ಲೇಖಕರು : ವಿದ್ವಾನ್ ಅನಂತ ಬಿ.ಜಿ.
ಪ್ರತಿಕ್ರಿಯಿಸಿರಿ (lekhana@ayvm.in)
ಜೀವನದಲ್ಲಿ ನವತ್ವವನ್ನು ಉಂಟು ಮಾಡುವ ನವರಾತ್ರ ಇದು. ಶುದ್ಧ ಪ್ರಕೃತಿಮಾತೆಯನ್ನು ಮೊದಲ ಮೂರು ದಿನಗಳಲ್ಲಿ ಲಕ್ಷ್ಮೀ ಎಂದೂ ಅನಂತರದ ಮೂರು ದಿನಗಳಲ್ಲಿ ಸರಸ್ವತಿಯೆಂದೂ ಕೊನೆಯ ಮೂರು ದಿನಗಳಲ್ಲಿ ಗೌರೀ ಅಥವಾ ದುರ್ಗೀ ಎಂದೂ ಆರಾಧಿಸಿ ನಿಮ್ಮ ಪ್ರಕೃತಿಯನ್ನು ಶುದ್ಧ ಮಾಡಿಕೊಳ್ಳಿ. ಹೊರಗಡೆ ಪ್ರಕೃತಿಯಲ್ಲಿ ಮೋಡಗಳಿಲ್ಲದ ಶುದ್ಧವಾದ ಆಕಾಶ, ಒಳಗೂ ಶುದ್ಧವಾದ ಜ್ಞಾನಾಕಾಶ. ಹೊರಗೆ ಸರೋವರದಲ್ಲಿ ಅರಳಿರುವ ಕಮಲಗಳು, ಒಳಗೆ ಮಾನಸ ಸರೋವರದಲ್ಲಿ ಅರಳಿರುವ ಹೃದಯಾದಿ ಕಮಲಗಳು. ಅಲ್ಲಿ ಪರಮಾತ್ಮನ ಪರಾಪ್ರಕೃತಿಯಾಗಿರುವ ದೇವಿಯನ್ನು ಆರಾಧಿಸಿ ಶುದ್ಧ ಸತ್ವರಾಗಿರಿ. ಹೊರಗಡೆ ಧನಧಾನ್ಯ ಸಮೃದ್ಧಿ. ಒಳಗೆ ಆತ್ಮಧನ ಸಮೃದ್ಧಿ. ಹೊರಗೆ ವೀರಕ್ಷತ್ರಿಯರಿಂದ ಧರ್ಮವಿಜಯಕ್ಕಾಗಿ ಯಾತ್ರೆ, ಒಳಗೆ ಆತ್ಮವಿಜಯಕ್ಕಾಗಿ ಯಾತ್ರೆ, ಎಲ್ಲವೂ ಕೂಡಿಬರುವ ಮಹಾಪರ್ವವಿದು- ಎಂದು ಈ ಪರ್ವದ ವಿಶೇಷತೆಯನ್ನು ಸಾರಿಷ್ಠವಾದ ಸಂದೇಶದಲ್ಲಿ ಶ್ರೀರಂಗ ಮಹಾಗುರುಗಳು ಅಪ್ಪಣೆ ಕೊಡಿಸಿದ್ದಾರೆ ಎಂದು ಭಾರತೀಯರ ಹಬ್ಬ ಹರಿದಿನಗಳು ಎಂಬ ಪುಸ್ತಕದಲ್ಲಿ ಉಲ್ಲೇಖವಿದೆ. ಈ ಮಾತುಗಳನ್ನು ಭಾವಿಸುತ್ತಾ ಆರನೆಯ ದಿವಸ ಆರಾಧ್ಯಳಾದ ದೇವಿಯ ಬಗ್ಗೆ ತಿಳಿಯೋಣ.
ಆರನೆಯ ದಿವಸದ ದೇವತೆ ಚಂಡಮುಂಡಹಾ ದುರ್ಗಾದೇವಿ. ಅವಳ ಸ್ವರೂಪವು ಈ ಕೆಳಗಿನಂತೆ ವರ್ಣಿತವಾಗಿದೆ-
ಸ್ವರ್ಣ ವಸ್ತ್ರಾದ್ಯಲಂಕಾರೈಃ
ಸ್ಫಟಿಕೈಃ ಉಪಶೋಭಿತಾಮ್
ಬಾಣ ಕೋದಂಡ ಖೇಟಂ ಚ /
ಶಕ್ತಿಂ ಚೈವ ಧೃತಾಂ ಕರೈಃ
ಮಯೂರವಾಹಿನೀಂ ದೇವೀಂ
ಷಷ್ಠೇ ಸಂಪೂಜಯೇತ್ ನೃಪಃ//
ಈ ದೇವಿಯು ಚಿನ್ನದ ಮತ್ತು ಸ್ಫಟಿಕದ ಕಾಂತಿಯಿಂದ ಬೆಳಗುವ ವಸ್ತ್ರಗಳಿಂದಲೂ ಅಲಂಕಾರಗಳಿಂದಲೂ ಶೋಭಿಸುವವಳು. ಕೈಗಳಲ್ಲಿ ಬಾಣವನ್ನು ಧನುಸ್ಸನ್ನು ಖೇಟ ಮತ್ತು ಶಕ್ತಿ ಎಂಬ ಆಯುಧಗಳನ್ನೂ ಧರಿಸಿರುವವಳು. ವಿಶೇಷವೆಂದರೆ ಈಕೆ ಮಯೂರ ವಾಹಿನಿ. ಎಂದರೆ ಸುಂದರವಾದ ಗರಿಗಳ್ಳ ನವಿಲನ್ನೇ ತನ್ನ ವಾಹನವನ್ನಾಗಿ ಮಾಡಿಕೊಂಡವಳು. ಇಂತಹ ದೇವಿಯನ್ನು ನವರಾತ್ರಿದ ಆರನೆಯ ದಿವಸದಲ್ಲಿ ಪ್ರತಿಷ್ಠಾಪಿಸಿ ಆರಾಧಿಸಬೇಕು.
ಸೂಚನೆ: 28/9//2025 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ