Sunday, November 9, 2025

ಕೃಷ್ಣಕರ್ಣಾಮೃತ 81 ಚಿನ್ನದ ಕೊಳಲಿನ ಒಡೆಯನ ಕಂಡೆ ! (Krishakarnamrta 81)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)




ಶ್ರೀಕೃಷ್ಣನ ನಾಲ್ಕು ಅಂಗಗಳನ್ನು ಇಲ್ಲಿ ಉಲ್ಲೇಖಿಸಿದೆ. ನಾಲ್ಕಕ್ಕೂ ಕಮಲದ ಹೋಲಿಕೆಯೇ. ಹೀಗಾಗಿ ಶ್ಲೋಕದ ನಾಲ್ಕು ಪಾದಗಳಲ್ಲಿ ಪ್ರಥಮಪದವಾಗಿ ನಯನಾಂಬುಜ-ಹೃದಯಾಂಬುಜ-ಚರಣಾಂಬುಜ-ವದನಾಂಬುಜಗಳನ್ನು ಹೇಳಿದೆ. ನಮಗಿಷ್ಟವಾಗುವ ಕೆಂಬಣ್ಣ-ಕೋಮಲತೆಗಳು ಕಮಲದಲ್ಲಿವೆ. ಕೃಷ್ಣನ ಕಣ್ಣು-ಹೃದಯ-ಪಾದ-ಮುಖಗಳಲ್ಲೆಲ್ಲವಲ್ಲೂ ಈ ಸೊಗಸುಗಳು ಇವೆ. ಇವೆಲ್ಲವನ್ನೂ ಭಜಿಸಿ – ಎನ್ನುತ್ತದೆ, ಶ್ಲೋಕ.

ಏಕೆ ಭಜಿಸಬೇಕು? ನಾಲ್ಕರಲ್ಲೂ ಗುಣವಿಶೇಷಗಳಿವೆ. ನಮಗೆ ಹಿತವನ್ನೋ ಪ್ರಿಯವನ್ನೋ ವರ್ಷಿಸುವ ಸಾಮರ್ಥ್ಯವೋ ಸ್ವಭಾವವೋ ಇವಲ್ಲಿವೆ.

ಬಯಸಿದ್ದನ್ನೆಲ್ಲಾ ಕರುಣಿಸುವ ಪ್ರವೃತ್ತಿ ಆತನ ನೇತ್ರ-ಕಮಲದಲ್ಲಿದೆ. ಆದ್ದರಿಂದ ಅದನ್ನು ಭಜಿಸಿ. ಪರಮದಯಾಳುತೆಯು ಹೃದಯ-ಪದ್ಮದಲ್ಲಿದೆ. ಅದಕ್ಕಾಗಿ ಅದನ್ನು ಸೇವಿಸಿ.

ಋಷಿ-ಸ್ತೋಮದ ಏಕೈಕ-ಧನವೆನ್ನಿಸುವಂತಹುದು ಪಾದಾಂಬುಜದಲ್ಲಿದೆ. ಆ ಕಾರಣಕ್ಕಾಗಿ ಅದನ್ನು ಉಪಾಸಿಸಿ. ವ್ರಜಾಂಗನೆಯರ ಸಂಪತ್ತೆಲ್ಲವೂ ಆ ಮುಖ-ಕಮಲದಲ್ಲಿದೆ. ಆ ಕಾರಣಕ್ಕೆ ಅದನ್ನು ಆರಾಧಿಸಿ.

ಭಜಿಸಿ, ಆರಾಧಿಸಿ – ಎಂದೆಲ್ಲಾ ಕವಿಯು ಹೇಳುತ್ತಿರುವುದು ಯಾರಿಗೆ? ತನ್ನ ಇಂದ್ರಿಯಗಳಿಗೇ! ಅಷ್ಟೇ ಏನು? ನಮಗೂ, ನಮ್ಮ ಇಂದ್ರಿಯಗಳಿಗೂ!

ಶ್ಲೋಕ ಹೀಗಿದೆ:
ನಯನಾಂಬುಜೇ ಭಜತ ಕಾಮ-ದುಘಂ
ಹೃದಯಾಂಬುಜೇ ಕಿಮಪಿ ಕಾರುಣಿಕಂ |
ಚರಣಾಂಬುಜೇ ಮುನಿ-ಕುಲೈಕ-ಧನಂ
ವದನಾಂಬುಜೇ ವ್ರಜ-ವಧೂ-ವಿಭವಮ್ ||

***

ನಾನು ಕೃಷ್ಣನನ್ನು ಭಜಿಸಿದ್ದೇನೆ - ಎನ್ನುತ್ತಾನೆ, ಲೀಲಾಶುಕ. ಕೃಷ್ಣನು ಎಂತಹವನು, ಹೇಗಿದ್ದಾನೆ, ಯಾರೊಂದಿಗಿದ್ದಾನೆ, ಅವನ ಸಾಧನಗಳೇನು, ಅವಿದ್ದು ಸಾಧಿಸುವುದೇನು – ಎಂಬೀ ವಿಷಯಗಳನ್ನೀ ಶ್ಲೋಕವು ತಿಳಿಸುತ್ತದೆ. ಸನತ್ಕುಮಾರಸಂಹಿತೆಯಲ್ಲಿ ಬಂದಿರುವ ವಿಶಿಷ್ಟವಾದ ಶ್ರೀಕೃಷ್ಣವರ್ಣನೆಯನ್ನು ಈ ಶ್ಲೋಕವು ಅನುಸರಿಸಿದೆ. ಇಲ್ಲಿಯ ಕೃಷ್ಣ ದ್ವಿಭುಜನಲ್ಲ, ಶ್ಯಾಮವರ್ಣನೂ ಅಲ್ಲ.

ಈ ಕೃಷ್ಣನು ಧನುರ್ಧಾರಿ. ಧನುಸ್ಸು ಮಸೃಣವಾಗಿದೆ, ಎಂದರೆ ಹೊಳಪಿನಿಂದ ಕೂಡಿದೆ. ಅದು ಕಬ್ಬಿನ ಜಲ್ಲೆಯಿಂದಾಗಿರುವ ಬಿಲ್ಲು. ಹಾಗೆಯೇ ಆತನ ಹಸ್ತದಲ್ಲಿ ಬಾಣವೂ ಇದೆ. ಅದೋ ಹೂವಿನಿಂದಾದುದು. ಎಂದೇ ಸುಗಂಧಿಯಾಗಿದೆ, ಎಂದರೆ ಒಳ್ಳೆಯ ಗಂಧದಿಂದ ಕೂಡಿದೆ. ಇವುಗಳೇ ಅಲ್ಲದೆ, ತನ್ನಿತರ ಹಸ್ತಗಳಲ್ಲಿ ಸುದರ್ಶನವೆಂಬ ಚಕ್ರವನ್ನೂ, ಅಬ್ಜವೆಂದರೆ ಶಂಖವನ್ನೂ, ಪಾಶ-ಅಂಕುಶಗಳನ್ನೂ ಧರಿಸಿದ್ದಾನೆ. ಅಬ್ಜವೆಂದರೆ ಕಮಲವೆಂಬುದು ಪ್ರಸಿದ್ಧಾರ್ಥ. ಶಂಖವೂ ಜಲ-ಜಾತವಾದ್ದರಿಂದ ಅಪ್-ಜವೇ.

ಇವೆಲ್ಲವನ್ನು ಧರಿಸಿದ್ದರೂ, ಕೊಳಲನ್ನು ಹಿಡಿದಿಲ್ಲವೆಂದರೆ ಅದು ಕೃಷ್ಣನಾದೀತೇ? ಬಳ್ಳಿಯಂತಿರುವ ವೇಣುವದು, ಚಿನ್ನದಿಂದಾದುದು. ಶ್ಲೋಕದಲ್ಲಿ ಹೇಳಿಲ್ಲದಿರುವ ಪದ್ಮ-ಗದೆಗಳನ್ನೂ ನಾವು ಜೊತೆಗೆ ಊಹಿಸಿಕೊಳ್ಳಬಹುದು. ಇವಿಷ್ಟನ್ನೂ ತನ್ನ ಕರಗಳಿಂದ ಹಿಡಿದಿದ್ದಾನೆ, ಶ್ರೀಕೃಷ್ಣ.

ಅವನ ಕೈಗಳನ್ನು ಅಲಂಕರಿಸುವ ನಾನಾ ದಿವ್ಯ-ಸಾಧನಗಳನ್ನು ಹೇಳಿದ್ದಾಯಿತು. ಇನ್ನು ಸಾಕ್ಷಾತ್ ಕೃಷ್ಣನೇ ಹೇಗಿದ್ದಾನೆಂದು ತಿಳಿದುಕೊಳ್ಳಬೇಕಲ್ಲವೇ? ಇಲ್ಲಿಯ ಕೃಷ್ಣ ಅರುಣ-ವರ್ಣದಿಂದ ಕೂಡಿರತಕ್ಕವನು. ಅರುಣವೆಂದರೆ ಕೆಂಬಣ್ಣ. ಕೆಂಪೆಂದರೆ ಯಾವ ಕೆಂಪು? ಎಂದೇ ಸಿಂದೂರ-ಪುಂಜದಂತಿರುವುದು – ಎಂದಿರುವುದು. ಉತ್ತರದೇಶದ ನಾರಿಯರು ತಮ್ಮ ಸೀಮಂತ ಅಥವಾ ಬೈತಲೆಯ ಸ್ಥಾನದಲ್ಲಿ ಇಟ್ಟುಕೊಳ್ಳುವ ಕುಂಕುಮವದು;. ಹಣೆಯ ಶೋಭೆಯನ್ನೇ ವರ್ಧಿಸುವಂತಹುದು; ಉಳಿದೆಲ್ಲ ಆಭರಣಗಳಿಗೂ ಪೂರಕವಾದದ್ದು. ಸಿಂದೂರ-ಪುಂಜದ ಅರುಣ-ವರ್ಣದವನೆಂದು ಇಲ್ಲಿ ಚಿತ್ರಿಸಿದೆ.

ಕಬ್ಬಿನ ಜಲ್ಲೆಯಿಂದಾದ ಬಿಲ್ಲು, ಪುಷ್ಪಮಯವಾದ ಬಾಣ - ಇವುಗಳನ್ನು ಸಾಮಾನ್ಯವಾಗಿ ಮನ್ಮಥನ ವರ್ಣನೆಯಲ್ಲಿ ಕೇಳುತ್ತೇವೆ. ಹಾಗಾದರೆ ಶ್ರೀಕೃಷ್ಣನು ಮನ್ಮಥನನ್ನು ಹೋಲುತ್ತಾನಲ್ಲವೇ? - ಎಂದರೆ, ಆತನಿಗಿಂತಲೂ ಅತ್ಯಾಕರ್ಷಕನಿವನು, ಎನ್ನಲಿಕ್ಕಾಗಿಯೇ ಕಂದರ್ಪಾಧಿಕ-ಸುಂದರ - ನೆಂದಿರುವುದು. ಕಂದರ್ಪನೆಂದರೆ ಮನ್ಮಥ. ಅಷ್ಟೇ ಅಲ್ಲ, ಶ್ರೀಕೃಷ್ಣನು ಮದನಾಧಿಪನೂ ಹೌದು. ಮನ್ಮಥನು ಎಷ್ಟಾದರೂ ಕೃಷ್ಣನ ಮಗನೇ. ಅಪ್ಪನ ವಶದಲ್ಲಿರುವ ಮಗ.

ಇವಿಷ್ಟೇ ಅಲ್ಲದೆ, ಶ್ರೀಕೃಷ್ಣನು ಗೋಪಾಂಗನೆಯರಿಂದ, ಎಂದರೆ ಗೋಕುಲದ ನಾರಿಯರಿಂದ, ವೇಷ್ಟಿತನಾಗಿರುವನು, ಸುತ್ತುವರಿಯಲ್ಪಟ್ಟಿರುವನು. ಇಷ್ಟರಿಂದಲೇ ಲಕ್ಷ್ಮೀ-ಸಮೇತನೂ ಹೌದೆಂದು ನಾವು ಊಹಿಸಿಕೊಳ್ಳಬಹುದು.

ಹೀಗಿರುವ ಈತನು ಗೋಪಾಲನಾದರೂ ತ್ರೈಲೋಕ್ಯ-ರಕ್ಷಾಮಣಿಯೂ ಹೌದು. ರಕ್ಷಕರಲ್ಲಿ ಶ್ರೇಷ್ಠನಾದವನನ್ನು "ರಕ್ಷಾ-ಮಣಿ"ಯೆನ್ನುತ್ತಾರೆ. ಮೂರು ಲೋಕಗಳಿಗೂ ರಕ್ಷೆಯನ್ನು ಕೊಡುವ ಮೂರ್ತಿಯೇ ಶ್ರೀಕೃಷ್ಣ.

ಹೀಗೆ ವಿಶಿಷ್ಟಾಯುಧ-ಸಂಪನ್ನನೂ ಸರ್ವಾಂಗ-ಸುಂದರನೂ ಸರ್ವಲೋಕ-ರಕ್ಷಕನೂ ಆದ ಕೃಷ್ಣನನ್ನು ನಾನು ಭಜಿಸಿದ್ದೇನೆ - ಎನ್ನುತ್ತಾನೆ, ಲೀಲಾಶುಕ. ಅಂತಹವರಿಗೆ ಮುಕ್ತಿಯು ಸಿದ್ಧವೇ!

ಕೋದಂಡಂ ಮಸೃಣಂ ಸುಗಂಧಿ ವಿಶಿಖಂ ಚಕ್ರಾಬ್ಜ-ಪಾಶಾಂಕುಶಂ

ಹೈಮೀಂ ವೇಣುಲತಾಂ ಕರೈಶ್ಚ ದಧತಂ, ಸಿಂದೂರ-ಪುಂಜಾರುಣಮ್ |

ಕಂದರ್ಪಾಧಿಕ-ಸುಂದರಂ ಸ್ಮಿತ-ಮುಖಂ ಗೋಪಾಂಗನಾವೇಷ್ಟಿತಂ

ಗೋಪಾಲಂ ಮದನಾಧಿಪಂ ತಮ್ ಅಭಜಂ ತ್ರೈಲೋಕ್ಯ-ರಕ್ಷಾಮಣಿಂ ||

ಒಂದೆರಡು ಪದಗಳನ್ನು ಬಿಟ್ಟರೆ ಉಳಿದವೆಲ್ಲವೂ ಅನುಸ್ವಾರದಲ್ಲಿ ಕೊನೆಗೊಂಡಿರುವುದೇ ಶ್ಲೋಕಕ್ಕೊಂದು ಮೆರುಗನ್ನು ಕೊಡುತ್ತದೆ, ಅದರ ಗೇಯತಾ-ಗುಣವನ್ನು ಹೆಚ್ಚಿಸುತ್ತದೆ.

***

ಕೃಷ್ಣನ ಚರಣವನ್ನು ಭಜಿಸು - ಎನ್ನುತ್ತಾನೆ, ಲೀಲಾಶುಕ. ಯಾರನ್ನು ಕುರಿತು ಈ ಮಾತು? ಮನುಜರನ್ನು ಕುರಿತು - ಎಂದಾದರೂ ಭಾವಿಸಬಹುದು; ತನ್ನ ಮನಸ್ಸನ್ನೇ ಕುರಿತು - ಎಂದಾದರೂ ಭಾವಿಸಬಹುದು. ವಿಷ್ಣುವೇನು, ಕೃಷ್ಣನೇನು? ಎಂದೇ 'ಕೃಷ್ಣ' ಎನ್ನುವುದರ ಬದಲು ಶಾರ್ಙ್ಗಿ ಎಂದಿದೆ.

ಶಾರ್ಙ್ಗವೆಂಬುದು ವಿಷ್ಣುವಿನ ಬಿಲ್ಲಿನ ಹೆಸರು. ಶಾರ್ಙ್ಗಿ ಎಂದರೆ ವಿಷ್ಣು. ಎಂದೇ ಶಾರ್ಙ್ಗಿಯ ಚರಣಾಂಭೋಜವನ್ನು, ಎಂದರೆ ಪದ-ಕಮಲವನ್ನು, ಉಪಾಸಿಸು - ಎಂದಿದೆ.

ಹೇಗಿದೆ ಅದು? - ವ್ರಜದಲ್ಲಿ, ಎಂದರೆ ನಂದ-ಗೋಕುಲದಲ್ಲಿ, ಅದು ಧ್ವನಿಗೈಯುತ್ತಿದೆ. ಕಾಲಿಗೆ ಗೆಜ್ಜೆ ಕಟ್ಟಿದ್ದಾರೆ, ಬಾಲಕೃಷ್ಣನಿಗೆ. ಅದೂ ಮಣಿಖಚಿತವಾದ ನೂಪುರ. ಹಾಗಿರುವುದರಿಂದ ಅದು ವಿಶೇಷವಾದ ರಣನವನ್ನು ಉಂಟುಮಾಡುತ್ತಿದೆ. ರಣನವೆಂದರೆ ಸದ್ದು.

ಚರಣವನ್ನು ಕಮಲವೆಂದು ಹೇಳಿತಲ್ಲಾ, ಏನದರ ವಿಶೇಷ? ಸರಸವಾದ ಸರಸ್ಸಿನಲ್ಲಿ, ಎಂದರೆ ನೀರುತುಂಬಿರುವ ಜಲಾಶಯದಲ್ಲಿ, ಕಾಂತಿಯಿಂದ ಕೂಡಿರುವ ಕಮಲದ ಹಾಗಿರುವಂತಹುದು, ಈ ಕಮಲ.

ಸರೋವರದಿಂದ ಕಿತ್ತು ತಂದು ಹಲಕಾಲವಾದ ಮೇಲೆ ಅಲ್ಪ-ಸ್ವಲ್ಪದ ಕಾಂತಿ ಉಳಿದಿರಬಹುದು, ಕಮಲದಲ್ಲಿ. ಹಾಗಿರುವುದಲ್ಲ, ಇಲ್ಲಿದರ ಕಾಂತಿ. ತುಂಬು ನೀರಿನ ಕೊಳದಲ್ಲೇ ಕಂಗೊಳಿಸುವ ಕಮಲದ ಪರಿ ಇದರದು.

ಕಮಲಗಳೆಂದರೆ ಹಂಸಗಳಿಗೂ ಇಷ್ಟವೇ. ಕಮಲಗಳ ಅಂದ-ಮಕರಂದಗಳು ಮರಾಳಗಳಿಗೆ ಮೆಚ್ಚೇ. ಹಂಸ-ನಾದವೂ ನೂಪುರ-ನಾದವೂ ಸಂವಾದಿಯಾದಂತಹವು, ಪರಸ್ಪರ ಹೋಲುವಂತಹವು.

ಎಂದೇ ಈಗ ಉಪಮೆಯು ಇನ್ನೂ ಸಾರ್ಥಕವಾಯಿತು. ಕೃಷ್ಣನ ಚರಣ-ಕಮಲವೂ ಮನೋಜ್ಞವಾಗಿದೆ, ಹಾಗೂ ಇಂಪಾದ ಧ್ವನಿಗೈಯುತ್ತಿದೆ. ಹೋಲಿಕೆಯಾಗಿ ಕೊಟ್ಟಿರುವ ಕಮಲವೂ ಮನೋಹರವಾಗಿದೆ, ಬಳಿ ಬಂದ ಹಂಸಗಳ ಧ್ವನಿಯಿಂದ ಕೂಡಿದೆ. ಕಲ-ಹಂಸವೆಂದರೇನು? ಅವ್ಯಕ್ತವಾದರೂ ಮಧುರವಾದ ದನಿಯನ್ನು ಕಲವೆನ್ನುವರು. ಎಂದೇ ಕಲಹಂಸವೆಂದರೆ ಮಧುರ-ಧ್ವನಿಮಾಡುವ ಹಂಸ. ಪಕ್ಷಿಗಳ ಕಲರವ ಕಿವಿಗಿಂಪಲ್ಲವೇ?

ಹೀಗೆ ಕಣ್ಣು-ಕಿವಿಗಳಿಗೆ ಪ್ರಿಯವೆನಿಸುವ ರೂಪ-ಶಬ್ದಗಳಿಂದ ಕೂಡಿದೆ, ಬಾಲಕೃಷ್ಣನ ಪಾದ. ಅದರ ಉಪಾಸನೆಯನ್ನು ಮಾಡು, ಮನವೇ - ಎಂಬುದು ಶ್ಲೋಕದ ಭಾವ. ಶ್ಲೋಕ ಹೀಗಿದೆ:

ವಿರಣನ್ಮಣಿ-ನೂಪುರಂ ವ್ರಜೇ
ಚರಣಾಂಭೋಜಂ ಉಪಾಸ್ಸ್ವ ಶಾರ್ಙ್ಗಿಣಃ |
ಸರಸೇ ಸರಸಿ ಶ್ರಿಯಾಶ್ರಿತಂ
ಕಮಲಂ ವಾ ಕಲಹಂಸ-ನಾದಿತಂ ||

ಈ ಶ್ಲೋಕದಲ್ಲಿಯ ಅನುಪ್ರಾಸವು ಹೃದ್ಯವಾಗಿದೆ: ಪೂರ್ವಾರ್ಧದಲ್ಲಿ ಹಲವು ರ/ಣ-ಧ್ವನಿಗಳು, ಉತ್ತರಾರ್ಧದಲ್ಲಿ ರ/ಸ-ಗಳು, ಕ/ಲ-ಗಳು.

ಸೂಚನೆ : 8/11/2025 ರಂದು   ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.