Saturday, September 20, 2025

ಅಷ್ಟಾಕ್ಷರೀ - 89 ಅಶಾಂತಸ್ಯ ಕುತಃ ಸುಖಮ್? (Astakshari 89)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಹಿಂದೆಯೆಲ್ಲಾ ದೊಡ್ಡ ದೊಡ್ಡ ಹಬ್ಬಗಳಂದು ಹೊಸಬಟ್ಟೆಯನ್ನುಡುವ ಕ್ರಮವಿತ್ತು. ಹೊಸ ಉಡುಗೆಯು ಯಾರಿಗೆ ಸುಖ-ಸಂತೋಷವನ್ನು ತಾರದು? ಯುಗಾದಿ-ದೀಪಾವಳಿಗಳಂತಹ ಹಬ್ಬಗಳಲ್ಲಂತೂ ಹೊಸಬಟ್ಟೆಯನ್ನುಡುವುದು ಶಾಸ್ತ್ರ/ಸಂಪ್ರದಾಯ-ವಿಹಿತವೇ ಆಗಿತ್ತು.

ನವ-ವಸ್ತ್ರಧಾರಣವು ನವ-ಸಂತೋಷವನ್ನೇ ತರುವುದು ಸರಿಯೇ. ಆದರೆ ಸಂತೋಷವೇಕಾಗಬೇಕು, ಅದರಿಂದ? ಹೊಸವಸ್ತುವಿನಲ್ಲಿ ಅದೇನೋ ಸುಖವನ್ನರಸುವ ಮನಸ್ಸು ನಮ್ಮದು. ಇದಕ್ಕೆ ಕಾರಣವಿಷ್ಟೆ. ನಮ್ಮ ಜೀವವು ಸದಾ ಸುಖವನ್ನು ಹುಡುಕುತ್ತಿರುವುದು. ಈ ವಸ್ತುವಿನಿಂದ ಸುಖ ದೊರೆತೀತೇ? ಆ ವಸ್ತುವಿನಿಂದಲೇ? - ಎಂದೆಲ್ಲಾ ಹುಡುಕುತ್ತಿರುವುದು. ಎಂದೇ ನೂತನ-ನೂತನ-ವಸ್ತುಗಳಿಗಾಗಿ ನಾವು ಹಂಬಲಿಸುತ್ತಿರುವುದು.

ಆದರೇನು? ಕೆಲವೇ ಕಾಲದಲ್ಲೇ ಆ ಹೊಸವಸ್ತುವಿನಿಂದ ಹುಟ್ಟುವ ಸುಖವು ಸ್ವಲ್ಪೀಭೂತವಾಗುವುದು. ಎಂದರೆ ಕಡಿಮೆಯೆನಿಸಲಾರಂಭಿಸುವುದು. ಆರಂಭದಲ್ಲಿ ಹೊಳಪೆನಿಸಿದುದು ಕ್ರಮೇಣ ಕಳಪೆಯೆನಿಸುವುದು.

ಇಲ್ಲೊಂದು ವಿಚಿತ್ರವೂ ಇದೆ. ಅದೇನೆಂದರೆ, ಇದು ಗೊತ್ತಿರುವುದೇ ಆದರೂ ಮತ್ತೆ ಮತ್ತೆ ಹೊಸದರ ಬಯಕೆ ಹುಟ್ಟಿಕೊಳ್ಳುತ್ತಲೇ ಇರುತ್ತದೆ. ಆದರೂ ಅವು ಅಲ್ಪಕಾಲದಲ್ಲೇ ಅತೃಪ್ತಿಯನ್ನೂ ಹುಟ್ಟುಹಾಕುತ್ತಲೇ ಇರತಕ್ಕವೇ ಸರಿ.

ಹಾಗಾದರೆ ಏನು ಸಿಕ್ಕರೆ ಸುಖವು ಶಾಶ್ವತವಾಗಿ ದಕ್ಕಿದಂತಾಗುವುದು? - ಎಂಬ ಪ್ರಶ್ನೆ ಬರುವುದಲ್ಲವೇ? ಇದಕ್ಕೆ ಭಗವದ್ಗೀತೆಯಲ್ಲಿ ಉತ್ತರವಿದೆ. ಅಶಾಂತಸ್ಯ ಕುತಃ ಸುಖಮ್?: ಶಾಂತನಲ್ಲದವನಿಗೆ ಸುಖವೆಲ್ಲಿಯದು? - ಎಂಬುದೇ ಆ ಮಾತು.

ಯಾರಿಗೆ ಶಾಂತಿಯುಂಟೋ ಆತನೇ ಶಾಂತ. ಹಾಗಾದರೆ ಶಾಂತಿ ದೊರೆಯುವುದೆಂತು?

ಯುಕ್ತನಾದವನಿಗೇ ಕೊನೆಗೆ ಶಾಂತಿಯು ದೊರೆಯುವುದೆಂಬುದನ್ನು ಗೀತೆಯು ಹೇಳುತ್ತದೆ. ಒಂದೇ ಹೆಜ್ಜೆಗೇ ದೊರೆಯದಾದರೂ ಮುಂದು ಮುಂದಕ್ಕೆ ದೊರೆಯುವುದೇ ಸರಿ.

ಹಾಗಾದರೆ ಯುಕ್ತನೆಂದರೆ ಯಾರು? ಹಾಗಲ್ಲದವನಿಗೆ ಏನಾಗುತ್ತದೆ? ಯುಕ್ತ ಎಂಬುದಕ್ಕೆ "ತಕ್ಕ, ಹೊಂದುವಂತಹ" ಎಂಬ ಅರ್ಥಗಳಿರುವುದು ಪ್ರಸಿದ್ಧವೇ. "ಹೀಗೆ ಮಾಡುವುದು ಅಯುಕ್ತ" ಎಂದರೆ "ಅದಕ್ಕೆ (ಒಪ್ಪ)ತಕ್ಕದ್ದಲ್ಲ" ಎಂದಲ್ಲವೇ?

ಇದಲ್ಲದೆ ಯುಕ್ತವೆಂಬ ಪದಕ್ಕೆ ಮೌಲಿಕವಾದ ಮತ್ತೊಂದರ್ಥವೂ ಉಂಟು. ಯೋಗ ಎಂಬ ಪದವೂ ಯುಕ್ತ ಎಂಬ ಪದವೂ ಯುಜ್ - ಎಂಬ ಒಂದೇ ಧಾತುವಿನಿಂದಲೇ ಬಂದಿರುವುದು. ಆ ಧಾತುವಿಗೆ, ಸೇರಿಸುವುದೆಂಬ ಅರ್ಥವಿದೆ. ಯುಕ್ತವೆಂದರೆ "ಯೋಗವನ್ನು ಹೊಂದಿರುವ" ಎಂದೇ ಅರ್ಥ.

ಯಾವುದೀ ಯೋಗ? ಲೋಕದಲ್ಲಿ "ನಿನಗೆ ಒಳ್ಳೆಯ ಐಶ್ವರ್ಯದ ಯೋಗವಿದೆ", "ನಿನ್ನ ಜಾತಕದಲ್ಲಿ ಗಜಕೇಸರಿಯೋಗವಿದೆ" - ಎಂದುಮುಂತಾಗಿ ಹೇಳುವರಲ್ಲವೇ? ಹಾಗಿದ್ದರೆ ಯಾವ ಯೋಗವನ್ನು ಹೊಂದಿರತಕ್ಕವನು ಯುಕ್ತನೆನಿಸುವನು?

ಶ್ರೀರಂಗಮಹಾಗುರುಗಳು ತೋರಿಸಿಕೊಡುವಂತೆ ಇಲ್ಲಿ ಹೇಳಿರುವುದು ಆತ್ಮಯೋಗವನ್ನು. ಒಂದು ವಸ್ತುವು ಬೇರೊಂದು ವಸ್ತುವಿನೊಂದಿಗೆ ಸೇರಬಹುದು. ಅಲ್ಲಿಗೆ ಆತ್ಮಯೋಗವೆಂದರೆ ತನ್ನನ್ನು ತಾನೇ ಸೇರುವುದೆಂದೇ? ಹಾಗೆಂದರೇನು?

ಜೀವ-ದೇವರ ಸಂಯೋಗವೇ ನಿಜವಾದ ಯೋಗ, ಆತ್ಮಯೋಗ. ಅದನ್ನುಳ್ಳವನೇ ನಿಜವಾದ ಯುಕ್ತನು. ಅದಿಲ್ಲದವನು ಅಯುಕ್ತ.

ಯಾರು ಅಯುಕ್ತನೋ ಅವನಿಗೆ ಬುದ್ಧಿಯಿರದು - ಎನ್ನುತ್ತದೆ, ಗೀತೆ. ನಮಗೆಲ್ಲಾ ಆತ್ಮಯೋಗವಿನ್ನೂ ಆಗಿಲ್ಲವೆಂದರೆ ಬುದ್ಧಿಯೇ ಇಲ್ಲವೆಂದೇ?

ಶ್ರೀರಂಗಮಹಾಗುರುಗಳು ವಿವರಿಸುವಂತೆ, ಅಂತಹವನ ಬುದ್ಧಿಯಲ್ಲಿ ನಿರ್ಣಯವು ಪೂರ್ಣವಾಗಿ ಅಥವಾ ಸ್ಪಷ್ಟವಾಗಿ ಮೂಡುವುದಿಲ್ಲ. ಅಲ್ಲದೆ, ಅಂತಹ ಬುದ್ಧಿಯಾದರೂ ಕಾರ್ಯ-ಕಾರಿಣಿಯಾಗುವಂತಹುದಲ್ಲ.

ಬುದ್ಧಿಯೆಂಬುದು ಜೀವ-ದೇವರ ಕೊಂಡಿ.  ಬುದ್ಧಿಶಾಲಿ ಎಂದು ತೋರಿಕೆಗೆ ಕಂಡರೂ, ಆತ್ಮಯೋಗ-ರಹಿತನ ಬುದ್ಧಿಯು ಎಟುಕಿಸಿಕೊಳ್ಳಬೇಕಾದುದನ್ನು ಎಟುಕಿಸಿಕೊಳ್ಳಲಾರದು.

ಅಯುಕ್ತನಾದವನಿಗೆ ಬುದ್ಧಿಯಿರದು ಮಾತ್ರವಲ್ಲ, ಭಾವನೆಯೂ ಇರದು – ಎನ್ನುತ್ತದೆ, ಗೀತೆ.

ನಮ್ಮ ಮನಸ್ಸಿಗೆ ತೋರುವುದೆಲ್ಲಾ ಭಾವನೆಯೆಂದಲ್ಲ. ತತ್ತ್ವಗಳ ಭಾವನೆಯೇ ಭಾವನೆ. "ಸುಳ್ಳು ಹೇಳುತ್ತಿರುವವನನ್ನು ಮುಂದೆ ಜನರು ನಂಬರು" - ಎಂಬುದು ಲೋಕವ್ಯವಹಾರದ ತತ್ತ್ವ. "ಯೋಗಶಾಸ್ತ್ರದಲ್ಲಿ ಹೇಳುವ ಯಮ-ನಿಯಮಗಳನ್ನು ಪಾಲಿಸುವವನು ಸಮಾಧಿಸ್ಥಿತಿಗೆ ನಿಕಟನಾಗುವನು" - ಎಂಬುದು ಅಧ್ಯಾತ್ಮತತ್ತ್ವ. ಇಂತಹ ತತ್ತ್ವಗಳನ್ನು ಗುರುತಿಸಿಕೊಳ್ಳುತ್ತಿರುವುದು ಜೀವನದಲ್ಲಿ ಮುಖ್ಯವಾದದ್ದು, ಪ್ರಗತಿಗೆ ಹೇತುವಾದದ್ದು.

ಯಾವನಿಗೆ ತತ್ತ್ವಭಾವನೆಯಿಲ್ಲವೋ ಅಂತಹವನಿಗೆ ಶಾಂತಿಯೆಂಬುದೂ ಇರದು: ಆಗ, "ಇದನ್ನು ಮಾಡು, ಅದನ್ನು ಮಾಡು, ಇದರ ಸವಿ ನೋಡು, ಅದರ ರುಚಿ ನೋಡು" - ಎಂದೆಲ್ಲಾ ಮನಸ್ಸು ಪರದಾಡುತ್ತಿರುವುದು. ಶಾಂತಿಯಿಲ್ಲವೆಂದರೆ ಪರದಾಟವೆಂದೇ.

ಶಾಂತಿಯುಳ್ಳವನೇ ಶಾಂತ. ಅವನಿಗೇ ಸುಖ. ಇದನ್ನೇ, ಶಾಂತಿಯಿಲ್ಲದವನಿಗೆ ಸುಖವೆಲ್ಲಿಯದು? - ಎಂದು ಕೇಳುತ್ತದೆ, ಗೀತೆ. ನಾನಾರೂಪವಾದ ಆಸೆಗಳು ಕಾಡುತ್ತಿರುವವನಿಗೆ ನೆಮ್ಮದಿಯಿರದು.

ಹೀಗಾಗಿ, ಯುಕ್ತನಿಗೇ – ಎಂದರೆ ಯೋಗ-ಸಂಪನ್ನನಾದವನಿಗೇ - ಬುದ್ಧಿ-ಭಾವನೆ-ಶಾಂತಿ-ಸುಖಗಳು - ಎನ್ನುವ ಕಾರ್ಯ-ಕಾರಣಗಳ ಸೊಗಸಿನ ಸರಪಣಿಯನ್ನು ಗೀತೆ ಕಾಣಿಸುತ್ತದೆ.

ಸೂಚನೆ: 20/9//2025 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.