ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಪಾಂಡುಮಹಾರಾಜನನ್ನು ಕಂಡಿದ್ದನ್ನು ನಾರದರು ಯುಧಿಷ್ಠಿರನಿಗೆ ತಿಳಿಸಿದ್ದರಷ್ಟೆ. ಅದನ್ನು ಈಗ ವಿವರಿಸಿ ಹೇಳಿದರು.
"ನಾರದರೇ, ತಾವು ನನ್ನ ಪುತ್ರನಾದ ಯುಧಿಷ್ಠಿರನನ್ನು ಕಂಡು ನನ್ನೀ ಮಾತನ್ನು ತಿಳಿಸಬೇಕು" – ಎಂಬುದಾಗಿ ಹೇಳಿದ ಪಾಂಡುವು ಹೀಗೆ ನುಡಿದನು:
"ಯುಧಿಷ್ಠಿರನೇ, ನಿನ್ನ ಸೋದರರೆಲ್ಲರೂ ನಿನಗೆ ಅನುಕೂಲರಾಗಿದ್ದಾರೆ. ನೀನು ಭೂಮಿಜಯವನ್ನು ಮಾಡಲು ಸಮರ್ಥನಾಗಿರುವೆ. ಯಜ್ಞಗಳಲ್ಲಿ ಶ್ರೇಷ್ಠವೆನಿಸುವ ರಾಜಸೂಯ-ಯಜ್ಞವನ್ನು ನೀನೂ ನಡೆಸು. ಆ ಯಜ್ಞವನ್ನು ನೀನು ಮಾಡುವೆಯಾದಲ್ಲಿ ನಾನೂ ಸಹ ಹರಿಶ್ಚಂದ್ರನ ಹಾಗೆಯೇ ಇಂದ್ರನ ಆಸ್ಥಾನದಲ್ಲಿ ಬಹುವರ್ಷಗಳ ಕಾಲ ಸಂತೋಷಪಡಬಹುದು" - ಎಂಬುದಾಗಿ.
ಯುಧಿಷ್ಠಿರನೇ, ತನ್ನಿಮಿತ್ತವಾಗಿ ನಿನಗೆ ನಾನು ಹೇಳುವುದಿದು: "ಪಾಂಡವನೇ, ಪಾಂಡುವಿನ ಸಂಕಲ್ಪವನ್ನು ನೀನು ನೆರವೇರಿಸು. ನೀನೂ ಸಹ ನಿನ್ನ ಪೂರ್ವಜರೊಂದಿಗೆ ಇಂದ್ರಲೋಕವನ್ನು ಸೇರಬಹುದು.
ಆದರೊಂದು ಮಾತು. ಈ ಯಜ್ಞವನ್ನು ಮಾಡುವಲ್ಲಿ ಅನೇಕ ವಿಘ್ನಗಳು ಬಂದೊದಗತಕ್ಕವೇ. ಏಕೆಂದರೆ, ಯಜ್ಞ-ನಾಶಕರಾದ ಬ್ರಹ್ಮರಾಕ್ಷಸರು ಇದರಲ್ಲಿ ಅನೇಕ ಛಿದ್ರಗಳನ್ನು ಹುಡುಕತಕ್ಕವರೇ. ಅಲ್ಲದೆ, ಈ ಸಂನಿವೇಶದಲ್ಲಿ ಯುದ್ಧವು ಸಹ ಘಟಿಸುವುದೇ. ಯುದ್ಧವೆಂಬುದು ಭೂಮಿಯ ಮೇಲೆ ವಿನಾಶವನ್ನುಂಟುಮಾಡತಕ್ಕದ್ದು; ಕ್ಷತ್ರಿಯರ ಸಂಹಾರಕ್ಕೆ ಕಾರಣವಾಗತಕ್ಕದ್ದು.
ಇದನ್ನೆಲ್ಲ ಯೋಚನೆ ಮಾಡಿ, ಯಾವುದು ಕ್ಷೇಮವೋ ಅದನ್ನು ನಡೆಸು, ಮಹಾರಾಜ. ಚಾತುರ್ವರ್ಣ್ಯದ ರಕ್ಷಣೆಯಲ್ಲಿ ಸದಾ ಜಾಗರೂಕನಾಗಿರು. ನೀನು ಬಾಳು, ಏಳ್ಗೆ ಹೊಂದು, ಸಂತೋಷಪಡು. ಸಂಪಾದಿಸಿದ ಸಂಪತ್ತಿನಿಂದ ದ್ವಿಜರನ್ನು ತೃಪ್ತಿಗೊಳಿಸು.
ನೀನು ಕೇಳಿದೆಯಾಗಿಯೇ ನಾನು ವಿಸ್ತರವಾಗಿ ಹೇಳಿದುದು. ನಾನಿನ್ನು ಹೊರಡಬಯಸುವೆ, ಯುಧಿಷ್ಠಿರ. ನಾನು ದ್ವಾರಕೆಗೆ ಹೋಗಬೇಕಾಗಿದೆ. ನೀನು ಅನುಮತಿಯಿತ್ತರೆ ಹೊರಡುವೆ - ಎಂದು ಹೇಳಿದರು, ನಾರದರು.
ಪಾರ್ಥರಿಗೆ, ಎಂದರೆ ಕುಂತೀಪುತ್ರರಿಗೆ, ಈ ರೀತಿಯಾಗಿ ಹೇಳಿದವರೇ, ಯಾವ ಋಷಿಗಳೊಂದಿಗೆ ತಾವು ಬಂದಿದ್ದರೋ ಅವರೊಂದಿಗೆ ನಾರದರು ಹೊರಟುಬಂದರು.
ನಾರದರ ಮಾತನ್ನು ಕೇಳಿದ ಬಳಿಕ ಯುಧಿಷ್ಠಿರನು ನಿಟ್ಟುಸಿರಿಟ್ಟನು. ರಾಜಸೂಯ-ಯಜ್ಞವನ್ನು ಕುರಿತಾಗಿ ಚಿಂತನಗಳು ಉಕ್ಕಿ, ಶಾಂತಿಯನ್ನೇ ಆತನು ಕಾಣದಾದನು.
ತನ್ನ ಒಡಹುಟ್ಟಿದವರನ್ನು ಕರೆದು, ಶ್ರೇಷ್ಠಯಜ್ಞವೆನಿಸುವ ಆ ಯಾಗದ ಬಗ್ಗೆ ಚಿಂತನವನ್ನು ಅವರೊಂದಿಗೆ ನಡೆಸಿದನು.
ರಾಜಸೂಯಯಾಗವನ್ನು ಮಾಡಿದ ಅನೇಕ ರಾಜರ್ಷಿಗಳ ಮಹಿಮೆಯನ್ನು ಕೇಳಿದ್ದನಷ್ಟೆ. ಆ ಪುಣ್ಯಕರ್ಮದಿಂದಾಗಿ ಬಳಿಕ ಅವರಿಗೊದಗಿದ ಪುಣ್ಯಲೋಕಪ್ರಾಪ್ತಿಯನ್ನೂ ಅರಿತುಕೊಂಡಿದ್ದನಷ್ಟೆ. ಅದರಲ್ಲೂ ರಾಜರ್ಷಿಯಾದ ಹರಿಶ್ಚಂದ್ರನು ಅಷ್ಟು ಜಾಜ್ವಲ್ಯಮಾನನಾದುದನ್ನೂ ಪರಿಭಾವಿಸಿದ್ದನು. ಇವೆಲ್ಲ ಆದ ಬಳಿಕ, ರಾಜಸೂಯಯಾಗವನ್ನು ತಾನೂ ಮಾಡಬೇಕೆಂಬ ಆಸೆಯು ಆತನಲ್ಲಿ ಕುದುರಿತು.
ಆ ಯಜ್ಞಕಾರ್ಯಕ್ಕಾಗಿ ಮನಸ್ಸು ಮಾಡುತ್ತಾ, ಸಭಾಸದರನ್ನೆಲ್ಲರನ್ನೂ ಯುಧಿಷ್ಠಿರನು ಸತ್ಕರಿಸಿದನು. ಅವರೂ ಪ್ರತಿಯಾಗಿ ಆತನನ್ನು ಆದರಿಸಿದರು. ಆ ಯಾಗದ ಅನುಷ್ಠಾನದ ಬಗ್ಗೆ ಮತ್ತೆ ಮತ್ತೆ ಆತನು ಪರ್ಯಾಲೋಚಿಸಿದನು. ಅದ್ಭುತವಾದ ಬಲ-ಪರಾಕ್ರಮಗಳನ್ನು ಹೊಂದಿದ್ದ ಆತನು ಪ್ರಜೆಗಳೆಲ್ಲರಿಗೂ ಹಿತವಾಗುವುದು ಯಾವುದು? - ಎಂಬುದರ ಬಗ್ಗೆ ಮನಸ್ಸಿತ್ತನು.
ಸಮಸ್ತಧರ್ಮಾತ್ಮರಲ್ಲೂ ಶ್ರೇಷ್ಠನೆನಿಸಿದ ಆ ಯುಧಿಷ್ಠಿರನು ಯಾವುದೇ ಭೇದಭಾವವಿಲ್ಲದೆ ಸರ್ವಪ್ರಜೆಗಳ ಹಿತವನ್ನೇ ಸಾಧಿಸಹೊರಟನು. ಕೋಪವನ್ನೂ ಮದವನ್ನೂ ತೊರೆದನು. ತನ್ನ ಕಾರ್ಯವನ್ನು ಹೀಗೆ ಆರಂಭಿಸಿದನು.
ಸೂಚನೆ : 2/11/2025 ರಂದು ಈ ಲೇಖನವು ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.