ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ ೩೯. ಹಗಲಿರುಳು ಮಾಡುವ ಚಿಂತನ ಯಾವುದು?
ಈ ಸಂಸಾರವು ಸಾರರಹಿತವಾದದು ಎಂದು.
ಈ ಪ್ರಶ್ನೋತ್ತರವನ್ನು ಗಮನಿಸಿದಾಗ ಒಂದು ಮಾತು ಸ್ಮರಣೆಗೆ ಬರುತ್ತದೆ - "ಸಂಸಾರೇ ಕಿಂ ಸಾರಂ ಕಂಸಾರೇಃ ಪದಕಮಲಂ ಸಾರಂ" ಎಂಬುದಾಗಿ. ಈ ಸಂಸಾರದಲ್ಲಿ ಸಾರಭೂತವಾದದ್ದು ಯಾವುದು? ಅಂದರೆ ಕಂಸನ ಅರಿ - ಶತ್ರುವಾದ ಕೃಷ್ಣನ ಪದಕಮಲವನ್ನು ಭಜಿಸುವುದೇ ಆಗಿದೆ ಎಂದು. ಇದೇ ಅರ್ಥವನ್ನು ಇನ್ನೊಂದು ರೀತಿಯಲ್ಲಿ ಇಲ್ಲಿ ಹೇಳಲಾಗಿದೆ. ಸಾಮಾನ್ಯವಾಗಿ ಇಲ್ಲಿ ನಾವು ತಿಳಿಯಬೇಕಾದ ವಿಷಯ ಇಷ್ಟು - ಸಂಸಾರ ಎಂದರೇನು? ಈ ಸಂಸಾರವು ಇಷ್ಟು ಹೇಯ ಏಕೆ? ಎಂದು. ಇದನ್ನು ಅಸಾರ ಅಂದರೆ ಸಾರವಿಲ್ಲದ್ದು, ಸತ್ವವಿಲ್ಲದ್ದು, ಇದು ಉಳಿಯಬೇಕಾದದ್ದಲ್ಲ, ಅಳಿಯಬೇಕಾದದ್ದು ಎಂದು. ಸಂಸಾರದ ವಿಷಯದಲ್ಲಿ ಇಷ್ಟು ತಿರಸ್ಕಾರ ಅಥವಾ ಉಪೇಕ್ಷೆ ಏಕೆ? ಎಂದರೆ ಹೇಯವೆಂಬುದಾಗಿ ಅನವರತವೂ ನೆನಪಿನಲ್ಲಿ ಇಡಬೇಕಾದ ವಿಷಯ ಎಂಬುದನ್ನು ಈ ಪ್ರಶ್ನೋತ್ತರ ಸಾರುತ್ತಿದೆ. ಹಾಗಾದರೆ ಈ ಸಂಸಾರವು ಅದೇಕೆ ಇಷ್ಟು ಹೇಯ? ಎಂಬುದು ಇಲ್ಲಿ ಚಿಂತಿಸಬೇಕಾದ ವಿಷಯವಾಗಿದೆ.
ಸಮ್ ಎಂಬ ಉಪಸರ್ಗದಿಂದ ಕೂಡಿದ ಸೃ - ಗತೌ ಎಂಬ ಧಾತುವಿನಿಂದ ಉತ್ಪನ್ನವಾದ 'ಸಂಸಾರ' ಎಂಬ ಶಬ್ದವು ಸಂಸ್ಕೃತಭಾಷೆಯ ಶಬ್ದವಾಗಿದೆ. ಯಾವುದು ನಿರಂತರ ಚಲನಶೀಲವಾದದ್ದೋ, ಅದಕ್ಕೆ ಸಂಸಾರ ಎಂದು ಕರೆಯಲಾಗುತ್ತದೆ. ಗತಿಶೀಲವಾದದ್ದು, ಒಂದು ಕಡೆ ನಿಲ್ಲದಿರುವುದು, ಇದಕ್ಕೆ ಆದಿ ಇದೆ, ಅಂತ್ಯವಿಲ್ಲ ಇತ್ಯಾದಿಯಾಗಿ ಸಂಸಾರ ಎಂಬ ಶಬ್ದವನ್ನು ಈ ಬಗೆಯಲ್ಲಿ ನಿರೂಪಿಸಲಾಗಿದೆ. ಈ ಬದುಕುಗೆ ಒಂದು ಧ್ರುವ ಅಥವಾ ಸ್ಥಿರವಾದ ತಾಣಬೇಕು; ಬದುಕಿಗೊಂದು ಸ್ಥಿರತೆ ಬೇಕು ಎಂದು ಬಯಸುವವನು, ಈ ಅಸ್ಥಿರವಾದ ಸಂಸಾರವನ್ನು ದೂರವಿಡಬೇಕು. ಆದರೆ ಈ ಸಂಸಾರದಲ್ಲೂ ಒಂದು ಸ್ಥಿರವಾದ ಬದುಕನ್ನು ಕಾಣಬೇಕು. ಸಂಸಾರವೇ ಸ್ಥಿರವಲ್ಲ; ಸಂಸಾರದಲ್ಲಿ ಸ್ಥಿರವಾದದ್ದನ್ನು ಹುಡುಕು ಎಂಬ ಉಪದೇಶ ಇದರಲ್ಲಿ ಎದ್ದು ತೋರುತ್ತದೆ. ಬದುಕಿಗೊಂದು ಶಾಶ್ವತವಾದ ನೆಲೆಬೇಕು; ಬದುಕು ನಿರಂತರವಾಗಿ ಸುತ್ತುವಂತಿರಬಾರದು, ಬದುಕು ಅನಿಶ್ಚಿತವಾಗಬಾರದು ಎಂಬಿತ್ಯಾದಿ ಸಂಗತಿಗಳನ್ನು ಸಂಸಾರವೆಂಬುದು ಸೂಚಿಸುತ್ತಿದೆ. ಹಾಗಾಗಿ ಸಂಸಾರವನ್ನು ನಾವು ಎಷ್ಟು ನೆಚ್ಚಿಕೊಳ್ಳಬೇಕು? ಎಂಬುದಕ್ಕೆ ದಾಸರ ಈ ಮಾತು ನಮಗೆ ತುಂಬಾ ಸೂಕ್ತವೆನಿಸುತ್ತದೆ. "ಈಸಬೇಕು, ಇದ್ದು ಜಯಸಬೇಕು" ಎಂಬುದಾಗಿ. ಅಂದರೆ ಶಾಶ್ವತ ಬದುಕನ್ನು ಈ ಬದುಕಿನಲ್ಲಿ ಕಾಣಬೇಕಾದರೆ ಸಂಸಾರವನ್ನ ಬಿಟ್ಟು ಕಾಣಲು ಸಾಧ್ಯವಾಗದು. ಹಾಗಾಗಿ ಸಂಸಾರದಲ್ಲೇ ಇದ್ದು, ಸಂಸಾರವನ್ನು ದಾಟಿ, ಈ ಸಂಸಾರವು ಅಸಾರವಾದದ್ದು, ಇದಕ್ಕಿಂತಲೂ ಸಾರವಾದದ್ದು ಯಾವುದು? ಎಂಬುದನ್ನು ನಿಶ್ಚಯ ಮಾಡಿಕೊಳ್ಳಬೇಕು ಎಂದು. ಅಂದರೆ ಭಗವಂತ ಮಾತ್ರ ಸಾರ, ಉಳಿದಿದ್ದೆಲ್ಲವೂ ಅಸಾರ ಎಂಬ ನಿಶ್ಚಿತಮತಿ ಉಳ್ಳವನಾಗಬೇಕು. " 'ಅಚಲೋ ಅಯಂ ಸನಾತನಃ' ಈ ಸನಾತನವಾದ ವಸ್ತು ಅಚಲವಾಗಿಯೇ ಇದೆ, ತಾನು ಪ್ರಕೃತಿಯೆಂಬ ರೈಲಿನಲ್ಲಿ ಕುಳಿತು ಅದರ ಚಲನೆಯನ್ನು ತನ್ನ ಚಲನೆಯಲ್ಲಿ ಆರೋಪ ಮಾಡಿಕೊಂಡು ಒದ್ದಾಡುತ್ತಾನೆ ಈ ಜೀವ. ಆದರೆ ತನ್ನ ಕಡೆಗೆ ತಾನು ನೋಡಿಕೊಂಡು ಅಚಲನೆಂದು ನಿರ್ಧರಿಸಿಕೊಂಡಾಗ ನಿರ್ಭಯನಾಗಿರಬಹುದು" ಎಂಬ ಶ್ರೀರಂಗ ಮಹಾಗುರುವಿನ ಈ ಅಮೃತವಚನವನ್ನು ಆಲಿಸಿದರೆ ಸಂಸಾರಕ್ಕಿಂತಲೂ ಇನ್ನೊಂದು ಸನಾತನ ವಸ್ತುವೇ ಸಾರಭೂತವಾದದ್ದು ಎಂಬ ವಿಷಯ ನಿಶ್ಚಯವಾಗುತ್ತದೆ ಎಂಬುದೇ ಈ ಪ್ರಶ್ನೋತ್ತರದ ಸಾರವಾಗಿದೆ.
ಸೂಚನೆ : 9/11/2025 ರಂದು ಈ ಲೇಖನವು ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.