ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ ೩೩. ಎಲ್ಲವೂ ವ್ಯಸನದಿಂದ ನಷ್ಟವಾದ ಬಳಿಕ ಸಮರ್ಥನಾಗುವ ವ್ಯಕ್ತಿ ಯಾರು?
ಉತ್ತರ - ತ್ಯಾಗೀ.
ಈ ಪ್ರಶ್ನೆಯು ಬಹಳ ವಿಚಿತ್ರವಾಗಿದೆ. ಏಕೆಂದರೆ ಇಲ್ಲಿ ಒಬ್ಬ ವ್ಯಕ್ತಿ ತನ್ನ ವ್ಯಸನದ ಕಾರಣದಿಂದ ತನ್ನಲ್ಲಿರುವ ಎಲ್ಲ ಪದಾರ್ಥಗಳನ್ನು ಕಳೆದುಕೊಂಡಿದ್ದಾನೆ. ಹಾಗಿದ್ದಾಗಲೂ ಅವನು ಸಮರ್ಥನಾಗಲು ಏನು ಮಾಡಬಹುದು? ಎಂಬುದಾಗಿ ಇಲ್ಲಿ ಪ್ರಶ್ನೆಯನ್ನು ಕೇಳಲಾಗಿದೆ. ಅಂದರೆ ಪದಾರ್ಥಗಳು ನಷ್ಟವಾದಾಗ ಅದನ್ನು ಭರಿಸಿಕೊಳ್ಳಲು ಮತ್ತಷ್ಟು ಪದಾರ್ಥಗಳನ್ನು ಸೇರಿಸಿಕೊಳ್ಳಬೇಕು. ಅಥವಾ ಖರೀದಿಸಬೇಕು. ಇಲ್ಲದ ಪದಾರ್ಥಗಳನ್ನು ತುಂಬಿಸಿಕೊಳ್ಳಬೇಕು. ಇದರಿಂದ ತಾನೆ ಕಳೆದ ಪದಾರ್ಥಗಳು ಮತ್ತೆ ಲಭಿಸುತ್ತವೆ! ಆದರೆ ಈ ಪ್ರಶ್ನೆಗೆ ಕೊಡುವ ಉತ್ತರ ವಿಚಿತ್ರವಾಗಿದೆ. ಎಲ್ಲ ಪದಾರ್ಥಗಳು ನಷ್ಟವಾದಾಗ ಅವನು ಮತ್ತೆ ಸಮರ್ಥನಾಗಬೇಕಾದರೆ ತ್ಯಾಗಿ ಆಗಬೇಕು ಎಂದು. ಪದಾರ್ಥಗಳು ನಷ್ಟವಾದಾಗ ಮತ್ತೆ ತ್ಯಾಗ ಮಾಡುವುದು ಏನನ್ನು? ಎಂಬ ಪ್ರಶ್ನೆ ಇಲ್ಲಿ ಬರುತ್ತದೆ. ತ್ಯಾಗ ಮಾಡಬೇಕಾದರೆ ಪದಾರ್ಥಗಳ ಅವಶ್ಯಕತೆ ಇಲ್ಲವೇ? ಹೀಗಿರುವಾಗ ತ್ಯಾಗ ಮಾಡುವುದು ಹೇಗೆ ಎಂಬ ಸಂದೇಹ ಹಾಗೆಯೇ ಉಳಿಯುತ್ತದೆ ಇದಕ್ಕೆ ಉತ್ತರವಾಗಿ ಹೀಗೆ ನಾವು ಭಾವಿಸಬಹುದು.
ಅರ್ಥ- ಪದಾರ್ಥದ ಜೊತೆ ಇರುವಿಕೆಯನ್ನೇ ಸಮರ್ಥ ಎನ್ನಬಹುದು. ಒಂದು ಆನೆಯನ್ನು ಅವನ ಜೊತೆ ಇಟ್ಟುಕೊಳ್ಳಬೇಕಾದರೆ ಅವನಿಗೆ ಆ ಯೋಗ್ಯತೆ ಬೇಕು. ಸಮರ್ಥನಾಗುವಿಕೆ ಎಂದರೆ ಯೋಗ್ಯತೆಯನ್ನು ಸಂಪಾದಿಸುವಿಕೆ ಎಂದರ್ಥ. ಪದಾರ್ಥಗಳನ್ನು ಕಳೆದುಕೊಂಡಿದ್ದಾನೆ ಎಂದರೆ ಅವನಲ್ಲಿ ಆ ಪದಾರ್ಥಗಳನ್ನು ಉಳಿಸಿಕೊಳ್ಳುವ ಅರ್ಹತೆಯನ್ನು ಕಳೆದುಕೊಂಡಿದ್ದಾನೆ ಎಂಬುದೇ ಅದರ ತಾತ್ಪರ್ಯ. ಪದಾರ್ಥವನ್ನು ಪರಮಾರ್ಥಕ್ಕೆ ಬಳಸಿಕೊಳ್ಳುವಿಕೆಯೇ ನಿಜವಾದ ಸಾಮರ್ಥ್ಯ. ತ್ಯಾಗವು ಆ ಸಾಮರ್ಥ್ಯವನ್ನು ಮತ್ತೆ ಅವನಿಗೆ ಸಂಪಾದಿಸುವಂತೆ ಮಾಡುತ್ತದೆ. ಇಲ್ಲಿ ತ್ಯಾಗ ಎಂದರೆ ಕೊಡುವುದು ಎಂಬ ಅರ್ಥ ಮಾತ್ರವಲ್ಲ. ಪದಾರ್ಥವನ್ನು 'ನನ್ನದಲ್ಲ' ಎಂದು ಭಾವಿಸುವುದು. ಅದು ತ್ಯಾಗಕ್ಕೆ ಸಮವಾಗುತ್ತದೆ. ಪದಾರ್ಥಗಳು ಇರುವಾಗ 'ನನ್ನದಲ್ಲ' ಎಂಬ ಭಾವನೆ ಬರುವುದು ಸುಲಭವಲ್ಲ. ಹಾಗಾಗಿ ಪದಾರ್ಥಗಳು ಇರುವಾಗ ನನ್ನದಲ್ಲ ಎಂಬುದಾಗಿ ಭಾವಿಸಿದಾಗ ತಾನೆ ಅವನು ತ್ಯಾಗೀ ಆಗಬಲ್ಲ ಎಂಬುದು ಇದರ ತಾತ್ಪರ್ಯ.
ವ್ಯಸನ ಎಂದರೆ ಆಪತ್ತು. ಬುದ್ಧಿಯ ಭ್ರಮಣೆಗೆ ಕಾರಣವಾದದ್ದು. ಅಂದರೆ ಬುದ್ಧಿಯು ವಿವೇಕಪೂರ್ಣವಾಗಿ ಇಲ್ಲದಿರುವಾಗ, ಅವನು ಎಲ್ಲ ಅರ್ಥವನ್ನು - ಪದಾರ್ಥಗಳನ್ನು ಕಳೆದುಕೊಳ್ಳುತ್ತಾನೆ. ಪದಾರ್ಥಗಳಿಗೆ ಅವನ ದೃಷ್ಟಿಯಿಂದ ಅರ್ಥವೇ ಇರುವುದಿಲ್ಲ. ಅಂದರೆ ಬೆಲೆಯೇ ಇರುವುದಿಲ್ಲ. ಅದನ್ನು ಅವನು ನಗಣ್ಯವಾಗಿ ಕಾಣುತ್ತಾನೆ. ಹಾಗಿದ್ದಾಗ ಆ ಪದಾರ್ಥಗಳು ಅವನಿಗೆ ಪೂರಕವಾಗಿ ಇರಲಾರವು. ಪದಾರ್ಥಗಳು ಒಳ್ಳೆಯ ಪದಾರ್ಥಗಳಾಗಿ ಅವನ ಬಳಿ ಇರಬೇಕೆಂದರೆ ಅವನು ಕೂಡ ಅಷ್ಟೇ ಸಾತ್ವಿಕ ಸ್ವಭಾವದವನು ಆಗಿರಬೇಕು. ಈ ಸಾತ್ವಿಕತೆ ಬರಬೇಕಾದರೆ ಅದು ತ್ಯಾಗದಿಂದ ಮಾತ್ರ ಸಾಧ್ಯ. ತ್ಯಾಗಬುದ್ಧಿಯು ಮಲಿನತೆಯನ್ನು ದೂರ ಮಾಡುತ್ತದೆ. ತ್ಯಾಗಭಾವನೆಯಿಂದ ಆತ ಶುದ್ಧನಾಗುತ್ತಾನೆ. ಅದನ್ನು ಸಾತ್ವಿಕತೆಯ ದ್ಯೋತಕ ಎಂಬುದಾಗಿ ಹೇಳಬಹುದು. ಹಾಗಾಗಿ ತ್ಯಾಗವು ಅಂತಹ ಸಾತ್ವಿಕತೆಯನ್ನೇ ಉಂಟುಮಾಡುವುದು. ಯಾರು ಈ ಜಗತ್ತಿನಲ್ಲಿ ಅನೇಕ ವ್ಯಸನಗಳಿಂದ ವಿಪತ್ತಿಗೆ ಅಥವಾ ಆಪತ್ತಿಗೆ ತುತ್ತಾಗಿದ್ದಾನೋ ಅವನು ಆಪತ್ತಿನಿಂದ ದೂರವಾಗಬೇಕೆಂದರೆ ತ್ಯಾಗಮನೋಭಾವನೆಯನ್ನು ಹೆಚ್ಚೆಚ್ಚು ಬೆಳೆಸಿಕೊಳ್ಳಬೇಕು ಎಂಬ ಮಾರ್ಗದರ್ಶನ ಈ ಪ್ರಶ್ನೋತ್ತರದಲ್ಲಿ ಇದೆ ಎಂಬುದಾಗಿ ಭಾವಿಸಬೇಕು.
ಸೂಚನೆ : 28/9/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.