ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ರಾಜ್ಯಾಡಳಿತವು ಹೇಗಿದ್ದರೆ ಚೆನ್ನೆಂಬುದನ್ನು ನಾರದರು ಯುಧಿಷ್ಠಿರನಿಗೆ ತಿಳಿಯಪಡಿಸುತ್ತಿರುವ ಮಾತುಗಳು.
ನಿನ್ನ ಆಯದಲ್ಲಿ ಕಾಲುಭಾಗ, ಅರ್ಧಭಾಗ, ಮುಕ್ಕಾಲುಭಾಗಗಳಷ್ಟೆ ವ್ಯಯವಾಗುತ್ತವೆ ತಾನೆ? - ಎಂದರೆ ಪೂರ್ಣಭಾಗವು ಖರ್ಚಾಗುತ್ತಿಲ್ಲ ತಾನೆ? (ಏಕೆಂದರೆ ಖಜಾನೆಯು ಎಂದೂ ಖಾಲಿಯಾಗಬಾರದು. ಆದಷ್ಟೂ ಕಾಲುಭಾಗ ವ್ಯಯದಲ್ಲೇ ಸರ್ವವನ್ನೂ ನಿರ್ವಹಿಸಬೇಕು. ಉಳಿದುದು ಆಪದ್ಧನವಾಗಿರಬೇಕು. ಪ್ರಜೆಗಳ ರೋಗ-ರುಜಿನಗಳು ತೀವ್ರವಾದಾಗ ಇನ್ನೊಂದು ಕಾಲುಭಾಗವನ್ನು ವ್ಯಯಿಸಬಹುದು. ದೇಶದಲ್ಲಿ ಕ್ಷಾಮವೇನಾದರೂ ಉಂಟಾಗಿಬಿಟ್ಟಲ್ಲಿ ಇನ್ನೊಂದು ಕಾಲು ಭಾಗವನ್ನು ವ್ಯಯಿಸಬಹುದು, ಎಂದರೆ ಮುಕ್ಕಾಲು ಭಾಗವಾಯಿತು. ಅದಕ್ಕಿಂತಲೂ ಮಿಗಿಲಾಗಿ ಖರ್ಚು ಮಾಡುವಂತೆಯೇ ಇಲ್ಲ).
ಜ್ಞಾತಿಗಳು (ಬಾಂಧವರು), ಆಚಾರ್ಯರು, ವೃದ್ಧರು, ವರ್ತಕರು, ಶಿಲ್ಪಿಗಳು, ಆಶ್ರಿತರಾದ ಇತರರು, ಬಡವರು - ಇವರುಗಳನ್ನು ನೀನು ಧನ-ಧಾನ್ಯಗಳನ್ನಿತ್ತು ಸದಾ ಕಾಪಾಡುತ್ತಿರುವೆಯಲ್ಲವೇ?
ದೇಶದ ಆಯ-ವ್ಯಯಗಳನ್ನು ನೋಡಿಕೊಳ್ಳುವುದರಲ್ಲಿ ನಿಯುಕ್ತರಾದ ಗಣಕರೂ-ಲೇಖಕರೂ ನಿತ್ಯವೂ ಆದಾಯ-ವ್ಯಯಗಳನ್ನು ನಿತ್ಯವೂ ಪೂರ್ವಾಹ್ಣದಲ್ಲಿಯೇ ರಾಜನಿಗೆ ತಿಳಿಸಿರತಕ್ಕದ್ದು. ಅವರೆಲ್ಲ ಹಾಗೆಯೇ ಮಾಡುತ್ತಿದ್ದಾರೆ ತಾನೆ?
ಅರ್ಥಶಾಸ್ತ್ರದಲ್ಲಿ ನಿಪುಣರೂ ನಿನ್ನ ಹಿತೈಷಿಗಳೂ ನಿನ್ನಲ್ಲಿ ಪ್ರೀತಿಯುಳ್ಳವರೂ ಆದವರನ್ನು, ಅವರಲ್ಲಿ ಯಾವುದೇ ದೋಷವಿಲ್ಲದಿರುವಾಗ, ಕೆಲಸದಿಂದ ವಜಾ ಮಾಡಲೇಬಾರದು. ಹಾಗೆಲ್ಲಾ ನೀನು ಮಾಡಿಬಿಡುತ್ತಿಲ್ಲ ತಾನೆ?
ಕೆಲಸಕ್ಕಾಗಿ ಬಂದವರಲ್ಲಿ ಉತ್ತಮರೂ ಮಧ್ಯಮರೂ ಅಧಮರೂ ಇರುವುದುಂಟು. ಅವರನ್ನು ಹಾಗೆಂಬುದಾಗಿ ಸರಿಯಾಗಿ ಗುರುತಿಸುವುದು ರಾಜನ ಮೊದಲ ಕೆಲಸ. ಅವರನ್ನು ಅವರವರ ಯೋಗ್ಯತೆಗನುಸಾರವಾಗಿ ತಕ್ಕತಕ್ಕ ಕೆಲಸಗಳಲ್ಲಿ ನಿಯೋಜಿಸಬೇಕು. ನೀನು ಹಾಗೆ ತಾನೆ ಮಾಡುತ್ತಿರುವೆ?
ಲೋಭಿಗಳು, ಕಳ್ಳರು, ವೈರಿಗಳು, ಕೆಲಸದಲ್ಲಿ ಅನುಭವವಿಲ್ಲದವರು - ಇಂತಹವರನ್ನು ನೀನು ಕೆಲಸಕ್ಕೆ ಇಟ್ಟುಕೊಳ್ಳಬಾರದು. ನೀನಿಟ್ಟುಕೊಳ್ಳುತ್ತಿಲ್ಲ ತಾನೆ?
ರಾಷ್ಟ್ರದಲ್ಲಿ ಭಾಗಭಾಗಗಳಲ್ಲೂ ದೊಡ್ಡ ದೊಡ್ಡ ಕೆರೆಗಳೂ ಸರೋವರಗಳೂ ಇರಬೇಕು, ಅವು ಜಲ-ಪರಿಪೂರ್ಣವೂ ಆಗಿರಬೇಕು. ಕೃಷಿಯೆಲ್ಲವೂ ಮಳೆಯೊಂದನ್ನೇ ಅವಲಂಬಿಸಿರುವಂತೆ ಆಗಿಬಿಡಬಾರದು. ನಿನ್ನ ರಾಜ್ಯದಲ್ಲಿ ಇದಕ್ಕನುಗುಣವಾಗಿಯೇ ಎಲ್ಲವೂ ನಡೆಯುತ್ತಿದೆ ತಾನೆ?
ಕೃಷಿಕರ ಬೀಜಗಳಿಗೂ ಧಾನ್ಯಗಳಿಗೂ ಹುಳಹಿಡಿಯಬಾರದು. ಶೇಕಡಾ ೧ರ ಬಡ್ಡಿಯ ಲೆಕ್ಕದ ಮೇರೆಗೆ, ಎಂದರೆ ಬಹಳ ಕಡಿಮೆ ಬಡ್ಡಿಯಂತೆ, ರಾಜನು ಅವರಿಗೆ ಸಾಲವೀಯಬೇಕು. ನೀನು ಹಾಗೆಯೇ ಅನುಕೂಲ ಕಲ್ಪಿಸಿಕೊಡುತ್ತಿರುವೆಯಷ್ಟೆ?
ಕೃಷಿ, ಗೋರಕ್ಷೆ, ಹಾಗೂ ವಾಣಿಜ್ಯ - ಈ ಮೂರಕ್ಕೆ ವಾರ್ತಾ ಎನ್ನುತ್ತಾರೆ. ಜನರು ಸುಖವಾಗಿರಬೇಕೆಂದರೆ ಇವು ಮೂರೂ ಚೆನ್ನಾಗಿಯೇ ಇರಬೇಕಾದವು. ಇವುಗಳ ಮೇಲ್ವಿಚಾರಕರು ಸರಿಯಾದ ಮಂದಿಯಾಗಿರಬೇಕು. ನಿನ್ನ ರಾಜ್ಯದಲ್ಲಿ ವಾರ್ತೆಯು ಹೀಗೆಯೇ ಇರುವುದು ತಾನೆ?
ಶೂರರು, ಧೀಮಂತರು, ಕಾರ್ಯಸಮರ್ಥರು - ಇವರುಗಳು ಒಂದೊಂದು ಹಳ್ಳಿಯಲ್ಲಿಯೂ ಐದೈದು ಮಂದಿ ಇದ್ದು, ಅವರುಗಳೂ ಒಗ್ಗಟ್ಟಾಗಿ ನಿಂತು, ಕೆಲಸ ಮಾಡುವುದಾದರೆ ಗ್ರಾಮಾಭಿವೃದ್ಧಿಯೂ, ತದನುಸಾರಿಯಾಗಿ ದೇಶಾಭಿವೃದ್ಧಿಯೂ ಚೆನ್ನಾಗಿ ಆಗುತ್ತದೆ. ನಿನ್ನ ರಾಜ್ಯದಲ್ಲಿ ಹೀಗೇ ಆಗುತ್ತಿದೆ ತಾನೆ?
ನಗರಗಳ ರಕ್ಷಣೆಗೋಸ್ಕರ ಗ್ರಾಮಗಳನ್ನೂ ನಗರದಂತೆ ಮಾಡಾಲಾಗಿದೆ ತಾನೆ? ಎಂದರೆ ನಗರಗಳಲ್ಲಿಯ ಸೌಕರ್ಯಗಳನ್ನು ಗ್ರಾಮಗಳಲ್ಲೂ ಲಭ್ಯವಾಗಿಸಿದೆ ತಾನೆ? ಅರ್ಥಾತ್, ಎರಡೂ ಕಡೆಯೂ ಅಧಿಕಸಂಖ್ಯೆಯಲ್ಲಿ ಶೂರ-ವೀರರಿದ್ದರೆ ಮಾತ್ರವೇ ಇದು ಸಾಧ್ಯ.
ಅದರಂತೆಯೇ ಪ್ರಾಂತಗಳೂ ಸುರಕ್ಷೆಯನ್ನೂ ಅಭಿವೃದ್ಧಿಯನ್ನೂ ಹೊಂದುವಂತಾಗಬೇಕು.