ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಯುದ್ಧಕ್ಕೆ ಮುನ್ನಾ ಸಿದ್ಧತೆಗಳೇನು?
ರಾಜನು ತನ್ನ ದೇಶವನ್ನು ಹೇಗೆ ಕಾಪಾಡಿಕೊಳ್ಳಬೇಕೆಂಬುದನ್ನು ನಾರದರು ಯುಧಿಷ್ಠಿರನಿಗೆ ವಿವರಿಸಿ ಹೇಳುತ್ತಿದ್ದಾರೆ.
ಶತ್ರುರಾಷ್ಟ್ರದ ಸೇನಾಮುಖ್ಯಾಧಿಕಾರಿಗಳಿಗೆ ಗುಟ್ಟಾಗಿ ಯೋಗ್ಯತಾನುಸಾರಿಯಾಗಿ ರತ್ನಗಳನ್ನು ಕೊಟ್ಟು ವಶದಲ್ಲಿಟ್ಟುಕೊಂಡಿರಬೇಕು. ಹಾಗೆ ಮಾಡುತ್ತಿದ್ದೇಯೆ ತಾನೆ?
ರಾಜನು ಮೊಟ್ಟಮೊದಲು ತನ್ನನ್ನು ತಾನೇ ಜಯಿಸಿಕೊಂಡಿರಬೇಕು. ಅದನ್ನು ಸಾಧಿಸಿ ಜಿತೇಂದ್ರಿಯನಾಗಿರಬೇಕು. ಪ್ರಮತ್ತರಾಗಿರುವ ಹಾಗೂ ಗರ್ವಭರಿತರಾದ ಶತ್ರುಗಳನ್ನು ಜಯಿಸಲು ಆಗಲೇ ಸಾಧ್ಯವಾಗುವುದು. ನೀನು ಹಾಗೆ ಮಾಡುತ್ತಿರುವೆ ತಾನೆ?
ಶತ್ರುವಿನ ಮೇಲೆ ದಂಡೆತ್ತಿಹೋಗುವುದೆಂದರೆ ಮೊಟ್ಟಮೊದಲು ಸಾಮ-ದಾನ-ಭೇದಗಳನ್ನು ಪ್ರಯೋಗಿಸಿ ನೋಡಿಯಾಗಿರಬೇಕು. ಹಾಗೆ ಅವನ್ನು ಪ್ರಯೋಗಿಸಿದ ಬಳಿಕವೇ ಯುದ್ದಮಾಡಬಹುದು, ಮುಂಚೆ ಅಲ್ಲ.
ಶತ್ರುಗಳ ಮೇಲೆ ದಂಡೆತ್ತಿ ಹೋಗುವ ಮೊದಲು ಮಾಡಬೇಕಾದ ಕೆಲಸವೊಂದಿದೆ. ಅದೆಂದರೆ ಮೂಲವನ್ನು ದೃಢಪಡಿಸಿಕೊಳ್ಳುವುದು - ಅರ್ಥಾತ್ ನಿನ್ನ ರಾಜ್ಯವೇ ಗಟ್ಟಿಯಾಗಿ ಉಳಿದಿದೆಯೇ? - ಎಂದು ಪರೀಕ್ಷಿಸಿಕೊಳ್ಳುವುದು; ಆನಂತರವೇ ಶತ್ರುಗಳ ಮೇಲೇರಿಹೋಗತಕ್ಕದ್ದು; ಹಾಗೂ ಗೆದ್ದದ್ದನ್ನು ರಕ್ಷಿಸಿಕೊಳ್ಳಲಾಗುವುದು. ರಾಜನೇ, ನೀನು ಹಾಗೆ ಮಾಡುತ್ತಿರುವೆ ತಾನೆ?
ಸೈನ್ಯಕ್ಕೆ ಎಂಟು ಅಂಗಗಳಿರುವುವು: ಧನ-ರಕ್ಷಕ, ದ್ರವ್ಯ-ಸಂಗ್ರಾಹಕ, ಚಿಕಿತ್ಸಕ, ಗುಪ್ತಚರ, ಪಾಚಕ, ಸೇವಕ, ಲೇಖಕ ಹಾಗೂ ಪ್ರಹರೀ - ಎಂಬುದಾಗಿ. ಹಾಗೆಯೇ ಅದಕ್ಕೆ ನಾಲ್ಕು ಬಲಗಳುಂಟು - ಹಸ್ತಿ(ಗಜ), ಅಶ್ವ, ರಥ, ಪದಾತಿ - ಎಂಬುದಾಗಿ. ಹೀಗೆ ಅಷ್ಟಾಂಗಗಳಿಂದಲೂ ಚತುರ್ಬಲಗಳಿಂದಲೂ ಕೂಡಿರುವ ಸೈನ್ಯಕ್ಕಿರುವ ಅಧಿಪತಿಗಳು ಸೈನ್ಯವನ್ನು ಚೆನ್ನಾಗಿ ಮುನ್ನಡೆಸಬಲ್ಲವರಾಗಿರಬೇಕು, ಹಾಗೂ ಶತ್ರುಗಳನ್ನು ಕೆಡವಲು ಸಮರ್ಥರಾಗಿರಬೇಕು. ನಿನ್ನ ಸೈನ್ಯ-ಸೇನಾಧಿಪತಿಗಳು ಹೀಗೇ ಇರುವುದಲ್ಲವೆ?
ಶತ್ರುರಾಜ್ಯದಲ್ಲಿ ಕ್ಷಾಮ ಬಂದಿರುವ ಸಮಯ, ಪೈರುಗಳ ಕೊಯಿಲಿನ ಕಾಲ - ಇವುಗಳನ್ನು ಗಣಿಸದೇ ಶತ್ರುಗಳನ್ನು ಸಂಹರಿಸತಕ್ಕದ್ದು. ನೀನು ಹಾಗೆ ಮಾಡುತ್ತಿರುವೆಯಷ್ಟೆ?
ಅನ್ಯರಾಷ್ಟ್ರಗಳನ್ನು ಗೆದ್ದಾಗ ಅಲ್ಲಿ ತನ್ನ ಅಧಿಕಾರಿಗಳನ್ನು ರಾಜನು ನೇಮಿಸುವವಷ್ಟೆ? ಅವರೂ, ಸ್ವರಾಷ್ಟ್ರದಲ್ಲಿಯೇ ನೇಮಕಗೊಂಡ ಅಧಿಕಾರಿಗಳೂ, ರಾಜಾದಾಯವನ್ನು ಸಂಗ್ರಹಿಸುತ್ತಾ ಇದ್ದು, ಪರಸ್ಪರ ಹೊಂದಿಕೊಂಡಿದ್ದು ರಾಜ್ಯರಕ್ಷಣೆಯನ್ನು ಮಾಡುತ್ತಿರಬೇಕು. ನಿನ್ನ ಅಧಿಕಾರಿವರ್ಗದವರೆಲ್ಲ ಹಾಗಿರುವರು ತಾನೆ?
ರಾಜನು ಸೇವಿಸುವ ಆಹಾರ-ಪದಾರ್ಥ, ಧರಿಸುವ ವಸ್ತ್ರಗಳು, ಸುಗಂಧ-ದ್ರವ್ಯಗಳು - ಇವನ್ನು ರಾಜನು ನೆಚ್ಚುವ ಅಧಿಕಾರಿಗಳೇ ರಕ್ಷಿಸತಕ್ಕದ್ದು. ನಿನ್ನ ರಾಜ್ಯದಲ್ಲಿ ಈ ಪ್ರಕಾರವಾಗಿಯೇ ನಡೆಯುತ್ತಿದೆಯಷ್ಟೆ? (ಭಾರತದ ಹಿಂದಿನ ಪ್ರಧಾನಿಯೊಬ್ಬರು ವಿದೇಶದಲ್ಲಿ ಮರಣಹೊಂದಿದಾಗ ಅವರ ಆಹಾರದಲ್ಲೇ ವಿಷ-ಮಿಶ್ರಣವಾಗಿದ್ದರೂ, ಅವರ ಆಹಾರ-ಪರಿಚಾರಕನ ಮೇಲೆಯೇ ಸಂಶಯವು ಪ್ರಬಲವಾಗಿದ್ದರೂ, ಅದನ್ನೆಲ್ಲ ಮುಚ್ಚಿಹಾಕಲಾಯಿತಷ್ಟೆ?).
ರಾಜನ ಬೊಕ್ಕಸ, ವಾಸ-ಸ್ಥಳ, ವಾಹನ (ಗಜಶಾಲೆ-ಅಶ್ವಶಾಲೆಗಳು), ದ್ವಾರಗಳು, ಆಯುಧಾಗಾರ - ಇವೆಲ್ಲೆಡೆ ನಿನ್ನ ಕ್ಷೇಮವನ್ನೇ ಸಾಧಿಸತಕ್ಕವರೂ ನಿನ್ನಲ್ಲಿಯೇ ಭಕ್ತಿಯುಳ್ಳವರೂ ಆದವರೇ ಮೇಲ್ವಿಚಾರಕರಾಗಿರುವರಷ್ಟೆ?
ಅರಮನೆಯ ಒಳನೆಲೆಗಳಲ್ಲಿ ಕೆಲಸಮಾಡುವ ಪಾಚಕರೇ ಮೊದಲಾದವರೂ, ಹತ್ತಿರದ ನೆಲೆಗಳಲ್ಲಿರುವ ಮಂತ್ರಿ-ಸೇನಾಪತಿ-ರಾಜಪುತ್ರ ಮೊದಲಾದವರೂ ಸುರಕ್ಷಿತರಾಗಿರತಕ್ಕದ್ದು. ಇವರುಗಳಿಂದ ತನ್ನ ರಕ್ಷಣೆಯನ್ನು ಸಾಧಿಸುವುದು, ಹಾಗೂ ಇವರುಗಳಿಗೆ ತಾನು ರಕ್ಷಣೆಯನ್ನು ಸಾಧಿಸುವುದು - ಹೀಗೆ ಪಾರಸ್ಪರಿಕ-ರಕ್ಷಣವೆಂಬುದು ಮುಖ್ಯ. ಅದೆಲ್ಲವೂ ಹಾಗೆ ಆಗುತ್ತಿದೆ ತಾನೆ, ನಿನ್ನ ರಾಜ್ಯದಲ್ಲಿ?
ಪಾನ-ದ್ಯೂತಗಳು, ಎಂದರೆ ಕುಡಿತ-ಜೂಜುಗಳು, ಹಾಗೂ ಕ್ರೀಡೆ-ಸ್ತ್ರೀಸಂಗ- ಇವುಗಳು, ರಾಜರಿಗಂಟತಕ್ಕ ವ್ಯಸನಗಳು (ಚಟಗಳು). ಪೂರ್ವಾಹ್ಣದ ಕಾಲದಲ್ಲಿ ಇಂತಹ ವಿಷಯಗಳನ್ನೊಡ್ಡಿ ನಿನ್ನ ಹಣ-ಸಮಯ ಗಳನ್ನು ಸೇವಕರು ಹಾಳುಮಾಡುತಿಲ್ಲ ತಾನೆ?
ಸೂಚನೆ : 31/8/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.