ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ರಾಜಸೂಯವನ್ನು ತಾನು ಮಾಡುವುದು ಯುಕ್ತವೇ? – ಎಂಬ ಪ್ರಶ್ನೆಯು ಯುಧಿಷ್ಠಿರನಿಗೆ ಆಗಾಗ್ಗೆ ಬರುತ್ತಿತ್ತು. ತಾನಂತೂ ಕೋಪಾಹಂಕಾರಗಳನ್ನು ಬದಿಗೊತ್ತಿ ಔದಾರ್ಯದಿಂದ ದಾನಪರನಾಗಿದ್ದನು.
"ದಾನ ಕೊಡಲು ಯೋಗ್ಯವಾದ ವಸ್ತುಗಳೇನಿದ್ದರೂ ಅವೆಲ್ಲವನ್ನೂ ಅರ್ಹರಾದವರಿಗೆ ಕೊಟ್ಟುಬಿಡಿ" - ಎಂದು ತನ್ನ ಕೈಕೆಳಗಿನವರಿಗೆ ಅವನು ಅಪ್ಪಣೆ ಮಾಡಿದನು. ಆತನ ಪ್ರವೃತ್ತಿಯನ್ನು ಮೆಚ್ಚಿ, ಎಲ್ಲರೂ, "ಭಲೇ ಧರ್ಮ, ಭಲೇ ಧರ್ಮರಾಜ" – ಎಂದು ಆತನನ್ನು ಕೊಂಡಾಡಿದರು.
ಈ ಸಂನಿವೇಶದಲ್ಲಿ ಆತನ ವಿಷಯದಲ್ಲಿ ಜನರು ತಮ್ಮ ತಂದೆಯಲ್ಲಿ ಹೇಗೋ ಹಾಗೆ ನೆಚ್ಚಿಕೆಯನ್ನಿಟ್ಟುಕೊಂಡರು; ಆತನನ್ನು ದ್ವೇಷಿಸುವಂತಹವನು ಒಬ್ಬನೂ ಇರಲಿಲ್ಲ: ಆ ಕಾರಣಕ್ಕೇ ಆತನಿಗೆ "ಅಜಾತಶತ್ರು"ವೆಂಬ ಹೆಸರಾದದ್ದು. ಯಾವನಿಗೆ ಶತ್ರುವೇ ಹುಟ್ಟಿಲ್ಲವೋ ಆತನೇ "ಅ-ಜಾತ-ಶತ್ರು".
ಎಲ್ಲರನ್ನೂ ಯುಧಿಷ್ಠಿರನು ತನ್ನವರೆಂಬಂತೆ ನೋಡಿಕೊಂಡನು. ಭೀಮನು ಎಲ್ಲರಿಗೂ ರಕ್ಷೆಯಿತ್ತನು. ಸವ್ಯಸಾಚಿಯಾದ ಅರ್ಜುನನು ಶತ್ರುಗಳನ್ನು ಸಂಹಾರಮಾಡಿದನು. ಧೀಮಂತನಾದ ಸಹದೇವನು ಧರ್ಮಗಳ ಅನುಶಾಸನವನ್ನು ನೆರವೇರಿಸಿದನು. ಎಲ್ಲರ ವಿಷಯದಲ್ಲೂ ವಿನಯದಿಂದ ನಕುಲನು ವರ್ತಿಸಿದನು.
ಇವಿಷ್ಟೂ ಕಾರಣಗಳಿಂದಾಗಿ ಜನರೆಲ್ಲರೂ ಕಲಹರಹಿತರೂ, ಭಯವೇ ಇಲ್ಲದವರೂ ಸದಾ ಸ್ವಧರ್ಮನಿರತರೂ ಆದರು. ಕಾಲಕಾಲಕ್ಕೆ ಮಳೆಯೂ ಆಗುತ್ತಿರಲು ಬಹುಸಮೃದ್ಧಿಯುತರೂ ಆದರು. ಯಜ್ಞಸಾಮಗ್ರಿ, ಗೋರಕ್ಷೆ, ಉಳುಮೆ, ವಾಣಿಜ್ಯ - ಇವಿಷ್ಟರಲ್ಲೂ ವಿಶೇಷವಾದ ಪ್ರಗತಿಯು ತಲೆದೋರಿತು.
ಯುಧಿಷ್ಠಿರನು ಧರ್ಮನಿತ್ಯನಾಗಿ ಆಳುತ್ತಿರುವ ಆ ಸಮಯದಲ್ಲಿ ಅನುಕರ್ಷ-ನಿಕರ್ಷಗಳಿರಲಿಲ್ಲ: ಎಂದರೆ ಕಳೆದ ವರ್ಷದ ಕರದ ಬಾಕಿ, ಈ ವರ್ಷದ ಬಾಕಿ - ಎಂಬಿವು ಉಳಿದುಕೊಂಡಿರಲಿಲ್ಲ. ಹಾಗೆಯೇ ವ್ಯಾಧಿ-ಅಗ್ನಿಗಳಿಂದಾಗಿ ಉಂಟಾಗುವ ಪ್ರಜಾಪೀಡನವೆಂಬುದು ಯಾವುದೂ ಇರಲಿಲ್ಲ. ದಸ್ಯುಗಳು, ಎಂದರೆ ಲೂಟಿಕೋರರು, ವಂಚಕರು - ಇವರುಗಳಿಂದಾಗಲಿ ರಾಜವಲ್ಲಭರುಗಳಿಂದಾಗಲಿ, ಎಂದರೆ ರಾಜನಿಗೆ ಅಚ್ಚುಮೆಚ್ಚಾದವರಿಂದಾಗಲಿ, ಪ್ರಜಾಪೀಡನವಾಗುತ್ತಿರಲಿಲ್ಲ. ಪ್ರಜೆಗಳೂ ಸಹ ಪರಸ್ಪರ ಮೋಸ ಮಾಡುತ್ತಿರಲಿಲ್ಲ.
ಯುಧಿಷ್ಠಿರನಿಗೆ ಪ್ರಿಯವನ್ನುಂಟುಮಾಡುವುದು, ತಮ್ಮ ವಾಣಿಜ್ಯವ್ಯಾಪಾರಗಳಿಂದಾಗಿ ಸಲ್ಲಬೇಕಾದ ಕರವನ್ನು ಕೊಡುವುದು, ಸಂಧಿ-ವಿಗ್ರಹ ಮುಂತಾದ ರಾಜಕಾರ್ಯಗಳಲ್ಲಿ ಯುಧಿಷ್ಠಿರನಿಗೆ ಸಹಕಾರವನ್ನು ಕೊಡುವುದು - ಇವುಗಳಿಗಾಗಿ ಬೇರೆ ಬೇರೆ ರಾಜರು ಆತನಲ್ಲಿಗೆ ಬರುತ್ತಿದ್ದರು. ಅವರಲ್ಲಿ ಅನೇಕರು ರಾಜಸ ಸ್ವಭಾವದವರಾಗಿದ್ದರು, ಎಂದೇ ಲೋಭಿಗಳೂ ಆಗಿದ್ದರು; ಹೀಗಾಗಿ ತಮ್ಮ ತಮ್ಮ ಇಚ್ಛೆಯಂತೆ ಧನೋಪಭೋಗವನ್ನು ಅವರು ಮಾಡುತ್ತಿದ್ದರು.
ಆದರೆ ಸಹನಶೀಲನಾದ ಯುಧಿಷ್ಠಿರನು ಮಾತ್ರ ಧರ್ಮನಿತ್ಯನಾಗಿಯೇ ಇರುತ್ತಿದ್ದನು. ಆತನ ರಾಜ್ಯವು ಹೆಚ್ಚು ಹೆಚ್ಚು ಉನ್ನತಿಯನ್ನೇ ಹೊಂದುತ್ತಿತ್ತು. ಯುಧಿಷ್ಠಿರನ ಖ್ಯಾತಿಯು ಎಲ್ಲೆಡೆ ವರ್ಧಿಸುತ್ತಿತ್ತು. ಆತನು ಸರ್ವಸದ್ಗುಣಗಳಿಂದಲೂ ಕೂಡಿದವನಾಗಿದ್ದನು. ಅಪಾರವಾದ ಸಹನೆಯುಳ್ಳವನಾಗಿದ್ದನು. ಎಲ್ಲರನ್ನೂ ಆಳಬಲ್ಲವನಾಗಿದ್ದನು.
ದಶದಿಶೆಗಳಲ್ಲಿಯೂ ಆತನ ಮಹಾಯಶಸ್ಸು ವ್ಯಾಪಿಸುತ್ತಿತ್ತು. ಅವನು ಯಾವ ದೇಶವನ್ನು ಗೆದ್ದರೂ ಅಲ್ಲಿಯ ಪ್ರಜೆಗಳೆಲ್ಲರೂ ಆತನ ವಿಷಯದಲ್ಲಿ ತಾಯಿ-ತಂದೆಯರಿಗೆ ತೋರಿಸುವಂತಹ ಆದರವನ್ನೇ ತೋರಿಸುತ್ತಿದ್ದರು.
ಮಂತ್ರಿಗಳನ್ನೂ ತನ್ನ ಸೋದರರನ್ನೂ ಆಗಾಗ್ಗೆ ಕರೆಸಿ, ರಾಜಸೂಯವನ್ನು ಕುರಿತಾಗಿ ಅವರೊಂದಿಗೆ ಸಮಾಲೋಚನೆಯನ್ನು ನಡೆಸುತ್ತಿದ್ದನು. ಯುಧಿಷ್ಠಿರನು ಆ ಯಜ್ಞ ಮಾಡುವ ಇಚ್ಛೆಯಿಂದ ಕೇಳಲಾಗಿ, ಆತನ ಮಂತ್ರಿಗಳೆಲ್ಲರೂ ಅದಕ್ಕೆ ತಮ್ಮ ಸಮ್ಮತಿಯನ್ನು ಸೂಚಿಸಿ ಹೇಳಿದರು.
"ವರುಣನು ಜಲಾಧಿಪತಿಯಗುವಂತೆ ರಾಜನು ಸಮ್ರಾಟ್ ಎನಿಸಿಕೊಳ್ಳಲು ಅಪೇಕ್ಷಿಸುವುದು ಸಹಜವಾಗಿಯೇ ಇದೆ. ಆ ಸ್ಥಾನಕ್ಕೆ ಅರ್ಹನೆನಿಸಿಕೊಳ್ಳಲು ಬೇಕಾದ ಗುಣಗಳನ್ನು ಹೊಂದಿರುವ ನಿನಗೆ ರಾಜಸೂಯವನ್ನು ನೆರವೇರಿಸುವ ಸಮಯವು ಒದಗಿ ಬಂದಿದೆ."
ಸೂಚನೆ : 9/11/2025 ರಂದು ಈ ಲೇಖನವು ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.