ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಾಣ ಹೋದರೂ ಯಾರ ಮನಸ್ಸನ್ನು ಗೆಲ್ಲಲು ಅಸಾಧ್ಯ?
ಮೂರ್ಖರ, ಸಂಶಯಗ್ರಸ್ತರ, ದುಃಖಿತರ ಮತ್ತು ಕೃತಘ್ನರ .
ಈ ಪ್ರಶ್ನೋತ್ತರದಲ್ಲಿ ಯಾವ ಬಗೆಯ ವ್ಯಕ್ತಿಯ ಮನಸ್ಸನ್ನು ಪರಿವರ್ತಿಸಲು ಅಸಾಧ್ಯ ಎಂಬುದನ್ನು ಹೇಳಲಾಗಿದೆ. ಅಂದರೆ ಎಷ್ಟೇ ಪ್ರಯತ್ನಪಟ್ಟರು ಈ ಸ್ವಭಾವಕ್ಕೆ ಸೇರಿದ ವ್ಯಕ್ತಿಯನ್ನು ಬದಲಿಸಲು ಸಾಧ್ಯವಾಗದು ಎಂದರ್ಥ. ಅವರಿಗೆ ಯಾವ ಉಪಾಯಗಳನ್ನು ಅಥವಾ ಉಪದೇಶಗಳನ್ನು ಬಳಸಿದರೂ ಎಲ್ಲವೂ ನಿರರ್ಥಕವಾದವುಗಳೇ ಆಗುತ್ತವೆ. ಒಬ್ಬ ವ್ಯಕ್ತಿಯನ್ನು 'ಸರಿಪಡಿಸಬೇಕು' ಎಂಬುದಾಗಿ ನಾವು ಅಂದುಕೊಳ್ಳುತ್ತೇವೆ. ಅದಕ್ಕಾಗಿ ಅನೇಕ ಪ್ರಯತ್ನಗಳನ್ನು ಕೂಡ ಮಾಡುತ್ತೇವೆ. ಆದರೆ ಆ ಎಲ್ಲ ಪ್ರಯತ್ನಗಳು ಇಲ್ಲಿ ಹೇಳುವ ವ್ಯಕ್ತಿಗಳ ಮೇಲೆ ಮಾಡಲ್ಪಟ್ಟಾಗ ವಿಫಲವಾಗುತ್ತವೆ. ಇದಕ್ಕೆ ಕಾರಣಗಳನ್ನು ಇಲ್ಲಿ ಹೇಳಲಾಗಿದೆ. ಮೂರ್ಖತನ, ಸಂಶಯ, ದುಃಖ ಮತ್ತು ಕೃತಘ್ನತೆ ಎಂಬ ಅವಗುಣಗಳು ಮನಸ್ಸನ್ನು ಕಲುಷಿತಗೊಳಿಸಿರುತ್ತವೆ. ಯಾವುದೇ ಉಪದೇಶಗಳೂ ಕೂಡ ಸಾರ್ಥಕವಾಗಬೇಕಾದರೆ ಮನಸ್ಸು ಹದವಾಗಿದ್ದರೆ ಮಾತ್ರ. ಈ ಸಂದರ್ಭಗಳಲ್ಲಿ ಮನುಷ್ಯನ ಮನಸ್ಸು ಮದಗೊಂಡಿರುತ್ತದೆ. ಅದನ್ನು ಮುದಗೊಳಿಸವುದು ಕಷ್ಟಸಾಧ್ಯ ಎಂಬುದಾಗಿ ಈ ಪ್ರಶ್ನೋತ್ತರ ಹೇಳುತ್ತಿದೆ.
ಮೊದಲ ಬಗೆಯ ವ್ಯಕ್ತಿ ಮೂರ್ಖ. ಮೂರ್ಖರನ್ನು ಯಾವಕಾರಣಕ್ಕೂ ಬದಲಿಸಲು ಸಾಧ್ಯವಿಲ್ಲ ಎಂಬುದಕ್ಕೆ ಒಂದು ಸುಭಾಷಿತ ಹೀಗೆ ಹೇಳಿದೆ - "ನ ತು ಪ್ರತಿನಿವಿಷ್ಟಮೂರ್ಖಜನಚಿತ್ತಮಾರಧಯೇತ್" ಎಂದು. ಅಂದರೆ ಮರಳುಗಳನ್ನು ಕಡೆದು ಅಲ್ಲಿ ಎಣ್ಣೆಯನ್ನೂ ಪಡೆಯಲು ಸಾಧ್ಯವಾದೀತು. ಮೃಗ ಮರೀಚಿಕೆಯಲ್ಲಿರುವ ನೀರನ್ನು ಕುಡಿಯಲಾದೀತು. ಮೊಲಕ್ಕೆ ಇರುವ ಕೋಡನ್ನು ಗುರುತಿಸಲಾದೀತು. ಆದರೆ ಮೂರ್ಖ ಜನರ ಮನಸ್ಸನ್ನು ಮಾತ್ರ ಎಂದೂ ಕೂಡ ಪರಿವರ್ತಿಸಲು ಸಾಧ್ಯವಿಲ್ಲ ಎಂಬುದಾಗಿ. ಈ ಸುಭಾಷಿತದಲ್ಲಿ ಹೇಳಿರುವ, ಮರಳುಗಳಿಂದ ಎಣ್ಣೆಯನ್ನು, ಮೃಗಮರೀಚಿಕೆಯಲ್ಲಿ ನೀರನ್ನು, ಮೊಲದಲ್ಲಿ ಕೋಡನ್ನು ಯಾವುದೆ ಕಾರಣಕ್ಕೂ ಕಂಡುಹಿಡಿಯಲು ಸಾಧ್ಯವೇ ಇಲ್ಲ. ಅಸಾಧ್ಯವನ್ನೂ ಒಂದುಪಕ್ಷ ಇಲ್ಲಿ ಸಾಧಿಸಬಹುದೇನೋ! ಆದರೆ ಮೂರ್ಖರ ಮನಃಪರಿವರ್ತನೆಯನ್ನು ಮಾತ್ರ ಯಾವುದೇ ಕಾರಣಕ್ಕೂ ಮಾಡಲು ಸಾಧ್ಯವಿಲ್ಲ; ಬ್ರಹ್ಮನೇ ಬಂದರೂ ಸಾಧ್ಯವಿಲ್ಲ ಎಂಬ ನಿರ್ಣಯವನ್ನು ಈ ಸುಭಾಷಿತ ಕೊಡುತ್ತಿದೆ.
ಅಂತೆಯೇ ಸಂಶಯದಿಂದ ಕೂಡಿದ ವ್ಯಕ್ತಿ. ಇವನನ್ನೂ ಪರಿವರ್ತಿಸಲು ಸಾಧ್ಯವಿಲ್ಲ. ಗೀತೆಯು ಅಪ್ಪಣೆ ಕೊಡಿಸಿದಂತೆ "ಅಜ್ಞಾನದಿಂದ ಕೂಡಿದವನು, ಶ್ರದ್ಧೆ ಇಲ್ಲದವನು ಮತ್ತು ಸಂಶಯದಿಂದ ಕೂಡಿದವನು ಈ ಮೂವರೂ ಪತಿತರೇ ಆಗುತ್ತಾರೆ", ಅವರು ಉದ್ಧಾರವಾಗಲು ಸಾಧ್ಯವಿಲ್ಲ ಎಂಬುದಾಗಿ.
ಅಂತಯೇ ಇನ್ನೊಂದು ಬಗೆಯ ಜನರು ದುಃಖಿತರು. ಇವರು ಜೀವನದಲ್ಲಿ ಬಹಳ ಕಷ್ಟವನ್ನು ಅನುಭವಿಸಿರುತ್ತಾರೆ. ಆಗ ಇವರ ಮನಸ್ಸು ಬೇರೆಯವರು ಹೇಳಿದ್ದನ್ನು ಕೇಳುವ ಸಹನೆ ಇರುವುದಿಲ್ಲ. ಅಂದರೆ ಯಾರು, ಎಷ್ಟೇ, ಸಲ್ಲುವ ಮಾತುಗಳನ್ನು ಆಡಿದರೂ ಅದನ್ನು ಅವರು, 'ಇವೆಲ್ಲವೂ ದುಃಖಕ್ಕೆ ಕಾರಣ ಏಕೆ ಕಾರಣವಾಗಬಾರದು' ಎಂದೇ ಭಾವಿಸುತ್ತಾರೆ. ಹಾಗಾಗಿ ದುಃಖಿತರನ್ನು ಬೇಗ ಪರಿವರ್ತಿಸುವುದು ಅಸಾಧ್ಯ.
ಅಂತಯೇ ಇನ್ನೊಬ್ಬ ವ್ಯಕ್ತಿ ಅಂದರೆ ಕೃತಘ್ನ. ಉಪಕಾರ ಮಾಡಿದವರನ್ನು ಸ್ಮರಿಸದ ಅಥವಾ ಅವರಿಗೆ ಅಪಕಾರ ಮಾಡುವವನೇ ಕೃತಘ್ನ. ಉಪಕಾರ ಮಾಡಿರುವ ಬಗ್ಗೆ ಯಾರಿಗೆ ಕಿಂಚಿತ್ತು ಆದರದ ಭಾವನೆ ಅಥವಾ ಮಾಡಿರುವ ಉಪಕಾರವನ್ನು ಸ್ಮರಿಸಿಕೊಳ್ಳುವುದು ಇರಲಿ, ಅದಕ್ಕೆ ಪ್ರತಿಯಾಗಿ ಅಪಕಾರವನ್ನು ಮಾಡುವ ರೀತಿಯಲ್ಲಿ ಆ ವ್ಯಕ್ತಿಯ ಸ್ವಭಾವವಿದ್ದರೆ ಅಂತಹ ಜನರನ್ನು ಪರಿವರ್ತಿಸುವುದು ಅಸಾಧ್ಯ ಎಂಬುದಾಗಿ ಇಲ್ಲಿ ಹೇಳಲಾಗಿದೆ. ಅಂದರೆ ಮೂರ್ಖರನ್ನು, ಸಂಶಯಗ್ರಸ್ತರನ್ನು, ದುಃಖಿತರನ್ನು ಮತ್ತು ಕೃತಘ್ನನನ್ನು ಹೀಗೆ ಈ ಬಗೆಯ ನಾಲ್ಕು ವ್ಯಕ್ತಿಗಳನ್ನು ಯಾವುದೇ ಬಗೆಯ ಉಪಾಯಗಳಿಂದಲೂ ಪರಿವರ್ತಿಸಲು ಅಥವಾ ಅವನನ್ನು ಸಜ್ಜನರನ್ನಾಗಿ ಮಾಡಲು ಕಷ್ಟಸಾಧ್ಯ ಅಥವಾ ಅಸಾಧ್ಯ ಎಂಬ ಆಶಯ ಈ ಪ್ರಶ್ನೋತ್ತರದಲ್ಲಿದೆ.
ಸೂಚನೆ : 23/11/2025 ರಂದು ಈ ಲೇಖನವು ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.