕೆ ಪಕ್ಕಾಗನು, ಶಾಂತಿಯನ್ನು ಹೊಂದುವನು.
ಹೀಗೆ, ಶೋಕ-ಮೋಹಗಳೆಂಬ ವಿಷಕ್ಕೆ ತುತ್ತಾಗಿರುವ ಅರ್ಜುನನಿಗೆ ಯೋಗೇಶ್ವರನಾದ ಶ್ರೀಕೃಷ್ಣನು ಅಮೃತವೆನಿಸುವ ಅದ್ಭುತ-ಯೋಗೋಪದೇಶವನ್ನೇ ಹೀಗೆ ಮಾಡಿದ್ದಾನೆ.
ಮೇಲ್ನೋಟಕ್ಕೆ ವಿರೋಧದ ನಿರೂಪಣೆ; ಬಿಡಿಸಿ ನೋಡಿದರೆ ಗಹನ-ಯೋಗತತ್ತ್ವದ ವಿವರಣೆ, ಕೃಷ್ಣನ ಈ ಸೂಕ್ತಿ!!
ಸೂಚನೆ: 29/11//2025 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.