ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಯಾವುದಕ್ಕಾದರೂ ತೀವ್ರವಾಗಿ ಹಂಬಲಿಸಿ, ಅದು ದೊರೆಯಲಾರದೋ ಏನೋ ಎನ್ನಿಸಿಬಿಟ್ಟಾಗ, ಮನಸ್ಸಿನಲ್ಲಿ ತೋರುವುದೇನು? ಮುಂದಿನ ಜನ್ಮದಲ್ಲಾದರೂ ಆ ಭಾಗ್ಯವೆನಗೆ ದೊರೆಯಲಿ - ಎಂದುಕೊಳ್ಳುತ್ತೇವೆ. ಹಾಗೆಯೇ ತೋರಿದೆ, ಲೀಲಾಶುಕನಿಗೂ.
ಯಾವುದಾ ಆಸೆ? ಕೃಷ್ಣನನ್ನು ಕಾಣುವ ಆಸೆ. ಆತನ ಸಮೀಪ ಸಾಗುವ ಆಸೆ, ಆತನ ಮುಖದ ಬಳಿ ಸುಳಿಯುವ ಆಸೆ, ಆತನ ಅಧರದ ಸ್ಪರ್ಶದ ಆಸೆ. ಇಷ್ಟೂ ಭಾಗ್ಯವೂ ಈಗಾಗಲೇ ದೊರೆತಿರುವುದು ವಂಶ-ನಾಳಕ್ಕೆ - ಎಂದರೆ ಕೊಳಲಿನ ಕೊಳವೆಗೆ. ಎಲ್ಲ ವಂಶನಾಳಗಳಿಗೂ ಅದು ದಕ್ಕಿರುವುದಲ್ಲ, ಕೇವಲ ಯಮುನಾನದಿಯ ದಡದಲ್ಲಿರುವ ಬೊಂಬಿಗಷ್ಟೇ ಸಿಕ್ಕ ಭಾಗ್ಯವದು!
ಎಂತಹ ಧನ್ಯತೆಯದಕ್ಕೆ! ಕೃಷ್ಣನ ಕೆಳದುಟಿಯ ಸನಿಹದಲ್ಲೇ, ಎಂದರೆ ತುಟಿಗೆ ಸ್ಪರ್ಶವಾಗುವಂತೆ ಇಡುವುದುಂಟಲ್ಲಾ, ಅದಕ್ಕಿಂತ ಧನ್ಯವಾದ ಅವಸ್ಥೆಯಿನ್ನೊಂದಿರಲು ಸಾಧ್ಯವೇ? ಎಂತಹ ತುಟಿಯದು! ಮಣಿಯನ್ನು ಹೋಲುವ ತುಟಿ. ಮಣಿಯೆಂದರೆ ಹವಳದ ಮಣಿ. ಪ್ರವಾಳ-ಮಣಿಯ ಕೆಂಪೇ ಕೆಂಪು. ಆ ರಕ್ತವಾದ - ಎಂದರೆ ಕೆಂಪನೆಯ - ತುಟಿಯಲ್ಲಿ ಅನುರಕ್ತವಾದ ಮನಸ್ಸು, ಈ ಕೃಷ್ಣಪ್ರಿಯ-ಕವಿಯದು.
ಯಾರ ತುಟಿಯದು? ಆಭೀರ-ಸೂನುವಿನ ತುಟಿ. ಎಂದರೆ ಗೊಲ್ಲರ ಹುಡುಗನ ತುಟಿ. ಸರಳವಾಗಿ ತೋರುವ ಈತ ಮಹಾಮಹಿಮನೇ ಸರಿ. ತನ್ನ ಮಹಿಮೆಯನ್ನು ಯಾರ ಮುಂದೆಯೂ ತೋರಿಸಿಕೊಳ್ಳದವ. ಎಂದೇ ಅಲ್ಲವೆ, ಜನಿಸಿದ್ದು ಜೈಲಲ್ಲಿ, ಬೆಳದದ್ದು ದನಗಾಹಿಗಳ ನಡುವೆ? ಆದರೂ, "ಬಲ್ಲವನೇ ಬಲ್ಲ ಬೆಲ್ಲದ ಸವಿಯ" ಎನ್ನುವಂತೆ, ಗೊಲ್ಲನಾಗಿ ತೋರಿಕೊಂಡಿರುವವ ಸಾಧಾರಣಮನುಷ್ಯನಲ್ಲ, ಸಾಕ್ಷಾತ್ ಪರಮಪುರುಷನೇ ಅವನು - ಎಂಬುದನ್ನು ಲೀಲಾಶುಕನು ಬಲ್ಲ.
ಎಂದೇ, ಹೇರಳವಾಗಿ ಪುಣ್ಯವನ್ನು ಸಂಪಾದಿಸಿ, ಮತ್ತೊಂದು ಜನ್ಮದಲ್ಲಾದರೂ ಕೃಷ್ಣಾಧರ-ಸಾಮೀಪ್ಯವನ್ನು ಹೊಂದಲು ಬಯಸುತ್ತಾನೆ.
ವಾಸ್ತವವಾಗಿ, ಯಮುನೆಯ ದಡದಲ್ಲಿ ಬೆಳೆದುಕೊಂಡಿರುವ ಬೊಂಬುಗಳೆಲ್ಲಕ್ಕೂ ಈ ಭಾಗ್ಯವೇನಿಲ್ಲ. ಯಾವುದೋ ಪುಣ್ಯಶಾಲಿಯಾದ ಬೊಂಬಿಗೆ ಮಾತ್ರವೇ ಅದಿರುವುದು. ಅಂತಹ ವೇಣು-ನಾಳವಾಗಿಯೇ ತಾನು ಮುಂದಿನ ಜನ್ಮದಲ್ಲಿ ಜನಿಸಬೇಕೆಂಬ ಬಯಕೆ ಲೀಲಾಶುಕನದು.
ಶ್ಲೋಕ ಹೀಗಿದೆ:
ಅಪಿ ಜನುಷಿ ಪರಸ್ಮಿನ್ ಆತ್ತ-ಪುಣ್ಯೋ ಭವೇಯಂ/
ತಟ-ಭುವಿ ಯಮುನಾಯಾಃ ತಾದೃಶೋ ವಂಶ-ನಾಳಃ |
ಅನುಭವತಿ ಯ ಏಷಃ ಶ್ರೀಮದಾಭೀರ-ಸೂನೋಃ/
ಅಧರಮಣಿ-ಸಮೀಪ-ನ್ಯಾಸ-ಧನ್ಯಾಂ ಅವಸ್ಥಾಮ್ ||
***
ಓ ಮನಸ್ಸೇ, ಶ್ರೀಕೃಷ್ಣನನ್ನು ಪರಿಚಯ ಮಾಡಿಕೋ - ಎನ್ನುತ್ತಾನೆ, ಲೀಲಾಶುಕ. ಪರಿಚಯವೆಂದರೆ ಚೆನ್ನಾಗಿ ತಿಳಿದುಕೊಳ್ಳುವುದು ಎಂದೇ ಅರ್ಥ - ಸಂಸ್ಕೃತದಲ್ಲಿ!
ಹರಿಯನ್ನೇಕೆ ಚೆನ್ನಾಗಿ ಅರಿಯಬೇಕು? ಏಕೆಂದರೆ ಆತನು ಸದಾ ಸ್ಮರಣೀಯ. ಅದರಿಂದೇನು? - ಎಂಬುದನ್ನು ಐದಾರು ವಿಶೇಷಣಗಳಿಂದ ಹೇಳಿದೆ.
ಅತ್ಯಾಕರ್ಷಕನಾಗಿದ್ದಾನೆ ಕೃಷ್ಣ! ಆತನ ಕಣ್ಣೇನು, ಮೈಬಣ್ಣವೇನು, ಭೂಷಣವೇನು! ಪ್ರಾತಃಕಾಲದ ಕಮಲಗಳು ಅದೆಂತು ಸೊಬಗೋ ಅಂತಿವೆ ಆತನ ನೇತ್ರಗಳು. ಮಧ್ಯಾಹ್ನದ ಮೇಲಾದರೆ ಕಮಲಗಳು ಕಳೆಗುಂದುವುವು. ಮುಸ್ಸಂಜೆಯ ಹೊತ್ತಿಗೆ ಮುದುಡಲಾರಂಭಿಸುವುವು. ಹಗಲಾಗುತ್ತಲೇ ಹುರುಪಿನಿಂದ ಹೊಳೆಯುವುವು. ಹೀಗೆ ಪ್ರಾತರಂಭೋಜದಂತಿರುವುವು ಕೃಷ್ಣನ ಕಂಗೊಳಿಸುವ ಕಂಗಳು.
ಇನ್ನು ಆತನ ಕಬರವೋ, ಎಂದರೆ ಕೇಶಪಾಶವೋ, ಅಭಿರಾಮವಾಗಿದೆ. ಅಭಿರಾಮವೆಂದರೆ ರಮಣೀಯ. ಯಾವುದರಿಂದಾಗಿ ರಮಣೀಯತೆ? ಹೊಳೆಯುವ ನವಿಲುಗರಿಗಳ ಮಾಲೆಯಿಂದಾಗಿ: ಆತನ ತಲೆಯ ಮೇಲೆ ನವಿಲುಗರಿಯಿದೆಯೆಂದರೆ ಒಂದೇ ಒಂದು ಗರಿಯೆಂದೇನಲ್ಲ. ಹಲವು ಗರಿಗಳನ್ನಲ್ಲಿ ಪೋಣಿಸಿದೆ. ಇದನ್ನೇ ಪಿಂಛ-ದಾಮವೆಂದಿರುವುದು. ಕಟ್ಟಿರುವ ಗರಿಯ ಗೊಂಚಲಿನಿಂದಾಗಿ ಕಳೆಕಟ್ಟಿದೆ ಆತನ ಜುಟ್ಟು.
ಇನ್ನು ಆತನ ಮೈಬಣ್ಣವೋ? ಇಂದ್ರನೀಲ-ಮಣಿಯಂತಿರುವುದು. ಇಂದ್ರನು ವಲನೆಂಬ ಅಸುರನನ್ನು ಸಂಹರಿಸಿದನು; ಅಂದಿನಿಂದ ಆತನಿಗೆ ವಲಾರಿ ಎಂಬ ಹೆಸರು. ಇಂದ್ರನ ಈ ಹೆಸರಿನಲ್ಲೇ ಒಂದು ಊರೇ ಇದೆ, ಕರ್ಣಾಟಕದಲ್ಲಿ! ವಲಾರಿ ಎಂಬುದೇ ಬಳ್ಳಾರಿಯಾಗಿರುವುದು! ಇದನ್ನು ೧೪ನೇ ಶತಮಾನದ ಅಹೋಬಲ ಕವಿಯ ವಿರೂಪಾಕ್ಷ-ವಸಂತೋತ್ಸವ-ಚಂಪುವಿನಿಂದ ಅರಿಯಬಹುದು. ವಕಾರವು ಬಕಾರವಾಗಿದೆ, ಅಷ್ಟೆ. ವಲನನ್ನು ಸಂಹರಿಸಿದುದರಿಂದಲೇ ಇಂದ್ರನಿಗೆ ಬಲಭಿದ್ ಎಂಬ ಹೆಸರೂ ಸಂದಿದೆ. ಬಲಾಸುರನನ್ನು ಭೇದಿಸಿದವನು, ಎಂದರೆ ಸಂಹರಿಸಿದವನು, ಇಂದ್ರನೇ.
ಇಂದ್ರನ ಹೆಸರನ್ನು ಒಂದು ಉಪಲಕ್ಕೆ, ಎಂದರೆ ಕಲ್ಲಿಗೆ, ಸೇರಿಸಲಾಗುತ್ತದೆ. ಇಂದ್ರನೀಲ-ಮಣಿಯೆಂದರೆ ಇದೇ. ಈ ಇಂದ್ರಮಣಿಯ ನೀಲವರ್ಣವೇನುಂಟೋ ಕೃಷ್ಣನ ನೀಲವರ್ಣವೆಂದರೂ ಅದುವೇ. ಇದು ಆತನ ಮೈಬಣ್ಣವನ್ನು ಹೇಳುತ್ತದೆ.
ಇವಿಷ್ಟು ಗುಣಾಂಶಗಳಿದ್ದರೂ ಆಕರ್ಷಣೆಗಳಿದ್ದರೂ ಅವನ್ನೆಲ್ಲಾ ಆಸ್ವಾದಿಸುವವರೊಬ್ಬರಿಲ್ಲದಿದ್ದರೆ ಏನು ಪ್ರಯೋಜನ? ಆ ವಿಷಯದಲ್ಲಿ ಕೃಷ್ಣನು ಭಾಗ್ಯಶಾಲಿಯೇ. ಏಕೆ? ಏಕೆಂದರೆ ಆತನ ಈ ರೂಪಸಾಮಗ್ರಿಯನ್ನು ಮನಸಾರೆ ಮೆಚ್ಚುವ ಮಂದಿಯಿದ್ದರು. ವಲ್ಲವಿಯರೇ ಆವರು. ಎಂದರೆ ಗೊಲ್ಲತಿಯರು. ಅವರಂತೂ ತಮ್ಮ ಭಾಗ್ಯವೇ ಕೃಷ್ಣನೆಂದು ನೆಚ್ಚಿಕೊಂಡಿದ್ದವರು. ಆದ್ದರಿಂದ ವಲ್ಲವೀ-ಭಾಗ್ಯ-ರೂಪನಾದವನೇ ಕೃಷ್ಣ. ಭಾಗ್ಯವೆನ್ನುವುದರ ಬದಲು, ಈ ಶ್ಲೋಕದಲ್ಲಿ ಅದರ ಪರ್ಯಾಯವಾದ ಭಾಗಧೇಯವೆಂಬ ಪದವನ್ನು ಬಳಸಿದೆ.
ಇವೆಲ್ಲದರ ಜೊತೆಗೆ, ಅಥವಾ ಇವೆಲ್ಲಕ್ಕೂ ಮಕುಟಪ್ರಾಯವಾದುದೆಂದರೆ, ಆತನ ವಾಸ್ತವಸ್ವರೂಪ. ಆತನು ಮುಕುಂದ, ಎಂದರೆ ಮುಕುತಿಯನ್ನು ಕೊಡತಕ್ಕವನು. ಆತನು ಜಗತ್ತಿಗೇ ಕಾರಣನಾದವನು. ವೇದಗಳೆಲ್ಲವೂ ವಿಶ್ವವನ್ನೇ, ವಿಶ್ವದ ಶಕ್ತಿಗಳನ್ನೇ, ಚಿತ್ರಿಸುವುವು, ಕೊಂಡಾಡುವುವು. ನಿಗಮಗಳೆಂದರೆ ವೇದಗಳೇ. ನಿಖಿಲ-ನಿಗಮವನ್ನು, ಎಂದರೆ ಸಮಸ್ತ-ವೇದವನ್ನೂ, ಒಂದು ಬಳ್ಳಿಯೆಂದು ಭಾವಿಸುವುದಾದರೆ, ಆ ವಲ್ಲಿಗೆ ಅಥವಾ ಬಳ್ಳಿಗೆ ಆರಂಭ-ಸ್ಥಾನವಾದ ಮೂಲ-ಕಂದವೆಂಬುದೇನುಂಟೋ, ಎಂದರೆ ಆರಂಭದ ಗೆಡ್ಡೆಯೇನುಂಟೋ, ಆತನೇ ಈ ಮುಕುಂದ ಅಥವಾ ಕೃಷ್ಣ.
ಹೀಗೆ ಸುಂದರವಾದ ಕಣ್ಣುಳ್ಳವನೂ, ಕಪ್ಪನೆಯ ಬಣ್ಣವುಳ್ಳವನೂ, ಸುಭಗವಾದ ಅಲಂಕಾರವನ್ನು ಮಾಡಿಕೊಂಡಿರುವವನೂ, ಗೋಪಿಯರ ಭಾಗ್ಯದೇವತೆಯೂ ಆದವನ ಪರಮ-ಸ್ವರೂಪವೇನೆಂಬುದನ್ನು ಕೊನೆಯ ಪಾದದಲ್ಲಿ ಹೇಳಿದೆ: ವೇದಗಳಿಗೆಲ್ಲ ಮೂಲಸ್ಥಾನವೇ ಆದವನು ಮುಕುಂದ.
ಆತನನ್ನು ಚೆನ್ನಾಗಿ ಅರಿತುಕೋ ಮನವೇ! - ಎಂಬುದಾಗಿ ಲೀಲಾಶುಕನು ತನ್ನ ಮನಸ್ಸಿಗೇ ಹಿತೋಪದೇಶವನ್ನು ನೀಡುತ್ತಿದ್ದಾನೆ:
ಅಯಿ ಪರಿಚಿನು ಚೇತಃ! ಪ್ರಾತರಂಭೋಜನೇತ್ರಂ
ಕಬರ-ಕಲಿತ-ಚಂಚತ್- ಪಿಂಛ-ದಾಮಾಭಿರಾಮಂ |
ವಲಭಿದ್-ಉಪಲ-ನೀಲಂ ವಲ್ಲವೀ-ಭಾಗಧೇಯಂ
ನಿಖಿಲ-ನಿಗಮ-ವಲ್ಲೀ-ಮೂಲಕಂದಂ ಮುಕುಂದಂ ||
***
ಪುಟ್ಟಕೃಷ್ಣನ ಪುಟ್ಟ ಚಿತ್ರಣ ಈ ಶ್ಲೋಕದ ವಸ್ತು. ಕೃಷ್ಣನಿನ್ನೂ ಜಾನು-ಚರ, ಎಂದರೆ ಮಂಡಿಯ ಮೇಲೆ ನಡೆಯುವವನು. ಅರ್ಥಾತ್ ಅಂಬೆಗಾಲಿಕ್ಕುವವನು. ಕೃಷ್ಣನೇನೂ ಬಡವರ ಮನೆಯಲ್ಲಿರಲಿಲ್ಲ. ನಂದಗೋಪನೇನು ದರಿದ್ರನೇ? ಆತನ ಮನೆಯ ನೆಲವೇ ಮಣಿ-ಖಚಿತ. ಎಂದೇ ಅದನ್ನು ರತ್ನ-ಸ್ಥಲವೆಂದಿರುವುದು. ಅರ್ಥಾತ್ ಹೊಳೆಯುವ ನೆಲವದು.
ಹೊಳೆಯುವ ನೆಲದಲ್ಲಿ ಮುಖವು ಪ್ರತಿಫಲಿತವಾಗುವುದಿಲ್ಲವೇ? ಹೀಗೆ ರತ್ನಸ್ಥಲದಲ್ಲಿ ಸಂಕ್ರಾಂತವಾಗಿದೆ ಕೃಷ್ಣನ ಮುಖಕಮಲ. ಎಷ್ಟಾದರೂ ಆಕರ್ಷಕ-ಮುಖ, ಅದನ್ನು ಹಿಡಿಯಬೇಕೆನ್ನಿಸಿದೆ, ಮಗುವಾದ ಕೃಷ್ಣನಿಗೆ. ಆದರೆ ಅದೋ ದೊರೆಯಲೊಲ್ಲದು! ಪ್ರತಿಬಿಂಬವನ್ನು ಕೈಗಳಲ್ಲಿ ಹಿಡಿದೆಳೆಯಲಾದೀತೇ? ಬಯಸಿದ್ದು ಸಿಗಲಿಲ್ಲವೆಂಬುದು ಮಗುವಿಗೆ ದುಃಖತರಿಸುವುದಲ್ಲವೇ?
ಎಂದೇ, ಬಳಿಯಿದ್ದ ದಾದಿಯ ಮುಖವನ್ನು ಕಂಡವನೇ ಅಳಲಾರಂಭಿಸಿದ, ಈ ಬಾಲಕೃಷ್ಣ! - ಎನ್ನುತ್ತದೆ ಪದ್ಯ.
ರತ್ನ-ಸ್ಥಲೇ ಜಾನು-ಚರಃ ಕುಮಾರಃ/
ಸಂಕ್ರಾಂತಂ ಆತ್ಮೀಯ-ಮುಖಾರವಿಂದಮ್|
ಆದಾತುಕಾಮಃ ತದಲಾಭ-ಖೇದಾತ್/
ವಿಲೋಕ್ಯ ಧಾತ್ರೀ-ವದನಂ ರುರೋದ ! ||
ಸೂಚನೆ : 13/08/2025 ರಂದು ಈ ಲೇಖನವು ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.